ದಿವ್ಯಾ೦ಗಿ ಯೋಧರನ್ನು ನೋಡಿಕೊಳ್ಳಲೂ ದಾರಿದ್ರ್ಯೆವೇ?

bsf-soldiers-patrol-e1457186619632

ನಾ ನು ಎನ್‌ ಸಿ ಸಿ ಯಲ್ಲಿದ್ದಾಗ ಅಲ್ಲೊಬ್ಬ ಯೋಧರಿದ್ದರು. ಹೆಸರು ಕುಲ್ದೀಪ್ ಸಿಂಗ್. ಅವರು ನನಗೆ ಹೆಚ್ಚು ಆತ್ಮೀಯರಾಗಿದ್ದರಿಂದ ನನ್ನೊಂದಿಗೆ ಅವರು ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದರು. ಕೆಲವೊಮ್ಮೆ ಮನೆಯವರ ನೆನಪಾದರೆ ಕಣ್ಣೀರಿಡುತ್ತಿದ್ದರು. ತಮ್ಮ ಮಗಳಿಂದ ಅವರಿಗೇನಾದರೂ ಕರೆ ಬಂದರೆ ಸಾಕು, ಕುಣಿದು ಕುಪ್ಪಳಿಸುತ್ತಿದ್ದರು. ನನ್ನನ್ನು ಕರೆದು ‘ಮೂರು ವರ್ಷದ ಆ ಮಗಳು ಅದೆಷ್ಟು ಚೂಟಿ ಇದ್ದಾಳೆ ಗೊತ್ತಾ? ನೋಡು ಇಂಟರ್ನೆಟ್ ಇಂದ ಅವಳ -ಟೊ ಬಂದಿದೆ, ನನ್ನ ಹಾಗೇ ನಗ್ತಾಳಲ್ಲ? ಇವಳಿಗೆ ಗಡ್ಡ ಹಚ್ಚಿದರೆ ನನ್ನ ಹಾಗೇ ಕಾಣುತ್ತಾಳೆ’ ಎಂದು ಜೋರಾಗಿ ನಕ್ಕು ಖುಷಿ ಹಂಚಿಕೊಳ್ಳುತ್ತಿದ್ದರು. ಯುದ್ಧ ಭೂಮಿಯಲ್ಲಿ ಪರಿಸ್ಥಿತಿ ಹೇಗಿರುತ್ತದೆ, ಗಡಿ ಭಾಗದ ಪ್ರದೇಶದಲ್ಲಿ ವಾತಾವರಣ ಹೇಗಿರುತ್ತದೆ, ಸಿಯಾಚಿನ್‌ನಲ್ಲಿ ಯಾವ ರೀತಿ ಉಗ್ರರು ಮತ್ತು ಪಾಕಿಸ್ತಾನಿಯರು ನುಸುಳುತ್ತಾರೆ ಎಂದೆಲ್ಲ ನನಗೆ ಹೇಳಿಕೊಟ್ಟವರವರು. ಇಂಥ ಕುಲ್ದೀಪ್ ಸಿಂಗ್ ಅವರು ಒಮ್ಮೆ ನಮ್ಮನ್ನು ಬಹಳ ರಷ್ ಇರುವ ಟ್ಯಾಂಕರ್‌ನೊಳಗೆ ತುಂಬಿಕೊಂಡು ಫೈರಿಂಗ್ ರೇಂಜ್(ಶಸಾಭ್ಯಾಸ ನಡೆಸುವ ನಿರ್ಜನ ಪ್ರದೇಶ)ಗೆ ಕರೆದುಕೊಂಡು ಹೋಗುವಾಗ ಟ್ಯಾಂಕರ್ ಫುಟ್ ಬೋರ್ಡ್ ಮೇಲೆ ನಿಂತಿದ್ದವರು ಕಾಲು ಜಾರಿ ಬಿದ್ದರು.

ಕಲ್ಲಿನ ಮೇಲೆ ಬಿದ್ದ ರಭಸಕ್ಕೆ ಅವರ ಮೊಣ ಕಾಲು ಮುರಿದು ಹೋಯಿತು. ಅವರನ್ನು ಅಲ್ಲೇ ಇದ್ದ ಆಸ್ಪತ್ರೆಗೆ ಸೇರಿಸಿದೆವು. ಇದಾಗಿ ಸುಮಾರು 6 ತಿಂಗಳುಗಳೇ ಕಳೆಯಿತು. ನಾನು ಅವರಿಗೆ ಫೋನ್ ಮಾಡಿ ಕಾಲು ಹೇಗಿದೆ? ಈಗ ನಿಮ್ಮನ್ನು ಎಲ್ಲಿ ನಿಯೋಜಿಸಿದ್ದಾರೆ ಎಂದು ಕೇಳಿದೆ. ಅವರ ಬಳಿ ಉತ್ತರವಿರವಿರಲಿಲ್ಲ. ಸ್ವಲ್ಪ ಒತ್ತಾಯದ ನಂತರ ಅವರು ವೃತ್ತಾಂತವನ್ನೆಲ್ಲ ವಿವರಿಸಿದರು. ಅವರು ಮಂಡಿ ಚಿಪ್ಪಿಗೆ ಚಿಕಿತ್ಸೆಯಲ್ಲಿ ರಾಡ್ ಹಾಕಿದ್ದರಿಂದ ಅವರಿಗೆ ಮೊದಲಿನಷ್ಟು ಓಡಾಡಲು ಸಾಧ್ಯವಿಲ್ಲ. ಈ ಕಾರಣಕ್ಕೆ ಕುಲ್ದೀಪ್ ಸಿಂಗ್‌ರನ್ನು ಸೇನೆಯಿಂದ ಸಂಪೂರ್ಣವಾಗಿ ಕೈಬಿಡಲಾಗಿತ್ತು. ಒಬ್ಬ ಯೋಧನಿಗೆ ಏನಾದರೂ ಗಂಭೀರ ಗಾಯವಾಗಿ ಇನ್ನು ಮುಂದೆ ಸೇನೆಯಲ್ಲಿ ಸೇವೆ ಸಲ್ಲಿಸಲಾಗದಂಥ ಸ್ಥಿತಿಯಲ್ಲಿದ್ದರೆ ಅವರಿಗೆ ‘” Disability Benefits ‘’ ಹಣವು ತಿಂಗಳಿಗೊಮ್ಮೆ ಬರುವ ಹಾಗೆ ಮಾಡಿ ಕೊಟ್ಟು ಮನೆಗೆ ಕಳಿಸುತ್ತಾರೆ. ಅವರಿಗೆ ಮಾಸಾಶನದ ಜತೆಗೆ ದಿವ್ಯಾಂಗಿಯಾಗಿರುವುದಕ್ಕೆ ಮತ್ತೂ ಹೆಚ್ಚಿನ ಹಣ ಕೊಡುತ್ತಾರೆ. ಹೀಗೆ ಕೊಡಲು ಸರಕಾರವೇ ಆದೇಶಿಸಿದೆ. ಆದರೆ ಕುಲ್ದೀಪ್ ಸಿಂಗ್‌ಗೆ ಮಾತ್ರ ಇದು ಸಿಕ್ಕಿಲ್ಲ. ಕೇವಲ ಮಾಸಾಶನವನ್ನೇ ನಂಬಿಕೊಂಡು ಮನೆಯಲ್ಲಿ ಕುಳಿತಿದ್ದಾರೆ. ಅದೂ ಕೆಲವೊಮ್ಮೆ ಬಂದರೂ ಬಂತು. ಇಲ್ಲದಿದ್ದರೆ ಇಲ್ಲ. ದಿವ್ಯಾಂಗಿಯಾಗಿರುವುದಕ್ಕೆ ಯಾಕೆ ಪರಿಹಾರ ಧನ ಕೊಡಲಿಲ್ಲ ಎನ್ನುವುದನ್ನು ಇತ್ತೀಚಿನ ಮತ್ತೊಂದು ಉದಾಹರಣೆಯ ಮೂಲಕ ಹೇಳುತ್ತೇನೆ ಕೇಳಿ. 24 ಏಪ್ರಿಲ್ 2016. ರಾಜಸ್ಥಾನದಲ್ಲಿ ಉನ್ನತ ಮಟ್ಟದ ಮಿಲಿಟರಿ ಟ್ರೈನಿಂಗ್ ನಡೆಯುತ್ತಿತ್ತು. ಆ ಸಮಯದಲ್ಲಿ ಮೂರು ಭಾರತೀಯ ಯೋಧರು ಜೀವ ಕಳೆದುಕೊಂಡರು. ಆ ಸಾವು ಆಗಿದ್ದಾದರೂ ಹೇಗೆ ಎಂದರೆ. ಒಂದು: ಸೆಕೆ ತಾಳಲಾರದೇ ಒಂದು ಸಾವು.ಎರಡು: ಹೆಲಿಕಾಪ್ಟರ್‌ನಿಂದ ಪ್ಯಾರಾ ಡ್ರಾಪಿಂಗ್ ಎಂದು ಮಾಡುತ್ತಾರೆ. ಹೆಲಿಕಾಪ್ಟರ್ ಒಂದು ಸ್ಥಳಕ್ಕೆ ಬಂದು ಆಕಾಶದಲ್ಲೇ ನಿಂತಿರುತ್ತದೆ. ಅಲ್ಲಿಂದ ಹಗ್ಗದ ಏಣಿ ನೆಲಕ್ಕೆ ಬಿಡಲಾಗುತ್ತದೆ. ಅದರ ಸಹಾಯದ ಮೂಲಕ ಸೈನಿಕರು ಇಳಿದು ಕಾರ್ಯಾಚರಣೆಗೆ ಮುಂದಾಗಬೇಕು. ಈ ತಾಲೀಮು ಮಾಡಬೇಕಿದ್ದರೆ ಒಂದು ಸಾವು. ಮೂರು: ಇನ್ನು ಅಲ್ಲೇ ತಾಲೀಮು ನಡೆಸುವಾಗ ಹುಲ್ಲಿನ ಮಧ್ಯದಲ್ಲಿ ಹೋಗಿದ್ದಕ್ಕೆ ಹಾವು ಕಚ್ಚಿ ಮತ್ತೊಂದು ಸಾವು. ಹೀಗೇ ಈ ಯೋಧರು ಯಾರ ಜತೆಯೂ ಯುದ್ಧ ಮಾಡದೇ ಸತ್ತು ಹೋಗುತ್ತಾರೆ. ಆದರೆ ದುರದೃಷ್ಟ ಇಲ್ಲಿಂದ ಶುರುವಾಗುತ್ತದೆ. ಹೀಗೆ ಯಾವುದೇ ಯುದ್ಧ ಮಾಡದೇ ಮೃತರಾಗುವ ಯೋಧರ ಕುಟುಂಬಕ್ಕೆ ಸರಿಯಾಗಿ ಹಣವೇ ಸಿಗುವುದಿಲ್ಲ. ಎಷ್ಟು ಅಲೆದರೂ ಅಷ್ಟೇ. ಇನ್ನು ಆತ ಏನಾದರೂ ಕೈ ಕಾಲು ಮುರಿದುಕೊಂಡ ಎಂದರೆ ತಕ್ಷಣವೇ ಅವನನ್ನು ಸೈನ್ಯದಿಂದ ಹೊರಗಟ್ಟಲಾಗುತ್ತದೆ. ಈ ಎರಡೂ ಘಟನೆಗಳಲ್ಲಿ ಯೋಧ ಯಾವ ಯುದ್ಧ ಮಾಡದೇ, ಗಡಿ ಪ್ರದೇಶಗಳಲ್ಲಿಲ್ಲದೇ, ಮತ್ತು ಹೆಚ್ಚು ಒತ್ತಡವಿರದ ಪ್ರದೇಶದಲ್ಲಿರಲಿಲ್ಲ.

ಬಹಶಃ ಇದೇ ಅವನಿಗೆ ಮಾರಕ. ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ ಯಾವ್ಯಾವ ಯೋಧರು ಸೇನೆಗೆ ಸೇರಿಕೊಳ್ಳುವಾಗ ಸರಿಯಾಗಿದ್ದು, ನಿವೃತ್ತರಾಗುವಾಗ ದಿವ್ಯಾಂಗಿಯಾಗಿದ್ದರೆ ಅಥವಾ ಇನ್ಯಾವುದೇ ಸಮಸ್ಯೆಯಿದ್ದರೆ disability benefits ಕೊಡಬೇಕು ಎಂದಿದೆ. ಆದರೆ ಸೇನೆಯಲ್ಲಿ ಮಾತ್ರ ಬೇರೆಯದ್ದೇ ನಿಯಮವಿದೆ. ಒಮ್ಮೆ ಆತ ಶಾಂತಿ ಸುವ್ಯವಸ್ಥೆ ಇರುವ ಪ್ರದೇಶದಲ್ಲಿದ್ದು, ಗಾಯಗೊಂಡರೆ ಅವನಿಗೆ ಯಾವುದೇ ಹೆಚ್ಚಿನ ಹಣ ಕೊಡುತ್ತಿಲ್ಲ. ಇದಕ್ಕೆ ಮೇಲಾಧಿಕಾರಿಗಳು ಮತ್ತು ಸರಕಾರ ಕೊಡುವ ಕಾರಣವೇನೆಂದರೆ, ‘ಶಾಂತಿ ನೆಲೆಸಿರುವ ಜಾಗದಲ್ಲಿ ನೀವು ಗಾಯಗೊಂಡಿರುವುದರಿಂದ ಅದಕ್ಕೆ ನಾವು ಜವಾಬ್ದಾರರಲ್ಲ’ ಮತ್ತು ‘ನಿಮ್ಮ ವೈಯಕ್ತಿಕ ಕಾರಣಗಳಿಂದಾಗಿ ನೀವು ಗಾಯಗೊಂಡಿರುವುದರಿಂದ ಪರಿಹಾರಕ್ಕೆ ಅರ್ಹರಲ್ಲ’ ಎಂದು ತಿರಸ್ಕರಿಸಿಬಿಡುತ್ತಾರೆ. ಇದು ಯಾವ ಸೀಮೆ ನ್ಯಾಯ ಸ್ವಾಮಿ? ನರೇಂದ್ರ ಮೋದಿಯವರು ಯೋಧರಿಗೆ ಸಹಾಯವಾಗಲಿ ಎಂದು ಬುಲೆಟ್ ಪ್ರೂಫ್ ಜಾಕೇಟ್ ಕೊಟ್ಟರು, ಸೈನಿಕರಿಗೆ ಅಪರೂಪದ ಯೋಜನೆಗಳನ್ನಿಟ್ಟರು, ಆದರೂ ಒಬ್ಬ ದಿವ್ಯಾಂಗ ಯೋಧನಿಗೆ ಪರಿಹಾರ ಹಣ ಕೊಡುವುದಕ್ಕೆ ಅಲ್ಲಿನ ಅಧಿಕಾರಿಗಳು ಹತ್ತಾರು ಕಾರಣ ಕೊಡುತ್ತಾರೆ ಎಂದಾದರೆ, ಯಾವ ಸರಕಾರ ಬಂದರೇನು ಬಿಟ್ಟರೇನು? ನಿವೃತ್ತಿಯಾಗಿರುವುದು ಯೋಧರಲ್ಲವಾ, ಅಷ್ಟು ಸುಲಭವಾಗಿ ಹೇಗೆ ಬಿಟ್ಟು ಬಿಡುತ್ತಾರೆ. ದಿವ್ಯಾಂಗರಾದ ಎಷ್ಟೋ ಯೋಧರು ನಮಗೆ ಪರಿಹಾರ ಹಣ ಕೊಡುತ್ತಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ವಿಚಿತ್ರವೇನೆಂದರೆ ಸರಕಾರವು ಸಹ ತಾವು ಹಣ ಕೊಡುವುದಿಲ್ಲ ಎಂದು ಕೇಸ್ ನಡೆಸುತ್ತಿದೆ. ಇಲ್ಲಿ ಅಚ್ಚರಿಯಾಗುವುದೇನೆಂದರೆ, ಸರಕಾರ ನ್ಯಾಯವಾದಿಗೆ ಮಾತ್ರ ಕೇಸ್ ನಡೆಸಿಕೊಡುವುದಕ್ಕೆ ಸಂಬಳ ಕೊಡುತ್ತಲೇ ಬರುತ್ತಿದೆ. ಆದರೆ ಯೋಧನಿಗೆ ಕೊಡಬೇಕಾದ ಸಾವಿರ ಲೆಕ್ಕದಲ್ಲಿರುವ ಹಣವನ್ನು ಮಾತ್ರ ಕೊಡುವುದಿಲ್ಲ. ಯೋಧ ತಾನು ಇರುವ ತನಕ ಕುಂಟುತ್ತಾ ನ್ಯಾಯಾಲಯಕ್ಕೆ ಬಂದು ಶತಾಯ ಗತಾಯ ತನಗೆ ತನ್ನ ಹಣ ಬೇಕೆಂದು ಹೋರಾಡುತ್ತಾನೆ. ಕೊನೆಗೆ ಆತ ಸತ್ತ ನಂತರ ಅವನ ಕುಟುಂಬದ ಯಾರೊಬ್ಬರೂ ಸೈನ್ಯಕ್ಕೆ ಸೇರುವ ಮನಸ್ಸು ಮಾಡುವುದಿಲ್ಲ. ಆದರೆ ನಾವು ಒಂದು ವಿಚಾರ ಸ್ಪಷ್ಟಪಡಿಸಿಕೊಳ್ಳೋಣ. ಯೋಧ ಜೀವನ ಪೂರ್ತಿ ನಮಗಾಗಿ ಗಡಿಯಲ್ಲಿ ಕಾದು ನಿಂತು ಕೊನೆಗೆ ಅವನಿಗೆ ಏನಾದರೂ ಆದರೆ, ನಮ್ಮ ಜೀವನ ಪೂರ್ತಿ ಆತನಿಗೆ ನೆರವಾಗಿರಬೇಕಾದವರು ನಾವು. ಆದರೆ ಆತನೇ ವೀಲ್ ಚೇರ್‌ನಲ್ಲಿ ಅಲೆಯುತ್ತಿದ್ದರೂ, ಸಾವಿರ ರೂಪಾಯಿ ಕೊಡುವ ಯೋಗ್ಯತೆ ಇಲ್ಲದೇ ಹೋಯಿತಾ ಸರಕಾರಕ್ಕೆ? ಕೇಳುತ್ತಿರುವ ಹಣವಾದರೂ ಯಾರದ್ದು? ಅವರದ್ದೇ ಅಲ್ಲವೇ? ಒಬ್ಬ ರಾಜಕಾರಣಿ, ಪೊಲೀಸ್ ಅಥವಾ ಇನ್ಯಾವುದೇ ಕೆಲಸದಲ್ಲಿ ಒಬ್ಬ ವ್ಯಕ್ತಿ ಇರಲಿ.. ಆತ ಕೆಲ ಕಾಲ ಒತ್ತಡದಿಂದ ಹೊರ ಬರಬಹುದು. ಇನ್ನು ಕೆಲವೊಮ್ಮೆ ಒತ್ತಡವೇ ಇರುವುದಿಲ್ಲ. ಆದರೆ ಯಾವಾಗಲೂ ಅತ್ಯಂತ ಒತ್ತಡದಿಂದ ಕೆಲಸ ಮಾಡುವವನು ಮಾತ್ರ ಯೋಧನೇ. ಇದು ಕೇವಲ ಭಾರತದ ಸ್ಥಿತಿಯಲ್ಲ. ಎಲ್ಲ ದೇಶಗಳ ಸೈನಿಕರಿಗೂ ಒತ್ತಡ ಇದ್ದೇ ಇರುತ್ತದೆ. ಅದು ಮಿಲಿಟರಿ ಕೆಲಸದಲ್ಲಿ ನಿಶ್ಚಿತ. ನಿತ್ಯವೂ ಸೈನ್ಯದಲ್ಲಿ ಶಿಸ್ತಿನ ಜತೆಗೆ ಕಟ್ಟುಪಾಡಿನೊಂದಿಗೂ ಜೀವನ ಸಾಗಿಸಬೇಕಾಗಿರುತ್ತದೆ. ನನಗೆ ಒಮ್ಮೆ ಕುಲ್ದೀಪ್ ಸಿಂಗ್ ಅವರೇ ಹೇಳಿದ್ದರು, ಯೋಧರು ಅವರ ಬ್ಯಾಂಕ್‌ಗೆ ಅವರೇ ಹೋಗಬೇಕಿದ್ದರೂ ಪರವಾನಗಿ ಬೇಕು.

ಸೋಪು, ಹಲ್ಲು ಉಜ್ಜಲು ಬ್ರಶ್ ತರಬೇಕೆಂದು ಮಾರ್ಕೆಟ್‌ಗೆ ಹೋಗಬೇಕೆಂದರೆ ಹಿಂದಿನ ದಿನವೇ ಪರವಾನಗಿ ತೆಗೆದುಕೊಂಡು, ಹೋಗುವಾಗ ರಿಜಿಸ್ಟರ್‌ಗೆ ಸಹಿ ಮಾಡಿ, ಔಟ್ ಪಾಸ್ ತೆಗೆದುಕೊಂಡು ಹೋಗಬೇಕು. ಔಟ್ ಪಾಸ್‌ನಲ್ಲಿ ಇಂತಿಷ್ಟು ಗಂಟೆಯೊಳಗೇ ವಾಪಸ್ ಬರಬೇಕು ಎಂದಿರುತ್ತದೆ. ಅಷ್ಟರೊಳಗೇ ಬರಬೇಕು. ಇಲ್ಲದಿದ್ದರೆ ಶಿಕ್ಷೆ. ಅಷ್ಟೇ ಏಕೆ, ಟಾಯ್ಲೆಟ್ಟಿಗೆ ಹೋಗಬೇಕಿದ್ದರೂ ಒಪ್ಪಿಗೆ ಪಡೆಯಬೇಕು. ಹೀಗಿರುವಾಗ ಎಷ್ಟು ಶಾಂತಿ ಸುವ್ಯವಸ್ಥೆ ನೆಲೆಸಿರುವ ಜಾಗದಲ್ಲಿ ಇದ್ದರೇನು ಬಂತು? ಎಲ್ಲವೂ ಒಂದೇ ಆಗಿರುತ್ತದೆ.ಇನ್ನು ಇದಕ್ಕಿಂತ ಖೇದಕರ ಸಂಗತಿಯೆಂದರೆ, ಯೋಧರು ಭಾವನೆಗಳನ್ನೇ ಮರೆತುಬಿಟ್ಟಿರುತ್ತಾರೆ. ಮನೆಯಿಂದ ಹೆಂಡತಿ ಮಕ್ಕಳು ಕರೆ ಮಾಡಿದರೆ ಕಣ್ಣೀರೇ ಹರಿಸಿಬಿಡುತ್ತಾರೆ. ಸಂಸಾರ ನಡೆಸುತ್ತಿರುವುದಿಲ್ಲ, ಅದನ್ನೂ ಸಹಿಸಿಕೊಂಡಿರಬೇಕು, ಚಳಿಯಿದ್ದರೂ, ಮಳೆಯಿದ್ದರೂ, ಗಾಳಿಯಿದ್ದರೂ ಒಂದೇ ಕಂಬಳಿ, ಒಂದೇ ಚಾಪೆ, ಒಂದೇ ದಿಂಬು. ಸೊಳ್ಳೆ ಪರದೆಗಾಗಿ ಅರ್ಜಿ ಸಲ್ಲಿಸಬೇಕು. ಮಲೇರಿಯಾನೋ, ನ್ಯುಮೋನಿಯಾನೋ ಮತ್ತೊಂದೋ ಬಂದು ಕೈ ಕಾಲು ಊನವಾದರೆ, ನಯಾ ಪೈಸೆ ಕೊಡುವುದಿಲ್ಲ. ಕಾರಣ ಅವರು ಹೋರಾಡಿ ಆಗಿದ್ದಲ್ಲವಲ್ಲ? ಶಾಂತಿ ಸುವ್ಯವಸ್ಥೆ ಹೆಚ್ಚಾಗಿ ಆಗಿದ್ದು! ಇಂಥ ಸ್ಥಿತಿ ಮುಂದೆಯೂ ಹೀಗೇ ಇದ್ದರೆ ಕಾಂಗ್ರೆಸಿಗೂ ಬಿಜೆಪಿಗೂ ಯಾವ ವ್ಯತ್ಯಾಸವಿರುವುದಿಲ್ಲ. ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗಷ್ಟೇ ಮನೋಹರ್ ಪರ್ರಿಕರ್ ಆಡಳಿತ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya