‘ನಿತ್ಯಾನಂದ’ ಪಡೆಯುವವರಿಗೇನು ಗೊತ್ತು ಯೋಧರ ಬೆಲೆ?

1x-e1455913291944

ಗಂಗಾದೇವಿ ವಿರಚಿತ ಮಧುರಾವಿಜಯಮ್‌ನಲ್ಲಿ ಒಂದು ಸನ್ನಿವೇಶವಿದೆ. ಅದರಲ್ಲಿ ಆಜನ್ಮ ಶತ್ರುಗಳಂತೆ ಹೋರಾಡುತ್ತಿದ್ದ ಸೈನಿಕರಿಬ್ಬರೂ ಒಮ್ಮೆಲೆ ಬಾಣ ಪ್ರಯೋಗಿಸುತ್ತಾರೆ. ಇಬ್ಬರ ಗುರಿಯೂ ತಪ್ಪುವುದಿಲ್ಲ. ಕೊನೆಗೆ ಇಬ್ಬರೂ ವೀರ ಮರಣವನ್ನಪ್ಪುತ್ತಾರೆ. ಅವರ ಆತ್ಮಗಳು ಸ್ವರ್ಗಕ್ಕೆ ಹೋಗುವಾಗ ತಮ್ಮ ಶತ್ರುತ್ವವನ್ನು ಮರೆತು ಒಬ್ಬರನ್ನೊಬ್ಬರು ಅಭಿನಂದಿಸಿಕೊಳ್ಳುತ್ತಾರೆ. ಇಲ್ಲಿ ಸೈನಿಕರು ವೀರ ಮರಣವನ್ನಪ್ಪುತ್ತಾರೆ ಎಂದಿದೆ. ಸ್ವರ್ಗಕ್ಕೆ ಹೋಗುತ್ತಾರೆ ಎಂದಿದೆ. ಹೌದು ಒಬ್ಬ ಯೋಧ ಹೋರಾಡಿ ಸತ್ತರೆ ಅದಕ್ಕೆ ವೀರ ಮರಣವನ್ನೇ ಹೊಂದುವುದು ಮತ್ತು ಅವರು ಸ್ವರ್ಗಕ್ಕೇ ಹೋಗುವುದು. ಆದರೆ ಒಂದು ಕಾಲದಲ್ಲಿ ಬಹಳವೇ ಫೇಮಸ್ ಆಗಿದ್ದ ನಿತ್ಯಾನಂದ ಸ್ವಾಮಿಯ ಪ್ರಕಾರ ಯೋಧರು ಹೋರಾಡಿ ಸತ್ತರೆ ಅಂಥವರಿಗೆ ನರಕ ಪ್ರಾಪ್ತಿಯಾಗುತ್ತದೆಯಂತೆ. ಒಬ್ಬ ಯೋಧನ ಬಗ್ಗೆ ಸಂನ್ಯಾಸಿಗಳು ಆಡುವ ಮಾತೇ ಇದು? ಒಮ್ಮೆ ಈ ನಿತ್ಯಾನಂದ ಹೇಳುವ ಹಾಗೆ ಯೋಧರು ನರಕಕ್ಕೆ ಹೋಗುತ್ತಾರೆ ಎಂದಾದರೆ, ಹಾಗೆಂದು ಯಾವ ವೇದ, ಶಾಸ್ತ್ರ, ಪುರಾಣಗಳಲ್ಲಿ ಉಲ್ಲೇಖವಿದೆ? ಅಸಲಿಗೆ ಬಾಯಿಗೆ ಬಂದ ಹಾಗೆ ಯೋಧರ ಬಗ್ಗೆ ಮಾತನಾಡಲು ನಿತ್ಯಾನಂದ ಯಾವ ಸೀಮೆ ದೊಣ್ಣೆ ನಾಯಕ? ಗರುಡ ಪುರಾಣದ ‘ಚತುರ್ಥೋಧ್ಯಾಯದ ನರಕಪ್ರದ ಪಾಪ ನಿರೂಪಣಮ್’ನಲ್ಲಿ ಯಾವನು ಜನರನ್ನು ತಾನು ಸಾತ್ವಿಕ ವ್ಯಕ್ತಿಯೆಂದು ನಂಬಿಸಿ ಜನರಿಗೆ ಸುಳ್ಳು ಹೇಳುತ್ತಾನೋ ಅಥವಾ ಜನರ ನಂಬಿಕೆಗೆ ಮೋಸ ಮಾಡುತ್ತಾನೋ ಅವನು ನರಕದಲ್ಲಿ ಬೀಳುತ್ತಾನೆ ಮತ್ತು ಅಂಥವನು ನರಕದಲ್ಲಿ ನೀರು ಕೇಳಿದರೆ ಯಮ ಕಿಂಕರರು ಕುದಿಯುವ ಎಣ್ಣೆ ಕೊಟ್ಟು ಕರುಳನ್ನು ಸುಡುತ್ತಾರೆ ಎಂದಿದೆ. ಹೀಗೆ ನಾಲ್ಕು ಜನರು ನಿಮ್ಮನ್ನು ಪೂಜಿಸುವ ಸ್ಥಾನದಲ್ಲಿದ್ದುಕೊಂಡು ಯೋಧರ ಬಗ್ಗೆ ಯಾವ ಆಧಾರವೂ ಇಲ್ಲದೆ ಸುಳ್ಳು ಹೇಳಿದ ನೀವು ಎಲ್ಲಿಗೆ ಹೋಗುತ್ತೀರಾ?

ನಿತ್ಯಾನಂದರಿಗೆ ಬಹುಶಃ ಪಾಪ ಪುಣ್ಯಗಳ ಬಗ್ಗೆ ಸ್ಪಷ್ಟ ಅರಿವಿಲ್ಲವೆನಿಸುತ್ತದೆ. ಅದಕ್ಕೆ ಅವರಿಗೆ ಕೆಲ ಉದಾಹರಣೆಗಳನ್ನು ಕೊಡಲೇ ಬೇಕು. ಮನುಸ್ಮತಿ 8ನೇ ಅಧ್ಯಾಯದ 352ನೇ ಶ್ಲೋಕದ ಪ್ರಕಾರ ಯಾರು ಇತರ ಸ್ತ್ರೀಯರನ್ನು ಅತ್ಯಾಚಾರ ಮಾಡುತ್ತಾರೋ, ಕಿರುಕುಳ ಕೊಡುತ್ತಾರೋ ಅವರೆಲ್ಲರಿಗೂ ನರಕ ಪ್ರಾಪ್ತಿಯಾಗುತ್ತದೆ ಎಂದಿದೆ. ಭವಿಷ್ಯೋತ್ತರ ಪುರಾಣದಲ್ಲಿ ಬ್ರಾಹ್ಮಣನಾದ ಆಕಾಶರಾಜ ಮಾಧವನಾಗಿದ್ದಾಗ ನೀಲಕುಂತಲೆ ಎಂಬುವ ಚಾಂಡಾಲ ಸ್ತ್ರೀಯನ್ನು ಕಾಮಿಸುತ್ತಾನೆ. ‘ನನ್ನ ಕಾಮವನ್ನು ತಣಿಸು’ ಎಂದು ದುಂಬಾಲು ಬಿದ್ದಾಗ ಆಕೆ ಹೇಳುತ್ತಾಳೆ, ನೀನು ವೇದ, ಶಾಸ್ತ್ರಗಳನ್ನು ಓದಿದ್ದೀಯ, ‘ನಾನು ಪರಸ್ತ್ರಿ. ನನ್ನನ್ನು ನೀನು ಕಾಮಿಸಿದರೆ ನಿನಗೆ ನರಕ ಪ್ರಾಪ್ತವಾಗುತ್ತದೆ’ ಎಂದು ಹೇಳಿದರೂ ಮಾಧವ ಕಾಮಾಂಧನಾಗಿ ಅವಳ ಸಂಪರ್ಕ ಹೊಂದುತ್ತಾನೆ. ಪಾಪಗ್ರಸ್ಥನಾಗುತ್ತಾನೆ. ಇನ್ನು ಗರುಡ ಪುರಾಣದ ಚತುರ್ಥೋಧ್ಯಾಯದಲ್ಲೂ ಪರಸ್ತ್ರಿ ಸಂಗ ಮಾಡಿದರೆ ನರಕಕ್ಕೆ ಬೀಳುತ್ತಾನೆ ಎಂದಿದೆಯೇ ಹೊರತು ದೇಶಕ್ಕಾಗಿ ಬಡಿದಾಡಿ ಸತ್ತರೆ ನರಕ ಎಂದು ಎಲ್ಲೂ ಹೇಳಿಲ್ಲ. ಬಹುಶಃ ನಿತ್ಯಾನಂದರು ಇದನ್ನ ಸರಿಯಾಗಿ ಅರ್ಥೈಸಿಕೊಳ್ಳುವ ಅಗತ್ಯವಿದೆ. ಪಾಪ ಪುಣ್ಯದ ಲೆಕ್ಕಾಚಾರ ಯಾರಿಗೆ ಹೇಳಿಕೊಡುತ್ತೀರ ನಿತ್ಯಾನಂದರೇ?

ವಿಶ್ವವಾಣಿಯ ಸಹ ಸಂಪಾದಕ ಅಜಿತ್ ಹನಮಕ್ಕನವರ್ ಮೊದಲು ಸುವರ್ಣ ನ್ಯೂಸ್‌ನಲ್ಲಿದ್ದಾಗ, ನಿಮ್ಮ ಆಶ್ರಮಕ್ಕೆ ಕರ್ತವ್ಯದ ಮೇಲೆ ಬಂದಾಗ ಅವರು ಸಾವಧಾನದಿಂದ ಕೇಳಿದ ಒಂದು ಪ್ರಶ್ನೆಗೆ ನಿಮ್ಮ ಶಿಷ್ಯಂದಿರು ಅವರ ಮೇಲೆ ಹಲ್ಲೆ ಮಾಡಿದರಲ್ಲ, ಅದು ನರಕ್ಕಕ್ಕೆ ದೂಡುವಂಥ ಪಾಪ ನಿತ್ಯಾನಂದರೇ, ಯೋಧನಾಗಿ ವೀರ ಮರಣವನ್ನಪ್ಪುವುದಲ್ಲ. ಅಸಲಿಗೆ ಸಂನ್ಯಾಸಿಗೂ ಸೈನಿಕನಿಗೂ ಎಲ್ಲಿಂದೆಲ್ಲಿಯ ಸಂಬಂಧ? ಯೋಧರ ಬಗ್ಗೆ ಮಾತನಾಡಲು ನೀವೇನು ಗಡಿಯಲ್ಲಿ ಗನ್ ಹಿಡಿದು ಶತ್ರುಗಳಿಗಾಗಿ ಕಾದಿದ್ದೀರಾ? ನಿಮ್ಮ ಮೇಲೆ ಕೇಸ್ ಹಾಕಿದಾಗ ಹಿಮಾಲಯಕ್ಕೆ ಓಡಿ ಹೋಗಿದ್ದ ನೀವು ಎಂದಾದರೂ ಪಕ್ಕದಲ್ಲಿರುವ ಸಿಯಾಚಿನ್‌ಗೆ ಹೋಗಿದ್ದೀರಾ? ಬಿಡದಿಯ ಆಶ್ರಮದಲ್ಲಿ ಪಲ್ಲಂಗದ ಮೇಲೆ ಪವಡಿಸುತ್ತಾ ಹೇಳಿಕೆ ಕೊಡುವ ನೀವು ಯಾವತ್ತಾದರೂ ಯೋಧರ ಕಷ್ಟ ನೋಡಿದ್ದೀರಾ? ಇವತ್ತು ನಿಮ್ಮ ಆಶ್ರಮ ಸುಭದ್ರವಾಗಿದೆಯೆಂದರೆ ಅದಕ್ಕೆ ಕಾರಣ ಪ್ರಾಣ ತೆತ್ತ ಯೋಧರೇ ಹೊರತು ಯಾವ ನಿಮ್ಮ ಜತೆಗಿರುವ ಶಿಷ್ಯೆಯರಲ್ಲ. ನೀವು ಶಿವನ ಹಾಗೆ ವೇಷ ಧರಿಸಿ ತ್ರಿಶೂಲ ಹಿಡಿದು ಫೋಟೋ ತೆಗೆಸಿಕೊಂಡು, ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಹಾಗಲ್ಲ ಗಡಿಯಲ್ಲಿ ದೇಶ ಕಾಯುವುದು.

ನಿತ್ಯಾನಂದರು ಆಗಾಗ ಮಾಧ್ಯಮದಲ್ಲಿ ತಮ್ಮ ಹೆಸರು ಓಡಾಡಿಕೊಂಡಿರಬೇಕು ಎಂಬ ತೆವಲಿಗೋ ಏನೋ ಇಂಥ ಹೇಳಿಕೆಗಳನ್ನು ಕೊಡುತ್ತಿರುತ್ತಾರೆ. ಇತ್ತೀಚೆಗೆ ಕನ್ನಡಿಗರ ಮನಸ್ಸಿಗೆ ನೋವುಂಟುಮಾಡುವ ಹೇಳಿಕೆ ನೀಡಿದ್ದರಿಂದ ಕನ್ನಡ ಸಂಘಟನೆಗಳು ಹೋರಾಟ ಮಾಡಿದ್ದವು. ಆಗ ಸ್ವಲ್ಪ ಸಮಯ ಸುದ್ದಿಯಲ್ಲಿದ್ದರು. ಈಗ ಹೊಸದೊಂದು ರಾಗ. ಈ ನಿತ್ಯಾನಂದರು ಪ್ರಕರಣಗಳ ಮೇಲೆ ಪ್ರಕರಣಗಳನ್ನು ಹುಟ್ಟುಹಾಕುತ್ತಾ ಬಂದರೇ ಹೊರತು ಇವರಿಂದ ದೇಶಕ್ಕೆ, ಅದರ ಭದ್ರತೆಗೆ, ಯೋಧರಿಗೆ ನಯಾ ಪೈಸೆ ಲಾಭವಾಗಿಲ್ಲ. ಕರ್ನಾಟಕದಲ್ಲಿದ್ದುಕೊಂಡು ಕನ್ನಡಿಗರ ಬಗ್ಗೆಯೇ ಅವಹೇಳನಕಾರಿಯಾಗಿ ಮಾತನಾಡುವ ಸ್ವಾಮಿಗೆ ದೇಶದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವುದು ಏನು ಕಷ್ಟದ ಕೆಲಸವಲ್ಲ ಎಂದು ಇಲ್ಲಿಯೇ ತಿಳಿಯುತ್ತದೆ. ಒಂದು ರಾಷ್ಟ್ರದಲ್ಲಿ ಅಥವಾ ರಾಜ್ಯದಲ್ಲಿದ್ದುಕೊಂಡು ಅದರ ಆಚಾರ, ವಿಚಾರ, ಸಂಸ್ಕೃತಿಯ ವಿರುದ್ಧ ಮಾತನಾಡುವುದೂ ನರಕಕ್ಕೆ ಅರ್ಹವಾದ ಅಪರಾಧ ಎಂದು ಯಾಜ್ಞವಲ್ಕ್ಯ ಸ್ಮತಿಯಲ್ಲಿದೆ. ಚಾಣಕ್ಯ ನೀತಿಯಲ್ಲಿ ಇದಕ್ಕೆ ಸೆರೆವಾಸದ ಶಿಕ್ಷೆಯೂ ವಿಧಿಸಿದ್ದಾನೆ. ಹೇಳಿ ನಿತ್ಯಾನಂದರೇ ಈಗ ನೀವೆಲ್ಲಿ ಹೋಗುತ್ತೀರಾ? ಯೋಧರ ಮತ್ತು ನಿಮ್ಮ ಪಾಪ ಪುಣ್ಯಗಳ ಲೆಕ್ಕಾಾಚಾರ ಮಾಡಿದರೆ ಅದು ಬೇರೆಯದ್ದೇ ಮಾತಾಗುತ್ತದೆ.

ನಿತ್ಯಾನಂದರೇ, ನಿಮ್ಮ ಆಶೀರ್ವಾದ, ಉಪದೇಶ ಎಲ್ಲವೂ ನಿಮ್ಮ ಆಶ್ರಮದ ಸ್ತ್ರೀಯರ ಮೇಲೆ, ಪುರುಷರ ಮೇಲಷ್ಟೇ ಇರಲಿ. ಯೋಧರ ಬಗ್ಗೆಯಲ್ಲ ನೀವು ತೆಲೆಕೆಡಿಸಿಕೊಳ್ಳುವುದಕ್ಕೆ ಬರಬೇಡಿ. ಅದಕ್ಕೆ ಸರಕಾರವಿದೆ, ರಕ್ಷಣಾ ಸಚಿವರಿದ್ದಾರೆ, ರಾಷ್ಟ್ರಪತಿಗಳಿದ್ದಾರೆ, ಪ್ರಧಾನಿಗಳಿದ್ದಾರೆ. ನಮ್ಮ ಯೋಧರಿಗೆ ನರಕದ ದಾರಿ ತೋರಿಸುವ ಮುನ್ನ, ಮೊದಲೇ ಬುಕ್ ಆಗಿರುವ ನಿಮ್ಮ ಸೀಟನ್ನು ಕ್ಯಾನ್ಸಲ್ ಮಾಡಿಕೊಳ್ಳಿ!

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya