“ಯೋಧರ ಹೆಣದ ಮುಂದೆ ರಣಹದ್ದುಗಳು!”

rahul-759ಸುಬೇದಾರ್ ರಾಮ್ ಕಿಶನ್ ಗ್ರೆವಾಲ್. ಈ ಮಾಜಿ ಯೋಧ ತನಗೆ ಬಂದ ಪೆನ್ಶನ್‌ನಲ್ಲಿ 5 ಸಾವಿರ ರುಪಾಯಿ ಕಡಿಮೆ ಇತ್ತು ಎಂದು ಆತ್ಮಹತ್ಯೆ ಮಾಡಿಕೊಂಡ ಎಂಬ ಹೆಡ್‌ಲೈನ್ ಓದಿದರೆ ನಿಮಗೇನನಿಸುತ್ತೆ? ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ದೇಶಕ್ಕಾಗಿ ಪ್ರಾಾಣ ಕೊಡಲು ಸಿದ್ಧನಿದ್ದ ಯೋಧ, ತನಗೆ ಬರುವ ಮಾಸಾಶನದಲ್ಲಿ , ಒಂದೇ ಒಂದು ತಿಂಗಳು ಕೇವಲ ಐದು ಸಾವಿರ ರುಪಾಯಿ ಮಾತ್ರ ಕಡಿಮೆ ಜಮಾ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನಾ? ಸಾರ್ವಜನಿಕರಿಗೆ ಯಾರಿಗೇ ಈ ಪ್ರಶ್ನೆ ಕೇಳಿದರೂ ಛೆ ಛೇ ಇಲ್ಲವೇ ಇಲ್ಲ ಎನ್ನುತ್ತಾರೆ. ಆದರೆ ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್‌ರಿಗೆ ಇದೇ ಪ್ರಶ್ನೆ ಕೇಳಿದರೆ ಹೌದು ಎನ್ನುತ್ತಾರೆ. ದೊಡ್ಡ ರಂಪಾಟವನ್ನೇ ಮಾಡುತ್ತಾರೆ.

ಮೋದಿ ರಾಜೀನಾಮೆ ನೀಡಬೇಕು ಎನ್ನುವಲ್ಲಿಯ ತನಕವೂ ತೆಗೆದುಕೊಂಡು ಹೋಗುತ್ತಾರೆ. ಒಟ್ಟಾರೆ ಇವರಿಗೆ ಬೇಕಾಗಿರುವುದು ಮೋದಿ ರಾಜೀನಾಮೆಯೇ ಹೊರತು ಯೋಧ ಯಾರ ಬಳಿ ಹೋರಾಡಿ ಸತ್ತರೆ ಇವರಿಗೇನು? ರಾಮ್ ಕಿಶನ್ ಯಾಕಾಗಿ ಆತ್ಮಹತ್ಯೆಮಾಡಿಕೊಂಡಿರಬಹುದು ಎಂಬುದನ್ನೂ ಆಲೋಚಿಸದೇ ಪಕ್ಷದ ಕಾರ್ಯಾಲಯದಲ್ಲಿ ಬಿದ್ದಿದ್ದ ಧೂಳು ಹಿಡಿದ ಪಕ್ಷದ ಧ್ವಜವನ್ನು ಸಾವಿನ ಮನೆಗೇ ತಂದು ಹಾರಾಡಿಸುತ್ತಾರೆ. ತಮ್ಮ ಪಕ್ಷದ ನಾಯಕರಿಗೆ ಜೈಕಾರ.

ಯೋಧನ ಕುಟುಂಬ ಮಾತ್ರ ಅಳುತ್ತಿರಬೇಕೇ ಹೊರತು ಕಣ್ಣೊರೆಸುವ ಯಾವ ತಕರಾರಿಗೂ ಹೋಗುವುದಿಲ್ಲ. ಅಸಲಿಗೆ ಹುತಾತ್ಮನಾದ ಯೋಧ ಯಾರು ಎಂದೇ ಗೊತ್ತಿರುವುದಿಲ್ಲ. ಇಂಥ ಘಟನೆ ನಡೆದಿದ್ದು ಆತ್ಮಹತ್ಯೆ ರಾಮ್ ಕಿಶನ್ ಹೆಣದ ಮುಂದೆಯೇ. ಇದಕ್ಕೆ ಒಂದೊಂದೇ ಉದಾಹರಣೆ ಕೊಡುತ್ತೇನೆ ಕೇಳಿ, ಮೃತ ಮಾಜಿ ಯೋಧನ ಕುಟುಂಬ ಪ್ರತಿಭಟನೆ ಮಾಡಿದ್ದಕ್ಕೆ ದೆಹಲಿ ಪೊಲೀಸರು ಅವರನ್ನು ಠಾಣೆಯಲ್ಲಿ ಕೂರಿಸಿದ್ದರು. ರಾಹುಲ್ ಗಾಂಧಿ ಆ ಠಾಣೆಗೆ ಮೊನ್ನೆ ಹೋಗಿ ಪೊಲೀಸನ ಬಳಿ ಮಾತಾಡಿದ್ದ ರೀತಿ ನೋಡಿದರೆ, ಅವರದ್ದು ಬರೀ ನಾಟಕ ಎಂದು ಗೊತ್ತಾಗುವಂತಿತ್ತು.

ಪೊಲೀಸರಿಗೆ ಬಯ್ದು ತಾನು ಒಳ್ಳೆಯವನಾಗುವ ಅಬ್ಬರದಲ್ಲಿ, ಏನೇನೋ ಮಾತಾಡಿ ಅಪಹಾಸ್ಯಕ್ಕೀಡಾಗಿದ್ದರು. ರಾಹುಲ್ ಗಾಂಧಿ ಪೊಲೀಸರಿಗೆ ಬಯ್ಯುತ್ತಾ: ಏನ್ರೀ ಕೆಲಸ ಮಾಡ್ತಾ ಇದ್ದೀರ? ನೋಡ್ರೀ, ದೇಶಕ್ಕಾಗಿ ಪ್ರಾಾಣ ಕೊಟ್ಟಿದ್ದಾರೆ ಇವರ ಮಗ, ಇವರನ್ನು ಅರೆಸ್‌ಟ್‌ ಮಾಡುತ್ತಿದ್ದೀರಾ ನಾಚಿಕೆಯಾಗಲ್ವಾ? ಅಲ್ಲೇ ಇದ್ದ ಯೋಧನ ಕುಟುಂಬ: ಸಾರ್ ಪ್ರಾಣ ಕೊಟ್ಟವರು ನನ್ನ ತಂದೆ… ರಾಹುಲ್: ನೋಡಿ, ದೇಶಕ್ಕಾಗಿ ಪ್ರಾಣ ಕೊಟ್ಟ ಮಗನ ಕುಟುಂಬ ನೊಡಿ… ರಿಲೀಸ್ ಮಾಡಿ ಅವ್ರನ್ನ! ಇಲ್ಲಿ, ಯೋಧರ ಕುಟುಂಬಕ್ಕೆ ಏನಾಗ್ತಿದೆ ಎಂದೇ ಗೊತ್ತಾಗುತ್ತಿಲ್ಲ.

ಎಲ್ಲ ರಾಹುಲ್‌ರೇ ಮಾತನಾಡುತ್ತಾ ಇದ್ದಾರೆ ಎಂದು ಸುಮ್ಮನಾದರು. ಕೊನೆಗೆ ಯೋಧರ ಕುಟುಂಬವನ್ನು ಬಿಡುಗಡೆ ಮಾಡಿದ ಬಳಿಕವೂ ಇನ್ನೂ ಹೆಚ್ಚಿನ ಮೈಲೇಜ್ ಬೇಕು ಎಂದು ಹೊರಗೆ ಬಂದು, ಮೋದಿ ಸರಕಾರ ಯೋಧರ ಕುಟುಂಬದ ಕ್ಷಮೆ ಕೇಳಬೇಕು ಎಂದು ಹೊರಗೆ ಧರಣಿ ಕುಳಿತಾಗ ಅವರನ್ನು ರಾಹುಲ್‌ರನ್ನು ಬಂಧಿಸುತ್ತಾರೆ. ರಾಹುಲ್ ಗಾಂಧಿಯ ಈ ಶೌರ್ಯ ಮೆಚ್ಚಿ ಅವರೇ ಕರೆದುಕೊಂಡು ಬಂದಿದ್ದ ಅವರ ಕಾರ್ಯಕರ್ತರು ರಾಹುಲ್ ಗಾಂಧಿ ಜಿಂದಾಬಾದ್, ರಾಹುಲ್ ಗಾಂಧಿ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾರೆ.

ಸ್ವಾಮಿ ರಾಹುಲ್ ಗಾಂಧಿ ಬಂದಿರುವುದು ಯೋಧನ ಕುಟುಂಬವನ್ನು ಸಮಾಧಾನ ಮಾಡುವುದಕ್ಕೋ ಅಥವಾ ಜಿಂದಾಬಾದ್ ಕೂಗಿಸಿಕೊಳ್ಳುವುದಕ್ಕೋ? ಇದಕ್ಕೂ ಮುಂಚೆ ರಾಮ್ ಕಿಶನ್ ಅವರ ಹೆಣ ನೋಡಿ ಕೊಂಡು ಬರಲು ರಾಹುಲ್ ಗಾಂಧಿ ಆಸ್ಪತ್ರೆಗೆ ಹೋಗಿದ್ದರು. ಒಬ್ಬ ರಾಜಕಾರಣಿ ಬರುತ್ತಿದ್ದಾನೆ ಎಂದರೆ, ಪೊಲೀಸರು ಮುಂಚೆಯೇ ಆಸ್ಪತ್ರೆಯೊಳಗೆ ಹೊಗಲು ವ್ಯವಸ್ಥೆ ಮಾಡಿಯೇ ಮಾಡಿರುತ್ತಾರೆ. ಆದರೆ, ರಾಹುಲ್ ಗಾಂಧಿಯ ನಾಟಕ ಹೇಗಿತ್ತು ನೋಡಿ, ಸುತ್ತಮುತ್ತ ಪೊಲೀಸರು, ಗಾರ್ಡ್‌ಗಳನ್ನಿಟ್ಟುಕೊಂಡು ಆಸ್ಪತ್ರೆಯ ಗೇಟ್ ಬಳಿ ಬಂದು, ದಯವಿಟ್ಟು ನನ್ನನ್ನು ಯೋಧರ ಕುಟುಂಬವನ್ನು ನೋಡಲು ಒಳಗೆ ಬಿಡಿ, ರಾಮ್ ಕಿಶನ್ ಅವರ ಹೆಣ ನೋಡಲು ಅವಕಾಶ ಮಾಡಿಕೊಡಿ ಎಂದು ಅಲ್ಲಿದ್ದ ವಾಚ್‌ಮನ್ ಮತ್ತು ಮೂರ್ನಾಲ್ಕು ಪೇದೆಗಳನ್ನು ಕೇಳುತ್ತಾರೆ ಎಂದರೆ, ಏನ್ ದಂಧೆ ಮಾಡುತ್ತಿದ್ದೀರಿ ರಾಹುಲ್ ಗಾಂಧಿಯವರೇ? ಯೋಧರ ರಕ್ತದಲ್ಲಿ ದಲ್ಲಾಳಿಗಳ್ಯಾರು ಈಗ? ಒಳಗೆ ಹೋಗುವ ಅವಕಾಶ ಇದ್ದರೂ ಇಂಥ ಡ್ರಾಮಾ ಬೇಕಾಗಿತ್ತಾ? ರಾಹುಲ್ ಒಳಗೆ ಹೋದಮೇಲಂತೂ ಇತ್ತ ಕಾರ್ಯಕರ್ತರು ಕಾಂಗ್ರೆಸ್ ಧ್ವಜ ಹಿಡಿದು ಸ್ವಚ್ಛಂದವಾಗಿ ಬೀಸುತ್ತಾ, ಬಿಜೆಪಿ ವಿರುದ್ಧ ಧಿಕ್ಕಾರ ಕೂಗುತ್ತಿದ್ದರು.

ಇನ್ನು ಆಸ್ಪತ್ರೆಗೆ ಹೋಗುವಾಗಲೂ ಮತ್ತು ವಾಪಸ್ ಬರುವಾಗಲೂ ರಾಹುಲ್ ಏನೋ ಜೋಕು ಕೇಳಿ ನಗುತ್ತಾ ಬರುವಂತೆ ಬಂದರು. ಹೆಣ ನೋಡಲು ಹೋದವನು, ಕುಟುಂಬವನ್ನು ಸಮಾಧಾನ ಮಾಡಲು ಹೋದವನು ನಗುತ್ತಾ ಹೊರ ಬರುತ್ತಾನೆಂದರೆ ಆ ಮನುಷ್ಯನಿಗೆ ಒಂಚೂರಾದ್ರೂ ಸೀರಿಯಸ್‌ನೆಸ್ ಇದೆ ಎಂದು ಯಾರಾದ್ರೂ ಹೇಳುತ್ತಾರಾ? ಸತ್ತಿರುವುದು ಯೋಧ ಸ್ವಾಮಿ, ಯಾವನೋ ಪುಡಿ ರಾಜಕಾರಣಿ ಅಲ್ಲ. ಹೆಣದ ಮುಂದೆಯೂ ನನಗೆಷ್ಟು ವೋಟು ಬರಬಹುದು ಎಂದು ಲೆಕ್ಕಾಚಾರ ಹಾಕುತ್ತಾರಲ್ಲ, ಮನುಷ್ಯತ್ವ ಎನ್ನುವುದು ಒಂಚೂರಾದ್ರೂ ಇದೆಯಾ? ಈ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳಲೆತ್ನಿಸುತ್ತಿರುವ ಇನ್ನೊಬ್ಬ ಮಹಾನುಭಾವ ಅರವಿಂದ್ ಕೇಜ್ರಿವಾಲ್. ಸ್ವಲ್ಪ ದಿನಗಳ ಹಿಂದೆ ಒಂದು ಸರ್ಜಿಕಲ್ ದಾಳಿ ಆಗಿತ್ತು. ಆಗ ಸುಮ್ಮನಿದ್ದ ಕೇಜ್ರಿವಾಲ್ ಏಕಾಏಕಿ ಸರ್ಜಿಕಲ್ ದಾಳಿ ನಡೆದಿದೆಯೋ ಇಲ್ಲವೂ ಎನ್ನುವುದಕ್ಕೆ ವಿಡಿಯೊ ಸಾಕ್ಷ್ಯ ಬೇಕು ಎಂದಿದ್ದರು.

ಇಲ್ಲವಾದರೆ ಇದನ್ನು ನಂಬಲು ಕಷ್ಟವಾಗುತ್ತದೆ ಎಂದಾಗ, ಕೇಜ್ರಿವಾಲ್ ಪಾಕಿಸ್ತಾನದ ಪತ್ರಿಕೆಗಳಲ್ಲಿ ಹೀರೋ ಆಗಿದ್ದರು. ಆಗ ನೆನಪಾಗಲಿಲ್ಲ ನಮ್ಮ ಯೋಧರ ಕಷ್ಟ ಕೇಜ್ರಿವಾಲ್‌ಗೆ. ಇದಕ್ಕೂ ಹಿಂದೆ ಉರಿಯಲ್ಲಿರುವ ನಮ್ಮ ಸೇನಾ ನೆಲೆಯ ಮೇಲೆ ಉಗ್ರರು ದಾಳಿ ಮಾಡಿದಾಗ 18 ಯೋಧರು ಹುತಾತ್ಮರಾಗಿದ್ದರು. ಆಗ ಕೇಜ್ರಿವಾಲ್‌ಗೆ ಮಾತಾಡುವುದಕ್ಕೆ ಬಾಯಿ ಇರಲಿಲ್ಲ. ಆದರೆ, ಈಗ ಆತ್ಮಹತ್ಯೆ ಮಾಡಿಕೊಂಡಿರುವ ಮಾಜಿ ಯೋಧನ ಪರ ಒಲವೋ ಒಲವು. ಎಲ್ಲಿಂದ ಬಂತು ಈ ಒಲವು. ಇಂಥ ಸಾವಿನ ಸಂದರ್ಭದಲ್ಲೂ ಕೇಜ್ರಿವಾಲ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳುತ್ತಾರೆ, ‘ನೀವು ಇಂಥ ಹತ್ತು ಸರ್ಜಿಕಲ್ ದಾಳಿ ನಡೆಸಿ, ಆದರೆ ಯೋಧರನ್ನು ಮರೆಯಬಾರದು’ ಎಂದು.

ಆದರೆ ನನ್ನ ಪ್ರಶ್ನೆಯೇನೆಂದರೆ, ಆತ್ಮಹತ್ಯೆ ಮಾಡಿಕೊಂಡಿರುವ ಮಾಜಿ ಯೋಧ ರಾಮ್ ಕಿಶನ್ ಗ್ರೆವಾಲ್‌ಗೂ ಸರ್ಜಿಕಲ್ ದಾಳಿಗೂ ಏನು ಸಂಬಂಧ? ಸರ್ಜಿಕಲ್ ದಾಳಿ ಎಂದರೆ ಸಾಕು ತಮ್ಮ ಬಾಂಧವರ ಮೇಲೇ ದಾಳಿ ಮಾಡಿದರೇನೋ ಎಂಬಂತೆ ಚಿಂತಾಕ್ರಾಂತರಾಗಿದ್ದ ಕೇಜ್ರಿವಾಲ್ ಈ ಸರ್ಜಿಕಲ್ ದಾಳಿಯ ಬಗ್ಗೆಯೇ ಮಾತಾಡುತ್ತಿದ್ದಾರೆಂದರೆ, ಇನ್ನು ರಾಮ್ ಕಿಶನ್‌ನ ಕುಟುಂಬಕ್ಕೆ ಕೇಜ್ರಿವಾಲ್ ಒಂದು ಕೋಟಿ ರುಪಾಯಿ ಪರಿಹಾರ ಕೊಡುತ್ತೇನೆ ಎಂದು ಘೋಷಿಸಿದ್ದಾರೆ.

ಇದು ಸಂತೋಷವೇ ಆದರೆ, ಇಪ್ಪತ್ತು ದಿನಗಳ ಹಿಂದೆ ಗೋರ್ಖ ರೈಫಲ್ಸ್ ನ ಬಿಮಾಲ್ ತಮಂಗ್ ಎಂಬ ಯೋಧ ಲೈನ್ ಆಫ್ ಕಂಟ್ರೋಲ್‌ನಲ್ಲಿ ಯೋಧರ ಗುಂಡಿಗೆ ಬಲಿಯಾದ. ಅವನಿಗೆಷ್ಟು ಕೋಟಿ ಕೊಟ್ಟರು ಕೇಜ್ರಿ? ಯಾವುದೂ ಬೇಡ ಇದೇ ಪಕ್ಷದ ಧರಣಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರಾಜಸ್ಥಾನದ ರೈತ ಗಜೇಂದ್ರ ಸಿಂಗ್ ರಜಪೂತ್ ಅವರ ಕುಟುಂಬಕ್ಕೆ ಕೇಜ್ರಿ ಎಷ್ಟು ಪರಿಹಾರ ದಯಪಾಲಿಸಿದ್ದಾರೆ? ‘ನಿಮ್ಮ ಪಕ್ಷದವರಿಂದಲೇ ನನ್ನ ಮೇಲೆ ಲೈಂಗಿಕ ಕರುಕುಳ ಆಗುತ್ತಿದೆ ಏನಾದರೂ ಮಾಡಿ’ ಎಂದು ಇವರ ಪಕ್ಷದ ಕಾರ್ಯಕರ್ತೆಯೇ ಅಂಗಲಾಚಿ ದಳು, ಆಗ ಕೇಜ್ರಿ ‘ಅಡ್ಜಸ್ಟ್ ಮಾಡ್ಕೊಳಮ್ಮಾ’ ಎಂದರು ಎಂದು ಆಕೆ ಬರೆದು ಆತ್ಮಹತ್ಯೆ ಮಾಡಿಕೊಂಡಳಲ್ಲ.

ಅವರ ಮನೆಗೆ ಎಷ್ಟು ಕೋಟಿ ಕೊಟ್ಟಿದ್ದಾರೆ? ಪಠಾಣ್‌ಕೋಟ್ ಮತ್ತು ಉರಿ ದಾಳಿಯಲ್ಲಿ ಹುತಾತ್ಮರಾದ ಅಷ್ಟೂ ಯೋಧರಿಗೆ ಒಂದೇ ಒಂದು ಕೋಟಿ ಕೊಟ್ಟಿದ್ದರೂ, ಒಂದು ಕುಟುಂಬಕ್ಕೆ ತಲಾ ಐದು ಲಕ್ಷವಾದರೂ ಬರುತ್ತಿತ್ತು. ಆದರೆ ಅವರಿಗೆ ನಯಾ ಪೈಸೆ ಕೊಟ್ಟಿಲ್ಲ! ಕಾರಣ, ಅವರಿಂದ ತಮ್ಮ ಪಕ್ಷಕ್ಕೆ ರಾಜಕೀಯವಾಗಿ ಏನು ಉಪಯೋಗವಿಲ್ಲವಲ್ಲ? ಯಾಕೆ ಕೊಡಬೇಕು ಹೇಳಿ? ಬದಲಿಗೆ ಯೋಧರ ಕಾರ್ಯಕ್ಷಮತೆಯ ಬಗ್ಗೆಯೇ ಪ್ರಶ್ನೆ, ಹೋರಾಟ ಮಾಡಿರುವುದಕ್ಕೆ ವಿಡಿಯೊ ಸಾಕ್ಷ್ಯ ಬೇರೆ ಬೇಕು!

ಸ್ವಾಮಿ, ‘ನಮ್ಮದು ಬಡ ಪಕ್ಷ, ಬಡ ಪಕ್ಷ’ ಎಂದು ಜನರಿಂದಲೇ ಚಂದಾ ಎತ್ತಿ, ಹೆಣದ ಮೇಲೆ ಹಣ ಇಟ್ಟು ರಾಜಕೀಯ ಮಾಡುವ ಸ್ಥಿತಿಗೆ ತಂದುಬಿಟ್ಟರಲ್ಲಾ ನಿಮ್ಮ ಪಕ್ಷವನ್ನು ಕೇಜ್ರಿವಾಲ್? ಸಾವಿರಾರು ಯೋಧರ ಹೆಣ ಬಿತ್ತು. ಪ್ರತೀ ಸಲ ಪಾಕ್ ಭಾರತದ ಮೇಲೆ ಅಪ್ರಚೋದಿತ ದಾಳಿ ಮತ್ತು ಉಗ್ರರರನ್ನು ಬಿಟ್ಟು ನಮ್ಮ ಸೇನೆಯ ವಿರುದ್ಧ ದಾಳಿ ಮಾಡಿದಾಗಲೂ ಸಾಲು ಸಾಲು ಯೋಧರ ಹೆಣ ಬಿತ್ತು. ಕೆಲ ಕುಟುಂಬಗಳು ಬೀದಿಗೆ ಬಂತು. ಆದರೆ ಸುಬೇದಾರ್ ರಾಮ್ ಕಿಶನ್ ಗ್ರೆವಾಲ್ ಎಂಬ ಯೋಧನ ಹೆಣ ಬೀಳುವ ತನಕ ಈ ಎರಡೂ ಪಕ್ಷದ
ರಾಜಕಾರಣಿಗಳು ಕಣ್ಣು, ಮೂಗು, ಬಾಯಿ ಬಂದ್ ಮಾಡಿ ಕುಳಿತಿದ್ದರು.

ಇಪ್ಪತ್ನಾಲ್ಕು ಗಂಟೆಗಳ ಹಿಂದೆ ಯೋಧರ ಒನ್ ರ್ಯಾಕ್ ಒನ್ ಪೆನ್ಶನ್ ಎಂಬುದರ ಬಗ್ಗೆ ಯಾವ ರಾಹುಲ್
ಗಾಂಧಿಯೂ ನಯಾ ಪೈಸೆ ತಲೆ ಕೆಡಿಸಿಕೊಂಡಿರಲಿಲ್ಲ, ಅರವಿಂದ್ ಕೇಜ್ರಿವಾಲ್‌ರೂ ಕ್ಯಾರೆ ಎಂದಿರಲ್ಲಿಲ್ಲ. ಈಗ ಏಕಾಏಕಿ ಸಿಡಿದೇಳುತ್ತಿದ್ದಾರೆ ಎಂದರೆ, ಹೇಸಿಗೆ ರಾಜಕಾರಣವನ್ನು ಹೆಣದ ಮುಂದೆಯೂ ಶುರು ಮಾಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು.

ನಮಗೆ ಒನ್ ರ್ಯಾಂಕ್ ಒನ್ ಪೆನ್ಶನ್ ಕೊಡಿ, ತಾರತಮ್ಯ ಮಾಡಬೇಡಿ ಎಂದು ಯೋಧರು ಮೊದಲು ಬೇಡಿಕೆ ಇಟ್ಟಿದ್ದು 1973ರಲ್ಲಿ. ಅದೂ ಇಂದಿರಾ ಗಾಂಧಿಯ ಬಳಿ. ಅವತ್ತಿಂದ ಮೋದಿ ಸರಕಾರ ಬರುವವರೆಗೂ ಹೋರಾಟ ಮಾಡುತ್ತಲೇ ಇದ್ದಾರೆ ಆದರೆ ಒನ್ ರ್ಯಾಂಕ್ ಒನ್ ಪೆನ್ಶನ್ ಸಿಗಲಿಲ್ಲ. ಅಂದು ರಕ್ಷಣಾ ಸಚಿವರಾಗಿದ್ದ ಎ.ಕೆ.ಆ್ಯಂಟನಿ, ಈ ಬೇಡಿಕೆಯೇ ಅಸಿಂಧು ಎಂದು ಹೇಳಿ ಯೋಧರನ್ನು ಉಗಿದು ಹೊರಗಟ್ಟಿದ್ದರು. ಆದರೆ ರಾಹುಲ್, ಈಗ ಒನ್ ರ್ಯಾಂಕ್ ಒನ್ ಪೆನ್ಶನ್ ಬಗ್ಗೆ ಯೋಧರಿಗೆ ಸಿಗುತ್ತಿಲ್ಲ ಎಂದು ಧ್ವನಿಯೆತ್ತುತ್ತಿದ್ದಾರೆ. ರಾಹುಲ್ ಗಾಂಧಿಗೆ ಮತ್ತು ಕೇಜ್ರಿವಾಲ್‌ಗೆ 43 ವರ್ಷ ಸಮಯ ಇತ್ತಲ್ಲ ಹೋರಾಟ ಮಾಡುವುದಕ್ಕೆ?! ಆಗೇಕೆ ಏನೂ ಮಾಡಲಿಲ್ಲ? ಸರಿ, ಇಂದಿರಾ ಗಾಂಧಿ ಸಮಯದಲ್ಲಿ ರಾಹುಲ್ ಗಾಂಧಿ ಆಗ ಅಪ್ರಬುದ್ಧ ಬಾಲಕನಾಗಿದ್ದ ಹಾಗಾಗಿ ಯೋಧರ ಪೆನ್ಶನ್ ಬಗ್ಗೆ ಮಾತಾಡಿಲ್ಲ ಎಂದುಕೊಳ್ಳೋಣ. 2008ರಲ್ಲಿ ಯೋಧರು ಪೆನ್ಶನ್‌ಗಾಗಿ ಪಥಸಂಚಲನ ಮಾಡಿ ಪ್ರತಿಭಟಿಸಿದರಲ್ಲ? ಆಗ ಎಲ್ಲಿ ಹೋಗಿದ್ದರು ರಾಹುಲ್? 2012ರಲ್ಲಿ ಒನ್ ರ್ಯಾಾಂಕ್ ಒನ್ ಪೆನ್ಶನ್ ಕೊಡ್ತೀವಿ ಎಂದು 2014ರಲ್ಲಿ ಕೊಡಕ್ಕಾಗಲ್ಲ ಎಂದು ಕಿವಿ ಮೇಲೆ ಹೂವಿಟ್ಟರಲ್ಲ? ಅದರ ಬಗ್ಗೆ ರಾಹುಲ್ ಮತ್ತು ಕೇಜ್ರಿ ಏನಂತಾರೆ? ಮಾತಿದೆಯಾ? ಆತ್ಮಹತ್ಯೆ ಮಾಡಿಕೊಂಡ ರಾಮ್ ಕಿಶನ್ ಗ್ರೆವಾಲ್‌ಗೆ ಕಾಂಗ್ರೆಸ್ ಸರಕಾರ ಇದ್ದಾಾಗ ಬರುತ್ತಿದ್ದ ಪೆನ್ಶನ್ 13 ಸಾವಿರ ರುಪಾಯಿ.

ಒನ್ ರ್ಯಾಂಕ್ ಒನ್ ಪೆನ್ಶನ್ ತಂದ ಮೇಲೆ ಬರುತ್ತಿದ್ದ ಹಣ 28,000 ರುಪಾಯಿ. ಆದರೆ ಈ ಬಾರಿ ಬ್ಯಾಂಕ್‌ನವರ ಕ್ಲೆರಿಕಲ್ ತಪ್ಪಿನಿಂದಾಗಿ 23,000 ರುಪಾಯಿ ಜಮಾ ಆಗಿದೆ. ಅಂದರೆ ಮೊದಲಿಗಿಂತಲೂ ಹತ್ತು ಸಾವಿರ ರುಪಾಯಿ ಹೆಚ್ಚೇ ಬಂದಿದೆ. ಕೇವಲ ಐದು ಸಾವಿರ ರುಪಾಯಿ, ಅದೂ ಕೇವಲ ಒಂದು ತಿಂಗಳು ಬಂದಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳಲು ಅವರೇನು ಹತ್ತನೇ ಕ್ಲಾಸ್ ಫೇಲಾದಾಗ ಆತ್ಮಹತ್ಯೆ ಮಾಡಿಕೊಳ್ಳುವ ಬಾಲಕರೇ ರಾಹುಲ್!? ಒನ್ ರ್ಯಾಕ್ ಒನ್ ಪೆನ್ಶನ್ ತಂದ ಮೇಲೆ ಎಲ್ಲ ಯೋಧರಿಗೂ ಮತ್ತು ಸಾರ್ವಜನಿಕರಿಗೂ ಬಹಳವೇ ಖುಷಿಯಾಗಿದ್ದು, ಮುಂದಿನ ಸಲ ಚುನಾವಣೆಯಲ್ಲಿ ಮೋದಿಗೆ ಇದೂ ಪ್ಲಸ್ ಆಗುತ್ತದೆ ಎಂದು ಮೊದಲಿಗೆ ಈ ಪೆನ್ಶನ್ ಯೋಜನೆ ಕಾಂಗ್ರೆಸ್ಸೇ ರೂಪಿಸಿ, ಜಾರಿಗೊಳಿಸುವುದರಲ್ಲಿತ್ತು ಎಂದರು. ಅದು ಸಫಲವಾಗಲಿಲ್ಲ.

ಪಠಾಣ್‌ಕೋಟ್ ದಾಳಿ ಮತ್ತು ಉರಿ ದಾಳಿಯ ನಂತರವಂತೂ ಯೋಧರಿಗೆ ಬಹಳಷ್ಟು ಮಹತ್ವ ಕೊಡಲಾಯಿತು. ಹೆಚ್ಚು ಸ್ವಾತಂತ್ರ್ಯ ಕೊಡಲಾಯಿತು. ಆಗ ಜನರು ಮೋದಿಯನ್ನು ಕೊಂಡಾಡಿದರು. ಇದನ್ನೆಲ್ಲ ನೋಡಿಯೂ ಸುಮ್ಮನೆ ಕುಳಿತುಕೊಳ್ಳುವ ಸ್ಥಿತಿಯಲ್ಲಿದ್ದರು ರಾಹುಲ್ ಮತ್ತು ಕೇಜ್ರಿ. ಈಗ ಇದೊಂದು ವಿಷಯವನ್ನಿಟ್ಟುಕೊಂಡು ಯಾರಿಗೂ ಪೆನ್ಶನ್ ಹಣ ಬಂದಿಲ್ಲ ಎಂದರೆ, ಸರಕಾರ ಜಾರಿ ಮಾಡಿದ್ದು ವಿಫಲ ಯೋಜನೆ ಎಂದೆಲ್ಲ ಆರಾಮಾಗಿ ಬಿಂಬಿಸಬಹುದು ಎಂಬುದು ಇವರ ಆಲೋಚನೆ.

ಆದರೆ ಇದೂ ಸಾಧ್ಯವಿಲ್ಲ ಏಕೆಂದರೆ, ಸ್ವತಃ ಪೆನ್ಶನ್ ಪಡೆಯುವವರೇ ಇದರ ಬಗ್ಗೆ ಟ್ವೀಟ್ ಮಾಡಿದ್ದಾರೆ ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಪೆನ್ಶನ್ ಮೊದಲಿ ಗಿಂತಲೂ ಈಗ ಡಬಲ್ ಆಗಿದೆ, ಈ ರಾಜಕಾರಣಿಗಳೆಲ್ಲ ಯಾಕಿಷ್ಟು ಹಾರಾಡ್ತಾ ಇದ್ದಾರೆ ಎಂದೇ ಗೊತ್ತಿಲ್ಲ, ಅಷ್ಟಕ್ಕೂ ಇವರ ಅಜೆಂಡಾ ಏನು? ಎಂದು ಬರೆದುಕೊಂಡಿದ್ದಾರೆ. ಒಂದೊಂದು ಸಣ್ಣ ಸಣ್ಣ ಚಲನವಲನದಲ್ಲೂ ರಾಹುಲ್ ಮತ್ತು ಕೇಜ್ರಿವಾಲ್ ಅವರ ಬಂಡವಾಳಗಳು ಬಯಲಾಗುತ್ತಾ ಹೋಗುತ್ತವೆ. ಮೋದಿ ತನ್ನನ್ನು ಕೊಲ್ಲಬಹುದು ಎಂದಾಗಲೂ ಕೇಜ್ರಿವಾಲ್ ಹುಚ್ಚುತನವನ್ನು ಜನ ಕ್ಷಮಿಸಿದ್ದರು. ರಾಹುಲ್ ಕಾಮಿಡಿ ಭಾಷಣಗಳನ್ನು ನೋಡಿ ಜನ ನಕ್ಕಿದ್ದರು. ಆದರೆ ಈ ಅತಿರೇಕಕ್ಕೆ ಜನ ನಗುವುದೂ ಇಲ್ಲ, ಕ್ಷಮಿಸುವುದೂ ಇಲ್ಲ. ಉತ್ತರಿಸುತ್ತಾರೆ, ಮುಂದಿನ ಚುನಾವಣೆಯಲ್ಲಿ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya