ಬ್ರಾಹ್ಮಣ – ಜಾತಿ ಪದ್ಧತಿ – ದೇವರು – ದೇವಸ್ಥಾನ – ಹಿಂದೂ ಧರ್ಮ!

ಬ್ರಾಹ್ಮಣ – ಜಾತಿ ಪದ್ಧತಿ – ದೇವರು – ದೇವಸ್ಥಾನ – ಹಿಂದೂ ಧರ್ಮ!ಸ್ಪೀಟ್‌ ಎಲೆಗಳನ್ನು ನಿಧಾನವಾಗಿ ಗಂಟೆಗಟ್ಟಲೆ ಕೂತು ಜೋಡಿಸುವುದನ್ನು ನೋಡಿದ್ದೀರಾ? ಹಾಂ ಇದೆಲ್ಲ ಚಿಕ್ಕಂದಿನಲ್ಲಿ ಆಡಿದ ಆಟ ಅಲ್ಲವೇ ಎನ್ನುತ್ತಿದ್ದೀರೆಂದರೆ ಇನ್ನೊಂದು ಪ್ರಶ್ನೆ ಕೇಳಲೇ ಬೇಕು. ಹಾಗೆ ಮನೆ ಕಟ್ಟುವಾಗ ಅಥವಾ ಕಟ್ಟಿದ ನಂತರ ತಕ್ಷಣ ಹೋಗಿ ನಾವೇನಾದರೂ ಅದನ್ನು ಬೀಳಿಸಿದರೆ ಏನಾಗಬಹುದು? ಮನೆ ಕಟ್ಟಿದ ಕೆಲವರು ವಾಪಸ್‌ ಕೋಪಕ್ಕೆ ಹೊಡೆದಿರಬಹುದು, ಇನ್ನು ಕೆಲವರು ದುರುಗುಟ್ಟಿ ನೋಡಿರಬಹುದು, ಮತ್ತೊಂದಿಷ್ಟು ಮಂದಿ ಜೋರಾಗಿ ಅತ್ತಿರಬಹುದು.
ಇವೆಲ್ಲ ಭಾವನೆಗಳು ಕೇವಲ ಇಸ್ಪೀಟಿನ ಮನೆಗಾ ಎಂದು ಕೇಳಿದರೆ ಬೀಳುವ ಹೊಡೆತ ಇನ್ನೂ ಜೋರಾಗಿ ಬಿದ್ದೀತು. ಕೇವಲ ಅರ್ಧ ಗಂಟೆ ಹಿಂದೆ ನಿರ್ಮಿಸಿದ್ದ ಇದಕ್ಕೇ ಇಷ್ಟು ಭಾವನೆಗಳು ವ್ಯಕ್ತವಾಗಬೇಕಾದರೆ, ನೂರಾರು, ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಜರಿಂದ ರಕ್ಷಿಸಿಕೊಂಡು, ಪೂಜಿಸಿಕೊಂಡು ಬಂದ ದೇವರ ವಿಗ್ರಹ 2020ರಲ್ಲೋ, 2021ರಲ್ಲೋ ದಿನಬೆಳಗಾಗುವಷ್ಟರಲ್ಲಿ ಕುಸಿದು ಬಿದ್ದರೆ ಹೇಗಾಗಬೇಡ? ಹೇಳಿ ಹಿಂದೂಗಳು ಏನು ಮಾಡಬೇಕು? ರಕ್ತ ಕುದಿಯಲ್ಲವೇ?
ಆಂಧ್ರದ ರಾಮತೀರ್ಥಂ ದೇವಸ್ಥಾನದ ರಾಮನ ವಿಗ್ರಹ ಮುರಿದಾಗ ಬೃಹತ್‌ ಹಿಂದೂ ಸಮುದಾಯಕ್ಕೆ ಆದದ್ದೂ ಇದೇ. ಆ ಮುರಿದ ಮೂರ್ತಿಯನ್ನು ತರುವಾಗ ಅರ್ಚಕರು ಅಸಹಾಯಕತೆಯಿಂದ ಕಣ್ಣೀರಿಟ್ಟರು. ಅಯ್ಯೋ ಯಾವ ದೇಶದಲ್ಲಿ ರಾಮನಿಗೆ ನಿತ್ಯ ಕೋಟ್ಯಂತರ ಪೂಜೆ ಸಲ್ಲುತ್ತದೆಯೋ ಆ ರಾಮನಿಗೆ ರಕ್ಷಣೆಯೇ ಇಲ್ಲದೇ ಹೋಯ್ತಲ್ಲ ಎಂದಾಗ ಬೀಳುವ ಕಣ್ಣೀರು ಅದೆಷ್ಟು ಜನರನ್ನು ಸುಟ್ಟೀತೋ ಗೊತ್ತಿಲ್ಲ.
ಇದೊಂದೇ ಅಲ್ಲ, ಆಂಧ್ರದ ಈ ದೇವಸ್ಥಾನದ ದಾಳಿಯ ಅಕ್ಕಪಕ್ಕದ ದಿನಗಳಲ್ಲೇ ಪಾಕ್‌ನಲ್ಲೊಂದು ದೇವಸ್ಥಾನದ ಧ್ವಂಸವಾಯಿತು. ಈಗ ಪಾಕ್‌ ಕೋರ್ಟ್‌ ಮತ್ತೊಮ್ಮೆ ದೇವಸ್ಥಾನ ನಿರ್ಮಾಣವಾಗಬೇಕು ಎಂದು ಆದೇಶ ನೀಡಿದೆಯಾದರೂ, ಆ ದೇಶದ ಮಸೀದಿಯಂತಲ್ಲ ದೇವಸ್ಥಾನಗಳು. ಇವರ ಹಾಗೆ ದೇವಸ್ಥಾನಗಳು ಕೇವಲ ಮ್ಯಾಟ್‌ ಹಾಕಿ ಕೂರುವ ಪ್ರಾರ್ಥನಾ ಸ್ಥಳವಲ್ಲ. ಬದಲಿಗೆ ಅದೊಂದು ಶಕ್ತಿ ಕೇಂದ್ರ.
ಇಲ್ಲಿ ನಾವು ಆಲೋಚನೆ ಮಾಡಬೇಕಾದ ವಿಷಯ ಬೇರೆಯೇ ಇದೆ. ಯಾವುದೋ ಒಂದೆರಡು ದೇವಸ್ಥಾನಗಳಷ್ಟೇ ದಾಳಿಗೊಳಗಾಗುತ್ತಿರುವ ವಿಷಯ ಇದಲ್ಲ. ಬದಲಿಗೆ ಕಳೆದ 19 ತಿಂಗಳಲ್ಲಿ ಆಂಧ್ರವೊಂದರಲ್ಲೇ 128 ದೇವಸ್ಥಾನಗಳ ಮೇಲೆ ದಾಳಿಯಾಗಿದೆ. ಮೊದಲೇ ಹೇಳಿದಂತೆ ಈ ಎಲ್ಲವೂ ದಾಳಿಗಷ್ಟೇ ಸೀಮಿತವಾಗಿಲ್ಲ. ಅಥವಾ ಸುಮ್ಮನೆ ಯಾವುದೋ ಕಿಡಿಗೇಡಿಗಳು ದಾಳಿ ಮಾಡಿದ್ದಷ್ಟೇ ಅಲ್ಲ. ಇದರ ಹಿಂದೆ ದೊಡ್ಡ ಅಜೆಂಡಾಗಳೇ ಇವೆ.
ಅದೇನು? ತಿಳಿಯೋಣ.
ಇತ್ತೀಚೆಗೆ ಸಿದ್ದರಾಮಯ್ಯನವರು ಹನುಮಂತನ ಬಗ್ಗೆ ಬಹಳ ಹೀನಾಯವಾಗಿ ಮಾತನಾಡಿದರು. ಇವರು ಹೀಗೆ ಆಡಿದ್ದೇ ತಡ, ಈ ಇವರ ಲುಂಗಿ ಬುಡಕ್ಕೇ ಕುಳಿತಿರುವ ಕೆಲ ಗಂಜಿಕಿರಾಕಿಗಳು, ಬುದ್ಧಿಜೀವಿಗಳು ಥ್ಯಾಂಕ್‌ ಗಾಡ್‌, ನೀವ್‌ ಹೇಳಿದ್ರಿ, ನಾವ್‌ ಇಲ್ಲಿಂದ ನೋಡ್ಕೊತ್ತೀವಿ ಎಂಬಂತೆ ಹನುಮಂತನನ್ನು ವಿರೋಧಿಸಿದ್ದೇ ವಿರೋಧಿಸಿದ್ದು. ಕೋತಿಗಳೇ ನಾಚುವಂತೆ ತಮ್ಮದೂ ಒಂದು ಬಾಲ ಹೊರ ಹಾಕಿದ ಮಂದಿ ಜಾತಿ ವ್ಯವಸ್ಥೆಯಿಂದ ಹಿಡಿದು ಸಸ್ಯಾಹಾರ, ಮಾಂಸಾಹಾರದವರೆಗೂ ಎಲ್ಲವನ್ನೂ ಎಳೆದು ತಂದು ರಾಡಿ ಮಾಡಿ ಎದ್ದು ಹೋದರು.
ಈ ಮೇಲಿನ ಉದಾಹರಣೆಗಳಿಂದ ಏನಾದರೂ ಫ್ಲಾಶ್‌ ಆಯ್ತಾ? ಇನ್ನೂ ಆಗಿಲ್ಲ ಎಂದರೆ ಹೇಳ್ತೇನೆ ಕೇಳಿ.
ದೇಶದಲ್ಲಿ ಈಗಾಗಲೇ ಶಿಥಿಲಗೊಂಡಿರುವಂಥ 35,000 ದೇವಸ್ಥಾನಗಳಲ್ಲಿ ಪುನರ್‌ ನಿರ್ಮಾಣ ಮಾಡಬೇಕು ಹಾಗೂ ಅದರ ಮೂಲ ವಾರಸುದಾರರಿಗೆ ಬಿಟ್ಟುಕೊಡಬೇಕು ಎಂದು ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಹೇಳಿದರು. ಆಹಾಹಾ, ಇಷ್ಟೇ ಸಾಕಿತ್ತು ಗೋಪುರದ ಮೈಕ್‌ ಒಳಗೇ ಬಚ್ಚಿಟ್ಟುಕೊಂಡಿದ್ದ ಹಿಂದೂಗಳಿಗೆ. ಎದ್ದು ಬಂದು, ಏನ್ರೀ ದೇವಸ್ಥಾನ ಕಟ್ಟೋ ಬದಲು ಆಸ್ಪತ್ರೆ ಕಟ್ರಿ, ಶಾಲೆ ತೆರೀರ್ರೀ, ಬಡವರಿಗೆ ಅನ್ನ ಕೊಡ್ರೀ ಮತ್ತೊಂದು ಮಾಡ್ರಿ ಎಂದು ಏನೋ ಈ ಸುಪುತ್ರರ ಜೇಬಿನಿಂದಲೇ ಹಣ ಲೂಟಿ ಮಾಡಿ ಕಟ್ಟಲು ಕರೆ ಕೊಟ್ಟಂತೆ ನಿಂತರು.
ಆದರೆ ಈ ದಾಳಿಗಳ ಅಜೆಂಡಾಗಳೇ ಬೇರೆ.
ಈ ದೇವಸ್ಥಾನಗಳ ದಾಳಿಗಳೆಲ್ಲ ಮೊಘಲರ, ಮುಸ್ಲಿಂ ಆಕ್ರಮಣಕಾರರ ಮೊದಲ ಅಸ್ತ್ರವಾಗಿತ್ತು. ಅಷ್ಟೇ ಅಲ್ಲ, ಆಗ ಅವರದ್ದೇ ರಾಜ್ಯ. ಯಾವ ದೇವಸ್ಥಾನವನ್ನು ಕೆಡವಿದರೂ ಯಾರೂ ಕೇಳುವವರಿಲ್ಲ. ಆದರೆ, ನಮ್ಮ ಶತಮಾನದಲ್ಲಿ ಹಾಗಿಲ್ಲ. ಬ್ರಾಹ್ಮಣರನ್ನು, ಹಿಂದೂಗಳನ್ನು ತುಳಿಯಬೇಕು ಎಂದು ಏನೇನು ನೀತಿ, ನಿಯಮ, ಕಾನೂನುಗಳನ್ನು ಮಾಡಿದ್ದರಾದರೂ, ಅದನ್ನು ಎಲ್ಲರೂ ಅನುಸರಿಸಬೇಕು ಎಂಬ ನಿಯಮ ಬಂತಲ್ಲ. ಅದೇ ಸಮಸ್ಯೆಯಿಂದ ಊರ ದೇವರನ್ನೆಲ್ಲ ನೂಕಾಚೆ ದೂರ ಎಂಬುದನ್ನು ಅಕ್ಷರಶಃ ಮಾಡಲಿಕ್ಕಾಗಿಲ್ಲ.
ಆದರೆ, ಅಷ್ಟಕ್ಕೇ ಸುಮ್ಮನಾದರೆ ಅಜೆಂಡಾ ಪೂರ್ಣಗೊಳ್ಳುವುದು ಹೇಗೆ? ಅದಕ್ಕೆ ಈ ಮೂಲ ದೇವರ ಪೂಜೆ ಮಾಡುವವರು ಯಾರು ಹೇಳಿ? ಬ್ರಾಹ್ಮಣರು. ಇವರನ್ನು ಮೊದಲು ಹೊಡೆದೋಡಿಸಿದರೆ, ಇವರ ಮೇಲೆ ಜನರಿಗೆ ಅಸಹ್ಯ ಬರುವಂತೆ ಮಾಡಿದರೆ, ಸಹಜವಾಗಿ ಈ ವೃತ್ತಿಗೆ ಯಾರೂ ಬರುವುದಿಲ್ಲ. ಅದರಿಂದ ದೇವಸ್ಥಾನಗಳು ಬಡವಾಗುತ್ತದೆ. ದೇವಸ್ಥಾನಗಳಲ್ಲಿ ಪೂಜೆ ನಡೆಯದಿದ್ದರೆ ಅಥವಾ ಶಾಸ್ತ್ರೋಕ್ತವಾಗಿ ಏನೂ ನಡೆಯದಿದ್ದರೆ ಜನರಿಗೂ ದೇವಸ್ಥಾನಗಳು, ದೇವರ ಮೇಲೆ ನಂಬಿಕೆ ಹೋಗುತ್ತದೆ.
ಅಲ್ಲಿಂದಲೇ ಹಿಂದೂಗಳನ್ನು ಸನಾತನ ಧರ್ಮದಿಂದ ವಿಮುಖರನ್ನಾಗಿಸುವ ಪ್ರಯತ್ನ ಶುರು ಆಗುವುದು. ಒಬ್ಬ ನಾನು ದಲಿತ, ನನಗೆ ಹಿಂದೂಗಳ ಜಾತಿ ಹೆಸರಲ್ಲಿ ಅವಮಾನ ಮಾಡಿಬಿಟ್ಟರು ಎಂದು ಹೇಳಿದರೆ, ಮತ್ತೊಬ್ಬ ಬಂದು ನಿನಗೂ ಮುಕ್ತಿಯನ್ನು ಕೊಡುವವನು ಏಸುವೊಬ್ಬನೇ ಎನ್ನುತ್ತಾನೆ. ಮತಾಂತರವಾದರೆ ಮುಕ್ತಿಯ ಜೊತೆಗೆ ಬೈಕು, ಶಾದಿ ಭಾಗ್ಯ, ಮನೆ, ಕೆಲಸ ಎಲ್ಲವೂ ಸಿಗುತ್ತದೆ ಎಂದಾದರೆ, ಯಾರು ಮತಾಂತರವಾಗುವುದಿಲ್ಲ?
ಇದು ಕೇವಲ ಒಂದು ಹಂತದಲ್ಲಿ ಮಾತ್ರ ನಡೆಯುವುದಿಲ್ಲ. ಮಕ್ಕಳಿಗೆ ಹೇಗೆ ಅ ಎಂಬ ಅಕ್ಷರಾಭ್ಯಾಸದಿಂದ ಎಲ್ಲವೂ ಶುರುವಾಗುತ್ತೋ, ಹಾಗೇ ಬ್ರಾಹ್ಮಣರ ಮೇಲಿನ ದ್ವೇಷದಿಂದ ಆರಂಭವಾಗುವ ಇದು, ಕೊನೆಗೆ ದೇವರನ್ನೇ ಒಡೆಯಿರಿ, ದೇವಸ್ಥಾನ ಇದ್ದರೆ ತಾನೇ ಇವೆಲ್ಲವೂ? ಅದನ್ನೇ ಒಡೆದು ಹಾಕಿ ಎಂಬಲ್ಲಿವರೆಗೂ ಹೋಗುತ್ತದೆ. ಸಮಾಜದಲ್ಲಿ ಶಾಂತಿ ಕಾಪಾಡುವುದಕ್ಕೆ, ಸಮಾನತೆ ಸಾರುವುದಕ್ಕೆ ಮಸೀದಿ, ಚರ್ಚ್‌ಗಳು ಇರಬೇಕಾದರೆ, ಜನಿವಾರ ಹಾಕಿ ಜುಟ್ಟು ಬಿಟ್ಟ ಬ್ರಾಹ್ಮಣ ಮತ್ತು ಅವನ ಮಕ್ಕಳು ಮಾತ್ರ ಪೂಜೆ ಮಾಡುವ ದೇವಸ್ಥಾನ ಯಾಕೆ ಬೇಕು ಎಂದಾದಾಗ, ತ್ರಿವರ್ಣಕ್ಕಿಂತಲೂ ಸಮಾನತೆಯ ಬಾವುಟ ಗೂಟವೇರಿ ರಾರಾಜಿಸಲಿದೆ.
ಇದಕ್ಕೆ ಇವರು ಬಳಕೆ ಮಾಡಿಕೊಳ್ಳುವ ಮೊದಲ ಮಾಧ್ಯಮಗಳೇ, ಸಿನಿಮಾ-ನಾಟಕಗಳು. ಬ್ರಾಹ್ಮಣರು ಎಷ್ಟು ಕ್ರೂರಿಗಳು, ಅವರು ದಲಿತರನ್ನು ಹೇಗೆಲ್ಲ ದೇವರಿಂದ ದೂರ ಮಾಡುತ್ತಿದ್ದರು, ದೇವರ ಕೃಪೆ ಪಡೆಯುವುದಕ್ಕೆ ಬ್ರಾಹ್ಮಣನ ಅಪ್ಪಣೆ ಏಕೆ ಬೇಕು? ಎಂಬುದರಿಂದ ಆರಂಭವಾಗುವ ಈ ನಾಟಕಗಳು, ಕೊನೆಗೆ ಹಿಂದೂ ಧರ್ಮವೇ ಸರಿ ಇಲ್ಲ. ಸಮಾನತೆ ಇಲ್ಲದ ಧರ್ಮ, ತಾರತಮ್ಯ ಮಾಡುವ ಧರ್ಮ ಎಂಬಲ್ಲಿಗೆ ಬಂದು ನಿಂತು ಕೊನೆಗೆ ಏಸು ಅದೆಂಥ ದಯಾಮಯಿ ಗೊತ್ತಾ ಎನ್ನುವಲ್ಲಿಗೆ ನಿಲ್ಲಿಸುತ್ತಾರೆ. ಮುಂದಿನದ್ದು ಮತಾಂತರಿಗಳು ನೋಡಿಕೊಳ್ಳುತ್ತಾರೆ.
ಸಾಹಿತ್ಯದಲ್ಲೂ ಹಾಗೇ ಅನಂತಮೂರ್ತಿಯಂಥ ಬ್ರಾಹ್ಮಣನೇ ಆಗಿದ್ದರೂ ಹಿಂದೂ ದೇವರ ವಿರುದ್ಧವೇ ಬರೆಯುತ್ತಾ ಬಂದರು. ಬ್ರಾಹ್ಮಣ್ಯವೇ ಸರಿ ಎಲ್ಲ ಎಂದು ಸಾಬೀತು ಮಾಡಲು ವಿಫಲ ಪ್ರಯತ್ನಗಳನ್ನು ನಡೆಸಿದರು. ಇದೇ ರೀತಿಯ ಹಲವು ಸಾಹಿತಿಗಳು ಬ್ರಾಹ್ಮಣ ವಿರೋಧವನ್ನು ಸಾಧಿಸಿ ಬರೆದ ಪುಸ್ತಕಗಳು ಇಂದು ಟಿಶ್ಯೂ ಪೇಪರ್‌ಗೂ ಲಾಯಕ್ಕಿಲ್ಲದಷ್ಟಿದೆ. ಒಟ್ಟಾರೆ ಇವರ ಉದ್ದೇಶ ಇಷ್ಟೇ, ನಾಳಿನ ಪೀಳಿಗೆ ಪುಸ್ತಕ ತೆಗೆದು ನೋಡಿದರೆ ಸಿಗಬೇಕಾದ್ದೆಲ್ಲ ಇಂಥ ವೈಷಮ್ಯದ ಸಾಹಿತ್ಯಗಳೇ. ಪುಸ್ತಕ ಇವತ್ತು ಟಿಶ್ಯೂ ಪೇಪರ್‌ ಆಗಿದ್ದರೂ, ಮುಂದೆ ಯಾವುದಾದರೂ ಒಬ್ಬ ಮೂರ್ಖ ಓದಿದರೂ ಬರೆದಿದ್ದು ಸಾರ್ಥಕ ಎಂಬಷ್ಟು ವಿಷ ಇಲ್ಲಿರುತ್ತದೆ.
ಆದರೆ ಎಲ್ಲವೂ ಸಾಹಿತ್ಯದಿಂದಷ್ಟೇ ಆಗುವುದಿಲ್ಲ. ಅದಕ್ಕೇ ಈ ಫೇಸ್ಬುಕ್‌ ಬರಹಗಳು ಬಂದವು. ರಾಜಕಾರಣವೂ ಇದಕ್ಕೆ ಬಳಕೆಯಾಯಿತು. ಸಿದ್ದರಾಮಯ್ಯನವರು ಹಿಂದೂ ದೇವರನ್ನು ಲೇವಡಿ ಮಾಡುತ್ತಿರುವಾಗ ಕೆಲವರು ಶಿಳ್ಳೆ ಹೊಡೆಯುವುದನ್ನು ನೋಡಿರುತ್ತೀರಿ. ಆಗ ಅದು ಮಜಾ ಅನಿಸಬಹುದು. ಅಥವಾ ಗೋಮಾಂಸ ನಾನು ತಿನ್ನಲ್ಲ ಆದ್ರೂ ಬೇಕು ಅನಿಸಿದ್ರೆ ತಿಂತೀನಿ ಎಂಬುದು ಕೇವಲ ಹೇಳಿಕೆಗಳಷ್ಟೇ ಆಗಿರದೇ ಇವರ ಹಿಂದಿರುವ ದೊಡ್ಡ ಹಿಂಡೇ ಅಜೆಂಡಾಗಳ ಸಾಧನೆಗೆ ಅವರನ್ನು ಬಳಸಿಕೊಳ್ಳುತ್ತಿರುವ ಪರಿ ಇದು.
ಸಿದ್ದರಾಮಯ್ಯ ದೇವರನ್ನು ಒಡೆಯಿರಿ ಎಂದು ಕರೆ ಕೊಡದಿದ್ದರೂ, ಬೇರೆ ರಾಜ್ಯಗಳಲ್ಲಿನ ಕೆಲ ನಾಯಕರ ಪ್ರಚೋದನೆಗೆಂದೇ ಕಾಯುತ್ತಿರುವ ಒಂದು ವರ್ಗ ನಮ್ಮ ನಾಯಕರು ಜಾತಿ-ದೇವರು-ಧರ್ಮ ಎಲ್ಲವನ್ನೂ ಬಿಟ್ಟಿದ್ದಾರೆ, ನೀವು ಯಾವಾಗ ಬಿಡ್ತೀರಿ ಎಂದು ಶುರುವಾಗುವ ಆಂದೋಲನ, ಕೊನೆಗೆ ಆಂಧ್ರದಲ್ಲಾದಂತೆ ದೇವಸ್ಥಾನ ಧ್ವಂಸಕ್ಕೆ ಕೈ ಹಾಕುತ್ತಾರೆ. ಆ ಮುಸ್ಲಿಂ ರಾಜರ ರಕ್ತ, ರಕ್ತದ ಗುಣ ಅಷ್ಟು ಸುಲಭವಾಗಿ ಹೋಗುವಂಥದ್ದಲ್ಲ ಎಂಬುದಕ್ಕೆ ಆಂಧ್ರದ ದೇವಸ್ಥಾನಗಳ ಮೇಲೆ ನಡೆದ ದಾಳಿಯೇ ಸಾಕ್ಷಿ.
ತಳ್ಳಿ ಹಾಕಲಿಕ್ಕೇ ಆಗದ ಮತ್ತೊಂದು ಪ್ರಮುಖ ಸಾಧ್ಯತೆಯೇನು ಎಂದರೆ, ಅಯೋಧ್ಯೆಯ ರಾಮ ಮಂದಿರ ನಿರ್ಮಾಣ.
ಯಾವಾಗ ರಾಮ ಮಂದಿರ ತೀರ್ಪು ಬಂತೋ ಆಗಲೇ ಒಂದಷ್ಟು ವರ್ಗಕ್ಕೆ ಇದು ತೀರ ಖಾರವಾಗಿತ್ತು. ಇನ್ನು ಮಂದಿರ ನಿರ್ಮಾಣವೂ ವೇಗ ಪಡೆದುಕೊಳ್ಳುತ್ತಿರುವಾಗ, ಹಿಂದೂಗಳೆಲ್ಲ ಈ ನಿಟ್ಟಿನಲ್ಲಿ ಒಟ್ಟಾಗುತ್ತಿರುವಾಗ ಕೊತಕೊತನೇ ಕುದ್ದು
ಹೋದರು. ನಾವೆಲ್ಲ ಇಲ್ಲಿ ಕಷ್ಟ ಪಟ್ಟು ಜಾತಿಪದ್ಧತಿಯನ್ನೇ ಅಸಭ್ಯವಾಗಿ ಚಿತ್ರಿಸಿ ಹಿಂದೂ ಧರ್ಮವೇ ಸರಿ ಇಲ್ಲ ಎಂದು ಮಂಡಿಸುತ್ತಿದ್ದರೆ, ಇಲ್ಲಿ ಏಕಾಏಕಿ ಒಂದು ಮಂದಿರದ ವಿಚಾರಕ್ಕೆ ಎಲ್ಲರೂ ಒಂದಾಗುತ್ತಿದ್ದರೆ ನೀರಿನಲ್ಲಿ ಹೋಮ ಮಾಡಿದಂತಾಗುವುದಿಲ್ಲವೇ? ದೇವಸ್ಥಾನಗಳ ಮೇಲೆ ದಾಳಿಗೆ ಇದೂ ಕಾರಣಗಳೇ.
ಈ ರಾಜಕಾರಣಿಗಳು ಬ್ರಾಹ್ಮಣರನ್ನು ಬಯ್ದಾಗ, ದೇವರನ್ನು ಲೇವಡಿ ಮಾಡಿದಾಗ, ಜಾತಿ ಪದ್ಧತಿಯನ್ನು ವಿರೋಧಿಸಿದಾಗ ನಕ್ಕು ನಮ್ಮ ಜಾತಿಗೆ ಏನೂ ಹೇಳಿಲ್ಲವಲ್ಲ ಅಷ್ಟು ಸಾಕು ಎಂದು ಕೂರುವ ಜನರಿಂದಲೇ ಇವತ್ತು ನಮ್ಮ ದೇವಸ್ಥಾನಗಳಿಗೆ ಈ ಗತಿ ಬಂದಿರುವುದು. ಬ್ರಾಹ್ಮಣರನ್ನು ಟಾರ್ಗೆಟ್‌ ಮಾಡುತ್ತಿರುವುದು ಅವರಿಂದ ಏನೋ ಕಿತ್ತುಕೊಳ್ಳುವುದಕ್ಕಲ್ಲ.
ಏಕೆಂದರೆ, ಅವರ ಬಳಿ ಜನಿವಾರ ಬಿಟ್ಟು ಅವರ ಮಾಂಸವೇ ಜಾಸ್ತಿ ಸಿಗುವುದಿಲ್ಲ ಇನ್ನು ಬೇರೆಯವರಿಗೆ ಏನು ಕೊಟ್ಟಾರು? ಇಲ್ಲಿ ದೊಡ್ಡ ಟಾರ್ಗೆಟ್‌ ಎಂದರೆ ಅದು ಸನಾತನ ಧರ್ಮದ ವಿನಾಶ. ಅದೇ ಗುರಿ. ಬ್ರಾಹ್ಮಣರು ಮೊದಲ ಮೆಟ್ಟಿಲಷ್ಟೇ. ಆ ಮೆಟ್ಟಿಲು ಹತ್ತಿ ಈಗ ದೇವಸ್ಥಾನ ಧ್ವಂಸವೆಂಬ ಮೆಟ್ಟಿಲು ಹತ್ತಿದ್ದಾರೆ.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya