ಮೊದಲೇ ಹೇಳಿಬಿಡ್ತೇನೆ. ನೀವೇನಾದರೂ ಅಲೊಪಥಿಯ ಫ್ಯಾನ್ ಆಗಿದ್ದರೆ, ಅದನ್ನು ಬಿಟ್ಟು ಬೇರೆ ಯಾವುದನ್ನು ಬಳಸಲ್ಲ ಎಂದು ನಿರ್ಧರಿಸಿದ್ದರೆ ಅಥವಾ ಆಯುರ್ವೇದವನ್ನು ವಿರೋಧಿಸುವುದಕ್ಕಾಗಿ ವಿರೋಧಿಸುತ್ತಿದ್ದರೆ, ಅದೇನೋ ಶುಂಠಿ ಕಷಾಯ ಕುಡಿದೇ ನಮ್ಮಜ್ಜಿ ಸತ್ತೋದ್ರು ಅನ್ನೋ ದ್ವೇಷದಲ್ಲಿದ್ದರೆ ಖಂಡಿತ ಲೇಖನ ಓದೋದನ್ನು ನಿಲ್ಲಿಸಿಬಿಡಿ. ಸುಮ್ಮನೆ ಯಾಕ್ ಬಿಪಿ ಟ್ಯಾಬ್ಲೆಟ್ಗೆ ಅನ್ಯತಾ ಹಣ ಹಾಕ್ತೀರ ಅನ್ನೋ ಕಾಳಜಿ ಅಷ್ಟೇ.
ಊರಲ್ಲೆಲ್ಲ ಕೊರೋನಾ ಹಬ್ಬಿರುವಾಗ, ಕೊರೋನಾಗೆ ಏನು ಔಷಧಿ ಕೊಡಬೇಕು ಎಂದೇ ಗೊತ್ತಾಗದೇ ಸಿಕ್ಕ ಸಿಕ್ಕ ಯಾವುದೋ ಔಷಧಿಗಳನ್ನು ಕೊಡುತ್ತಾ ಇರುವಾಗ, ಆಯುರ್ವೇದದ ಒಬ್ಬ ವೈದ್ಯ, ಇಲ್ಲೊಂದು ಔಷಧಿ ಇದೆ ಎಂದರು. ಸಾರ್… ಒಂದು ರುಪಾಯಿ ಕೊಡೋದ್ ಬೇಡ. ಸರ್ಕಾರವೇ ಅದನ್ನು ಉತ್ಪಾದಿಸಿ, ಮಾರಾಟ ಮಾಡಿಕೊಳ್ಳಿ. ಅಷ್ಟೇ ಅಲ್ಲ, ನಾನು ಕಂಡುಹಿಡಿದಿರುವ ಔಷಧಿಯ ಫಾರ್ಮುಲಾದ ಪೇಟೆಂಟನ್ನೂ ಸರ್ಕಾರಕ್ಕೇ ಕೊಡುತ್ತೇನೆ ಅಥವಾ ಓಪನ್ ಆಗಿ ಇಡುತ್ತೇನೆ. ಆಗ ದೇಶಾದ್ಯಂತ ಇದನ್ನು ಎಲ್ಲರೂ ಚ್ಯವನಪ್ರಾಶದಂತೆ ವಿವಿಧ ಕಂಪನಿಗಳು ಉತ್ಪಾದಿಸಲಿ ಎಂದು ಹೇಳಿದರು. ಕೊನೆದಾಗಿ ನಾನೇ ಉಚಿತವಾಗೂ ಕೊಡ್ತೀನಿ ಅಂದರು.
ಹೇಳಿದ್ದಷ್ಟೇ ಅಲ್ಲ, ಒಂದು ಪ್ರಯೋಗವು ಅಧಿಕೃತವಾಗಿ ಲಸಿಕೆ ಎನಿಸಿಕೊಳ್ಳಲು ಏನು ಮಾಡಬೇಕೋ ಅವೆಲ್ಲ ನೀತಿ-ನಿಮಯಗಳನ್ನೂ ಅನುಸರಿಸುತ್ತಿದ್ದಾರೆ. ಆದರೂ ಸರ್ಕಾರ ಆದಿಯಾಗಿ, ಯಾವುದೇ ಸಂಸ್ಥೆಗಳು ವಿಳಂಬ ನೀತಿಯನ್ನು ಅನುಸರಿಸುತ್ತಿರುವುದರಿಂದಲೇ ಅಧಿಕಾರಿಗಳಿಂದ ಹಿಡಿದು ಎಲ್ಲರ ಮೇಲೂ ಜನರು ಆಕ್ರೋಶಗೊಂಡಿರುವುದು.
ನಾವಿಲ್ಲಿ ಒಬ್ಬರ ಔಷಧಿಯ ಬಗ್ಗೆ ಮಾತಾಡುವುದರ ಬದಲು, ಯಾಕೆ ಆಯುರ್ವೇದವನ್ನು ಕಡೆಗಣಿಸುತ್ತಿದ್ದಾರೆ ಮತ್ತೆ ಅಲೊಪಥಿಗೊಂದು ನ್ಯಾಯ, ಆಯುರ್ವೇದಕ್ಕೊಂದು ನ್ಯಾಯ ಯಾಕೆ ಎಂದು ಪ್ರಶ್ನಿಸೋಣ. ಅಲ್ಲದೇ, ಅಲೋಪಥಿ ಔಷಧಿಗೆ ಪರವಾನಗಿ ಸಿಗುವಷ್ಟು ಬೇಗ ಆಯುರ್ವೇದಕ್ಕೆ ಯಾಕಿಲ್ಲ ಎಂಬುದನ್ನೂ ನೋಡೋಣ.
ಮೊದಲಿಗೆ ಆಯುರ್ವೇದದಲ್ಲಿ ಕೋವಿಡ್ಗೆ ಔಷಧ ಇದೆ ಎಂದು ಮೊದಲು ಹೇಳಿದವರು ಡಾ. ಗಿರಿಧರ ಕಜೆ. ಹಾಗಾಗಿ ಅವರ ಔಷಧದಿಂದ ಚರ್ಚೆ ಶುರುಮಾಡೋಣ. ಆದರೆ ನಾನೆಲ್ಲೂ ಅವರೇ ಧನ್ವಂತ್ರಿ ಋುಷಿಗಳು ಎಂದು ಸಾಧಿಸುತ್ತಿಲ್ಲ. ಅದು ನನ್ನ ಉದ್ದೇಶವೂ ಅಲ್ಲ.
ಇವರು ಸಹ ಎಲ್ಲರಂತೆಯೇ ತಾವೂ ಆಯುಷ್ ಮಂತ್ರಾಲಯ ತಿಳಿಸಿರುವ ಹಾಗೇ ನಿಯಮಗಳನ್ನು ಅನುಸರಿಸಿದ್ದರು. ಇಂತಿಪ್ಪ ಇವರಿಗೆ ಮೊದಲ ಹಂತದಲ್ಲೇ ರೋಗಲಕ್ಷಣವುಳ್ಳ 10 ಕೋವಿಡ್ ರೋಗಿಗಳನ್ನು ನೀಡಲಾಗಿತ್ತು. ಇವರಿಗೆ ಗುಣವಾಗಿದೆ ಎಂದು ಎಥಿಕಲ್ ಕಮಿಟಿಯ ಜಯಶ್ರೀ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರೇ ಮಾಧ್ಯಮದ ಮುಂದೆ ಬಂದು ಹೇಳಿದ್ದರು. ಇನ್ನೂ ವೈದ್ಯರು ಮಾತಾಡೇ ಇಲ್ಲ. ಆದರೆ ಇದಾದ ಮೇಲೇ ನೋಡಿ, ಅಲೋಪಥಿಯ ಅಳು ಶುರುವಾಗಿದ್ದು. ಏನು ಹತ್ತು ಜನರು ಗುಣ ಆಗಿಬಿಟ್ಟರೆ ಆಯುರ್ವೇದ ಗ್ರೇಟಾ? ಇಷ್ಟಕ್ಕೆಲ್ಲ ಆಯುರ್ವೇದ ಚಿಕಿತ್ಸೆಯನ್ನೇ ಕೊಡಕ್ಕಾಗುತ್ತೆ ಎಂದು ಹೇಳಿದವರಾರು? ಇದೆಲ್ಲ ವೈಜ್ಞಾನಿಕವೇ ಅಲ್ಲ. ಇದನ್ನು ಯಾರು ಸರ್ಟಿಫೈ ಮಾಡ್ತಾರೆ? ಗಿರಿಧರ ಕಜೆನೇ ಸುಳ್ಳು, ಅವ್ರು ಹೇಳ್ತಾ ಇರೋದೆಲ್ಲ ಸುಳ್ಳು. ಇವರು ಗುಣ ಮಾಡ್ತಾರೆ ಅಂದ್ರೆ, ನಾವೆಲ್ಲ ಯಾಕ್ ಬೇಕು. ನೀವ್ ನೀವೇ ಮಾಡ್ಕೊಳ್ಳಿ. ಹೀಗೆ ಸಾಲು ಸಾಲು ಬರ್ನಾಲ್ ಮಾತುಗಳು ಕೇಳಿಬಂತು. ವೈದ್ಯರಿಂದ ಹಿಡಿದು ವೈದ್ಯರಲ್ಲದ ಮಂದಿಯೆಲ್ಲ ಫೇಸ್ಬುಕ್ನಲ್ಲಿ ವಾಟ್ಸಾಪ್ ಗ್ರೂಪ್ಗಳಲ್ಲಿ ಆಯುರ್ವೇದ ವಿರೋಧಿಸುವುದೇನು, ಗಿರಿಧರ ಕಜೆಯನ್ನು ವಿರೋಧಿಸುವುದೇನು! ಆದರೆ ಇಂಥವರು ಒಬ್ಬರೂ ಅಲೊಪಥಿಯ ಸೋಲುಗಳನ್ನು ಮಾತೇ ಆಡ್ತಿಲ್ಲ ಯಾಕೆ ಎನ್ನುವುದೇ ಪ್ರಶ್ನೆ.
ಒಂದೊಂದಾಗೇ ತೆಗೆದುಕೊಳ್ಳೋಣ.
ಕೋವಿಡ್ ಬಂದ ಮೊದಮೊದಲಿಗೆ ಹೈಡ್ರಾಕ್ಸಿಕ್ಲೊರೊಕ್ವಿನ್ ಸಲ್ಪೇಟ್ ಚಿಕಿತ್ಸೆಯನ್ನು ಸರ್ಕಾರವು ಸ್ಟ್ಯಾಂಡರ್ಡ್ ಚಿಕಿತ್ಸೆಯನ್ನಾಗಿ ಘೋಷಿಸಿತು. ಅಂದರೆ, ದೇಶದಲ್ಲಿ ಕೋವಿಡ್ ಕಾರಣಕ್ಕಾಗಿ ದಾಖಲಾಗುವ ಎಲ್ಲ ರೋಗಿಗಳಿಗೂ ಈ ಮೇಲಿನ ಮಾತ್ರೆಯನ್ನೇ ಕೊಡಬೇಕು ಎಂದು ಆದೇಶ ಮಾಡಿತು. ಆದರೆ ಇದು ಕೋವಿಡ್ ನಿವಾರಕವೇ? ಇಲ್ಲ. ಇದೊಂದು ಮಲೇರಿಯಾ ಡ್ರಗ್. ಇದು ಕೋವಿಡ್ ಗುಣಮಾಡುತ್ತದೆ ಎಂದು ಹೇಳುವುದಕ್ಕೆ ಎಷ್ಟು ಜನರ ಮೇಲೆ ಪರೀಕ್ಷೆ ಮಾಡಲಾಯಿತು? ಊಹೂಂ. ಗೊತ್ತಿಲ್ಲ. ಆದರೆ ಒಂದಂತೂ ಗೊತ್ತು, ಇದರ ಬಗ್ಗೆ ಪ್ರತಿಷ್ಠಿತ ಲ್ಯಾನ್ಸೆಟ್ ಎಂಬ ಮೆಡಿಕಲ್ ಜರ್ನಲ್, ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಸೇರಿದಂತೆ ಹಲವಾರು ಜರ್ನಲ್ಗಳಲ್ಲಿ, ಇಂಥ ಮಾತ್ರೆಯಿಂದ ಹೃದಯಾಘಾತದ ಸಮಸ್ಯೆಯು ತೀವ್ರವಾಗಿದೆ ಎಂಬ ಲೇಖನಗಳು ಪ್ರಕಟವಾಯಿತು. ಅಷ್ಟೇ ಅಲ್ಲ, ಇದರಿಂದ ಸಾವುಗಳೂ ಸಂಭವಿಸಿತು.
ಇವೆಲ್ಲದರ ನಂತರ ಎಚ್ಚೆತ್ತು, ಯಾವುದೇ ದೇಶದವರು ಹೈಡ್ರಾಕ್ಸಿಕ್ಲೊರೊಕ್ವಿನ್ ಮಾತ್ರೆ ಬಳಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಅಧಿಕೃತವಾಗಿ ಹೇಳಿತು. ಆಮೇಲೆ ಈಗ ನಮ್ಮ ದೇಶದಲ್ಲೂ ನಿಲ್ಲಿಸಲಾಗಿದೆ.
ಇದೇ ಆಯುರ್ವೇದದಿಂದ ಆ ಹತ್ತು ಜನರಲ್ಲಿ ಒಬ್ಬ ಸತ್ತಿದ್ದರೂ, ಆಯುರ್ವೇದವನ್ನು ದೇಶದಿಂದಲೇ ಓಡಿಸುತ್ತಿದ್ದರು ಅಲ್ಲವೇ? ಈಗ ಅಲೊಪಥಿಯ ಬಗ್ಗೆ ಯಾಕೆ ಚಕಾರ ಎತ್ತಲ್ಲ? ಯಾಕೆಂದರೆ, ಅದು ಪ್ರಯೋಗ. ಪ್ರಯೋಗದಲ್ಲಿ ಒಂದಷ್ಟು ಜನರು ಸಾಯ್ತಾರಪ್ಪ, ಏನ್ ಮಾಡಕ್ ಆಗುತ್ತೆ ಎನ್ನುವವರೂ ಇದ್ದಾರೆ. ಆದರೂ ಮನೆಯಲ್ಲಿ ಕಷಾಯ ಬೇಕಾದ್ರೂ ಮಾಡಿ ಕುಡಿಯುತ್ತೇನೆ ಆದರೆ ಆಯುರ್ವೇದ ಔಷಧ ಪ್ರಯೋಗ ಮಾತ್ರ ಆಗಬಾರದು ಎಂದು ಅಧಿಕಾರಿಗಳು ಕುಳಿತಿದ್ದಾರೆ.
ಇಲ್ಲಿ ಡಾ. ಕಜೆಯವರು ಈಗ ಕೊಟ್ಟಿರೋ ಹತ್ತು ಜನರಿಗೆ ಗುಣ ಆಗಿದೆ. ಇದನ್ನೇ ಕೋವಿಡ್ಗೆ ರಾಮಬಾಣ ಅಂತ ಘೋಷಿಸಿ ಅಂತೇನೂ ಹೇಳ್ತಿಲ್ವಲ್ಲ? ಹೆಚ್ಚಿನ ಟ್ರಯಲ್ಗೆ ಅವಕಾಶ ಕೊಡಿ ಅಂತನೇ ಕೇಳ್ತಿರೋದು. ಇನ್ನೂ ಕಡಿಮೆಯೆಂದರೂ ಸಾವಿರ ಜನರಿಗೆ ಟೆಸ್ಟ್ ಮಾಡುವುದಕ್ಕೆ ಅವಕಾಶ ಕೊಡಿ ಎಂದು ಕೇಳಿದ್ದಾರೆ. ಆದರೆ ಕೊಡುವವರೇ ನಾಪತ್ತೆ. ಕೇವಲ ದಿನ ದೂಡುತ್ತಿದ್ದಾರೆ ಬಿಟ್ಟರೆ, ಬೇರೇನೂ ಮಾಡುತ್ತಿಲ್ಲ.
ಯಾವುದೂ ಬೇಡ ಸಾರ್, ಅಲೊಪಥಿಗೆ ಆಯುರ್ವೇದದ ಮುಂದೆ ಮಂಡಿಯೂರಿದಂತೆ ಆಗುತ್ತದೆ ಅಂತಾದರೆ ಇದನ್ನು ಕೋವಿಡ್ಗೆ ಇದು ಔಷಧಿಯೆಂಬುದನ್ನು ಪರಿಗಣಿಸದೇ ಮಾಮೂಲಿ ಜನರಿಗೆ ಕೇವಲ ಇಮ್ಯೂನ್ ಬೂಸ್ಟರ್(ರೋಗ ನಿರೋಧಕ) ಆಗಿಯೇ ಇದನ್ನು ಕೊಡಿ? ಅದಕ್ಕೇನೂ ಟ್ರಯಲ್ ಅಗತ್ಯ ಇಲ್ಲವಲ್ಲ? ಕೋವಿಡ್ ಬಂದಿರುವ ವ್ಯಕ್ತಿಯ ಸಂಬಂಧಿಕರಿಗೆ ಕೊಡಿ? ಯಾಕೆ ಕೊಡ್ತಿಲ್ಲ ಗೊತ್ತೇ? ಅಲೊಪಥಿಯವರು ಆ ಪಾಟಿ ರೇಟ್ ಹಾಳು ಮೂಳು ಮಾರಾಟ ಮಾಡುತ್ತಿರುವಾಗ, ಇಲ್ಯಾರೋ ಕಜೆಯಂಥ ಆಯುರ್ವೇದದವರು ಬಂದು ಉಚಿತವಾಗಿ ಔಷಧ ಕೊಡ್ತೀನಿ ಎಂದರೆ, ಸಹಜವಾಗಿಯೇ ಮೈ ಉರಿಯಲ್ವಾ?
ಆಯುರ್ವೇದಕ್ಕೆ ಎದುರಾಗಿರುವ ಸಮಸ್ಯೆಯೇ ಇಂಥದ್ದು. ಈಗೆಲ್ಲ ಪ್ಲಾಸ್ಮಾ ಚಿಕಿತ್ಸೆಯ ಹವಾ ಇದೆ. ಅಂದರೆ ಗುಣಮುಖವಾಗಿರುವವನ ರಕ್ತದಿಂದ ಪ್ಲಾಸ್ಮಾ ಪಡೆದು, ಅದನ್ನು ರೋಗಿಯ ರಕ್ತಕ್ಕೆ ಕೊಟ್ಟು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವುದು. ಇದು ವಿದೇಶದಲ್ಲಿ ಯಶಸ್ವಿಯಾಗಿದೆ ಎಂದು ನಮ್ಮವರೂ ಪರವಾನಗಿ ಕೊಟ್ಟರು. ಒಂದೊಂದು ದೇಶದ ಆಹಾರ ಪದ್ಧತಿ, ರೋಗ ನಿರೋಧಕ ಶಕ್ತಿ ಒಂದೊಂದು ತರ ಇರುತ್ತದೆ. ಇದನ್ನು ಭಾರತಕ್ಕೆ ತಂದರು. ಸರಿ, ಆದರೆ, ಆದದ್ದೇನು? ಏನೂ ಇಲ್ಲ. ಏಮ್ಸ್ ಮೊನ್ನೆಯಷ್ಟೇ ಇದರ ಬಗ್ಗೆ ಸಮೀಕ್ಷೆ ವರದಿ ಬಿಡುಗಡೆ ಮಾಡಿದ್ದು, ವರದಿಯಲ್ಲಿ ಪ್ಲಾಸ್ಮಾ ಚಿಕಿತ್ಸೆಯು ಕೋವಿಡ್ನಿಂದ ಮೃತಪಡುವ ಸಂಖ್ಯೆಯೇನೂ ಕಡಿಮೆಯಾಗಿಲ್ಲ ಎಂದು ಹೇಳಿದೆ.
ಪ್ರಯೋಜನ ಇಲ್ಲ ಅಂತಾದರೆ, ಮತ್ತೆ ಯಾಕ್ ಅನುಮತಿ ಕೊಟ್ರಿ? ಪ್ರಯೋಗ ಸಾರ್, ಪ್ರಯೋಗ. ಆಯುರ್ವೇದಲ್ಲಿ ಇಂಥದ್ದೇನಾದರೂ ಮಾಡೋಣ, ಮಾತ್ರೆಯಲ್ಲೇ ವಾಸಿ ಮಾಡಬಹುದಂತೆ ಎಂದರೆ, ನಾವೆಲ್ಲ ಅವೈಜ್ಞಾನಿಕ, ಬುದ್ಧುಗಳು, ದಡ್ಡಶಿಖಾಮಣಿಗಳಾಗುತ್ತೇವೆ.
ಆಯ್ತು, ಈಗ ಕೋವಿಡ್ ಮಾರಿ ವಕ್ಕರಿಸಿ, ಹೆಚ್ಚೂ ಕಡಿಮೆ 8 ತಿಂಗಳಾಯಿತು. ರೋಗಿಗಳೂ ಗುಣ ಆಗುತ್ತಿದ್ದಾರೆ. ಸಾಯುತ್ತಲೂ ಇದ್ದಾರೆ. ಹಾಗಾದರೆ, ಇಂಥ ಔಷಧದಿಂದಲೇ ರೋಗಿಗಳು ಗುಣ ಆಗುತ್ತಿದ್ದಾರೆ ಎಂದು ಸರ್ಕಾರ ಆಗಲಿ, ವಿದೇಶದ ಯಾವುದೇ ಸರ್ಕಾರವಾಗಲಿ ಯಾಕೆ ಗಟ್ಟಿಯಾಗಿ ಹೇಳುತ್ತಿಲ್ಲ? ಯಾಕೆಂದರೆ, ಅಲೊಪಥಿ ವೈದ್ಯರಿಗೇ ಗೊತ್ತು ಇದು ಸಂಪೂರ್ಣವಾಗಿ ಗುಣಪಡಿಸುವುದಿಲ್ಲ ಅಂತ. ಹಾಗಾದರೆ, ಹೈಡ್ರಾಕ್ಸಿಕ್ಲೊರೊಕ್ವಿನ್ನಿಂದ ಸತ್ತಿದ್ದನ್ನು ಅಲೊಪಥಿ ಇದು ತನ್ನ ಸೋಲು ಎಂದು ಒಪ್ಪಿಕೊಳ್ಳುತ್ತಾ? ಇಲ್ಲ. ಇವರು ಇವರ ಪ್ರಯೋಗವನ್ನು ಸೋಲು ಎಂದೂ ಒಪ್ಪಿಕೊಳ್ಳುವುದಿಲ್ಲ, ಪ್ರಯೋಗ ಮಾಡುವುದನ್ನೂ ಬಿಡುವುದಿಲ್ಲ. ಇವ್ರದ್ದೇ ಹೆಗ್ಗಣ ಕೊಳೆತು ನಾರುತ್ತಿರುವಾಗ, ಪಕ್ಕದ ಆಯುರ್ವೇದ ಉಪಯೋಗವಿಲ್ಲ ಎಂದು ಅದನ್ನು ತಡೆಯುವುದಿದೆಯಲ್ಲ. ಇದೇ ಮೆಡಿಕಲ್ ಮಾಫಿಯಾ.
ಕರ್ನಾಟಕದ ಒಂದು ಉದಾಹರಣೆ ಕೊಡುತ್ತೇನೆ ಕೇಳಿ. ಇಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ಎಂದು ಮಾಡುತ್ತಾರೆ, ಆದರೆ, ಅಲ್ಲಿ ಇರುವುದೆಲ್ಲ ಅಲೊಪಥಿಯವರೇ. ಒಬ್ಬನೇ ಒಬ್ಬ ಆಯುರ್ವೇದ ತಜ್ಞನಿಲ್ಲ ಅಥವಾ ಹೊಮಿಯೊಪಥಿಯವನಿಲ್ಲ. ಅಲ್ಲಿಗೆ ಇವರು ಅಲೊಪಥಿ ಬಿಟ್ಟು ಮತ್ತೊಂದನ್ನು ಮೂಲಭೂತವಾಗಿಯೇ ಒಪ್ಪಲ್ಲ ಎಂದಾಯಿತು.
ಸರಿ, ಗಿರಿಧರ ಕಜೆಯವರೋ ಇನ್ಯಾರದ್ದೋ, ಆಯುರ್ವೇದ ಸರಿ ಇಲ್ಲ ಎಂದು ಹೇಳುವ ಮಂದಿ, ಅವರನ್ನು ಯಾರಾರಯರಿಗೋ ಹೋಲಿಸುತ್ತಾ ಫೇಸ್ಬುಕ್ ಮತ್ತು ವಾಟ್ಸಾಪ್ನಲ್ಲಿ ಕಾಲಹರಣ ಮಾಡುತ್ತಿರುವ ಖಾಲಿಪೋಲಿಗಳು, ಒಮ್ಮೆಯೂ ಆಯುರ್ವೇದದ ಈ ಔಷಧ ಸರ್ವತಾ ಸರಿ ಇಲ್ಲಪ್ಪಾ ಎಂದು ಸಾಬೀತು ಮಾಡಿದ್ದಾರಾ? ಊಹೂಂ. ಇನ್ನೊಂದು ವಿಚಿತ್ರ ನೋಡಿ, ಇನ್ನೂ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಕಾಣದ ಅಲೊಪಥಿಯ ಪ್ಲಾಸ್ಮಾ ಚಿಕಿತ್ಸೆ, ಎಚ್ಸಿಕ್ಯುನಂಥವುಗಳಿಂದ ಅಕಸ್ಮಾತ್, ಅಲಕ್ಬುಲಕ್ನಲ್ಲಿ ಒಬ್ಬ ಗುಣಮುಖನಾದರೂ ಪ್ರೆಸ್ ಮೀಟ್ ಕರೆದೇ ಬಿಡುವ ಫ್ರೇಮ್ಲೆಸ್ ಕನ್ನಡಕದ ಮಂದಿ, ಆಯುರ್ವೇದವು 10 ಜನರನ್ನು ಗುಣಮಾಡಿದೆ ಎಂದರೆ ಮಾತ್ರ ಉರಿದುರಿದು ಬೀಳುತ್ತಿದೆ. ಎಥಿಕಲ್ ಕಮಿಟಿ ಮತ್ತು ರಾಜಕಾರಣಿಗಳು ಇಂಥದ್ದನ್ನು ಘೋಷಿಸಿದ ಮೇಲೇ ಆಯುರ್ವೇದದ ವೈದ್ಯರು ಬಾಯಿ ಬಿಟ್ಟರೂ, ನೋಟಿಸ್ನ ತಪರಾಕಿ ನೀಡುತ್ತಿದೆ.
ಇನ್ನೊಂದು ವಿಚಾರ ಏನೆಂದರೆ, ಗಿರಿಧರ ಕಜೆಯವರು ಕೆಲ ಸಂದರ್ಶನದಲ್ಲಿ, ನಾನು ಹೆಚ್ಚೂ ಕಡಿಮೆ 2 ಕೋಟಿ ಮಾತ್ರೆಗಳನ್ನು ಬರೆದುಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ಇದನ್ನು ವರ್ಷಗಳ ಹಿಂದೇ ತಯಾರಿಸಿದ್ದಾರೆ ಎಂದರೆ, ಇದು ಕೊರೋನಾಗೆ ಕಂಡುಹಿಡಿದಿರುವ ಔಷಧ ಎಂದು ಹೇಗೆ ಹೇಳುತ್ತೀರ ಎಂದು ಕೇಳುತ್ತಿದ್ದಾರೆ. ಈ ಅನುಮಾನ ನಂಗೂ ಬಂದಿದೆ. ಇದನ್ನು ಇನ್ನೊಂದು ರೀತಿಯಲ್ಲಿ ಬಗೆಹರಿಸಿಕೊಳ್ಳೋಣ. ಈಗ ಇವರೆಲ್ಲ ಕೊರೋನಾ ವಾಸಿ ಮಾಡುತ್ತಿದೆ ಎಂದು ಕೊಡುತ್ತಿರುವ ಔಷಧಗಳು ಯಾವುದೂ ಕೊರೋನಾಕ್ಕಾಗಿ ಇರುವುದಲ್ಲ. ಬದಲಿಗೆ ಮಲೆರಿಯಾ ಬಂದಾಗ, ಜ್ವರ ಬಂದಾಗ, ಉಸಿರಾಟದ ಸಮಸ್ಯೆಯಿದ್ದಾಗ ಕೊಡುವ ಔಷಧಗಳು. ಅದನ್ನು ಇವರು ಕೊರೋನಾಕ್ಕೆ ಕೊಡಬಹುದಾದರೆ, ಹಳೆಯ ಔಷಧವಾದರೂ ಆಯುರ್ವೇದವನ್ನು ಕೊಡುವುದಕ್ಕೇನು?
ಹೌದು ಸಾರ್. ಆದರೆ, ಡಾ. ಕಜೆ ಅಥವಾ ಇನ್ಯಾವುದೇ ಆಯುರ್ವೇದದ ವೈದ್ಯರು ಸರ್ಕಾರದ ಬಳಿ ಅನುಮತಿ ಕೇಳುವುದೇಕೆ ಎನ್ನುವವರೂ ಬಹಳ ಬುದ್ಧಿವಂತಿಕೆ ತೋರಿಸಿದ್ದಾರೆ. ಯಾಕೆಂದರೆ, ನಮ್ಮಲ್ಲಿ ರಾಜಕಾರಣಿ ಹೇಳದೇ, ಮನೆಗೆ ಕಸ ತೆಗೆದುಕೊಂಡು ಹೋಗುವವನೂ ಬರುವುದಿಲ್ಲ. ಇನ್ನು ಔಷಧ ಹೊರಗೆ ಬರುತ್ತದೆಯೇ? ಇಂಪಾಸಿಬಲ್! ನಮ್ಮ ಸರ್ಕಾರದ ನೀತಿಗಳು, ಕಾನೂನು ಎಲ್ಲವೂ ಹೇಗಿದೆಯೆಂದರೆ, ಭಾರತ ಸ್ವರ್ಗವೇನೋ ಎನಿಸುತ್ತದೆ. ಆದರೆ, ಅಸಲಿಗೆ ಅವೆಲ್ಲ ಸಮರ್ಪಕವಾಗಿ ಜಾರಿಗೆ ಬಂದಿರುವುದೇ ಇಲ್ಲ. ಆದರೆ ರಾಜಕಾರಣಿ ಮನಸ್ಸು ಮಾಡಿದರೆ, ಮಧ್ಯರಾತ್ರಿಯೇ ಹೊಸ ನೀತಿ ಪ್ರಸ್ತಾವನೆಯಾಗಿ, ಬೆಳಗ್ಗೆ ಜಾರಿಯಾಗಿರುತ್ತದೆ. ಇದೂ ಅಷ್ಟೇ, ಕೆಮ್ಮು ಬಂದರೆ ಕಷಾಯ ಹೆಂಗ್ ಮಾಡೋದ್ ಸಾರ್ ಎನ್ನುವವರು ಆಯುರ್ವೇದ ಬೇಡವೇ ಬೇಡ ಎಂದು ಕುಳಿತಿರುವುದರಿಂದಲೇ ಇನ್ನೂ ಆಯುರ್ವೇದಕ್ಕೆ ಮಾನ್ಯತೆ ಸಿಕ್ಕಿಲ್ಲ.
ಇನ್ನೂ ಆಯುರ್ವೇದ ಸರಿ ಇಲ್ಲ ಎನ್ನುವವರು ದಯವಿಟ್ಟು ನಿಮ್ಮ ಮನೆಯಲ್ಲೇ ಸಾವಾಗುವವರೆಗೂ ಪ್ಲೀಸ್ ಕಾಯಿರಿ.