ಸಾಯೋ ಮುಂಚೆ ಸಾಧ್ವಿಯೆಂಬುದು ಸಾಬೀತಾಯಿತು

dc-Cover-vqaqj8olphctqqqtanl41ue290-20160513164317.Medi

7 ವರ್ಷ, 7 ತಿಂಗಳು, 14 ದಿನ. ಕ್ಷಣ ಕ್ಷಣ ನೋವು… ಅಷ್ಟು ಸಮಯ ಆಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸಾಧ್ವಿ ಬಗ್ಗೆ ನಾವು 13.05.2016ರ ಬೆಳಗ್ಗೆ ಸುದ್ದಿ ಕೇಳುವವರೆಗೆ ನೆಮ್ಮದಿಯಿರಲಿಲ್ಲ. ಯಾರಾದರೂ ಅಪರಾಧ ಮಾಡಿರುವವನು ಜೈಲಿನಲ್ಲಿ ಹೊಂದಿಕೊಳ್ಳುವುದಕ್ಕೆ ಸ್ವಲ್ಪ ಕಾಲ ತೆಗೆದುಕೊಳ್ಳಬಹುದು. ಕೊನೆಗೆ ಕಾಲ ಕಳೆದಂತೆ, ಅಲ್ಲಿರುವವರ ಜತೆಯೇ ಹೊಂದಿಕೊಂಡು ಮನೆಯಂತೆ ಇದ್ದುಬಿಡುತ್ತಾರೆ. ಆದರೆ ಸಾಧ್ವಿ ಯಾವುದೇ ತಪ್ಪು ಮಾಡಿಲ್ಲ. ಅದಕ್ಕೆ ಜೈಲಿನಲ್ಲಿ ತನ್ನ ಬಗೆಗಿನ ತೀರ್ಪು ಬರುವವರೆಗೆ ಕ್ಷಣ ಕ್ಷಣವೂ ಆಕೆಗೆ ನರಕವಾಗಿತ್ತು. ಪೊಲೀಸರು ವಿಚಾರಣೆ ನೆಪದಲ್ಲಿ ಆಕೆಗೆ ಅತ್ಯಾಚಾರ ಒಂದು ಮಾಡದೇ ಬಿಟ್ಟಿರಬಹುದು ಅಷ್ಟೇ. ಪಾಕಿಸ್ತಾನಿಯರಗಿಂತಲೂ ಹೀನಾಯವಾಗಿ ನಡೆಸಿಕೊಂಡಿದ್ದರು ಅವರನ್ನು.ಅಂದು 29 ಸೆಪ್ಟೆಂಬರ್ 2008. ಭಾರತ ನಿಜಕ್ಕೂ ಆ ದಿನವನ್ನು ಮರೆಯಲು ಸಾಧ್ಯವೇ ಇಲ್ಲ. ಮಾಲೇಗಾಂವ್‌ನ ಭಿಕ್ಕು ಚೌಕ್‌ನಲ್ಲಿ ರಾತ್ರಿ 9.26ಕ್ಕೆ ಮುಸ್ಲಿಮರು ಅಂದು ವಿಶೇಷ ನಮಾಜ್ ಮಾಡಿ ಹೊರಗೆ ಬರುತ್ತಿದ್ದಾಗ ಒಂದು ಸ್ಪೋಟ ವಾಗಿತ್ತು. ಎಲ್‌ಎಮ್‌ಎಲ್ ಬೈಕ್‌ನಲ್ಲಿ ಬಾಂಬ್ ಇಟ್ಟು ಸೋಟಿಸಲಾಗಿತ್ತು. ಸ್ಪೋಟ ದ ತೀವ್ರತೆಗೆ ಒಬ್ಬ 15 ವರ್ಷದ ಹುಡುಗನೂ ಸೇರಿದಂತೆ ಒಟ್ಟು 8 ಜನ ಅಲ್ಲೇ ಪ್ರಾಣಬಿಟ್ಟರು. 80 ಜನರಿಗೆ ತೀವ್ರ ಗಾಯಗಳಾದವು. ಇದರಲ್ಲಿ ಮೊದಲಿಗೆ ಮಹಾರಾಷ್ಟ್ರದ ಭಯೋತ್ಪಾದನಾ ತನಿಖಾ ದಳ ಸಿಮಿ ಉಗ್ರರನ್ನು ಬಂಧಿಸಿತ್ತು. ಆಗ ಯಾವ ಮಾಧ್ಯಮಗಳೂ ಸಿಮಿ ಉಗ್ರರ ಮಾಹಿತಿಯನ್ನು ಸರಿಯಾಗಿ ಬಹಿರಂಗ ಪಡಿಸಲಿಲ್ಲ. ಆದರೆ ಕೆಲ ದಿನಗಳ ನಂತರ ಬೈಕ್ ಚಾಸಿಸ್ ನಂಬರ್ ಸಿಕ್ಕಿದ್ದರಿಂದ ಮತ್ತು ಇದಕ್ಕೆ ಪೂರಕ ಹಲವು ದಾಖಲೆಗಳ ಪರಿಶೀಲನೆಯಿಂದ ತಿಳಿದಿದ್ದೇನೆಂದರೆ, ಈ ಬೈಕ್ ಹಿಂದೂ ಸಾಧ್ವಿಯೊಬ್ಬಳಿಗೆ ಸೇರಿದ್ದು ಎಂದು.ಇದಕ್ಕಾಗಿಯೇ ಕಾಯುತ್ತಿದ್ದ ರಣ ಹದ್ದುಗಳು ಬಹಳಷ್ಟಿದ್ದವು.

ಮಾಧ್ಯಮಗಳು ಸುದ್ದಿ ತಯಾರಿ ಮಾಡಿಕೊಳ್ಳುತ್ತಿದ್ದವು. ಇತ್ತ ಗೃಹ ಸಚಿವರಾಗಿದ್ದ ಪಿ.ಚಿದಂಬರಂ ಏಕಾ ಏಕಿ ಇದಕ್ಕೆ ‘ಕೇಸರಿ ಭಯೋತ್ಪಾದನೆ’ ಎಂದು ನಾಮಕರಣ ಮಾಡಿಯೇ ಬಿಟ್ಟರು. ಇಷ್ಟು ದಿನ ಎಲ್ಲೇ ಭಯೋತ್ಪಾದನೆಯಾದರೂ ‘ಉಗ್ರಗಾಮಿಗಳಿಗೆ ಧರ್ಮವಿಲ್ಲ’ ಎನ್ನುತ್ತಾ ಇದ್ದ ರಾಜಕಾರಣಿಗಳಿಗೆ ಮತ್ತು ಮಾಧ್ಯಮಗಳಿಗೆ ಒಂದು ಹೊಸ ಪದ ಸಿಕ್ಕಿತ್ತು. ಮಾಲೇಗಾಂವ್ ಬ್ಲಾಸ್ಟ್‌ನಲ್ಲಿ ಸಿಮಿ ಉಗ್ರರು ಸಿಕ್ಕ ತಕ್ಷಣವೇ ‘ಸ್ಪೋಟದಲ್ಲಿ ಸತ್ತ ಎಲ್ಲರಿಗೂ ನಾವೆಲ್ಲ ಶ್ರದ್ಧಾಂಜಲಿ ಸಲ್ಲಿಸೋಣ, ಉಗ್ರಗಾಮಿಗಳಿಗೆ ಧರ್ಮವಿಲ್ಲ. ಶಾಂತಿಗಾಗಿ ಎಲ್ಲರೂ ಕ್ಯಾಂಡಲ್ ಹಚ್ಚೋಣ’ ಎಂದು ಮಾಧ್ಯಮಗಳು ಟಿವಿ ಮೇಲೆ ಕ್ಯಾಂಡಲ್ ಚಿತ್ರ ಹಾಕಿ ಕುಳಿತವು. ‘ಕೇಸರಿ ಭಯೋತ್ಪಾದನೆ’ ಎಂಬ ಪದ ಎಲ್ಲಿ ಬಂತೋ ಮೇಣದ ಬತ್ತಿ ಆರಿಸಿ, ಟಿವಿ ತುಂಬ ಕೇಸರಿ. ಕೇಸರಿ ಬಿಟ್ಟರೆ ಸಾಧ್ವಿ. ಇಷ್ಟೇ. ಪ್ರಪಂಚ ಹಿಂದೂಗಳನ್ನು ನೋಡುವ ದೃಷ್ಟಿಯನ್ನೇ ಬದಲಾಯಿಸುವ ಪಣತೊಟ್ಟಿದ್ದರು.ಇದೇ ಕಾರಣಕ್ಕೆ ಭಾರತವೇ ನೆನಪಿಟ್ಟುಕೊಳ್ಳುವಂಥ ಭಯೋತ್ಪಾದಕ ಕೃತ್ಯ ಎಂದಿದ್ದು .Maharashtra Court of Organised Crimne Act(MCOCA) ) ತನ್ನ ಮೊದಲ ತನಿಖೆಯಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ತನ್ನ ಎಲ್‌ಎಮ್‌ಎಲ್ ಬೈಕ್ ಮಾರಿದ್ದಾರೆ ಎಂದು ಹೇಳಿದೆ. ಬೈಕ್ ಮಾರಿ ವರ್ಷಗಳ ನಂತರ ಸ್ಪೋಟ ವಾಗಿದೆ ಎಂದಿದೆ ಎಂಬುದನ್ನೂ ತಿಳಿಯದೇ ಅಂದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಉಗ್ರ ನಿಗ್ರಹ ದಳದ ಅಧಿಕಾರಿಯೊಬ್ಬರ ಮೇಲೆ ಸಾಧ್ವಿಯನ್ನು ಈ ಪ್ರಕರಣದಲ್ಲಿ ಸಿಕ್ಕಿ ಹಾಕಿಸಲು ಒತ್ತಡ ಹೇರಲಾರಂಭಿಸಿದರು. ಕೇಸರಿ ಭಯೋತ್ಪಾದನೆಯೊಂದರಿಂದಲೇ ಮುಂದಿನ 2013ರ ಲೋಕಸಭಾ ಚುನಾವಣೆಯಲ್ಲಿ ವೋಟ್ ಗಿಟ್ಟಿಸಿಕೊಳ್ಳುವ ತಂತ್ರ ಅದು. ಇವರ ಮಾತು ಕೇಳಿ ಸಾಧ್ವಿಗೆ ನಿತ್ಯವೂ ಬೂಟು ಕಾಲಲ್ಲಿ ಒದ್ದು ತನಿಖೆ ಶುರುವಾಗುತ್ತಿತ್ತು. ಸಾಧ್ವಿ ಶಿಷ್ಯನನ್ನೇ ಅವರ ಮುಂದೆ ಬೆತ್ತಲಾಗಿ ನಿಲ್ಲಿಸಿ ಅವನಿಗೆ ಛಡಿಯೇಟು ಕೊಡುತ್ತಾ, ಅವನಿಂದ ಸಾಧ್ವಿಗೆ ಛಡಿಯೇಟು ಕೊಡುವಲ್ಲಿಗೆ ಒಂದು ದಿನದ ತನಿಖೆ ಮುಗಿಯುತ್ತಿತ್ತು. ನಿತ್ಯವೂ ಇಂಥ ಥರಾವರಿ ಶಿಕ್ಷೆ ಕೊಡುತ್ತಿದ್ದ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ. ತಾಜ್ ಮೇಲೆ ಕಸಬ್ ತಂಡ ದಾಳಿ ನಡೆಸಿದಾಗ, ಉಗ್ರರ ಗುಂಡಿಗೆ ಬಲಿಯಾದ ಅದೇ ಹೇಮಂತ್ ಕರ್ಕರೆ. ಇದೇ ಮಾಲೇಗಾಂವ್ ಬ್ಲಾಸ್ಟ್‌ನಲ್ಲಿ ಸೇನೆಯಲ್ಲಿ ನಿಷ್ಠಾವಂತರಾಗಿದ್ದ ಕರ್ನಲ್ ಪುರೋಹಿತ್‌ರನ್ನೂ ವಶಕ್ಕೆ ಪಡೆಯಲಾಗಿತ್ತು.

ಹೇಮಂತ್ ಕರ್ಕರೆ ಪುರೋಹಿತ್‌ಗೆ ಥರ್ಡ್ ಗ್ರೇಡ್‌ಗಿಂತಲೂ ಯಾವ್ಯಾವ ಕೆಳಮಟ್ಟದ ಹಿಂಸೆ ಕೊಡುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಕರ್ನಲ್ ಪುರೋಹಿತ್‌ರ ಹೆಂಡತಿಯೇ ಇದ್ದಾರೆ. ಪುರೋಹಿತ್ ಹೆಂಡತಿ ಮಾತಾಡಿದ ವೀಡಿಯೋ ನೋಡಿದ ಬಳಿಕವೇ ಜನರಿಗೆ ಕರ್ಕರೆಯ ಅಸಲಿ ಮುಖ ತಿಳಿದಿದ್ದು.ಸಾಧ್ವಿಯೇ ಹೇಳಿಕೆ ನೀಡಿರುವಂತೆ ಆಕೆಗೆ ನಿತ್ಯವೂ ನೀಲಿ ಚಲನಚಿತ್ರಗಳನ್ನು ತೋರಿಸಿ, ಹೊಡೆದು ತನಿಖೆ ಮಾಡುತ್ತಿದ್ದರು. ಎಷ್ಟೋ ದಿನಗಳವರೆಗೆ ಊಟವೂ ಇಲ್ಲ. ಮಲ ವಿಸರ್ಜನೆಗೂ ಬಿಡುತ್ತಿರಲಿಲ್ಲ. ಅಲ್ಲೇ ಮಾಡಿಕೊಳ್ಳಬೇಕಿತ್ತು. ಇವೆಲ್ಲ ಕೇವಲ ಸಾಧ್ವಿಯ ಮೇಲೆ ಅನುಮಾನ ಬಂದಿದ್ದರಿಂದ ಮಾಡುತ್ತಿದ್ದ ತನಿಖೆಯ ಮುಖ. ಇನ್ನೂ ಚಾರ್ಜ್ ಶೀಟ್ ತಯಾರಾಗಿರಲಿಲ್ಲ.ಕಾನೂನನ್ನು ಅಕ್ಷರಶಃ ಗಾಳಿಗೆ ತೂರಿ ತನಿಖೆ ನಡೆಸುತ್ತಿದ್ದರು. ಭಾರತದಲ್ಲಿ ಕಾನೂನಿನಲ್ಲಿ ಎಲ್ಲರೂ ಸಮಾನರು. ಆದರೆ ಕೆಲವರು ಹೆಚ್ಚು ಸಮಾನರು ಎಂಬ ಪ್ರಸಿದ್ಧ ಇಂಗ್ಲಿಷ್ ವಾಕ್ಯ ಇವರಿಗೆ ಅನ್ವಯವಾಗುತ್ತದೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ. ಕೇರಳದ ಪಿಡಿಪಿ ಮುಖಂಡ ಅಬ್ದುಲ್ ನಾಸಿರ್ ಮದನಿ ಹಲವಾರು ಭಯೋತ್ಪಾದನೆ ಪ್ರಕರಣಗಳಲ್ಲಿ ಮತ್ತು 2008ರ ಬೆಂಗಳೂರು ಸರಣಿ ಸ್ಪೋಟ ದ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಮದನಿಯ ಮಗಳ ಮದುವೆಯನ್ನು ನೋಡಲು ಜಾಮೀನು ಕೊಟ್ಟ ಕೋರ್ಟ್, ಸಾಧ್ವಿ ಪ್ರಜ್ಞಾಳ ತಂದೆ ನಿಧನರಾದಾಗ ಕೊನೇ ಬಾರಿ ಅಪ್ಪನ ಮುಖ ನೋಡಬೇಕು ಎಂದು ಹೆಣ್ಣುಮಗಳೊಬ್ಬಳು ಕೇಳಿಕೊಂಡರೂ ಬಿಡಲಿಲ್ಲ. ಮದನಿಯಂಥ ಆರೋಪಿತ ಉಗ್ರನ ಮಗಳ ಮದುವೆಯೇ ದೊಡ್ಡದು ಎನಿಸಿದ್ದು ವಿಪರ್ಯಾಸ. ಯಾವುದೂ ಬೇಡ, ಸ್ವತಃ ಪ್ರಜ್ಞಾ ಸಿಂಗ್ ಕ್ಯಾನ್ಸ್‌ರ್‌ನಿಂದ ಬಳಲುತ್ತಿದ್ದಳು. ಆಕೆಯ ಚಿಕಿತ್ಸೆಗೂ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಸಹಕರಿಸಲಿಲ್ಲ. ಇದು ಕಾಂಗ್ರೆಸ್ ಆಡಳಿತದಲ್ಲಿದ್ದ ಪೊಲೀಸರು ಹೇಗೆ ವರ್ತಿಸುತ್ತಿದ್ದರು ಎನ್ನುವುದಕ್ಕೆ ಸಾಕ್ಷಿ.ನಾನು ಈ ಬಗ್ಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವಕೀಲರಿಬ್ಬರನ್ನೂ ಕೇಳಿದಾಗ ಅವರು ನನಗೊಂದು ಅಚ್ಚರಿಯ ಮಾಹಿತಿ ಕೊಟ್ಟರು. ‘ಸಂಸತ್ ದಾಳಿಯ ರೂವಾರಿ ಅ-ಲ್‌ನನ್ನು ಗಲ್ಲಿಗೇರಿಸಬೇಡಿ, ಕ್ಷಮಾದಾನ ನೀಡಿ’ ಎಂದು ಸರಕಾರಕ್ಕೆ ಪತ್ರ ಬರೆದಿದ್ದ ಅದೇ ಕಾಂಗ್ರೆಸ್ ರಾಜಕಾರಣಿಗಳು ‘ಸಾಧ್ವಿ ಪ್ರಜ್ಞಾಳನ್ನು ಗಲ್ಲಿಗೇರಿಸಿ, ಹಿಂದೂ ಉಗ್ರಗಾಮಿಗಳನ್ನು ಮಟ್ಟ ಹಾಕುವ ಅನಿವಾರ್ಯವಿದೆ’ ಎಂದು ಪತ್ರ ಬರೆದಿದ್ದಾರೆ ಎಂದರು.ಇನ್ನು ಸೀವಾದದ ಪ್ರಶ್ನೆ ಏಳುತ್ತದೆ. ಎಲ್ಲೋ ರಷ್ ಇರುವ ಬಸ್ಸಿನಲ್ಲಿ ಹೋಗುವಾಗ ಅಮಾಯಕ ಗಂಡಸೊಬ್ಬನ ಕೈ ಹೆಂಗಸರ ಕೈಗೆ ತಾಕಿದರೆ ಸಾಕು, ದೊಡ್ಡ ರಾದ್ಧಾಂತ ಮಾಡಿ, ಆ ಗಂಡಸನ್ನು ಬಸ್ಸಲ್ಲೇ ಎಲ್ಲರೂ ಹೊಡೆಯುವಂತೆ ಮಾಡಿ, ಚೂರು ಯಡವಟ್ಟಾಗಿ ಕೈ ತಾಕುವ ಬದಲು ಇನ್ನೆಲ್ಲೋ ತಾಕಿದರೆ ದೊಡ್ಡ ರಸ್ತೆಗಿಳಿದು ಪ್ರತಿಭಟಿಸುವ ಯಾವ ಮಹಿಳಾ ಸಂಘಗಳಿಗೂ ಖಾವಿಧಾರಿಯೊಬ್ಬಳ ವರ್ಷಗಳ ರೋಧನ, ಕೇಳಲೇ ಇಲ್ಲವಲ್ಲ! ಸರಿ, ವಾದ ಮಾಡುವುದಕ್ಕೆಂದು ಸಾಧ್ವಿ ಪ್ರಜ್ಞಾಳೇ ಬಾಂಬ್ ಇಟ್ಟಿದ್ದಳು ಎಂದು ಒಪ್ಪೋಣ. ಆದರೆ ಬಾಂಬ್ ಇಟ್ಟವರಿಗೆ ಕೊಡುವ ಶಿಕ್ಷೆ ಅವರು ಕೊಟ್ಟಿದ್ದಾರಾ? ಅದು ವರ್ಣಿಸಿದರೆ ಬಹುಶಃ ಲೇಖನ ಓದುತ್ತಿರುವವರಿಗೆ ಅಹಸ್ಯವಾಗುವಂತಿದೆ. ಆಗಲೂ ಮಹಿಳಾಮಣಿಗಳಿಗೆ ಹೋರಾಟ ಮಾಡಬೇಕೆಂದೆನಿಸಲಿಲ್ಲ.

ಮಾಲೇಗಾಂವ್ ಬ್ಲಾಸ್ಟ್ ಆಗಿ 2 ವರ್ಷಗಳ ನಂತರವಷ್ಟೇ, ಇಶ್ರತ್ ಜಹಾನ್‌ಳನ್ನು ಗುಜರಾತ್ ಪೊಲೀಸರು ಎನ್‌ಕೌಂಟರ್ ಮಾಡಿದರು. ಆಗ ಅಡಗಿ ಕುಳಿತಿದ್ದ ‘ಓ’ರಾಟಗಾರರು ಎದ್ದು ಬಂದು ‘ಇಶ್ರತ್, ಭಾರತ್ ಕಿ ಬೇಟಿ’ ಎಂದೆಲ್ಲ ಬಿರುದು ಕೊಟ್ಟು ಮೆರೆಸಿದರು. ಮೋದಿಗೆ ಶಿಕ್ಷೆ ಆಗಲೇ ಬೇಕೆಂದು ಬೀದಿಗಿಳಿದರು. ಪ್ರಾಣ ತೆಗೆಯಲು ಭಯೋತ್ಪಾದಕಿಯ ಹೆಸರಲ್ಲಿ ಆಂಬುಲೆನ್ಸ್ ಸೇವೆಯೂ ಶುರುವಾಯಿತು. ಆದರೆ ತನ್ನನ್ನು ಕಾಪಾಡಿ ಎಂದು ಕೂಗಿಕೊಳ್ಳುತ್ತಿರುವ ಪ್ರಜ್ಞಾಳತ್ತ ತಿರುಗಿಯೂ ನೋಡಲಿಲ್ಲ. ನಿತ್ಯವೂ ಕಣ್ಣು ಮುಚ್ಚಿ ತಾನು ಮಾಡದ ತಪ್ಪಿಗೆ ಚಡಿಯೇಟು ತಿನ್ನುತ್ತಲೇ ಇದ್ದಳು ಆಕೆ.ಈಗ ಸಾಧ್ವಿ ಕಾಯುತ್ತಿದ್ದ ಆ ದಿನ ಬಂದಿದೆ. ನ್ಯಾಯಾಲಯ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಕರ್ನಲ್ ಪುರೋಹಿತ್ ಹೆಸರನ್ನು ಆರೋಪ ಪಟ್ಟಿಯಿಂದ ಕೈಬಿಟ್ಟಿದೆ. ಮಾನವೇನೋ ಹೋಯಿತು, ಇನ್ನು ಆರೋಗ್ಯವನ್ನಾದರೂ ಕಾಪಾಡಿಕೊಳ್ಳಬಹುದು. ಅಲ್ಲಿಗೆ ಮಾಧ್ಯಮಗಳಿಗೆ ಈಗ ‘ಕೇಸರಿ ಭಯೋತ್ಪಾದನೆ’ ಎಂಬ ಪದ ಉಪಯೋಗಿಸಲು ಕಡಿವಾಣ ಬಿದ್ದಿದೆ. ಈಗ ಅವೆಲ್ಲ ಊಳಿಡುತ್ತಿವೆ.ಸಾಧ್ವಿಯ ಬಗ್ಗೆ ಈಗ ಈ ಸುದ್ದಿ ಕೇಳಿದ ನಂತರ ಮಾಧ್ಯಮಗಳು ಹೇಗೆ ವರ್ತಿಸುತ್ತಿದ್ದವು ಎನ್ನುವುದಕ್ಕೆ ಒಂದು ತಾಜಾ ಉದಾಹರಣೆ ಕೊಡುತ್ತೇನೆ ಕೇಳಿ. ಕೆಲವು ದಿನಗಳ ಹಿಂದೆ 2006ರ ಮಾಲೇಗಾಂವ್ ಬ್ಲಾಸ್ಟ್ ಪ್ರಕರಣದಲ್ಲಿ ಸಿಕ್ಕಿಬಿದ್ದ 8 ಜನರನ್ನು ಕೋರ್ಟ್ ಖುಲಾಸೆಗೊಳಿಸಿತು. ಆದರೆ, ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಜನರಿಗೆ ಅವಾಚ್ಯ ಶಬ್ದವಾಡಿ, ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂದು ಗೊತ್ತಾದಾಗ ಟ್ವಿಟ್ಟರ್ ಅಕೌಂಟ್ ಡಿಲೀಟ್ ಮಾಡಿಕೊಂಡು ಓಡಿ ಹೋದ ಇಂಗ್ಲಿಷ್ ಪತ್ರಕರ್ತನೊಬ್ಬ ‘ಅಯ್ಯೋ ಆ 8 ಜನರು 10 ವರ್ಷ ಜೈಲಿನಲ್ಲಿದ್ದರಲ್ಲ.. ಅವರಿಗೆ ನ್ಯಾಯ ಕೊಡಿಸುವವರ‍್ಯಾರು? ಯಾಕೆ ಯಾರೂ ಮಾತನಾಡುತ್ತಿಲ್ಲ?’ ಎಂದು ಒಬ್ಬನೇ ಎದೆ ಬಡಿದುಕೊಂಡ. ಸಾಮಾನ್ಯ ಜನರು ಯಾರೂ ಇವನಿಗೆ ಕ್ಯಾರೇ ಎನ್ನಲಿಲ್ಲ. ಹೆಚ್ಚೆಂದರೆ ಅವನ ಹೆಂಡತಿಯೆಂಬ ಮತ್ತೊಂದು ಪತ್ರಕರ್ತೆ ಬೆಂಬಲ ನೀಡಿದಳು. ಆದರೆ ಈಗ ಸಾಧ್ವಿ ಪ್ರಜ್ಞಾ ಸಿಂಗ್‌ರ ಹೆಸರನ್ನು ಚಾರ್ಜ್‌ಶೀಟ್‌ನಿಂದ ಕೈಬಿಟ್ಟಾಗ, ಇದೇ ಪತ್ರಕರ್ತ ‘ಸರಕಾರ ಬದಲಾಗುತ್ತದೆ, ವಿಚಾರಣೆಯ ಶೈಲಿಯೂ ಬದಲಾಗುತ್ತದೆ. ಇದು ಯಾವಾಗಲೂ ನಡೆಯುತ್ತಲೇ ಇದೆ: ನಮ್ಮದು ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವೋ ಅಥವಾ ಬನಾನಾ ರಿಪಬ್ಲಿಕ್ಕೋ?’ ಎಂದು ಪ್ರಶ್ನಿಸಿದ್ದಾನೆ.ಆ ಪತ್ರಕರ್ತ ಹೇಳುವ ಹಾಗೆ ನಾವು ಸರಕಾರಕ್ಕೆ ಮತ್ತು ಮೋದಿಗೆ ದೊಡ್ಡ ಥ್ಯಾಂಕ್ಸ್ ಹೇಳಲೇಬೇಕು. ಇದಕ್ಕೆ ಕಾರಣ, ಮೋದಿ ತಮಗೆ ಬೇಕಂತೆ ಕೋರ್ಟ್ ತೀರ್ಪು ಕೊಡುವಂತೆ ಮಾಡಿದರು ಎನ್ನುವ ಕಾರಣಕ್ಕಲ್ಲ. ಅದು ಸಾಧ್ಯವೂ ಇಲ್ಲ. ಬದಲಿಗೆ, ಇಡೀ ಪ್ರಕರಣವನ್ನೇ ಮಕಾಡೆ ಮಲಗಿಸಲು ತಾಕತ್ತಿರುವ ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ತಂದು, ಸಾಧ್ವಿಗೆ ಹಿಂಸಿಸದೇ ಸ್ವತಂತ್ರವಾಗಿ ತನಿಖೆ ನಡೆಯುವಂತೆ ಮಾಡಿದ್ದಕ್ಕೆ. ಇವರು ಕೊಟ್ಟ ವರದಿಯ ಮೇಲೆ ಅಲ್ಲವೇ ಕೋರ್ಟ್ ವಿಚಾರಣೆ ನಡೆಸುವುದು?ಭಾರತದ ಮೇಲೆ ಪ್ರತಿ ಬಾರಿ ಇಸ್ಲಾಮಿಕ್ ಉಗ್ರರಿಂದ ದಾಳಿ ನಡೆದಾಗಲೂ ಉಗ್ರಗಾಮಿಗಳಿಗೆ ಧರ್ಮವಿಲ್ಲ ಎನ್ನುತ್ತಾ ರಾಜಕೀಯ ತೆವಲುಗಳಿಗಾಗಿ ‘ಕೇಸರಿ ಭಯೋತ್ಪಾದನೆ’ ಎಂಬ ಪದ ಹುಟ್ಟಿತಷ್ಟೇ. ಮತ್ತೊಮ್ಮೆ ‘ಉಗ್ರಗಾಮಿಗಳಿಗೆ ಧರ್ಮವಿಲ್ಲ’ದವರೇ ಈ ಕೃತ್ಯವೆಸಗಿದ್ದಾರೆ ಎಂದು ತೋರಿಸಿಕೊಟ್ಟದ್ದಕ್ಕೂ ಥ್ಯಾಂಕ್ಸ್ ಹೇಳಲೇಬೇಕು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya