ಪದ್ಮಶ್ರೀ ಪ್ರಶಸ್ತಿಗೂ ಮೂರನೇ ಕ್ಲಾಸ್ ಓದುವುದಕ್ಕೂ ಸಂಬಂಧವಿಲ್ಲ!

haladhar_nag-picಸ್ಥಿತಿವಂತ ಕುಟುಂಬವೇನೂ ಅಲ್ಲ. ಅಪ್ಪ ವರ್ಷಗಟ್ಟಲೆ ಕುಳಿತು ತಿನ್ನುವಷ್ಟು ಮಾಡಿಟ್ಟಿರಲಿಲ್ಲ. ಮಗನಿಗೆ ಒಂದು ವಯಸ್ಸು ಬಂದ ನಂತರ ಅಪ್ಪ ತೀರಿಕೊಂಡಿದ್ದರೆ, ಮುಂದೆ ಜೀವನದ ಜವಾಬ್ದಾರಿ ಹೊರಬೇಕು ಎಂದಾದರೂ ಅನಿಸುತ್ತಿತ್ತು. ಆದರೆ ಅಪ್ಪ ನಿಧನರಾದಾಗ ಈ ಹುಡುಗನಿಗೆ ಇನ್ನೂ 10 ವರ್ಷ. ಅಂದರೆ ಮೂರನೇ ಕ್ಲಾಸು. ಅಪ್ಪ ಸತ್ತು ಹೋದ ಅನ್ನೋದು ಬಿಟ್ಟು ಬೇರೆ ಏನು ತಿಳಿಯುತ್ತೆ ಆ ವಯಸ್ಸಲ್ಲಿ ಹೇಳಿ? ಅದೇ ನಾಲ್ಕೈದು ವರ್ಷ ಮುಂಚೆ ಅಪ್ಪ ಸತ್ತಿದ್ದರೆ, ಸಾಯೋದು ಅಂದರೆ ಏನು ಅಂತಾನೂ ತಿಳಿಯದಂಥ ವಯಸ್ಸು. ಅಂಥ ವಯಸ್ಸಲ್ಲೂ ಏನಾದರೂ ಒಂದು ಸಾಧನೆ ಮಾಡಬೇಕು ಎಂದೂ ಯಾರಿಗೂ ಎನಿಸುವುದಿಲ್ಲ. ಒಮ್ಮೆ ಅಂಥ ಆಸೆ ಬಂದರೂ, ಮೇಲೆ ಬರುವುದಕ್ಕೆ ಸರಿಯಾದ ವ್ಯವಸ್ಥೆ ಇರುವುದಿಲ್ಲ. ಇದೊಂದೇ ಕಾರಣದಿಂದ ಎಷ್ಟೋ ಆಗಿ ಹೋಗಿದೆ.

ಇಷ್ಟು ಕಷ್ಟವನ್ನೂ ದಾಟಿ ಬಂದವರು ಮಾತ್ರ ಹಲ್ದಾರ್ ನಾಗ್ ಆಗುತ್ತಾರೆ. ಸ್ವಲ್ಪ ವರ್ಷದ ಹಿಂದೆ ತಿರುಗಿ ನೋಡಿ, ಹಲ್ದಾರ್‌ನ ಊರು ಮತ್ತು ಹೆಚ್ಚೆಂದರೆ ಓಡಿಶಾ ಬಿಟ್ಟರೆ ಯಾರೊಬ್ಬರಿಗೂ ಈ ಮನುಷ್ಯ ಯಾರೆಂದೇ ಗೊತ್ತಿರಲಿಲ್ಲ. ಈಗ ಹಲ್ದಾರ್ ನಾಗ್ ಪದ್ಮಶ್ರೀ ಪ್ರಶಸ್ತಿ ತೆಗೆದುಕೊಳ್ಳುವಾಗಲೇ ಎಲ್ಲರಿಗೂ ಇವರ ಬಗ್ಗೆ ತಿಳಿದುಕೊಳ್ಳುವ ಹಂಬಲ ಮೂಡಿದ್ದು. ಮೊನ್ನೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡುವಾಗ ಒಬ್ಬ ಕಪ್ಪನೆಯ ವ್ಯಕ್ತಿ, ಸಾದಾ ಸೀದ ಪಂಚೆ, ತೋಳಿಲ್ಲದ ಅಂಗಿ ಧರಿಸಿ, ಬರಿಗಾಲಲ್ಲಿ ಬಂದು ಕುಳಿತಿದ್ದರು. ಎಲ್ಲರಿಗೂ ಅದೇ ಆಶ್ಚರ್ಯ, ಯಾರಿವನು? ಇಲ್ಲೇನು ಕೆಲಸ? ಕೊನೆಗೆ ಅವರ ಹೆಸರನ್ನು ಕರೆಯಲಾಯಿತು, ‘ಹಲ್ದಾರ್ ನಾಗ್’! ಸುಮ್ಮನೆ ಪ್ರಶಸ್ತಿ ಪಡೆಯಲು ಎದ್ದು ಬಂದ ಹಲ್ದಾರ್ ನಾಗ್, ಶಾಲು ಹೊದಿಸಬೇಕಾದರೆ ಕೈ ಮುಗಿದು ನಿಂತರು. ಮಾಧ್ಯಮದವರಿಗೆ ಕುತೂಹಲ ಶುರುವಾಗಿದ್ದು ಆಗ, ಯಾರು ಈತ? ಎಂದು. ಇವರ ಬಗ್ಗೆ ತಿಳಿದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಮೂರನೇ ಕ್ಲಾಸನ್ನೂ ಮುಗಿಸದ ಇವರು ದೊಡ್ಡ ಕವಿ. ಓಡಿಶಾದಲ್ಲಿ ಇವರನ್ನು ಗೊತ್ತಿರದವರೇ ಇಲ್ಲ. ಇವರನ್ನು ಇದುವರೆಗೂ 330 ಸಂಸ್ಥೆಗಳು ಸನ್ಮಾನಿಸಿವೆ. ಸಾಹಿತ್ಯ ಸೇವೆಗೆ
ಓಡಿಶಾ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಆದರೆ ‘ಯಾವುದನ್ನೂ ವಾಪಸ್ ಮಾಡಿಲ್ಲ’. ಇವರು ಬರೆಯುವ ಕಾವ್ಯಗಳೆಲ್ಲವೂ ‘ಹಲ್ದಾರ್ ಗ್ರಂಥಾವಳಿ’ ಎಂದೇ ಪ್ರಸಿದ್ಧ, ಹಲ್ದಾರ್ ಗ್ರಂಥಾವಳಿ-2 ಸಹ ಬಂದಿದೆ, ಒಂದೋ ಎರಡೋ? ಇವತ್ತು ಈ ಮಟ್ಟಕ್ಕೆ ಬರಲು ಅವರ ಶ್ರಮ ನಿಜಕ್ಕೂ ಮೆಚ್ಚುವಂಥದ್ದೇ. 10 ವರ್ಷವಿರುವಾಗಲೇ ಅಪ್ಪ ತೀರಿಕೊಂಡಿದ್ದರಿಂದ ಮೂರನೇ ಕ್ಲಾಸಲ್ಲಿ ಓದುವುದನ್ನು ಬಿಟ್ಟರು. ಮನೆಯಲ್ಲಿ ವಿಧವೆ ತಾಯಿ. ಕೆಲಸಕ್ಕೆ ಕಳಿಸಲು ಆಗುವುದಿಲ್ಲ.

ಪರಿಣಾಮ 10 ವರ್ಷದ ಹಲ್ದಾರ್‌ಗೆ ಸಿಕ್ಕಿದ್ದು ಮಿಠಾಯಿ ಅಂಗಡಿಯಲ್ಲಿ ಪಾತ್ರೆ ತೊಳೆಯುವ ಕೆಲಸ! ಹಲ್ದಾರ್‌ಗೆ ಕವಿಯಾಗುವ ಆಸೆ ಇತ್ತು. ಆದರೂ ಎರಡು ವರ್ಷ ಅಲ್ಲೇ ಪಾತ್ರೆ ತೊಳೆಯುತ್ತಾ ಇದ್ದರು. ಪಕ್ಕದಲ್ಲೇ ಒಂದು ಹೊಸ ಶಾಲೆ ನಿರ್ಮಾಣವಾದ್ದರಿಂದ ಅಡುಗೆ ಮಾಡಲು ಸೇರಿದರು. ಒಂದಲ್ಲ ಎರಡಲ್ಲ 16 ವರ್ಷ ಆಸೆಯನ್ನು ಅವಿತಿಟ್ಟುಕೊಂಡಿದ್ದರು. ಕೊನೆಗೆ ಇವರಿರುವ ಆ ಜಾಗದಲ್ಲಿ ಸುಮಾರು ಶಾಲೆಗಳು ಬಂದಿದ್ದರಿಂದ, ಅಲ್ಲಿ ಮಕ್ಕಳಿಗೆ ಉಪಯೋಗವಾಗುವಂಥ ಸ್ಟೇಷನರಿ ಅಂಗಡಿ ತೆರೆಯುವ ಯೋಜನೆ ಹೊಳೆಯಿತು. ಬ್ಯಾಂಕಲ್ಲಿ ಒಂದು ಸಾವಿರ ರೂಪಾಯಿ ಸಾಲ ಮಾಡಿ ಅಂಗಡಿ ತೆರೆದರು. ಅಲ್ಲಿ ಇವರು ವ್ಯಾಪಾರವಷ್ಟೇ ಮಾಡಲಿಲ್ಲ. ಅಲ್ಲಾದ ಮೊದಲ ಕೆಲಸವೇ ಕವಿತೆ ಬರೆಯುವುದು.

ಇವರು ಬರೆದ ಮೊದಲ ಕವಿತೆ ‘ಧೋಡೊ ಬರ್ಗಾಚ್’(ಹಳೆಯ ಆಲದ ಮರ)! ಮೂರನೇ ಕ್ಲಾಸಲ್ಲಿ ಓದು ನಿಲ್ಲಿಸಿದ ಇವರಿಗೆ ಕವಿತೆ ಜ್ಞಾನ ಎಲ್ಲಿಂದ ಬಂತು? ಬರೆಯುವುದಕ್ಕೆ ಬರುತ್ತಾ? ಈ ಜ್ಞಾನ ಎಲ್ಲಿಂದ ಬಂತೋ ಗೊತ್ತಿಲ್ಲ, ಆದರೆ ಹಲ್ದಾರ್‌ಗೆ ಬರೆಯುವುದಕ್ಕಂತೂ ಬರುವುದಿಲ್ಲ. ಇವರ ನೆನಪಿನ ಶಕ್ತಿ ಎಂಥದ್ದು ಎಂದರೆ ಇವರು ಏನು ಕವಿತೆ ಬರೆಯಬೇಕು ಎಂದುಕೊಂಡಿದ್ದರೋ ಅದಷ್ಟೂ ನೆನಪಿನಲ್ಲಿಟ್ಟುಕೊಳ್ಳುತ್ತಿದ್ದರು. ಕೊನೆಗೆ ಅಂಗಡಿಗೆ ಬರುವವರ ಬಳಿ ತಮ್ಮ ಕವಿತೆಯನ್ನು ಬರೆಸಿ, ಅದನ್ನು ಎತ್ತಿಟ್ಟುಕೊಳ್ಳುತ್ತಿದ್ದರು. 1990ರಲ್ಲಿ ಧೋಡೊ ಬರ್ಗಾಚ್ ಕವಿತೆ ಸ್ಥಳೀಯ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿತು. ಇದಾದ ನಂತರ ಸತತ ಮೂರು ಕವಿತೆಗಳನ್ನು ಪ್ರಕಟಿಸಿದರು. ಅಲ್ಲಿಂದ ಜನರಿಗೆ ಹಲ್ದಾರ್ ಯಾರೆಂದು ತಿಳಿಯಲು ಶುರುವಾಯಿತು.ನಂತರ, ಬರೆದ ಕವಿತೆ, ಕವನ, ಕಾವ್ಯಗಳೆಲ್ಲವೂ ಇತಿಹಾಸವೇ.

ಇದುವರೆಗೆ 20 ಕೃತಿಗಳನ್ನು ರಚಿಸಿದ್ದಾರೆ. ಓಡಿಶಾದಿಂದ ಹೊರಗೆ ಒಬ್ಬರಿಗೂ ಕೋಸಳಿ ಭಾಷೆಯ ಅರಿವಿರಲಿಲ್ಲ. ದಕ್ಷಿಣ ಭಾರತಕ್ಕಂತೂ ಅಂಥದ್ದೊಂದು ಭಾಷೆ ಇದೆ ಎಂಬುದೇ ಗೊತ್ತಿಲ್ಲ. ಉತ್ತರ ಭಾರತಕ್ಕೂ ಗೊತ್ತಿಲ್ಲ. ಆದರೆ ಇವತ್ತು ಎಲ್ಲರಿಗೂ ಕೋಸಳಿ ಭಾಷೆಯಲ್ಲಿ ಹಲ್ದಾರ್ ಏನು ಬರೆದಿದ್ದಾರೆ ಎಂಬ ಕುತೂಹಲಕ್ಕೆ ಅವಷ್ಟನ್ನೂ ಅನುವಾದಿಸಿ ಓದಿದ್ದಾರೆ. ಕೋಸಳಿ ಭಾಷೆಯ ಹಿರಿಮೆಯನ್ನು ಬರೆಯಲು ಬಾರದ ಒಬ್ಬ ಎತ್ತಿ ಹಿಡಿದಿದ್ದಾರೆ ಎಂದರೆ ಇನ್ನೇನು ಬೇಕು? ಮೂರನೇ ಕ್ಲಾಸೂ ಓದದ ಇವರ ಕವಿತೆಗಳ ಮೇಲೆ 5 ಜನರು ಪಿಎಚ್‌ಡಿ ಮಾಡಿದ್ದಾರೆ. ಇದನ್ನು ನೀವು ನಂಬಲೇ ಬೇಕು. ಇವರ ಈ ಕವಿತೆಗಳ ಸಾಧನೆಗೆ ‘ಲೋಕ ಕವಿ ರತ್ನ’ ಎಂಬ ಬಿರುದನ್ನು ನೀಡಿದೆ ಅಲ್ಲಿನ ಸರಕಾರ. ಜೀವನದಲ್ಲಿ ಕೆಟ್ಟ ಘಳಿಗೆಯನ್ನು ಕಂಡ ಇವರ ಜೀವನವೇ ಎಲ್ಲರಿಗೂ ಪಠ್ಯಪುಸ್ತಕದಲ್ಲಿ ಸಿಗಲಿದೆ. ಪ್ರತಿಷ್ಠಿತ ಸಂಬಲ್‌ಪುರ್ ವಿಶ್ವವಿದ್ಯಾಲಯವು ಇವರ ಕವಿತೆಗಳನ್ನು ತಮ್ಮ ಪಠ್ಯದಲ್ಲಿ ಅಳವಡಿಸಿಕೊಳ್ಳಲು ತೀರ್ಮಾನಿಸಿದೆ. ನೀವು ಎಲ್ಲ ಕವಿಗಳನ್ನು ಗಮನಿಸಿ… ಸಾಧಾರಣವಾಗಿ ವಾಚನದ ವೇಳೆ ಅವರು ತಾವು ಬರೆದಿರುವ ಪುಸ್ತಕವನ್ನು ತಂದು ಓದುತ್ತಾರೆ. ಮಧ್ಯದಲ್ಲಿ ಒಂದು ಹಾಳೆ ತಿರುವಿ ಹೋದರೂ ಕಂಗಾಲಾಗಿಬಿಡುತ್ತಾರೆ. ಆದರೆ, ಹಲ್ದಾರ್ ಮಾತ್ರ ಯಾವುದೇ ಕಾರ್ಯಕ್ರಮದಲ್ಲಿ ತನ್ನ ಕವಿತೆ ಓದುವಾಗ ಪುಸ್ತಕ, ಹಾಳೆ ಇಟ್ಟುಕೊಳ್ಳುವುದಿಲ್ಲ.

ಇವರು ಬರೆದಿರುವ ಅಷ್ಟೂ ಕವಿತೆಗಳು ಇವರ ಸ್ಮೃತಿಯಲ್ಲಿದೆ. ಹಲ್ದಾರ್ ನಾಗ್‌ರದ್ದು ಕೇವಲ ಆಸೆಯಲ್ಲ, ಅದು ತಪಸ್ಸು. ಪದ್ಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಇದನ್ನೆಲ್ಲ ತಿಳಿದುಕೊಂಡ ಪತ್ರಕರ್ತರು, ‘ನಿಮ್ಮ ತಂದೆ ತೀರಿಕೊಂಡಾಗ, ನಿಮಗೇನನಿಸಿತ್ತು?’ ಎಂಬ ರೆಗ್ಯುಲರ್ ಪ್ರಶ್ನೆ ಕೇಳಿದರು. ಅದಕ್ಕವರು ಉತ್ತರಿಸುತ್ತಾ, ‘ಇಲ್ಲ, ಸಾರ್… ನನಗೆ ಹೇಳುವುದಕ್ಕೆ ಬರಲ್ಲ. ಆದರೆ, ವಿಧವೆಯರ ಜೀವನ ಬಹಳ ಕಷ್ಟ..’ ಎಂದರು.

ಮಾಧ್ಯಮದವರ ಬಳಿ ಒಂದೇ ಒಂದು ಪ್ರಶ್ನೆ ಇರಲಿಲ್ಲ. ಆಸೆಗಳು ಮನುಷ್ಯನಲ್ಲಿದ್ದರೆ ಆತ ಎಷ್ಟು ವರ್ಷದ ತನಕವಾದರೂ ಕಾದು ಸಾಧನೆಗೈಯುತ್ತಾನೆ ಎನ್ನುವುದಕ್ಕೆ ಬಹಳಷ್ಟು ಉದಾಹರಣೆಗಳು ನಮ್ಮ ಕರ್ನಾಟಕದಲ್ಲೇ ಇದೆ. ಡಾ|| ರಾಜ್‌ಕುಮಾರ್ ಸಹ ಮೂರನೇ ಕ್ಲಾಸಲ್ಲೇ ಓದು ನಿಲ್ಲಿಸಿದವರು. ಡಾಕ್ಟರೇಟ್ ಪಡೆದರು. ಇಂದಿಗೂ ಇವರನ್ನು ಮರೆಯುವವರಿಲ್ಲ. ಅದೇ ಮೂರನೇ ಕ್ಲಾಸ್ ಓದಿದ ಹಲ್ದಾರ್ ನಾಗ್‌ರ ಕವಿತೆಗಳ ಬಗ್ಗೆ ಪಿಎಚ್.ಡಿ ವಿದ್ಯಾರ್ಥಿಗಳಿಂದ ಸಂಶೋಧನೆಗಳು ಇನ್ನೂ ನಡೆಯುತ್ತಿವೆ. ಇದಲ್ಲವೇ ಸಾಧನೆ ಎಂದರೆ… ಪಾತ್ರೆ ತೊಳೆಯುವ ಹಾದಿಯಿಂದ ಪದ್ಮಶ್ರೀ ರೆಡ್ ಕಾರ್ಪೆಟ್‌ವರೆಗೆ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya