ರೈತನನ್ನು ದೇವರೆಂದು, ನೈವೇದ್ಯ ಇಟ್ಟು ತಾವೇ ತಿಂದವರು!

ಇತ್ತೀಚೆಗೆ ನನ್ನ ಸಂಬಂಧಿಕರೊಬ್ಬರ ಮನೆ ಗೃಹಪ್ರವೇಶ ಇತ್ತು. ಅಲ್ಲಿ ಹೋದಾಗ ಊರಿಂದ ಬಹಳ ಮಂದಿ ರೈತಾಪಿ ಜನರೂ ಬಂದಿದ್ದರು. ಅರೇ ಏನಿಷ್ಟೆಲ್ಲ ಜನರು ಒಟ್ಟಿಗೇ ಬಂದಿದ್ದಾರಲ್ಲ ಎಂದು ವಿಚಾರಿಸಿದಾಗ ತಿಳಿದಿದ್ದೇನೆಂದರೆ, ಇಲ್ಲ ಇಲ್ಲ ಗೃಹಪ್ರವೇಶ ಇರುವ ಮನೆಯವರೇ ಊರಿಂದ ಬಸ್‌ ಮಾಡಿಸಿದ್ದರು ಎಂಬುದು ತಿಳಿಯಿತು.
ಬಂದ ನೆಂಟರಿಗೆ ವಾಪಸ್‌ ಹೋಗುವವರೆಗೂ ಪುರುಸೊತ್ತಿಲ್ಲದಂತಿದ್ದರು. ಬಹಳ ವರ್ಷಗಳ ನಂತರ ಬಂದಿದ್ದೀರಿ, ಕೆಲವರು ಮೊದಲನೇ ಸಲ ಬೆಂಗಳೂರಿಗೆ ಬಂದಿದ್ದೀರಿ ಒಂದು ವಾರವಾದರೂ ಉಳಿದು ಹೋಗಿ, ಏನು ಅಷ್ಟೆಲ್ಲ ತಲೆಬಿಸಿ ಎಂದು ಕೇಳಿದೆ. ಎಲ್ಲರೂ ಒಮ್ಮೆ ದುರುಗುಟ್ಟಿ ನೋಡಿ, ‘ನಾವಿಲ್ಲಿ ಮಜಾ ಮಾಡ್ತಾ ಕೂತ್ರೆ, ಊರಲ್ಲಿ ಕೆಲಸ ಮಾಡಕ್ಕೆ ನೀನ್‌ ಹೋಗ್ತೀಯಾ ಹೇಳು’ ಎಂಬ ಉತ್ತರ ಥಟ್ಟನೆ ಬಂತು.
ಅಲ್ಲೇ ಇದ್ದ ನನ್ನ ಅಜ್ಜಿಯನ್ನು ಕೇಳಿದೆ, ‘ನೀನ್‌ ಏನ್‌ ಹೀಗಂತ್ಯಾ… ದಿಲ್ಲಿಯಲ್ಲಿ 70 ದಿನಗಳಿಂದ ರೈತರು ಮನೆಗೇ ಹೋಗದೇ ಪ್ರತಿಭಟನೆ ಮಾಡ್ತಾ ಇದಾರೆ. ನಿಂಗೇನಾಯ್ತು? ನಾಕ್‌ ದಿನಾ ಆದ್ರೂ ಉಳ್ಕೊ’ ಅಂದೆ. ಊಹೂಂ… ಮೊಮ್ಮಗ ಹೇಳಿದರೂ ಅಜ್ಜಿದೂ ಅದೇ ಟ್ಯೂನ್‌. ಇವತ್ತು ರಾತ್ರಿ ಬಸ್‌ ಊರಿಗೆ ಹೋಗುತ್ತೆ. ನಾನೂ ಹೋಗ್ತೀನಿ ಅನ್ನೋದಷ್ಟೇ ಆಕೆಯ ತಲೆಯಲ್ಲಿತ್ತು. ‘ನೀನ್‌ ದಿಲ್ಲಿಯ ಅದ್ಯಾವ ರೈತರ ಬಗ್ಗೆ ಹೇಳ್ತೀಯೋ ನಂಗ್‌ ಗೊತ್ತಿಲ್ಲಮಾರಾಯ. ಆದ್ರೆ ತೋಟದಲ್ಲಿ ಸಿಕ್ಕಾಪಟ್ಟೆ ಕೆಲಸ ಇದೆ. ಅಡಕೆ ಕೊನೆ ಕೊಯ್ಯಿಸಬೇಕು, ಕೆಲಸಕ್ಕೆ ಬಂದೋರಿಗೆ ಊಟ ಹಾಕ್ಬೇಕು, ಆಮೇಲೆ…’ ಪಟ್ಟಿ ಬೆಳೆಯುತ್ತಾ ಹೋಯ್ತು.
ಹೌದು. ಒಬ್ಬ ರೈತನ ಮಗನಾಗಿ ಇದೇ ನಾನು ನೋಡಿದ ರೈತರ ಮನೆಯ ಜೀವನ. ನಮಗೆ ಪುರುಸೊತ್ತಿರದಷ್ಟು ಕೆಲಸ ಇರುತ್ತದೆ. ಎಲ್ಲೋ ಮಳೆ ಧೋ ಎಂದು ಹೊಯ್ಯುತ್ತಿರುವಾಗ ಒಂದು ವಾರ ನೆಂಟರ ಮನೆಗೆ ಹೋದರೆ ಹೆಚ್ಚು. ಅಲ್ಲಿ ಹೋದರೂ ರೈತರಿಗೆ ಎರಡೇ ದಿನಕ್ಕೆ ‘ಅಯ್ಯೋ ಹಸು ಏನಾಯ್ತೋ, ಗದ್ದೆ ತೋಟ ಏನಾಯ್ತೋ…’ ಎಂಬ ಚಿಂತೆ ಶುರುವಾಗಿರುತ್ತದೆ. ಕೆಲವೊಮ್ಮೆ ಅವರ ಮನೆಗೆಲ್ಲ ಹೋದರೆ ಎಲ್ಲಿ ಸುಮ್ಮನೆ ಹಣ ಖರ್ಚಾಗುತ್ತದಲ್ಲ, ಅದೇ ದುಡ್ಡಿದ್ದರೆ ಇನ್ಯಾವುದಕ್ಕಾದ್ರೂ ಆಗುತ್ತೆ ಎಂದಿರುತ್ತೆ. ಆದರೆ ದಿಲ್ಲಿಯಲ್ಲಿ ರೈತರು 70 ದಿನಗಳವರೆಗೂ ಮನೆ ಮಠ ಎಲ್ಲವೂ ಬಿಟ್ಟು , ಯಾವುದೇ ಆದಾಯವಿಲ್ಲದೇ ಕುಟುಂಬ ಸಮೇತ ಹೇಗೆ ಹೋರಾಟ ಮಾಡಲಿಕ್ಕೆ ಸಾಧ್ಯ ಎಂದು ಕೇಳಿದರೆ ಅದಕ್ಕೆ ಖಲಿಸ್ಥಾನಿಗಳೇ ಕುಬೇರನ ಮೂರ್ತಿ ರೂಪದಲ್ಲಿ ಉತ್ತರವಾಗಿ ನಿಲ್ಲುತ್ತಾರೆ.
ಆದರೆ ಹೇಳಬೇಕಾದ ವಿಷಯ ಇನ್ನೊಂದಿದೆ. ತಮಗೆ ನಾಯಿಗೆ ಕೊಡುವಷ್ಟೂ ಮರ್ಯಾದೆ ಕೊಡುವುದಿಲ್ಲ ಎಂದು ತಿಳಿದು ರೈತರ ಹೆಗಲ ಮೇಲೆ ಬಂದೂಕಿಟ್ಟು ಹೊಡೆದರು. ಆದರೆ ಈ ವೇಳೆ ಅವರಿಗೆ ಬೆಂಬಲಿಸದವರಿಗೆ ಹೊಡೆಯುತ್ತಿದ್ದ ಬಹಳ ಭಾವನಾತ್ಮಕ ಡೈಲಾಗ್‌ ‘ರೈತರು ಇಲ್ಲ ಅಂದ್ರೆ ನೀವ್ಯಾರೂ ಇಲ್ಲ. ಹೊಟ್ಟೆಗಿಲ್ಲದೇ ಸತ್ತೋಗ್ತೀರ ನೆನಪಿರ್ಲಿ. ಬನ್ನಿ ನಮ್ಮ ಹೋರಾಟಕ್ಕೆ ಬೆಂಬಲ ನೀಡಿ’ ಎಂದು.
ಮೊದಲನೇದಾಗಿ ಇವರಿಗೆ ಕೃಷಿ ಕಾಯ್ದೆಯಲ್ಲಿ ಏನಿದೆ ಎಂದೇ ಗೊತ್ತಿಲ್ಲ. ಎರಡನೇದಾಗಿ ಆ ಭಾವನಾತ್ಮಕ ಡೈಲಾಗ್‌. ಇದರ ಬಗ್ಗೆ ಮಾತಾಡೋದಿದೆ.
ರೈತರ ಕುಟುಂಬದಿಂದಲೇ ಬಂದವನಾಗಿ ನನಗೆ ಇಲ್ಲಿನ ವ್ಯವಸ್ಥೆ ಗೊತ್ತಿರೋದ್ರಿಂದಲೇ ಹೇಳುತ್ತಾ ಇದೀನಿ. ಈ ಪ್ರಪಂಚ ಎಲ್ಲ ಯಾರೋ ಒಬ್ಬನಿಂದ ಅಥವಾ ಒಂದು ವರ್ಗದ ಶ್ರಮಜೀವಿಗಳಿಂದ ನಡೆಯುತ್ತಿಲ್ಲ. ಬದಲಿಗೆ ಇದೊಂದು ಚಕ್ರದಂತೆ ನಡೆಯತ್ತಿದೆ. ಇದು ಪ್ರಾಥಮಿಕ ಶಾಲೆಯಲ್ಲಿ ಓದಿದ್ದ ಆಹಾರ ಸರಪಳಿಯ ಹಾಗೆ.
ಹೇಗೆ ಎಂದು ನೋಡೋಣ. ಈಗ ನಾನು ಒಂದು ಬೆಳೆಯನ್ನು ಬೆಳೆಯಬೇಕೆಂದರೆ ಮೊದಲು ಬೀಜ ಬೇಕು. ತರುವುದೆಲ್ಲಿಂದ? ಸರ್ಕಾರದಿಂದ. ಅದನ್ನು ಬಿತ್ತಬೇಕೆಂದರೆ, ಮೇಲ್ಮೇಲೆ ಎಸೆದರೆ ಹುಟ್ಟಿಕೊಳ್ಳುವುದಿಲ್ಲ. ಬೀಜಗಳೂ ಪ್ರತಿಭಟಿಸುತ್ತದೆ. ಅದಕ್ಕೆ ಬೇಕಾದ ಸಲಕರಣೆಗಳು ಬೇಕು. ಅದನ್ನು ತಯಾರಿಸುವವನು ರೈತನೇ? ಅಥವಾ ತಂತ್ರಜ್ಞರೇ? ಟ್ರ್ಯಾಕ್ಟರ್‌ ಓಡಿಸುವವನು ರೈತನೇ ಆದರೂ ಅದನ್ನು ನಿರ್ಮಿಸುವವರು ಕಂಪನಿಗಳು, ಕಾರ್ಮಿಕರು ಇತ್ಯಾದಿ. ಕಂಪನಿಗೆ ಕಬ್ಬಿಣ ಬರುವುದು ಮೈನಿಂಗ್‌ನಿಂದ. ಇನ್ನು ಬೆಳೆಗೆ ಕೊಳೆ ಬರಬಾರದು ಎಂದು ಸಿಂಪಡಿಸುವ ಔಷಧಿಗಳ ಉತ್ಪಾದನೆಗೆ ಫಾರ್ಮುಲಾ ಹಾಕಿದವರು ವಿಜ್ಞಾನಿಗಳು. ಯಾವ ಮಣ್ಣಲ್ಲಿ ಯಾವ ಫಲ ಬೆಳೆದರೆ ಒಳ್ಳೇದು ಎಂಬ ತಂತ್ರಜ್ಞಾನ ವಿಜ್ಞಾನಿಗಳಿಂದ ಬಂದಿದೆ. ರೈತರಲ್ಲಿ ಈ ಸೇವೆಯನ್ನು ಕೊಡುತ್ತಿರುವುದು ಸರ್ಕಾರ. ಯಾಕಾಗಿ? ರೈತನೇ ಉತ್ತಮ ಬೆಳೆ ಬೆಳೆದು ಜನರಿಗೆ ನೀಡಲಿ ಎಂದು. ಕೊಡುವುದು ಉಚಿತವಾಗಿ ಅಲ್ಲ ಸಾರ್‌, ಅದೂ ಕನಿಷ್ಠ ಬೆಂಬಲ ಬೆಲೆಗೆ. ಹೇಳಿ, ಇಲ್ಲಿ ರೈತನ ಜತೆಗೆ ಸಮಾಜದಲ್ಲಿರುವ ಇತರರೂ ಪ್ರಮುಖ ಪಾತ್ರ ವಹಿಸುತ್ತಿದ್ದಾರಲ್ಲವೇ?
ರೈತ ಕೃಷಿಯನ್ನೇ ಬಿಟ್ಟರೆ ನಿಮ್ಮ ಗತಿ ಏನು ಎಂದು ಕೇಳುವ ಖಲಿಸ್ಥಾನಿಗಳೇ, ಒಮ್ಮೆ ಈ ಮೇಲೆ ತಿಳಿಸಿದ ಎಲ್ಲರೂ ರೈತನ ಬೆಳೆ ಬೆಳೆಯುವುದಕ್ಕೆ ಸಹಕಾರಿಯಾಗದಿದ್ದರೆ, ರೈತನ ಗತಿಯೇನು ಯೋಚನೆ ಮಾಡಿದ್ದೀರಾ?
50 ವರ್ಷವಾದರೂ ತಲೆಬುಡವಿಲ್ಲದೇ ಮಾತಾಡುವ ರಾಹುಲ್‌ ಗಾಂಧಿ ಹೇಳ್ತಾರೆ, ಪ್ರತಿಭಟನೆ ಮಾಡುತ್ತಿರುವ ಒಬ್ಬೊಬ್ಬ ರೈತನನ್ನೂ ಗಡಿಯಲ್ಲಿ ಕಳಿಸಿದ್ದರೆ ಚೀನಾದವರು ನಮ್ಮನ್ನು ಮುಟ್ಟುವುದಕ್ಕೂ ಹೆದರುತ್ತಿದ್ದರು ಎಂದು. ಹಾಗಾದರೆ ಸೈನಿಕರೇನು ಅಲ್ಲಿ ಕಳೆ ಕೀಳ್ತಾ ಇದ್ದಾರಾ? ಸೈನಿಕರೆಲ್ಲರೂ ಕೃಷಿಗೆ ಬಂದರೆ, ಕೃಷಿ ಬಿಟ್ಟು ಬೇರೆ ಬರದ ರೈತ ಗಡಿಯಲ್ಲಿ ಗನ್‌ ಹಿಡಿದು ನಿಲ್ಲುತ್ತಾನಾ? ಈ ಲಾಜಿಕ್‌ ರಾಹುಲ್‌ ಗಾಂಧಿಯ ಐಕ್ಯುನಷ್ಟೇ ಇಲ್ಲವೇ?
ರೈತನ ಬೆಳೆ ನಾಶ ತಡೆಯುವಲ್ಲಿ ಸಂಶೋಧನೆಗಳು ಸಹಕಾರಿಯಾಗಿದೆ. ಏನೇ ಸಂಶೋಧನೆ ಇದ್ದರೂ ಶಿಕ್ಷಣ ಅಗತ್ಯ. ರೈತರ ಮಕ್ಕಳಿಗೆ ಶಿಕ್ಷಣ ಕೊಡಿಸುವವರು ಶಿಕ್ಷಕರು. ಒಂದು ಪೀಳಿಗೆಯನ್ನೇ ಸುಧಾರಣೆಯ ಪಥದಲ್ಲಿ ನಡೆಯುವಂತೆ ಮಾಡುವ ಶಕ್ತಿ ಶಿಕ್ಷಕರಿಗಿದೆ. ಈಗ ಅವರೇ ಇಲ್ಲದಿದ್ದರೆ ವಿದ್ಯೆಯೇ ಇಲ್ಲ. ನಾವು ಶಿಕ್ಷಣ ನೀಡುವುದನ್ನೇ ನಿಲ್ಲಿಸಿದರೆ ರೈತರ ಕಥೆಯೇನಾಗುತ್ತೆ ಗೊತ್ತಾ ಎಂದು ಕೇಳಿದರೆ ಹೇಗಿರುತ್ತೆ ಹೇಳಿ? ಶಿಕ್ಷಣವಿಲ್ಲದೇ 2021ರ ಪ್ರಪಂಚದಲ್ಲಿ ಬದುಕಬಲ್ಲಿರಾ?
ಇದು ಜಂಬದ ಅಜ್ಜಿ ಮತ್ತು ಅವಳ ಕೋಳಿಯ ಕಥೆಯಂತಾಗಲಿಲ್ಲವೇ?
ಕೃತಜ್ಞತೆ ಎಲ್ಲರಿಗೂ ಎಲ್ಲರ ಮೇಲೂ ಇರಬೇಕು. ಇದೇ ಜಗದ ನಿಯಮ. ಆದರೆ ಕೆಲ ಮಂದಿ ಅವರವರ ಲಾಭಕ್ಕೆ, ‘ಅವನೇ ನೋಡು ಅನ್ನದಾತ’ ಎಂದು ಹಾಡುತ್ತಾ ರೈತನನ್ನು ದೇವರನ್ನಾಗಿ ಮಾಡಿರುವುದು. ದೇವರನ್ನಾಗಿ ಕಂಡರೆ ನಿಜಕ್ಕೂ ತಪ್ಪಿಲ್ಲ, ಆದರೆ, ಅವನ ಮುಂದೆ ನೈವೇದ್ಯ ಇಟ್ಟು ಅವಕಾಶವಾದಿಗಳೇ ತಿನ್ನುತ್ತಿರುವುದಕ್ಕೆ ಇರುವುದು ತಕರಾರು.
ರೈತನಿಗೆ ಅನ್ನದಾತ, ದೇವರು ಅದು ಇದು ಎಂದಿರೇ ವಿನಾ ಆತನಿಗೆ ನೀವು 70 ವರ್ಷದಿಂದ ಕೊಟ್ಟಿದ್ದೇನು? ರೈತನನ್ನು ಒಬ್ಬ ಉತ್ಪಾದಕನನ್ನಾಗಿ ನೋಡಿ ಆತನಿಗೇಕೆ ಹೆಚ್ಚಿನ ಬೆಂಬಲ ನೀಡಿಲ್ಲ? ದೇವರೇಕೆ ಈ ಶತಮಾನದಲ್ಲೂ ಸರ್ಕಾರಿ ಕಚೇರಿಗಳಲ್ಲಿ ಕೈಕಟ್ಟಿ ನಿಲ್ಲುತ್ತಿದ್ದಾನೆ ಮತ್ತು ದೊಡ್ಡ ದೊಡ್ಡ ಉದ್ಯಮಿಗಳು ಕೋಟು ಹಾಕಿ ಫೋನಲ್ಲೇ ವ್ಯವಹಾರ ಮುಗಿಸುತ್ತಿದ್ದಾರೆ ಹೇಳಿ? ರೈತನನ್ನು ದೇವರು ಎನ್ನುತ್ತಾ ನೈವೇದ್ಯ ಮುಂದಿಟ್ಟು ನೀವೇ ತಿನ್ನುತ್ತಾ ಇರುವುದರಿಂದ.
ಆರ್ಥಿಕವಾಗಿ ಉದ್ಯಮಿಗಳಿಗೆ ಯಾವ ಗೌರವ ಸಿಗುತ್ತದೆಯೋ ಅದೇ ಮಟ್ಟದ ಗೌರವ ರೈತರಿಗೂ ಸಿಗುವಂತೆ ಮಾಡಿದ್ದು ಮೋದಿ ಸರ್ಕಾರ. ಕೃಷಿ ಕಾಯ್ದೆಯ ಮೂಲಕ. ಯೋಧರಿಗೆ ಒನ್‌ ರಾರ‍ಯಂಕ್‌ ಒನ್‌ ಪೆನ್ಷನ್‌ ಮೂಲಕ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಿಸಿದ್ರೆ, ಇಲ್ಲಿ ಕೃಷಿ ಕಾಯ್ದೆಯ ಮೂಲಕ ರೈತರಿಗೆ ಗೌರವ ಸಲ್ಲಿಸುತ್ತಿದ್ದಾರೆ.
ಕೊಡುವ ಗೌರವವನ್ನು ಬೇಡ ಎಂದು ಹೊಡೆದು, ಬಡಿದು ಮಂಗನಾಟ ಮಾಡಿ ಬೇಡ ಎಂದು ರೈತನಿಗೆ ಸಿಗಬೇಕಾದ ಗೌರವವೇ ಸಿಗ್ತಾ ಇಲ್ಲ. ನಾವೆಲ್ಲ ಕೃಷಿಯನ್ನೇ ಮಾಡುವುದನ್ನು ಬಿಟ್ಟರೆ ನಿಮ್ಮ ಕಥೆಯೇನು ಗೊತ್ತಾ ಎಂದು ಕೇಳುವುದಿದೆಯಲ್ಲ ಅದು ರಾಹುಲ್‌ ಗಾಂಧಿಯ ಮಾತುಗಳಷ್ಟೇ ಪ್ರಬುದ್ಧ.
ಅದೆಲ್ಲ ಬಿಡಿ, ಈಗ ದಿಲ್ಲಿಯಲ್ಲಿ ಮೊದಲು ಪ್ರತಿಭಟನೆ ಸ್ವರೂಪದಲ್ಲಿ ಇದ್ದ ಈ ಖಲಿಸ್ಥಾನಿಗಳ ಕುತಂತ್ರವನ್ನು ಪ್ರತಿಭಟನೆ ನಡೆಯುತ್ತಿದೆ ಎಂದು ವರದಿ ಮಾಡಿ, ಇಡೀ ದೇಶಕ್ಕೆ ತಿಳಿಸಿದ್ದು ಪತ್ರಕರ್ತರೋ? ರೈತರೋ? ಪತ್ರಕರ್ತನೂ ಹೇಳುವುದಕ್ಕಾಗದೇ ಇರುವುದನ್ನು ಸಾಮಾನ್ಯ ಜನರ ಮೊಬೈಲಿಗೆ ಮುಟ್ಟಿಸಿದ್ದು ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್‌, ಫೇಸ್ಬುಕ್ಕೋ ಅಥವಾ ರೈತರೋ? ಮೊಬೈಲ್‌ ನಿರ್ಮಿಸಿದ ಕಂಪನಿಗಳ ಲೆಕ್ಕ ತೆಗೆಯುತ್ತಾ ಹೋದರೆ ಹುಚ್ಚೇ ಹಿಡಿಯಬಹುದು.
ನಾವೆಲ್ಲ ವರದಿ ಮಾಡದೇ ಇದ್ದರೆ ರೈತರ ಗತಿಯೇನು ಎಂದು ಕೇಳಿದರೆ ಹೇಗಿರುತ್ತಿತ್ತು ಹೇಳಿ?
ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರ ಕೊಡದಿದ್ದರೆ ರೈತರ ಗತಿಯೇನಾಗುತ್ತದೆ ಎಂದು ಗೊತ್ತಿದೆಯೇ ಎಂದು ಸರ್ಕಾರ ಕೇಳಿದರೆ?
ಖಲಿಸ್ಥಾನಿಗಳೇ ಟೇಕ್‌ ಓವರ್‌ ಮಾಡಿರುವ ಈ ಪ್ರತಿಭಟನೆಯಲ್ಲಿ ಮದ್ದು, ಗುಂಡುಗಳು, ಗನ್‌ಗಳು, ಟೈಟಾಗಿ ಮಲಗುವುದಕ್ಕೆ ಸ್ಕಾಚು ವಿಸ್ಕಿಗಳು, ಮಸಾಜ್‌ ಚೇರ್‌ಗಳು, ಮನರಂಜನೆಗೆ ಬಳಸುತ್ತಿರುವ ಟಿವಿಗಳು, ಮ್ಯೂಸಿಕ್‌ ಸಿಸ್ಟಮ್‌ಗಳು, ಪ್ರತಿಭಟನೆಯ ಬಿಸಿ ಸರ್ಕಾರಕ್ಕೆ ತಟ್ಟಲಿ ಆದರೆ ನಾವು ಮಾತ್ರ ಕೂಲ್‌ ಆಗಿರುತ್ತೇವೆಂದು ಬಳಸುವ ಎಸಿಗಳು, ಅಲ್ಲಿ ಸಪ್ಲೈ ಆಗುತ್ತಿರುವ ಗಾಂಜಾ, ಡ್ರಗ್ಸ್‌ಗಳು ಯಾವುದೂ ರೈತನಿಂದ ಬಂದಿಲ್ಲ ಸಾರ್‌. ಎಲ್ಲವೂ ಬಂದಿರುವುದು ಆಯಾ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಜನರಿಂದ.
ಆ ಪ್ರತಿಭಟನೆ ಹಿಂಸಾಚಾರವಾಗಿ ಬದಲಾಗಿ ಖಲಿಸ್ಥಾನಿಗಳಿಗೆ ಗಾಯವಾದಾಗ ಅದಕ್ಕೆ ಸರಿಯಾದ ಚಿಕಿತ್ಸೆ ನೀಡಿದ್ದು ವೈದ್ಯನೇ ವಿನಾ ರೈತನಲ್ಲ. ಆಸ್ಪ್ರೇಲಿಯಾದಲ್ಲಿ ಬಿಯರ್‌ ಮಾಡುವ ದಂಧೆ ಚೆನ್ನಾಗಿದೆ. ಅಲ್ಲಿ ಗೋಧಿ ಬೆಳೆ ತುಂಬ ಅಗತ್ಯವಿದೆ. ದೇಶದಲ್ಲಿ ಬೆಳೆಯುವ ಬೆಳೆಗಿಂತ ಚೀಪ್‌ ಆಗಿ ಚೀನಾದಿಂದಲೇ ಗೋಧಿ ಸಿಗುತ್ತಿದ್ದಿದ್ದರಿಂದ, ಆಸ್ಪ್ರೇಲಿಯಾ ಅಲ್ಲಿಂದಲೇ ಖರೀದಿ ಆರಂಭಿಸಿದ್ದು, ಈಗ ಅಲ್ಲಿ ಗೋಧಿ ಬೆಳೆಯುವ ಸಂಖ್ಯೆ ಕಡಿಮೆಯಾಗಿದೆ.
ಇದನ್ನೇ ಅರ್ಥ ಮಾಡಿಕೊಂಡ ಮೋದಿ ಸರ್ಕಾರ, ಕೃಷಿಯೂ ಒಂದು ಬಿಜಿನೆಸ್‌ ಆಗಬೇಕು. ಆತ ಬೆಳೆದ ಬೆಳೆಗೆ ಸೂಕ್ತ ಖರೀದಿ ಮಾಡುವವನು ಸಿಗಬೇಕು ಎಂದೇ ಅಲ್ಲವೇ ಖಾಸಗಿ ಕಂಪನಿಗಳಿಗೂ ನೇರವಾಗಿ ರೈತನಿಂದಲೇ ಬೆಳೆ ಖರೀದಿಸುವುದಕ್ಕೆ ಅವಕಾಶ ಕೊಟ್ಟಿದ್ದು? ಅದೂ ಕನಿಷ್ಠ ಬೆಂಬಲ ಬೆಲೆಯನ್ನು ತೆಗೆಯದೇ ಮತ್ತು ಎಪಿಎಂಸಿ ಮಂಡಿಗಳನ್ನೂ ಮುಚ್ಚದೆಯೇ?
ಯಾರು ಮಾಡುತ್ತಾರೆ ಸ್ವಾಮಿ ಇಷ್ಟೆಲ್ಲ? ಇನ್ನೂ ಸುಗ್ಗಿ ಹಾಡು ಹೇಳಿಕೊಂಡು, ನೀನು ನಮಗೆ ಅನ್ನ ಕೊಡುತ್ತಿದ್ದೀಯಪ್ಪಾ ನಾವು ನಿಮಗೆ ಪ್ರೀತಿಯನ್ನಷ್ಟೇ ಕೊಡುತ್ತೇವೆ ಎಂದರೆ ನೀವು ಹಳ್ಳಕ್ಕೆ ಬಿದ್ದಿದ್ದೀರಿ ಎಂದು ಅರ್ಥ. ನೀವು ಬೆಳೆದ ಬೆಳೆಗೆ ನಿಮಗೆ ಸರಿಯಾಗಿ ಬೆಲೆ ಕೊಡುವವನಷ್ಟೇ ನಿಮ್ಮ ಮೇಲೆ ಪ್ರೀತಿ-ವಿಶ್ವಾಸ-ಗೌರವ ಇಟ್ಟಿರುವವರು. ಬಾಕಿಯೆಲ್ಲವೂ ಆ ಖಲಿಸ್ಥಾನಿಗಳ-ಕಾಂಗಿಗಳ ನಾಟಕ ಅಷ್ಟೇ.

 

Leave a Reply

Copyright©2021 Chiranjeevi Bhat All Rights Reserved.
Powered by Dhyeya