ಬುಡಕಟ್ಟು ಬಿಕ್ಕಟ್ಟಿನಲ್ಲೂ ರಾಜಕೀಯದ ರಂಗಿನಾಟ!

mdk-4-1

 

ದಲಿತರು, ಬುಡಕಟ್ಟು ಜನಾಂಗ, ಆದಿವಾಸಿಗಳಿಗೆ ಬಹುಶಃ ಸಮಸ್ಯೆ ತಪ್ಪಿದ್ದೇ ಇಲ್ಲವೇನೋ. ಒಂದು ದಿನ ನೆಮ್ಮದಿಯಾಗಿ ಉಸಿರಾಡುತ್ತಿದ್ದಾರೆ ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ. ಈಗ ಹೊಸ ಸಮಸ್ಯೆಯೇನೆಂದರೆ, ವಿರಾಜಪೇಟೆಯ ದಿಡ್ಡಳ್ಳಿಯಲ್ಲಿ 527 ಬುಡಕಟ್ಟು ಜನಾಂಗದವರಿರುವ ಕಾಡಿಗೆ ಬೆಳಗಿನ ಜಾವ ನಾಲ್ಕು ಗಂಟೆಯ ವೇಳೆಗೆ ನುಗ್ಗಿದ ಅರಣ್ಯಾಧಿಕಾರಿಗಳು, ಜೆಸಿಬಿ ಬಳಸಿ ಅವರ ವಸತಿಗಳನ್ನು ಕಿತ್ತು ಹಾಕಿ, ಎಲ್ಲರನ್ನೂ ಬೀದಿಗೆ ಬಿಟ್ಟಿದ್ದಾರೆ. ಆದರೆ ಇಲ್ಲಿ ಕೆಲ ಹೋರಾಟಗಾರರೆನಿಸಿಕೊಂಡವರು ಏಕಾಏಕಿ ಪ್ರತ್ಯಕ್ಷವಾಗಿ ಬುಡಕಟ್ಟು ಜನಾಂಗದವರನ್ನು ದಾರಿ ತಪ್ಪಿಸಿ ಅಲ್ಲೂ ಅವರ ಶೋಷಣೆ ನಡೆಯುತ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ. ಸಮಸ್ಯೆಯ ಮೂಲವೇನೆಂದು ತಿಳಿದಿದ್ದರೂ, ಪರಿಹಾರವೂ ಬಹಳ ಸುಲಭವಿದ್ದರೂ, ಇನ್ನಷ್ಟು ದಿನ ಬುಡಕಟ್ಟು ಜನಾಂಗದವರು ಬೀದಿ ಪಾಲೇ ಆಗಲಿದ್ದಾರೆ. ಇಷ್ಟು ದಿನ ಇಲ್ಲದ ಹೋರಾಟಗಾರರ ಕಾಳಜಿ, ರಾಜಕಾರಣಿಗಳ ತ್ವರಿತ ಸ್ಪಂದನೆ ಬಹಳ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಸಮಸ್ಯೆಯ ಮೂಲ
ಕೊಡಗಿನಲ್ಲಿರುವ ಟಾಟಾ ಎಸ್ಟೇಟ್‌ನಲ್ಲಿ ದಿನಗೆಲಸ ಮಾಡುವುದಕ್ಕೆ ಬರುವವರಿಗೆ ಲೈನ್ ಮನೆಗಳನ್ನು ಮಾಡಿಕೊಟ್ಟಿದ್ದಾರೆ. ಲೈನ್ ಮನೆಗಳು ದಿನಗೂಲಿಗಳ ವಸತಿ ವ್ಯವಸ್ಥೆಯಾಗಿರುತ್ತದೆ. ಇಲ್ಲಿಗೆ ಕೆಲಸ ಮಾಡುವುದಕ್ಕೆ ಬರುವವರು ಬುಡಕಟ್ಟು ಜನಾಂಗದವರೇ ಹೆಚ್ಚು. ಇಲ್ಲಿ 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿರುವವರಿಗೆ ಲೈನ್ ಮನೆಗಳಲ್ಲಿ ಇರಲು ಬಿಡುವುದಿಲ್ಲ. ಹಾಗಾಗಿ ಸಹಜವಾಗಿಯೇ ಹೊರಹಾಕಿದ್ದಾರೆ. ಆದರೆ ಇವರೆಲ್ಲರೂ ಕೆಲಸ ಕೆಲಸ ಕಳೆದುಕೊಳ್ಳುವುದಕ್ಕೆ ಮತ್ತೊಂದು ಕಾರಣವೂ ಇದೆ. ಅಲ್ಲಿದ್ದ ಆಳುಗಳಿಗೆ ಮೊದಲು ದಿನಕ್ಕೆ ತಲಾ 300 ರು. ರಂತೆ ಸಂಬಳ ಕೊಡುತ್ತಿದ್ದರು. ಆದರೆ ಅಲ್ಲಿಗೆ ಈಗ ಬಾಂಗ್ಲಾದೇಶಿ ಮುಸ್ಲಿಮರು ಬಂದಿದ್ದಾರೆ. ಅವರಿಗೆ ತಲಾ ಕೇವಲ 150 ರು. ಕೊಟ್ಟರೆ ಕೆಲಸ ಮಾಡಿಕೊಂಡು ಹೋಗುವುದರಿಂದ ಈಗ ಲೈನ್ ಮನೆಗಳಲ್ಲಿ ಅವರೇ ತುಂಬಿಕೊಂಡಿದ್ದಾರೆ. ಇವರ ಕ್ಷೇಮಾಭಿವೃದ್ಧಿಗೇನೂ ಕೊರತೆಯಿಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಶುಕ್ರವಾರ ನಮಾಜ್‌ಗಾಗಿ ವಾಹನಗಳೇ ಬಂದು ಬಾಂಗ್ಲಾ ಮುಸ್ಲಿಮರನ್ನು ತುಂಬಿಕೊಂಡು ಹೋಗುತ್ತಿವೆ. ಎಲ್ಲಿಂದಲೋ ಬಂದಿರುವವರನ್ನು ತುಂಬಿಕೊಳ್ಳುತ್ತಿರುವುದರಿಂದಲೇ ನಮ್ಮವರು ತಮ್ಮ ಮೂಲಸ್ಥಾನವಾದ ಕಾಡುಗಳಿಗೆ ಬಂದಿದ್ದಾರೆ. ಅಂಥವರನ್ನೂ ಒದ್ದು ಓಡಿಸಲಾಗಿದೆ.

ರಾಜಕಾರಣಿಗಳ ಜಾಲಿ ಟ್ರಿಪ್
ಬುಡಕಟ್ಟು ಜನಾಂಗ ಬೀದಿಗೆ ಬಿದ್ದು ಎರಡು ವಾರಗಳ ನಂತರ ರಾಜ್ಯ ಸರಕಾರ ಸಂತ್ರಸ್ತರಿಗೆ ವಸತಿ ಕಲ್ಪಿಸಿಕೊಡುತ್ತೇವೆ ಎಂದು ನಿನ್ನೆ ಕೇವಲ ‘ಆಶ್ವಾಸನೆ’ಯನ್ನಷ್ಟೇ ನೀಡಿದೆ. ಆದರೆ ಕೇವಲ ಎರಡು ತಿಂಗಳ ಹಿಂದೆ, ಕೊಡಗಿಗೆ ಕಾಗೋಡು ತಿಮ್ಮಪ್ಪ, ಸೀತಾರಾಂ ಅವರು ಭೇಟಿ ನೀಡಿದ್ದಾರೆ. ಇನ್ನು ತಾನು ದಲಿತ ನಾಯಕ ಎಂದು ಬೀಗುವ ಸಮಾಜ ಕಲ್ಯಾಣ ಸಚಿವ ಆಂಜನೇಯವರೂ ಒಂದು ರಾತ್ರಿ ವಾಸ್ತವ್ಯ ಹೂಡಿದ್ದರು. ಇವರೆಲ್ಲ ಯಾವುದೋ ಒಂದು ರೆಸಾರ್ಟ್‌ನಲ್ಲಿದ್ದು ಹೋಗಿ, ಹೋಟೆಲ್‌ನವರಿಗೆ ಲಾಭ ಮಾಡಿಕೊಟ್ಟರೇ ವಿನಾ ಸಮಸ್ಯೆೆಯ ಪರಿಹಾರಕ್ಕೆ ಪ್ರಯತ್ನಿಸುವುದಿರಲಿ, ಪರಿಗಣಿಸಲೇ ಇಲ್ಲ.

ಟಾಟಾ ಎಸ್ಟೇಟ್ ಮತ್ತು ಪಿ ಚಿದಂಬರಂ ಎಸ್ಟೇಟ್
ಕಾಂಗ್ರೆಸ್ ರಾಜಕಾರಣಿಗಳು ಮತ್ತು ಕೆಲ ಎಡಪಂಥೀಯ ಹೋರಾಟಗಾರರು ಈ ಘಟನೆಯಾದ ನಂತರ ದನಿಯೆತ್ತಿರುವುದು ಬಹಳ ಅಚ್ಚರಿ ಮೂಡಿಸಿವೆ. ಆದರೆ ಇವರೆಲ್ಲ ಒಂದು ವಿಷಯ ಮರೆತಂತಿದೆ. ಇಲ್ಲಿರುವ ಟಾಟಾ ಎಸ್ಟೇಟ್ ಮತ್ತು ಮಾಜಿ ಕೇಂದ್ರ ಗೃಹಸಚಿವ ಮತ್ತು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಎಸ್ಟೇಟ್ ಅತಿಕ್ರಮಣವಾದದ್ದು. ರಾಜ್ಯ ಸರಕಾರ ಪುನರ್ವಸತಿ ಇತ್ಯಾದಿಗಳ ಬಗ್ಗೆ ಮಾತಾಡುವ ಬದಲು, ಸಾವಿರ ಗಟ್ಟಲೆ ಎಕೆರೆಯಲ್ಲಿರುವ ಇವೆರಡು ಎಸ್ಟೇಟ್‌ಗಳನ್ನು ತೆರವು ಗೊಳಿಸಿದರೆ ಸಾಕು, ಅಲ್ಲಿರುವ 527 ಬುಡಕಟ್ಟು ಕುಟುಂಬಗಳಿಗೆ ತಲಾ ಎರಡೆರಡು ಎಕರೆ ಫಲವತ್ತಾದ ಭೂಮಿಯನ್ನೇ ಕೊಡಬಹುದು. ಯಾವ ಹೋರಾಟಗಾರರೂ ಏಕೆ ಇದರ ಬಗ್ಗೆ ಮಾತನಾಡುತ್ತಿಲ್ಲ? ಈ ಹೋರಾಟದ ಸೋಗಿನಲ್ಲಿ ಬಂದ ಪ್ರತಿನಿಧಿಗಳು, ರಾಜಕಾರಣಿಗಳು ಇವು ಯಾವುದರ ಬಗ್ಗೆಯೂ ಮಾತನಾಡದೇ ಬಹಳ ಶಾಂತವಾಗಿ ಮೋದಿಯೇನು ಮಾಡುತ್ತಿದ್ದಾರೆ ಎಂದು ತಿರುಗಿಸುತ್ತಿದ್ದಾರೆ. ಏನೂ ಅರಿಯದ ಮುಗ್ಧರಾದ ಬುಡಕಟ್ಟು ಜನಾಂಗದವರು ಮನೆ ಕಳೆದುಕೊಂಡಿರುವ ನೋವಿನಲ್ಲಿದ್ದರೆ ಅದನ್ನೂ ಮೋದಿಗೆ ಕುತ್ತಿಗೆಗೆ ತಂದು ಕಟ್ಟುವ ಅಜೆಂಡಾದಲ್ಲೂ ಕೆಲ ಹೋರಾಟಗಾರರಿದ್ದಾರೆ.

ಕಾಡುಗಳ್ಳರಿಗೆ ಅನುವು ಮಾಡಿಕೊಟ್ಟರೆ?
ಇಲ್ಲಿ ಪ್ರದೇಶಗಳಲ್ಲಿ ಮರಗಳ್ಳತನವಾಗುತ್ತಲೇ ಇವೆ. ಅಸಲಿಗೆ ಬುಡಕಟ್ಟು ಜನಾಂಗದವರು ಕಾಡನ್ನು ರಕ್ಷಿಸುತ್ತಿದ್ದರೇ ವಿನಾ ಯಾರೊಬ್ಬರೂ ಮರ ಕಡಿದು ಮಾರಾಟ ಮಾಡಿ, ಬಂಗಲೆ ಕಟ್ಟಿಲ್ಲ. ಮರ ಕದ್ದು ಮಾರಾಟ ಮಾಡಿ, ಬಂಗಲೆ ಕಟ್ಟಿ ರಾಜಕಾರಣಿಗಳಾದವರೂ ಇದ್ದಾರೆ. ಅವರಿಗೆ ಅನುವು ಮಾಡಿಕೊಡುವಂತೆ ಈ ಕಾರ್ಯಾಚರಣೆ ಏಕಾಏಕಿ ನಡೆಯಿತಾ ಎಂಬ ಅನುಮಾನ ದಟ್ಟವಾಗಿದೆ. ಇಲ್ಲಿ ಎಷ್ಟು ಮರ ಕಡಿಯುತ್ತಿದ್ದಾರೆ ಎಂಬುದರ ಬಗೆಗಿನ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ವಿಧಾನ ಪರಿಷತ್ ಸದಸ್ಯ ಟಿ. ಜಾನ್ ಮತ್ತು ರಾಜ್ಯ ಗೃಹ ಸಚಿವ ಜಾರ್ಜ್ ಅವರನ್ನೇ ಜನರು ಕೇಳಬೇಕಿದೆ.

ಮತಾಂತರವೂ ಜಾರಿಯಲ್ಲಿದೆ
ಇಲ್ಲಿ ಒಂದೊಂದೇ ವಿಚಾರಗಳು ತಲೆಯೆತ್ತುತ್ತಿವೆ. ಚಾಮರಾಜನಗರ, ಮೈಸೂರು, ಕೊಡಗು ಪ್ರದೇಶದಲ್ಲಿರುವ ಬುಡಕಟ್ಟು ಜನಾಂಗದವರಿಗೆ ಹಣ ಮತ್ತು ಕೆಲಸದ ಆಮಿಷವೊಡ್ಡಿ ಬಹಳ ದೊಡ್ಡ ಪ್ರಮಾಣದಲ್ಲೇ ಕ್ರೈಸ್ತ ಧರ್ಮಕ್ಕೆ ಮತಾಂತರವೂ ಮಾಡಿಬಿಟ್ಟಿದ್ದಾರೆ. ಈ ವಿಚಾರದ ಬಗ್ಗೆ ಜಾಣಮೌನ ತಾಳುತ್ತಿರುವ ಹೋರಾಟಗಾರರ ನೀತಿ, ತಮ್ಮ ಉದ್ದೇಶವೇ ಬೇರೆಯೇ ಇದೆ ಎಂಬುದನ್ನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya