ಶವದ ಮುಂದೆಯೇ ಹೆಮ್ಮೆಯಿಂದ ‘ನನ್ನ ಅಪ್ಪ’ ಎಂದು ಖುಷಿಯಾಗಿ ಕಳಿಸಿಕೊಟ್ಟಿತ್ತು ಆ ಮಗು

BmOmkXWCYAARngp

ಏಪ್ರಿಲ್ 12. ಅವನ ಹುಟ್ಟಿದ ದಿನ. ಆ ಹಬ್ಬದ ದಿನದಂದು ಅವನಿಗೆ ವಾಟ್ಸ್ಯಾಪ್‌ನಲ್ಲಿ ಒಂದು ಮೆಸೆಜ್ ಹಾಕಿದ್ವಿ … ‘ಹ್ಯಾಪಿ ಬರ್ತಡೇ’ ಎಂದು. ಆತ ಬಹಳ ಹೊತ್ತಿನ ನಂತರವೇ ನೋಡಿ, ‘ನಾನು ಬ್ಯುಸಿ ಇದ್ದೀನಿ… ಆಮೇಲ್ ಮಾಡ್ತಿನಿ’ ಅಂದ. ಸ್ವಲ್ಪ ಹೊತ್ತಿನ ನಂತರ ಕರೆ ಮಾಡಿದ ಅವನು ನನಗೆ ಮಾತ್ರ ಒಂದು ಗುಟ್ಟು ಹೇಳಿದ್ದ, – ‘ಅಪ್ಪ ನಾನು ನಿಮಗೆ ಒಂದು ವಿಚಾರ್ ಹೇಳುತ್ತೇನೆ ಆದರೆ ಯಾರಿಗೂ ಹೇಳಬಾರದು. ಮಗಳ ಚಿಕಿತ್ಸೆಗಾಗಿ ನಾನು ಮೇ ಒಂದರಿಂದ ಸ್ವಲ್ಪ ದಿನ ರಜೆ ಮೇಲೆ ಮನೆಗೆ ಬರೋಣ ಅಂತಿದೀನಿ. ನಾನು ಮೇ ಮೊದಲನೇ ದಿನ ಬಂದಾಗ ಅದು ಸರ್‌ಪ್ರೈಸ್ ಆಗಿರಬೇಕು. ಹೆಂಡತಿಗೆ ಸಹ ನಾನು ಹೇಳಿಲ್ಲ. ನೀವು ಮನೆಯ ಯಾರಿಗೂ ವಿಷಯ ತಿಳಿಸಬೇಡಿ ಆಯ್ತಾ.

’ಮಗ ಮನೆಗೆ ಬರುತ್ತಾನೆಂದರೆ ಖುಷಿಯಿಲ್ಲದೇ ಇರುತ್ತದೆಯೇ? ‘ಆಯ್ತು ಮಗನೆ.. ಬಾ’ ಎಂದು ಮಗನ ತರ್ಲೆ ಬುದ್ಧಿಗೆ ತಾನೂ ಬೆಂಬಲಿಸಿ ನಗುತ್ತಾ ಫೋನ್ ಇಟ್ಟರು ತಂದೆ ವರದರಾಜನ್.

ಮಗ ತಾನು ಸ್ವಲ್ಪ ಬ್ಯುಸಿಯಾಗಿದ್ದೇನೆ ಎಂದು ಹೇಳಿದ್ದರಿಂದ ತಂದೆಯೂ ಅಥವಾ ಕುಟುಂಬವೂ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಆದರೆ, ಏಪ್ರಿಲ್ 25ನೇ ತಾರೀಖು ದುಬೈನಲ್ಲಿರುವ ನೆಂಟರಿಂದ ವರದರಾಜನ್ ಕುಟುಂಬಕ್ಕೆ ಒಂದು ಕರೆ ಬರುತ್ತದೆ. ಫೋನ್ ಎತ್ತುವುದಕ್ಕೂ ಪುರಸೊತ್ತು ಕೊಡದ ಹಾಗೆ, ‘ನಿಮ್ಮ ಮಗನ ಫೋಟೊ ಟಿವಿಲಿ ಬರ್ತಾ ಇದೆ ನೋಡಿ. ಮುಕುಂದ ಸತ್ತೋದ ಅಂತ ತೋರಿಸುತ್ತಾ ಇದಾರೆ’ ಎಂದರು. ತಕ್ಷಣ ಟಿವಿ ಹಾಕಿ ನೋಡಿದರು. ಹೌದು ಮಗನ ಫೋಟೋ ಸಮೇತ ಸಾವಿನ ಸುದ್ದಿ ಬರುತ್ತಿದೆ. ಇಡೀ ಭಾರತವೇ ಅವನ ಸಾವಿಗೆ ಕಣ್ಣೀರಿಡುತ್ತಿದೆ. ಚಾನೆಲ್‌ಗಳು ಪೈಪೋಟಿಗೆ ಬಿದ್ದಂತೆ ಮಗನ ಸಾವಿನ ಸುದ್ದಿಯನ್ನು ಬಿತ್ತರಿಸುತ್ತಿದೆ. ಆದರೂ, ಮೊನ್ನೆ ಚೆನ್ನಾಗಿ ಮಾತಾಡಿದ್ದ…

ಈಗ ಹೇಗೆ ಸಾಯ್ತಾನೆ ಎಂದು ಅವನ ಮೊಬೈಲ್‌ಗೆ ಕರೆ ಮಾಡಿದರು. ಯಾರೋ ಒಮ್ಮೆ ಕರೆ ಸ್ವೀಕರಿಸಿ ಕಟ್ ಮಾಡಿದರು. ಮತ್ತೊಮ್ಮೆ ಮಾಡಿದರೆ ಸ್ವೀಕರಿಸಲಿಲ್ಲ. ಹೃದಯದ ಬಡಿತ ಹೆಚ್ಚಾಗಿತ್ತು. ಮನೆಯವರಿಗೆಲ್ಲರಿಗೂ ನಾಲಿಗೆ ಒಣಗುತ್ತಿತ್ತು…

ಮಗನ ಸೀನಿಯರ್ ನಂಬರಿಗೆ ಕರೆ ಮಾಡಿದಾಗ ಅವರು ಹೇಳಿದ್ದಿಷ್ಟು – ‘ಹೌದು, ನೀವು ಟಿವಿಯಲ್ಲಿ ನೋಡಿರುವುದು ಸತ್ಯ. ಮೇಜರ್ ಮುಕುಂದ್ ವರದರಾಜನ್ ಹುತಾತ್ಮರಾಗಿದ್ದಾರೆ.’ಮನೆಗೆ ಬರುತ್ತೇನೆಂದ ಮಗ ಬಂದಿದ್ದ. ಆದರೆ ಶವವಾಗಿ.ಅಂದು ಇದೇ ದಿನ. ಏಪ್ರಿಲ್ 25. ವರ್ಷ ಮಾತ್ರ 2014. ಕಾಶ್ಮೀರದ ಶುಪಿಯಾನ್ ಜಿಲ್ಲೆಯ ಮನ್ಲೂ ಎಂಬ ಊರಿನ ಖಾಝಿಪತ್ರಿ ಎಂಬ ಶಾಲೆಯಲ್ಲಿ ಚುನಾವಣೆ ನಡೆಯುತ್ತಿತ್ತು. ಆ ಸಮಯದಲ್ಲಿ ಉಗ್ರರ ದಾಳಿ ನಡೆಯಬಹುದೆಂದು ಭಾರತೀಯ ಗುಪ್ತದಳ ‘ರಾ’ ಮಾಹಿತಿ ನೀಡಿತ್ತು. ಅದೇ ಕಾರಣಕ್ಕೆ ಮುಂಚೆ ನಿಯೋಜಿಸಿದ್ದ ಯೋಧರ ಗುಂಪಿಗೆ ಮತ್ತಷ್ಟು ಯೋಧರನ್ನು ಕಳುಹಿಸಿಕೊಡಲಾಗಿತ್ತು. ಆ ಗುಂಪಿನಲ್ಲಿ ಮುಕುಂದ್ ವರದರಾಜನ್ ಸಹ ಇದ್ದರು. ಅದೇ 25ನೇ ತಾರೀಖು ಅನುಮಾನ ನಿಜವಾಗಿತ್ತು. ರಾ ಹೇಳಿದಂತೆ ಖಾಝಿಪತ್ರಿ ಶಾಲೆಗೆ ಆಗಮಿಸಿದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರು ಅಲ್ಲಿದ್ದ  ಯೋಧರ ಮೇಲೆ ದಾಳಿ ಮಾಡಲು ನಿಂತರು. ಆಗ ಎಲ್ಲ ಯೋಧರಿಗಿಂತ ಮುಂದೆ ಹೋಗಿ ನಿಂತ ಮುಕುಂದ್ ಪ್ರತಿದಾಳಿ ಮಾಡಿದರು. ಆ ದಾಳಿ ಮಾಡುತ್ತಿರುವ ಸಂದರ್ಭದಲ್ಲಿಯೇ ಹೊಸದೊಂದು ಪ್ಲಾನ್ ಮಾಡಿ ತನ್ನ ತಂಡಕ್ಕೆಲ್ಲ ಅದನ್ನು ತಿಳಿಯುವಂತೆ ಮಾಡಿ ಮತ್ತೆ ಉಗ್ರರತ್ತ ಮುಖ ಮಾಡಿದರು.

ಅಷ್ಟರಲ್ಲಾಗಲೇ ಯಾವುದೋ ದಿಕ್ಕಿನಿಂದ ಬಂದ ಗುಂಡು ಮುಕುಂದ್ ದೇಹ ಹೊಕ್ಕಿತು. ಪ್ರಾಣ ಹೋಗುವ ಸ್ಥಿತಿಯಲ್ಲಿದ್ದರೂ ತಾನು ಪಾಡಿದ ಪ್ಲಾನ್ ವಿಫಲವಾಗಬಾರದು ಎಂದು ತನಗಾದ ನೋವನ್ನೂ ಯಾರಿಗೂ ತೋರದೇ ಮುಂದೆ ಸಾಗುತ್ತಲೇ ಇದ್ದರು. ಕೊನೆಗೂ ಅವರ ಪ್ಲಾನ್ ಯಶಸ್ವಿಯಾಯಿತು. ಹಿಜ್ಬುಲ್ ಮುಜಾಹಿದೀನ್‌ನ ಮೂರು ದೊಡ್ಡ ಸ್ಥಾನದಲ್ಲಿರುವ ಉಗ್ರರು ಮುಕುಂದ್‌ರ ಗುಂಡಿಗೆ ಬಲಿಯಾದರು. ಅಷ್ಟೇ ಅಲ್ಲ. ಮುಕುಂದ್ ಗುಂಡೇಟು ತಿಂದು ಬಹಳ ಹೊತ್ತಾಗಿತ್ತು. ಆ ದೇಹ ನೆಲಕ್ಕೊರಗಿತು.

ಮುಕುಂದ್ ನೆಲಕ್ಕೆ ಬಿದ್ದದ್ದು ನೋಡಿ ಬಂದ ಕೆಲ ಯೋಧರು ಅವರನ್ನು ವಾಪಸ್ ಕರೆದುಕೊಂಡು ಚೆಕ್‌ಪೋಸ್ಟ್‌ಗೆ ಹೋಗುವ ಪ್ರಯತ್ನ ಮಾಡಿದರಾದರೂ ಸಾಧ್ಯವಾಗಲಿಲ್ಲ. ರಜಪೂತ್ ರೆಜಿಮೆಂಟ್ ಮತ್ತು 44 ರಾಷ್ಟ್ರೀಯ ರೈಫಲ್ಸ್ ರೆಜಿಮೆಂಟಿನಲ್ಲಿದ್ದ ಮೇಜರ್ ಮುಕುಂದ್ ವರದರಾಜನ್ ವೀರ ಮರಣ ಹೊಂದಿದ್ದರು. ಮೇಜರ್ ಮುಕುಂದ್ ಬಗ್ಗೆ ಮಾತಾಡುವಾಗ ತಂದೆ ವರದರಾಜನ್ ಕಣ್ಣಲ್ಲಿ ನೀರಿರಲಿಲ್ಲ ಬದಲಿಗೆ ತನ್ನ ಮಗ ದೇಶಕ್ಕಾಗಿ ಮಡಿದಿದ್ದಾನೆ ಎಂಬ ಹೆಮ್ಮೆಯಿತ್ತು. ಸಹಜವಾಗಿ ನ್ಯೂಸ್ ಚಾನೆಲ್‌ಗಳು ಬೈಟ್ ಕೇಳಲು ವರದರಾಜನ್ ಮನೆ ಮುಂದೆ ಜಮಾಯಿಸಿದಿರು. ಒಬ್ಬರಾದ ಮೇಲೋಬ್ಬರುಬಂದು ತಂದೆ ತಾಯಿಯ ಸಂದರ್ಶನ ಮಾಡಲು ಶುರುಹಚ್ಚಿಕೊಂಡರು.

ಸಾಮಾನ್ಯವಾಗಿ ಮೀಡಿಯಾ ಚಾನೆಲ್‌ಗಳಿಗೆ ಒಂದು ಚಟವಿರುತ್ತದೆ. ಯಾವುದಾದರೂ ಯೋಧನೋ, ರಾಜಕಾರಣಿಯೋ, ಸೆಲೆಬ್ರಿಟಿಯೋ ತೀರಿಕೊಂಡಾಗ ಅವರ ಮನೆಯವರನ್ನು  ಮಾತಾಡಿಸುತ್ತಾ ಕಣ್ಣೀರು ತರಿಸುವಂಥ ಯಾವುದಾದರೂ ಒಂದು ಪ್ರಶ್ನೆ ಕೇಳಿ ಬಿಡುತ್ತಾರೆ. ಅಳುವಾಗ ಅವರ ಮುಖವನ್ನೇ ಜೂಮ್ ಮಾಡಿ ಮಾಡಿ ತೋರಿಸುತ್ತಾರೆ. ಇದರಿಂದ ಜನರೂ ಭಾವುಕರಾಗುತ್ತಾರೆ. ಅದೇ ಪ್ರಯತ್ನವನ್ನು ವರದರಾಜನ್ ದಂಪತಿ ಮೇಲೆ ಮಾಡಲಾಯ್ತು. ಮುಕುಂದ್ ಬಗ್ಗೆ ನಿಮಗೇನನಿಸುತ್ತದೆ, ಆತ ಮೊದಲು ಹೇಗಿದ್ದ? ಸೇನೆ ಸೇರಬೇಕೆಂದು ನಿರ್ಧರಿಸಿದ್ದನಾ? ಹೀಗೆ ಪ್ರಶ್ನೆ ಕೇಳಿದರು. ಮಗ ಹುತಾತ್ಮನಾಗಿದ್ದರೂ ಅಂಜದ ತಂದೆ, ‘ಇಲ್ಲ ಅವನು ಮೂರನೇ ಕ್ಲಾಸಿಗೇ ತಾನು ಸೇನೆ ಸೇರಬೇಕೆಂದು ಬಯಸಿದ್ದ. ನಾನು ಹುಡುಗಾಟ ಎಂದು ಸುಮ್ಮನಾಗಿದ್ದೆ. ಆದರೆ ಕೊನೆಗೆ ಅದನ್ನು ಸಾಧಿಸಿಯೇ ಬಿಟ್ಟ. ಮುಕುಂದ್ ಹಾಗೇ ಸುಮ್ಮನೆ ಪರೀಕ್ಷೆ ಬರೆದು ಪಾಸಾಗಿ ಸೇನೆ ಸೇರಿಕೊಂಡಿದ್ದಲ್ಲ. ಬಿ.ಕಾಂ ಪದವಿ ಮುಗಿಸಿ ಸೇನೆಗೆ ಅರ್ಜಿ ಹಾಕಿದ್ದ.

ತಾನು ಆಯ್ಕೆಯಾಗುವ ತನಕ ಮನೆಯವರಿಗೆ ಹೊರೆಯಾಗಬಾರದೆಂದು, ಬಿಪಿಒ ಒಂದರಲ್ಲಿ ಕೆಲಸ ಮಾಡುತ್ತಾ ಇದ್ದ. ಸೇನೆಗೆ ಬುಲಾವ್ ಬಂದಿದ್ದೇ ತಡ ಕೆಲಸದ ಸಹವಾಸವೇ ಬೇಡ ಎಂದು ಹೊರಟಿದ್ದ. ಇಂಥ ಮುಕುಂದ್ ಕೊನೆಗೂ ತನ್ನ ಈ ಜನ್ಮದ ಉದ್ದೇಶವನ್ನು ಪೂರೈಸಿ ಹೋದ. ನನ್ನ ಮಗನನ್ನು ಕಳೆದುಕೊಂಡೆ ಎನ್ನುವ ಬೇಜಾರಾದರೆ, ಅದಕ್ಕಿಂತ ಹೆಚ್ಚು ಆತ ನಾಲ್ಕು ಜನರಿಗೆ ಮಾದರಿಯಾಗಿ ಬದುಕಿ, ಉಗ್ರರನ್ನು ಕೊಂದೇ ಹುತಾತ್ಮನಾದನಲ್ಲ ಅದೇ ನೆಮ್ಮದಿ ನಮಗೆ.’ ಎಂದರು. ಪ್ರಶ್ನೆ ಕೇಳಿದ ಆ ಇಂಗ್ಲಿಷ್ ಮಾಧ್ಯಮದ ಖ್ಯಾತ ಪತ್ರಕರ್ತೆಗೆ ಮುಂದೆ ಯಾವ ಮಾತಾಡಲಿಲ್ಲ.ಅಸಲಿಗೆ ಒಬ್ಬ ದೇಶಸೇವೆಗೆ ಹೊಗುತ್ತಿದ್ದಾನೆ ಎಂದರೆ ಅವನು ಜೀವದ ಹಂಗನ್ನೇ ತೊರೆದು ಹೋಗುತ್ತಿದ್ದಾನೆ ಎಂಬುದು ಮಕ್ಕಳನ್ನು ಸೈನ್ಯಕ್ಕೆ ಕಳಿಸಿಕೊಡುವ ಎಲ್ಲ ಕುಟುಂಬಕ್ಕೂ ಗೊತ್ತು. ಆದರೂ ಅವರು ಯಾವುದೇ ಕಾರಣಕ್ಕೂ ವಿಚಲಿತರಾಗಬಾರದು ಎಂದು ಯೋಧರು ಪ್ರತಿ ಬಾರಿ ಮನೆಗೆ ಹೊದಾಗಲೂ ತಾವು ಅಲ್ಲಿ ಪ್ರೀತಿ ಖುಷಿಯಿಂದಿರುವುದಕ್ಕಿಂತ ಹೆಚ್ಚಾಗಿ ತಮ್ಮ ಕುಟುಂಬದ ಮನಸ್ಥಿತಿಯನ್ನು ಬದಲಾಯಿಸುತ್ತಾ ಹೋಗುತ್ತಾರೆ. ಇದಕ್ಕೆ ತಾಜಾ ಉದಾಹರಣೆ, ಕೆಲ ದಿನಗಳ ಹಿಂದೆ ಬೀಯಿಂಗ್ ಇಂಡಿಯನ್ ತಂಡ ಭಾರತೀಯ ಯೋಧರ ಕುಟುಂಬದ ಕುರಿತು ತಯಾರಿಸಿದ್ದಂಥ ಒಂದು ವೀಡಿಯೋ.

ಇದೇ ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಅಲ್-ಬದರ್ ಉಗ್ರಸಂಘಟನೆಯೊಂದಿಗೆ ಕಾಶ್ಮೀರದಲ್ಲಿ 2006ರಲ್ಲಿ ಹೋರಾಡುತ್ತಾ ಮಡಿದ, ಕೀರ್ತಿಚಕ್ರ ಗೌರವ ಪಡೆದ ಮೇಜರ್ ಮನೀಶ್ ಪೀತಾಂಬರೆಯ ಪತ್ನಿ ಮುಗ್ಧಾ ಪೀತಾಂಬರೆ ಅವರನ್ನು ಮಾತಾಡಿಸಿದ್ದರು. ‘ನಮಗೆ ಮೊದಲು ಬಹಳ ಭಯವಾಗುತ್ತಿತ್ತು. ಆದರೆ, ಅವರು ನನಗೆ ಯಾವಾಗಲೂ ಸಮಾಧಾನ ಮಾಡುತ್ತಿದ್ದರು – ‘ನೀನು ಎಲ್ಲ ಪರಿಸ್ಥಿತಿಗಳಿಗೂ ಸಿದ್ಧವಾಗಿರಬೇಕು, ನಿನ್ನ ಮನಸ್ಸನ್ನು ಗಟ್ಟಿಮಾಡಿಕೊಂಡಿರಲೇ ಬೇಕು.’ ಎಂದು. ನಾನು ನಿಧಾನವಾಗಿ ಇವತ್ತು ನಾನಿರುವ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾ ಬಂದೆ’ ಎನ್ನುವಷ್ಟರಲ್ಲಿ ಗಂಡ ನೆನಪಾಗಿ ದೀರ್ಘವಾಗಿ ಉಸಿರಾಡಿದ್ದರು.ಇದೇ ರೀತಿ ಮೇಜರ್ ಮುಕುಂದ್ ತನ್ನ ತಂದೆ ಮತ್ತು ಕುಟುಂಬವನ್ನು ಸಂತೈಸಿದ್ದುಂಟು. ಒಮ್ಮೆ ಅವರು ಬಹಳ ದಿನಗಳ ನಂತರ ಮನೆಗೆ ಬಂದಾಗ ಅವರ ದೇಹದಲ್ಲಿ ಗುಂಡು ಹೊಕ್ಕ ಗುರುತು ಕಂಡಿತು. ಅದನ್ನು ಏನು ಎಂದು ಕೇಳಿದ್ದಕ್ಕೆ ಸತಾಯಿಸಿ ಸತಾಯಿಸಿ ಕೊನೆಗೆ  ಉಗ್ರ ಕಾರ್ಯಾಚರಣೆಯಲ್ಲಿ ಗುಂಡೇಟು ತಿಂದೆ ಎಂದು ಮುಕುಂದ್ ಬಾಯ್ಬಿಟ್ಟಿದ್ದರು. ಮಗನ ಈ ಸ್ಥಿತಿ ನೋಡಿ ಬೇಜಾರಾದ ಅಪ್ಪ, ‘ನಿನಗೆ ಇನ್ನೂ ಹೆಚ್ಚೇನಾದರೂ (ಸಾವು ಎಂದು ಹೇಳಲು ಮನಸ್ಸಿಲ್ಲ) ಆದರೆ ಏನು ಮಾಡೋದು?’ ಎಂದು ಕೇಳಿದಾಗ ‘ಅಪ್ಪ, ಸಾಯೋದಾದ್ರೆ ಹೆಂಗಿದ್ರೂ ಸಾಯ್ತೀವಿ… ಇಲ್ಲೇ ಮನೆ ಮುಂದೆ ಹೋಗುವಾಗ ಗಾಡಿ ಗುದ್ದಿ ಸಾಯಬಹುದಲ್ಲವಾ? ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡ’ ಎನ್ನುತ್ತಿದ್ದರು ಮೇಜರ್ ಮುಕುಂದ್ ವರದರಾಜನ್.

ಈಗಲೂ ಯಾವುದಾದರೂ ಮಾಧ್ಯಮಗಳು ಮುಕುಂದ್ ವರದರಾಜನ್ ಪತ್ನಿ ಇಂಧು ಅವರನ್ನು ಮಾತಾಡಿಸಿದರೆ, ಗಂಡನ ಸಾವಿನ ನೋವನ್ನೂ ತೋರ್ಪಡಿಸದೇ ಒಬ್ಬ ದಿಟ್ಟ ಹೆಣ್ಣುಮಗಳಾಗಿ ಮಾತಾಡುತ್ತಾರೆ. ಅಷ್ಟೇ  confidence ಇಂದ.ಮುಕುಂದ್ ಕೇವಲ ತನ್ನ ತಂದೆ, ತಾಯಿ ಮತ್ತು ಹೆಂಡತಿಯನ್ನಷ್ಟೇ ಸಮಾಧಾನ ಮಾಡುತ್ತಿರಲಿಲ್ಲ. ಬದಲಿಗೆ ತನ್ನ ಮೂರು ವರ್ಷದ ಮಗು ಆರ್ಶಿಯಾಳನ್ನು ಕೂಡ ರೂಮಿಗೆ ಕರೆದುಕೊಂಡು ಹೋಗಿ, ‘ನನಗ್ಯಾವುದೇ ಭಯವಿಲ್ಲ.. ನನಗ್ಯಾವುದೇ ಭಯವಿಲ್ಲ. ಆಕಾಶವೇ ಮುರಿದು ತಲೆ ಮೇಲೆ ಬಿದ್ದರೂ, ನಾನು ಕೆಟ್ಟವನು ಎಂದು ಯಾರೇನೇ ಅಂದರೂ… ಯಾರು ನನ್ನ ಜತೆ ಇದ್ದರೂ, ಇಲ್ಲದಿದ್ದರೂ.. ನನಗ್ಯಾವುದೇ ಭಯವಿಲ್ಲ’  ಎಂಬ ಸಾಹಿತ್ಯವಿರುವ ತಮಿಳಿನ ಗೀತೆಯನ್ನು ಜೋರಾಗಿ ಹಾಕಿ ಮಗಳ ಜತೆ ಕುಣಿಯುತ್ತಿದ್ದರು. ಆಕೆಯ ಸುಪ್ತ ಮನಸ್ಸಿನಲ್ಲಿ ಅದು ಹಾಗೇ ಉಳಿದಿರುತ್ತಿತ್ತು. ಇದರಿಂದ ಮಗಳೂ ಎಷ್ಟು ಪ್ರಭಾವಿತಳಾಗಿದ್ದಳೆಂದರೆ ಮುಕುಂದ್‌ರ ಶವವನ್ನು ಮನೆಯ ಮುಂದೆ ಇಟ್ಟು -ಟೊಗೆ ಹಾರ ಹಾಕಿದ್ದಾಗ ತನ್ನ ಅಪ್ಪ ಹುತಾತ್ಮರಾಗಿದ್ದಾರೆ ಎನ್ನುವುದು ಗೊತ್ತಿದ್ದೋ ಗೊತ್ತಿಲ್ಲದೆಯೋ, ಆ ಹಾರ ನೋಡಿ ಎಲ್ಲರಿಗೂ ಹೆಮ್ಮೆಯಿಂದ ಮಗಳು ನಗು ನಗುತ್ತಲೇ – ‘ಇದು ಯಾರು ಗೊತ್ತಾ? ಮೇಜರ್ ಮುಕುಂದ್ ವರದರಾಜನ್… ನನ್ನ ಅಪ್ಪ…’ ಎಂದು ಹೇಳಿದ್ದಳು. ಮುಕುಂದ್ ತನ್ನ ಕುಟುಂಬವನ್ನು ಎಷ್ಟೇ ತಯಾರು ಮಾಡಿದ್ದರೂ ಸಾವಿನ ಮನೆಯಲ್ಲಿ ಮಗಳ ಆ ಮಾತು ಮಾತ್ರ ಎಲ್ಲರೂ ಕಣ್ಣೀರಿಡುವಂತೆ ಮಾಡಿತ್ತು. ನಿಜವಾಗಿ ಅಪ್ಪನನ್ನು ಹೆಮ್ಮೆಯಿಂದ ಖುಷಿಯಿಂದ ಕಳಿಸಿಕೊಟ್ಟವಳು ಆ ಮಗಳು ಆರ್ಶಿಯಾ ಮಾತ್ರ.ಅಪ್ಪನ ಪಾಠ ನೆನಪಲ್ಲಿಟ್ಟುಕೊಂಡಿದ್ದ ಮಗಳನ್ನು ನೋಡಿ ನಾಚಿದ ಅಮ್ಮ ಇಂಧು, -ಸ್ಬುಕ್ಕಲ್ಲಿ ಗಂಡ ಮುಕುಂದ್ ಬಗ್ಗೆ ಒಂದು ಕವನ ಬರೆದು ಹಾಕುತ್ತಾರೆ, –

ಹೃದಯ ತುಂಬ ನನ್ನನ್ನು ಪ್ರೀತಿಸುವವನೊಬ್ಬನಿದ್ದ

ನನ್ನ ಮಗುವಿಗೆ ತಂದೆಯಾಗಿ ರಕ್ಷಿಸಿದವನೊಬ್ಬನಿದ್ದ

ಅವನ ವೃತ್ತಿಯನ್ನು ಪ್ರೀತಿಸುವವನೊಬ್ಬನಿದ್ದ

ನನ್ನ ಆತ್ಮವಾಗಿದ್ದನೊಬ್ಬನಿದ್ದ

ಹೃದಯ ವೈಶಾಲ್ಯದಿಂದ ಕೂಡಿರುವವನೊಬ್ಬನಿದ್ದ

ಜೀವನ ಪೂರ್ತಿ ನನ್ನನ್ನು ಪ್ರೀತಿಸಿದವನೊಬ್ಬನಿದ್ದ

ಆದರೆ… ಈಗ ಆತ ದೇವರ ಹತ್ತಿರ ಇದ್ದಾನೆ.

ನನಗೆ ಖಂಡಿತ ಗೊತ್ತು ಒಂದು ದಿನ ನಾನು ಅವನನ್ನು ಭೇಟಿಯಾಗುತ್ತೇನೆ

ನನಗೆ ಖಂಡಿತ ಗೊತ್ತು ಆತ ಅಲ್ಲಿ ನನಗೆ ಗಟ್ಟಿಯಾದ ಬೆಚ್ಚನೆಯ ಅಪ್ಪುಗೆ ಕೊಡುತ್ತಾನೆ

ನನಗೆ ಖಂಡಿತ ಗೊತ್ತು ನಾನು ಆಗ ಉಸಿರಾಡುವುದಕ್ಕಾಗುತ್ತಿಲ್ಲ ಎಂದು ದೂರುವುದಿಲ್ಲ

ನನಗೆ ಖಂಡಿತ ಗೊತ್ತು ನೀನು ನನ್ನ ಅಪ್ಪಿಕೊಳ್ಳಬಹುದು… ನಿನಗೆ ಖುಷಿಯಾಗುವಷ್ಟು!

ಇಂಥ ಮೇಜರ್ ಮುಕುಂದ್ ವರದರಾಜನ್‌ರನ್ನು ಅವರ ಕುಟುಂಬ ಮರೆಯುವುದಿಲ್ಲ. ನಾವೂ ಮರೆಯದಿರೋಣ. ಯಾಕೆಂದರೆ ಅವರು ಜೀವತೆತ್ತಿದ್ದು ನಮಗಾಗಿ ಹೊರತು ಅವರ ಕುಟಂಬಕ್ಕಾಗಿ ಅಲ್ಲ.

(ಲೇಖಕರು ಪತ್ರಕರ್ತರು)

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya