ಪೊಲೀಸರೆಂದರೆ ಗುಲಾಮರೇ ಪರಮೇಶ್ವರ?

ವ್ಯವಸ್ಥೆ ಹೇಗಿದೆ ನೋಡಿ, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಐಪಿಎಸ್ ಅಥವಾ ಇಲಾಖೆಯ ಪರೀಕ್ಷೆ ಪಾಸು ಮಾಡಿ, ಜತೆಗೊಂದಷ್ಟು ಕಾಸು ಕೊಟ್ಟು ಪೊಲೀಸ್ ಸ್ಥಾನಕ್ಕೇರುವುದಂತೆ. ಸಹಿ ಹಾಕಲೂ ಬರದ ಹೆಬ್ಬೆಟ್ಟು ರಾಜಕಾರಣಿಗಳೆಲ್ಲ ಅವರನ್ನ ಬೇಕಾದ ಹಾಗೆ ಟ್ರಾನ್ಸ್ ಫರ್ ಮಾಡುವುದಂತೆ. ಹಾಗಾದರೆ ಪೊಲೀಸರೇನು ರಾಜಕಾರಣಿಗಳ ಗುಲಾಮರೇ? ಇಂಥ ಒಂದು ಪ್ರಶ್ನೆ ಉದ್ಭವಿಸಲು ಕಾರಣ, ಮೊನ್ನೆಯಿಂದ ನಡೆದ ನಾಟಕೀಯ ಬೆಳವಣಿಗೆಗಳು. ಡಿವೈಎಸ್‌ಪಿ ಅನುಪಮಾ ಶೆಣೈಗೆ ಕಾರ್ಮಿಕ ಸಚಿವ ಪರಮೇಶ್ವರ ನಾಯಕ್ ಅವರು ಕರೆ ಮಾಡಿದ್ದರು. ಕೇವಲ 42ಸೆಕೆಂಡ್ ಮಾತನಾಡಿದ ನಂತರ ಡಿವೈಎಸ್‌ಪಿ ಅನುಪಮಾ ಶೆಣೈ, ಸಚಿವರ ಕರೆಯನ್ನು ಹೋಲ್ಡ್ ಮಾಡಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಪರಮೇಶ್ವರ್ ನಾಯಕ್ ಒಂದು ಗಂಟೆಯಲ್ಲಿ ಆ ಡಿವೈಎಸ್‌ಪಿಯನ್ನು ಟ್ರಾನ್ಸ್ ಫರ್ ಮಾಡಿಸುತ್ತಾರೆ. ಇದಕ್ಕೆ ಉತ್ತರಿಸಿದ ಪರಮೇಶ್ವರರು, ಇಲ್ಲ ಇದರಲ್ಲಿ ನನ್ನ ಕೈವಾಡವೇನೂ ಇಲ್ಲ. ನಾನು ಡಿವೈಎಸ್‌ಪಿ ಜೊತೆಗೆ ಅಷ್ಟು ಹೊತ್ತು ಮಾತನಾಡಿಯೇ ಇಲ್ಲ. ಅದು ಸಾಬೀತಾದರೆ ನಾನು ರಾಜಿನಾಮೆ ಕೊಡುತ್ತೇನೆ ಎಂದರು.

ಇದಾದ ಮಾರನೇಯ ದಿನವೇ ಕಾರ್ಯಕ್ರಮವೊಂದರಲ್ಲಿ ಅವರ ಬೆಂಬಲಿಗರೊಡನೆ ಮಾತನಾಡುತ್ತಾ ’ಬರೀ 42 ಸೆಕೆಂಡು ಮಾತಾಡಿದ್ದು ಅಷ್ಟೇ! ಆಮೇಲೆ ನನ್ನ ಕರೆಯನ್ನು ಅ ಡಿವೈಎಸ್‌ಪಿ ಹೋಲ್ಡಲ್ಲಿ ಇಟ್ಟರು.. ನಾವ್ ಬುಡ್ತೀವಾ? ಡಿವೈಎಸ್‌ಪಿನ ಟ್ರಾನ್ಸ್ ಫರ್ ಮಾಡಿಸಿದ್ದು ನಾನೇ… ಒಬ್ಬ ಸಚಿವನ ಕಾಲ್ ರಿಸೀವ್ ಮಾಡಕ್ಕಾಗಲ್ಲ ಎಂದರೆ ಯಾಕ್ ಬೇಕು ಆ ಅಧಿಕಾರಿ’ ಎಂದ್ದಿದ್ದಾರೆ.’ ಈ ಶೌರ್ಯಕ್ಕೆ ಸುತ್ತಮುತ್ತಲಿನ ಜನರಿಂದ ಕೇಕೆ ಹಾಕುತ್ತಾ ಚಪ್ಪಾಳೆ, ಶಿಳ್ಳೆ! ಈ ವೀಡಿಯೋ ಮಾಧ್ಯಮಗಳಲ್ಲಿ ಬಹಳವೇ ಹರಿದಾಡಿತ್ತು. ಅಲ್ಲ ಪರಮೇಶ್ವರ ನಾಯಕ್‌ರೇ, ಡಿವೈಎಸ್‌ಪಿಗಳಿಗೆ ಮಾಡುವುದಕ್ಕೆ ಬೇರೆ ಕೆಲಸವಿಲ್ಲವೇ? ಅಥವಾ ನಿಮ್ಮ ಜತೆ ದೂರವಾಣಿಯಲ್ಲಿ ಮಾತನಾಡುವುದೊಂದೇ ಕೆಲಸವಾ? ಸಚಿವರಾದ ನೀವು ಎಲ್ಲ ದೂರವಾಣಿ ಕರೆಗಳನ್ನು ಖುದ್ದು ಸ್ವೀಕರಿಸುತ್ತೀರಾ? ಒಮ್ಮೆ ಡಿವೈಎಸ್‌ಪಿ ಅನುಪಮಾ ಶೆಣೈಯೇನಾದರೂ ಜನರಿಗೆ ಸರಿಯಾದ ರೀತಿಯಲ್ಲಿ ಸ್ಪಂಧಿಸದೇ ಇದ್ದಾಗ ನೀವು ಕಾಳಜಿ ವಹಿಸಿ ಕೇವಲ ಒಂದು ತಾಸಿನಲ್ಲಿ ವರ್ಗಾವಣೆ ಮಾಡಿದರೆ ಆಗ ನಾನು ನಿಮ್ಮ ಕಾರ್ಯಕ್ಷಮತೆ, ಶೌರ್ಯದ ಬಗ್ಗೆ ಒಪ್ಪುುತ್ತಿದ್ದೆ. ಆದರೆ ನಿಮ್ಮ ಜತೆ ಮಾತನಾಡಲಿಲ್ಲವೆಂದ ಮಾತ್ರಕ್ಕೇ ವರ್ಗಾವಣೆ ಮಾಡಿಸಿದ್ದು ಒಪ್ಪಲು ಸಾಧ್ಯವೇ ಇಲ್ಲ. ನೀವು ನಿಮ್ಮ ಶೌರ್ಯದ ಬಗ್ಗೆ ಜನರಿಗೆಲ್ಲ ಹೇಳಿದ ದಿನ ನಿಮಗೆ ಪಬ್ಲಿಕ್ ಟೀವಿಯ ಎಚ್.ಆರ್.ರಂಗನಾಥ್ ಮತ್ತು ರಾಧಾ ಹಿರೇಗೌಡರ್, ನಿಮ್ಮ ಪ್ರತಿಕ್ರಿಯೆ ತೆಗೆದುಕೊಳ್ಳಲು ಕರೆ ಮಾಡಿದ್ದರು. ಒಂದು ಪ್ರಶ್ನೆಗೂ ಸರಿಯಾಗಿ ಉತ್ತರ ಕೊಡಲಿಲ್ಲವೇಕೆ? ಕೊನೆಗೆ ಏನೇನೋ ಮಾತನಾಡುತ್ತಾ ’ನನಗೆ ಮುಖ್ಯಮಂತ್ರಿಗಳು ಇನ್ನೂ ಬೈದಿಲ್ಲ, ನಾನೇನು ತಪ್ಪುು ಮಾಡಿಲ್ಲ’ ಎಂದರು. ’ಅಲ್ಲ, ಸ್ವಾಮಿ ನಿಮ್ಮಂಥ ಸಚಿವರನ್ನ ಸಂಪುಟದಲ್ಲಿಟ್ಟುಕೊಂಡು ಇನ್ನು ಏನು ಹೆಳಿಲ್ಲವೇ? ಅದು ಹೆಂಗೆ ಸುಮ್ಮನಿರುತ್ತಾರೆ?’ ಎಂದು ರಂಗನಾಥ್ ಕೇಳಿದಾಗ ಅವರ ಪ್ರಶ್ನೆೆಗೆ ಸರಿಯಾಗಿ ಉತ್ತರ ಕೊಡುವುದಕ್ಕಾಗದೇ ’ನನಗೆ ನಿಮ್ಮ ಹತ್ತಿರ ಏನು ಹೇಳಿಸಿಕೊಳ್ಳುವ ದರ್ದಿಲ್ಲ’ ಎಂದು ಕೊನೆಗೆ ಮಾತಿನ ಮಧ್ಯದಲ್ಲೇ ಕರೆ ಸ್ಥಗಿತಗೊಳಿಸಿದ್ರಿ. ಹಾಗಾದರೆ ಸಚಿವರೇ, ನೀವು ಮುಖ್ಯಮಂತ್ರಿಗಳ ಬಳಿ ಹೇಳಿಸಿಕೊಂಡ ನಂತರವೇ ನಿಮ್ಮ ತಪ್ಪಿನ ಅರಿವಾಗುವುದೇ? ಸರಿ, ಮಧ್ಯದಲ್ಲಿ ಕರೆ ಸ್ಥಗಿತಗೊಳಿಸಿದ ಮಾತ್ರಕ್ಕೇ ವರ್ಗಾವಣೆ ಶಿಕ್ಷೆಯೆನ್ನುವುದಾರೆ, ಹೇಳಿ ಪರಮೇಶ್ವರ ನಾಯಕ್‌ರೇ ಈಗ ನಿಮ್ಮನ್ನು ಎಲ್ಲಿಗೆ ವರ್ಗಾವಣೆ ಮಾಡಬಹುದು? ಎಷ್ಟು ತಾಸಿನಲ್ಲಿ ವರ್ಗಾವಣೆ ಮಾಡಬೇಕು? ಜನಪ್ರತಿನಿಧಿಯಾದ ನಿಮಗೆ ’ಪಬ್ಲಿಕ್’ಗೆ ಉತ್ತರಿಸುವ ಜವಾಬ್ದಾರಿಯಿಲ್ಲವೇ? ಅದರಿಂದ ನೀವು ನುಣುಚಿಕೊಳ್ಳುತ್ತಿಲ್ಲವೇ? ಡಿವೈಎಸ್‌ಪಿ ವರ್ಗಾವಣೆಯಲ್ಲಿ ನಿಮ್ಮ ಕೈವಾಡವಿದ್ದರೆ ರಾಜೀನಾಮೆ ಕೊಡುತ್ತೇನೆ ಎಂದರಲ್ಲ? ಯಾವಾಗ ರಾಜೀನಾಮೆ ಕೊಡುತ್ತೀರ ಹೇಳಿ? ಇನ್ನು ನೀವು ಉದುರಿಸಿರುವ ಮುತ್ತಿನ ಬಗ್ಗೆಯೇ ಪಬ್ಲಿಕ್ ಟೀವಿಯಲ್ಲಿ ಕೇಳಿದಾಗ ’ಅಯ್ಯೋ ನಾನು ಹಾಗೆ ಮಾತನಾಡಲೇ ಇಲ್ಲ. ಈಗ ಟೆಕ್ನಾಲಜಿ ಮುಂದುವರೆದಿದೆ ಏನೇನೋ ವೀಡಿಯೋ ಮಾಡುತ್ತಾರೆ. ಅದು ನನ್ನ ಮಾತಲ್ಲ’ ಎಂದು ಕಥೆ ಬಿಡುತ್ತೀರ. ಈ ಸುಳ್ಳು ಹೇಳಿ ಯಾರ ಕಿವಿ ಮೇಲೆ ಹೂವು ಇಡುವುದಕ್ಕೆ ಹೊರಟಿದ್ದೀರಿ? ಇದನ್ನೂ ಮುಖ್ಯಮಂತ್ರಿಗಳೇ ಅನುಮತಿ ಪಡೆದೇ ಹೇಳಿದ್ದೀರಾ?

ಇತ್ತೀಚೆಗೆ ಪೊಲೀಸರ ಪಾಡು ಹೇಳತೀರದಾಗಿದೆ. ಇದಕ್ಕೆ ಮತ್ತೊಂದು ಉದಾರಹಣೆಯೇ ಪ್ರಮೋದ್ ಕುಮಾರ್ ವರ್ಗಾವಣೆ. ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್, ಉಳಾಯಿಬೆಟ್ಟುವಿನಲ್ಲಿ ನಡೆದ ಗಲಭೆಯ ಆರೋಪಿಯನ್ನು ವಾರೆಂಟ್‌ನೊಂದಿಗೆ ಅರೆಸ್ಟ್ ಮಾಡಿದ್ದರಿಂದ ಅವರನ್ನು ಒಂದೇ ದಿನದಲ್ಲಿ ವರ್ಗಾವಣೆ ಮಾಡಲಾಗಿತ್ತು. ಇದರ ಹಿಂದೆ ಮೋಯಿದ್ದೀನ್ ಬಾವಾ ಅವರ ಕೈವಾಡವಿತ್ತು. ಈ ಘಟನೆಯಿಂದ ಜನರಿಗೆ ನ್ಯಾಯ ಕೊಡಿಸಬೇಕಿದ್ದ ಪೊಲೀಸರೇ ನ್ಯಾಯಕ್ಕಾಗಿ ಅಹೋರಾತ್ರಿ ಧರಣಿ ಮಾಡುವಂತಾಗಿತ್ತು. ಅಂಥ ದಕ್ಷ ಅಧಿಕಾರಿ ಪ್ರಮೋದ್ ಕುಮಾರ್. ಇವರಷ್ಟೇ ದಕ್ಷ ಅಧಿಕಾರಿಯಾಗಿರುವ ಅನುಪಮಾ ಶೆಣೈಗೂ ವರ್ಗಾವಣೆ ಶಿಕ್ಷೆ. ರಾಜಕಾರಣಿಯೊಬ್ಬ ಮಾತೆತ್ತಿದರೆ ಮಾಧ್ಯಮಗಳು ವಿವಿಐಪಿ ರೇಸಿಸಂ ಎಂದು ಊಳಿಡುತ್ತವೆ. ಆದರೆ ಅನುಪಮಾ ಶೆಣೈಗಾದ ಅನ್ಯಾಯದ ಬಗ್ಗೆ ಕೇವಲ ಒಂದು ದಿನ ಚರ್ಚೆ ಮಾಡಿ ಹಾಗೇ ಬಿಟ್ಟರು. ಹೀಗೆ ರಾಜಕಾರಣಿಗಳು ತಮಗೆ ಬೇಕಾದವರನ್ನ, ಬೇಡದಿರುವವರನ್ನ ವರ್ಗಾವಣೆ ಮಾಡುತ್ತಾರೆಂದರೆ, ಕರ್ನಾಟಕದಲ್ಲಿ ಪೊಲೀಸರು ಅಕ್ಷರಶಃ ಗುಲಾಮರಾಗಿದ್ದಾರೆ ಎಂದಾಯಿತು ಅಷ್ಟಕ್ಕೂ ಪೊಲೀಸರು ಕಷ್ಟ ಪಟ್ಟು ಆ ಸ್ಥಾನಕ್ಕೆ ಬರುವುದು ಇವರ ಚಾಕರಿ ಮಾಡುವುದಕ್ಕಾ? ಅಥವಾ ಜನರ ಸೇವೆ ಮಾಡುವುದಕ್ಕಾ? ಸರಿ, ಇವರ ಸೇವೆ ಮಾಡಿಕೊಂಡಿದ್ದು, ಆ ಪೊಲೀಸರ ವ್ಯಾಪ್ತಿಯಲ್ಲಿ ಏನಾದರೂ ಗಲಭೆಯೋ, ಕಾನೂನು ಸುವ್ಯವಸ್ಥೆ ಹದಗೆಡುವಂಥ ಘಟನೆಯಾಯಿತು ಎಂದರೆ ಅದಕ್ಕೆ ಪ್ರಶ್ನೆ ಮಾಡುವುದೂ ಪೊಲೀಸರನ್ನೇ ಹೊರತು ರಾಜಕಾರಣಿಯನ್ನಲ್ಲ. ಕೊನೆಗೆ ಈ ರಾಜಕಾರಣಿಯ ಹತ್ತಿರವೂ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಅಂದರೆ ನೀವಿಲ್ಲಿ ಆಲೋಚಿಸಬಹುದು ಪೊಲೀಸರು ಹೇಗೆ ಅಕ್ಷರಶಃ ಜೀತದಾಳಾಗಿದ್ದಾರೆ ಎಂದು. ಇಷ್ಟೆಲ್ಲ ಮಾಡುವ ರಾಜಕಾರಣಿಗಳು, ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆದರೆ ಅದರ ಜವಾಬ್ದಾರಿ ಹೊರಲು ಸಿದ್ಧರಿದ್ದೀರಾ?

Straight trees are cut first ಎಂದ ಹಾಗೆ ದಕ್ಷ ಅಧಿಕಾರಿಗಳಿಗೆ ಒಂದು ವರ್ಗಾವಣೆ ಅಥವಾ ಯಾವುದೋ ಗಣ್ಯ ವ್ಯಕ್ತಿಯನ್ನು ಕಾಯಲು ಹಾಕಿಬಿಡುತ್ತಾರೆ. ತಮ್ಮ ಸರ್ವಿಸ್ ಪೂರ್ತಿ ಗಣ್ಯ ವ್ಯಕ್ತಿಗೆ ಸಲ್ಯೂಟ್ ಹೊಡೆಯುತ್ತಾ ಬಿದ್ದಿರಬೇಕು. ನನ್ನ ಅತ್ಮೀಯರಾಗಿದ್ದ ಪೊಲೀಸರೊಬ್ಬರು ಬಹಳ ಖಡಕ್ ಆಗಿದ್ದರು. ಪ್ರತಿ ಬಾರಿ ಅವರ ವ್ಯಾಪ್ತಿಯಲ್ಲಿ ಏನೇ ಗಲಭೆಯಾದರೂ ಹಿಂದೆ ಮುಂದೆ ನೊಡದೇ ಆರೋಪಿಗಳನ್ನು ಎಳೆದು ತರುತ್ತಿದ್ದರು. ಅಲ್ಲಿದ್ದ ಒಬ್ಬ ಎಮ್‌ಎಲ್‌ಎ ಕಡೆಯವರನ್ನು ಬಂಧಿಸಿದ್ದಕ್ಕೆ ಈಗ ಅವರನ್ನು ಮುಖ್ಯಮಂತ್ರಿಗಳ ಭದ್ರತಾ ಪಡೆಯಲ್ಲಿ ನಿಯೋಜಿಸಿದ್ದಾರೆ. ಸಲ್ಯೂಟ್ ಮಾಡುವುದೊಂದು ಬಿಟ್ಟರೆ ಏನೂ ಮಾಡದಂತೆ ಕೈ ಕಟ್ಟಿ ಬಿಟ್ಟಿದ್ದಾರೆ. ಸಮಾಜದಲ್ಲಿರುವ ಕ್ರೂರಿಗಳ ದಾಳಿಯಿಂದ ಎಷ್ಟು ಬಾರಿ ದಕ್ಷ ಅಧಿಕಾರಿಗಳು ತಮ್ಮನ್ನು ನಿಯಂತ್ರಿಸಿಕೊಳ್ಳುತ್ತಾರೆ? ಕೊನೆಗೆ ಒಂದೆಲ್ಲ ಒಂದು ದಿನ ಅವರೂ ಭ್ರಷ್ಟರಾಗಿಬಿಡುತ್ತಾರೆ. ಈಗ ನಾವು ಅನುಪಮಾ ಶೆಣೈ ಪರ ನಿಲ್ಲದಿದ್ದರೆ, ಅಥವಾ ಅವರಿಗೆ ನೈತಿಕ ಬೆಂಬಲ ಕೊಡದಿದ್ದರೆ. ಈಗಾಗಲೇ ಕರ್ನಾಟಕ ಕಳೆದುಕೊಂಡಂಥ ಎಷ್ಟೋ ಅಧಿಕಾರಿಗಳಲ್ಲಿ ಒಬ್ಬರಾಗುತ್ತಾರೆ. ರಾಜಕಾರಣಿಗಳು ಬಯಸುವುದೂ ಅದನ್ನೇ ಇರಬೇಕು.

31 thoughts on “ಪೊಲೀಸರೆಂದರೆ ಗುಲಾಮರೇ ಪರಮೇಶ್ವರ?

  1. JRBsVB You have made some really good points there. I looked on the internet for more information about the issue and found most people will go along with your views on this website.

  2. z6LHJw Normally I don at learn article on blogs, however I would like to say that this write-up very pressured me to check out and do so! Your writing style has been surprised me. Thanks, quite nice post.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya