ಬೇರೆ ಯಾವ ಸರಕಾರವೂ ಎರಡು ವರ್ಷದಲ್ಲಿ ಇಷ್ಟು ಸಾಧಿಸಿಲ್ಲ

rammadhav-k01F--621x414@LiveMint

ರಾಮ್ ಮಾಧವ್. ನರೇಂದ್ರ ಮೋದಿ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಆರ್ಎಸ್ ಎಸ್ನಿಂದ ಬಿಜೆಪಿಗೆ ನಿಯೋಜಿತರಾದವರು. ಜನರಲ್ ಸೆಕ್ರೇಟರಿ ಆಗಿರುವ ಇವರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅಮಲಾಪುರಂನಲ್ಲಿ ಜನನ, ಇಲ್ಲೇ ಮೈಸೂರಿನಲ್ಲಿ ವಿದ್ಯಾಭ್ಯಾಸ. ಕಾಶ್ಮೀರದಲ್ಲಿ ಪಿಡಿಪಿ ಸರಕಾರದ ಜತೆ ಸ್ನೇಹ ಸಂಬಂಧ ಚಾಚುವುದಕ್ಕೆ ಮುಖ್ಯ ಕಾರಣ ರಾಮ್ ಮಾಧವ್ ಓಡಾಟ ಮತ್ತು ಮಾತುಕತೆ. ಇನ್ನು ಎನ್ಆರ್ಐ ರ್ಯಾ ಲಿಗಳು ಮಾಡುವುದಿರಲಿ ಅಸ್ಸಾಮ್ನಲ್ಲಿ ಬಿಜೆಪಿ ಗೆಲವಿಗೆ ಕೆಲಸ ಮಾಡುವುದಿರಲಿ, ಎಲ್ಲದರ ಹಿಂದೆಯೂ ರಾಮ್ ಮಾಧವ್ ಇರುವಿಕೆಯ ಗುರುತು ಕಾಣಸಿಗುತ್ತದೆ. ರಾಮ್ ಮಾಧವ್ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

  • ಅಸ್ಸಾಮ್ ನಲ್ಲಿ ಬಿಜೆಪಿ ಗೆಲ್ಲುವುದರ ಹಿಂದೆ ನೀವೇ ಇದ್ದೀರಿ ಎಂದು ಹೊರಗಡೆ ಮಾತುಗಳು ಕೇಳಿ ಬರುತ್ತಿದೆ?

ಒಬ್ಬರಿಂದ ಅಸ್ಸಾಮ್ನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಗದು. ಅಸ್ಸಾಮ್ ನಮಗೆ ಬಹಳ ಕಷ್ಟದ ರಾಜ್ಯವಾಗಿತ್ತು. ಅಷ್ಟು ಸುಲಭವಾಗಿ ಕೈಗೆಟುಕುತ್ತಿರಲಿಲ್ಲ. ನಮ್ಮ ಬಳಿ ಅಲ್ಲಿ ಕೇವಲ 5 ಶಾಸಕರಿದ್ದರು. ಇಷ್ಟೇ ಇಟ್ಟು ಕೊಂಡು ಸರಕಾರ ನಡೆಸುತ್ತೇವೆ ಎನ್ನುವುದು ಆಗದಿರುವ ಮಾತಾಗಿತ್ತು. ನಮ್ಮ ಒಂದೇ ಗುರಿ ಇದ್ದದ್ದು ಪ್ರಧಾನಿ ಮೋದಿಯ ಖ್ಯಾತಿ ಹೆಚ್ಚಬೇಕು. ಇದೊಂದು ಬಿಟ್ಟು ನಮ್ಮ ತಲೆಯಲ್ಲಿ ಬೇರೇನೂ ಇರಲಿಲ್ಲ. ಸರಕಾರ ರಚಿಸುವ ಒಂದೇ ಒಂದು ಗುರಿ ಇಟ್ಟುಕೊಂಡು ನಾವು ಒಂದೂವರೆ ವರ್ಷ ಹಗಲು ರಾತ್ರಿಯೆನ್ನದೇ ಕೆಲಸ ಮಾಡಿದ್ದೇವೆ.

  • ಅಸ್ಸಾಮ್ ಎಂಬುದು ನೀವು ಈಶಾನ್ಯ ಭಾರತಕ್ಕೆ ಕಾಲಿಡುವುದಕ್ಕೆ ಒಂದು ಮುಖ್ಯದ್ವಾರ ಎಂದು ಹೇಳಬಹುದೇ?

ಈಶಾನ್ಯ ಭಾರತ ಅಭಿವೃದ್ಧಿ ಕಾಣದೇ ವರ್ಷಗಳೇ ಕಳೆದಿವೆ. ಇದಕ್ಕೇ ನಮಗೆ ಅಸ್ಸಾಮ್ ಬಹಳ ಮುಖ್ಯವಾಗಿರುವುದು. ಇಲ್ಲಿ ಅಧಿಕಾರಕ್ಕೆ ಬರುವುದರಿಂದ ಜನರಿಗೇ ಹೆಚ್ಚು ಲಾಭ. ಅಲ್ಲಿನ ಪ್ರದೇಶಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ಉದಾಹರಣೆಗೆ ಅಲ್ಲಿನ ಜನರನ್ನು ಕಾಡುತ್ತಿರುವ ಸಮಸ್ಯೆಗಳಾದ ನಿರುದ್ಯೋಗ, ಬಡತನ, ಅನಕ್ಷರತೆ, ಪ್ರತ್ಯೇಕತಾವಾದ, ಜನಾಂಗೀಯ ನಿಂದನೆ ಇಂಥದ್ದೆಲ್ಲ ಅಲ್ಲಿ ಬಹಳ ಇದೆ. ಇದರ ಮೇಲೆ ಕೆಲಸ ಮಾಡಿ ಬದಲಾವಣೆ ತಂದರೆ ಅಭಿವೃದ್ಧಿಯ ಹೆಸರೂ ಕೇಳಿರದ ಜನತೆಗೆ ನಮ್ಮ ಮೇಲೆ ವಿಶ್ವಾಸ ಮೂಡುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಇದು ನಮ್ಮ ಭಾರತಕ್ಕೆ ಮತ್ತು ಆಗ್ನೇಯ ಏಷ್ಯಾಕ್ಕೆ ಕೊಂಡಿಯ ಹಾಗಿದೆ. ಇಲ್ಲಿ ನಾವು ಅಭಿವೃದ್ಧಿ ತಂದರೆ ಸಿಂಗಾಪುರ ಮತ್ತು ಜಪಾನ್ ತನಕವೂ ಗೋಚರಿಸುತ್ತದೆ. ಇದು ನಮಗೊಂದು ಸವಾಲೇ ಆಗಿದೆ. ಕಾಶ್ಮೀರದ ರೀತಿಯಲ್ಲೇ ಇಲ್ಲೂ ದೇಶ ವಿರೋಧಿಗಳು ಇದ್ದಾರೆ. ತಮ್ಮ ಚಟುವಟಿಕೆಗಳನ್ನು ನಡೆಸುತ್ತಲೇ ಇರುತ್ತಾರೆ. ಇಂಥ ಪ್ರದೇಶವನ್ನು ರಕ್ಷಿಸುವುದು ಕೇವಲ ಆರ್ಎಸ್ಎಸ್ ಅಷ್ಟೇ ಅಲ್ಲ, ನಮ್ಮ ಕರ್ತವ್ಯ ಸಹ. ಒಟ್ಟಾರೆ ನಮಗೆ ದೇಶದ ಭದ್ರತೆ ಮುಖ್ಯ. ನಾವು ಇಂದು ಜಮ್ಮು ಕಾಶ್ಮೀರ ಮತ್ತು ಅಸ್ಸಾಮ್ನಲ್ಲಿ ಅಧಿಕಾರದಲ್ಲಿದ್ದೇವೆ. ಇದರಿಂದ ಹೊರಗೆ ಕೊಡುವ ಸಂದೇಶವೆಂದರೆ ನಾವೆಲ್ಲರೂ ಒಂದೇ ಎಂದು. ಸತ್ಯ ಏನೆಂದರೆ ನಮ್ಮದು ಒಂದು ದೇಶ, ನಾವೆಲ್ಲರೂ ಒಂದೇ.

  • ನೀವು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತೀರಿ, ಆದರೆ ನಿಮ್ಮನ್ನು ಟೀಕಿಸುವವರು ದಲಿತರಲ್ಲಿ ಅಟ್ರಾಸಿಟಿ ಮೂಡಿಸುತ್ತಿದ್ದಾರಲ್ಲ?

ನಾವು ಅಧಿಕಾರಕ್ಕೆ ಬಂದಾಗಿನಿಂದಲೂ ನಮ್ಮ ಸರಕಾರ ದಲಿತರಿಗಾಗಿ ಮತ್ತು ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಏಳ್ಗೆಗಾಗಿ ಸಾಕಷ್ಟು ಶ್ರಮಿಸಿದ್ದೇವೆ. ಟೀಕೆಗಳು ಸಾಕಷ್ಟು ಬರುತ್ತಿರುತ್ತವೆ, ಅವುಗಳಿಗೆ ಯಾವುದಕ್ಕೂ ಆಧಾರವೇ ಇಲ್ಲ.

ಕೆಲ ರಾಜ್ಯಗಳಲ್ಲಿರುವ ಗೋಮಾಂಸ ನಿಷೇಧದ ಬಗ್ಗೆ ನಿಮ್ಮ ಸಮಜಾಯಿಷಿಯೇನು? ಮುಸ್ಲಿಮರಲ್ಲಿ ಅಭದ್ರತೆ ಮತ್ತು ಆತಂಕದ ವಾತಾವರಣವಿದೆ ಮತ್ತು ಬಂಧಿಯಾಗಿದ್ದೇವೆಂಬ ಭಾವನೆ ಇದೆಯಲ್ಲ, ಅದರ ಬಗ್ಗೆ ಏನು ಹೇಳುತ್ತೀರ?

ಇಲ್ಲ, ಮುಸ್ಲಿಮರಲ್ಲಿ ಅಂಥ ಭಯ/ಆತಂಕ ಯಾವುದು ಇಲ್ಲವೇ ಇಲ್ಲ. ಅದು ಕೆಲ ಜನರಿಂದ ಮುಸಲ್ಮಾನರಲ್ಲಿ ಮೂಡಿಸಿದ ತಪ್ಪು ನಂಬಿಕೆಯಷ್ಟೇ. ಒಮ್ಮೆ ಪತ್ರಕರ್ತರನ್ನು ಹತ್ಯೆಗೈದರೆ ಈ ದೇಶದಲ್ಲಿ ಎಲ್ಲ ಪತ್ರಕರ್ತರಿಗೂ ಅಸುರಕ್ಷತೆ, ಅಭದ್ರತೆ ಇದೆ ಎಂದು ಅರ್ಥವಾ? ಹಾಗೆಯೇ ಒಂದು ಸಮುದಾಯ ಏನೂ ಭಾರೀ ಸಂಕಷ್ಟದಲ್ಲಿದೆ ಎಂದು ಹೇಳುವುದು ಸರಿಯಲ್ಲ. ನಮ್ಮ ಸರಕಾರ ಇಡೀ ದೇಶದ ಜನತೆಯ ಭದ್ರತೆಗಾಗಿ ನಿಂತಿದೆ. ಯಾವುದೋ ಒಂದು ಧರ್ಮದ ಪರವಾಗಿ ನಿಂತಿಲ್ಲ. ನಾವು ಒಂದು ಭರವಸೆ ಕೊಡುತ್ತೇವೆ, ಯಾರು ಸಹ ಯಾವುದೋ ಒಂದು ಧರ್ಮವನ್ನು ಪಾಲಿಸುವುದರಿಂದ ಅವರಿಗೆ ಅಭದ್ರತೆ ಕಾಡುವ ಹಾಗೆ ನಾವು ಮಾಡುವುದಿಲ್ಲ.

  • ಗೋಮಾಂಸ ಸೇವನೆಯ ಬಗ್ಗೆ ಆದಿ ಗೋದ್ರೆಜ್ರ ಹೇಳಿಕೆಗಳ ಬಗ್ಗೆ ನೀವೇನು ಹೇಳುತ್ತೀರಾ?

ಕೆಲ ರಾಜ್ಯಗಳಲ್ಲಿ ಅದರದ್ದೇ ಆದ ಕಾನೂನುಗಳಿರುತ್ತವೆ. ಆ ಕಾನೂನುಗಳನ್ನು ಹಿಂದಿನ ಸರಕಾರ ಮಾಡಿ ಹೋಗಿರುತ್ತವೆ. ಸುಮಾರು 22-23 ರಾಜ್ಯಗಳಲ್ಲಿ ಗೋಮಾಂಸ ನಿಷೇಧವಿದೆ. ಆದರೆ, ಆ ಅಷ್ಟೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿರಲೇ ಇಲ್ಲ. ಆದರೆ, ಅವೆಲ್ಲ ಹೇಗೆ ಜಾರಿಯಾಯ್ತು? ಸಂವಿಧಾನದಲ್ಲೂ ಸಹ ಸಂಪೂರ್ಣ ಗೋಹತ್ಯೆ ನಿಷೇಧ ಜಾರಿಯಾಗುವತ್ತ ಹೆಜ್ಜೆಯನ್ನಿಡಬೇಕೆಂದಿದೆ. ಗೋಮಾಂಸ ರಫ್ತು ಮಾಡುವುದರಲ್ಲಿ ನಮ್ಮ ದೇಶವೆ ಮೊದಲ ಸ್ಥಾನದಲ್ಲಿದೆ.

ಸಣ್ಣ ಸಣ್ಣ ಭೂಮಿಯುಳ್ಳ ರೈತರಿಗೆ ಈ ಜಾನುವಾರಗಳೇ ಕೃಷಿಗೆ ಅತ್ಯಂತ ಸಹಾಯಕಾರಿ. ಕೃಷಿ ಕೆಲಸಗಳಿಗೆ ಉಪಯೋಗವಾಗುವಂಥ ಮತ್ತು ರೈತರಿಗೆ ನೆರವಾಗುವಂಥ ಜಾನುವಾರುಗಳ ಕೊರತೆ ಕಾಣಬಾರದು ಎನ್ನುವ ಕಾರಣಕ್ಕಾಗಿಯೇ ಆರೋಗ್ಯವಂತ ಹಸುಗಳ ಹತ್ಯೆಯನ್ನು ನಿಲ್ಲಿಸಬೇಕೆಂಬುದು ದಶಕಗಳಿಂದ ಜಾರಿಯಲ್ಲಿದೆ.

  • ಆದರೆ ಮುಸಲ್ಮಾನರಿಗೆ ಗೋಮಾಂಸ ನಿಷೇಧ ಅವರ ಭಾವನೆಗಳಿಗೆ ಧಕ್ಕೆ ತಂದ ಹಾಗಾಗುವುದಿಲ್ಲವೇ? ಅವರ ನಂಬಿಕೆ, ವಿಶ್ವಾಸ ಗಳಿಸಲು ಕೇಂದ್ರ ಸರಕಾರ ಏನಾದರೂ ಮಾಡಬೇಕಲ್ಲವೇ?

ಎಲ್ಲದೂ ಏಕೆ ಹಿಂದೂ-ಮುಸ್ಲಿಮ್ ಬಗ್ಗೆ ಪ್ರಶ್ನೆಯಾಗುತ್ತವೆ? ಕೇವಲ ಮುಸ್ಲಿಮರು ಮಾತ್ರ ಗೋಮಾಂಸ ತಿನ್ನುತ್ತಾರೆಯೇ? ಅಥವಾ ಎಲ್ಲ ಮುಸಲ್ಮಾನರು ದಿನಾಲೂ ಗೋಮಾಂಸ ತಿನ್ನುತ್ತಾರೆಯೇ? ಈ ಎರಡೂ ಊಹೆಗಳು ತಪ್ಪು. ಗೋಮಾಂಸ ಭಕ್ಷಣೆ ಅವರ ಜೀವನಶೈಲಿಯಷ್ಟೇ. ಮತ್ತೊಂದು ನಮ್ಮ ತಲೆಯಲ್ಲಿ ಇಟ್ಟುಕೊಳ್ಳಬೇಕಾದ ವಿಚಾರವೇನೆಂದರೆ, ನಮಗೆ ದೇಶದ ಸಂಪೂರ್ಣ ಸೌಖ್ಯಕ್ಕೇ ಆದ್ಯತೆ. ಈ ವಿಷಯವನ್ನು ಒಂದು ಧರ್ಮಕ್ಕೆ ಥಳಕು ಹಾಕುವುದು ಅಷ್ಟು ಸರಿಯಲ್ಲ.

  • ನೆಹರೂ ಹೆಸರನ್ನು ಶಾಲೆಯ ಪಠ್ಯಪುಸ್ತಕದಿಂದ ಅಳಿಸಿ ಹಾಕಲಾಗಿದೆ. ಅವರೇನು ದೇಶದ್ರೋಹಿಯಾಗಿದ್ದರೇ? ಇದು ಮತ್ತೊಮ್ಮೆ ನಮ್ಮ ಮೇಲೆ ಹೇರಲಾಗಿರುವ ಕುತಂತ್ರವಷ್ಟೇ. ಅದನ್ನು ಬಿಡಿ, ದಶಕಗಳ ಕಾಲ ಸುಭಾಷ್ ಚಂದ್ರ ಬೋಸ್ ಪಠ್ಯಪುಸ್ತಕದಲ್ಲಿ ಕಾಣಲೇ ಇಲ್ಲ. ಸರ್ದಾರ್ ಪಟೇಲರ ಒಂದು ಉಲ್ಲೇಖ ಇಲ್ಲ. ದೇಶಕ್ಕಾಗಿ ಶ್ರಮಿಸಿದ ಎಷ್ಟೋ ನಾಯಕರ ಹೆಸರೇ ಇರಲಿಲ್ಲ. ನಾವು ಉಲ್ಲೇಖಿಸದ ಒಬ್ಬ ನಾಯಕ ನಮ್ಮ ದೇಶದ ಮೊದಲ ಪ್ರಧಾನಿಯಾಗಿದ್ದರೆಂಬುದಕ್ಕೆ ಇಷ್ಟೆಲ್ಲ ಅತ್ತು ಕರೆದು ಮಾಡುತ್ತಿದ್ದಾರೆ. ಈ ಥರ ಸುದ್ದಿಗಳು ಒಂದು ಶುದ್ಧ ನಾನ್ ಸೆನ್ಸ್.
  • ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ದಲಿತರನ್ನು ಬಿಜೆಪಿ ಹೊಸ ವೋಟ್ ಬ್ಯಾಂಕ್ ಆಗಿ ನೋಡುತ್ತಿದೆಯೇ?

ಉತ್ತರಪ್ರದೇಶ ನಮಗೆ ಬಹುಮುಖ್ಯವಾದ ಚುನಾವಣೆಯೇನೋ ಹೌದು. ಆದರೆ, ಜಾತಿ ಆಧಾರಿತ ಮತಗಳ ಬಗ್ಗೆ ನಾನು ಮಾತಾಡುವುದಕ್ಕೆ ಇಷ್ಟವಿಲ್ಲ. ನಮ್ಮ ಮುಖಂಡರಿಗೆ ಏನು ಮಾಡಬೇಕೆನ್ನುವುದರ ಸ್ಪಷ್ಟ ಅರಿವಿದೆ. ಒಂದಂತೂ ಸತ್ಯ. ನಮಗೆ ಎಲ್ಲವೂ ಮುಖ್ಯ, ಹಾಗೆಯೇ ದಲಿತರೂ. ಪ್ರತೀ ಬಾರಿಯೂ ದಲಿತರು ಮತ್ತು ಇತರ ಸಮುದಾಯದವರ ನಂಬಿಕೆ ಗಳಿಸಲು ಕೆಲಸ ಮಾಡುತ್ತಿರುತ್ತೇವೆ.

  • ಒಂದು ಪಕ್ಷ ಅಥವಾ ಚುನಾಯಿತ ಸರಕಾರ ಅಭಿವೃದ್ಧಿ ಮಾಡಿದೆ ಎಂದು ನೀವು ಹೇಗೆ ಹೇಳುತ್ತೀರಿ? ಅಳೆಯುತ್ತೀರಿ?

ಆ ಸರಕಾರದ ಮೊದಲೆರಡು ವರ್ಷಗಳ ಅವರ ಕೆಲಸಗಳನ್ನು ಪಟ್ಟಿ ಮಾಡಿ ನೋಡಿ. ನಿಮಗೇ ಅವರ ಇತಿಹಾಸ, ವರ್ತಮಾನ, ಭವಿಷ್ಯ ಎಲ್ಲವೂ ತಿಳಿಯುತ್ತದೆ.

  • ಉನ್ನತ ಮಟ್ಟದಲ್ಲಿದೆ ಎಂದು ಹೇಗೆ ಹೇಳುತ್ತೀರಿ?

ಆರ್ಥಿಕತೆಯನ್ನು ನೋಡಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶ 7.8-7.9ಗಳ ಒಳ್ಳೆಯ ಅಂಕದಲ್ಲಿದೆ. ಹಣಕಾಸು ಸಚಿವರು ಹೇಳುವ ಹಾಗೆ ಇನ್ನು 8.5ಗೆ ಹೋಗಿ ವಿಶ್ವದಲ್ಲಿ ಇನ್ನೂ ಉನ್ನತ ಸ್ಥಾನಕ್ಕೇರಲಿದೆ ಎಂದಿದ್ದಾರೆ.

  • ಬಹುತೇಕ ಜನ ನಮ್ಮದು ‘ಒಂದೇ ದೇಶ ಒಂದೇ ಜನ’ ಎನ್ನುತ್ತಾರೆ. ಇದರಲ್ಲಿ ಹಿಂದೂ ರಾಷ್ಟ್ರ ಎಂಬುದೂ ಸೌಮ್ಯೋಕ್ತಿಯೇ?

ಇದು ಅದಕ್ಕಿಂತಲೂ ಹೆಚ್ಚು. ಸಂವಿಧಾನವೇ ನಮಗೆ ಮೂಲ. ಇಲ್ಲಿ ನಾವು ‘ಒಂದೇ ದೇಶ ಒಂದೇ ಜನ’ ಎಂದರೆ ಒಂದು ದೇಶವಾಗಿ ಗುರುತಿಸಿಕೊಳ್ಳಲು ಇಚ್ಛಿಸುತ್ತೇವೆಯೇ ಹೊರತು, ಧಾರ್ಮಿಕವಾಗಲ್ಲ. ಸರಿ ಸುಮಾರು 84% ಜನರು ಹಿಂದೂಗಳು ಎಂದು ಗುರುತಿಸಬಹುದು. ಆದರೆ, ನಮ್ಮಲ್ಲಿ ಇತರ ಧರ್ಮದವರೂ ಇದ್ದಾರೆ. ಧಾರ್ಮಿಕ ವೈವಿಧ್ಯತೆ ಎನ್ನುವುದು ನಮ್ಮ ದೇಶಕ್ಕೆ ಬಹಳ ಹಳೆಯದು. ಧರ್ಮ ವೈಯಕ್ತಿಕ ವಿಚಾರ.

ರಾಮ್ ಮಾಧವ್

ಕೃಪೆ: ಔಟ್ಲುಕ್

ಸಂದರ್ಶನ: ಪ್ರಾರ್ಥನಾ ಗೆಹ್ಲೋಟ್

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya