ನನ್ನ ಮೇಲೆ ಒಂದು ಆರೋಪವಿದೆ. ನಾನು ಸಿನಿಮಾಗಳನ್ನು, ವೆಬ್ ಸಿರೀಸ್ಗಳನ್ನು ಮನೋರಂಜನೆಗಾಗಿ ನೋಡುವುದಿಲ್ಲ. ಬದಲಿಗೆ ಅದರಲ್ಲೂ ಹಿಂದೂ ಧರ್ಮ, ದೇಶ, ಯೋಧರು, ಪೊಲೀಸರು ಎಂಬಿತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ನೋಡುತ್ತೇನೆ. ಏನಾದರೂ ಚೂರು ಮೇಲಿರುವ ಲಿಸ್ಟ್ನ ವಿರುದ್ಧ ಅಪ್ಪಿತಪ್ಪಿ ತೋರಿಸಿಬಿಟ್ಟರೆ ಸಿನಿಮಾ ಚೆನ್ನಾಗಿಲ್ಲ ಎಂದು ಹೇಳುತ್ತೇನೆ ಎಂಬುದು ಆರೋಪ. ಇತ್ತೀಚೆಗೆ ಕನ್ನಡದಲ್ಲಿ ಒಂದು ನಕ್ಸಲ್ವಾದ ಬೆಂಬಲಿಸುವ ಸಿನಿಮಾ ಬಂದಾಗಲೂ ಅದನ್ನು ವಿರೋಧಿಸಿದ್ದಾಗ ಕೇಳಿ ಬಂದ ಮಾತಿದು.
ಯಾವ ಸಿನಿಮಾಕ್ಕೆ ಜೈ ಎನ್ನಬೇಕು, ಯಾವ ಸಿನಿಮಾಗೆ ಮುಖಕ್ಕೆ ಉಗಿಯಬೇಕು ಎಂಬುದು ಪ್ರೇಕ್ಷಕನಿಗೆ ಬಿಟ್ಟ ವಿಚಾರ. ಆದರೆ ಆತನನ್ನೂ ಇವರು ಮಾಡುವ ಡಬ್ಬಾ ಸಿನಿಮಾಗಳನ್ನು ಪ್ರೊಡ್ಯೂಸರ್ಗಾಗಿ ನೋಡಿ, ಕಾರ್ಮಿಕರಿಗಾಗಿ ನೋಡಿ, ಕನ್ನಡ ಬೆಳೆಸುವುದಕ್ಕಾಗಿ ನೋಡಿ, ತುಂಬ ಜನ ಕೆಲಸ ಮಾಡಿದ್ದಾರೆ. ಅದಕ್ಕೋಸ್ಕರ ಆದ್ರೂ ನೋಡಿ ಎನ್ನುತ್ತಾರೆ. ನೀನು ಐಫೋನ್ ಇಟ್ಟುಕೊಂಡು ಓಡಾಡುವುದಕ್ಕೆ ನಾನು ಸಿನಿಮಾ ನೋಡಬೇಕೋ ಅಥವಾ ಮನೋರಂಜನೆಗಾ ಎಂದು ಕೇಳುವ ಧಮ್ ಈಗ ಪ್ರೇಕ್ಷಕರಲ್ಲೂ ಉಳಿದಿಲ್ಲ. ಯಾಕಂದ್ರೆ ಎಲ್ಲರೂ ಎಲ್ಲರಿಗೂ ಫ್ಯಾನ್ ಇಲ್ಲಿ. ನಿಜವಾಗಿ ಚಿತ್ರ ವಿಮರ್ಶೆ ಮಾಡುವವನು ಸಿನಿಮಾದಲ್ಲಿ ಬರುವ ವಿಲನ್ಗಿಂತಲು ಕಡೆಯಾಗಿರುತ್ತಾನೆ.
ಇಷ್ಟೆಲ್ಲ ಯಾಕೆ ಹೇಳಿದೆ ಎಂದರೆ 2020ರ ಜನವರಿ 14ರಂದು ಅಮೇಜಾನ್ ಪ್ರೈಮ್ನಲ್ಲಿ ಒಂದು ವೆಬ್ ಸೀರೀಸ್ ಬಿಡುಗಡೆ ಆಯ್ತು. ಅದರ ಹೆಸರು ‘ತಾಂಡವ್’. ಹೆಸರು ಕೇಳಿದರೆ ಯಾವುದೋ ಶಿವನ ವೆಬ್ ಸಿರೀಸ್ ಇರಬಹುದು ಅನಿಸುತ್ತದೆ. ಆದರೆ ಇದು ಅದಲ್ಲ. ಹೀರೋ ಶಿವನೇ ಆಗಿದ್ದರೂ ಸಿನಿಮಾ ಇರುವುದು ರಾಜಕಾರಣದ ಬಗ್ಗೆ. ಇದ್ರಲ್ಲೇನು ಗುರೂ ಪ್ರಾಬ್ಲಮ್ಮು ಎಂದು ಕೇಳಬೇಡಿ. ಸ್ವಲ್ಪ ಸಮಾಧಾನದಿಂದ ಓದಿ. ಈ ವೆಬ್ ಸಿರೀಸ್ ಹೇಗಿದೆ ಎಂದು ನನ್ನ ಅಭಿಪ್ರಾಯವನ್ನು ಹೇಳುವ ಮುನ್ನ ಅಲ್ಲಿದ್ದ ದೃಶ್ಯಗಳನ್ನು ಹಾಗೇ ನಿಮ್ಮ ಮುಂದೆ ಇಡುತ್ತೇನೆ. ಆಮೇಲೆ ಓದುಗರೇ ನಿರ್ಧರಿಸಲಿ.
ದೃಶ್ಯ ಒಂದು:
ವಿಎನ್ಯು (ಜೆಎನ್ಯು ಮಾದರಿಯ ಹೆಸರು ಗಮನಿಸಿ) ಕಾಲೇಜು ಫೆಸ್ಟಿವಲ್ ಇರುತ್ತೆ. ಅಲ್ಲಿ ಪ್ಯಾಂಟು ಶರ್ಟ್ ಹಾಕಿ ಮುಖಕ್ಕೆ ಶಿಲುಬೆ ಆಕಾರದ ಪೇಂಟಿಂಗ್ ಮಾಡಿಕೊಂಡು ಸ್ಟೇಜ್ ಮೇಲೆ ಬಂದು ನಿಂತಾಗ ಬೂಟು ಧರಿಸಿರುವ ಇನ್ನೊಬ್ಬ ಹುಡುಗ ನಾರಾಯಣ ನಾರಾಯಣ ಎಂದು ನಾರದನ ಹಾಗೆ ಬಂದು, ‘ಈ ರಾಮನ ಭಕ್ತರು ದಿನೇದಿನೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗುತ್ತಾನೇ ಇದಾರಲ್ಲ… ನಾವೂ ಏನಾದ್ರೂ ಸ್ಟ್ರಾಟಜಿ ಮಾಡ್ಲೇಬೇಕಿದೆ.’ ಎನ್ನುತ್ತಾನೆ. ಅದಕ್ಕೆ ಶಿವನ ಪಾತ್ರಧಾರಿ ಮೊಹಮ್ಮದ್ ಜೀಷನ್ ಆಯುಬ್ ಹೇಳ್ತಾನೆ, ‘ಏನ್ ಮಾಡೋಣ? ಹೊಸ ಫೋಟೊ ಹಾಕ್ಲಾ?’. ನಾರದ: ‘ಅದಲ್ಲ ಹೊಸಾತೇನಾದ್ರೂ ಮಾಡಿ ಪ್ರಭು. ಹೊಸ ಟ್ವೀಟ್. ಸೆನ್ಸೇಷನಲ್ ಆಗಿರಬೇಕು. ಹೇಗೆ ಎಂದರೆ ಕ್ಯಾಂಪಸ್ನಲ್ಲಿ ಎಲ್ಲರೂ ಆಜಾದಿ ಆಜಾದಿ ಎಂದು ದೇಶವಿರೋಧಿ ಘೋಷಣೆಗಳು ಹಾಕ್ತಾ ಇದಾರೆ ಎಂದು’. ಶಿವ: ‘ಏನು ಆಜಾದಿ? ವಾಟ್ ದಿ ಫಕ್!’
ದೃಶ್ಯ ಎರಡು:
ಆ ಕಾರ್ಯಕ್ರಮದಲ್ಲಿ ಒಬ್ಬ ವಿದ್ಯಾರ್ಥಿ ಇರುತ್ತಾನೆ. ಪೊಲೀಸರು ಬಂದವರೇ ‘ನಿನ್ ಹೆಸರೇನು?’ ಎಂದು ಕೇಳುತ್ತಾರೆ. ಅವನು ‘ಇಮ್ರಾನ್’ ಎನ್ನುತ್ತಾನೆ. ತಕ್ಷಣವೇ ಪೊಲೀಸರು ‘ನೀನೇ ಆತಂಕವಾದಿ, ನಡೀ ಜೈಲಿಗೆ’ ಎನ್ನುತ್ತಾ ಎಳೆದುಕೊಂಡು ಹೋಗುತ್ತಾರೆ. ಅವನನ್ನು ಯಾಕೆ ಕರೆದುಕೊಂಡು ಹೋದರು ಎಂದು ನೋಡಿದರೆ ಆತ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಎಂಬುದಕ್ಕಾಗಿ.
ದೃಶ್ಯ ಮೂರು:
ಮೇಲ್ಜಾತಿಯ ಒಬ್ಬ ರಾಜಕಾರಣಿ ಕೆಳಜಾತಿಯ ಇನ್ನೊಬ್ಬ ರಾಜಕಾರಣಿಗೆ ‘ನಾನು ಒಂದು ಮಾತನ್ನು ಹೇಳಬೇಕಿತ್ತು’ ಎಂದಾಗ, ಮೇಲ್ವರ್ಗದ ರಾಜಕಾರಣಿ ಹೇಳ್ತಾನೆ, ‘ನಾನ್ ಹೇಳೋದು ಕೇಳು… ನಿಮ್ಮಪ್ಪ ಚಪ್ಪಲಿ ಹೊಲಿಯುವ ಕೆಲಸ ಮಾಡುತ್ತಿದ್ದರು. ತುಂಬ ಶ್ರಮಜೀವಿ ಪಾಪ. ನಾವು ನಿಮ್ಮ ಮೇಲೆ ಎಷ್ಟೋ ವರ್ಷಗಳಿಂದ ದಬ್ಬಾಳಿಕೆ ಮಾಡ್ತಾ ಇದ್ದಿದ್ರಿಂದ ನಿಮಗೆಲ್ಲ ಸರ್ಕಾರದಲ್ಲಿ ಒಂದು ಸ್ಥಾನ ಅಂತ ಸಿಕ್ಕಿದೆ. ಯಾಕಂದ್ರೆ ನಮಗೂ ನಮ್ ಇಮೇಜ್ ಕ್ಲೀನ್ ಮಾಡ್ಕೊಳ್ಬೇಕಿತ್ತು. ಇದೆಲ್ಲ ಆಗದೇ ಇದ್ದಿದ್ರೆ ಮಕ್ಳಾ ನೀವೆಲ್ಲ ನಮ್ಮ ಎದುರು ಕೂತ್ಕೊಳ್ತಾನೋ ಇರ್ತಿರಲಿಲ್ಲ… ಇವ್ನು ಮಾತಾಡ್ತಾನಂತೆ…’
ದೃಶ್ಯ ನಾಲ್ಕು:
ಜೆಎನ್ಯುದಲ್ಲಿ ಆದಂತೆ ಆಜಾದಿ ಪ್ರತಿಭಟನೆಗಳು ಇಲ್ಲೂ ಇದೆ. ಅದರಲ್ಲಿ ಬರುವ ಘೋಷಣೆಗಳೇನು ಗೊತ್ತಾ?
ಅತ್ಯಾಚಾರದಿಂದ ಆಜಾದಿ, ಗಾಂಧಿವಾದದಿಂದ ಆಜಾದಿ, ಮನುವಾದದಿಂದ ಆಜಾದಿ, ಬ್ರಾಹ್ಮಣವಾದದಿಂದ ಆಜಾದಿ,
ದೃಶ್ಯ ಐದು:
ಈ ವೆಬ್ಸಿರೀಸ್ನ ನಾಯಕ ಮುಸ್ಲಿಂ ಆದರೂ ಚಿತ್ರದಲ್ಲಿ ಅವನ ಹೆಸರು ಶಿವ. ಅವನು ಮಾಡೋ ದೇಶ ಒಡೆಯುವ ಕೆಲಸಕ್ಕೆ ಅವನಿಗೆ ಸಿಟ್ಟು ಬರಬೇಕು. ಅದು ಬರಲು ಒಳ್ಳೇ ಡೈಲಾಗ್ ಬೇಕು. ಅದೇನೆಂದರೆ, ‘ಎಲ್ಲರ ಒಳಗೊಂದು ಕೋಪ ಇದೆ. ಆದ್ರೆ ನನ್ ಹೆಸರೇ ಶಿವ. ಅದಕ್ಕೇ ಕೋಪ ಜಾಸ್ತಿ’.
ಶಿವನ ಅರ್ಥ ಕೋಪ ಅಂತ ಪುರಾಣ ಇತಿಹಾಸದಲ್ಲಿ ಯಾರು ಯಾರಿಗೆ ಹೇಳಿದರು ಎಂದು ಪತ್ತೆ ಆಗದಿದ್ದರೂ ನಾವು ಸುಮ್ಮನೆ ಸಿನಿಮಾ ನೋಡಬೇಕಷ್ಟೇ.
ದೃಶ್ಯ ಆರು:
ಹಿಂದೂ ಪೊಲೀಸರು ಮುಸ್ಲಿಂ ವಿದ್ಯಾರ್ಥಿಗಳನ್ನ ಪೊಲೀಸ್ ಠಾಣೆಗೆ ಕರೆಸಿರುತ್ತಾರೆ. ಅವರೆಲ್ಲ ಎಡಪಂಥೀಯರೂ ಆಗಿರುತ್ತಾರೆ. ಅಲ್ಲಿ ಪೊಲೀಸರು ಈ ಮುಸ್ಲಿಂ ಹುಡುಗರಿಗೆ ‘ನೀವು ಕ್ಷಮೆ ಕೇಳಿ ಅಥವಾ ನಿಮ್ಮ ಮೇಲೆ ನಕಲಿ ಎಫ್ಐಆರ್ ಹಾಕುತ್ತೇವೆ’ ಎಂದು ಹೆದರಿಸುತ್ತಾರೆ. ವಿದ್ಯಾಭ್ಯಾಸ ಹಾಳಾಗುತ್ತೆ ಎಂದು ಹೆದರುವ ವಿದ್ಯಾರ್ಥಿಗಳು ಕ್ಷಮೆ ಕೇಳಿ ಎದ್ದು ಹೋಗ್ತಾರೆ.
ದೃಶ್ಯ ಏಳು:
ಬ್ರಾಹ್ಮಣ ರಾಜಕಾರಣಿ ಸೈಫ್ ಅಲಿ ಖಾನ್ ಹೇಳುವ ಮಾತು, ‘ಈಗ ನಾವು ರಾಜನೀತಿಯಲ್ಲಿ ಚಾಣಕ್ಯ ನೀತಿಯ ಆಟ ಆಡಬೇಕಿದೆ. ಅಂದರೆ ನಾವು ಕಿಂಗ್ ಆಗಕ್ಕೆ ಆಗಲ್ಲ ಎಂದರೆ ಕಿಂಗ್ ಮೇಕರ್ ಆಗ್ಬೇಕು’ ಎನ್ನುತ್ತಾನೆ. ಆದರೆ, ಚಾಣಕ್ಯ ಯಾವಾಗ ಹಿಂಗೆ ಹೇಳಿದ್ದ ಅಂತ ಗೊತ್ತಿಲ್ಲ. ಅಥವಾ ಚಾಣಕ್ಯನನ್ನು ಓದಿಕೊಂಡಂತೆಯೂ ಕಾಣಲ್ಲ.
ದೃಶ್ಯ ಎಂಟು:
ಬ್ರಾಹ್ಮಣ ರಾಜಕಾರಣಿ ಸೈಫ್ ಅಲಿ ಖಾನ್ ಯಾವುದೇ ಮುಲಾಜಿಲ್ಲದೇ ಒಬ್ಬನಿಗೆ ‘ಬೆಹೆನ್ *ೕದ್’ ಎಂದು ಬಯ್ಯುತ್ತಾನೆ. ಅದನ್ನು ಸೆನ್ಸಾರ್ ಸಹ ಮಾಡುವುದಿಲ್ಲ.
ದೃಶ್ಯ ಒಂಬತ್ತು:
ತನು ಮನದ ಬೆಂಕಿಯನ್ನು ನಿಯಂತ್ರಿಸುವ ಬಗ್ಗೆ ಸ್ವಾಮೀಜಿ ಒಬ್ಬ ಟಿವಿಯಲ್ಲಿ ಮಾತಾಡುತ್ತಾ ಇರುತ್ತಾರೆ. ಆದರೆ ಅದನ್ನು ನೋಡ್ತಾ ಇರುವ ಒಬ್ಬ ನಟ, ಯಾವುದೋ ಹುಡುಗ ಹುಡುಗಿಯ ಲೈಂಗಿಕ ಕ್ರಿಯೆಯ ವಿಡಿಯೋ ನೋಡ್ತಾ ಸ್ವಾಮೀಜಿಯ ಮಾತುಗಳನ್ನು ಇಲ್ಲಿಗೆ ಅನ್ವಯಿಸಿಕೊಳ್ಳುತ್ತಾ ಇರುತ್ತಾನೆ.
ಸ್ವಾಮೀಜಿ ಹೇಳುವ ಮಾತು, ‘ತನು ಮನದ ಬೆಂಕಿ ನಿಯಂತ್ರಿಸುವುದು ಕಷ್ಟ. ದೇಹ ಬೆಂಕಿ ನಿಯಂತ್ರಣ ಅಂದ್ರೆ ಏನು ಅಂತ ನಾನು ಹೇಳುವುದಿಲ್ಲ. ಯಾಕಂದ್ರೆ ಎಲ್ಲರೂ ಎಜುಕೇಟೆಡ್ ಇದೀರಿ ತಿಳಿಯುತ್ತೆ. ಆದರೆ ಮನಸ್ಸಿನ ಬೆಂಕಿ ನಿಯಂತ್ರಣ ಬಹಳ ಕಷ್ಟ. ತುಂಬ ವರ್ಷಗಳ ಸಹನೆ-ತಾಳ್ಮೆ ಕೇಳುತ್ತೆ. ಆದರೆ ಒಮ್ಮೆ ಸಾಧಿಸಿದರೆ ನೀವೇ ಶಕ್ತಿ ಕೇಂದ್ರ ಆಗಿ ಎಲ್ಲರಿಗೂ ಬೆಳಕಾಗುತ್ತೀರಿ’ ಎನ್ನುವಲ್ಲಿಗೆ ಹುಡುಗನ ಲ್ಯಾಪ್ಟಾಪ್ನಲ್ಲಿ ಪ್ಲೇ ಆಗುತ್ತಿದ್ದ ಲೈಂಗಿಕ ಕ್ರಿಯೆಯ ವಿಡಿಯೋ ಸಹ ಮುಗಿಯುತ್ತದೆ.
ದೃಶ್ಯ ಹತ್ತು:
ಹಿಂದೂ ಪೊಲೀಸರ ಬಗ್ಗೆ ಮುಸ್ಲಿಮರು ಜೈಲಿನಲ್ಲಿ ಮಾತಾಡಿಕೊಳ್ಳುತ್ತಾ ಇರುವುದು. ಒಬ್ಬ ಹೇಳ್ತಾನೆ, ‘ಅವ್ರಿಬ್ರು ಎಲ್ ಹೋದ್ರು?’. ಅದಕ್ಕೆ ಮತ್ತೊಬ್ಬ ಹೇಳೋದು, ‘ಸತ್ತೋದ್ರು. ಒಬ್ಬನ ಹೆಸರು ಸಲೀಂ. ಇನ್ನೊಬ್ಬನ ಹೆಸರು ಆಯುಬ್. ನಮ್ಮಂಥೋರನ್ನೆಲ್ಲ ಕೊಲ್ಲೋದು ತುಂಬ ಸುಲಭ ಅಲ್ವಾ? ನಾಳೆ ನನ್ನ ಹೆಸರನ್ನೂ ಯಾವುದಾದರೂ ಉಗ್ರಗಾಮಿ ಸಂಘಟನೆಯ ಜತೆ ಸೇರಿಸಿಬಿಡುತ್ತಾರೆ ನೋಡ್ತಾ ಇರು’ ಎಂದು ಅಳುತ್ತಾನೆ ಮುಸ್ಲಿಂ ಹುಡುಗ.
ಈ ಸೀನ್ ನೋಡಿದರಂತೂ ಯಾರಿಗಾದರೂ ಕರುಣೆ ಉಕ್ಕಿ ಹರಿಯುತ್ತದೆ.
ಈ ಹತ್ತು ದೃಶ್ಯಗಳು ‘ತಾಂಡವ್’ ವೆಬ್ ಸೀರೀಸ್ನ ಕೇವಲ ಎರಡು ಎಪಿಸೋಡ್ನಲ್ಲಿ ಬರುವಂಥದ್ದು. ಒಟ್ಟು ಒಂಬತ್ತು ಎಪಿಸೋಡ್ಗಳ ವೆಬ್ಸೀರೀಸ್ನಲ್ಲಿ ಏನೇನು ಹಾಕಿದ್ದಾರೆ ಎಂದು ನಾನು ಹೇಳುತ್ತಾ ಹೋದರೆ, ಒಂದು ಬೃಹತ್ ಕಾದಂಬರಿಯನ್ನೇ ಬರೆಯಬೇಕಾದೀತು ಅಷ್ಟಿದೆ.
ಈಗ ಮೊದಲಿಂದ ಬರೋಣ. ಹೇಳಿ ಇದಕ್ಕೆ ‘ತಾಂಡವ್’ ಅನ್ನೋ ಹೆಸರು ಯಾಕಿಟ್ರು? ಗೊತ್ತಿಲ್ಲ. ಈ ಸಿನಿಮಾದ ನಾಯಕ ಕನ್ಹಯ್ಯ ಕುಮಾರನನ್ನು ಹೋಲುತ್ತಾನೆ. ಜೆಎನ್ಯು ವಿದ್ಯಾರ್ಥಿಗಳನ್ನು ಆತ ಹೇಗೆ ರೊಚ್ಚಿಗೆಬ್ಬಿಸಿದ್ದನೋ, ಇಲ್ಲಿ ಶಿವ ಎಂಬುವವನು ವಿಎನ್ಯುದಲ್ಲಿ ಜನರನ್ನು ರೊಚ್ಚಿಗೆಬ್ಬಿಸುತ್ತಾನೆ. ಅಷ್ಟೇ ವ್ಯತ್ಯಾಸ.
ಈ ಚಿತ್ರದ ಕಣಕಣದಲ್ಲೂ ಹಿಂದೂ ವಿರೋಧವಿದೆ. ಬ್ರಾಹ್ಮಣರೇ ಎಲ್ಲ ಸಮಸ್ಯೆಗೂ ಕಾರಣ ಎಂಬ ದೃಶ್ಯಗಳಿವೆ. ಬ್ರಾಹ್ಮಣವಾದದಿಂದ ನಮಗೆ ಸ್ವಾತಂತ್ರ್ಯ ಬೇಕು ಎಂಬ ಘೋಷಣೆಯೇ ಇದೆ. ದಲಿತರನ್ನು ಬ್ರಾಹ್ಮಣರೇ ಶತಮಾನಗಳವರೆಗೂ ಅತ್ಯಾಚಾರ ಮಾಡಿದರು ಎಂದು ಬ್ರಾಹ್ಮಣ ಪಾತ್ರ ಹಾಕಿದವನಿಂದಲೇ ಹೇಳಿಸುತ್ತಾರೆ. ಯಾವ ಎಡಪಂಥೀಯ ನಾಯಕನನ್ನು ಈ ದೇಶ ನಾಲಾಯಕ ಎಂದು ಕರೆದು ಅವನಿಗೆ ಪ್ರಾಮುಖ್ಯತೆ ಕೊಡುವುದನ್ನು ನಿಲ್ಲಿಸಿತೋ ಅಂಥವನನ್ನು ಆದರ್ಶವಾಗಿಟ್ಟುಕೊಂಡು ಇಲ್ಲಿ ವೆಬ್ಸೀರೀಸನ್ನೇ ಮಾಡಿದೆ.
ದಯವಿಟ್ಟು ಹೇಳಿ ಇದನ್ನೆಲ್ಲ ನೋಡಿ ನಾವು ಹಿಂದೂಗಳು ಒಂದು ಧ್ವನಿಯನ್ನೂ ಎತ್ತದೇ ಇರಬೇಕು ಎಂದರೆ ಹೇಗೆ? ಇದನ್ನು ನಾವು ಹೇಳಿದರೆ ಬಲಪಂಥೀಯ, ಮೋದಿ ಭಕ್ತ, ಆರೆಸ್ಸೆಸ್, ಚಡ್ಡಿ ಎಂದೆಲ್ಲ ಕರೆಸಿಕೊಳ್ಳಬೇಕು. ಅದೇ ಇದನ್ನು ಆಹಾ ಓಹೋ ಎಂದು ಹೊಗಳುವವರು ಪ್ರಗತಿಪರರು. ದೇಶಪ್ರೇಮಿಗಳು. ಇದೇ ಇವತ್ತಿನ ಬಾಲಿವುಡ್ ಸಿನಿಮಾಗಳು ಜನರಿಗೆ ತೋರಿಸುತ್ತಿರುವುದು. ಇದನ್ನೇ ಅನುಸರಿಸುವ ಕನ್ನಡ ಸಿನಿಮಾಗಳು ನಿಧಾನವಾಗಿ ನಕ್ಸಲರೂ ಮನುಷ್ಯರೇ ಎಂಬ ಸಿನಿಮಾಗಳಿಂದ ಕೊನೆಗೆ ಉಗ್ರಗಾಮಿಗಳೇನು ಉಗ್ರರಲ್ಲ. ಒಂದು ರಾತ್ರಿ ಅವರೊಟ್ಟಿಗೆ ಕಳೆದು ಅವರ ಕಷ್ಟಗಳನ್ನೂ ಕೇಳಿ ಎಂಬ ಸಿನಿಮಾ ಮಾಡುವುದು.
ಇಂಥ ಸಮಯದಲ್ಲೂ ನಾವು ಧ್ವನಿ ಎತ್ತದಿದ್ದರೆ, ಶಿವಲಿಂಗದ ಮೇಲೆ ಕಾಂಡೋಮ್ ಹಾಕಿ ಬಿಡಿಸುವ ಕಾರ್ಟೂನುಗಳು ಸಿನಿಮಾ ಆಗಿ ಬರುತ್ತವೆ. ಇಷ್ಟರಲ್ಲಿ ಬಂದೂ ಇರಬಹುದು. ಹಾಗಾದರೆ ನಾವೇನು ಮಾಡಬೇಕು? ಈ ಕ್ಷಣದಿಂದಲೇ ವಿರೋಧಿಸೋಣ. ನೀವು ವಕೀಲರಾಗಿದ್ದರೆ ಪ್ರಕರಣ ದಾಖಲಿಸಿ. ಸಾಮಾನ್ಯ ಜನರಾಗಿದ್ದರೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ಗೆ ಈ ವೆಬ್ಸಿರೀಸನ್ನ ಬಂದ್ ಮಾಡಿಸುವುದಕ್ಕೆ ಪತ್ರ ಬರೆಯಿರಿ ಅಥವಾ ಇಮೇಲ್ ಮಾಡಿ. ಈಗ ಧ್ವನಿ ಎತ್ತದಿದ್ದರೆ ನಾಳೆ ನಮ್ಮ ಗಂಟಲಿಗೇ ಗೂಟ ಹೊಡೆದು ಬಿಡುತ್ತಾರೆ.
ಜಾವಡೇಕರ್ ಅವರ ಇಮೇಲ್: minister.inb@gov.in