ಸಿಯಾಚಿನ್‌ನ ನಾನು ಜನುಮದಲ್ಲೂ ಮರೆಯಕ್ಕಾಗಲ್ಲ!

ಜೀವ ತೆಗೆವ ಚಳಿಯಲ್ಲಿ, 25 ಅಡಿ ಆಳದೊಳಗೆ, 6 ದಿನ ಜೀವ ಹಿಡಿದಿಟ್ಟುಕೊಂಡು ಸಾಕ್ಷಾತ್ ಮೃತ್ಯು ದೇವತೆಯನ್ನೇ ಒಮ್ಮೆ ನಡುಗಿಸಿದ್ದ ಲ್ಯಾನ್ಸ್‌ ನಾಯಕ್ ಹನುಮಂತಪ್ಪರಿಗಾಗಿ ಮತ್ತು ಅವರಿಗಾಗಿ ಪ್ರಾರ್ಥಿಸಿದ ಎಲ್ಲರಿಗಾಗಿ ನಾನು ಈ ಲೇಖನವನ್ನು ಬರೆಯುತ್ತಿದ್ದೇನೆ.

ಫೆಬ್ರವರಿ 3, ಮದ್ರಾಸ್ ರೆಜಿಮೆಂಟಿನ ಲ್ಯಾನ್ಸ್‌ ನಾಯಕ್ ಹನುಮಂತಪ್ಪ ಸೇರಿ 10 ಜನರ ಮೇಲೆ ಕಟ್ಟಡಗಳು ಬಿದ್ದಹಾಗೆ ದೊಡ್ಡ ದೊಡ್ಡ ಕೊರೆಯುವ ಕಲ್ಲುಗಳು ಏಕಾ ಏಕಿ ಬಿದ್ದಿತ್ತು. ಏನು ಮಾಡಬೇಕು ಎಂದು ಆಲೊಚಿಸುವಷ್ಟರಲ್ಲಿ ಎಲ್ಲರೂ ಸಮಾಧಿಯಾಗಿಬಿಟ್ಟಿದ್ದರು. ಅದರಲ್ಲಿ ‘ನಾನು ಬದುಕಲೇ ಬೇಕು’ ಎಂದು ನಿರ್ಧರಿಸಿದ್ದು ಮಾತ್ರ ಲ್ಯಾಾನ್‌ಸ್‌ ನಾಯಕ್ ಹನುಮಂತಪ್ಪ. ಆತ ನಮಗೆ ಸಿಕ್ಕಿದ್ದು ಫೆಬ್ರವರಿ 8ರಂದು.

ಸಿಯಾಚಿನ್‌ನ ಸೋನಮ್ ಪೋಸ್ಟ್‌ ಎಂದರೆ ಕಡಿಮೆ ಮಾತಲ್ಲ. ಸಮುದ್ರ ಮಟ್ಟಕ್ಕಿಂತ 19,600 ಅಡಿ ಎತ್ತರವಿರುವ ಜಾಗ ಅದು. ಸದಾ -40 ಡಿಗ್ರಿ ಸೆಂಟಿಗ್ರೇಡ್‌ನ ಚಳಿಯಿರುವ ಈ ಜಾಗದಲ್ಲಿ ವಾಸಿಸುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟ ಅಲ್ಲಿ ಏನಾದರೂ ಕಾರ್ಯಾಚರಣೆ ಮಾಡುವುದು. ಕಾರ್ಯಾಚರಣೆಗೆ ಇಳಿದರೆ ಅಲ್ಲಿ ಸರಿಯಾಗಿ 30 ನಿಮಿಷ ಕೆಲಸ ಮಾಡುವುದಕ್ಕಾಗುವುದಿಲ್ಲ. ಉಸಿರು ಕಟ್ಟುತ್ತದೆ. ವಿಶೇಷ ತರಬೇತಿಯುಳ್ಳ ಸುಮಾರು 300 ಯೋಧರು ಹೆಲಿಕಾಪ್ಟರ್‌ನಲ್ಲಿ ಬಂದಿದ್ದರು. ವಿಶ್ವದಲ್ಲೇ ಬೆಸ್ಟ್‌ ಎನಿಸುವ ಸುಮಾರು ತಜ್ಞರು ಅಲ್ಲಿ ಬಂದು ಆ ಚಳಿಯಲ್ಲಿ 10 ಯೋಧರ ಶವಗಳಿಗಾಗಿ ಸಿಮೆಂಟ್‌ನಂತಿರುವ ಮಂಜುಗಡ್ಡೆಗಳನ್ನು ಕೊರೆಯುತ್ತಿದ್ದರು, ಅಗೆಯುತ್ತಿದ್ದರು. ಕೆಲವೊಮ್ಮೆ ಅಗೆದದ್ದೂ ದಂಡವಾಗಿಬಿಡುತ್ತಿತ್ತು, ಏಕೆಂದರೆ ಅಲ್ಲಿ ಯಾವುದೇ ಯೋಧರ ಶವ ಸಿಕ್ಕುತ್ತಿರಲಿಲ್ಲ. ಹೀಗೆ ಒಂದು ಟೇಮ್ ಸುಸ್ತಾದ ಮೇಲೆ ಮತ್ತೊಂದು ಟೀಮ್ ಕೆಲಸ ಮಾಡುತ್ತಿತ್ತು. ಅವರು ಸುಸ್ತಾದರೆ ಮತ್ತೊಂದು ಟೀಮ್ ಶುರು ಮಾಡುತ್ತಿತ್ತೇ ಹೊರತು ಯಾವುದೇ ಕಾರಣಕ್ಕೂ ಹುಡುಕಾಟ ಮಾತ್ರ ನಿಲ್ಲಲಿಲ್ಲ. ನಮ್ಮ ಈ ಶ್ರಮದ ಪರಿಣಾಮವೇ ಹನುಮಂತಪ್ಪ ಜೀವಂತವಾಗಿ ಸಿಕ್ಕಿದ್ದು. ನಮ್ಮ ಕಣ್ಣನ್ನು ನಾವೇ ನಂಬಲಾಗುತ್ತಿರಲಿಲ್ಲ.

9 ಜನ ಸಹ ಯೋಧರ ಹನುಮಂತಪ್ಪರನ್ನು ಬಿಟ್ಟು ಹೋಗಿದ್ದರು. ಅವರ ಶವ ಎತ್ತುವುದು ಮಾತ್ರ ಸುಲಭದ ಕೆಲಸವಲ್ಲವೇ ಅಲ್ಲ. ಸತ್ತಾಗ ದೇಹ ಮರಗಟ್ಟಿರುತ್ತದೆ. ಜತೆಗೆ ಆ ಶವಗಳ ಮೇಲೆ ಮಂಜುಗಡ್ಡೆಗಳು ಬಿದ್ದಿದ್ದರಿಂದ ಒಂದು ಒಂದು ಶವ ತೆಗೆಯಲು ಹರ ಸಾಹಸ ಮಾಡಬೇಕಾಗುತ್ತದೆ. ಶವ ತೆಗೆಯುವುದು ದೊಡ್ಡ ವಿಚಾರವಲ್ಲ. ಆದರೆ ಇದನ್ನು ಹೆಲಿಕಾಪ್ಟರ್ ಮೇಲೆ ಎತ್ತಿಕೊಂಡು ಹೋಗುವುದೇ ಕಷ್ಟ. ಹೃದಯ ಕಿತ್ತು ಬರುವಂಥದ್ದು. ಕೈ ಕಾಲುಗಳು ದಿಕ್ಕಾಪಾಲಿಗಿರುವುದರಿಂದ ಇವುಗಳನ್ನು ನಾವು ಹೆಲಿಕಾಪ್ಟರ್‌ನೊಳಗೆ ಹಾಕುವಾಗ ದೇಹದ ಕೆಲ ಭಾಗಗಳು ಮುರಿದು ಹೋಗುತ್ತವೆ. ಕೊಲವೊಮ್ಮೆ ನಾವೇ ಶವದ ಕೈಕಾಲುಗಳನ್ನು ಜೋಡಿಸುವಾಗ ಮುರಿದುಹೋಗುತ್ತದೆ. ಅಲ್ಲಿ ಬಂದಿರುವವರೆಲ್ಲ ಯೋಧರಿಗೂ ಈ ಯೋಧರ ಪರಿಚಯವಿರುತ್ತದೆ. ಹಾಗೆ ಅವರನ್ನು ಒಳಗೆ ತುಂಬುವಾಗ ಅವರಿಗೆಲ್ಲರಿಗೂ ಮೃತ ಯೋಧರ ಜತೆ ಜೋಕ್ಸ್‌ ಮಾಡುತ್ತಾ ನಕ್ಕಿದ್ದು, ಒಟ್ಟಿಗೆ ರಸಮ್ ಕುಡಿದಿದ್ದೆಲ್ಲವೂ ನೆನಪಾಗದೇ ಇರುತ್ತದಾ? ತಡೆದುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಆದರೂ ಸಿಯಾಚಿನ್‌ನಲ್ಲಿ ನಿಯೋಜಿತಗೊಂಡಿರುವ ಯೋಧರ ದೇಹವನ್ನಷ್ಟೇ ಗಟ್ಟಿಯಾಗಿಟ್ಟುಕೊಳ್ಳಲು ತರಬೇತಿ ಕೊಟ್ಟಿರುವುದಿಲ್ಲ, ಮನಸ್ಸು ಮತ್ತು ಇಚ್ಛಾಶಕ್ತಿಯನ್ನು ದಿನೇ ದಿನೆ ಗಟ್ಟಿಯಾಗಿಸಿಕೊಳ್ಳಬಲ್ಲಂಥ ತರಬೇತಿಯನ್ನೂ ಅವರು ಕೊಟ್ಟಿರುತ್ತಾರೆ. ಇದರಿಂದಲೇ ಹನುಮಂತಪ್ಪ 6 ದಿನಗಳ ಕಾಲ ಅಂಥ ಘೋರ ಪರಿಸ್ಥಿತಿಯಲ್ಲೂ ಬದುಕಿರಲು ಸಾಧ್ಯವಾಗಿತ್ತು.

ಪ್ರತಿಕೂಲ ಹವಾಮಾನದಲ್ಲೂ ಬದುಕುವ ತರಬೇತಿ
ಕೆಲವೊಮ್ಮೆ ಸಿಯಾಚಿನ್‌ನಂಥ ಜಾಗದಲ್ಲಿ ಎಂಥ ಪರಿಸ್ಥಿತಿಯಿರುತ್ತದೆಯೆಂದರೆ ಹಠಾತ್ ಶಬ್ದವೊಂದು ಕೇಳಿ ಬಂದು ಕಲವೇ ಕ್ಷಣದಲ್ಲಿ ಹಿಮ ನುಗ್ಗಿ ಬರುವ ಶಬ್ದ ಕೇಳಿ ಬರುತ್ತದೆ. ಏನಾಯಿತು ಎಂದು ಯೋಚಿಸಲೂ ಸಮಯವಿರುವುದಿಲ್ಲ. ಒಮ್ಮೆ ಆ ಹಿಮ ರಭಸದಲ್ಲಿ ನುಗ್ಗಿ ಬರುತ್ತಿರುವ ದಾರಿಯಲ್ಲೇ ನೀವಿದ್ದರೆ ಓಡಲೂ ಸಮಯವಿರುವುದಿಲ್ಲ, ಅದು ಸಾಧ್ಯವೂ ಇಲ್ಲ. ಆದರೆ ಇಲ್ಲಿ ಪೋಸ್ಟಿಂಗ್ ಹಾಕಿರುವವರಿಗೆ ಇಂಥ ಸಂದರ್ಭದಲ್ಲಿ ಇವರು ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳುವಂಥ ಅನೇಕ ತರಬೇತಿ ಕೊಟ್ಟಿರುತ್ತಾರೆ. ಇದರಲ್ಲಿ ಒಂದು ಮುಖ್ಯವಾದ ಅಂಶವೆಂದರೆ ಒಮ್ಮೆ ದುರಂತಕ್ಕೆ ಸಿಕ್ಕಿಹಾಕಿಕೊಂಡರೂ ಕನಿಷ್ಠ ಪಕ್ಷ ಉಸಿರಾಡುವಷ್ಟು ಗಾಳಿ ಬರುವಂತೆ ಮಾಡಿಕೊಳ್ಳಬೇಕು. ಏಕೆಂದರೆ ಕೆಲ ಪರಿಸ್ಥಿತಿಯಲ್ಲಿ ಮರದ ತುಂಡುಗಳು, ಮಂಜುಗಡ್ಡೆಗಳು ನಮ್ಮ ಮೈ ಮೇಲೆ ಬಿದ್ದು ಕೈಕಾಲು ಅಲುಗಾಡಿಸಲೂ ಆಗದೇ, ಹೊರಬರುವುದಕ್ಕೆ ಆಗದಂಥ ಸ್ಥಿತಿಯಲ್ಲಿರಬಹುದು. ಬೇರೆ ಊರು, ಏರಿಯಾಗಳ ಪೋಸ್ಟಿಂಗ್‌ಗೂ ಇಂಥ ಜಾಗಕ್ಕೂ ಏನು ವ್ಯತ್ಯಾಸ ಎಂದರೆ. ಇಲ್ಲಿ ನಾವೊಬ್ಬರೇ ಇರುತ್ತೇವೆ. ಸಹಾಯ ಮಾಡಲು ಸುತ್ತಮುತ್ತ ಯಾರೂ ಇರುವುದಿಲ್ಲ. ಒಂದು ಪೋಸ್ಟ್‌‌ನಿಂದ ಇನ್ನೊಂದು ಪೋಸ್ಟ್‌‌ಗೆ ಸುಮಾರು ಕಿಲೋಮೀಟರ್ ದೂರ ಇರುತ್ತದೆ ಅವರೆಲ್ಲ ದುರಂತ ಸಂಭವಿಸಿರುವ ಜಾಗಕ್ಕೆ ಬಂದು ಮಂಜುಗಡ್ಡೆಗಳಿಂದ ಮುಚ್ಚಿ ಹೋಗಿರುವ ಯೋಧನನ್ನ ಹುಡುಕುವುದು ಕಷ್ಟದ ಮಾತು. ಇದೆಲ್ಲ ರಕ್ಷಣಾ ಕಾರ್ಯ ಆಗುವುದು ಪಕ್ಕದ ಪೋಸ್ಟಿಗೆ ವಿಷಯ ತಿಳಿದರೆ ಮಾತ್ರ. ಇಲ್ಲವಾದರೆ ಅದೂ ಇಲ್ಲ. ಎಷ್ಟೋ ದಿನಗಳ ನಂತರ ತಿಳಿಯುತ್ತದೆ.

ಸಿಯಾಚಿನ್‌ನಲ್ಲಿ ಯಾವುದೂ ಸುಲಭವಲ್ಲ. ಸಾಮಾನ್ಯವಲ್ಲ., ಮಲ ವಿಸರ್ಜನೆ ಮಾಡುವುದರಿಂದ ಹಿಡಿದು ಯಾವುದೂ ಸುಲಭವಲ್ಲ. ಹೌದು. ಭಾರತದ ಬೇರೆ ಯಾವುದೇ ಜಾಗದಲ್ಲಿದ್ದರೂ ಅಥವಾ ಸಾಮಾನ್ಯ ಜನರಿಗೆ ಮಲ ವಿರ್ಜಜನೆ ಮಾಡಲು ತೊಂದರೆಯಾಗುವುದಿಲ್ಲ. ಆರಾಮಾಗಿ ಮಾಡಿ ಫ್ಲಶ್ ಮಾಡಿ ಹೋಗುತ್ತಾರೆ. ಎಲ್ಲವೂ ಸುಸೂತ್ರವಾಗಿ ನಡೆದುಬಿಡುತ್ತದೆ. ಆದರೆ ಸಿಯಾಚಿನ್‌ನ ಆ ಹಿಮ ಆವೃತ ಪ್ರದೇಶದಲ್ಲಿ ಮಲ ವಿಸರ್ಜಿಸಿದರೆ ಅದು ಕೊಳೆತು ಭೂಮಿ ಸೇರುವುದಿಲ್ಲ. ಬದಲಿಗೆ ವಿಸರ್ಜಿಸಿದಾಗ ಹೇಗಿರುತ್ತದೆಯೋ, ಹಾಗೆಯೇ ಇರುತ್ತದೆ. ಯೋಧರು ಅಲ್ಲೇ ಮಲ ವಿಸರ್ಜನೆ ಮಾಡುತ್ತಾ ಅದರ ಪಕ್ಕದಲ್ಲೇ ಮಲಗುವ ಪರಿಸ್ಥಿತಿಯಿರುತ್ತದೆ. ಅದಕ್ಕೆ ಸಿಯಾಚಿನ್‌ನಲ್ಲಿ ಬದುಕುವವನಿಗೆ ತಾಕತ್ತು ಬೇಕು. ಹಿಂದೊಮ್ಮೆ ಹೀಗೆ ಹಿಮಪಾತವಾದಾಗ ಎಲ್ಲಿಗೆ ಹೋದ ಹೆಲಿಕಾಪ್ಟರ್ 20 ಕೆಜಿ ತೂಕದ ಯಂತ್ರೋಪಕರಣಗಳನ್ನು ಇಳಿಸಿತ್ತು. ಒಮ್ಮೆ ಈ ಯಂತ್ರ ಹಾಳಾದರೆ ಸರಿ ಮಾಡಿಕೊಳ್ಳುವುದಕ್ಕೆ ಬಿಡಿ ಉಪಕರಣಗಳನ್ನೂ ಇಡಲಾಗಿತ್ತು. ಇಲ್ಲಿ ಏನಂದರೇನೂ ಸಿಗುವುದಿಲ್ಲ. ಯೋಧನೊಬ್ಬನ ಮನವಿ ಮೇರೆಗೆ ಒಮ್ಮೆ ಆಲೋ ಸಮೋಸವನ್ನೂ ಹೆಲಿಕಾಪ್ಟರ್‌ನಲ್ಲಿ ತಂದು ಕೊಡಲಾಗಿತ್ತು.

ಇಲ್ಲಿನ ಮಹತ್ವ
ನಾನು ಇಲ್ಲಿ ಹೆಚ್ಚು ಭಾರತೀಯ ಯೋಧರ ಕಷ್ಟ ಮತ್ತು ಅವರಿರುವ ವಾತಾವರಣದ ಬಗ್ಗೆಯಷ್ಟೇ ಹೇಳುತ್ತಾ ಕೂರುವುದಿಲ್ಲ. ಆದರೆ, ಕೆಲ ಪ್ರಮುಖ ವಿಚಾರಗಳನ್ನು ಹೇಳದಿದ್ದರೆ ಸಿಯಾಚಿನ್ ಪೂರ್ಣಗೊಳ್ಳುವುದಿಲ್ಲ. ಎಲ್ಲೋ ಅಪೂರ್ಣವೆನಿಸುತ್ತದೆ. ಹಾಗಾಗಿ ಹೇಳಿದೆಯಷ್ಟೇ.
ಭಾರತವು ಪಶ್ಚಿಮ ಹಿಮನದಿಯ ಬಳಿಯಿರುವ ಸ್ಯಾಲ್ಟೊರೊ ಪರ್ವತಶ್ರೇಣಿಯು ಭಾರತದ ಮುಷ್ಟಿಯಲ್ಲಿದ್ದಿದ್ದರಿಂದ ಪಾಕಿಸ್ತಾಾನದ ಯುದ್ಧತಂತ್ರದ ಮೇಲೆ ಹಿಡಿತವಿದೆ ಎಂದು ಪಾಕಿಸ್ತಾನ ಎಲ್ಲೂ ಅಧಿಕೃತವಾಗಿ ತಮ್ಮ ಜನತೆಗೆ ಹೇಳಿಲ್ಲ ಎಂಬುದು ಬಹಳಷ್ಟು ಭಾರತೀಯರಿಗೆ ಗೊತ್ತಿಲ್ಲವೆನಿಸುತ್ತದೆ. ನಾವು ಇಲ್ಲಿ ಒಂದು ಕ್ಷಣ ಎಚ್ಚರ ತಪ್ಪಿದರೂ ಪರಿಸ್ಥಿತಿಯೇ ಬೇರೆ ಆಗಿ ಬಿಡುತ್ತದೆ. ಇಲ್ಲಿ ಕಮಾಂಡ್ ಮಾಡುವುದು ಸುಲಭವಲ್ಲ. ಪಾಕಿಸ್ತಾನ ಇಲ್ಲಿ ಬರದಂತೆ ಒಪ್ಪಂದ ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಏಕೆಂದರೆ ಪಾಕಿಸ್ತಾನವನ್ನು ನಂಬುವವನು ಯಾರು ಹೇಳಿ? ನಾಳೆ ಏಕಾ ಏಕಿ ಚೀನಾದ ಜತೆ ಸೇರಿ ಏನಾದರೂ ಒಳ ಒಪ್ಪಂದ ಮಾಡಿಕೊಂಡು ಪ್ರದೇಶ ಆಕ್ರಮಿಸಿಕೊಳ್ಳುವುದಕ್ಕೂ ಹೇಸುವುದಿಲ್ಲ ಪಾಕಿಸ್ತಾನ. ಏನೇ ಆಗಲಿ, ನಾವಂತೂ ಮುಲಾಜೇ ನೋಡುವುದಿಲ್ಲ. ಸಾವಿರ ಯೋಧರು ಅಮರರಾದರೂ ಅಷ್ಟೇ. ನಮ್ಮ ಒಂದಿಚು ಜಾಗವನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ. ಇದು ನಮ್ಮ ನಿರ್ಧಾರ.
ಇನ್ನು ಸಿಯಾಚಿನ್ ವಿಷಯಕ್ಕೆ ಬರುವುದಾದರೆ ಚೀನಾ ಮತ್ತು ಪಾಕಿಸ್ತಾನ ಇಲ್ಲಿ ಒಳ ಒಪ್ಪಂದ ಮಾಡಿಕೊಂಡಿದೆ. ಯಾವಾಗ ಬೇಕಾದರೂ ನಾವು ಇಲ್ಲದಿರುವ ಸಮಯವನ್ನು ನೊಡಿ ನಮ್ಮ ಪೋಸ್ಟ್‌‌ಗಳನ್ನು ವಶಪಡಿಸಕೊಂಡು ಗಡಿ ವಿಸ್ತರಿಸಿ ಬಿಡುತ್ತಾರೆ. ಲಡಾಖ್‌ನ ಉತ್ತರ ಶ್ರೇಣಿಯಲ್ಲಿ ಬರುವ , ಸಿಯಾಚಿನ್ ಪಕ್ಕದಲ್ಲಿರುವ ನುಬ್ರಾ ಕಣಿವೆಯಿದೆ. ಅದನ್ನೇನಾದರೂ ಭಾರತ ವಶಪಡಿಸಿಕೊಂಡಿರಲಿಲ್ಲ ಎಂದಿದ್ದರೆ ಪಾಕಿಸ್ತಾನ ಮತ್ತು ಚೀನಾ ಎರಡೂ ನಾವು ಮಾತಾಡಿದರೂ ಕೇಳಿಸಿಕೊಳ್ಳುವಷ್ಟು ಹತ್ತಿರದಲ್ಲಿರುತ್ತಿದ್ದರು. ನಾವು ಏಕೆ ಸಿಯಾಚಿನ್‌ನಲ್ಲಿ ನಮ್ಮ ಯೋಧರನ್ನು ನಿಯೋಜಿಸಬೇಕು ಎಂದು ಕೇಳುವ ದೇಶದ ನಾಗರಿಕರು ಒಮ್ಮೆ ಈ ಮೂಲ ಅಂಶಗಳನ್ನು ಆಲೋಚಿಸಬೇಕು.

ಎಲ್ಲವೂ ಒಂದು ಕ್ಷಣದಲ್ಲಿ ನಡೆದುಬಿಡುತ್ತದೆ
ನಾನು ಆಗಷ್ಟೇ ಸಿಯಾಚಿನ್ ಉತ್ತರ ಹಿಮನದಿಯ ಬಳಿ ನಾನು ಕಮಾಂಡರ್ ಆಗಿ ನಿಯೋಜಿತಗೊಂಡಿದ್ದೆ. ಅದು ಸಮುದ್ರ ಮಟ್ಟಕ್ಕಿಂತ 15,000 ಮೇಲಿದೆ. ಅಲ್ಲಿ ವಿರಾಮ ಎಂಬುದೇ ಇಲ್ಲ. ಅಂದೆಲ್ಲ ಪರಿಸ್ಥಿತಿ ಹೇಗಿತ್ತೆಂದರೆ ಸಿಯಾಚಿನ್ ಯಾವಾಗಲೂ ಫಿರಂಗಿಗಳು ಮತ್ತು ಸಣ್ಣ ಶಸ್ತ್ರಾಸ್ತ್ರಗಳನ್ನೆಲ್ಲ ಗುರಿ ಮಾಡಿಯೇ ಇಟ್ಟುಕೊಂಡಿದ್ದೆವು.
ನಾನು ಇಲ್ಲಿ ನಿಯೋಜಿತಗೊಂಡ ವಿಷಯ ಕೇಳಿ ಖುಷಿಯಾದ ನಮ್ಮ ಮಿತ್ರ ಲೆಫ್ಟಿನೆಂಟ್ ಭೂಪಿ, ನನಗೆ ಕರೆ ಮಾಡಿ ಸ್ವಾಗತಿಸಿದ್ದ. ಅವನು ನಿವೃತಯಾಗುವುದಕ್ಕೆ ಇನ್ನು 6 ತಿಂಗಳಿತ್ತು ಅಷ್ಟೇ. ಅವನು ಕಮಾಂಡರ್ ಆಗಿದ್ದಂತ ಜಾಗ ಸುಲಭದ್ದಲ್ಲ. ಬಹಳ ಅಪಾಯಕಾರಿಯಾಗಿದ್ದಂತ ಸ್ಯಾಲ್‌ಟೊರೊ ಬೆಟ್ಟದ ಕಣಿವೆಯ ಜಾಗ. ನನ್ನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಾ.‘ಹೇಳು ನೀನು ಯಾವಾಗ ಇಲ್ಲಿ ಬಂದು ಒಂದೊಂದು ಪೋಸ್ಟ್‌‌ಗಳನ್ನು ನೋಡಿಕೊಂಡು ಹೋಗುತ್ತೀಯ?’ ಎಂದಿದ್ದ. ನಾನೂ ಸಹ ಆದಷ್ಟು ಬೇಗ ಬರುತ್ತೇನೆ ಇರು ಎಂದು ಪೋನಿಟ್ಟೆ. ನಾನು ಕೆಲ ದಿನಗಳ ಕಾಲ ರೆಸ್ಟ್‌ ತೆಗೆದುಕೊಳ್ಳಬೇಕೆಂದು ಪ್ರಧಾನ ಕಚೇರಿಯಲ್ಲಿದ್ದೆ. ಹತ್ತು ನಿಮಿಷದ ನಂತರ ನನಗೊಂದು ಫೋನ್ ಬಂತು. ‘ಭೂಪಿ ಉಗ್ರರ ಗುಂಡಿಗೆ ಬಲಿಯಾದ’ ಎಂಬ ಧ್ವನಿ ಕೇಳಿ ಸುಸ್ತು ಬಡಿದು ಹೋಗಿದ್ದೆ. ನನ್ನ ಜತೆ ಮಾತಾಡಿ ಹಿಂದಿರುಗಿದ ಭೂಪಿ ಕುಡಿಯುವ ನೀರು ತರಲು(ಅಲ್ಲಿ ಕುಡಿಯುವ ನೀರಿಲ್ಲ, ಬದಲಿಗೆ ಉತ್ತಮವಾದ ಚೊಕ್ಕ ಹಿಮವನ್ನು ಕರಗಿಸಿ ಕುಡಿಯುವುದು) ಹಿಮ ಗುಹೆಯೊಳಗೆ ಹೋಗಿದ್ದ. ಅಲ್ಲಿ ಅವನ ಮೇಲೆ ಪಾಕಿಸ್ತಾನಿಯರಿಂದ ಗುಂಡಿನ ದಾಳಿ ಶುರುವಾಯಿತು. 4 ಕಿಲೋಮೀಟರ್ ದೂರದಿಂದ ಬಂದ ಒಂದು ಬುಲೆಟ್ ಭೂಪಿಯ ಬಲ ಕಣ್ಣಿನೊಳಗೆ ಹೊಕ್ಕಿ ಆತ ಕೊನೆಯುಸಿರೆಳೆದಿದ್ದ. ಅದು ನಾನು ಕಮಾಂಡರ್ ಆಗಿ ನಿಯೋಜಿತಗೊಂಡ ದಿನ. ಮೊದಲನೇ ದಿನವೇ ನನಗೆ ಸಿಯಾಚಿನ್ ಎಷ್ಟು ಸೂಕ್ಷ್ಮ ಎಂದು ತಿಳಿದಿಬಿಟ್ಟಿತ್ತು. ಇದನ್ನು ನನ್ನ ಜನುಮದಲ್ಲೇ ಯಾವತ್ತೂ ಮರೆಯುವುದಿಲ್ಲ. ಇಲ್ಲಿ ನಮಗೆ ಒಂದು ಪ್ರಕೃತಿಯಿಂದಲೂ ಆಪತ್ತಿದೆ. ಉಗ್ರರಿಂದಲೂ ಆಪತ್ತಿದೆ. ಚೀನಾ-ಪಾಕಿಸ್ತಾನದಿಂದಲೂ ಆಪತ್ತಿದೆ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya