ನೋಡಿ ಸ್ವಾಮಿ ನೆಹರೂ ಇರೋದೆ ಹೀಗೆ!

ಭಾರತಕ್ಕೆ ಮೊದಲ ಪ್ರಧಾನಿ ನೆಹರೂ, ನಂತರ ಮೌಂಟ ಬ್ಯಾಟನ್ ಹೆಂಡತಿ ಎಡ್ವಿನಾ ಮೌಂಟ್ ಬ್ಯಾಟನ್. ಏಕೆಂದರೆ ದೇಶದ ಬಗ್ಗೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ನೆಹರೂ, ಎಡ್ವಿನಾ ಸಲಹೆ ಪಡೆಯುತ್ತಿದ್ದರು. ಅಸಲಿಗೆ ನೇಹರೂ ಇಂಗ್ಲೆಂಡಿಗೆ ಹೋಗುತ್ತಿದ್ದದ್ದು ನೇತಾಜಿ ಬಗ್ಗೆ ಮಾತನಾಡುವುದಕ್ಕಲ್ಲ, ಮೌಂಟ್ ಬ್ಯಾಟನ್ ಹೆಂಡತಿಯನ್ನು ಭೇಟಿಯಾಗಲು ಎಂದು ಇತ್ತೀಚೆಗೆ ಸುಬ್ರಮಣಿಯನ್ ಸ್ವಾಮಿಯವರು ಹೇಳಿದ್ದು ಬಹಳ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಕಡತದಲ್ಲಿ ಚಿತ್ರಿಸಿರುವ ನೆಹರೂ ವ್ಯಕ್ತಿತ್ವ ಹೇಗಿತ್ತು? ಕಡತದಲ್ಲಿ ಹುದುಗಿದ್ದ ಅಪರೂಪದ ಮಾಹಿತಿಗಳು ಮತ್ತು ವಿಶ್ಲೇಷಣೆ ವಿಶ್ವವಾಣಿಯಲ್ಲಿ ಮಾತ್ರ.

ನೇತಾಜಿ ಕಡತ ಬಿಡುಗಡೆಯಾಗದೆ. ಇಷ್ಟು ವರ್ಷ ಸಾಲು ಸಾಲು ಪುಸ್ತಕಗಳು ಬಂದರೂ ಕಾಂಗ್ರೆಸಿಗರು ಹೇಳುತ್ತಿದ್ದುದು ಒಂದೇ, ’ಎಲ್ಲಿ ಎಲ್ಲದಕ್ಕೂ ದಾಖಲೆ ಕೊಡಿ’ ಎಂದು ನುಣುಚಿಕೊಳ್ಳುತ್ತಿದ್ದರು. ಎಷ್ಟೇ ಲೇಖಕರು ಪುಸ್ತಕ ಬರೆದರೂ ಅದರಲ್ಲಿ ಕೊಟ್ಟ ದಾಖಲೆಗಳು ಪೂರ್ವಗ್ರಹ ಎಂದು ಸಾಗಹಾಕಿಬಿಡುತ್ತಿದ್ದರು. ಈಗ ಅದು ಸಾಧ್ಯವಿಲ್ಲದಾದಾಗ ಹೊಸ ರಾಗಗಳು ಸೃಷ್ಟಿಯಾಗಿವೆ. ಅದೇನೆಂದರೆ, ಈ ದಾಖಲೆಗಳನ್ನೆಲ್ಲ ನಕಲು ಮಾಡಲಾಗಿದೆ ಎಂದು. ಇದರಲ್ಲಿ ಪ್ರಮುಖವಾದದ್ದು ಬ್ರಿಟನ್ ಪ್ರಧಾನಿ ಕ್ಲೆಮೆಂಟ್ ಆ್ಯಟ್ಲಿಗೆ ಪತ್ರ ಬರೆಯುವಾಗ ನೇತಾಜಿಯನ್ನ ’ಯುದ್ಧಾಪರಾಧಿ’ ಎಂದದ್ದು. ಅಸಲಿಗೆ, ನೆಹರೂ ನೇತಾಜಿಯನ್ನ ಯುದ್ಧ ಖೈದಿ ಎಂದು ಕರೆದದ್ದು ಇದೇ ಮೊದಲಲ್ಲ. ಹಲವು ಬಾರಿ ಹಾಗೆ ಕರೆದಿದ್ದಾರೆ ಎನ್ನುವುದಕ್ಕೆ ನಮಗೆ ನೇತಾಜಿ ಕಡತಗಳಲ್ಲೇ ಸಾಕಷ್ಟಿದೆ. ನಾವು ಇಲ್ಲಿ ವಿತ್ತಂಡ ವಾದ ಮಾಡುವುದು ಬೇಡ, ಬದಲಿಗೆ ದಾಖಲೆಯ ಸಮೇತ ಲಾಜಿಕಲ್ ಆಗಿ ಆಲೋಚಿಸಿದರೆ ಸಾಕು ನೆಹರೂಗೆ ನೇತಾಜಿಯ ಮೇಲೆ ಎಷ್ಟು ಕೋಪವಿತ್ತು ಎನ್ನುವುದೆಲ್ಲವೂ ತಿಳಿದು ಬಿಡುತ್ತದೆ.

ಶ್ಯಾಮಲಾಲ್ ಬಿಚ್ಚಿಟ್ಟ ಆಘಾತಕಾರಿ ಸತ್ಯ

ಖೋಸ್ಲಾ ಕಮಿಷನ್ನಿಗೆ ಬಹಳಷ್ಟು ಮಾಹಿತಿ ನೀಡಿದವರಲ್ಲಿ ಒಬ್ಬರು, ಅಸಫ್ ಅಲಿಯ ಸ್ಟೆೆನೋಗ್ರಾಫರ್ ಶ್ಯಾಮಲಾಲ್ ಜೈನ್. ಇವರು ಕೊಟ್ಟ ಒಂದೊಂದು ಮಾಹಿತಿಯೂ ಬಹಳ ರೋಚಕವೆನಿಸುವಂತಿದೆ. ನೆಹರೂ ನೀಚತನದ ಬಗ್ಗೆ ನೆಹರೂಗೆ ಬಿಟ್ಟರೆ ನಂತರ ಗೊತ್ತಿದ್ದದ್ದೇ ಶ್ಯಾಮ್‌ಲಾಲ್‌ಗೆ. ಅಸಲಿಗೆ ಈ ಅಸಫ್ ಅಲಿ ಯಾರು ಎಂದು ನೀವೆಲ್ಲ ತಿಳಿಯಬೇಕು. ನೆಹರೂ ತನ್ನ ಕಾರ್ಯಸಾಧನೆಗಾಗಿ ಎಂಥ ದೇಶದ್ರೋಹಿಯ ಕಾಲನ್ನಾದರೂ ಹಿಡಿಯುತ್ತಿದ್ದರು ಎನ್ನವುದಕ್ಕೆ ಒಂದು ಸ್ಪಷ್ಟ ಉದಾಹರಣೆ ಅಸಫ್ ಅಲಿಯ ಮೂಲಕ ತಿಳಿಯುತ್ತದೆ. ಐಎನ್‌ಎ ಡಿಫೆನ್‌ಸ್‌ ಕಮಿಟಿಯ ಕಾರ್ಯದರ್ಶಿಯಾಗಿದ್ದ ಈ ಅಸಫ್. ನೆನಪಿರಲಿ, ಈ ಕಮಿಟಿಗೆ ನೆಹರೂ ಸಹ ಸದಸ್ಯರಾಗಿದ್ದರು. ಕಾರ್ಯದರ್ಶಿ ಎನ್ನುವುದು ಅಸಫ್‌ನ ಪ್ರತಿಷ್ಠೆಗಷ್ಟೇ ಆಗಿತ್ತು. ಈತನ ದೋ ನಂಬರ್ ದಂಧೆ ಬೇರೆಯೇ ಇತ್ತು. ನಮ್ಮ ದೇಶಕ್ಕೆಂದು ಮತ್ತು ನಮ್ಮ ಯೋಧರಿಗೆಂದು ತಯಾರಿಸಲಾಗುತ್ತಿದ್ದ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡುತ್ತಿದ್ದ. ದೇಶದ ಉಪ್ಪು ತಿಂದ ನಿಯತ್ತೂ ಇಲ್ಲದ ಇಂಥ ನಮಕ್ ಹರಾಮ್‌ಗಳ ಜತೆ ನೆಹರೂಗೆ ಸಂಬಂಧವಿತ್ತು ಎಂದು ಶ್ಯಾಮಲಾಲ್ ಜೈನ್ ಬಾಯಿ ಬಿಟ್ಟಿದ್ದಾರೆ.

1945 ಡಿಸೆಂಬರ್ 27ರಂದು ಶ್ಯಾಮಲಾಲ್‌ಗೆ ನೆಹರೂರಿಂದ ಒಂದು ಕರೆ ಬರುತ್ತದೆ. ಆದಷ್ಟು ಬೇಗ ಟೈಪ್‌ರೈಟರ್ ತಗೆದುಕೊಂಡು ಅಸಫ್ ಅಲಿ ಮನೆಗೆ ಬನ್ನಿ ಎಂದು. ತನ್ನ ಜಾಗಕ್ಕೇ ಕರೆಸಿಕೊಂಡ ನೆಹರೂ ಶ್ಯಾಮ್‌ಲಾಲ್ ಬಳಿ ಬರೆಸಿದ್ದೆಲ್ಲ ನೇತಾಜಿ ವಿರುದ್ಧ ಪತ್ರಗಳನ್ನೇ. ಅದರಲ್ಲಿ ಒಂದು ಬಹುಮುಖ್ಯವಾದದ್ದು. ’ನೇತಾಜಿ ಒಬ್ಬ ದೇಶದ್ರೋಹಿ, ಆತ ಜ್ಯಾಪನೀಸ್ ಬಾಂಬರ್ ವಿಮಾನದಲ್ಲಿ ಮಂಚುರಿಯಾಗೆ ಬಂದರು. ಅವರ ಬಳಿ ಲಕ್ಷ ಲಕ್ಷ ಬೆಲೆಬಾಳುವ ಆಭರಣ ಎಲ್ಲವೂ ಇತ್ತು. ಇದನ್ನು ಭಾರತದಿಂದ ಕದ್ದು ಮತ್ತೆಲ್ಲೋ ಸಾಗಿಸುತ್ತಿದ್ದರು’ ಎಂದು ಸುಳ್ಳು ದಾಖಲೆಯೂ ಸೃಷ್ಟಿಯಾಯಿತು. ಈ ಅಷ್ಟೂ ವಿಚಾರಗಳನ್ನು ಸ್ವತಃ ಶ್ಯಾಮ್‌ಲಾಲ್‌ರೇ ಖೋಸ್ಲಾ ಕಮಿಷನ್ ಮುಂದೆ ಹೇಳಿದ್ದಾರೆ.

ಅಷ್ಟಕ್ಕೂ ದೇಶದ ಪ್ರಧಾನಿಗೆ ನೇತಾಜಿಯ ಚಾರಿತ್ರ್ಯಹರಣ ಮಾಡುವ ದರ್ದಾದರೂ ಏನಿತ್ತು? ಇದಕ್ಕೆ ದೇಶದ್ರೋಹಿ ಅಸಫ್‌ನ ಬೆಂಬಲವೇಕೆ? ಇದೆಲ್ಲಕ್ಕಿಂತ ಆಶ್ಚರ್ಯದ ವಿಚಾರವೆಂದರೆ ಇವೆಲ್ಲವೂ ನಡೆದಿದ್ದು ಇದೇ ಅಸಫ್‌ನ ಮನೆಯಲ್ಲೇ. ವಾವ್! ವೈಯಕ್ತಿಕ ದ್ವೇಷಕ್ಕಾಗಿ ದೇಶದ್ರೋಹಿಯ ಜೊತೆ ಕೈಜೋಡಿಸುವುದನ್ನು ಮೊದಲು ಹೇಳಿಕೊಟ್ಟಿದ್ದೇ ನೆಹರೂ.
ಮಣಿಶಂಕರ್ ಐಯ್ಯರ್ ನೆನಪಿದೆಯಾ? ಪಾಕಿಸ್ತಾನಕ್ಕೇ ಹೋಗಿ ಅಲ್ಲಿನ ಮಾಧ್ಯಮಗಳ ಸಂದರ್ಶನದಲ್ಲಿ ಮಾತನಾಡುತ್ತಾ ಮೋದಿಯನ್ನು ಸೋಲಿಸಲು ನಮಗೆ ಪಾಕಿಸ್ತಾನದ ಸಹಾಯ ಬೇಕು ಎಂದು ಹೇಳಿದ್ದಾರೆ. ಇದಕ್ಕೆ ಇಡೀ ದೇಶವೇ ಹೌಹಾರಿತ್ತು. ಆದರೆ, ನಾವು ಅಷ್ಟು ತಲೆಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ. ನೆಹರೂ ಅವರೇ ಇಂಥ ಹೀನ ಕೃತ್ಯಕ್ಕೆ ಕೈ ಹಾಕಿದ್ದಾಗ ನಾವು ಅವರನ್ನು ಅಂದೇ ಹಿಡಿದು ಕೇಳುವ ಬದಲು ಬಾಯಿ ಮುಚ್ಚಿಕೊಂಡಿದ್ದೆವು.

ನೇತಾಜಿಯ ಚಿನ್ನಾಭರಣ ಕದ್ದ ನೆಹರೂ!

ನೇತಾಜಿ ವಿಷಯವನ್ನ ತಕ್ಕಮಟ್ಟಿಗೆ ತಿಳಿದುಕೊಂಡವರಿಗೆ ಬಹುಶಃ ಅವರ ಬಳಿಯಿದ್ದ ಕೆಲ ಚಿನ್ನಾಭರಣಗಳು, ಹಣದ ಬಗ್ಗೆ ತಿಳಿದಿರಬಹುದು. ಹೌದು, ಅದು ಅವರದ್ದಾಗಿರಲಿಲ್ಲ. ಬದಲಿಗೆ, ನೇತಾಜಿಯ ಸೈನ್ಯಕ್ಕೆ ಸೇರುವವರು ಅವರವರ ಮನೆಯಿಂದ ಪ್ರೀತಿಯಿಂದ ತಂದು ಸೇನೆಯ ಖರ್ಚು ವೆಚ್ಚ ನಿಭಾಯಿಸಲು ನೇತಾಜಿಗೆ ಕೊಟ್ಟಿದ್ದು. ಕೆಲವರು ದಾನ ಮಾಡಿದ್ದೂ ಇತ್ತು. ಅಂದಿನ ಕಾಲಕ್ಕೇ ಲಕ್ಷ ಲಕ್ಷ ಹಣ ಮತ್ತು ಚಿನ್ನಾಭರಣಗಳನ್ನು ಸುಮಾರು 8 ಪೆಟ್ಟಿಗೆಗಳಲ್ಲಿ ಹೊತ್ತು ಜಪಾನಿಗೆ ಹೊರಡುವ ತಯಾರಿಯಲ್ಲಿದ್ದರು. ಆದರೆ, ಕಡತದಲ್ಲಿರುವ ಮಾಹಿತಿಯ ಪ್ರಕಾರ ನೇತಾಜಿಯ ದೊಡ್ಡ ಮಟ್ಟದ ಹಣ ಕಳವಾಗಿತ್ತು. ಹೇಗೆ ಎಲ್ಲಿ ಹೋಯಿತೆಂಬುದೇ ಪತ್ತೆಯಿಲ್ಲ. ಇದನ್ನೂ ನೆಹರೂ ಮೇಲೆ ಎತ್ತಿಹಾಕುವುದು ಯಾವ ನ್ಯಾಯ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಅದಕ್ಕೂ ಕಡತಗಳಲ್ಲಿ ಉತ್ತರವಿದೆ. 1951ರ ಸೆಪ್ಟೆಂಬರ್ 26ಕ್ಕೆ ಕೆ.ಕೆ.ಚತುರ್ ಎನ್ನುವವರು ಪ್ರಧಾನಿ ನೆಹರೂಗೆ ಪತ್ರ ಬರೆದಿದ್ದರು. ರಾಮಮೂರ್ತಿ ಎನ್ನುವವರು ನೇತಾಜಿಯ ಹಣ, ಚಿನ್ನಾಭರಣಗಳನ್ನ ಕದ್ದಿದ್ದಾರೆ. ಇದರ ಬಗ್ಗೆ ತಾವೇನು ಹೇಳುತ್ತೀರ? ಎಂದು ಕೇಳುತ್ತಿದ್ದರು. ಅದಕ್ಕೆ ಉತ್ತರಿಸಿದ ನೆಹರೂ, ’ರಾಮಮೂರ್ತಿ ಒಂದೇ ದಿನದಲ್ಲಿ ಹೇಗೆ ಅಷ್ಟು ಶ್ರೀಮಂತರಾದರು ಎಂದು ಅನೇಕ ಜನರು ನಮಗೆ ಹೇಳಿದ್ದಾರೆ. ನೀವು ಅದರ ಬಗ್ಗೆ ತಿಳಿದುಕೊಳ್ಳಬೇಕಿದ್ದರೆ ಬಹಳ ಗೌಪ್ಯವಾಗಿಯೇ ತನಿಖೆ ಮಾಡಿಕೊಳ್ಳಿ’ ಎಂಬ ಬಿಟ್ಟಿ ಸಲಹೆ ಕೊಟ್ಟು ಕೈ ತೊಳೆದುಕೊಂಡಿದ್ದರು. ಸರಿ, ತನಿಖೆ ಮಾಡಬಹುದು ಎಂದು ಹೇಳಿದ್ದಾರೆ ನಿಜ. ಆದರೆ, ಗೌಪ್ಯ ತನಿಖೆ ಏಕೆ?

ಅಲ್ಲಿಗೆ, ನೆಹರೂ ಕೈವಾಡ ಏನೋ ಇದೆ ಎಂದು ಅನುಮಾನ ಬರಲು ಶುರುವಾಯಿತು. ಅದು ನಿಜವೂ ಆಗಿತ್ತು. ರಾಮಮೂರ್ತಿ, ಕಳ್ಳತನ ಮಾಡಿದ್ದ ಹಣವನ್ನೆಲ್ಲ ಮೂಟೆ ಕಟ್ಟಿ ಜಪಾನ್‌ಗೆ ಹೋಗುವ ಮುನ್ನ ಅಂದರೆ 1951ರ ಜೂನ್ 26ಕ್ಕೆ ನೆಹರೂ ರಹಸ್ಯವಾಗಿ ಭೇಟಿ ಮಾಡುತ್ತಾರೆ. ಇಲ್ಲಿ ಮತ್ತೊಂದು ಪ್ರಶ್ನೆ ಉದ್ಭವಿಸುತ್ತದೆ. ಅವನ ಪಾಡಿಗೆ ಅವನು ಹಣ ದೋಚಿ ಲೈಫ್ ಸೆಟಲ್ ಮಾಡಿಕೊಳ್ಳಲು ಜಪಾನ್‌ಗೆ ಹೋಗುತ್ತಿರುವವನ ಭೇಟಿ ಮಾಡುವ ಇರಾದೆಯಾದರೂ ಏನಿತ್ತು ನೆಹರೂಗೆ? ಒಬ್ಬ ರೈತನಿಗೆ ಅವನ ಹೊಲದಲ್ಲಿ ಅವನಿಗೇ ನಿಧಿ ಸಿಕ್ಕರೂ ಒಂದು ಹಿತ್ತಾಳೆಯ ತುಂಡೂ ಬಿಡದಂತೆ ಬಾಚಿ ಬೊಕ್ಕಸಕ್ಕೆ ಇಳಿಸಿಕೊಳ್ಳುತ್ತೆ ಸರಕಾರ. ಹೀಗಿರುವಾಗ ರಾಮಮೂರ್ತಿ ಕದ್ದಿರುವ ಚಿನ್ನಾಭರಣಗಳು ದೇಶದ ಸಂಪತ್ತು ಎಂದು ತಿಳಿದಿದ್ದರೂ ನೆಹರೂ ಏಕೆ ಆತನನ್ನು ಸುಮ್ಮನೆ ಹೋಗಲು ಬಿಟ್ಟರು? ಕಳ್ಳನ ಮೇಲೆ ಕನಿಕರ ಬಂತೇ? ಅಥವಾ ಅದು ದೇಶದ ಸಂಪತ್ತು ಎಂದು ಪ್ರಧಾನಿಗೇ ಗೊತ್ತಿಲ್ಲದೇ ಕಳ್ಳನ ಮನೆಗೆ ಹೋಗಿ ಕಾಫಿ ಕುಡಿದು ಬಂದರೋ? ಕದ್ದ ಮಾಲಲ್ಲಿ ನೆಹರೂ ಪಾಲೆಷ್ಟು?

ಕೃತ್ಯಕ್ಕೆ ಉಸ್ಮಾನ್ ಪಟೇಲ್ ಬಳಕೆ

ನೆಹರೂವೇನು ದಡ್ಡರಲ್ಲ, ಮುಂದೆ ಎಲ್ಲಾದರೂ ನೀವು ನೇತಾಜಿಯ ಹಣ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸಬಹುದು ಅಥವಾ ಕಳ್ಳ ರಾಮಮೂರ್ತಿಯನ್ನ ಭೇಟಿ ಮಾಡಲು ಹೋಗಿದ್ದ ಕಾರಣವೇನು ಎಂದೂ ಪ್ರಶ್ನೆ ಬರಬಹುದು ಎಂದು ನೆಹರೂಗೆ ತಿಳಿದಿತ್ತು. ಇಲ್ಲಿ ರಾಮಮೂರ್ತಿಯನ್ನ ನಿರಪರಾಧಿ ಎಂದು ಸಾಬೀತು ಮಾಡುವ ಅಥವಾ ಅವರನ್ನು ಈ ಕಳ್ಳತನದ ಚೌಕಟ್ಟಿನೊಳಗೇ ಇಲ್ಲದ ಹಾಗೆ ನೋಡಿಕೊಳ್ಳುವ ಅನಿವಾರ್ಯ ರಾಮಮೂರ್ತಿಗಿಂತಲೂ ನೆಹರೂಗೇ ಜಾಸ್ತಿ ಇತ್ತು. ಇದೇ ಕಾರಣಕ್ಕೆ ನೇತಾಜಿಯ ಬಾಡಿ ಗಾರ್ಡ್ ಆಗಿದ್ದ ಉಸ್ಮಾನ್ ಪಟೇಲ್‌ರ ಕೈಯಲ್ಲಿ ಒಂದು ನೀಚ ಕೃತ್ಯ ಮಾಡಿಸಿಕೊಳ್ಳಲು ಹುಡುಕಿ ಕರೆತಂದಿದ್ದು.

ಉಸ್ಮಾನ್ ಪಟೇಲ್, ನೇತಾಜಿಗಿದ್ದ ಒಬ್ಬ ನಿಯತ್ತಿನ ಅಂಗರಕ್ಷಕ. ಯಾವಾಗಲೂ ನೇತಾಜಿ ಜೊತೆಯಲ್ಲೇ ಇರುತ್ತಿದ್ದರು. ಅಂಥವನನ್ನು ಹುಡುಕಿ ಆತನಿಗೆ ಬೆದರಿಸಿ, ನೇತಾಜಿ ಬಳಿ ಇದ್ದ ಅಷ್ಟೂ ಹಣವನ್ನು ಅವರು ಸಿಂಗಾಪುರಕ್ಕೆ ಹೋದಾಗ ಅಲ್ಲಿನ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿತ್ತು ಎಂಬುದನ್ನು ಬರೆದುಕೊಡು ಎಂದು ಸ್ವತಃ ನೆಹರೂ ಆದೇಶಿಸಿದ್ದರು. ನೇತಾಜಿಯ ವಿರುದ್ಧ ಇಂಥ ಸುಳ್ಳು ಬರಹವನ್ನು ತನ್ನಿಂದ ದಾಖಲಿಸಿದರು ಎಂದು ಸ್ವತಃ ಉಸ್ಮಾನ್ ಪಟೇಲ್ ಹೇಳಿದ್ದಾರೆ. ಅವರೇ ಹೇಳುವಂತೆ, ಅಂಥ ಸುಳ್ಳು ಬರೆಯಲಿಕ್ಕಾಗದೇ ಜೋರಾಗಿ ಅತ್ತಿದ್ದರಂತೆ ಪಟೇಲ್. ಆದರೆ, ಅಲ್ಲಿನ ಪರಿಸ್ಥಿತಿ ಅದೊಂಥರ ಗೋವುಗಳನ್ನು ಕಡಿಯುವ ಮನೆಯಂತಿತ್ತು. ಎಲ್ಲೂ ಪಾಪ, ಪುಣ್ಯ, ನಿಯತ್ತು, ಭಾವನೆ ಎಂಬ ಇತ್ಯಾದಿ ಪದಗಳಿಗೆ ಬೆಲೆಯೇ ಇರಲಿಲ್ಲ. ಇದು ದೇಶ ಕಂಡ ಅಪ್ರತಿಮ ಪ್ರಧಾನಿಯೊಬ್ಬನ ಘನ ಕಾರ್ಯಗಳು. ದೇಶಕ್ಕೆ ಕೊಟ್ಟ ಕೊಡುಗೆಗಳು.

ಇದೊಂದೇ ಅಲ್ಲ, ಕಳವಾಗಿದ್ದ ಅಷ್ಟೂ ಚಿನ್ನಾಭರಣಗಳನ್ನು ಅಲಹಾಬಾದ್‌ನಲ್ಲಿ ಕರಗಿಸಿ ಅದನ್ನು ನೆಹರೂ ಅಕೌಂಟಿಗೆ ಜಮಾ ಮಾಡಲಾಗಿತ್ತು. ಇದಾದ ಬಳಿಕ ಎಲ್ಲೂ ನೇತಾಜಿಯ ಚಿನ್ನಾಭರಣಗಳ ಬಗ್ಗೆ ಮಾತೇ ಬರಲಿಲ್ಲ. ಈ ವಿಷಯ 1978ರ ಫೆಬ್ರವರಿ 9ರಂದು ಸುಬ್ರಮಣಿಯನ್ ಸ್ವಾಮಿಯವರು ತನಿಖೆ ಮಾಡಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಒಂದು ವರದಿ ಮಾಡಿದೆ. ಇದರ ಬಗ್ಗೆ ತನಿಖೆ ಮಾಡುವಂತೆ ಇಂಡಿಯನ್ ಎಂಬಸಿಯ ಕೌನ್ಸೆಲರ್ ಆಗಿದ್ದಂಥ ಎ.ಎನ್.ರಾಮ್‌ಗೆ ಫಬ್ರವರಿ ಹತ್ತಕ್ಕೇ ಪತ್ರ ಬರುತ್ತದೆ. ತನಿಖೆ ಮಾಡಿದರಾ? ಅದರ ವರದಿ ಏನಾಯಿತು? ನಾಶ ಮಾಡಿದರೇ!

ಪಾಪದ ದಾಖಲೆ ನಾಶಪಡಿಸಿದ ನೆಹರೂ, ಇಂದಿರಾ!

ನೇತಾಜಿ ಸಾವಿನ ರಹಸ್ಯವನ್ನು ನಾವು ಎಷ್ಟೇ ಹುಡುಕುತ್ತಿದ್ದರೂ ಅಷ್ಟೇ ರೋಚಕವೆನಿಸುವ ಕಥೆಗಳು ನಮ್ಮ ಕಣ್ಣ ಮುಂದೆ ಬರುತ್ತದೆ. ಅದಕ್ಕೆ ಒಂದು ಉದಾಹರಣೆ ಮೊಹಮ್ಮದ್ ಯೂನಸ್. ಈತ, ನೆಹರೂರ ಕಾರ್ಯದರ್ಶಿ. ಆದರೆ, ಹೊರಗಿನ ಜನಕ್ಕೆ ಈತ ನೆಹರೂ ಜತೆ ಇದ್ದದ್ದೇ ಗೊತ್ತಿಲ್ಲ. ಏಕೆಂದರೆ, ಯೂನಸ್ ಗೌಪ್ಯ ಕಾರ್ಯದರ್ಶಿಯಾಗಿದ್ದ. ನೇತಾಜಿಯ ಸಾವಿನ ಪ್ರಕರಣದ ಬಗೆಗಿನ ಎರಡು ಬಹುಮುಖ್ಯ ದಾಖಲೆಗಳು ನಾಶವಾಗಿದ್ದವು. ಆ ಎರಡೂ ದಾಖಲೆಗಳು ಇದ್ದದ್ದು ಇದೇ ಮೊಹಮ್ಮದ್ ಯೂನಸ್ ಬಳಿ. ಇವಿಷ್ಟೇ ಅಲ್ಲ, ಇಂಥದ್ದೇ ಬಹುಮುಖ್ಯವೆನಿಸುವ 30 ದಾಖಲೆಗಳು ಇದ್ದವು. ಇದೆಲ್ಲ ಮೊದಲು ನೆಹರೂಗೆ ಸಿಕ್ಕಿದ್ದರೂ, ಇದ್ದದ್ದು ಮಾತ್ರ ಯೂನಸ್ ಬಳಿ. ಕೊನೆಗೆ ಅದನ್ನೂ ನಾಶ ಪಡಿಸಿದರು. ಮೊದಲಿಗೆ ಕೇವಲ ಎರಡೇ ರಹಸ್ಯ ದಾಖಲೆಗಳು ನಾಶವಾಗಿವೆ ಎಂದೇ ಎಲ್ಲರೂ ತಿಳಿದಿದ್ದರು. ಆದರೆ, ಸತ್ಯ ಹೇಗೆ ಹೊರಗೆ ಬರುತ್ತದೆ ನೋಡಿ, ಒಮ್ಮೆ ಗೃಹ ಸಚಿವಾಲಯ ಖೋಸ್ಲಾ ಕಮಿಷನ್ ಮುಂದೆ ಬೈ ಮಿಸ್ಟೇಕ್, 30 ದಾಖಲೆಗಳು ಒಂದೋ ನಾಶವಾಗಿವೆ ಇಲ್ಲ ಕಳೆದುಹೋಗಿವೆ ಎಂದು ಹೇಳಿತ್ತು. ಕೊನೆಗೆ ಅದನ್ನು ಸರಿಪಡಿಸಿಕೊಂಡಿತ್ತು. ಈ ಮೂವತ್ತೂ ಫೈಲುಗಳಲ್ಲಿ ಬಹುಮುಖ್ಯವಾದದ್ದು ಮತ್ತು ನೆಹರೂ ಕತ್ತಿಗೆ ಬರುವಂಥದ್ದು ’ಇನ್ವೆಸ್ಟಿಗೇಷನ್ ಇಂಟು ದಿ ಸರ‌್ಕಂಸ್ಟೆನ್ಸಸ್ ಲೀಡಿಂಗ್ ಟು ದಿ ಡೆತ್ ಆಫ್ ಸುಭಾಷ್ ಸಂದ್ರ ಬೋಸ್’ ಎಂಬ ಫೈಲು. ಇದನ್ನ ನಾಶ ಮಾಡುವ ಹೊಣೆ ಹೊತ್ತಿದ್ದೇ ಮೊಮ್ಮದ್ ಯೂನಸ್.

ನಿಮಗೆ ಈ ದಾಖಲೆಯ ತೀವ್ರತೆ ಎಷ್ಟಿತ್ತು ಎಂದು ತಿಳಿಯುವುದು ಒಬ್ಬ ಪತ್ರಕರ್ತನ ಮಾತು ಕೇಳಿದಾಗ. 2001ರ ಜನವರಿ 23ಕ್ಕೆ ಹಿರಿಯ ಪತ್ರಕರ್ತ ದೀಪಕ್ ಶರ್ಮಾ ಗೃಹ ಸಚಿವಾಲಯದ ಮಾತುಗಳನ್ನೇ ಕೋಟ್ ಮಾಡುತ್ತಾರೆ. ನೇತಾಜಿಗೆ ಸಂಬಂಧಿಸಿದ ಯಾವುದೇ ದಾಖಲೆಗಳಿದ್ದರೂ ನಾವು ಅದನ್ನ ಕಮಿಷನ್ ಮುಂದಿಡುತ್ತೇವೆ. ಆದರೆ, ಅದನ್ನೆೆಲ್ಲ ನಾವು ಪಬ್ಲಿಕ್ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಈ ದಾಖಲೆಗಳಲ್ಲಿರುವುದು ಎಲ್ಲವೂ ಆಘಾತಕಾರಿ ಸಂಗತಿಗಳೇ.. ಎಕ್ಸ್ ಪ್ರೋಸಿವ್ ಸಂಗತಿಗಳೇ ಎಂದು. ಅಂದರೆ, ನೇತಾಜಿ ಕಾಣೆಯಾದ ದಿನದಿಂದಲೂ ಇವತ್ತಿನವರೆಗೂ ಕಾಂಗ್ರೆಸ್‌ಗೆ ಎಲ್ಲ ವಿಚಾರಗಳ ಸಂಪೂರ್ಣ ವಿವರ ಇದೆ ಎಂದಾಯಿಲ್ಲ? ಸಾರ್ವಜನಿಕರಿಗೆ ಅಹಿತವೆನಿಸುವ ದಾಖಲೆಗಳು ಇವೆ ಎಂದರೆ, ಅದನ್ನು ಕಾಂಗ್ರೆಸ್ ಜನರ ಮುಂದಿಡಲು ಹಿಂಜರಿಯುತ್ತಿದೆ ಎಂದರೆ, ನೇತಾಜಿ ಕಾಣೆಯಾಗುವುದಕ್ಕೋ, ಸಾವಿಗೋ ಕಾಂಗ್ರೆಸ್ ಕೈವಾಡ ಇದೆ ಎಂದಾಗಲಿಲ್ಲವೇ?

ಸ್ಪೆೆಷಲ್ ಎನ್ವಾಯ್
ನೆಹರೂವೇ ಯೂನಸ್ ಕೈಯಿಂದ ದಾಖಲೆ ನಾಶ ಮಾಡಿಸಿದ್ದಾರೆ ಎನ್ನುವುದಕ್ಕೆ ಮತ್ತೇನಾದರೂ ದಾಖಲೆ ಬೇಕೆ? ಅದೂ ಇದೆ ಕೇಳಿ. ಇದಾದ ನಂತರ ಅಂದರೆ, 2005ರವರೆಗೆ ಕಾಂಗ್ರೆಸ್‌ನವರದ್ದು ಒಂದೇ ವಾದ. ನೆಹರೂಗೂ ಯೂನಸ್ ದಾಖಲೆ ನಾಶ ಮಾಡುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು. ಇವರ ಮಾತನ್ನು ಒಂದು ಕ್ಷಣ ನಂಬೋಣ. ಆದರೆ, ಅದರೊಟ್ಟಿಗೆ ಕೆಲ ಅನುಮಾನಗಳೂ ಬರುತ್ತವೆ. ಆಲೋಚಿಸಿ ನೋಡಿ, ಯೂನಸ್‌ಗೆ ನೇತಾಜಿ ವಿಷಯ ಹೊರಗೆ ಬಂದರೇನು? ಒಳಗೇ ಕೊಳೆತರೇನು? ಒಬ್ಬನ ಕಾರ್ಯದರ್ಶಿಯಾಗಿರುವವನು ತನ್ನ ಬಾಸ್ ಅಪ್ಪಣೆಯಿಲ್ಲದೇ ದಾಖಲೆ ನಾಶ ಮಾಡುವುದು ಸುಲಭದ ಮಾತೇನು? ಅದೂ ಪ್ರಧಾನಿಯ ದಾಖಲೆಗಳನ್ನ.
ಮತ್ತೊಂದು ಪ್ರಶ್ನೆಯೇನೆಂದರೆ, ಯೂನಸ್ ದಾಖಲೆ ನಾಶ ಮಾಡಿದ್ದಾನೆ ಎನ್ನುವ ಮಾತು ಅಂದೂ ಕೇಳಿ ಬಂದಿತ್ತು ಎಂದು ಖೋಸ್ಲಾ ಕಮಿಷನ್ ಹೇಳಿದೆ. ಇಂಥ ಆರೋಪವಿರುವ ಯೂನಸ್‌ನನ್ನು ಇಂದಿರಾ ಗಾಂಧಿ ಸರಕಾರ ಸ್ಪೆಷಲ್ ಎನ್ವಾಯ್(ವಿಶೇಷ ರಾಯಭಾರಿ)ಆಗಿ ಅಧಿಕೃತವಾಗಿ ನೇಮಕ ಮಾಡಿಕೊಂಡಿತ್ತು. ಪ್ರಮೋಷನ್ ಎಂದರೆ ಇದೇ ಅಲ್ವಾ? ಗೌಪ್ಯ ಕಾರ್ಯದರ್ಶಿಯಿಂದ ವಿಶೇಷ ರಾಯಭಾರಿಯವರೆಗೆ!! ಎಲ್ಲಾದರೂ ಇಂಥ ಬಡ್ತಿಯನ್ನ ಕಂಡಿದ್ದೀರಾ?
ಜನವರಿ 23ರಂದು ಬಿಜೆಪಿ ನೇತಾಜಿ ಸಾವಿನ ರಹಸ್ಯದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದಾಗಲೂ ಕಾಂಗ್ರೆಸ್ ಹೌಹಾರಿದ್ದೂ ಇದಕ್ಕೇ!

ವಿಮಾನ ಅಪಘಾತದಲ್ಲಿ ಸತ್ತಿದ್ದಾರೆಂದು ಸುಳ್ಳು ಹೇಳಿಸಲಾಗುತ್ತಿದೆ
ಇನ್ನು ಕೆಲ ಮಾಧ್ಯಮಗಳೂ ಬಿಡುಗಡೆಗೊಳಿಸಿರುವ ಕಡತಗಳನ್ನು ಪೂರ್ಣವಾಗಿ ಓದಿಕೊಳ್ಳದೇ ಯಾವುದೋ ಒಂದು ಕಡತದದಲ್ಲಿರುವ ಒಂದು ಪುಟದ ಮಾಹಿತಿಯನ್ನು ತೆಗೆದುಕೊಂಡು ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು ಎಂದು ಪ್ರಕಟಿಸಿದೆ. ಆದರೆ, ಸತ್ಯನಾರಾಯಣ್ ಸಿನ್ಹಾ ಎನ್ನುವವರು ನೇತಾಜಿ ರಷ್ಯಾದ ಸೈಬೀರಿಯಾದಲ್ಲಿರುವ ಯಕುಸ್ಕ್ ಜೈಲಿನ ಕೋಣೆ ನಂ.45ರಲ್ಲಿದ್ದರು ಎಂದು ಹೇಳಿದ್ದಾರೆ. ಇದು 1965ರ ಮೇ 7ಕ್ಕೆ ಬಜಾರ್ ಪತ್ರಿಕಾ ವರದಿ ಮಾಡಿದೆ. ಇದು ಸತ್ಯ ಏಕೆಂದರೆ, ನೇತಾಜಿ ನೆಹರೂಗೆ 50ರಲ್ಲೇ ಪತ್ರ ಬರೆದಿದ್ದರು. ಆದರೆ ಇದನ್ನು ಈಗ ಯಾವ ಮಾಧ್ಯಮಗಳೂ ವರದಿ ಮಾಡುತ್ತಿಲ್ಲವೇಕೆ?

ಕೆಲವೊಂದಿಷ್ಟು ಹೈಲೈಟ್ಸ್

*ನೇತಾಜಿ ಸತ್ತ ಮೇಲೆ ಸಾಕಷ್ಟು ಬಾರಿ ನೇತಾಜಿಯ ಪತ್ನಿಯನ್ನು ನೆಹರೂ ಭೇಟಿ ಮಾಡಿದ್ದರು. ಇದಾದ ಮೇಲೆ ಅವರು ಎಲ್ಲೂ ನೇತಾಜಿಯ ಬಗ್ಗೆ ಅವರ ಪತ್ನಿ ಮಾತಾಡಲೇ ಇಲ್ಲ. ಹಾಗಾದರೆ, ನೆಹರೂ ಧಮಕಿ ಹಾಕಿದ್ದರೇ?
* ನೇತಾಜಿ ಸಾವಿನ ಬಗ್ಗೆ ತನಿಖೆ ಮಾಡಲು ಸ್ಥಾಪಿಸಿರುವ ಕಮಿಷನ್‌ಗಳಿಗಿಂತ ಬ್ರಿಟಿಷ್ ಗುಪ್ತಚರ ಸಂಸ್ಥೆ ಮೇಲೆ ನೆಹರೂಗೆ ಬಹಳವೇ ಹೆದರಿಕೆಯಿತ್ತು.
*ನೇತಾಜಿಯ ವಿಷಯ ಮಾತನಾಡಬಾರದು ಎಂದು ಮಹಾತ್ಮ ಗಾಂಧಿಗೆ ನೆಹರೂ ತಾಕೀತು. ಹೀಗಾಗಿ ಗಾಂಧೀಜಿ ನೇತಾಜಿಯ ಬಗ್ಗೆ ಮಾತನಾಡುವುದನ್ನು ಕಡಿಮೆ ಮಾಡಿದ್ದರು. ಆದರೂ ಕೆಲ ಆಪ್ತರ ಬಳಿ ನೇತಾಜಿ ಬದುಕಿದ್ದಾರೆ, ಚಿಂತಿಸುವ ಅಗತ್ಯವಿಲ್ಲ ಎಂದಿದ್ದರು.
*ನೇತಾಜಿ ಎನ್ನುವ ಹೆಸರೇ ಎತ್ತಬಾರದು, ಅವರ ಚಿತ್ರಪಟ ಎಲ್ಲೂ ಹಾಕಬಾರದು, ಕ್ಯಾಂಟೀನ್, ಕಾರಿಡಾರ್‌ಗಳಂಥ ಸಾರ್ವಜನಿಕ ಪ್ರದೇಶಗಳಲ್ಲೂ ಅವರ ಬಗ್ಗೆ ಮಾತನಾಡಬಾರದು ಎಂದು ನೌಕರರಿಗೆ ತಾಕೀತು ಮಾಡಬೇಕು ಎಂದು ಸರಕಾರದ ಎಲ್ಲ ಇಲಾಖೆಯ ಮುಖ್ಯಸ್ಥರಿಗೂ ರಹಸ್ಯ ಪತ್ರ.
* ಯಾರೇ ಅತಿಥಿ ಬಂದರೂ ನೇತಾಜಿ ಬಗ್ಗೆ ಮಾತನಾಡದಂತೆ ನೋಡಿಕೊಳ್ಳಬೇಕು ಎಂದು ಆಲ್ ಇಂಡಿಯಾ ರೇಡಿಯೋ ಮುಖ್ಯಸ್ಥರಿಗೆ ನೊಟೀಸ್.
*ಒಮ್ಮೆ ನೇತಾಜಿ ಭಾರತಕ್ಕೆ ಬಂದರೆ ಅವರನ್ನು ಬ್ರಿಟಿಷರಿಗೆ ಒಪ್ಪಿಸುತ್ತೇವೆ ಎಂದು ಮೊಹಮ್ಮದ್ ಅಲಿ ಜಿನ್ನಾಹ್, ಗಾಂಧೀಜಿ, ನೆಹರೂ ಎಲ್ಲರೂ ಸೇರಿ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ನೇತಾಜಿಯ ಅಂಗರಕ್ಷಕನೇ ಈ ಮಾತನ್ನು ಖೋಸ್ಲಾ ಕಮಿಷನ್ ಮುಂದೆ ಹೇಳಿದ್ದ.
*ಸುಭಾಷ್ ಚಂದ್ರ ಬೋಸ್ ಸತ್ತರು ಎಂದರೆ ನಾನು ನಂಬುವುದಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಕಾರಣ ಬೋಸ್ ಹೊರತು ಗಾಂಧಿಯಲ್ಲ. ಎಲ್ಲಿ ನೇತಾಜಿಯ ಸೈನ್ಯ ಮತ್ತೆ ತಮ್ಮನ್ನು ನುಂಗಿಬಿಡುವುದೋ ಎಂದು ಹೆದರಿ, ಬಿಟ್ಟು ಹೋದರು- 1955ರಲ್ಲಿ ನಡೆದ ಬಿಬಿಸಿ ಸಂದರ್ಶನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಆಡಿದ ಮಾತು.

(ಆಧಾರ:
ಪುಸ್ತಕಗಳು:
1.) ಆ್ಯನ್ ಔಟ್‌ಸೈಡರ್ ಇನ್ ಪಾಲಿಟಿಕ್ಸಸ್.
2.) ನೇತಾಜಿ ಎ ಪಿಕ್ಟೋರಿಯಲ್ ಬಯೋಗ್ರಫಿ.
3.) ರಿಮೆಂಬರಿಂಗ್ ಮೈ ಫಾದರ್.
4.) ಬ್ರದರ್‌ಸ್‌ ಅಗೇನ್‌ಸ್ಟ್‌ ದಿ ಬ್ರಿಟಿಷ್ ರಾಜ್
5.) ವಾಟ್ ಹ್ಯಾಪಂಡ್ ಟು ನೇತಾಜಿ
6.) ಇಂಡಿಯಾಸ್ ಬಿಗ್ಗೆೆಸ್‌ಟ್‌ ಕವರಪ್
7.) ಹಿಸ್ಟರಿ ಆಫ್ ಫ್ರೀಡಮ್ ಮೂಮೆಂಟ್ ಇನ್ ಇಂಡಿಯಾ
8.) ದಿ ಲಾಸ್ಟ್ ಇಯರ್ ಸ್ ಆಫ್ ಬ್ರಿಟಿಷ್ ಇಂಡಿಯಾ
9.) ಜಡ್ಜ್ ಮೆಂಟ್, ನೋ ಏರ್ ಕ್ರ್ಯಾಶ್, ನೋ ಡೆತ್
ಕ್ಯಾಲಿಫೋರ್ನಿಯಾ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಂಡನೆಯಾದ ಪೇಪರ್

One thought on “ನೋಡಿ ಸ್ವಾಮಿ ನೆಹರೂ ಇರೋದೆ ಹೀಗೆ!

Leave a Reply to arabic sex Cancel reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya