ರಫಿ ಧ್ವನಿಯಲ್ಲಿ ಮಾಧುರ್ಯವಿತ್ತೇ ಹೊರತು ಧರ್ಮವಿರಲಿಲ್ಲ

Rafi_splash (1)
‘ಎ ಮೇರಾ ಪ್ರೇಮ್ ಪತ್ರ್ ಪಡಕರ್’, ‘ದುನಿಯಾ ನ ಭಾಯೆ ಮೋಹೆ’, ‘ಜಾನ್ ಸಖೇ ತೋ ಜಾನ್’ ಈ ಹಾಡುಗಳನ್ನ ಕೇಳಿದ್ದೀರಾ? ಮೊಹಮ್ಮದ್ ರಫಿಯವರ ಈ ಹಾಡು ಅದೆಷ್ಟು ಸುಮಧುರವಾಗಿದೆ ಎಂದರೆ ಅವರ ಧ್ವನಿಯನ್ನು ಕಣ್ಣು ಮುಚ್ಚಿಕೊಂಡು ಕೇಳಿದರೆ ನಾವೇ ಹಾಡುತ್ತಿದ್ದಂತೆ ಭಾಸವಾಗುತ್ತದೆ. ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಹೇಳಿ, ಮೊಹಮ್ಮದ್ ರಫಿಯವರ ಹಾಡು ಕೇಳುವಾಗ ನಿಮಗೆ ಎಲ್ಲಾದರೂ ಅವರ ಧರ್ಮ ನೆನಪಾಗಿತ್ತೇ? ಅಥವಾ ಅವರು ಮುಸ್ಲಿಮ್ ಆಗಿದ್ದಕ್ಕೆ ಅವರಿಗೆ ಸಿಗಬಹುದಾಗಿದ್ದ ಇನ್ನು ಹೆಚ್ಚು ಸ್ಥಾನ-ಮಾನ ತಪ್ಪಿ ಹೋಯ್ತು ಎಂಬ ಆಲೋಚನೆ ಬರುತ್ತದೋ? ಛೇ! ಮೊಹಮ್ಮದ್ ರಫಿ ಹಾಡು ಕೇಳುವಾಗ ಎಲ್ಲಾದರೂ ಧರ್ಮ ನೆನಪಾಗುವುದುಂಟಾ? ಎಂದು ನೀವು ಮೂಗು ಮುರಿದರೆ ಅದಕ್ಕೆ ನಾನು ಹೊಣೆಯಲ್ಲ. ಮೊಹಮ್ಮದ್ ರಫಿಯವರ ಮಗ ಶಾಹಿದ್ ರಫಿಯವರನ್ನು ಕೇಳಬೇಕು. ಫೆಬ್ರವರಿ 29ರಂದು ಶಾಹಿದ್ ರಫಿ ಮಾಧ್ಯಮದೊಂದಿಗೆ ಮಾತನಾಡುತ್ತಾ, ‘ನಾನು ನಮ್ಮ ತಂದೆಯವರಿಗೆ ಭಾರತ ರತ್ನ ಕೊಡಬೇಕೆಂದು ಮನವಿ ಮಾಡಿದ್ದೆ. ಆದರೆ ಅದು ಫಲಿಸಲಿಲ್ಲ.

ಬಹುಶಃ ನಮ್ಮ ತಂದೆ ಮುಸ್ಲಿಮ್ ಆಗಿದ್ದಕ್ಕೆ ಅವರಿಗೆ ಭಾರತ ರತ್ನ ಕೊಡಲಿಲ್ಲ. ನಮ್ಮ ತಂದೆಯೆಂಬ ಪ್ರೀತಿಗೆ ಹಾಗೆ ಕೇಳುತ್ತಿಲ್ಲ. ಆದರೆ ಅವರ ಅಸಂಖ್ಯಾತ ಅಭಿಮಾನಿಗಳು ಅವರಿಗೆ ಭಾರತ ರತ್ನ ಕೊಡಿ ಎಂದು ಕೇಳುತ್ತಿದ್ದಾರೆ’ ಎಂದಿದ್ದಾರೆ. ಇಂಥ ಮಾತಾಡಲು ಶಾಹಿದ್‌ಗೆ ಹೇಗಾದರೂ ಮನಸ್ಸು ಬಂತು? ಒಂದು ಕಾಮನ್ ಸೆನ್ಸ್ ಇಲ್ಲವಾ ಇವರಿಗೆ? ಅದೇ ಅಸಂಖ್ಯಾತ ಅಭಿಮಾನಿಗಳಲ್ಲಿ ನಾನೂ ಒಬ್ಬ. ಆದರೆ ಮೊಹಮ್ಮದ್ ರಫಿಗೆ ಯಾವುದೋ ಪ್ರಶಸ್ತಿ ಸಿಗಬೇಕು ಎಂದೋ, ಅವರಿಗೆ ಯಾರೋ ಕರೆದು ಸನ್ಮಾನ ಮಾಡಬೇಕು ಎಂದು ನನಗೆ ಅನಿಸಿಯೇ ಇಲ್ಲ. ಏಕೆಂದರೆ ಅವರು ಆ ಪ್ರಶಸ್ತಿ, ಪುರಸ್ಕಾರಗಳಿಗಿಂತ ಎಷ್ಟೋ ಎತ್ತರದಲ್ಲಿದ್ದಾರೆ. ನಮ್ಮಲ್ಲಿ ವ್ಯಂಗ್ಯವಾಗಿ ಒಂದು ಮಾತನಾಡುತ್ತಾರೆ. ‘ಸೂರ್ಯಂಗೇ Torch ಆ?’ ಎಂದು. ಹೇಗೆ ಸೂರ್ಯನಿಗೆ ಬೆಳಕು ಬಿಡಬೇಕು ಎಂದು ಯಾರಾದರೂ ಹೇಳಿದರೆ ನಗು ಬರುತ್ತದೆಯೋ, ಅದೇ ರೀತಿ ಮೊಹಮ್ಮದ್ ರಫಿಗೆ ಪ್ರಶಸ್ತಿ, ಪುರಸ್ಕಾರಗಳು ಬರಬೇಕು ಎಂದರೆ ನಿಜಕ್ಕೂ ಹಾಸ್ಯಾಸ್ಪದ ಎನಿಸುತ್ತದೆ. ಹಾಗೆಂದು ಅವರಿಗೆ ಸ್ಥಾನ ಮಾನ ಕೊಡಲೇಬಾರದು ಎಂದಲ್ಲ, ಇನ್ಯಾವುದಾದರೂ ಮಾರ್ಗ ಹುಡುಕಬಹುದಿತ್ತು.

ಸಂಗೀತದಲ್ಲಿ ಅಪ್ರತಿಮ ಸಾಧನೆ ಮಾಡಿದವರಿಗೆ ‘ಮೊಹಮ್ಮದ್ ರಫಿ’ ಹೆಸರಲ್ಲೇ ಪ್ರಶಸ್ತಿ ಕೊಡಿ. ‘ಮೊಹಮ್ಮದ್ ರಫಿ’ ಪ್ರಶಸ್ತಿ ತೆಗೆದುಕೊಳ್ಳುವುದೆಂದರೆ ಸಂಗೀತಗಾರರಿಗೆ ಜೀವನದ ಪರಮೋಚ್ಛ ಗುರಿಯಾಗುವಂತೆ ಮಾಡಬೇಕು. ಅದನ್ನು ಬಿಟ್ಟು ಏನೋ ಪ್ರಶಸ್ತಿ ಕೊಡಿ ಎಂದು ದುಂಬಾಲು ಬಿದ್ದರೆ ಹೇಗೆ? ಶಾಹಿದ್‌ರ ಈ ಒಂದು ಮಾತು ಎಷ್ಟೋ ರಫಿ ಅಭಿಮಾನಿಗಳಿಗೆ ನೋವುಂಟು ಮಾಡಿರುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಸಂಗೀತಕ್ಕೆ ಶ್ರುತಿಯೇ ತಾಯಿ, ಲಯವೇ ತಂದೆ. ಇದಕ್ಕೆ ಧರ್ಮದ ಪರಿಧಿಯಿಲ್ಲ. ಸಿ. ಅಶ್ವತ್ಥ್ ಹಾಡುವ ‘ತರವಲ್ಲ ತಗಿ ನಿನ್ನ ತಂಬೂರಿ ಸ್ವರ’ ಎಂಬ ಹಾಡಿನಲ್ಲಿ ಒಂದು ಸಾಲು ಇದೆ- ‘ಸಿದ್ಧ ಸಾಧಕರ ವಿದ್ಯೆಗೆ ಒದಗುವ, ಬುದ್ಧಿವಂತಕೆ ತಕ್ಕ ತಂಬೂರಿ’ ಎಂಬಂತೆ ಸಂಗೀತ ಕೇವಲ ಸಾಧಕರ ಸೊತ್ತು. ಸಂಗೀತಕ್ಕಿಲ್ಲದ ಧರ್ಮಭೇದ ಮನುಷ್ಯನಿಗೇಕೆ? ರಫಿ ಕೇವಲ ಸಿನಿಮಾ ಹಾಡುಗಳು, ಭಾವಗೀತೆಯೋ ಇನ್ಯಾವುದೋ ಅಷ್ಟೇ ಹಾಡಿ ಹೋಗಲಿಲ್ಲ. ಭಜನೆಗಳನ್ನೂ ಹಾಡಿದ್ದಾರೆ, ಭಕ್ತಿಗೀತೆಗಳನ್ನೂ ಹಾಡಿದ್ದಾರೆ. ಇದು ಸಂಗೀತಕ್ಕೆ ಕೊಡುವ ಮರ್ಯಾದೆ. ನಾನು ಈ ಎರಡು ವರ್ಷದ ಹಿಂದೆ ಒಮ್ಮೆ ಖ್ಯಾತ ಹಿಂದೂಸ್ಥಾನಿ ಶಾಸೀಯ ಸಂಗೀತದ ಗಾಯಕ ಉಸ್ತಾದ್ ಫಯಾಜ್ ಖಾನ್‌ರವರನ್ನು ಸಂದರ್ಶಿಸಿದ್ದೆ. ಅವರು ಹಾಡುವಾಗ ಅದೆಷ್ಟು ಮಗ್ನರಾಗಿ ಹೋಗುತ್ತಿದ್ದರು ಎಂದರೆ ವಿಠಲಾ ಎಂದು ಕೊನೆಯಲ್ಲಿ ಶ್ರುತಿಯ ತುತ್ತತುದಿಯಲ್ಲಿ ಹಾಡುವಾಗ, ಸಾಕ್ಷಾತ್ ವಿಠಲನೇ ಇನ್ನೇನು ಪ್ರತ್ಯಕ್ಷವಾಗಬಹುದು ಎನಿಸುತ್ತಿತ್ತು. ‘ಹೇಗೆ ಸಾರ್, ನೀವೊಬ್ಬ ಮುಸಲ್ಮಾನರಾಗಿ ವಿಠಲಾ ಎಂದು ಅಷ್ಟು ಅನುಭವಿಸಿ ಹಾಡುತ್ತೀರಲ್ಲ?’ ಎಂದೆ.

ಅದಕ್ಕೆ ಅವರು – ‘ನನಗೆ ಸಂಗೀತವೇ ದೇವರು.ನನಗೆ ಇಲ್ಲಿ ಧರ್ಮ ನೋಡಿ ಭಾವನೆ ಕೊಡಲು ಬರುವುದಿಲ್ಲ’ ಎಂದುಬಿಟ್ಟರು. ಫಯಾಜ್ ಖಾನ್‌ರವರ ಕಾರು ಅಪಘಾತವಾಗಿದ್ದರಿಂದ ಸ್ಥಳದಲ್ಲೇ ಅವರ ಪತ್ನಿ ಪ್ರಾಣಬಿಟ್ಟರು. ಇವರ ಕಾಲು ಮುರಿದು ಹೋಗಿತ್ತು. ಆಗ ಆಪರೇಷನ್ ಮತ್ತು ಇತರ ಖರ್ಚನ್ನು ನಿಭಾಯಿಸಲು, ಜನರಿಂದಲೇ ಚಂದಾ ಎತ್ತಲು ಅವರ ಅಭಿಮಾನಿಗಳೆಲ್ಲ ಸೇರಿ ಒಂದು ಸಂಗೀತ ಕಾರ್ಯಕ್ರಮ ಮಾಡಿಸಿದ್ದರು. ಜನರೆಲ್ಲ ಸೇರಿ ಅವರನ್ನು ಎತ್ತಿಕೊಂಡು ಬಂದು ಸ್ಟೇಜಲ್ಲಿ ವೀಲ್ ಚೇರ್ ಮೇಲೆ ಕೂರಿಸಿದರು. ಕುಂತಲ್ಲೇ ಹಾಡಲು ಶುರು ಮಾಡಿಕೊಂಡರು ಫಯಾಜ್ ಖಾನ್. ಅವರ ಹಾಡು ಮುಗಿಯುವಷ್ಟರಲ್ಲಿ ಆ ಸಭಾಂಗಣದಲ್ಲಿ ಪ್ರತಿಯೊಬ್ಬರ ಕಣ್ಣಲ್ಲೂ ನೀರಿತ್ತು. ಛೇ! ಫಯಾಜ್ ಖಾನ್‌ಗೆ ಹೀಗಾಗೋಯ್ತಲ್ಲ ಎಂದುಕೊಂಡರು. ಎಲ್ಲರೂ ತಮ್ಮ ಶಕ್ತಿಗನುಸಾರವಾಗಿ ಹಣ ಕೊಟ್ಟರು. ನೀವು ನಂಬುವುದಿಲ್ಲ, ಲಕ್ಷ ಮುಟ್ಟುವುದಕ್ಕೆ 5 ಸಾವಿರ ಕಡಿಮೆಯಿರುವಷ್ಟು ಹಣ ಕೇವಲ 10 ನಿಮಿಷದಲ್ಲಿ ಸಂಗ್ರಹವಾಯಿತು. ಇಲ್ಲಿ ಉಸ್ತಾದ್‌ರನ್ನು ತಂದು ಕೂರಿಸಿದವರೂ ಅಯ್ಯೋ ಇವರು ಮುಸಲ್ಮಾನರು ಎಂದು ಆಲೋಚಿಸಲಿಲ್ಲ. ಕಣ್ಣೀರಿಟ್ಟ ಜನರು, ದಾನ ಮಾಡಿದ ಜನರು ಯಾರು ಸಹ ಫಯಾಜ್ ಖಾನ್ ಧರ್ಮ ಯಾವುದು ಎಂದು ಕೇಳಲಿಲ್ಲ. ಜನರಿಗೆ ಬೇಕಾದ್ದು -ಯಾಜ್ ಖಾನ್ ಮತ್ತು ಅವರ ಹಾಡು. ಹೀಗಿರುವಾಗ ಶಾಹಿದ್ ರಫಿ ತಮ್ಮ ತಂದೆಯನ್ನು ಮುಸಲ್ಮಾನ ಎಂದು ಪ್ರಶಸ್ತಿ ಕೊಡಲಿಲ್ಲ ಎಂದು ತಲೆಯಿಲ್ಲದವರ ಹಾಗೆ ಹೇಳಿಕೆ ನೀಡಲು ಹೇಗೆ ಸಾಧ್ಯ? ಹೀಗೆ ಧರ್ಮದ ಹೆಸರಿನಲ್ಲಿ ಆಟವಾಡುತ್ತಿರುವ ಇವರ ಆತ್ಮಸಾಕ್ಷಿ ಕಾಡುವುದಿಲ್ಲವೇ? ಸೆಲೆಬ್ರಿಟಿ ಯಾವುದೇ ಕ್ಷೇತ್ರದಲ್ಲಿರಲಿ, ಜನರಿಗೆ ಬೇಕಾಗಿರುವುದು ಆ ವ್ಯಕ್ತಿಯೇ ಹೊರತು ಅವರ ಧರ್ಮವಲ್ಲ. ಉದಾಹರಣೆಗೆ ಏಸುದಾಸ್. ಅವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು.

ಎಷ್ಟೋ ಜನರಿಗೆ ಕೆಲ ಆಯ್ದ ದೇವರನಾಮಗಳು ಏಸುದಾಸ್ ಹಾಡಿದರೆ ಮಾತ್ರ ಸಮಾಧಾನ. ಅಯ್ಯಪ್ಪ ಸ್ವಾಮಿಯ ಬಗ್ಗೆ ಹಾಡಿದ ‘ಹರಿವರಾಸನಂ ವಿಶ್ವಮೋಹನಂ’ ಎಂಬ ಹಾಡನ್ನು ಬೇರೆ ಯಾರೇ ಹಾಡಿದರೂ ಅಷ್ಟು ಇಷ್ಟಪಡುವುದಿಲ್ಲ. ಯಾರೊಬ್ಬರೂ ಸಹ ಏಸುದಾಸ್ ದೇವರನಾಮಗಳನ್ನು ಹಾಡುತ್ತಾರೆ ಎಂದು ಆರೋಪಿಸಿಲ್ಲ. ಅಥವಾ ದೇವರನಾಮ ಹಾಡಿದ್ದಕ್ಕೆ ಇವರಿಗೆ ಪ್ರಶಸ್ತಿ ಕೊಡಬೇಕು ಎಂದು ಹೋರಾಟ ಮಾಡಿಲ್ಲ. ಇದು ಸಂಗೀತಕ್ಕಿರುವ ಶಕ್ತಿ.ಉಸ್ತಾದ್ ಜಾಕಿರ್ ಹುಸೇನ್ ತಬಲಾದಲ್ಲಿ ಮಾಡಿರುವಷ್ಟು ಸಾಧನೆ ಅಂತಾರಾಷ್ಟ್ರೀಯ ಮಟ್ಟದಲ್ಲೇ ಯಾರೂ ಮಾಡಿಲ್ಲ ಎಂದರೆ ತಪ್ಪಾಗಲಾರದು. ತಬಲಾ ಎಂದರೆ ನೆನಪಾಗುವುದು ಜಾಕಿರ್ ಭಾಯ್. ಸರೋದ್ ಎಂದರೆ ಅಮ್ಜದ್ ಅಲಿ ಖಾನ್. ಇನ್ನು ಅವರ ಮಕ್ಕಳು ಅಯಾನ್ ಅಲಿ ಖಾನ್, ಅಮನ್ ಅಲಿ ಖಾನ್ ಮುಂದಿನ ಪೀಳಿಗೆಗೆ ಆದರ್ಶವಾಗಲಿದ್ದಾರೆ. ಹಿಂದಿಯಲ್ಲಿ ಒಂದು ಪ್ರಖ್ಯಾತ ಹಾಡಿದೆ. ‘ಆಜ್ ಜಾನೇಕಿ ಜಿದ್ ನಾ ಕರೋ’ ಎಂದು. ಇದು ಫರೀದಾ ಖಾನುಮ್ ಹಾಡಿದ್ದು. ಈಗ ಅವರಿಗೆ ಹಾಡಲಾರದಷ್ಟು ವಯಸ್ಸಾಗಿದೆ, ಆದರೆ ಹಾಡುವ ಹುಮ್ಮಸ್ಸು ಹೋಗಿಲ್ಲ. ಜನರು ಇವರಿಗೆ ಪ್ರಶಸ್ತಿ ಕೊಡಿ ಎಂದು ಕೇಳಿಲ್ಲ. ಬದಲಿಗೆ ಅವರ ಧ್ವನಿಯಲ್ಲಿ ಒಂದು ಬಾರಿ ‘ಆಜ್ ಜಾನೇಕಿ’ ಕೇಳಬೇಕು ಎಂದು ಬೇಡಿಕೆಯಿಟ್ಟರು. 2015ರಲ್ಲಿ ಎಮ್‌ಟಿವಿಯ ‘ಕೋಕ್ ಸ್ಟುಡಿಯೋ’ ಕಾರ್ಯಕ್ರಮದಲ್ಲಿ ಎ.ಆರ್. ರೆಹಮಾನ್, -ರೀದಾ ಖಾನುಮ್ ಬಳಿ ಜನರು ಡಿಮ್ಯಾಂಡ್ ಮಾಡುತ್ತಿದ್ದ ಹಾಡನ್ನು ಹಾಡಿಸಿದ್ದರು.

ಆಕೆ ಹಾಡುವಾಗ ತಡವರಿಸುತ್ತಿದ್ದರು, ಉಸಿರುಗಟ್ಟುತ್ತಿತ್ತು. ಆದರೂ ಜನರಿಗಾಗಿ ಹಾಡಿದರು. ಈ ವೀಡಿಯೋವನ್ನು ನೋಡಿ ಜನರು ಕಣ್ಣೀರಿಟ್ಟಿದ್ದಾರೆ. ಸಾರ್ಥಕತೆ ಪಡೆದುಕೊಂಡಿದ್ದಾರೆ. ‘ಫರೀದಾ ಜೀ ಅಷ್ಟು ಉಸಿರು ಕಟ್ಟುತ್ತಿದ್ದರೂ ನೀವು ನಮಗಾಗಿ ಹಾಡಿದ್ದೀರಿ… ನಿಮ್ಮನ್ನು ನಾವು ಇನ್ಯಾವತ್ತೂ ಮರೆಯುವುದಿಲ್ಲ’ ಎಂದು ಹಾರೈಸಿದ್ದಾರೆ. -ರೀದಾ ಖಾನುಮ್‌ಗೆ ಇದಕ್ಕಿಂತ ಹೆಚ್ಚೇನು ಬೇಕು? ಪ್ರಶಸ್ತಿ ಕೊಟ್ಟರೆ ಅವರಿಗೆ ಇಷ್ಟು ಖುಷಿಯಾಗುತ್ತಿತ್ತೇ? ಇಲ್ಲಿ ಪ್ರಶಸ್ತಿ ಪುರಸ್ಕಾರಗಳು ಕೊಡಲೇ ಬಾರದು ಎನ್ನುವುದು ನನ್ನ ವಾದವಲ್ಲ. ಆದರೆ, ಅದಕ್ಕಾಗಿಯೇ ಮಾಧ್ಯಮಗಳಲ್ಲಿ ಅಥವಾ ಇನ್ನೆಲ್ಲೋ ಪ್ರತಿಭಟಿಸುವುದು ತಪ್ಪು. ಅದು ಅಸಹ್ಯ ಹುಟ್ಟಿಸುವಂಥ ಕೆಲಸ. ಎ.ಆರ್. ರೆಹಮಾನ್ ಮೊದಲು ಹಿಂದೂವಾಗಿದ್ದವರು ಇಸ್ಲಾಂಗೆ ಮತಾಂತರವಾದರು. ಆದರೆ, ಅವರನ್ನು ಇಂದಿನ ಪೀಳಿಗೆಯ ಯುವಕರು, ಸಂಗೀತಗಾರರೆಲ್ಲರೂ ಸಂಗೀತದ ದೇವರು ಎಂದೇ ಪರಿಗಣಿಸುತ್ತಾರೆ. ಒಂದು ಕಾಲದಲ್ಲಿ ಕನ್ನಡದ ಬೆಳ್ಳಿತೆರೆಯನ್ನು ಆಳಿದ ಲೀಲಾವತಿಯವರು ಕ್ರಿಶ್ಚಿಯನ್ ಧರ್ಮದವರು ಎಂದು ಇವತ್ತಿಗೂ ಎಷ್ಟೋ ಜನರಿಗೆ ಗೊತ್ತೇ ಇಲ್ಲ.

ಈಗ ಲೇಖನ ಓದಿಯೂ ಹೌದಾ? ಎಂದು ಉದ್ಘರಿಸುವವರಿದ್ದಾರೆ. ಟೈಗರ್ ಪ್ರಭಾಕರ್ ಕ್ರಿಶ್ಚಿಯನ್ ಆಗಿದ್ದಕ್ಕಾಗೇ ಅವರಿಗೆ ಕನ್ನಡ ಚಿತ್ರೋದ್ಯಮ ದಲ್ಲಿ ಬೆಳೆಯಲು ಬಿಟ್ಟಿಲ್ಲ ಎಂದು ಅವರ ಮಗ ವಿನೋದ್ ಪ್ರಭಾಕರ್ ಮಾಧ್ಯಮಕ್ಕೆ ಹೇಳಿದ್ದರು. ಅಷ್ಟಕ್ಕೂ ವಿನೋದ್ ಹೇಳುವ ತನಕ ಎಷ್ಟೋ ಜನರಿಗೆ ಟೈಗರ್ ಪ್ರಭಾಕರ್ ಕ್ರಿಶ್ಚಿಯನ್ ಎಂದೇ ಗೊತ್ತಿರಲಿಲ್ಲ. ಆದರೆ ಈಗಲೂ ಯಾವುದೇ ಕನ್ನಡಿಗನಿಗೂ ಟೈಗರ್ ಪ್ರಭಾಕರ್ ಯಾರೆಂದು ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಹೀಗಿರುವಾಗ ಇವರು ತಮ್ಮ ಹಿತಾಸಕ್ತಿಗಾಗಿ ಅವರ ಹಿರಿಯರ/ ತಂದೆ-ತಾಯಿಯರ ಹೆಸರು ಹಾಳು ಮಾಡುವುದೇಕೆ? ನನ್ನ ಪ್ರಕಾರ ಮೊಹಮ್ಮದ್ ರಫಿ ಯಾವತ್ತೂ ತನಗೆ ಮುಂದೊಂದು ದಿನ ಪ್ರಶಸ್ತಿ ಬರುತ್ತದೆಯೆಂದು ಹಾಡಿದವರಲ್ಲ. ಒಂದೇ ಒಂದು ದಿನ ತಾನು ಇಷ್ಟು ಸಾಧನೆ ಮಾಡಿದ್ದೇನೆ, ಎಂದೆಲ್ಲ ಹೇಳಿಕೊಂಡವರಲ್ಲ. ಕೋಗಿಲೆ ಅದರ ಕರ್ತವ್ಯ ಮರೆಯದೇ ಹಾಡಿದಂತೆ, ರಫಿ ಅವರ ಪಾಡಿಗೆ ಅವರು ಹಾಡುತ್ತಾ ಇದ್ದರು. ಅದಕ್ಕೆ ಅವರ ಹಾಡು ಇವತ್ತಿಗೂ ಹಸಿರಾಗಿರುವುದು. ಆದರೆ ರಫಿಗೆ ಪ್ರಶಸ್ತಿ ಕೊಡಬೇಕು ಎಂದು ಕೇಳುತ್ತಿರುವವರು ಧರ್ಮದ ಹೆಸರು ಹೇಳುತ್ತಾ ಹೀಗೆ ಮಾತನಾಡುವುದು ನಿಜಕ್ಕೂ ಒಪ್ಪಲಾಗುವುದಿಲ್ಲ. ‘ಎದೆ ತುಂಬಿ ಹಾಡಿದೆನು’ ಹಾಡಿನಲ್ಲಿ ಒಂದು ಸಾಲಿದೆ, ‘ಯಾರು ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ, ಕರ್ಮ ನನಗೆ’. ರಫಿಯವರು ಸಹ ಹೀಗೆಯೇ ಇದ್ದವರು ಸ್ವಾಮಿ. ಈಗ ನೀವೇ ಹೇಳಿ, ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya