ಬರಗೂರು ರಾಮಚಂದ್ರಪ್ಪನವರೇ ಏಕಿಷ್ಟು ಸುಳ್ಳಾಡುತ್ತೀರಿ?

ಬರೆಯುವುದನ್ನು ನಿಲ್ಲಿಸಿ, ಸರಕಾರಿ ಬಂಗಲೆಯ ಆಶ್ರಯದಲ್ಲಿ ಉಂಡು ಮಲಗುವ ಕೆಲ ಸಾಹಿತಿಗಳಿಗೆ ಹಲವಾರು ವಿಚಿತ್ರ ಆಸೆಗಳಿರುತ್ತವೆ. ಅದರಲ್ಲೊಂದು ತನ್ನ ಹೆಸರನ್ನ ಎಲ್ಲ ಯುವ ಪೀಳಿಗೆ ಜಪಿಸಬೇಕು ಅಥವಾ ಯಾವುದಾದರೂ ಮಾಧ್ಯಮಗಳಲ್ಲಿ ಹರಿದಾಡುತ್ತಿರಬೇಕು ಎಂದು. ಇದೇ ಕಾರಣಕ್ಕೆ ಕೆಲ ’ಸಾಯಿತಿ’ಗಳು ಬಾಯಿಗೆ ಬಂದ ಹಾಗೆ ಹೇಳಿಕೆ ಕೊಟ್ಟು ಸುದ್ದಿಯಲ್ಲಿರುತ್ತಾರೆ. ಆದರೆ, ಈ ಸಾಲಿಗೆ ಬರಗೂರು ರಾಮಚಂದ್ರಪ್ಪ ಕೂಡ ಸೇರಿಬಿಟ್ರಾ ಎಂಬ ಅನುಮಾನ ಕಾಡುತ್ತಿದೆ. ಮೊನ್ನೆ ಕಾರ್ಯಕ್ರಮವೊಂದರಲ್ಲಿ ಬರಗೂರು ಮಾತನಾಡುತ್ತಾ, ಹಿಂದೂ ಧರ್ಮದಷ್ಟು ಮಾನವ ಶೋಷಣೆ ಮಾಡಿದ ಧರ್ಮ ಬೇರೆ ಯಾವುದೂ ಇಲ್ಲ, ಇದನ್ನು ವಿವೇಕಾನಂದರೇ ಹೇಳಿದ್ದಾರೆ ಎಂದರು. ಬರಗೂರು ರಾಮಚಂದ್ರಪ್ಪನವರೇ ನಿಮ್ಮ ಬುದ್ಧಿಗೇನಾಗಿದೆ? ನಿಮಗೇನು ಕನಸಿನಲ್ಲಿ ವಿವೇಕಾನಂದರು ಬಂದು ನನಗೆ ಹಿಂದೂ ಧರ್ಮದ ಬಗ್ಗೆ ಹೀಗೆನಿಸುತ್ತದೆ ಎಂದು ಹೇಳಿದ್ದಾರಾ? ಅಥವಾ ಎಲ್ಲೋ ಯಾವನೋ ’ತೆವಲು ಸಾಹಿತಿ’ ಬರೆದ ಪುಸ್ತಕಗಳನ್ನೆಲ್ಲ ಓದಿ ಹೀಗೆ ಬೀದಿಯಲ್ಲಿ ರಾಡಿ ಮಾಡುತ್ತಿದ್ದೀರಾ? ವಿವೇಕಾನಂದರು ಚಿಕಾಗೋದಲ್ಲಿ ಹಿಂದೂ ಧರ್ಮದ ಬಗ್ಗೆ ಮಾತನಾಡಿದ ನಂತರ ಅಲ್ಲಿ ಬೇರೆ ಬೇರೆಯವರ ಮನೆಗೆ ಹೋದಾಗ ಪ್ರವಚನ ಕೊಡುತ್ತಾ ಹೇಳುತ್ತಾರೆ ’ನಾನು ಒಬ್ಬ ಹಿಂದೂವಾಗಿರುವುದಕ್ಕೆ ನನಗೆ ಹೆಮ್ಮೆಯಿದೆ ಏಕೆಂದರೆ, ಅದು ನಮಗೆ ಸಹಿಷ್ಣುತೆಯನ್ನು ಹೇಳಿಕೊಟ್ಟಿದೆ, ವಸುದೈವ ಕುಟುಂಬಕಮ್ ಎಂದು ಹೇಳಿಕೊಟ್ಟಿದೆ. ನಾವು ಹಿಂದೂಗಳು ಕೇವಲ ಸಹಿಷ್ಣುವೊಂದೇ ಅಲ್ಲ, ಎಲ್ಲ ಧರ್ಮವೂ ಸತ್ಯ ಎಂದು ತಿಳಿದವರು’ ಎಂದಿದ್ದಾರೆ. ಬರಗೂರರೇ ವಿವೇಕಾನಂದರು ಇದನ್ನು ಎಲ್ಲೋ ಪಾರ್ಟಿಯ ಮತ್ತಿನಲ್ಲಿ ಹೇಳಿದ್ದಲ್ಲ. ಹೀಗಿರುವಾಗ ಅದು ಯಾವ ಪುಸ್ತಕ ಓದಿ ನೀವು ಹಾಗೆ ಹೇಳಿದಿರಿ? ಬಾಯಿಗೆ ಬಂದಿದ್ದನ್ನ ಹೇಳಿ ಅದನ್ನ ವಿವೇಕಾನಂದರು ಹೇಳಿದ್ದಾರೆ ಎನ್ನಲು ನಿಮಗೇನೂ ಎನಿಸುವುದಿಲ್ಲವೇ? ಯಾವನೋ ಕೆಲಸವಿಲ್ಲದವನ ಪುಸ್ತಕ ಓದಿ ಅದನ್ನು ನಂಬುವ, ಅದನ್ನು ಇನ್ನೆಲ್ಲೋ ಹೇಳುವ ಅಥವಾ ಬರೆಯುವ ನಿಮ್ಮ ಸಾಹಿತ್ಯ ಕೃಷಿಯ ಬಗ್ಗೆ ನನಗೆ ಈಗ ಅನುಮಾನ ಕಾಡುತ್ತಿದೆ. ಸರಿ ನಿಮ್ಮ ಯಾವ ಪುಸ್ತಕಗಳ ಬಗ್ಗೆಯೂ ಮಾತನಾಡುವುದು ಬೇಡ. ಅದು ನಿಮ್ಮ ಪರ್ಸನಲ್ ಎಂದುಕೊಳ್ಳೋಣ. ಆದರೆ, ಅದು ಯಾವನೋ ಬರೆದಿದ್ದನ್ನು ಹೇಗೆ ಒಪ್ಪಿದಿರಿ? ಕಾಮನ್ ಸೆನ್ಸ್ ಉಪಯೋಗಿಸಬೇಕಲ್ವಾ? ಒಮ್ಮೆ ಇಸಿಸ್ ಕಡೆ ತಿರುಗಿ ನೋಡಿ, ಮೊನ್ನೆಯಷ್ಟೇ ಹುಡುಗಿಯೊಬ್ಬಳು ಫೇಸ್ಬುಕ್‌ನಲ್ಲಿ ಅಕೌಂಟ್ ತೆರೆದಿದ್ದಾಳೆ ಎಂದು ಅವಳಿಗೆ ಕೊಡಬಾರದ ಹಿಂಸೆ ಕೊಟ್ಟು ಕೊಂದಿದ್ದಾರೆ. ಇಡೀ ಮಾನವ ಇತಿಹಾಸದಲ್ಲೇ ಇಂಥದ್ದೊಂದು ಸಂಘಟನೆಯೇ ನಿಮಗೆ ಸಿಗುವುದಿಲ್ಲ. ಇನ್ನು ಇವರು ಹತ್ಯೆ ಮಾಡಿರುವ ಅಂಕಿ ಅಂಶಗಳ ಅಂದಾಜು ಲೆಕ್ಕ ಕೊಟ್ಟರೂ, ನೀವು ನಿಂತು ಇನ್ನೊಮ್ಮೆ ಮಾತಾಡುವುದಿಲ್ಲ. ಯಾವುದೂ ಬೇಡ, ಬಹಳ ಸರಳವಾಗಿ ಹೇಳುವುದಾದರೆ, ’ಮಾನವ ಶೋಷಣೆ’ ಎಂಬ ಪದ ಹೇಳಿ ಮುಗಿಸುವಷ್ಟರಲ್ಲಿ ಆ ಮನುಷ್ಯನನ್ನೇ ಮುಗಿಸಿಬಿಡುತ್ತಾರೆ. ಎಂದಾದರೂ ಟರ್ಕಿ, ಸಿರಿಯಾ, ಲಿಬಿಯಾಗೆ ಹೋಗಿದ್ದೀರಾ? ಅಥವಾ ಹೋಗುವ ಧೈರ್ಯವಾದರೂ ಮಾಡಿದ್ದೀರಾ? ಇಲ್ಲವಾದರೆ ನಿಮಗೆ ಹಿಂದೂ ಧರ್ಮದ ಬಗ್ಗೆ ಮಾತಾಡುವ ಅಧಿಕಾರವೇ ನಿಮಗಿರುವುದಿಲ್ಲ. ಏಕೆಂದರೆ, ಭಾರತದಂಥ ದೇಶದಲ್ಲಿ, ಸೇಫಾಗಿ ಬೆಂಗಳೂರಿನಲ್ಲಿದ್ದು ಹಿಂದೂ ಧರ್ಮ ಹಾಗೆ, ಹೀಗೆ ಎಂದು ಕಥೆ ಬರೆದು, ಬುರುಡೆ ಬಿಡುವುದಲ್ಲ ತಾಕತ್ತು. ಅಲ್ಲಿ ಹೋಗಿ ಈ ಮಾತನ್ನ ಆಡಿದ್ದರೆ ಒಪ್ಪುುತ್ತಿದ್ದೆ. ಅದು ನೀವಾದರೂ ಸರಿಯೇ, ಅಥವಾ ಯಾವನದ್ದೋ ಪುಸ್ತಕ ಓದಿ ವಿವೇಕಾನಂದರು ಹೀಗೆಂದಿದ್ದಾರೆ ಎಂದರಲ್ಲ, ಅವನಾದರೂ ಅಷ್ಟೇ. ಸರಿ, ಇಸಿಸ್ ಇತ್ತೀಚಿನ ಉದಾಹರಣೆ ಆಗೋಯ್ತು, ಪ್ರಚಲಿತವನ್ನು ಇತಿಹಾಸದೊಂದಿಗೆ ತುಲನೆ ಮಾಡಿ ನಿರ್ಧಾರ ಮಾಡುವುದು ಸರಿಯಲ್ಲ ಎಂದು ವಾದ ಮಾಡುವವರಿಗೇನು ಕಡಿಮೆಯಿಲ್ಲ. ನಾವು ಇತಿಹಾಸದ ಉದಾಹರಣೆ ತೆಗೆದುಕೊಂಡರೂ, ಮರುಭೂಮಿಯಿಂದ ಇಲ್ಲಿಗೆ ಬಂದು, 800 ವರ್ಷ ಭಾರತವನ್ನು ಆಕ್ರಮಿಸಿಕೊಂಡು, ಧ್ವಂಸ ಮಾಡಿ, ಕಂಡ ಕಂಡವರನ್ನು ಅತ್ಯಾಚಾರ ಮಾಡಿ, ಯಾವ ಶುಭ ಕಾರ್ಯಕ್ರಮಗಳನ್ನೂ ನಡೆಯಲು ಬಿಡದೇ, ಹೆದರಿಸಿ ಬೆದರಿಸಿ ಇಸ್ಲಾಮ್‌ಗೆ ಮತಾಂತರ ಮಾಡಿದ ಮುಸ್ಲಿಮ್ ರಾಜರದ್ದು, ಇಸ್ಲಾಮ್ ಮಾನವ ಶೋಷಣೆಯಂದು ಒಪ್ಪುತ್ತೀರಾ? ಆಗ ಮಾತ್ರ ಶೋಷಣೆ ಮಾಡಿದ್ದು ಧರ್ಮವಲ್ಲ , ಕೆಲ ವಿಕೃತ ಮನಸ್ಸು /ಮನುಷ್ಯರು/ರಾಜರು ಎಂದೆಲ್ಲ ಎದೆ ಬಡಿದುಕೊಳ್ಳುವವರು, ’ಹಿಂದೂ ಧರ್ಮ ಮಾನವ ಶೋಷಣೆ ಮಾಡುತ್ತಿದೆ’ ಎಂದು ಯಾವುದೋ ಬೇವಕೂಫ್ ಸಾಹಿತಿ ಬರೆದಿದ್ದನ್ನು ಹೇಗೆ ಒಪ್ಪಿದಿರಿ? ಅಥವಾ ಮುಸ್ಲಿಮ್ ರಾಜರ ಬಗ್ಗೆ ಅರಿವೇ ಇಲ್ಲದಷ್ಟು ವಿವೇಕಾನಂದರು ಬೇವಕೋಫ್ ಆಗಿದ್ದರೇ? ಇಲ್ಲಿ ಯಾರಾದರೂ ಒಬ್ಬರಂತೂ ಬೇವಕೂಫ್ ಹೌದು. ಅದು ನೀವು ಓದಿದ ಆ ಅಡ್ಡಕಸುವೀ ಸಾಹಿತಿಯೋ? ವಿವೇಕಾನಂದರೋ? ನೀವೇ ಉತ್ತರಿಸಿ.
ನೀವು ಓದಿದ ಆ ಸಾಹಿತಿ ಹೇಳುವಂತೆ, ವಿವೇಕಾನಂದರಿಗೆ ಹಿಂದೂ ಧರ್ಮ ಮಾನವ ಶೋಷಣೆ ಮಾಡುತ್ತಿದೆ ಎಂಬ ಅಭಿಪ್ರಾಯವಿತ್ತು ಎಂದಾದರೆ, ದೇವಿ ಆರಾಧಕರಾಗಿದ್ದ ರಾಮಕೃಷ್ಣ ಪರಮಹಂಸರ ಬಳಿ ಏಕೆ ಹೋದರು? ಅವರ ಬಳಿ ತಮಗೆ ಹಿಂದೂ ಧರ್ಮ, ಆಚರಣೆ, ದೇವರ ಮೇಲಿದ್ದ ಅನುಮಾನಗಳನ್ನೆಲ್ಲ ಪರಿಹರಿಸಿಕೊಳ್ಳುವು ದರ್ದೇನಿತ್ತು? ಅಮೆರಿಕದಲ್ಲೇ ಯಾವುದಾದರೂ ಪೋಪ್ ಕಾಲನ್ನೋ ಅಥವಾ ಭಾರತದಲ್ಲಿ ಇಮಾಮ್ ಕಾಲನ್ನೋ ಹಿಡಿಯಬಹುದಿತ್ತಲ್ಲ? ಅವಗೇನು ಬೋಧನೆ ಮಾಡುವವರಿಗೆ ಕೊರತೆಯಿತ್ತೇ? ಚಿಕಾಗೋದಲ್ಲಿ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡುವ ಮೂಲಕ, ಜಾಗತಿಕ ಮಟ್ಟದಲ್ಲಿ ಮೊದಲು ಹಿಂದೂ ಧರ್ಮದ ಮೇಲಿದ್ದ ಧೋರಣೆ, ಕಾವಿ ತೊಟ್ಟ ಸ್ವಾಮಿಗಳು ಕಳ್ಳರು, ಮೂಢರು ಎಂಬ ಇತ್ಯಾದಿ ಅಪನಂಬಿಕೆಯನ್ನು ಹೋಗಲಾಡಿಸಿದ ಮಹಾನುಭಾವ ವಿವೇಕಾನಂದರು. ಅಂಥವರು ಹಿಂದೂ ಧರ್ಮದ ವಿರುದ್ಧ ಮಾತನಾಡಿದರಂತೆ. ಅದನ್ನು ಬರಗೂರರು ವಿವೇಕಾನಂದರೇ ಹೇಳಿದರು ಎಂದು ಉಲ್ಲೇಖಿಸುತ್ತಾರಂತೆ? ಬರಗೂರರೇ, ನೀವು ಹ್ಯಾಲೂಸಿನೇಷನ್‌ನಲ್ಲಿದ್ದೀರಾ ಅಥವಾ ಹಿಂದೂಗಳ ಮನಸ್ಸಲ್ಲಿ ವಿವೇಕಾನಂದರನ್ನ ಅಳಿಸಿಬಿಡಬೇಕೆಂಬ ದುರಾಲೋಚನೆಯೋ?
ಕೆಲ ಸರಕಾರಿ ಸಾಹಿತಿಗಳ ಅಸಲಿಯತ್ತೇನೆಂದರೆ, ತಮಗೆ ಏನು ಹೇಳಬೇಕು ಎನಿಸುತ್ತದೆಯೋ, ಅದನ್ನೆೆಲ್ಲ ಹೇಳಿ ಇದು ಗಾಂಧೀಜಿ ಹೇಳಿದ್ದು, ಭಗತ್ ಸಿಂಗ್ ಹೇಳಿದ್ದು, ವಿವೇಕಾನಂದರು ಹೇಳಿದ್ದು ಎಂದು ಬಿಡುವುದು. ಹೀಗೆ ಹೇಳಿ ಹೇಳಿಯೇ ಅಂಬೇಡ್ಕರ್ ಕೇವಲ ದಲಿತರ ನಾಯಕ ಎನ್ನುವಂತೆ ಮಾಡಿ ಬಿಟ್ಟಿದ್ದಾರೆ. ದುರದೃಷ್ಟವೇನೆಂದರೆ, ಇಡೀ ದೇಶಕ್ಕೇ ಕಣ್ಮಣಿಯಾಗಬೇಕಿದ್ದ ಅಂಬೇಡ್ಕರ್, ಇಂದು ಎಡಪಂಥೀಯ ನಾಯಕರಾಗಿ, ಕಾಸು ಮಾಡಿಕೊಳ್ಳುವ ಸಾಹಿತಿಗಳ ರಬ್ಬರ್ ಸ್ಟಾಂಪ್ ಆಗಿದ್ದಾರೆ. ನೀವೇ ಆಲೋಚಿಸಿ, ಎಷ್ಟು ಜನ ತಾನೇ ಅಂಬೇಡ್ಕರ್, ವಿವೇಕಾನಂದರಂಥ ಮಹಾನುಭಾವರನ್ನ ಸಂಪೂರ್ಣ ಓದಿಕೊಂಡಿರುತ್ತಾರೆ? ಉದಾಹರಣೆಗೆ ನೀವು 10 ಹಿಂದೂಗಳನ್ನ ಕೇಳಿ ನೋಡಿ, ಅದರಲ್ಲಿ ವಾಲ್ಮೀಕಿ ರಾಮಾಯಣ, ಭಗದ್ಗೀತೆ, ಮಹಾಭಾರತ ಓದಿರುವವನು ಒಬ್ಬನೋ ಇಬ್ಬರೋ ಅಷ್ಟೇ. ಬೇರೆ ಧರ್ಮಗಳದ್ದೂ ಇದೇ ವ್ಯಥೆ! ಧರ್ಮ ಗ್ರಂಥಗಳ ಸ್ಥಿತಿಯೇ ಹೀಗಿರುವಾಗ, ಇನ್ನು ವ್ಯಕ್ತಿ ಚರಿತ್ರೆ ಓದುವುದು ದೂರದ ಮಾತು. ಅದಕ್ಕೆ ಜನರು ಈ ಸಾಹಿತಿಗಳು ಹೇಳಿದ್ದೇ ವೇದ ವಾಕ್ಯ ಎಂದು ತಿಳಿಯುತ್ತಾರೆ. ಏಕೆಂದರೆ, ಸಾಹಿತಿಗಳೆಂದರೆ ಎಲ್ಲ ಪುಸ್ತಕಗಳ ಪೇಜ್ ನಂಬರ್ ಸಹ ಬಿಡದೇ ಓದುತ್ತಾರೆಂಬ ತಪ್ಪು ಕಲ್ಪನೆಯಿವೆ. ಮೊದಲು ಅದು ನಿವಾರಣೆಯಾಗಬೇಕು. ಕಾರ್ಯಕ್ರಮದ ಅರ್ಧ ಗಂಟೆ ಮುಂಚೆ ’ತೆವಲು ಸಾಹಿತಿ’ಯ ಪುಸ್ತಕ ಓದಿ ಬಂದು ಮೈಕಿಗೆ ಬಾಯೊಡ್ಡುವ ಸಾಹಿತಿಗಳೂ ಇದ್ದಾರೆ.
ಬರಗೂರರೆ, ನೀವು ವಿವೇಕಾನಂದರ ಇನ್ಯಾವುದೇ ಭಾರತದ ಬಗ್ಗೆ ಆಡಿದ ಮಾತುಗಳನ್ನು ಮತ್ತು ಹಿಂದೂ ಧರ್ಮದ ಪರ ಆಡಿದ ಮಾತುಗಳನ್ನು ಉಲ್ಲೇಖಿಸಿದರ ಬಗ್ಗೆ ನಾನು ಯಾವುದೇ ಮಾಧ್ಯಮಗಳಲ್ಲಿ ಓದಿಲ್ಲ. ನಿಮ್ಮ ಪುಸ್ತಕಗಳಲ್ಲೇ ಓದಿಲ್ಲ. ಆದರೆ, ಏಕಾಏಕಿ ಈಗ ವಿವೇಕಾನಂದರ ಹೆಸರಿನಲ್ಲಿ ಈ ಮಾತನ್ನ ಹೇಳುತ್ತಿದ್ದೀರ ಎಂದರೆ ಸ್ಪಷ್ಟವಾಗಿ ಹಿಂದೂ ಧರ್ಮದ ಮೇಲಿನ ನಿಮ್ಮ ನಿಲುವು ತಿಳಿಯುತ್ತದೆ. ’ದೊಡ್ಡ’ ಸಾಹಿತಿಯಾಗಿರುವ ನಿಮ್ಮ ಮಾತು ಯಾರೂ ನಂಬಲ್ಲ ಎಂದು ವಿವೇಕಾನಂದರ ಹೆಸರು ಬಳಸಿದ್ದೀರಿ ಅಷ್ಟೇ.
ಅಷ್ಟಕ್ಕೂ ಹಿಂದೂ ಧರ್ಮ ಅಸಹಿಷ್ಣು, ಶೋಷಣೆ ಮಾಡುವ ಧರ್ಮ ಎಂದೆಲ್ಲ, ಮಾರುದ್ದ ಭಾಷಣ ಬಿಗಿಯುವ ನೀವು ಏಕೆ ಇಸ್ಲಾಮ್, ಕ್ರಿಶ್ಚಿಯನ್ ಸೇರಿದಂತೆ ಇನ್ನಿತರ ಧರ್ಮಗಳ ನ್ಯೂನತೆಯನ್ನು ಎತ್ತಿ ತೋರಿಸುವುದಿಲ್ಲ? ಇಸ್ಲಾಮ್‌ನಲ್ಲಿ ಹೆಣ್ಣುಮಕ್ಕಳಿಗೆ ಮಸೀದಿಗೆ ಹೋಗಿ ನಮಾಜ್ ಮಾಡಲು ಬಿಡುವುದಿಲ್ಲ. ಅದನ್ನು ಪ್ರಶ್ನಿಸಿದ್ದೀರಾ? ಅದು ಶೋಷಣೆಯೆನಿಸಿಲ್ಲವೇನು? ಶಬರಿ ಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧಸಿರುವುದು ಮಾತ್ರ ಶೋಷಣೆಯೆನಿಸಿಬಿಡುತ್ತದೆ. ನಿಜವಾಗಿ ಶೋಷಿತರ ಬಗ್ಗೆ ಕಾಳಜಿಯಿರುವವರು ಯಾವ ಧರ್ಮದಲ್ಲೂ ಶೋಷಿತರು ಇರಬಾರದು ಎಂದು ಆಲೋಚಿಸಿ , ಅದನ್ನು ಕಾರ್ಯರೂಪಕ್ಕೆ ತರುತ್ತಾರೆಯೇ ಹೊರತು, ಹಿಂದೂ ಧರ್ಮವನ್ನು ತೆಗಳುತ್ತಾ ಕೂರುವುದಿಲ್ಲ.
ಒಂದೇ ಮಾತಲ್ಲಿ ಹೇಳಬೇಕಾದರೆ, ಕೆಲ ಸಾಹಿತಿಗಳು, ಪ್ರಗತಿಪರರು ಎಂದು ಕುತ್ತಿಗೆಗೆ ಬೋರ್ಡ್ ನೇತು ಹಾಕಿಕೊಂಡು ಸರಕಾರದಿಂದ ಮೂರು ತಲೆಮಾರಿಗಾಗುವಷ್ಟು ಸವಲತ್ತುಗಳನ್ನು ಪಡೆದು, ಕಾರಲ್ಲಿ ಹೋಗುವಾಗ ಕಿಟಕಿ ಇಳಿಸಿ ಫುಟ್‌ಪಾತ್‌ನಲ್ಲಿ ಕುಳಿತಿರುವವನನ್ನು ನೊಡಿ ಭಾರತ ಬಡ ರಾಷ್ಟ್ರ, ಅಸಹಿಷ್ಣುತೆ ಎನ್ನುವ ಸಾಹಿತಿಗಳೇ ಹೆಚ್ಚಾಗಿದ್ದಾರೆ. ಬರಗೂರರೇ, ಕೊನೆಯದಾಗಿ ಒಂದು ಮಾತು, ನಿಮಗೆ ಫೇಮಸ್ ಆಗಬೇಕೆಂದಿದ್ದರೆ ಸಾಧ್ಯವಾದಷ್ಟೂ ಜನರು ಓದಬಲ್ಲಂಥ ಒಳ್ಳೆಯ ಪುಸ್ತಕಗಳನ್ನು ಬರೆಯಿರಿ, ಅದು ಸಾಧ್ಯವಿಲ್ಲವೆಂದರೆ ಕಡೇ ಪಕ್ಷ ಇತರ ಪತ್ರಿಕೆಗಳಿಗಾದರೂ ಲೇಖನ ಬರೆದು ಸುದ್ದಿಯಲ್ಲಿರಿ. ಅದನ್ನು ಬಿಟ್ಟು ವಿವೇಕಾನಂದರನ್ನು ಎಳೆದು ತರುವುದು ನಿಮಗೆ ಶೋಭೆಯಲ್ಲ.

2 thoughts on “ಬರಗೂರು ರಾಮಚಂದ್ರಪ್ಪನವರೇ ಏಕಿಷ್ಟು ಸುಳ್ಳಾಡುತ್ತೀರಿ?

  1. I think other web-site proprietors should take this web site as an model, very clean and wonderful user genial style and design, as well as the content. You are an expert in this topic!

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya