ಇವತ್ತು ಈ ವ್ಯಕ್ತಿಯ ಹುಟ್ಟು ಹಬ್ಬವೂ ಅಲ್ಲ ಅಥವಾ ಇಹಲೋಕಕ್ಕೆ ತೆರಳಿದ ದಿನವೂ ಅಲ್ಲ. ಆದರೂ, ಇವರ ಬಗ್ಗೆ ಇವತ್ತು ಹೇಳಲೇಬೇಕು. ಯಾಕೆ ಎಂದು ನಂತರ ಹೇಳುತ್ತೇನೆ.
ಈಗ ಹೇಳುವುದನ್ನು ನಿಮ್ಮ ಕಣ್ಣ ಮುಂದೆ ಹಾಗೇ ಚಿತ್ರಿಸಿಕೊಳ್ಳುತ್ತಾ ಹೋಗಿ. ಆಗ, ಈ ವಿಷಯ ಇನ್ನೂ ರೋಚಕವೆನಿಸುತ್ತದೆ.
ಮಾರ್ಚ್ 2004. ಜಮ್ಮು ಕಾಶ್ಮೀರದ ಶೋಪಿಯಾನ್ ಬಳಿ ಇರುವ ಉಗ್ರರ ಯಾವುದೋ ಒಂದು ಅಡಗು ತಾಣ. ಇನ್ನೂ ಪರ್ಟಿಕ್ಯುಲರ್ ಆಗಿ ಹೇಳಬೇಕೆಂದರೆ ಶ್ರೀನಗರದಿಂದ 50 ಕಿಲೋಮೀಟರ್ ದೂರದಲ್ಲಿ ನಿರ್ಮಾಣವಾಗಿದ್ದ ಕೃತಕ ಅಡಗುತಾಣ. ವಾತಾವರಣ ತಣ್ಣಗೆ ಚೆನ್ನಾಗಿದ್ದರೂ, ಅಲ್ಲೇ ಚಿಕ್ಕ ಕಾಟ್ ಮೇಲೆ ಕೂತಿದ್ದ ಇಬ್ಬರು ಉಗ್ರರಿಗೆ ಅದೇನೊ ತಳಮಳ. ಯಾಕೆ ಹಿಂಗಾಗ್ತಿದೆ ಅಂತ ಗೊತ್ತಿಲ್ಲ. ಇಂಥದ್ದೇ ಆಗಿದೆ ಎಂದು ಹೇಳುವುದಕ್ಕೂ ಗೊತ್ತಾಗ್ತಾ ಇಲ್ಲ. ಆದರೇನು ಮಾಡೋದು. ಕ್ಲಾರಿಟಿ ಇಲ್ಲ ಅಂದ್ರೆ ಏನೂ ಮಾಡಕ್ಕಾಗುವುದಿಲ್ಲ. ನಿಮಗೆ ಗೊಂದಲ ಆಯ್ತಾ? ಇಷ್ಟೇ ಗೊಂದಲ ಉಗ್ರರಿಗೂ ಆಗಿತ್ತು.
ಬಹಳ ಹೊತ್ತು ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟುಕೊಂಡ ನಂತರ ಉಗ್ರ ಅಬು ತೊರಾರಾ ಎಂಬುವವನು ಪಕ್ಕದಲ್ಲೇ ಇದ್ದ ಇನ್ನೊಬ್ಬ ಉಗ್ರ ಅಬು ಸಬ್ಜರ್ನ ಕಿವಿಯಲ್ಲಿ ಹೇಳ್ತಾನೆ, ‘ಎಲ್ಲೋ ಏನೋ ಮಿಸ್ ಹೊಡೀತಾ ಇದೆ ಭಾಯ್’!
ಇದನ್ನು ಕೇಳಿದ ಅಬು ಸಬ್ಜರ್, ತೊರಾರಾ ಮಾತಿನ ಮೇಲೇ ಹೋದ. ಹಾಗೇ ಒಂದು ಧಮ್ ಎಳೀತಾ, ಮೂಗಿನಿಂದ ಎಷ್ಟು ಹೊಗೆ ನಿಧಾನವಾಗಿ ಹೊರ ಹೋಗುತ್ತಿತ್ತೋ, ಅಷ್ಟೇ ಸಾವಧಾನವಾಗಿ ಆಲೋಚನೆ ಮಾಡ್ತಾ ಹೋದ. ಗಡ್ಡ ಕೆರೆಯುತ್ತಾ ಸಬ್ಜರ್ ಕಡೆ ನೊಡಿದ. ಇಬ್ಬರ ಬಳಿಯೂ ಎಕೆ-47 ಗನ್ ಕೈಯಲ್ಲೇ ಇತ್ತು. ಒಂದು ಟ್ರಿಗರ್ ಅಂತರದಲ್ಲಿ ಇಫ್ತಿಕಾರ್ ಪ್ರಾಣ ಇತ್ತು. ಹಾಗೇ ಇಫ್ತಿಕಾರ್ ಬಳಸಿಕೊಂಡು ಭಾರತೀಯ ಸೇನೆಯ ಚೆಕ್ಪೋಸ್ಟ್ ಮೇಲೆ ದಾಳಿ ಮಾಡುವುದಕ್ಕೂ ಅದೇ ಟ್ರಿಗರ್ ಸಿದ್ಧವಾಗಿತ್ತು.
ಆದರೆ ವಿಷಯ ಏನೆಂದರೆ, ಇವರಿಬ್ಬರಿಗೆ ಇಫ್ತಿಕಾರ್ ಮೇಲೇ ನಂಬಿಕೆ ಇಲ್ಲ.ಇದೇ ಅನುಮಾನದಲ್ಲಿರುವಾಗ ಸಬ್ಜರ್ ಕೇಳ್ತಾನೆ, ‘ಭಾಯ್ ನೀನು ಮತ್ತೊಂದ್ಸಲ ಅವನ ಜೊತೆ ಮಾತಾಡ್ಬೇಕು ಅನ್ಸುತ್ತಪಾ ನಂಗೆ. ಏನಂತ್ಯಾ?’. ಹೌದು ಎಂದು ಒಪ್ಪಿಗೆ ಸೂಚಿಸುವ ನೊಟ ಬೀರಿದ ಅಬು ತೊರಾರಾ, ಏನನ್ನೂ ಮಾತಾಡದೇ ಎರಡು ಟೀ ಹೀರುತ್ತಾ ಇರುತ್ತಾನೆ. ಜೊತೆಗೇ ಮೂರನೇ ಲೋಟದಲ್ಲೂ ಚಹಾ ಇರುತ್ತದೆ. ಅದನ್ನು ಕುಡಿಯಲು ಬರುವವನೇ ಇಫ್ತಿಕಾರ್ ಭಟ್. ಆರಡಿ ಎರಡಿಂಚು ಎತ್ತರ, ತಲೆ ಕೂದಲು ಭುಜದವರೆಗೂ ಬೆಳೆದು ಕೂತಿದೆ. ಆಕ್ರಮಣಕ್ಕೆ ತಯಾರಾಗಿರೋ ಆ ಕಣ್ಣುಗಳು. ತನ್ನ ತಮ್ಮನನ್ನು ಭಾರತೀಯ ಸೇನೆ ಕೊಂದಿದೆ. ಅದರ ಪ್ರತಿಕಾರಕ್ಕಾಗಿ ಕಾಯುತ್ತಿರುವ ಕಣ್ಣುಗಳವು. ಮುಖದ ತುಂಬೆಲ್ಲ ಮುಳ್ಳಿನ ಹಾಗಿರುವ ಉದ್ದನೆಯ ಗಡ್ಡ. ಮೀಸೆ ಬಿಡುವಂತಿಲ್ಲ ಎಂಬ ಕಾರಣಕ್ಕೆ ಅದನ್ನು ಮಾತ್ರ ಆಗಾಗ ತೆಗೆಯುತ್ತಿದ್ದ ಎಂದು ನೋಡಿದ ತಕ್ಷಣ ಗೊತ್ತಾಗುತ್ತೆ.
ಒಳಗೆ ಬಂದ ಇಫ್ತಿಕಾರ್ಗೆ ಏನೋ ಆಗಿದೆ ಅನ್ನೋ ವಾಸನೆ ಸಿಕ್ತು. ಆದರೂ ಭಾವನೆಗಳನ್ನು ಮುಖದಲ್ಲಿ ತೋರಿಸದೇ ಬಂದು ಕೂತ. ಅಲ್ಲೇ ಇದ್ದ ಚಹಾ ಲೋಟದಲ್ಲಿ ಎರಡು ಸಲ ಸುರ್ ಎನಿಸುವವರೆಗೂ ಕಾದ ಅಬು ತೊರಾರಾ, ಅವನ ಎದುರಿಗೆ ಬಂದು, ‘ಇಫ್ತಿಕಾರ್, ನಾನು ನಿನ್ನ ಹತ್ರ ಒಂದೇ ಒಂದ್ ಸಲ ಕೇಳ್ತೀನಿ.’ ಎನ್ನುತ್ತಾ, ಒಂದು ಕೈನಲ್ಲಿ ಚಹಾದ ಲೊಟ ಇದ್ದಿದ್ದರಿಂದ, ಇನ್ನೊಂದು ಕೈಯನ್ನು ಇಫ್ತಿಕಾರ್ನ ಮಂಡಿಯ ಮೇಲಿಟ್ಟು ನಿಧಾನವಾಗಿ ಕೇಳಿದ, ‘ನಿಜ ಹೇಳು… ಯಾರು ನೀನು?’!
ಯಾಕಂದ್ರೆ ಈ ಉಗ್ರರಿಗೆ ಇವನ ಬಗ್ಗೆ ಏನಂದ್ರೆ ಏನೂ ಗೊತ್ತಿಲ್ಲ. ಬಹಳ ಕಡಿಮೆ ಮಾತಾಡುತ್ತಿದ್ದ ಹುಡುಗ ಈ ಇಫ್ತಿಕಾರ್. ಕೆಲ ದಿನಗಳ ಹಿಂದಷ್ಟೇ ಭೇಟಿಯಾಗಿದ್ದು. ಒಂದು ವಾರ ಕಳೆದ ನಂತರ ಇಪ್ತಿಕಾರ್ ಮತಾಡಿದ್ದು ಒಂದೇ ಉದ್ದ ಡೈಲಾಗ್ ‘ನಾನು ಭಾರತೀಯ ಸೇನೆಯ ಚೆಕ್ಪೋಸ್ಟ್ ಮೇಲೆ ದಾಳಿ ಮಾಡುವುದಕ್ಕೆ ಪ್ಲಾನ್ ಮಾಡಿದ್ದೇನೆ. ನಿಮ್ಮ ಸಂಘಟನೆಯ ಸಪೋರ್ಟ್ ಬೇಕು’ ಅಂತ. ಹುಡುಗ ಅದ್ಯಾವ ಮಟ್ಟಿಗೆ ಪ್ಲಾನ್ ಮಾಡಿದ್ದಾನೆ ಎಂದರೆ, ಸೇನೆಯವರು ಎಷ್ಟೆಷ್ಟು ಹೊತ್ತಿಗೆ ಎಲ್ಲೆಲ್ಲಿ ಬರುತ್ತಾರೆ, ಅವರ ವಾಹನಗಳು ಎಲ್ಲೆಲ್ಲಿ ನಿಲ್ಲಿಸುತ್ತಾರೆ. ಅವರ ಚೆಕ್ಪೋಸ್ಟ್ ಮೇಲೆ ದಾಳಿ ಮಾಡುವ ಪರಿ ಹೇಗೆ? ಮಾಡಿದ ಮೇಲೆ ಹೇಗೆ ಎಸ್ಕೇಪ್ ಆಗೋದು? ಎಲ್ಲಿಂದ ಹೋಗೋದು ಎಲ್ಲವೂ ರೆಡಿಯಾಗಿತ್ತು. ಒಂದು ಪುಟ್ಟ ನಕಾಶೆಯೇ ತಯಾರಾಗಿತ್ತು ಇಫ್ತಿಕಾರ್ ಬಳಿ.
ಇದನ್ನು ನೋಡಿದ ಅಬು ಸಬ್ಜರ್ ಮತ್ತು ಅಬು ತೊರಾರಾ ಮನಸ್ಸು ಸೋಲದೇ ಇರುವುದಕ್ಕೆ ಸಾಧ್ಯವೇ ಇರಲಿಲ್ಲ. ಅಷ್ಟು ಚೆನ್ನಾಗಿತ್ತು ಪ್ಲಾನ್. ಆದರೆ ಹುಡುಗ ಇದನ್ನು ಒಬ್ಬನೇ ಮಾಡಿದರೆ ಸಿಕ್ಕಿ ಹಾಕಿಕೊಳ್ಳುವ ಪ್ರಮೇಯವೇ ಹೆಚ್ಚಾಗಿದ್ದಿದ್ದರಿಂದ ಯಾವುದಾದರೂ ಸಂಘಟನೆಯ ಬೆಂಬಲ ಬೇಕಿತ್ತು. ಆದರೆ ಇನ್ನೊಂದು ವಿಚಿತ್ರ ಎಂದರೆ ಶೋಪಿಯಾನ್ನಲ್ಲೇ ಇಫ್ತಿಕಾರ್ನನ್ನು ಜನರು ಹೆಚ್ಚಾಗಿ ನೋಡಿಯೇ ಇರಲಿಲ್ಲ. ಸಬ್ಜರ್ ಮತ್ತು ತೊರಾರಾ ಏನು ದಡ್ಡರಲ್ಲ. ಯಾರಿಗೇನು ಕಡಿಮೆ ಇರಲಿಲ್ಲ ಈ ಹಿಜ್ಬುಲ್ ಉಗ್ರರು. ದಕ್ಷಿಣ ಕಾಶ್ಮೀರದಲ್ಲಿರುವ ಬಹಳಷ್ಟು ಯುವಕರನ್ನು ಹಿಜ್ಬುಲ್ಗೆ ನೇಮಿಸಿಕೊಂಡು ಅವರಿಗೆ ತರಬೇತಿ ಕೊಡುತ್ತಿದ್ದ ಕಿಲಾಡಿಗಳು ಇವರು. ಹುಡುಗರು ಸಿಕ್ಕಿ ಬಿದ್ದರೂ ಇವರು ಮಾತ್ರ ಸಿಕ್ಕಿ ಬೀಳುತ್ತಿರಲಿಲ್ಲ. ಆದರೂ ಇಫ್ತಿಕಾರ್ ಬಗ್ಗೆ ಮಾತ್ರ ಇವರಿಗೆ ಸಾಸಿವೆಯಷ್ಟು ಅನುಮಾನ ಇದ್ದಿದ್ದರಿಂದಲೋ ಅಥವಾ ಮತ್ತೊಮ್ಮೆ ಇವನು ನಮ್ಮವನೇ ಎಂದು ದೃಢೀಕರಿಸಿ ಕೊಳ್ಳುವುದಕ್ಕೋ ಏನೋ ಕೇಳಿದ್ದು, ‘ನಿಜ ಹೇಳು ನೀನು ಯಾರು’ ಅಂತ.
ಕೈಯಲ್ಲಿದ್ದ ಚಹಾ ತಟ್ಟೆ ಕೆಳಗಿಟ್ಟ ಇಫ್ತಿಕಾರ್, ಹೆಗಲ ಮೇಲೆ ಜೋತು ಹಾಕಿಕೊಂಡಿದ್ದ ಎಕೆ-47 ಗನ್ ಕೆಳಗಿಟ್ಟು, ‘ನನ್ನ ಮೇಲೆ ಅನುಮಾನ ಇದ್ದರೆ ನನ್ನನ್ನು ಈಗಲೇ ಕೊಂದು ಬಿಡಿ’ ಎಂದ. ಧ್ವನಿ ಇನ್ನೂ ಜೋರಾಯಿತು, ‘ನೋಡಿ ನೀವು ಈ ಕೆಲಸವನ್ನ ನನ್ನ ಮೇಲೆ ನಂಬಿಕೆ ಇಲ್ಲದೇ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ಈಗ ನಿಮಗೆ ನನ್ನನ್ನು ಕೊಲ್ಲದೆ ಬೇರಾರಯವ ದಾರಿಯೇ ಇಲ್ಲ’ ಎಂದ. ಯಾವತ್ತೂ ಹೆಚ್ಚು ಮಾತೇ ಆಡದ, ಬಹಳ ಸಾಫ್ಟಾಗಿ ಮಾತಾಡುತ್ತಿದ್ದ ವ್ಯಕ್ತಿ ಇಷ್ಟು ಜೋರಾಗಿ ಮಾತಾಡಿದ್ದನ್ನು ನೋಡಿ ಬೆರಗಾದ ತೊರಾರಾ ಎದ್ದು ನಿಂತು ಇಫ್ತಿಕಾರ್ನನ್ನ ಒಮ್ಮೆ ದಿಟ್ಟಿಸಿ ನೋಡಿ, ಹಿಂದೆ ಕಾಟ್ ಮೇಲೆ ಕೂತಿದ್ದ ಸಬ್ಜರ್ನತ್ತ ತಿರುಗಿ ನೋಡಿದ. ‘ಏನ್ ಮಾಡೋದಪ್ಪಾ ಇವ್ನು ಹಿಂಗೆ ಮಾತಾಡ್ತಾ ಇದಾನೆ, ಮುಂದೆ ಏನ್ ಮಾಡೋಣ ಈಗ’ ಎಂಬ ಅರ್ಥದಲ್ಲಿ.
ಅಷ್ಟೇ. ಕೇವಲ ಎರಡು ಸೆಕೆಂಡ್ಗಳ ವೀಕ್ ಪಾಯಿಂಟ್ ಅದು. ತೊರಾರಾ ಹಿಂದೆ ತಿರುಗುತ್ತಿದ್ದಂತೆ, ಒಳಗಿಟ್ಟುಕೊಂಡಿದ್ದ 9ಎಂಎಂ ಪಿಸ್ತೂಲನ್ನ ಹೊರಗೆ ಎಳೆದ ಇಫ್ತಿಕಾರ್, ಇಬ್ಬರು ತೊರಾರಾ ಮತ್ತು ಸಬ್ಜರ್ ತಲೆಗೆ ಬುಲೆಟ್ನ್ನು ಇಳಿಸಿದ. ಮೊದಲ ಹೊಡೆತಕ್ಕೆ ಮಂಚದ ಮೇಲೆ ಕೂತಿದ್ದ ಸಬ್ಜರ್ ಹಾಗೇ ಮಂಚದ ಮೇಲೇ ಬಿದ್ದ. ಎದುರಿಗಿದ್ದ ತೊರಾರಾ ತಲೆಗೆ ಬಿದ್ದ ಗುಂಡು, ಅವನನ್ನು ಗೋಡೆಗೆ ಅಪ್ಪಳಿಸಿಬಿಟ್ಟಿತು. ತಲೆಯಿಂದ ಚಿಮ್ಮಿದ ರಕ್ತ ಬಿಳಿ ಗೋಡೆಗೆ ಹೊಚ್ಚ ಹೊಸ ಪೇಯಿಂಟ್ ಮಾಡಿದ ಹಾಗಿತ್ತು.ಆದರೂ ಕನಧಿರ್ಮ್ ಮಾಡ್ಕೊಬೇಕಲ್ಲ ಎಂದು ಮತ್ತೆರಡು ಗುಂಡನ್ನು ಒಬ್ಬೊಬ್ಬರ ಮೇಲೂ ಹಾರಿಸಿದ ಇಫ್ತಿಕಾರ್ ಬಟ್ ಅಲಿಯಾಸ್ ಮೇಜರ್ ಮೋಹಿತ್ ಶರ್ಮಾ. ಅಚ್ಚರಿ ಆಯ್ತಾ? ಓದುಗರಿಗೆ ಇಫ್ತಿಕಾರ್ ಭಟ್ನೇ ಭಾರತೀಯ ಸೇನೆಯ ಸ್ಪೆಷಲ್ ಫೋರ್ಸಸ್ನ ಮೇಜರ್ ಮೋಹಿತ್ ಶರ್ಮಾ ಎಂದು ಗೊತ್ತಾಗಿದೆ. ಆದರೆ ಸತ್ತ ಉಗ್ರರಿಗೆ ಅದೂ ಗೊತ್ತಿಲ್ಲ.
ಇಷ್ಟೆಲ್ಲ ಮಾಡಿ, ಚಹಾ ತಣ್ಣಗಾದೀತು ಎಂದು ಲೋಟ ಕೈಗೆತ್ತಿಕೊಂಡು ಆರಾಮಾಗಿ ಹೆಣಗಳ ಮಧ್ಯೆ ಚಹಾ ಕುಡಿದು ಕತ್ತಲಾಗುವವರೆಗೂ ಕಾದು ಸೇನೆಯಲ್ಲಿರುವ ತನ್ನ ಬೇಸ್ ಕ್ಯಾಂಪ್ಗೆ ಸೇರಿಕೊಂಡಿದ್ದು ಮೇಜರ್ ಮೋಹಿತ್ ಶರ್ಮಾ. ಇದಾದ ಮೇಲೆ ನಡೆದ ಮತ್ತೊಂದು ಆಪರೇಷನ್ನಲ್ಲಿ ಉಗ್ರರಿಂದ ಸರಿಯಾಗಿ ಗುಂಡು ಬಿದ್ದರೂ, ‘ನನಗೇನೂ ಆಗಿಲ್ಲ. ಇದು ತುಂಬ ಕಾಮನ್ ಗಾಯ. ನೀವು ಗುಂಡು ಹಾರಿಸೋದನ್ನ ಮಾತ್ರ ನಿಲ್ಲಿಸಬೇಡಿ. ಉಗ್ರರನ್ನು ತಪ್ಪಿಸಿಕೊಳ್ಳುವುದಕ್ಕೆ ಬಿಡಬೇಡಿ’ ಎನ್ನುತ್ತಾ 2009ರ ಮಾರ್ಚ್ನಲ್ಲಿ ಪ್ರಾಣ ಬಿಟ್ಟರು ಮೋಹಿತ್ ಶರ್ಮಾ. ಈ ಇಫ್ತಿಕಾರ್ ಪ್ರಕರಣ ಆಗುವ ಮುನ್ನ ಒಮ್ಮೆ ಮೆಸ್ನಲ್ಲಿ ಯೋಧರು ತಮಾಷೆ ಮಾಡ್ತಾ ಸಿಕ್ಕಾಕ್ಕೊಂಡ್ರೆ ಏನ್ ಮಾಡ್ತೀಯಾ ಎಂದಿದ್ದಕ್ಕೆ, ‘ಸತ್ತುಹೋಗ್ಬಹುದೇನೋ… ಆದ್ರೆ ಸಿಕ್ಕಿಬೀಳೋದಿಲ್ಲ’ ಎಂದು ಕಣ್ಣು ಹೊಡೆದಿದ್ದರಂತೆ ಮೋಹಿತ್ ಶರ್ಮಾ!
2020ರ ಜನವರಿ 22ಕ್ಕೆ ಬಾಲಿವುಡ್ನ ಸಿನಿಮಾ ಸಂಸ್ಥೆ, ಒಂದು ಘೋಷಣೆ ಮಾಡಿತು. ‘ಇಫ್ತಿಕಾರ್’ ಅನ್ನೋ ಸಿನಿಮಾ ಮಾಡ್ತಿದ್ದೇವೆ ಎಂದು. 2022ರ ಆಗಸ್ಟ್ ನಲ್ಲಿ ಸಿನಿಮಾ ಬಿಡುಗಡೆ ಮಾಡುವ ತಯಾರಿ ನಡೆಯುತ್ತಾ ಇದೆ. ಯಾವನೋ ಯಾವನನ್ನೋ ಕೊಂದ, ಇನ್ಯಾರೋ ಇನ್ನೊಬ್ಬಳಿಗೆ ಲಿಪ್ ಕಿಸ್ ಕೊಟ್ಟ, ರೇಪ್ ಮಾಡಿದ, ಅಥವಾ ಎಲ್ಲರೂ ಸೇರಿ ಹಿಂದೂ ಧರ್ಮವನ್ನು ನಿರ್ನಾಮ ಮಾಡಿದರು ಎಂಬ ಸಿನಿಮಾಗಳಿಗಿಂತ ಈ ಸಿನಿಮಾ ಸಾವಿರ ಪಾಲಿಗೆ ಮೇಲು ಎಂದು ಅನಿಸಿದ್ದು ಸುಳ್ಳಲ್ಲ. ಜನವರಿ 13ಕ್ಕೆ ಮೇಜರ್ ಮೋಹಿತ್ ಶರ್ಮಾ ಅವರ ಹುಟ್ಟುಹಬ್ಬವೂ ಇತ್ತು. ಈ ಸಂದರ್ಭದಲ್ಲಿ ಸಿನಿಮಾ ಮಾಡುವ ನಿರ್ಧಾರ ಮಾಡಲಾಯಿತು.
ಸಿನಿಮಾಗೆ ಬೇಕಾದ ಅಷ್ಟೂ ಕಥೆಯು ಪತ್ರಕರ್ತ ಶಿವ್ ಅರೂರ್ ಅವರು ಬರೆದಿರುವ ‘ಇಂಡಿಯಾಸ್ ಮೋಸ್ಟ್ ಫಿಯರ್ಲೆಸ್-2’ ಎಂಬ ಪುಸ್ತಕದಲ್ಲಿದೆ. ನಾನು ಮೇಲೆ ತಿಳಿಸಿದ ಘಟನೆಯನ್ನೂ ಅವರ ಪುಸ್ತಕದಿಂದಲೇ ಓದಿ ಸಂಗ್ರಹ ರೂಪದಲ್ಲಿ ಕೊಟ್ಟಿದ್ದು. ಸಿನಿಮಾ 2022ಕ್ಕೆ ಬರುತ್ತದೆ ಎಂದು ತಿಳಿದ ಮೇಲೆ ಅವರ ಬಗ್ಗೆ ಬರೆಯದೇ ಇರಲು ಸಾಧ್ಯವೇ ಆಗಲಿಲ್ಲ. ಸಿನಿಮಾದಲ್ಲಿ ಮೇಲೆ ತಿಳಿಸಿದ ಘಟನೆ ಕ್ಲೈಮ್ಯಾಕ್ಸ್ ಆಗುತ್ತದೆಯೋ ಅಥವಾ ಓಪನಿಂಗ್ ಸೀನ್ ಆಗುತ್ತದೆಯೊ ತಿಳಿದಿಲ್ಲ. ಆದರೆ ಈ ಪುಸ್ತಕ ಬಿಡುಗಡೆ ಮಾಡಿ ಪ್ರಧಾನಿ ಮೋದಿಯುವರ ಕೈಗೆ ಇಟ್ಟಾಗ, ಇಂಥ ಹೀರೋಗಳ ಬಗ್ಗೆ ಸಿನಿಮಾ ಮಾಡಿ ಇವರ ತ್ಯಾಗದ ಬಗ್ಗೆ ಜನರಿಗೆ ತಿಳಿಸುವ ಅಗತ್ಯವಿದೆ ಎಂದು ಹೇಳಿದ್ದರು. ಸಿನಿಮಾ ಮಾಡುವುದಕ್ಕೂ ಇದೇ ಪ್ರೇರಣೆ ಎಂದರೆ ತಪ್ಪಾಗುವುದಿಲ್ಲ.ಎಂಜಿನಿಯರಿಂಗ್ ಮಾಡಿ ಇತರ ಹುಡುಗರಂತೆ ಓದಿ ಸಂಪಾದನೆ ಮಾಡುವ ಗೋಜಿಗೇ ಹೋಗದ ಹುಡುಗ ಮೋಹಿತ್ ಶರ್ಮಾ, ಅಶೋಕ ಚಕ್ರ ಪಡೆಯುತ್ತಾರೆ ಎಂದರೆ ಊಹಿಸಿಕೊಂಡರೇ ಮೈ ಜುಮ್ಮೆನ್ನುತ್ತದೆ. ಇನ್ನು ಇದರ ಬಗ್ಗೆ ಸಿನಿಮಾ ಬರುತ್ತದೆಂದರೆ, 2022ರವರೆಗೂ ಕಾಯುವುದೇ ದೊಡ್ಡ ಸಮಸ್ಯೆಯಾಗಿದೆ.