ನೂರು ಪುರುಷೋತ್ತಮರೂ ವಿಶ್ವೇಶ್ವರಯ್ಯರಿಗೆ ಸಮವಲ್ಲ, ಹೋಲಿಕೆಯೂ ಸಲ್ಲ!

 

 

ಸ್ನೇಹಿತ ಕರೆ ಮಾಡಿದ್ದ. ‘ಗುರೂ ನಿನ್ನೆ ಅದ್ಯಾರೋ ಒಂದಷ್ಟ್‌ ಜನ ದೊಡ್ಡ ಪ್ರೋಗ್ರಾಂ ಮಾಡಿಸಿ, ಮೀಡಿಯಾ ಕರೆಯಿಸಿ ವಿಶ್ವೇಶ್ವರಯ್ಯನವರನ್ನು ಬಯ್ಯುತ್ತಿದ್ದರು. ಅವರ ಪ್ರತಿಮೆಯನ್ನು ಕೆಆರ್‌ಎಸ್‌ನಲ್ಲಿ ಕೃಷ್ಣದೇವರಾಯ ಒಡೆಯರ್‌ ಅವರ ಬಳಿ ಸ್ಥಾಪಿಸಿದರೆ ಒಡೆದು ಹಾಕ್ತೀನಿ ಎಂದೆಲ್ಲ ಒಂದೇ ಉಸ್ರಲ್ಲಿ ಹೇಳ್ತಾ ಇದ್ರು ನೋಡಪಾ’ ಎಂದು ಹೇಳಿದ.
ಸರ್‌ ಬಿರುದನ್ನು ಪಡೆದ, ಭಾರತ ರತ್ನ ಸರ್‌ ಎಂ.ವಿಶ್ವೇಶ್ವರಯ್ಯನವರ ಬಗ್ಗೆ ಮಾತಾಡುತ್ತಿದ್ದಾರೆಂದರೆ, ಅವರು ವಿಶ್ವೇಶ್ವರಯ್ಯನವರಿಗಿಂತಲೂ ದೊಡ್ಡ ಮನುಷ್ಯರೇ ಆಗಿರಬೇಕಲ್ಲವೇ? ಅದಕ್ಕೆ ‘ವಿರೋಧಿಸುತ್ತಿರುವವರ ಹೆಸರೇನು?’ ಎಂದು ಕೇಳಿದೆ. ‘ಅದ್ಯಾರೋ ಗೊತ್ತಿಲ್ಲ ಗುರೂ.. ಒಂದ್‌ ನಾಕೈದ್‌ ಜನ ಬಿಳಿಮಂಡೆಯವರಿದ್ದರು’ ಎಂದು ಫೋನಿಟ್ಟ. ವಿಶ್ವೇಶ್ವರಯ್ಯನವರನ್ನು ವಿರೋಧಿಸುವವರ ಯೋಗ್ಯತೆ ಇಷ್ಟೇ! ಒಬ್ಬ ಆಸಾಮಿಗೂ ಇವರ ಬಗ್ಗೆ ಗೊತ್ತಿಲ್ಲ. ಮಾತಾಡೋದೆಲ್ಲ ದಿವಾನರ ಬಗ್ಗೆ!

ಪುರುಷೋತ್ತಮ್‌ ಎಂಬ ಹೆಸರನ್ನು ನಾನು ಕೇಳಿರಲಿಲ್ಲ, ಸತ್ಯ ಹೇಳಬೇಕೆಂದರೆ, ಗೂಗಲ್‌ನಲ್ಲಿ ಹೊಡೆದರೂ ಯಾವ್ಯಾವನೋ ಪುರುಷೋತ್ತಮ ಬರುತ್ತಿದ್ದಾನೆ ಬಿಟ್ಟರೆ, ಮೈಸೂರಿನ ಪುರುಷೋತ್ತಮ ಇಲ್ಲ. ಕೊನೆಗೆ ಆತ ಏನಾಗಿದ್ದರು ಎಂದು ನೋಡಿದರೆ, ಮಾಜಿ ಮೇಯರ್‌ ಅಂತೆ. ಇದೊಂದೇ ಕಾರಣಕ್ಕೆ ಅವರ ಮುಂದೆ ಮೈಕಿಟ್ಟಿದ್ದು ಎನ್ನುವುದು ಬಿಟ್ಟರೆ, ಅವರ ಹೆಸರಿಗೆ ಜನರನ್ನು ಕರೆದು ಕೂರಿಸುವ ತಾಕತ್ತಿಲ್ಲ ಎಂದು ತಿಳಿಯಿತು.

ಅಲ್ಲದೇ, ವಿಶ್ವೇಶ್ವರಯ್ಯನವರು ಸಂಬಳಕ್ಕಾಗಿ ದುಡಿದ ಒಬ್ಬ ದಿವಾನ ಎನ್ನುವುದು ಬಿಟ್ಟರೆ ಬೇರೆ ಏನೂ ಅವರಿಗೆ ಮಹತ್ವವಿಲ್ಲ ಎನ್ನುವ ಈ ಪುರುಷರಲ್ಲಿ ಉತ್ತಮನಾಗಿರುವ ವ್ಯಕ್ತಿಯೂ ಸದಸ್ಯತ್ವದ ಸಂಬಳ ತೆಗೆದುಕೊಂಡೇ ಏನನ್ನು ಕಿತ್ತು ಗುಡ್ಡೆ ಹಾಕಿದ್ದಾರೆ ಎಂದು ಬೆಟ್ಟ ಬಗೆದರೂ ಸಿಗಲಿಲ್ಲ. ದುರಂತ ಏನೆಂದರೆ, ಯಾರಾರ‍ಯರೋ ಚಲಾವಣೆ ಕಳೆದುಕೊಂಡಿರುವ ಮಾಜಿಗಳೆಲ್ಲ ವಿಶ್ವೇಶ್ವರಯ್ಯನವರನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ವಸ್ತುವಾಗಿಕೊಂಡು ಬಿಟ್ಟರಲ್ಲ ಎನ್ನುವುದು.

ಹಾಗಾಗಿ, ಇತಿಹಾಸ ಓದಿಕೊಳ್ಳದೇ ಮಾಜಿ ಮೇಯರ್‌ ಆಗಿರುವ ಪುರುಷೋತ್ತಮರಿಗೆ ಒಂದಷ್ಟು ಇತಿಹಾಸ ಪಾಠದ ಅವಶ್ಯಕತೆ ಬಹಳವೇ ಇದೆ. ಮಾಜಿ ಮೇಯರ್‌ ಹೇಳ್ತಾರೆ, ವಿಶ್ವೇಶ್ವರಯ್ಯನವರ ಪ್ರತಿಮೆಯನ್ನು ಒಡೆಯರ್‌ ಪ್ರತಿಮೆಯ ಪಕ್ಕದಲ್ಲಿ ಸ್ಥಾಪಿಸುವುದು, ಒಡೆಯರ್‌ಗೆ ಮಾಡುವ ಅಪಮಾನ ಎಂದು. ಇದು ಅಪ್ರಬುದ್ಧ ಪುರುಷೋತ್ತಮರು ಹೇಳುತ್ತಿರುವ ಮೊದಲ ಸುಳ್ಳು.

ಯಾಕೆಂದರೆ, ವಿಶ್ವೇಶ್ವರಯ್ಯನವರನ್ನು ‘ಇವರೇ ಬೇಕು’ ಎಂದು ಕರೆಯಿಸಿಕೊಂಡವರು ಮಹಾರಾಜರೇ! ಮಹಾರಾಜರಿಗೆ ವಿಶ್ವೇಶ್ವರಯ್ಯನವರ ಬಗ್ಗೆ ದಿನ ಅಷ್ಟೇ ಅಲ್ಲ, ಎಷ್ಟೋ ವರ್ಷಗಳಿಂದ ತಿಳಿದಿತ್ತು. ವಿಶ್ವೇಶ್ವರಯ್ಯನವರು ಪ್ರಕಟಿಸುತ್ತಿದ್ದ ಲೇಖನಗಳಿಂದ ಓದುತ್ತಿದ್ದ ಮಹಾರಾಜರು, ಇವರೆಷ್ಟು ಕಾರ್ಯದಕ್ಷರು ಎಂಬುದನ್ನೆಲ್ಲ ಅರ್ಥ ಮಾಡಿಕೊಂಡಿದ್ದರು. ರಾಜ್ಯದ ಆಡಳಿತ ಬಹಳ ಗತಾನುಗತಿಕವಾಗಿ ನಡೆಯುತ್ತಿದೆ, ಹಾಗಾಗಿ ಇದಕ್ಕೊಂದು ಹೊಸತನ ಬೇಕು, ನಮ್ಮ ದೇಶದಲ್ಲಿ ಕೈಗಾರಿಕೆ, ವಾಣಿಜ್ಯಗಳು ಬೆಳೆಯುವ ಕಾಲ ಇದು. ಇಂಥ ಹೊಸತನಕ್ಕೆ ಮೈಸೂರು ಹೊಂದಿಕೊಳ್ಳಬೇಕು ಎಂದೂ, ಅದಕ್ಕೆ ವಿಶ್ವೇಶ್ವರಯ್ಯನವರೇ ಸರಿಯಾದ ವ್ಯಕ್ತಿ ಎಂದು ಗುರುತಿಸಿ ಆಹ್ವಾನಿಸಿದ್ದರು. ಇದು ಒಂದನೇ ಭೇಟಿಯೂ ಅಲ್ಲ, ಹಿಂದೆಯೂ ಎರಡ್ಮೂರು ಬಾರಿ ವಿಶ್ವೇಶ್ವರಯ್ಯನವರನ್ನು ಸ್ವತಃ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರೇ ಕರೆಯಸಿ, ಅವರಲ್ಲಿ ಕೆಲಸ ಮಾಡುವುದಕ್ಕೆ ಕೇಳಿದ್ದರು. ಆದರೆ ಮೈಸೂರಿನಲ್ಲಿ ಇಂಥ ಕಾರ್ಯಾವಕಾಶ ಅಥವಾ ದೇಶದ ಅಭ್ಯುದಯಕ್ಕಾಗಿ ಏನೇನು ಮಾಡಬೇಕೆಂದುಕೊಂಡಿದ್ದರೋ ಅದಕ್ಕೆ ಮೈಸೂರಿನಲ್ಲಿ ಅವಕಾಶ ಇಲ್ಲದ್ದಕ್ಕೆ ಬರಲಿಲ್ಲ. ಸಂಬಳ, ಅಧಿಕಾರದ ಮನ್ನಣೆ, ಅಧಿಕಾರ ವ್ಯಾಪ್ತಿ ಇವೆಲ್ಲವೂ ಅವರು ಬಾಂಬೆಯಲ್ಲಿದ್ದಾಗ ಯಾವ ಕೊರತೆಯೂ ಇರಲಿಲ್ಲ. 1909-10ರಲ್ಲಿ ಇವರ ದಿವಾನ ಸ್ಥಾನ ಅಂಗೀಕಾರವಾಯಿತಾದರೂ, ಬಾಂಬೆಯಲ್ಲಿ ಇವರು ಯಾವ ಮಟ್ಟಕ್ಕೆ ಹೋಗಬೇಕಾಗಿತ್ತೋ ಅದನ್ನು ತಲುಪಿದ್ದರು. ಹೆಸರಲ್ಲೂ, ಸ್ಥಾನದಲ್ಲೂ!
ಇಂಥವರ ಪ್ರತಿಮೆ ನಿರ್ಮಿಸಿದರೆ ಒಡೆಯರ್‌ಗೆ ಮಾಡುವ ಅಪಮಾನ ಎಂದು ಹೇಳುವವನು ನಿಜಕ್ಕೂ ಶತದಡ್ಡ ಎನ್ನುವುದರಲ್ಲಿ ಯಾವುದಾದರೂ ಅನುಮಾನ ಇದೆಯೇ? ಅಯ್ಯಾ ಪುರುಷೋತ್ತಮರೇ, ಅರಮನೆ ಆಸ್ತಿ ದಕ್ಕಲಿಲ್ಲ ಎಂದು ನಂಜು ಕಾರುತ್ತಿರುವ ಕ್ರಿಮಿಗಳನ್ನು ದೂರ ಮಾಡಿದರೆ, ನಿಜವಾದ ವಿಶ್ವೇಶ್ವರಯ್ಯನವರು ಯಾರು ಎಂದು ನಿಮಗೆ ತಿಳಿಯುತ್ತದೆ. ಇಲ್ಲವಾದರೆ, ಇನ್ನೆರಡೇ ಸುದ್ದಿಗೋಷ್ಠಿ ನಂತರ ಪತ್ರಕರ್ತರೂ ನಿಮ್ಮ ಫೋನ್‌ ಎತ್ತುವುದಿಲ್ಲ.

ವಿಶ್ವೇಶ್ವರಯ್ಯನವರು ಸಂಬಳಕ್ಕೆ ದುಡಿದರು ಎಂದಿರಿ ಅಲ್ಲವೇ ಪುರುಷೋತ್ತಮ? ಅದಕ್ಕೂ ಉತ್ತರ ಇದೆ ಕೇಳಿ. ಇವರು ದಿವಾನ್‌ ಆಗುವುದಕ್ಕಿಂತ ಮುಂಚೆ ಇದ್ದಿದ್ದು, ದಿವಾನ್‌ ಕೃಷ್ಣಮೂರ್ತಿಯವರು. ಇವರ ಕಾಲದಲ್ಲಿ ಪಾರ್ಸಿ ಕೈಗಾರಿಕೋದ್ಯಮಿ ಜೆಮ್‌ಶೇಟ್‌ಜಿ ಟಾಟಾ ಅವರು ವಿಜ್ಞಾನ ಸಂಶೋಧನಾ ಸಂಸ್ಥೆಯೊಂದನ್ನು ಸಂಕಲ್ಪಿಸಿದಾಗ ಅದಕ್ಕೆ ಮೈಸೂರು ಸರ್ಕಾರ ಪ್ರೋತ್ಸಾಹ ನೀಡಬೇಕು ಹಾಗೂ ಆ ಸಂಸ್ಥೆಯನ್ನು ಬೆಂಗಳೂರಿಗೆ ಬರಮಾಡಿಕೊಳ್ಳತಕ್ಕದ್ದೆಂದು ವಿಶ್ವೇಶ್ವರಯ್ಯನವರೇ ದಿವಾನ್‌ ಕೃಷ್ಣಮೂರ್ತಿಗಳಿಗೆ ಸಲಹೆ ನೀಡಿದ್ದರು.

ಅಷ್ಟೇ ಅಲ್ಲ, 1902ರಲ್ಲಿ ವಿಶ್ವೇಶ್ವರಯ್ಯನವರು A Vision Of Prosperous Mysore ಎಂಬ ಲಘು ಪುಸ್ತಕವನ್ನು ಪ್ರಿಂಟ್‌ ಮಾಡಿದ್ದರು. ಅದು ಯಾವುದೋ ಎಲೆಕ್ಷನ್‌ಗೆ ವೋಟ್‌ ಮಾಡಿ ಎಂಬ ಪಾಂಪ್ಲೆಟ್‌ ಅಲ್ಲ, ಬದಲಿಗೆ ವಿದ್ಯಾಪ್ರಚಾರದ ಅವಶ್ಯಕತೆ, ವಿದ್ಯಾಕ್ರಮದಲ್ಲಿ ಇರಬೇಕಾದ ವಿವಿಧತೆ, ಕಾರ್ಖಾನೆ ಕೈಗಾರಿಕೆಗಳ ಅವಶ್ಯಕತೆ, ವ್ಯವಸಾಯ ಮಾಡುವವರಿಗೆ ಬೇಕಾಗುವ ಹೊಸ ತಿಳಿವಳಿಕೆ, ಹೊಸ ಹೊಸ ಚಟುವಟಿಕೆಗಳನ್ನೆಲ್ಲ ಬರೆದಿದ್ದರು. ಇಷ್ಟೆಲ್ಲ ಬರೆದಾಗ ಸಹಜವಾಗಿ ಪುರುಷೋತ್ತಮರೇ ಬರೆದರೆ ಏನು ಮಾಡುತ್ತಿದ್ದಿರಿ ಹೇಳಿ? ಯಾರನ್ನೋ ಮನಸಾರೆ ಬಯ್ಯುವುದನ್ನೇ ನೀವು ಖಾಲಿ ಬಯ್ಯಲ್ಲ, ಕೇಬಲ್‌ ಟಿವಿ ಮೈಕ್‌ ಆದರೂ ಬೇಕೇ ಬೇಕು. ಇನ್ನು ಲಘು ಪುಸ್ತಕ ಬರೆದರೆ ಬಿಡ್ತೀರಾ? ನಿಮ್ಮ ಹೆಸರು ಹಾಕಿಕೊಳ್ಳುತ್ತಿದ್ದಿರಿ ಅಲ್ಲವೇ? ಅವರು ನೀವಲ್ಲ. ಹಾಗಾಗಿ ಅವರ ಹೆಸರನ್ನು ಉಲ್ಲೇಖಿಸದೇ, By a Mysorean ಎಂದಷ್ಟೇ ಬರೆದಿದ್ದರು. ಅಯ್ಯಾ, ಪುರುಷೋತ್ತಮ, ದುಡ್ಡಿನ ಆಸೆಗೆ ದಿವಾನ ಆಗುವವನು ಇಂಥ ಕೆಲಸ ಕೆಲಸ ಮಾಡ್ತಾನಾ?

ಹಣಕ್ಕಾಗಿ ಕೆಲಸ ಮಾಡುವವರು ದೇಶಕ್ಕೆ ಗೂಟ ಬಿದ್ದರೂ ಬ್ಯಾಂಕಿಗೆ ಸಂಬಳ ಬಿತ್ತಾ ಎಂದು ನೋಡುವವರೇ ಆಗಿರುತ್ತಾರೆ. ಆದರೆ ವಿಶ್ವೇಶ್ವರಯ್ಯನವರು ಹಾಗಲ್ಲ. ದೇಶದ ಬಗ್ಗೆ ಯಾರಾದರೂ ಕೆಟ್ಟದ್ದನ್ನು ಯೋಚಿಸುವುದು ಬಿಡಿ, ಸ್ವಲ್ಪ ಅಸಹನೆ ಇದ್ದರೂ ಅದನ್ನು ದೂರ ಮಾಡುತ್ತಿದ್ದ ವ್ಯಕ್ತಿ. ಒಮ್ಮೆ ಇವರೇ ದಿವಾನರಾಗಿದ್ದಾಗ, ಮೈಸೂರು ಸರಕಾರಕ್ಕೂ ಕೋಲಾರದ ಚಿನ್ನದ ಗಣಿಯ ಕಂಪನಿಗಳ ಮುಖ್ಯಸ್ಥ ಜಾನ್‌ ಟೇಲರ್‌ ಕಂಪನಿಗೂ ವಿದ್ಯುಚ್ಛಕ್ತಿ ಸರಬರಾಜು ಸಂಬಂಧ ಒಪ್ಪಂದವಿತ್ತು. ಯಾವುದೋ ಒಂದು ಗೊತ್ತು ಮಾಡಿದ ತಾರೀಖಿಗೆ, ಸರಕಾರವು, ಗಣಿಗಳಿಗೆ ಹೆಚ್ಚಿನ ವಿದ್ಯುತ್‌ ಸರಬರಾಜು ಮಾಡಬೇಕಿತ್ತು. ಆದ್ದರಿಂದಲೇ ಕೆಲಸಗಳು ಬೇಗ ಬೇಗ ನಡೆದು ಶಿವನಸಮುದ್ರದಲ್ಲಿ ನೀರಿನ ಪ್ರವಾಹ ಯಥೇಷ್ಟವಾಗಿರುವುದು ಅವಶ್ಯವಾಗಿತ್ತು. ಆದರೆ, ಕೊಡಗಿನ ಕಡೆಯಿಂದ ನೆರೆ ಬಂದು, ಅತಿವೃಷ್ಟಿಯಾಯಿತು. ಪ್ರವಾಹ ಜೋರಾಗುತ್ತಿರುತ್ತದೆ. ಇಂಥ ಸಂದರ್ಭದಲ್ಲಿ ವಿದ್ಯುತ್‌ ಒದಿಗಿಸುವುದು ಹೇಗೆ? ಕಷ್ಟ. ರಾಜರೂ ಇದನ್ನೇ ಹೇಳಿ, ವಿಶ್ವೇಶ್ವರಯ್ಯನವರೇ ಅವಸರಪಡಬೇಡಿ. ಎಲ್ಲ ಸರಿ ಹೋದ ಮೇಲೆ ಕೊಡೋಣ ಎಂದರು.

ಅಷ್ಟೇ ಅಲ್ಲ, ಲಂಡನ್‌ನಿಂದ ಸ್ವತಃ ಜಾನ್‌ ಟೇಲರ್‌ ಕಂಪನಿಯ ಯಜಮಾನನೇ ಟೆಲಿಗ್ರಾಂ ಕಳುಹಿಸಿ, ನಮಗೆ ಪರಿಸ್ಥಿತಿ ಅರ್ಥವಾಗಿದೆ. ಇದಕ್ಕೆ ಸರಕಾರ ಹೊಣೆಯಲ್ಲ. ಒಪ್ಪಂದವನ್ನು ಇನ್ನೊಂದು ತಾರೀಖಿಗೆ ಮುಂದೂಡಿದರಾಯಿತು ಎಂದರು. ವಿಶ್ವೇಶ್ವರಯ್ಯ ಕೇಳ್ತಾರಾ? ನೋ ವೇ! ಚಾನ್ಸೇ ಇಲ್ಲ ಎನ್ನುತ್ತಾ ವಿಶ್ವೇಶ್ವರಯ್ಯ ಹೇಳಿದ್ದೇನು ಗೊತ್ತಾ? ಅಯ್ಯಾ ಪುರುಷೋತ್ತಮ, ಇದನ್ನೆಲ್ಲ ನಾವು ಬಂಗಾರದಲ್ಲಿ ಬರೆಸಿ ತಾಯತ ಹಾಕಿಟ್ಟುಕೊಳ್ಳಬೇಕು. ಅವರು ಹೇಳ್ತಾರೆ, ‘ನಮ್ಮ ದೇಶದ ಜನ ಒಂದು ನಿಶ್ಚಯ ಮಾಡಿದರೆಂದರೆ, ಅದ ನಡೆದೇ ನಡೆಯಬೇಕು. ನಾವು ಮಾತಿಗೆ ತಪ್ಪಬಾರದು’ ಎಂದು ಹಠ ಹಿಡಿದರು. ಆಗಿನ ಡಿಸಿ ಹಾಗೂ ಇತರ ಮಖ್ಯಸ್ಥರಿಗೆ ಆದೇಶ ಹೊರಡಿಸಿದರು. ಏನಂತ? ಮೈಸೂರು ಮತ್ತು ಇತರ ಕಡೆ ಸಿಕ್ಕುವ ಎಲ್ಲ ಕೂಲಿಗಳನ್ನು ಸೇರಿಸಬೇಕು. ಹತ್ತಿಪ್ಪತ್ತು ಸಾವಿರ ಗೋಣಿಚೀಲಗಳನ್ನು ತಂದು, ಅದರಲ್ಲಿ ಮರಳು ತುಂಬಿಸಬೇಕು. ಈ ಚೀಲಗಳನ್ನು ನದಿಯ ಎರಡೂ ಪಾಶ್ರ್ವಗಳಲ್ಲಿಯೂ ಕೃತಕ ದಡವನ್ನಾಗಿ ಕಟ್ಟಬೇಕು. ಅಷ್ಟೂ ಸಿಬ್ಬಂದಿಗೆ ಊಟದ ವ್ಯವಸ್ಥೆಯಾಗಬೇಕು. ಒಂದು ಸಾವಿರ ಕಿಟ್ಸನ್‌ ಲ್ಯಾಂಪುಗಳನ್ನು ರಾತ್ರಿ ಉರಿಸಿ ಕೆಲಸ ನಡೆಸಬೇಕು. ಹೀಗೆ ಹಗಲು ರಾತ್ರಿಯೂ ಕೆಲಸ ಆಗಬೇಕು. ಅವರು ಹೇಳಿದಂತೇ ಆಯಿತು.

ಅಯ್ಯಾ ಪುರುಷೋತ್ತಮ, ನೀವಾಗಿದ್ರೆ ಆದೇಶ ಕೊಟ್ಟು ಮನೆಗೆ ಹೋಗ್ತಿದ್ರಿ ಅಲ್ವೇ? ವಿಶ್ವೇಶ್ವರಯ್ಯ ಹಾಗೆ ಮಾಡ್ಲಿಲ್ಲ. ಯಾಕಂದ್ರೆ ಸಂಬಳಕ್ಕಾಗಿ ಅವರು ಬಂದವರಲ್ಲ ನೋಡಿ, ಕನ್ನಂಬಾಡಿಯಲ್ಲೇ ರಾತ್ರಿ ತಂಗುತ್ತಿದ್ದರು. ಬೆಳಗ್ಗೆ 9-10 ವೇಳೆಗೆ ಮೈಸೂರಿಗೆ ಬಂದು, ತಮ್ಮ ಕೆಲಸ ನೋಡುತ್ತಿದ್ದರು, ಮಧ್ಯಾಹ್ನದಿಂದ ಸಂಜೆ ಐದಾರು ಗಂಟೆಯವರೆಗೆ ಪ್ರಜಾಪ್ರತಿನಿಧಿ ಸಭೆ. ಅದಾದ ಮೇಲೆ ರಾತ್ರಿ ಕನ್ನಂಬಾಡಿಗೆ. ಇಷ್ಟೇ ಅಲ್ಲದೇ, ಮೈಸೂರು ಪಟ್ಟಣದಲ್ಲಿದ್ದಾಗ ಡ್ಯಾಂ ಬಗ್ಗೆ ಅರ್ಧರ್ಧ ಗಂಟೆಗೆ ಟೆಲಿಗ್ರಾಂ ಬರುತ್ತಿತ್ತು.

ಇದರ ಪರಿಣಾಮ ಏನು ಗೊತ್ತೇನು? ಮೊದಲೇ ಒಪ್ಪಂದದಂತೆ ಗೊತ್ತಾದ ದಿನದಂದು, ಚಿನ್ನದ ಗಣಿಗೆ ಹೆಚ್ಚಿನ ವಿದ್ಯುತ್‌ ನೀಡಲಾಯಿತು. ಆಗ ಮಹಾರಾಜರು ಖುಷಿ ಪಟ್ಟಿದ್ದನ್ನು ಡಿವಿಜಿಯವರ ಜ್ಞಾಪಕ ಚಿತ್ರಶಾಲೆಯಲ್ಲಿ ಬರೆದಾಗ ಓದುವಾಗ ನನಗೆ ಮೈರೋಮಗಳೆಲ್ಲ ಎದ್ದು ನಿಲ್ಲುತ್ತಿತ್ತು ಗೊತ್ತಾ ಪುರುಷೋತ್ತಮ? ಪುಸ್ತಕದಲ್ಲಿರುವುದನ್ನೇ ನಿಮಗೆ ಯಥಾವತ್ತು ಪಾಠ ಮಾಡುತ್ತಿದ್ದೇನೆ ಅಷ್ಟೇ. ರಾಜರು ಕಂಡಕಂಡವರೊಡನೆಯೆಲ್ಲ ಈ ಸಾಧನೆಯನ್ನು ಹೇಳಿಕೊಳ್ಳುತ್ತಿದ್ದರಂತೆ ಗೊತ್ತಾ? ಇಂಥವರ ಪ್ರತಿಮೆಯನ್ನು ಒಡೆಯರ ಪಕ್ಕದಲ್ಲಿ ಸ್ಥಾಪಿಸಿದರೆ, ಒಡೆಯರಿಗೆ ಮಾಡುವ ಅಪಮಾನವೇ? ಪುರುಷೋತ್ತಮ ನಿಮಗೆ ಆರೋಗ್ಯ ಚೆನ್ನಾಗಿದೆ ತಾನೆ? ಕೋವಿಡ್‌ ಟೆಸ್ಟ್‌ ಮಾಡಿಸಿದ್ದೀರಾ?

ಸ್ವಾಮಿ, ಡಿವಿಜಿ ಹತ್ರ ಒಮ್ಮೆ ವಿಶ್ವೇಶ್ವರಯ್ಯನವರು ಮಾತಾಡುತ್ತ ಹೇಳುತ್ತಾರಂತೆ, ‘ನಾನು ಐದು ವರ್ಷವಾದರೂ ಇಲ್ಲಿದ್ದು ನನ್ನ ಕೈಯಲ್ಲಾದ ಕೆಲಸ ಮಾಡಲು ಅನುಕೂಲಿಸಿದ್ದು ಯಾವುದರಿಂದ ಗೊತ್ತೇ? ನನ್ನ ಜೇಬಿನಲ್ಲಿ ಯಾವಾಗಲೂ ರಾಜೀನಾಮೆ ಚೀಟಿ ಸಿದ್ಧವಾಗಿಟ್ಟುಕೊಂಡಿದ್ದರಿಂದ. ನನ್ನ ತತ್ತ್ವಕ್ಕೆ ಭಂಗ ಬರುವುದಾದರೆ ನಾನು ಸ್ಥಳ ಬಿಟ್ಟು ಹೊರಡಲು ಸಿದ್ಧ, ಇದನ್ನು ನಾನು ಶ್ರೀಮನ್ಮಹಾರಾಜರಿಗೆ ಸ್ಪಷ್ಟಪಡಿಸಿದ್ದೆ’ ಎಂದು ವಿಶ್ವೇಶ್ವರಯ್ಯನವರೇ ಹೇಳಿಕೊಂಡಿದ್ದಾರೆ. ಇಂಥ ಬಂಗಾರವನ್ನು ಸಂಬಳಕ್ಕಾಗಿ ದುಡಿದರು ಎಂದ ನಿಮ್ಮನ್ನು ಪ್ರತಿಕ್ಷಣ ನೋಡುವಾಗಲೂ ನನಗನಿಸಿದ್ದು, ನೀವ್ಯಾಕೆ ವೈದ್ಯರ ಬಳಿ ಇನ್ನೂ ಹೋಗಿ ಚೆಕ್‌ ಮಾಡಿಸಿಲ್ಲ ಎಂದು.

ಇನ್ನು ಸರ್‌ ಮಿರ್ಜಾ ಇಸ್ಮಾಯಿಲ್‌ ಬಹಳ ಸಾಧನೆ ಮಾಡಿದ್ದರೂ ಅವರ ಹೆಸರು ಯಾಕೆ ಬರಲಿಲ್ಲ ಎಂದು ಹಿಂದೂ-ಬ್ರಾಹ್ಮಣ-ಮುಸ್ಲಿಂ ಎಂಬುದನ್ನೆಲ್ಲ ಥಳಕು ಹಾಕುವುದಕ್ಕೆ ತಾವೇನಾದರೂ ಹೊರಟಿದ್ದರೆ ಅದು ಬಹಳ ನೀಚ ಆಲೋಚನೆ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಿ. ಯಾಕೆ ಗೊತ್ತಾ ಮಿರ್ಜಾ ಸಾಹೇಬರು ಸಹ ಅಷ್ಟೇ ಪ್ರಬಲ ದಿವಾನರಾಗಿದ್ದವರು. ನಮ್ಮ ಹೆಮ್ಮೆಯ ಮೈಸೂರಿನ ಪುಣ್ಯವೋ, ತಾಯಿ ಚಾಮುಂಡಿಯ ಆಶೀರ್ವಾದವೋ ಮೈಸೂರಿನ ಎಲ್ಲ ದಿವಾನರೂ ರತ್ನಗಳೇ! ವಿಶ್ವೇಶ್ವರಯ್ಯನವರ ಬಗ್ಗೆಯೇ ಓದದ ನೀವು, ಮಿರ್ಜಾ ಸಾಹೇಬರ ಬಗ್ಗೆಯೂ ಓದಿರಲಿಕ್ಕಿಲ್ಲ. ಒಂದು ಪ್ರಸಂಗ ಹೇಳ್ತೀನಿ ಕೇಳಿ.

ಮಿರ್ಜಾ ಸಾಹೇಬರ ಕಾಲದಲ್ಲಿ ಸುಲ್ತಾನ್‌ ಪೇಟೆಯಲ್ಲಿ ಒಂದು ಗಣಪತಿ ಗಲಭೆ ಆಗುತ್ತದೆ. ಆಗ ಹಿಂದೂ-ಮುಸ್ಲಿಂ ಗಲಾಟೆಯಲ್ಲಿ ಮಿರ್ಜಾ ಸಾಹೇಬರ ವಿರುದ್ಧ ರಿಪೋರ್ಟ್‌ ಕೊಟ್ಟಿದ್ದು ವಿಶ್ವೇಶ್ವರಯ್ಯನವರು. ಒಮ್ಮೆ ಸಹಜವಾಗಿ ಮಿರ್ಜಾ ಸಾಹೇಬರ ಮನೆಗೆ ವಿಶ್ವೇಶ್ವರಯ್ಯನವರು ಬಂದಾಗ ಒಂದು ಅಚ್ಚರಿ ಕಾದಿತ್ತು. ಸಾಹೇಬರ ಗೋಡೆ ಮೇಲೆ ಇದ್ದದ್ದೇ ಮೂರು ಫೋಟೋ. 1. ತಂದೆ ಆಗಾಜಾನ್‌ರವರದ್ದು 2. ನಾಲ್ವಡಿ ಕೃಷ್ಣದೇವರಾಯರ ಗ್ರೂಪ್‌ ಫೋಟೋ 3. ವಿಶ್ವೇಶ್ವರಯ್ಯನವರದ್ದು. ತಮ್ಮದೇ ಫೋಟೋ ಗೋಡೆ ಮೇಲೆ ನೇತಾಡುತ್ತಿದ್ದಿದ್ದನ್ನು ಕಂಡ ವಿಶ್ವೇಶ್ವರಯ್ಯನವರು ‘ಇದನ್ನು ತೆಗೆದು ಬಿಡಿ, ನಾನು ನಿಮ್ಮ ವಿರುದ್ಧ ರಿಪೋರ್ಟ್‌ ನೀಡಿದ್ದೇನೆ’ ಎಂದಾಗ ಮಿರ್ಜಾ ಸಾಹೇಬರು ಹೇಳ್ತಾರೆ, ‘ನಿಮ್ಮನ್ನು ನನ್ನ ತಂದೆಯ ಸ್ಥಾನದಲ್ಲಿರಿಸಿದ್ದೇನೆ. ತಂದೆಯ ಸ್ಥಾನ ಜೀವನದಲ್ಲಿ ಹೇಗೆ ಕಾಯಂ ಆದದ್ದೋ ನಿಮ್ಮ ಸ್ಥಾನವೂ ಅಷ್ಟೇ’ ಎಂದು ದೊಡ್ಡತನ ಮೆರೆದಿದ್ದರು. ಕೆಲ ವರ್ಷಗಳ ನಂತರ, ಮಿರ್ಜಾ ಸಾಹೇಬರು ‘ನನ್ನ ಜೊತೆಗೆ ಹಿತಚಿಂತಕರಂತೆ ಇದ್ದ ಮಂದಿಯಿಂದ ಗಲಭೆಯಲ್ಲಿ ಕೆಟ್ಟ ನಿರ್ಧಾರ ತೆಗೆದುಕೊಂಡೆ ಎಂದು ಪಶ್ಚಾತ್ತಾಪಪಟ್ಟಿದ್ದರು. ಅಯ್ಯಾ ಪುರುಷೋತ್ತಮ, ಇದು ಸ್ವಾಮಿ ಮಿರ್ಜಾ ಇಸ್ಮಾಯಿಲ್‌ ಸಾಹೇಬರ ದೊಡ್ಡತನ. ಇದೇ ಕಾರಣಕ್ಕೆ ನಾನು ಇವರನ್ನು ಸಾಹೇಬರು ಎಂದು ಉಲ್ಲೇಖಿಸುತ್ತಿರುವುದು.

ಹಾಗಾಗಿ, ಮಿರ್ಜಾ ಸಾಹೇಬರ ಹೆಸರಲ್ಲಿ, ವಿಶ್ವೇಶ್ವರಯ್ಯನವರ ಹೆಸರಲ್ಲಿ ರಾಜಕೀಯ ಮಾಡುವುದಕ್ಕೆ ಹೋಗದೇ, ಬೇರೆ ಅಭಿವೃದ್ಧಿ ಕೆಲಸಗಳಲ್ಲಾದರೂ ತೊಡಗಿಸಿಕೊಂಡರೆ ಮುಂದಿನ ಬಾರಿ ಟಿಕೆಟ್‌ ಸಿಗಬಹುದು. ಇಂಥದ್ದೆಲ್ಲ ಮಾಡಿದರೆ, ಬರುವ ಓಟೂ ಕಿತ್ತು ಹೋಗುತ್ತದೆ. ಏಕೆಂದರೆ ಮಂಡ್ಯದ ಎಷ್ಟೋ ಜನರ ಮನೆಯ ದೇವರ ಕೋಣೆಯಲ್ಲಿ ವಿಶ್ವೇಶ್ವರಯ್ಯನವರಿದ್ದಾರೆ. ಇಂಥವರ ಬಗ್ಗೆ ಮಾತಾಡುವ ಮಟ್ಟಕ್ಕಾದರೂ ಏರಲು ಶ್ರಮಿಸಿ ಸ್ವಾಮಿ. ಈ ಜನ್ಮದಲ್ಲೇ ಅವರಷ್ಟು ಸಾಧನೆ ಮಾಡಿ, ಇನ್ನೂ ಉಸಿರು ಮಿಕ್ಕಿದ್ದರೆ, ವಿರೋಧಿಸುವಿರಂತೆ.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya