ಅರ್ನಬ್‌: ವಕೀಲರ ವಾದ ಎಷ್ಟು ಅದ್ಭುತವಾಗಿತ್ತು ಗೊತ್ತಾ?

 

 

ಅರ್ನಬ್‌: ವಕೀಲರ ವಾದ ಎಷ್ಟು ಅದ್ಭುತವಾಗಿತ್ತು ಗೊತ್ತಾ?ಈ ವಾರ ಏನೇನೆಲ್ಲ ಡ್ರಾಮಾಗಳು ನಡೆದು ಹೋಯ್ತಲ್ವಾ? ಮಹಾರಾಷ್ಟ್ರ ಸರ್ಕಾರಕ್ಕೆ ಮೈ ಮೇಲೆ ಬಂದಿತ್ತು ಅನ್ಸುತ್ತೆ. ಅವರ ವಿರುದ್ಧ ಯಾರೇ ಏನೇ ಮಾತಾಡಿದರೂ ಪೊಲೀಸರನ್ನು ಇವರ ಗ್ಯಾಂಗ್‌ ಎಂಬಂತೆ ಛೂ ಬಿಡುತ್ತಿದ್ದರು. ಇದುವರೆಗೂ ಶಿವಸೇನೆ 56 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದೆ. ಅದೂ ಯಾವ್ದಕ್ಕೆ ಗೊತ್ತಾ? ಉದ್ಧವ್‌ ಠಾಕ್ರೆ ಮತ್ತು ಅವರ ಮಗ ಆದಿತ್ಯ ಠಾಕ್ರೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಕ್ಕೆ. ಇದೇ ಓಘದಲ್ಲಿ ಇನ್ನೊಬ್ಬರನ್ನೂ ಟಾರ್ಗೆಟ್‌ ಮಾಡುವುದಕ್ಕೆ ಮುಂದಾದರು. ಅವರೇ ದೇಶದ ಖ್ಯಾತ ಪತ್ರಕರ್ತ, ರಿಪಬ್ಲಿಕ್‌ ಟಿವಿಯ ಮುಖ್ಯಸ್ಥ ಅರ್ನಬ್‌ ಗೋಸ್ವಾಮಿ. ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಾದಿಗಿನಿಂದಲೂ ದೇಶಮಟ್ಟದಲ್ಲಿ ಶಿವಸೇನೆಯ ಮರ್ಯಾದೆಯನ್ನ ದಿನಾ ರಾತ್ರಿ 9ಕ್ಕೆ ಬಿಚ್ಚಿಡುತ್ತಾ ಬಂದಾಗಿನಿಂದ ಶಿವಸೇನೆಗೆ ಇರಸುಮುರಿಸು ಶುರುವಾಯಿತು. ಬಾಯಿ ಮುಚ್ಚು ಎಂದು ಹೇಳುವುದಕ್ಕೆ ಆತ ನಮ್ಮ ಪಕ್ಷದವನಲ್ಲ. ಬಾಯಿ ಮುಚ್ಚಿಸದೇ ಇದ್ದರೆ ಸರ್ಕಾರ ಉಳಿಯಲ್ಲ. ಇಂಥ ಸಂದಿಗ್ಧದಲ್ಲಿ ಸಿಕ್ಕಾಗ ಹೊಳೆದ ಒಂದೇ ಒಂದು ಮಾರ್ಗ ಯಾವಾಗಲೋ ಸತ್ತ ಹಳೇ ಕೇಸಿಗೆ ಮತ್ತೆ ಜೀವ ಕೊಟ್ಟು ಅರ್ನಬ್‌ನನ್ನು ಬಂಧಿಸುವುದು. ಯಾವಾಗಲೋ ಅರ್ನಬ್‌ ಯಾರಿಗೂ ಒಂದಷ್ಟು ಲಕ್ಷ ಹಣ ವಾಪಸ್‌ ಕೊಟ್ಟಿಲ್ಲ ಎಂದು ಉದ್ಯಮಿಯು ಪತ್ರದಲ್ಲಿ ಒಂದು ಮೂರ್ನಾಲ್ಕು ಜನರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದ. ಅದರ ವಿಚಾರಣೆ ಎಲ್ಲವನ್ನೂ ಮುಗಿಸಿ, 2019ರಲ್ಲೇ ಪ್ರಕರಣವೂ ಮುಗಿದಿತ್ತು. ಮತ್ತದೇ ಪ್ರಕರಣವನ್ನು ತೆರೆದು ಅರ್ನಬ್‌ ಮನೆಗೆ ನುಗ್ಗಿ ಅರ್ನಬ್‌ ಬಂಧನವೂ ಆಯ್ತು. ಅರ್ನಬ್‌ ಗೋಸ್ವಾಮಿಯ ಬಿಡುಗಡೆ ಏನೋ ಆಯ್ತು.

ಕ್ಷಮಿಸಿ, ಇಲ್ಲಿಯವರೆಗೆ ಎಲ್ಲರಿಗೂ ಗೊತ್ತಿದ್ದರೂ, ನನ್ನ ಖುಷಿಗೆ ಹೇಳಬೇಕಾಗಿ ಬಂತು. ಆದರೆ, ಕೋರ್ಟ್‌ನಲ್ಲಿ ಏನಾಯ್ತು ಎಂಬುದೇ ತುಂಬ ಇಂಟರೆಸ್ಟಿಂಗ್‌ ಸಂಗತಿ. 2019ರಲ್ಲೇ ಮುಗಿದ ಪ್ರಕರಣದಲ್ಲಿ 2020ರಲ್ಲಿ ಬಂಧನ ಮಾಡ್ತಾರೆ ಎಂಬುದೇ ಸಾಕು ವೈಷಮ್ಯದ ವಾಸನೆ ಕೋರ್ಟ್‌ಗಳಿಗೆ ಸಿಗುವುದಕ್ಕೆ. ಅವರದ್ದೇ ಸರ್ಕಾರದ ಪೊಲೀಸರು ಬಂಧಿಸಿದ ಮೇಲೆ ಕೋರ್ಟ್‌ನಲ್ಲಿ ಏನೇನಾಗುತ್ತೆ ಎಂಬುದನ್ನು ಹೇಳುವುದೇ ಬೇಕಾಗಿಲ್ಲ. ಪೊಲೀಸರು ತಮ್ಮ ಕಸ್ಟಡಿಗೆ ಅವರನ್ನು ಕೊಡಿ ಎಂದೂ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದೇ ದೊಡ್ಡ ವಿಷಯ.
ಅರ್ನಬ್‌ ಪರವಾಗಿ ಇದ್ದದ್ದು ದೇಶದ ಮತ್ತೊಬ್ಬ ರಾಷ್ಟ್ರವಾದಿ ವಕೀಲ ಹರೀಶ್‌ ಸಾಳ್ವೆ. ಅವರ ಜೊತೆಗೆ ಹಿರಿಯ ವಕೀಲ ಪೊಂಡಾ ಹಾಗೂ ಇತರರು. ಬಾಂಬೆ ಹೈಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಅಲ್ಲಿ ನಡೆದ ವಾದವೂ ಹೆಚ್ಚೂಕಡಿಮೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದದ ಹಾಗೇ ಇದ್ದರೂ, ಬಾಂಬೇ ಹೈಕೋರ್ಟ್‌ನಲ್ಲಿ ಜಾಮಿನು ಸಿಗಲೇ ಇಲ್ಲ. ಪಟ್ಟು ಬಿಡಲಿಲ್ಲ ವಕೀಲರು. ಸುಪ್ರೀಂ ಕೋರ್ಟ್‌ಗೆ ಹೋದರು. ಅಲ್ಲಿ ನಡೆದ ವಾದವಿದೆಯಲ್ಲ. ಅದರಿಂದ ಗೊತ್ತಾಗುತ್ತೆ ನ್ಯಾಯವಾದಿಗಳು ತಮ್ಮ ಕಕ್ಷಿದಾರರನ್ನು ಬಚಾವ್‌ ಮಾಡುವುದಕ್ಕೆ ಏನೇನೆಲ್ಲ ನಾಟಕಗಳು, ತಂತ್ರಗಳು, ಪ್ರತಿತಂತ್ರಗಳು, ಅಧ್ಯಯನ ಎಲ್ಲವನ್ನೂ ಮಾಡಿರುತ್ತಾರೆ ಎಂದು.
ಅರ್ನಬ್‌ ಬಂಧನವಾಗಿರುವುದು ಐಪಿಸಿ ಸೆಕ್ಷನ್‌ 306ರ ಅಪರಾಧದಲ್ಲಿ. ಅಂದ್ರೆ, ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ್ದಕ್ಕಾಗಿ. ಇದನ್ನು ಮೊದಲಿಗೆ ಹೊಡೆದು ಹಾಕುವುದಕ್ಕೆ ನಿಂತ ಹರೀಶ್‌ ಸಾಳ್ವೆ, ಆತ್ಮಹತ್ಯೆಗೆ ಪ್ರೇರಣೆ ಎಂದಾಗಲು ವೈಯಕ್ತಿಕ ಸಂಬಂಧ ಬೇಕು. ಇಲ್ಲವಾದರೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನೇರ ಅಪರಾಧ ಎಸಗಿರಬೇಕು. ಸತ್ತವನು ಹಣಕಾಸಿನ ಸಮಸ್ಯೆಯಲ್ಲಿದ್ದ. ಸಾಲ ತೀರಿಸಲಾಗದೇ ಸತ್ತ. ಅದಕ್ಕೂ ಅರ್ನಬ್‌ಗೂ ಸಂಬಂಧವೇನು? ಮಹಾರಾಷ್ಟ್ರದಲ್ಲೂ ಒಬ್ಬ ಬಸ್‌ ಕಂಡಕ್ಟರ್‌, ಸಂಬಳ ಕೊಡದೇ ಇದ್ದಿದ್ದಕ್ಕೆ ಉದ್ಧವ್‌ ಠಾಕ್ರೆ ಹೆಸರನ್ನೇ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ. ಹಾಗಾದರೆ ಪೊಲೀಸರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಯನ್ನು ಬಂಧಿಸುತ್ತಾರೆಯೇ ಎಂದು ಕೇಳಿದರು. ಇಲ್ಲಿಂದ ವಿಕೆಟ್‌ ಬೀಳುವುದಕ್ಕೆ ಶುರುವಾಗಿದ್ದು.
ವಕೀಲರು ಕೋರ್ಟ್‌ನಲ್ಲಿ ವಾದ ಮಾಡುವಾಗ ಕೇಳುವುದಕ್ಕೇ ಚಂದ. ಯಾಕಂದ್ರೆ, ಅವ್ರು ಕೇವಲ ಅವರ ಕಕ್ಷಿದಾರನ ಪರವಾಗಿ ವಾದವನ್ನಷ್ಟೇ ಮಾಡುತ್ತಿರುವುದಿಲ್ಲ, ಜತೆಜತೆಗೆ ನ್ಯಾಯಾಧೀಶರ ಮೂಡ್‌ ಅನ್ನೂ ಗಮನಿಸುತ್ತಾ ಇರುತ್ತಾರೆ. ಸ್ವಲ್ಪ ಉತ್ತೇಜನ ಕೊಟ್ಟರೆ ಏನಾದ್ರೂ ವರ್ಕೌಟ್‌ ಆಗಬಹುದಾ ನೋಡಿ ನಗುತ್ತಾರೆ, ತಮಾಷೆಯನ್ನೂ ಮಾಡುತ್ತಾರೆ. ಜಡ್ಜ್‌ ಕೆಟ್ಟ ಮೂಡ್‌ನಲ್ಲಿದ್ದರೆ ಅವತ್ತಿನ ವಾದವನ್ನೇ ಹೇಗಾದರೂ ಮಾಡಿ ಮುಂದೆ ಹಾಕುವುದಕ್ಕೆ ನೋಡುತ್ತಾರೆ.
ಮೊನ್ನೆ ಸುಪ್ರೀಂಕೋರ್ಟ್‌ನಲ್ಲಿ ಆದದ್ದೂ ಹಿಂಗೇ. ಪುಣ್ಯಕ್ಕೆ ಅವತ್ತು ನ್ಯಾಯಮೂರ್ತಿ ಚಂದ್ರಚೂಡ್‌ ಅವರು ಒಳ್ಳೆಯ ಮೂಡ್‌ನಲ್ಲಿದ್ದರು. ಅಲ್ಲದೇ, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಶುರುವಿನಲ್ಲೇ ಬ್ಯಾಟ್‌ ಬೀಸಿದ್ದರು. ‘ಒಮ್ಮೆ ರಾಜ್ಯ ಸರ್ಕಾರಗಳು ವ್ಯಕ್ತಿಗೆ ಅನ್ಯಾಯ ಮಾಡಿದರೆ, ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ನಾವಿದ್ದೇವೆ ಎಂಬುದನ್ನು ನೆನಪಲ್ಲಿಡಬೇಕು’ ಎಂದರು. ಅಷ್ಟೇ ಅಲ್ಲ, ನಾವೂ ಈಗಲೂ ಮಧ್ಯಪ್ರವೇಶಿಸದೇ ಇದ್ದರೆ, ವಿನಾಶದತ್ತ ನಡೆಯುತ್ತಿರುತ್ತೇವೆಯಷ್ಟೇ. ನಾನು ಯಾವ ಚಾನಲನ್ನೂ ನೋಡಲ್ಲ. ಆದರೆ ಸಾಂವಿಧಾನಿಕ ಕೋರ್ಟ್‌ಗಳು ಎಲ್ಲರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ರಕ್ಷಿಸಬೇಕು ಎಂದೂ ಹೇಳಿದರು. ಇದು ಸಾಕಾಗಿತ್ತು ಹರೀಶ್‌ ಸಾಳ್ವೆ ಅವರಿಗೆ. ಠಕ್ಕನೇ, ‘ನನ್ನ ಮೇಲೆ(ಗೋಸ್ವಾಮಿ/ಕಕ್ಷಿದಾರರ ಪರವಾಗಿ ವಾದಿಸುವಾಗ ವಕೀಲರು ನಾನು ಎಂದೇ ಬಳಸುತ್ತಾರೆ) ದೊಡ್ಡ ಆರೋಪವೇನೂ ಇಲ್ಲ. ಒಬ್ಬ ವ್ಯಕ್ತಿಯನ್ನು ಬಂಧನದಲ್ಲಿರಿಸುವುದು ಅನಿವಾರ್ಯವಿದ್ದಾಗಲೇ ವಿನಾ, ಜೈಲಿಗೆ ಕಳಿಸುವುದೇ ನಿಯಮವಲ್ಲ. ನಾನೇನು ಉಗ್ರಗಾಮಿಯಲ್ಲ. ನನ್ನನ್ನು ನೀವು ಬಹಳ ದೊಡ್ಡ ಅಪರಾಧಿಗಳಿರುವ ತಲೋಜಾ ಜೈಲಿನಲ್ಲಿ ಹಾಕುತ್ತೀರಿ. ಇದನ್ನು ಮತ್ತೊಂದು ಕ್ರಿಮಿನಲ್‌ ಕೇಸ್‌ನಂತೆ ಯಾಕೆ ನೋಡಲ್ಲ? ಗೋಸ್ವಾಮಿಗೆ ಜಾಮೀನು ಕೊಟ್ಟರೆ ಸ್ವರ್ಗ ಬಿದ್ದು ಹೋಗುತ್ತಾ?’ ಎಂದರು.
ಗೋಸ್ವಾಮಿಯ ಪರ ಬೇರೆ ವಕೀಲರು ಸಹ ಒಂದಷ್ಟು ಹಳೇಯ ಕೇಸ್‌ಗಳಲ್ಲಿ ತೀರ್ಪು ಹೇಗಿತ್ತು ಎಂದೆಲ್ಲ ಹೇಳಿದರು. ಜಾಮೀನು ಕೊಡುವುದು ಯಾಕೆ ಅನಿವಾರ್ಯ ಎಂದೂ ಹೇಳಿದರು.
ಇಲ್ಲಿಗೆ ಹೆಚ್ಚೂಕಡಿಮೆ ಒಂದು ಗಂಟೆಯಾಗುತ್ತಾ ಬಂದಿತ್ತು, ಚರ್ಚೆಯು ಒಬ್ಬ ವ್ಯಕ್ತಿಗೆ ಸಿಗಬೇಕಾದ ಸ್ವಾತಂತ್ರ್ಯ ಇತ್ಯಾದಿಯ ಬಗ್ಗೆ ಬಂದು ನಿಂತಿತ್ತು. ಮುಕ್ಕಾಲು ಗಂಟೆ ಬ್ರೇಕ್‌ ಎಂದರು ಜಡ್ಜ್‌. ತಕ್ಷಣ ವಕೀಲರೊಬ್ಬರು ‘ಎಲ್ಲಕ್ಕಿಂತ ಸ್ವಾತಂತ್ರ್ಯ ಇವತ್ತು ಬೇಕಾಗಿರುವುದು ತಮಗೆ ಮೈಲಾರ್ಡ್‌, ಯಾಕಂದ್ರೆ ಇವತ್ತು ತಮ್ಮ ಹುಟ್ಟುಹಬ್ಬ. ನೀವು ಆರಾಮಾಗಿ ಇರಬೇಕಿತ್ತು ಇವತ್ತು’ ಎಂದಾಗ ಎಲ್ಲ ವಕೀಲರೂ ಶುಭಾಶಯ ಹೇಳಿದರು. ಇವೆಲ್ಲ ತೀರ್ಪಿಗೆ ಕೌಂಟ್‌ ಆಗದೇ ಇರಬಹುದು. ಆದರೆ, ಅನಾವಶ್ಯಕ ಎಂದು ಹೇಳುವುದಕ್ಕೆ ಆಗುವುದೇ ಇಲ್ಲ.
ಸಹಜವಾಗಿ ಬ್ರೇಕ್‌ಗೆ ಹೋಗಿ ಮತ್ತೆ ಪೀಠಕ್ಕೆ ಬಂದಾಗ, ನ್ಯಾಯಾಧೀಶರಿಗೆ ಏನೋ ತಲೆಯಲ್ಲಿ ಹೊಳೆದಿರುತ್ತೆ, ಅಥವಾ ಇನ್ಯಾವುದೋ ಆ್ಯಂಗಲ್‌ನಲ್ಲಿ ಇನ್ನೇನನ್ನೋ ಹುಡುಕಿರುತ್ತಾರೆ. ಬೆಳಗ್ಗೆ ಇದ್ದ ಹಾಗೆ ಮತ್ತೆ ಮಧ್ಯಾಹ್ನ ಇರಲ್ಲ. ಬೆಳಗ್ಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಮಾತನಾಡಿದವರು ಮಧ್ಯಾಹ್ನ ಏನಾಗುತ್ತಾರೆ ಎಂದು ನನಗೂ ಕುತೂಹಲವಿತ್ತು. ಆದರೆ ಮತ್ತೊಂದು ಸಿಕ್ಸ್‌ ಬಾರಿಸಿಬಿಟ್ಟರು, ‘ಬಾಂಬೆ ಹೈಕೋರ್ಟ್‌ 50ಕ್ಕೂ ಹೆಚ್ಚಿನ ಪುಟಗಳ ಆರ್ಡರ್‌ ಬರೆದಿದೆ. ಆದರೆ ಪ್ರಕರಣದ ಮೂಲ ಸಂಗತಿಗಳ ಬಗ್ಗೆಯೇ ಹೇಳಿಲ್ಲ’ ಎಂದರು. ಅಬ್ಬಾಹ್‌! ಎನಿಸಿದ್ದು ನನಗಷ್ಟೇ ಅಲ್ಲ, ಬಹುಶಃ ಹರೀಶ್‌ ಸಾಳ್ವೆ ಮತ್ತು ಇತರ ವಕೀಲರಿಗೂ ಅನಿಸಿರಬೇಕು.
ಅಷ್ಟೇ ಅಲ್ಲ, ಮುಂದುವರಿದು, ‘ಎಫ್‌ಐಆರ್‌ ಹೇಳುವುದೆಲ್ಲ ಗಾಸ್ಪೆಲ್‌(ಸತ್ಯ) ಎಂದುಕೊಂಡರೂ, ಹಣ ಕೊಡದೇ ಇರುವುದು ಆತ್ಮಹತ್ಯೆಗೆ ಪ್ರೇರೇಪಣೆ ಹೆಂಗೆ ನೀಡಿದಂತಾಗುತ್ತೆ? ಎಫ್‌ಐಆರ್‌ ಪೆಂಡಿಂಗ್‌ನಲ್ಲಿ ಇರುವಾಗ ಜಾಮೀನು ಕೊಡಲಿಲ್ಲ ಎಂದರೆ ತಪ್ಪಾಗುವುದಿಲ್ಲವೇ ಮಿಸ್ಟರ್‌ ಕಪಿಲ್‌ ಸಿಬಲ್‌?’ ಎಂದು ಕೇಳಿದರು.
ಕೋರ್ಟ್‌ ಹಾಲ್‌ನ ಕೆಲ ದುರಂತಗಳಲ್ಲೊಂದು, ಅಲ್ಲಿ ಒಂದಕ್ಷರವನ್ನೂ ಯೋಚಿಸದೇ ಹೇಳಿಬಿಟ್ಟರೆ, ಎದುರಿಗಿರುವವನು ಅದನ್ನೇ ಅಸ್ತ್ರವನ್ನಾಗಿಸಿಕೊಂಡು ನೆಲಕಚ್ಚಿಸಿಬಿಡುತ್ತಾನೆ. ಇಲ್ಲಿ ಆದದ್ದೂ ಅದೇ. ತಕ್ಷಣ ಉತ್ತರಿಸುವುದಕ್ಕೋ ಅಥವಾ ಇನ್ಯಾವುದಕ್ಕೋ ಕಾಂಗ್ರೆಸ್‌ನ ವಕ್ತಾರ ಹಾಗೂ ಮಹಾರಾಷ್ಟ್ರ ಸರ್ಕಾರದ ಪರ ವಕೀಲ ಕಪಿಲ್‌ ಸಿಬಲ್‌ ಅವರು, ‘ಮೈಲಾರ್ಡ್‌ ಹಾಗೆಲ್ಲ ಎಫ್‌ಐಆರ್‌ ಓದಿ ಬೇಲ್‌ ಕೊಡ್ತೀವಿ ಅಂದ್ರೆ ಆಗಲ್ಲ. ಹಾಗ್‌ ಮಾಡಿದ್ರೆ ಎಲ್ಲ ಕೋರ್ಟೂ ಇದನ್ನೇ ಅನುಸರಿಸುತ್ತೆ. ಎಫ್‌ಐಆರ್‌ ಆಧಾರದ ಮೇಲೆ ಜಾಮೀನು ಕೊಡಬೇಕು ಎಂದು ಕಾನೂನು ಪ್ರಕ್ರಿಯೆಗಳಲ್ಲಿಲ್ಲ’ ಎಂದುಬಿಟ್ಟರು.
ರಾಕೆಟ್‌ ವೇಗದಲ್ಲಿ ಇದನ್ನು ತನ್ನ ಅಸ್ತ್ರವನ್ನಾಗಿ ಮಾಡಿಕೊಂಡ ಹರೀಶ್‌ ಸಾಳ್ವೆ, ‘ಅಲ್ಲ ಮೈಲಾರ್ಡ್‌. ನನ್ನನ್ನು ವರ್ಷಗಳ ನಂತರ ಬಂಧಿಸಿರುವುದೇ ಎಫ್‌ಐಆರ್‌ ಆಧಾರದ ಮೇಲೆ, ಈಗ ಅದನ್ನೇ ಜಾಮೀನು ಕೊಡುವುದಕ್ಕೆ ಪರಿಗಣಿಸಬಾರದಂತೆ. ಇದನ್ನು ಕಪಿಲ್‌ ಸಿಬಲ್‌ ಹೇಳುತ್ತಿದ್ದಾರೆ…’ ಎಂದರು. ಜಸ್ಟೀಸ್‌ ಚಂದ್ರಚೂಡ್‌ ಮುಖದಲ್ಲಿ ಸಣ್ಣದೊಂದು ನಗು ಕಂಡಿತು. ಇದು ಹರೀಶ್‌ ಸಾಳ್ವೆ ಅವರು ಕುಹಕವಾಡಿದ್ದಕ್ಕೋ ಅಥವಾ ಕಪಿಲ್‌ ಸಿಬಲ್‌ ಎಡವಿಬಿಟ್ರಲ್ಲಾ ಎನ್ನುವ ಸಂಕೇತವೋ ಗೊತ್ತಿಲ್ಲ. ಆದರೆ ಗೊಸ್ವಾಮಿ ಪರ ವಕೀಲರಂತೂ ಚೆನ್ನಾಗಿ ವಾದಗಳನ್ನು ಚಚ್ಚುವುದಕ್ಕೆ ಶುರು ಮಾಡಿದರು.
ಕಪಿಲ್‌ ಸಿಬಲ್‌ ಅವರು ಒಂದು ಪ್ರಕರಣವನ್ನು ಉಲ್ಲೇಖಿಸಿ, ನೋಡಿ, ಇಲ್ಲಿ ಜಾಮೀನು ಕೊಟ್ಟಿಲ್ಲ. ಹಾಗಾಗಿ ತಾವೂ ಕೊಡಬಾರದು ಎಂದು ಹೇಳಿದರು. ಇಲ್ಲಿ ವಾದಗಳನ್ನು ನೋಡುತ್ತಿದ್ದ ನನಗೂ ಹೌದಲ್ಲಾ ಎನಿಸಿತು. ಆದರೆ, ಸಾಳ್ವೆ ಕಡೆಯವರು ಬಿಟ್ಟಿಲ್ಲ. ಅವರ ಟೈಂ ಬಂದಾಗ, ‘ಮೈಲಾರ್ಡ್‌, ಕಪಿಲ್‌ ಸಿಬಲ್‌ ಹೇಳಿದ್ದು ಸರಿಯೇ, ಆ ಕೇಸ್‌ನಲ್ಲಿ ಹಾಗೇ ತೀರ್ಪು ನೀಡಿದ್ದರು. ಆದರೆ, ಅದನ್ನು ಮೇಲಿನ ನ್ಯಾಯಾಲಯ ತಳ್ಳಿ ಹಾಕಿದೆ. ಹಾಗಾಗಿ ಬೇಲ್‌ ಕೊಡಬಾರದು ಎಂಬುದು ಕಡ್ಡಾಯ ಅಲ್ಲ.’ ಎಂದುಬಿಟ್ಟರು.
ಇದರ ಮೇಲೆ, ಜಸ್ಟೀಸ್‌ ಚಂದ್ರಚೂಡ್‌ ಸಹ, ಬಾಂಬೆ ಹೈಕೋರ್ಟ್‌ ಹೀಗೆ ಮಾಡಬಾರದಿತ್ತು ಎಂಬ ಅರ್ಥದಲ್ಲಿ ಒಂದಷ್ಟು ಮಾತಾಡಿದರು. ನಂತರ, ಇರಿ, ಎರಡು ನಿಮಿಷ ನಾವು ಚರ್ಚೆ ಮಾಡಿ ವಾಪಸ್‌ ಬರ್ತೇವೆ ಎಂದ ನ್ಯಾಯಮೂರ್ತಿಗಳು. ಬಂದವರೇ, ಮೊದಲು ಹೇಳಿದ್ದು ‘ಬಾಂಬೆ ಹೈಕೋರ್ಟ್‌ ತಪ್ಪು ಮಾಡಿದೆ. ಹಾಗೆ ಮಾಡಬಾರದಿತ್ತು. ನಾವು ಅರ್ನಬ್‌ ಮತ್ತು ಈ ಪ್ರಕರಣದ ಸಂಬಂಧ ಬಂಧನವಾಗಿರುವ ಒಟ್ಟು ಮೂರು ಆರೋಪಿಗಳಿಗೆ ಜಾಮೀನು ಕೊಡುತ್ತಿದ್ದೇವೆ’ ಎಂದು ಬಿಟ್ಟರು.
ವಕೀಲರ ಕೆಲಸ ಅಷ್ಟು ಸುಲಭ ಅಲ್ಲ ಎಂದು ಅನಿಸಿದ್ದು ಆಗಲೇ. ಮ್ಯಾಜಿಸ್ಪ್ರೇಟ್‌ ಕೋರ್ಟ್‌ನಿಂದ ಜಾಮೀನಿನ ಆಸೆ ಇಲ್ಲ. ಬಾಂಬೆ ಹೈಕೋರ್ಟ್‌ ಕೊಟ್ಟಿಲ್ಲ. ವಾದ ಮಾಡುವುದು ಸ್ವಲ್ಪ ಎಡವಟ್ಟಾದರೂ ಸುಪ್ರೀಂ ಕೋರ್ಟ್‌ನಲ್ಲೂ ಜಾಮೀನಿಲ್ಲ.
ಇದಕ್ಕೇ ಅರ್ನಬ್‌ ಗೋಸ್ವಾಮಿ ಗದ್ಗದಿತರಾಗಿ ಇಂಥ ವಾದ ಮಾಡುವುದಕ್ಕೆ ಒಂದು ರುಪಾಯಿ ಸಹ ತೆಗೆದುಕೊಳ್ಳದೇ ಇರುವ ಹರೀಶ್‌ ಸಾಳ್ವೆಯ ಸಹಾಯ ಎಂದೆಂದೂ ಮರೆಯುವುದಕ್ಕೆ ಆಗಲ್ಲ ಎಂದಿದ್ದು. ವಕೀಲರ ವೃತ್ತಿ ಎಷ್ಟು ಕಷ್ಟ ಅಲ್ವಾ? ಎಂದುಕೊಂಡೆ.

 

Leave a Reply

Copyright©2021 Chiranjeevi Bhat All Rights Reserved.
Powered by Dhyeya