ಮೋದಿ ಏನು ಮಾಡಿದರೆ ನಿಮಗೇನು ಕಂಬಾರರೇ?

narendra modi - PTI_1_1_0_1_0_1_0

ಕಂಬಾರರ ಇತ್ತೀಚಿನ ಮಾತುಗಳನ್ನು ಕೇಳಿದರೆ ನಮ್ಮನ್ನು ಅತೀವವಾಗಿ ಕಾಡುವ ಪ್ರಶ್ನೆಯೇನೆಂದರೆ ಕಂಬಾರರು ಏಕೆ ಹೀಗಾದರು? ಜ್ಞಾನಪೀಠ ಬರುವುದಕ್ಕಿಂತ ಮೊದಲು ಅವರು ಸರಿ ಇದ್ದರಲ್ಲ? ಈಗ ಏನೇನೂ ಹೇಳುತ್ತಿದ್ದಾರಲ್ಲ ಎಂದೆನಿಸುವುದು ಅವರ ಇತ್ತೀಚಿನ ಒಂದೆರಡು ಹೇಳಿಕೆಯನ್ನು ಕೇಳಿದ ಮೇಲೆ. ಇವರೇ ಮಾಧ್ಯಮದೆದುರು ಉದುರಿಸಿರುವ ನುಡಿಮುತ್ತು ‘ಮೋದಿ ಸ್ಮಾರ್ಟ್ ಸಿಟಿ ಮಾಡುವುದಲ್ಲ, ಸ್ಮಾರ್ಟ್ ವಿಲೇಜ್ ಮಾಡಲಿ’! ಎಂದು. ಕಂಬಾರರಿಗೆ ಏನಾದರೂ ಹೇಳಿ ಹೆಸರು ಮಾಡಬೇಕೆಂಬ ಚಟವೋ ಏನೋ ಗೊತ್ತಿಲ್ಲ. ಆದರೆ ಈಗ ಮೋದಿಯ ಹಿಂದೆ ಬಿದ್ದಿರುವುದು ಮಾತ್ರ ಅವರಿಗೆ ತಮ್ಮ ಪ್ರಚಾರದ ಕೊರತೆ ಕಾಡುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಇಲ್ಲದಿದ್ದರೆ ಸಾಹಿತಿಗಳಿಗೆ ಮೋದಿ ಸ್ಮಾರ್ಟ್ ಸಿಟಿ ಮಾಡಿದರೇನು ಮತ್ತೊಂದು ಮಾಡಿದರೇನು? ಸಾಹಿತಿಗಳ ಗಮನ ಬರವಣಿಗೆಯತ್ತಲೋ? ಅಥವಾ ಮೋದಿ ಏನು ಮಾಡುತ್ತಾರೆ ಎನ್ನುವುದೋ? ಆಯ್ತು, ಕಂಬಾರರಿಗೆ ದೇಶದ ಬಗ್ಗೆ ಎಲ್ಲಿಲ್ಲದ ಕಾಳಜಿ ಇದೆ ಎಂದೇ ತಿಳಿಯೋಣ, ಅದಕ್ಕೇ ಸ್ಮಾರ್ಟ್ ವಿಲೇಜ್(ಸ್ಮಾರ್ಟ್ ಹಳ್ಳಿ) ಮಾಡಬೇಕು ಎಂದು ಊಹಿಸಿಕೊಂಡರೂ, ಸ್ಮಾರ್ಟ್ ಸಿಟಿಯನ್ನು ವಿರೋಧಿಸುವ ಮನಸ್ಥಿತಿಯೇಕೆ? ಕಂಬಾರರಿಗೆ ಸ್ಮಾರ್ಟ್ ಸಿಟಿಯಲ್ಲಿ ಏನೇನಿರುತ್ತದೆ ಎನ್ನುವುದರ ಅರಿವೇ ಇಲ್ಲದಂತೆ ಅನಿಸುತ್ತದೆ. ಸ್ಮಾರ್ಟ್ ಸಿಟಿಯಲ್ಲಿ ಎಲ್ಲ ಕಡೆ ಕಡ್ಡಾಯ ಶೌಚಾಲಯವಿರುತ್ತದೆ, ಒಳ ಚರಂಡಿ ವ್ಯವಸ್ಥೆ, ವ್ಯವಸ್ಥಿತವಾಗಿರುತ್ತದೆ.

24 ಗಂಟೆ ವಿದ್ಯುತ್ ಸರಬರಾಜು, ನೀರು ಸರಬರಾಜು, ಎಲ್ಲ ಕಡೆ ಬಹಳ ಶುಭ್ರವಾಗಿಡಲಾಗುತ್ತದೆ, ಎಲ್ಲೆಂದರಲ್ಲಿ ಉಗುಳುವ ಹಾಗಿಲ್ಲ, ಮೂತ್ರ ವಿಸರ್ಜಿಸುವ ಹಾಗಿಲ್ಲ, ಸಾರ್ವಜನಿಕ ಸಾರಿಗೆಗಳು ಸದಾ ಇರುತ್ತದೆ, ಐಟಿ ಕಂಪನಿಗಳು ಬರುತ್ತವೆ, ಜನರಿಗೆ ಭದ್ರತೆ, ಹೆಚ್ಚಾಗಿ ಮಹಿಳೆಯರಿಗೆ, ಮಕ್ಕಳಿಗೆ ಮತ್ತು ವಯಸ್ಕರಿಗೆ ಭದ್ರತೆ, 24 ಗಂಟೆ ತೆರೆದಿರುವ ಆರೋಗ್ಯ ಕೇಂದ್ರಗಳು ಹಾಗೂ ಅಷ್ಟೇ ಉತ್ತಮ ಸೇವೆ, ಹೀಗೆ ಹತ್ತು ಹಲವು ಯೋಜನೆಗಳು ಒಂದೇ ಸ್ಮಾರ್ಟ್ ಸಿಟಿಯಲ್ಲಿ ಅದೂ ಕರ್ನಾಟಕದ ದಾವಣಗೆರೆಯ ಪಾಲಾಗಲಿದೆ ಎಂದರೆ ಅದನ್ನೇಕೆ ವಿರೋಧಿಸುತ್ತಿದ್ದಾರೆ ಕಂಬಾರರು? ಸರಿ, ಸ್ಮಾರ್ಟ್ ವಿಲೇಜ್ ಮಾಡೋಣ, ಆದರೆ ಸ್ಮಾರ್ಟ್ ಸಿಟಿ ಏಕೆ ಬೇಡ? ಕಂಬಾರರ ಆಸ್ತಿಗೇನಾದರೂ ಕುತ್ತು ಬಂದಿದೆಯೇ? ಅದೂ ಇಲ್ಲ. ಒಟ್ಟಾರೆಯಾಗಿ ಕೇವಲ ಮೋದಿಯನ್ನು ವಿರೋಧಿಸಬೇಕು, ಆ ಮೂಲಕ ತಾನು ಇತ್ತೀಚಿನ ಕನ್ನಡದ ಇತರ ಜ್ಞಾನಪೀಠಿಗಳ ಹಾಗೆ ಬುದ್ಧಿಜೀವಿ ಎನಿಸಿಕೊಳ್ಳಬೇಕು ಎಂದಾದರೆ ನಮ್ಮದೇನೂ ತಕರಾರಿಲ್ಲ. ಕಂಬಾರರ ಈ ಮಾತು ಏಕೋ ಗಾಂಧಿ ಕುಟುಂಬದ ಯುವರಾಜನನ್ನು ನೆನಪಿಸುವಂತಿದೆ. ಕಂಬಾರರು ಪ್ರಾಸ ಉಪಯೋಗಿಸುವುದಕ್ಕೆ ಹೋಗಿ ತ್ರಾಸಕ್ಕೆ ಸಿಲುಕಿದರಾ ಅನಿಸುತ್ತಿದೆ. ಇವರ ಮಾತನ್ನು ಸ್ವಲ್ಪ ಮಟ್ಟಿಗೆ ಒಪ್ಪಿಕೊಂಡು, ಸ್ಮಾರ್ಟ್ ವಿಲೇಜ್ ಹೇಗಿರಬೇಕೆಂದು ನಾವೇ ಊಹಿಸಿಕೊಳ್ಳೋಣ. ಪ್ರತಿ ಹಳ್ಳಿಗೂ, ಮೊಬೈಲ್ ಸಂಪರ್ಕ, ಕಂಪ್ಯೂಟರ್, ಅಲ್ಲಿ ದೊಡ್ಡ ದೊಡ್ಡ ಕಂಪನಿಗಳು, ಹೈ– ತಂತ್ರಜ್ಞಾನ ಇರಬೇಕು, ಲ್ಯಾಬ್‌ಗಳು ತೆರೆದಿರಬೇಕು ಹೀಗೆ ನೂರಾರು ಯೋಜನೆಗಳು. ಆದರೆ ನನ್ನ ಪ್ರಶ್ನೆ ಏನೆಂದರೆ ಇನ್ನೂ ಸರಕಾರಿ ಕಚೇರಿಗಳಲ್ಲೇ ಎಷ್ಟೋ ನೌಕರರಿಗೆ ಕಂಪ್ಯೂಟರ್ ಸ್ವಿಚ್ ಒತ್ತುವುದಕ್ಕೂ ಬರುವುದಿಲ್ಲ. ಇನ್ನು ಹಳ್ಳಿಯಲ್ಲಿಟ್ಟರೆ ಗತಿಯೇನು? ದೊಡ್ಡ ದೊಡ್ಡ ಕಂಪನಿಗಳು ಹಳ್ಳಿಗೆ ಬಂದು ಏನು ಹಪ್ಪಳ ಸಂಡಿಗೆ ಕರಿಯಬೇಕೆ? ಲ್ಯಾಬ್‌ಗಳು ಬಂದು, ಹೈ– ತಂತ್ರಜ್ಞಾನಕೊಟ್ಟು, ಕಂಪನಿಗಳು ಬರಬೇಕೆಂದರೆ ನೂರಾರು ಮರಗಿಡಗಳನ್ನು ಕಡಿಯಬೇಕಾಗುತ್ತದೆ. ಆಗ ನಿಮ್ಮ ಸ್ನೇಹಿತರೇ ಅಯ್ಯೋ ಪ್ರಕೃತಿ ನಾಶ ಎಂದು ಬೊಬ್ಬೆ ಹೊಡೆಯುತ್ತಾರೆ. ಮರಗಿಡಗಳನ್ನೆಲ್ಲ ಕಡಿದು ಪ್ರಕೃತಿ ಹಾಳಾಗಿದ್ದೂ ಅದಕ್ಕೆ ‘ಹಳ್ಳಿ’ ಎಂದು ನಿಮ್ಮ ಕಾದಂಬರಿ-ಕತೆಗಳಲ್ಲಿ ಬರೆಯಬಹುದೇ ವಿನಃ ನಿಜಜೀವನದಲ್ಲಿ ಸಾಧ್ಯವಿಲ್ಲ. ಅಸಲಿಗೆ ನಿಮ್ಮ ಸ್ಮಾರ್ಟ್ ಸಿಟಿಯ ಪರಿಕಲ್ಪನೆಯಾದರೂ ಏನು? ಕಂಬಾರರು ಇವತ್ತೇ ಅಲ್ಲ, ಯಾವಾಗಲೂ ತಮ್ಮ ಭಾಷಣದ ತಯಾರಿ ಮಾಡಿಕೊಂಡು ಬರುವುದೇ ಇಲ್ಲ. ಇವರ ಮೂರು ಕಾರ್ಯಕ್ರಮಕ್ಕೆ ಹೋಗಿ ಮಾತುಗಳನ್ನು ಕೇಳಿದರೆ ಜ್ಞಾನಪೀಠಿಗಳ ಜ್ಞಾನ ಸಂಪತ್ತಿನ ಗಂಟಿನಲ್ಲಿ ಮೂರಕ್ಷರ ಇಲ್ಲ ಎಂಬುದು ಬಯಲಾಗುತ್ತದೆ ಮತ್ತು 15 ನಿಮಿಷ ನಿರರ್ಗಳ ವಿಷಯದ ಬಗ್ಗೆ ಮಾತಾಡುವುದಿಲ್ಲ. ಇನ್ನು ಮೋದಿ, ಸ್ಮಾರ್ಟ್ ವಿಲೇಜ್ ಮಾಡಬೇಕಂತೆ. ಕಂಬಾರರಿಗೆ ಕನಸು ಬೀಳುವುದಕ್ಕಿಂತ ಮೊದಲೇ ಮೋದಿ, ‘ದೇಶದಲ್ಲಿ ದೇವಾಲಯಗಳನ್ನು ನಿರ್ಮಾಣ ಮಾಡುವುದಲ್ಲ, ಹೆಚ್ಚು ಶೌಚಾಲಯವನ್ನು ನಿರ್ಮಾಣ ಮಾಡಬೇಕು’ ಎಂದು ಕರೆ ಕೊಟ್ಟಿದ್ದರು. ಆದು ಈಗ ಸಾಕಾರಗೊಳ್ಳುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ವಿದ್ಯುತ್ ಬೆಳಕೇ ಕಾಣದ ಎಷ್ಟೋ ಊರುಗಳಿಗೆ ಪಿಯುಷ್ ಗೋಯಲ್ ವಿದ್ಯುತ್ ಸಂಪರ್ಕ ನೀಡಿದ್ದಾರೆ.

ಸ್ಮಾರ್ಟ್ ವಿಲೇಜ್‌ಗೆ ಇನ್ನೇನು ಬೇಕು ಕಂಬಾರರೇ? ಜ್ಞಾನಪೀಠ ಬಂದ ಮೇಲೆ ಎಂದಾದರೂ ಹಳ್ಳಿಗಳಲ್ಲಿ ಶೌಚಾಲಯವಿಲ್ಲದ ಮನೆಯಲ್ಲಿ ಉಳಿದಿದ್ದೀರಾ? ಕರೆಂಟೇ ಇಲ್ಲದ ಮನೆಯಲ್ಲಿ ರಾತ್ರಿ ಕಳೆದಿದ್ದೀರಾ? ಹಾಗೆ ಉಳಿದಿದ್ದರೆ ನಿಮಗೆ ಸ್ಮಾರ್ಟ್ ಹಳ್ಳಿ ಎಂಬುದರ ವ್ಯಾಖ್ಯಾನ ತಿಳಿಯುತ್ತಿತ್ತು. ಹಳ್ಳಿಗರಿಗೆ ಇಂದು, ಮನೆಯ ಹೊರಗಾದರೂ ಮೊಬೈಲ್ ಸಿಗ್ನಲ್ ಸಿಕ್ಕಿದರೆ, ಡಿಶ್ ಟಿವಿ ಬಂದರೆ, ಶೌಚಾಲಯವಿದ್ದರೆ, ಹೆಣ್ಣು ಮಕ್ಕಳಿಗೆ ಮೈ ಕಾಣದ ಹಾಗೆ ಬಾಗಿಲು ಹಾಕಿಕೊಂಡು ಸ್ನಾನ ಮಾಡುವುದಕ್ಕೆ ಸ್ಥಳವಿದ್ದರೆ, ಹತ್ತಿರದಲ್ಲಿ ಒಳ್ಳೆಯ ಶಾಲೆ ಮತ್ತು ಆಸ್ಪತ್ರೆಯಿದ್ದರೆ ಅದೇ ಸ್ಮಾರ್ಟ್ ಸಿಟಿ. ಆದರೆ ಮೋದಿಯವರು ಇದನ್ನೆಲ್ಲ ಮಾಡುತ್ತಲೇ ಇದ್ದಾರೆ. ಸ್ಮಾರ್ಟ್ ವಿಲೇಜ್ ಎಂಬ ನಾಮಕರಣ ಮಾಡಿಲ್ಲವಷ್ಟೇ. ಇಷ್ಟಾಗಿಯೂ ದಾವಣಗೆರೆಯನ್ನು ಸ್ಮಾರ್ಟ್ ಸಿಟಿ ಮಾಡುವುದಕ್ಕೆ ಮೋದಿ ಸರಕಾರ ಪರಿಗಣಿಸಿರುವುದು ನಾವು ಹೆಮ್ಮೆ ಪಡಬೇಕಾದಂಥ ವಿಷಯ. ಚಂದ್ರಶೇಖರ ಕಂಬಾರರು ಯಾವ ಭಾಷಣಕ್ಕೂ ತಯಾರಾಗಿ ಬರದೇ, ಗಾಳಿಯಲ್ಲಿ ಗುಂಡು ಹೊಡೆಯುತ್ತಾರೆ ಎಂಬುದಕ್ಕೆ ಮತ್ತೊಂದು ಉದಾಹರಣೆ, ಅದೇ ದಿನ ‘ಭಗವಾನರು ಏಕೆ ವಿಧಾನ ಪರಿಷತ್ತಿಗೆ ಹೋಗಬಾರದು? ಅವರು ಕನ್ನಡಪರ ಬಹಳ ಕೆಲಸ ಮಾಡಿದ್ದಾರೆ. ಕನ್ನಡದ ಬಗ್ಗೆ ಗಟ್ಟಿಯಾಗಿ ಮಾತನಾಡುವವರು ಒಬ್ಬರು ವಿಧಾನ ಪರಿಷತ್ತಿಗೆ ಬೇಕಾಗಿದ್ದಾರೆ’ ಎಂದಿದ್ದು. ಇವರು ನಿಜವಾಗಿಯೂ ಕನ್ನಡಕ್ಕೆ ಯಾವುದೇ ಫಲಾಪೇಕ್ಷೆಗಳಿಲ್ಲದೇ ಕೆಲಸ ಮಾಡಿದವರ ಹೆಸರು ಹೇಳಿದ್ದರೆ ಅದಕ್ಕೊಂದು ತೂಕ ಬರುತ್ತಿತ್ತು. ಅದರ ಬದಲು ಸಾಹಿತ್ಯದಲ್ಲೂ ಹೇಳಿಕೊಳ್ಳುವಂಥ ಯಾವುದೇ ಕೃಷಿ ಮಾಡದ, ಧರ್ಮಗ್ರಂಥಗಳ ಬಗ್ಗೆ ನಯಾ ಪೈಸೆ ಗೊತ್ತಿಲ್ಲದ, ಭಗವಾನ್‌ರನ್ನು ಶಿಫಾರಸು ಮಾಡುವಷ್ಟರ ಮಟ್ಟಿಗೆ ಕಂಬಾರರ ಬುದ್ಧಿಮತ್ತೆಯಿದೆ ಎಂದು ತಿಳಿದಿರಲಿಲ್ಲ. ಅಸಲಿಗೆ ಭಗವಾನ್‌ರ ಸಾಧನೆಯೇನು? ಅಥವಾ ಕನ್ನಡಕ್ಕೆ ಅವರ ಕೊಡುಗೆಯೇನು? ಕೇವಲ ರಾಮ ಸರಿ ಇಲ್ಲ. ಕೃಷ್ಣ ಸರಿ ಇಲ್ಲ.

ಭಗವದ್ಗೀತೆಯನ್ನು ಸುಡಬೇಕು ಎನ್ನುವ ನುಡಿ ಮುತ್ತುಗಳನ್ನು ಕನ್ನಡದಲ್ಲಿ ಆಡಿದ್ದಾರೆ ಮತ್ತು ಶಂಕರಾಚಾರ್ಯರ ತಲೆ ಸರಿ ಇಲ್ಲ, ಅವರು ಹೇಳಿದ್ದೆಲ್ಲ ಸುಳ್ಳು, ಅಂಬೇಡ್ಕರರಿಗಿದ್ದಷ್ಟು ಬುದ್ಧಿಯೂ ಮಧ್ವಾಚಾರ್ಯರಿಗಿಲ್ಲ ಎಂದು ತನ್ನ ಮೂರು ಮತ್ತೊಂದು ಪುಸ್ತಕದಲ್ಲಿ ಕನ್ನಡ ಭಾಷೆಯಲ್ಲೇ ಗೀಚಿಕೊಂಡಿದ್ದಾರೆ ಎನ್ನುವುದು ಬಿಟ್ಟರೆ ಕನ್ನಡಕ್ಕೆ ಅವರ ಕೊಡುಗೆ ಏನೇನೂ ಇಲ್ಲ. ಇಂಥವರನ್ನು ಕನ್ನಡ ಪರ ಮಾತಾಡುವವರು ಎನ್ನುವ ಕಂಬಾರರಿಗೆ ಜ್ಞಾನಪೀಠ ಕೊಟ್ಟರೆ ಏನು ಬೇಕಾದರೂ ಮಾತನಾಡಬಹುದು ಎಂಬ ಮೂಢನಂಬಿಕೆಯೋ? ಜ್ಞಾನಪೀಠಿಗಳಿಗೆ ಒಂದು ಚಾಳಿ ಇರುತ್ತದೆ. ತಮಗೆ ಜ್ಞಾನಪೀಠ ಬಂದರೆ ಸಾಕು ಏನು ಬೇಕಾದರೂ ಹೇಳಬಹುದು ಎಂದು. ಉದಾಹರಣೆಗೆ ಗಿರೀಶ್ ಕಾರ್ನಾಡ್ರನ್ನೇ ತೆಗೆದುಕೊಳ್ಳಿ, ಕನ್ನಡಪರ ಹೋರಾಟಗಳಲ್ಲಿ ಅವರು ಕಾಣಿಸಿಕೊಂಡಿದ್ದಕ್ಕಿಂತ ‘ಎಡ’ಬಿಡಂಗಿಗಳ ‘ಓ’ರಾಟಕ್ಕೆ ಟೌನ್‌ಹಾಲ್ ಮುಂದೆ ಕುಳಿತಿದ್ದೇ ಹೆಚ್ಚು. ದಿವಂಗತ ಅನಂತಮೂರ್ತಿಯವರಂತೂ ಬದುಕಿದ್ದಷ್ಟೂ ದಿನ ಜ್ಞಾನಪೀಠಿ ಎನ್ನುವುದನ್ನೂ ಮರೆತು ದೇವರು, ಬ್ರಾಹ್ಮಣರು, ಮೋದಿ, ಬಿಜೆಪಿ ವಿರುದ್ಧ ಕಾಕಾ ಎನ್ನುತ್ತಾ ಜೀವ ಸವೆಸಿದರು. ಕುವೆಂಪು, ದರಾ ಬೇಂದ್ರೆ, ಕಾರಂತಜ್ಜ ಹೀಗೆ ಮೊದಲಾದವರನ್ನು ಹೊರತುಪಡಿಸಿ, ಇತ್ತೀಚೆಗೆ ಜ್ಞಾನಪೀಠ ಏರಿಸಿಕೊಂಡವರ ಕನ್ನಡ ಶಾಲೆಯ ಪುಸ್ತಕಗಳಲ್ಲಿ ‘ಜ್ಞಾನಪೀಠ ಪಡೆದವರು’ ಎಂಬ ಕಾರ್ಟೂನ್ ಚಿತ್ರದಲ್ಲಿ ನೋಡಬಹುದೇ ಹೊರತು, ಮೂರನೇ ಕ್ಲಾಸ್ ಬಿಟ್ಟು ಮೂರು ಪುಸ್ತಕಗಳಲ್ಲೂ ಇವರ ಹೆಸರು ಹುಡುಕಿದರೆ ಸುತಾರಾಂ ಸಿಗುವುದಿಲ್ಲ. ಒಂದೊಮ್ಮೆ ಸ್ವತಃ ಚಂದ್ರಶೇಖರ ಕಂಬಾರರೇ ತಾನು ವಿಧಾನ ಪರಿಷತ್ತಿಗೆ ಅರ್ಹ ವ್ಯಕ್ತಿ, ಎಂದರೆ ಒಪ್ಪುವಂಥ ಮಾತಾಗಿತ್ತು.

ಬನ್ನಂಜೆ ಗೋವಿಂದಾಚಾರ್ಯರು ಭಗವಾನ್‌ರ ಬುದ್ಧಿಮತ್ತೆಯ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಝಾಡಿಸಿದ್ದಾರೆ – ‘ಈ ಭಗವಾನ್‌ಗೆ ತಲೆ ಗೊತ್ತಿಲ್ಲ, ಬುಡ ಗೊತ್ತಿಲ್ಲ. ಯಾರೋ ‘ಆಸ್ತಿಕ’ ಎನ್ನುವ ಪದದ ಅರ್ಥ ಏನಪ್ಪಾ ಎಂದು ಕೇಳಿದರೆ ‘ಆಸ್ತಿ ಇರುವವನು’ ಎಂದು ಹೇಳಿದ. ಈತ ಎಂಥ ಪೆದ್ದ ಎಂದರೆ, ಜಗತ್ತಿನಲ್ಲಿ ಸರ್ವಶ್ರೇಷ್ಠ ಪೆದ್ದನಿಗೆ ಏನಾದರೂ ನೊಬೆಲ್ ಕೊಡುವುದಾದರೆ ಅದು ಭಗವಾನ್‌ಗೆ ಕೊಡಬಹುದು’ ಎಂದು ಉಗಿದು ಉಪ್ಪು ಹಾಕಿದ್ದರು. ಕನ್ನಡದ ಒಂದು ಸಣ್ಣ ಪದ ‘ಆಸ್ತಿಕ’ ಎನ್ನುವುದರ ಅರ್ಥವೇ ಗೊತ್ತಿಲ್ಲದವರಿಗೆ ಕನ್ನಡದ ಪರ ವಿಧಾನಪರಿಷತ್ತಿನಲ್ಲಿ ಮಾತನಾಡಲು ಕಳಿಸಬೇಕು ಎನ್ನುತ್ತಾರಲ್ಲ, ಇಂಥವರನ್ನು ಸದನದಲ್ಲಿ ಮೇಜು ಬಿಸಿ ಮಾಡುವುದಕ್ಕೆ ಕಳಿಸಬೇಕಾ?ಕಂಬಾರರ ಪ್ರಚಾರಕೊರತೆಯ ಸಂಕಟ ಅರ್ಥವಾಗುತ್ತಿದೆ. ಇವರು ಇದನ್ನೆಲ್ಲ ಮಾಡುವ ಸಮಯದಲ್ಲಿ, ಅತಿಥಿಯಾಗಿ ಕಾರ್ಯಕ್ರಮಕ್ಕೆ ಹೋಗಿ ಹೇಗೆ ಮಾತನಾಡಬೇಕು ಎನ್ನುವುದರ ಬಗ್ಗೆಯಾದರೂ Homework ಮಾಡಿದ್ದರೆ, ಜ್ಞಾನಪೀಠಿಗಳ ಮಾತು ತೂಕದ ಮಾತು ಎಂದು ನೆನಪಲ್ಲಿಟ್ಟುಕೊಳ್ಳುತ್ತಾರೆ. ಇಲ್ಲವಾದರೆ ಮೂರನೇ ಕ್ಲಾಸಿನ ಪಠ್ಯದಲ್ಲಿ ಅನಂತ ಮೂರ್ತಿ, ಕಾರ್ನಾಡರ ಫೋಟೊ ಪಕ್ಕದಲ್ಲಿ ಮತ್ತೊಂದು ಕಾರ್ಟೂನ್ ಚಿತ್ರವಾಗಿರಬೇಕಷ್ಟೇ.

(ಲೇಖಕರು ಪತ್ರಕರ್ತರು)

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya