ಜಾತಿ-ಮತ ಭೇದವಿಲ್ಲದೆ ಎಲ್ಲರಿಗೂ ಆದಿಚುಂಚನಗಿರಿ ಮಠದ ಪರಿಚಯವಿದ್ದೇ ಇರುತ್ತದೆ. ಇನ್ನು ಈ ಪೀಠವನ್ನು ಅಲಂಕರಿಸಿರುವ ನಿರ್ಮಲಾನಂದನಾಥ ಮಹಾಸ್ವಾಮಿಗಳ ಹೆಸರು ಹೇಳಿದರಂತೂ ಗೊತ್ತಿಲ್ಲ ಎಂದು ಹೇಳುವ ಮತ್ತೊಬ್ಬ ನಮ್ಮ ರಾಜ್ಯದಲ್ಲಿಲ್ಲ. ಅಷ್ಟು ಜನಪರ ಕಾಳಜಿಯುಳ್ಳ ಇವರನ್ನು ಒಕ್ಕಲಿಗ ಸಮುದಾಯವಂತೂ ದೇವದೂತನಂತೆ ಕಾಣುತ್ತಾರೆ. ಹಿರಿಯ ಸ್ವಾಮೀಜಿ ಬಾಲಗಂಗಾಧರನಾಥರನ್ನು ಹೇಗೆ ಕಾಣುತ್ತಿದ್ದರೋ ಹಾಗೇ ಇವರನ್ನೂ ಕಾಣುತ್ತಾರೆ.
ಕಳೆದ ವಾರದುದ್ದಕ್ಕೂ ಇವರದ್ದೇ ಚರ್ಚೆ. ದುರಂತ ಏನೆಂದರೆ, ಸ್ವತಃ ಕೆಲ ಒಕ್ಕಲಿಗರೇ ಇವರನ್ನು ವಿರೋಧಿಸುತ್ತಿರುವುದು ನೋಡಿ ನಿಜವಾಗಿ ಬೇಸರವಾಯಿತು. ಇವರು ಮಾಡಿದ ತಪ್ಪೇನು ಗೊತ್ತಾ? ‘ಸಂಸ್ಕೃತ ಎಲ್ಲ ಭಾಷೆಗೂ ಮಾತೃಭಾಷೆ. ಅದನ್ನು ಪ್ರವರ್ಧಮಾನಕ್ಕೆ ತರಬೇಕು. ಹಾಗಾಗಿ ಉಳಿದ ಭಾಷೆಗಳಂತೆ ಇದನ್ನೂ ಕಡ್ಡಾಯವಾಗಿ ಮಕ್ಕಳಿಗೆ ಕಲಿಸಬೇಕು.’ ಎಂದರು. ಅಷ್ಟೇ ಅಲ್ಲ, ‘ಇಂದು ಮಠ ಮಂದಿರಗಳಲ್ಲಿ ಕೇವಲ ಬಡ ವಿದ್ಯಾರ್ಥಿಗಳಿಗೆ ಮಾತ್ರ ಸಂಸ್ಕೃತ ಕಲಿಸಲಾಗುತ್ತಿದೆ. ಕೆಲ ಶ್ರೀಮಂತರ ಮಕ್ಕಳು ಖಾಸಗಿ ಶಾಲೆಗಳಲ್ಲಿ, ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರಿ ಮಾತ್ರವಲ್ಲದೇ ಖಾಸಗಿ ಶಾಲೆಗಳಲ್ಲೂ ಸಂಸ್ಕೃತ ಕಡ್ಡಾಯ ಮಾಡಬೇಕು’ ಎಂದು ಒತ್ತಾಯಿಸಿದರು.
ಇಷ್ಟೇ ಗುರೂ ಆಗಿದ್ದು. ಇಷ್ಟೇ! ಇದಕ್ಕೂ ಮೇಲೆ ಒಂದು ಮಾತಾಡಿಲ್ಲ ಸ್ವಾಮಿಗಳು. ಅದಕ್ಕೆ ಕೆಲ ಒಕ್ಕಲಿಗ ಬಾಂಧವರೆಲ್ಲ ‘ಹೋ’ ಎಂದು ಬಂದರು. ಫೇಸ್ಬುಕ್ನಲ್ಲಿ ಶೇರ್ ಮಾಡಿದ ಮೇಲಂತೂ ಜನರೆಲ್ಲ ‘ಇವರು ಒಕ್ಕಲಿಗ ಸ್ವಾಮಿಗಳಲ್ಲ. ಬ್ರಾಹ್ಮಣ ಸ್ವಾಮಿಗಳು’ ಎಂದರು. ಕೆಲವರು ‘ತಟ್ಟೆಕಾಸಿನವರ ಭಾಷೆ ಏತಕ್ಕೆ? ಸಂಸ್ಕೃತ ಕಲಿತಾಕ್ಷಣ ಏನು ಪುಳಿಚಾರರು ಅವರ ಮನೆ ಅಡುಗೆ ಮನೆಯೊಳಗೆ ಬಿಡುತ್ತಾರಾ? ಒಕ್ಕಲಿಗ ಸ್ವಾಮಿ ಆಡುವ ಮಾತಲ್ಲ ಇದು’ ಎಂದರು.
ಸ್ವಾಮೀಜಿಗೆಲ್ಲ ಒಕ್ಕಲಿಗ, ಬ್ರಾಹ್ಮಣ, ಶೂದ್ರ, ಲಿಂಗಾಯತ ಅಂತ ಜಾತಿ ಅಂಟಿಸಿಕೊಂಡು, ಅವರವರು ಅವರವರ ಜಾತಿಯ ನಾಯಕರ ಜೊತೆ ಮಾತ್ರ ಸಂಪರ್ಕವಿಟ್ಟುಕೊಳ್ಳುವ ಕೀಳು ಸಂಪ್ರದಾಯ ಹುಟ್ಟು ಹಾಕಿದ್ದು ನಿಮ್ಮಂಥ ರಾಜಕೀಯ ಪುಢಾರಿಗಳು. ಅದನ್ನು ಸ್ವಾಮೀಜಿಗಳ ತಲೆಗೆ ಯಾಕೆ ಕಟ್ಟುತ್ತೀರ? ಜಾತಿ ಕುಟುಂಬಗಳ ಸಂಕೋಲೆಯನ್ನು ಬಿಟ್ಟು ಬಂದ ಮೇಲೆಯೇ ಸ್ವಾಮೀಜಿ ಆಗುವುದು. ಯಾರು ಅದನ್ನು ಬಿಡದೇ ಇನ್ನೂ ನನ್ನ ಜಾತಿ, ನನ್ನ ಜನ, ನನ್ನ ಕುಟುಂಬ ಎಂದುಕೊಂಡಿದ್ದರೆ ಅವನು ಸ್ವಾಮೀಜಿಯೇ ಅಲ್ಲ. ಇದನ್ನು ನಾನು ಹೇಳ್ತಿಲ್ಲ. ಸ್ವತಃ ಶ್ರೀಕೃಷ್ಣಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿದ್ದಾನೆ.
ಅಷ್ಟಕ್ಕೂ ಈಗ ಸ್ವಾಮೀಜಿ ಹೇಳಬಾರದ್ದೇನು ಹೇಳಿದರು? ಸಂಸ್ಕೃತ ಕಲೀರಿ ಅಂದಿದ್ದು ತಪ್ಪಾ? ಇವರೇನು ಕನ್ನಡ ಭಾಷೆಯನ್ನು ತ್ಯಜಿಸಿ, ಸಂಸ್ಕೃತದಲ್ಲೇ ಮಾತಾಡಿ, ಮಾತೃಭಾಷೆಯನ್ನೇ ಮರೆಯಿರಿ ಅಂತೇನೂ ಕರೆ ಕೊಟ್ಟಿಲ್ವಲ್ಲ? ಕನ್ನಡ ಹೇಗೂ ಮಾತಾಡ್ತಾ ಇದೀವಿ, ಅದರ ಜೊತೆಗೆ ಸಂಸ್ಕೃತವನ್ನೂ ಕಲೀರಪ್ಪಾ ಎಂದಿದ್ದು ಅಷ್ಟೇ. ಅಷ್ಟಕ್ಕೇ ಸ್ವಾಮೀಜಿ ನಿಷ್ಟೂರವಾಗಿಬಿಟ್ಟರೇ? ಎಲ್ಲೋ ಒಂದೆರಡು ರಾಜಕಾರಣಿಗಳ ಬಗ್ಗೆ ಒಳ್ಳೆಯ ಮಾತಾಡಿದರು ಎಂದ ಮಾತ್ರಕ್ಕೆ ‘ನಮ್ಮ ಸ್ವಾಮೀಜಿ, ನಮ್ಮ ಸ್ವಾಮೀಜಿ’ ಎಂದು ಕೂಗಾಡುವವರು, ಸ್ವಾಮೀಜಿ ಯಾವ ಉದ್ದೇಶಕ್ಕೆ ಸಂಸ್ಕೃತ ಕಲೀರಪ್ಪಾ ಎನ್ನುತ್ತಿದ್ದಾರೆ ಎಂಬುದನ್ನೂ ಅರಿಯದೇ ಸ್ವಾಮೀಜಿಯನ್ನೂ ಸಂಘ ಪರಿವಾರದವರು ಎಂಬಂತೆ ಮಾತಾಡುತ್ತೀರೆಂದರೆ, ಎಂತೆಂಥ ನಕಲಿಗಳಿದ್ದರು ಇವರ ಸುತ್ತ ಇದ್ದರು ಎಂಬುದು ಈಗ ಬಯಲಾಗಿದೆ.
‘ನಮ್ಮ ಸ್ವಾಮೀಜಿ’ ಅಂತ ರಾಜಕೀಯ ಮಾಡುವುದಕ್ಕೆ ಹೇಳುತ್ತೀರಲ್ಲ, ಆ ಸ್ವಾಮೀಜಿಯ ಬಗ್ಗೆ ನಿಮಗೆ ಗೊತ್ತಿಲ್ಲದೇ ಇರಬಹುದು. ಆದರೆ ಅವರು ಏನು ಎಂದು ನನಗಂತೂ ಗೊತ್ತಿದೆ. ಈ ರಾಜಕೀಯ ಪುಢಾರಿಗಳಿಂದಲೋ ಏನೋ, ನಾನೂ ಅವರನ್ನು ಒಬ್ಬ ಒಕ್ಕಲಿಗ ಸ್ವಾಮೀಜಿ ಎಂದುಕೊಂಡು ತಪ್ಪು ಭಾವಿಸಿದ್ದೆ. ಆದರೆ ಎಷ್ಟೋ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು, ಸಾಧಕರನ್ನೆಲ್ಲ ಸಮಾಜ ಕೈಬಿಟ್ಟಾಗ ಅಥವಾ ಚೆನ್ನಾಗಿ ನಡೆಸಿಕೊಳ್ಳದೇ ಇದ್ದಾಗ, ಯಾರೂ ಇಂಥವರ ಫೋನ್ ಎತ್ತದೇ ಇದ್ದಾಗ, ಖುದ್ದು ಫೋನ್ ಮಾಡಿ, ‘ನಿಮ್ಮ ಸೇವೆ ಈ ಸಮಾಜಕ್ಕೆ ಬೇಕು. ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ. ಧೈರ್ಯ ಕಳೆದುಕೊಳ್ಳಬೇಡಿ. ಆಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ’ ಎಂದಿದ್ದು ನಿಮ್ಮ ‘ನಮ್ಮ ಸ್ವಾಮೀಜಿ’ಯೇ!
ಇದು ನನಗೆ ಒಬ್ಬಿಬ್ಬರು ಹೇಳಿದ್ದಲ್ಲ. ಅಥವಾ ಗೌಡರಲ್ಲ. ಯಾವುದೋ ಜಾತಿ ಗೊತ್ತಿಲ್ಲದವನಿಂದ ಹಿಡಿದು ಬ್ರಾಹ್ಮಣರವರೆಗೂ ಎಲ್ಲರೂ ಇವರ ಬಗ್ಗೆ ಪೂಜ್ಯ ಭಾವನೆ ಇಟ್ಟುಕೊಂಡವರೇ. ಪ್ರತಿ ಬಾರಿ ‘ಚಿರು, ನನಗೆ ಇವತ್ತು ಸ್ವಾಮೀಜಿಗಳು ಕಾಲ್ ಮಾಡಿದ್ರಪ್ಪಾ, ಧೈರ್ಯ ಹೇಳಿದ್ರು’ ಅಂದಾಗೆಲ್ಲ ಇವರ ಬಗ್ಗೆ ಅಚ್ಚರಿಯಾಗುತ್ತಿತ್ತು. ಬೇರೆ ಬೇರೆ ಜಾತಿಯ ರಾಜಕಾರಣಿಗಳು ಇವರು ನಮ್ಮ ಜಾತಿಯಲ್ಲ ಎಂಬ ಕಾರಣಕ್ಕೆ ಹೆಚ್ಚು ಇವರ ಬಗ್ಗೆ ಹೊರಗೆ ಮಾತನಾಡದೇ ಇದ್ದರೂ, ಒಳಗಿನಿಂದ ಅತ್ಯಂತ ಗೌರವ ಭಾವನೆ ಇಟ್ಟುಕೊಂಡವರಿದ್ದಾರೆ. ಇವರ ಮಾತನ್ನು ತೆಗೆದು ಹಾಕುವುದೇ ಇಲ್ಲ. ಇದೆಲ್ಲ ಈಗ ಇವರನ್ನು ವಿರೋಧಿಸುತ್ತಿರುವ ರಾಜಕಾರಣಿಯ ಚೇಲಾಗಳಿಗೆ ಅರ್ಥವಾಗುವುದೇ ಇಲ್ಲ.
ಸಂಸ್ಕೃತದ ವಿಷಯಕ್ಕೇ ಬರೋಣ. ಈ ಕನ್ನಡ ಪರ ಹೋರಾಟಗಾರರು ಮಾತೆತ್ತಿದರೆ ಕುವೆಂಪು ಹಂಗೆ, ಕುವೆಂಪು ಹಿಂಗೆ ಎನ್ನುತ್ತಾರೆ. ಅವರ ಸಾಹಿತ್ಯಗಳ ಪೀಠಿಕೆಯನ್ನೂ ಸಹ ನೋಡದೇ ಹೋರಾಟಗಾರ ಎಂದು ಬಿರುದು ಪಡೆದು ಮುದಿ ವಯಸ್ಸಿಗೆ ಬಂದವರೆಲ್ಲ ಕುವೆಂಪು ಅವರನ್ನು ಕೇವಲ ಜಾತಿಗೆ ಸೀಮಿತ ಮಾಡಿ ಸಾಹಿತ್ಯದ ಕುಲಗೆಡಿಸಿದ್ದಾರೆ. ನಿಜಕ್ಕೂ ಅಂಥವರಲ್ಲಿ ಬಹುತೇಕರಿಗೆ ‘ವಿಶ್ವ ಮಾನವ’ ತತ್ತ್ವ ಅಂದರೆ ಏನು ಅಂತನೂ ಅವರಿಗೆ ಗೊತ್ತಿಲ್ಲ! ಕುವೆಂಪು ಅವರನ್ನು, ಅವರ ಸಾಹಿತ್ಯವನ್ನು ನಿಜವಾಗಿ ಓದಿಕೊಂಡು ವಿಶ್ಲೇಷಿಸಿದವರೆಲ್ಲ ಬೈ ಡಿಫಾಲ್ಟ್, ಕನ್ನಡ ವಿರೋಧಿಗಳು ಅಥವಾ ಪುರೋಹಿತಶಾಹಿ ಕ್ರಿಮಿಗಳಾಗಿಬಿಡುತ್ತಾರೆ.
ಇದೇ ಕುವೆಂಪು ಸಂಸ್ಕೃತ ಓದಿಕೊಂಡಿರಲಿಲ್ಲ ಎಂದರೆ, ‘ರಾಮಾಯಣ ದರ್ಶನಂ’ನಂಥ ಕಾವ್ಯ ರಚನೆಯಾಗುತ್ತಿತ್ತೇ? ಸ್ವಲ್ಪ ಕೆದಕಿ ನೋಡಿ ಒಕ್ಕಲಿಗ ಬಾಂಧವರೇ, ಕುವೆಂಪುಗೆ ಕನ್ನಡ ಸಾಹಿತ್ಯ ರಚನೆಗೆ ಪ್ರೇರಣೆ ಸಿಕ್ಕಿದ್ದು ಎಲ್ಲಿಂದ ಅಂತ. ಕುವೆಂಪು ಶೇಕ್ಸ್ಪಿಯರ್ ಅವರ ದೊಡ್ಡ ಅಭಿಮಾನಿಯಾದ್ದರು. ಶೇಕ್ಸ್ಪಿಯರೇನೂ ಮಂಡ್ಯದವನಲ್ಲ ಮತ್ತೆ! ಇಂಗ್ಲಿಷ್ ಕಾವ್ಯಗಳನ್ನು ಓದಿ ಅವರ ಹಾಗೇ ಬರೆದು, ಒಮ್ಮೆ ಅವರ ಶಾಲೆಗೆ ಬಂದ ಇಂಗ್ಲಿಷ್ ಕವಿ ಜೇಮ್ಸ್ ಹೆನ್ರಿಕ್ ಕಸಿನ್ಸ್ಗೆ ತಮ್ಮ ಇಂಗ್ಲಿಷ್ ಕವಿತೆಯನ್ನು ತೋರಿಸಿದಾಗ, ‘ಅಲ್ಲಯ್ಯಾ, ನೀನು ಕನ್ನಡಿಗನಾಗಿ ಕನ್ನಡದಲ್ಲಿ ಬರೆಯಪ್ಪ… ಇಂಗ್ಲಿಷ್ ಅವರ ಥರ ಅವರ ಸಂಸ್ಕೃತಿಯ ಹಾಗೆ ಯಾಕೆ ಬರೆಯುವುದಕ್ಕೆ ಹೋಗ್ತೀಯ?’ ಎಂದಾಗ ಕುವೆಂಪು ಅವರಿಗೆ ಕನ್ನಡದಲ್ಲಿ ಬರೆಯುವ ಪ್ರೇರಣೆಯಾಯಿತು ಎಂದು ಅವರೇ ಬರೆದುಕೊಂಡಿದ್ದಾರೆ. ಮುಂದೆ ಅವರು ರಾಮಕೃಷ್ಣ ಆಶ್ರಮದ ಸಂಪರ್ಕಕ್ಕೆ ಬಂದಿದ್ದು, ಕನ್ನಡ ವಿಸ್ತಾರವಾಗಿದ್ದು ಇತಿಹಾಸ. ಇಂಥವರನ್ನೆಲ್ಲ ಓದಿಕೊಂಡ ಸ್ವಾಮೀಜಿಗಳು ನೀವೂ ಸಂಸ್ಕೃತ ಓದಿ, ಕನ್ನಡದಲ್ಲೇ ಏನಾದ್ರೂ ಸಾಧನೆ ಮಾಡ್ರಪ್ಪಾ ಎಂದರೆ, ಇಲ್ಲ ನಾವು ದಡ್ಡನಂಗೇ ಇರ್ತೀವಿ ಅಂತ ಅಂದ್ರೆ ಯಾವ್ ಸ್ವಾಮೀಜಿ ಬಂದ್ರೂ ಏನು ತಿದ್ದುವುದಕ್ಕಾಗುತ್ತೆ ಹೇಳಿ?
ಸಂಸ್ಕೃತ ಮಾತೆ ಅಂತನೇ ಒಂದು ಕವನವೊಂದಿದೆ.
ಪೃಥ್ವಿಯ ಪ್ರಥಮ ಪ್ರಭಾತದಲಿ,
ಇತಿಹಾಸ ದೃಷ್ಟಿಗಸ್ಪಷ್ಟ ಅಜ್ಞಾತ ಪ್ರಾಚೀನದಲಿ,
ಚಿರಧವಲ ಹಿಮಕಿರಣ ಪೃಥುಲೋರು ಪ್ರೇಂಖದಲಿ,
ನವಜಾತಿ ಶಿಶುವಾಗಿ ನಲಿದ ಮಂಗಲಮಯೀ
ಸಂಸ್ಕೃತವನ್ನು ಹೊಗಳುತ್ತಾ ಇದನ್ನು ಬರೆದವರು ನಾನಲ್ಲ, ಕುವೆಂಪು. ಮುಂದಿನದ್ದು ಸ್ವಾಮೀಜಿಯನ್ನು ವಿರೋಧಿಸುವ ಒಕ್ಕಲಿಗರಿಗೆ ಬಿಟ್ಟಿದ್ದು.
ಆದಿಚುಂಚನಗಿರಿಯ ಮೂಲ ದೇವರು ಕಾಲಭೈರವ. ಮಠಕ್ಕೆ ನಡೆದುಕೊಳ್ಳುವ ಎಲ್ಲರಿಗೂ ಕಾಲಭೈರವನೇ ಮನೆದೇವರು ಅಥವಾ ಮನೆಯಲ್ಲಿ ಫೋಟೊನಾದ್ರೂ ಇದ್ದೇ ಇರುತ್ತದೆ. ನನ್ನ ಒಕ್ಕಲಿಗ ಸ್ನೇಹಿತನೊಬ್ಬ ಯಾವಾಗಲೂ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋದಾಗಲೆಲ್ಲ,
‘ದೇವರಾಜ ಸೇವ್ಯಮಾನ ಪಾವನಾಂಘ್ರಿ ಪಂಕಜಂ|
ವ್ಯಾಲಯಙ್ಞ ಸೂತ್ರಮಿಂದು ಶೇಖರಂ ಕೃಪಾಕರಮ್|
ನಾರದಾದಿ ಯೋಗಿವೃಂದ ವಂದಿತಂ ದಿಗಂಬರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ|’
ಎಂಬ ಉದ್ದದ ಕಾಲಭೈರವಾಷ್ಟಕಂ ಹೇಳದೇ ದೇವಸ್ಥಾನದಿಂದ ಹೊರ ಬಂದಿದ್ದೇ ಇಲ್ಲ. ನನಗೇ ಕಾಲಭೈರವಾಷ್ಟಕಂ ಬರುವುದಿಲ್ಲ. ಆದರೆ ಅದು ಅವನ ಬಾಯಲ್ಲೇ ಇದೆ. ಅಸಲಿಗೆ ಇದು ಇರುವುದು ಯಾವ ಭಾಷೆಯಲ್ಲಿ? ಥತ್! ಮತ್ತದೇ ಸಂಸ್ಕೃತ. ಬರೆದವರಾರಯರು? ಅಯ್ಯೋ, ಮತ್ತದೇ ಆದಿಗುರು ಶಂಕರಾಚಾರ್ಯರು! ಹೀಗೆಂದುಕೊಂಡು, ಸ್ವಾಮೀಜಿಗಳನ್ನು ವಿರೋಧಿಸುತ್ತಿರುವ ದಡ್ಡರ ಮಾತು ಕೇಳಿಕೊಂಡು ಈಗ ಸಂಸ್ಕೃತದಲ್ಲಿರುವ ಅಷ್ಟಕಂ ಅನ್ನು ಕನ್ನಡದಲ್ಲಿ ಹಾಡುವುದಾದರೂ ಹೇಗೆ? ಈಗ ಅವನು ಕಾಲಭೈರವ ಅಷ್ಟಕಂ ಅನ್ನು ಭಜಿಸಬೇಕೋ ಬೇಡವೊ? ಪೂರ್ವಾಶ್ರಮದಲ್ಲಿ ಬ್ರಾಹ್ಮಣರಾಗಿದ್ದ ಶಂಕರಾಚಾರ್ಯರರು ಬರೆದಿದ್ದು, ಕನ್ನಡದ ಹೆಸರಲ್ಲಿ ಲೂಟಿ ಮಾಡುವವರೆಲ್ಲರೂ ತಟ್ಟೆಕಾಸಿನವರು ಎಂದು ಕೇಕೆ ಹಾಕುತ್ತಾರಲ್ಲ, ಇವರು ಅದೇ ಗೀತೆಯನ್ನು, ಅದೇ ಛಂದಸ್ಸಿನಲ್ಲಿ ಅನುವಾದಿಸುವ ಪ್ರಯತ್ನ ಮಾಡಬಹುದಲ್ಲವೇ?
ಸ್ವಾಮೀಜಿ ಸಂಸ್ಕೃತ ಕಲಿತು ಸಮುದಾಯಕ್ಕೆ ಕೀರ್ತಿ ತನ್ನಿ ಎಂಬ ಭಾವನೆಯಿಂದ ಹೇಳಿದ್ದರು. ಆದರೆ ದಡ್ಡರು ಅರ್ಥ ಮಾಡ್ಕೊಂಡಿದ್ದು ಮಾತ್ರ ಸ್ವಾಮೀಜಿ ನಮಗೆಲ್ಲ ಜನಿವಾರ ಹಾಕ್ತಾ ಇದಾರೆ ಎಂದು! ಏನ್ ಕರ್ಮ ಗುರೂ! ಇನ್ನೊಬ್ಬ ಆಸಾಮಿ ಫೇಸ್ಬುಕ್ನಲ್ಲಿ ಕಮೆಂಟ್ ಮಾಡುತ್ತಾ, ‘ಸ್ವಾಮಿಗಳು ಪುರೋಹಿತಶಾಹಿಗಳ ಬೆನ್ನಿಗೆ ನಿಂತಿದ್ದಾರೆ. ಮಾತೃಭಾಷೆ ಬಗ್ಗೆ ಮಾತಾಡದೇ ಪುರೋಹಿತಶಾಹಿಗಳ ಭಾಷೆ ಕೇಳ್ತಿದ್ದಾರೆ.’ ಎಂದಿದ್ದಾನೆ.
ಇವರ ತಲೆಯಲ್ಲಿ ಮೆದುಳೇ ಇದ್ಯಾ ಅಥವಾ ಲದ್ದಿಯಾ ಎಂದು ಗಂಭೀರವಾದ ಅನುಮಾನ ಶುರುವಾಗಿದೆ. ಯಾವುದೋ ತುಮಕೂರಿನ ಮಣಿಕುಪ್ಪೆ ಗ್ರಾಮದಲ್ಲಿರೋ ಗೌಡನಿಗೆ ಅಥವಾ ಮಳವಳ್ಳಿ ಗೌಡಂಗೆ, ಕನ್ನಡವೇ ಮಾತೃಭಾಷೆ. ಅದ್ರಲ್ಲೂ ಹೋಗ್ಲಾ ಬಾರ್ಲಾ ಎಂದರೆ ಮಾತ್ರ ಅವನಿಗದು ಕನ್ನಡ. ಅದೇ ಅವ್ನಿಗೆ ಗೌಡರ ಮಾತೃಭಾಷೆ. ಆದರೆ ಸ್ವಾಮಿ, ಗೌಡರು ಒಂದೊಂದು ಕಡೆ ಒಂದೊಂದು ಭಾಷೆ ಮಾತಾಡುತ್ತಾರೆ ಎಂಬುದು ನೆನಪಿರಲಿ. ಕರಾವಳಿಯ ಗೌಡರು ತುಳು ಮಾತಾಡ್ತಾರೆ. ಹಾಗಂತ ಅವ್ರು ಗೌಡರಲ್ಲ, ಗೌಡಸಾರಸ್ವತ ಬ್ರಾಹ್ಮಣರು ಅಂತ ಕರೆಯುತ್ತೀರಾ? ಉಡುಪಿ ಮಠದಲ್ಲೂ ತುಳು ಮಾತಾಡ್ತಾರೆ. ಹಾಗಂತ ಉಡುಪಿಯಲ್ಲಿರುವ ಗೌಡರೆಲ್ಲ ಮಾಧ್ವ ಬ್ರಾಹ್ಮಣರಾ? ಬೆಂಗಳೂರಲ್ಲಿರೋ ಎಷ್ಟೋ ಮಾಧ್ವ ಬ್ರಾಹ್ಮಣರಿಗೆ ತುಳು ಅಂತ ಭಾಷೆಯಿದೆ ಎಂಬುದೇ ಗೊತ್ತಿಲ್ಲ. ಕನ್ನಡ ಬಿಟ್ಟು ಮತ್ತೊಂದು ಭಾಷೆ ಬರಲ್ಲ. ಹಾಗಂತ ಅವರೆಲ್ಲ ಗೌಡರಾ?
ಅದೆಲ್ಲ ಬಿಡಿ ಸ್ವಾಮಿ, ಸುಳ್ಯ-ಮಡಿಕೇರಿ ಪ್ರದೇಶದ ಗೌಡರು ಮಾತಾಡೋದು ಅರೆಭಾಷೆ. ನಮ್ಮ ಸದಾನಂದ ಗೌಡರೇ ಉದಾಹರಣೆಯಾಗಿ ನಮ್ಮ ಮುಂದೆ ನಿಂತಿದ್ದಾರೆ. ಅವರನ್ನು ಗೌಡರೆಂದು ಒಪ್ಪಿಕೊಳ್ಳುವುದಿಲ್ಲವಾ ಹಾಗಿದ್ದರೆ? ಇವೆಲ್ಲ ಬಿಡಿ ಸಾರ್, ಗೌಡರು ಅಂತ ಹೇಳ್ಕೊತ್ತೀರಲ್ಲ ಅದು ಕನ್ನಡ ಶಬ್ದನಾ? ಗೌಡ ಎಂಬ ಜಾತಿ ಸೂಚಕವೇನಿದೆ ಅದು ಸಂಸ್ಕೃತದ ‘ಗುಡ’ ಎಂಬ ಶಬ್ದದಿಂದ ಬಂದಿದ್ದು. ಗುಡ ಎಂದರೆ ಬೆಲ್ಲ, ಕಬ್ಬು ಇತ್ಯಾದಿ ಅರ್ಥವಿದೆ. ಕಬ್ಬು ಬೆಳೆದು ಬೆಲ್ಲ ಮಾಡುವವರೇ ಗೌಡರು. ಬಂಗಾಳದಲ್ಲೂ ಗೌಡರಿದ್ದಾರೆ. ಈಗ ಗುಡ ಎಂಬುದೂ ಸಂಸ್ಕೃತದಿಂದ ಬಂದಿದೆ ಎಂದು ಅದನ್ನೂ ಬಿಡುತ್ತೀರಾ? ಅಥವಾ ಇಟ್ಟುಕೊಂಡವನು ತಟ್ಟೆಕಾಸಿನವರಾಗುತ್ತಾರಾ? ಇವೆಲ್ಲ ಬಾಯ್ ಬಿಟ್ಟು ಹೇಳುವುದು ಬೇಡ ಅಂತನೇ ಒಂದಷ್ಟು ಭಾಷೆ ಕಲೀರಪ್ಪಾ ಎಂದು ಸ್ವಾಮಿಗಳು ಹೇಳಿದ್ದು.
ನಿರ್ಮಲಾನಂದನಾಥ ಸ್ವಾಮೀಜಿಗಳು ಆ ಪೀಠವನ್ನು ಅಲಂಕರಿಸಿರುವ ಗುರುಗಳು. ನೀವೆಲ್ಲ ಒಬ್ಬ ರಾಜಕಾರಣಿಯ ಜೊತೆ ಭಿನ್ನಾಭಿಪ್ರಾಯ ಇಟ್ಟುಕೊಳ್ಳಬಹುದೇನೋ ಅದರೆ, ಸ್ವಾಮೀಜಿ ಜೊತೆಗಲ್ಲ. ಅವರು ಗುರು ಸ್ಥಾನದಲ್ಲಿರುತ್ತಾರೆ. ನಾಳೆ ಅವರು ಸಂಸ್ಕೃತ ಅಲ್ಲ, ಫ್ರೆಂಚ್ ಭಾಷೆಯನ್ನು ಎಲ್ಲರೂ ಕಲಿಯಿರಿ ಅಂದರೂ ಕಲಿಯಬೇಕು. ಬಹುಶಃ ಫ್ರೆಂಚ್ ಭಾಷೆ ಕಲಿಯಿರಿ ಎಂದಾಗ ಇವರೆಲ್ಲಾ ಕಲಿಯಬಹುದೇನೋ! ಸಂಸ್ಕೃತ ಕಲಿ ಎಂದಿದ್ದು ಮಾತ್ರ ನಿಮ್ಮ ನಿಮ್ಮ ಜಾತಿ ರಾಜಕಾರಣಿಗಳ ಚೇಲಾಗಳು ಬಿತ್ತಿದ ವಿಷ ಬೀಜ ಮೊಳಕೆಯೊಡೆದು ಬಿಡ್ತು ಅಲ್ವೇ? ನೋಡಿ, ನಿರ್ಮಲಾನಂದನಾಥ ಸ್ವಾಮಿಗಳು ಕೇವಲ ಡಿ.ಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿಯಾದಾಗ ಅವರಿಗೆ ಸಮಾಧಾನ ಹೇಳಿದಾಗ, ಅದು ದೊಡ್ಡ ನ್ಯೂಸ್ ಆದಾಗ ಮಾತ್ರ ‘ನಮ್ಮ ಸ್ವಾಮಿಗಳು ಹೆಂಗೆ?’ ಅಂತ ಹೇಳಿ ಕೊಚ್ಚಿಕೊಂಡು, ಸಂಸ್ಕೃತ ಕಲೀರಿ ಎಂದಾಗ ‘ನಾಳೆ ಜನಿವಾರ ಹಾಕ್ಕೊಳಕ್ಕೂ ಹೇಳ್ತೀರಾ’ ಎಂದು ಕುಹಕವಾಡಿದರೆ, ಅದು ಮಠದ ಮತ್ತು ಗುರುಗಳ ಮೇಲಿರುವ ಭಕ್ತಿಯಲ್ಲ, ಡಂಭಾಚಾರ. ನಿಮ್ಮಗಳ ತೆವಲಿಗೆ ತಕ್ಕಂತೆ ಸ್ವಾಮೀಜಿಗಳೂ ವರ್ತಿಸಬೇಕು ಅಂತ ಬಯಸುವವರಿಂದಲೇ ಸಮಾಜ ಹಾಳಾಗುತ್ತಿದೆಯೇ ಹೊರತು, ಬೇರೆ ಇನ್ಯಾರೂ ಜನಿವಾರದವರು ಬೇಕಾಗಿಲ್ಲ.
ಮಜಾ ಏನು ಗೊತ್ತಾ? ನಯಾ ಪೈಸೆ ಓದಿಕೊಂಡಿರದ, ಸಾಹಿತ್ಯದ ಬಗ್ಗೆ ಅಭಿರುಚಿ ಬಿಡಿ, ಕನ್ನಡವನ್ನು ಬರೆಯುವುದು ಬಿಟ್ಹಾಕಿ ಅತ್ಲಾಗೆ… ಹ ಕಾರ ಅ ಕಾರ ತಪ್ಪಿಲ್ಲದಂತೆ ಮಾತಾಡುವುದಕ್ಕೂ ಬರದ ಕುರಿಗಳೆಲ್ಲ ಡಾಕ್ಟರೇಟ್ ಪಡೆದಿರುವ ಸ್ವಾಮೀಜಿಗಳಿಗೆ ಬುದ್ಧಿವಾದ ಹೇಳುವ ಹಾಗೆ ಆಗಿಬಿಟ್ರು ಎಂಬುದನ್ನೇ ನೆನೆಸಿಕೊಂಡೇ ನನಗೆ ನಗು ಕಿತ್ತುಕೊಂಡು ಬರುತ್ತಿದೆ.
ವಿರೋಧಿಸುವವರು/ ರಾಜಕೀಯ ಪುಢಾರಿಗಳೆಲ್ಲ ಒಂದು ಮಾತು ನೆನಪಲ್ಲಿಟ್ಟುಕೊಳ್ಳಿ. ಸ್ವಾಮೀಜಿಗಳು ಕೇವಲ ನಿಮ್ಮ ಜಾತಿಯ ರಾಜಕೀಯ ನಾಯಕರನ್ನು ಬೆಂಬಲಿಸಿದಾಗ ಮಾತ್ರ ‘ನಮ್ಮ ಸ್ವಾಮೀಜಿ’ ಆಗಿರಬಹುದು. ಆದರೆ, ಅವರ ಬಗ್ಗೆ, ಅವರು ನಡೆಸುತ್ತಿರುವ ಸಂಸ್ಥೆಗಳ ಬಗ್ಗೆ, ಅವರೆಷ್ಟು ಸಂವೇದನಾಶೀಲರು ಎಂದು ತಿಳಿದುಕೊಂಡಿರುವ ನನಗೆ ಅವರು ಯಾವಾಗಲೂ ‘ನಮ್ಮ ಸ್ವಾಮೀಜಿ’ಯೇ!