ಕೊರೊನಾಗೆ ಅಸ್ಪೃಶ್ಯತೆಯೇ ಮದ್ದು ಎನ್ನುವವರೇ, ಬನ್ನಿ ಈಗ!

ಒಂದು 15 ವರ್ಷಗಳ ಹಿಂದಿನ ಮಾತು. ನಾನು ಯಾರ ತಟ್ಟೆಯಲ್ಲಿದ್ದ ಚಪಾತಿ, ರೊಟ್ಟಿ ಇತ್ಯಾದಿಗಳನ್ನು ತಿನ್ನುತ್ತಿರಲಿಲ್ಲ. ಅಯ್ಯೋ ಅದು ಎಂಜಲು ಎಂದು. ನನ್ನದನ್ನೂ ಯಾರಿಗೂ ಕೊಡುತ್ತಿರಲಿಲ್ಲ. ಅಷ್ಟೇ ಏಕೆ, ಕಂಡ ಕಂಡವರನ್ನೆಲ್ಲ ಮುಟ್ಟಿಸಿಕೊಳ್ಳುತ್ತಲೂ ಇರಲಿಲ್ಲ. ಅಫ್ಕೋರ್ಸ್‌, ಎಲ್ಲವೂ ನಮ್ಮ ಹಿರಿಯರಿಂದಲೇ ಬಂದ ಪಾಠ. ನಮ್ಮ ಸಂಬಂಧಿಕರನ್ನು ಹೊರತುಪಡಿಸಿ, ಯಾರ ಜತೆಯೂ ಮುಟ್ಟಿ ಮಾತಾಡಿದ್ದೇ ಇಲ್ಲ. ಎಲ್ಲವೂ ದೂರದಲ್ಲೇ ವ್ಯವಹಾರ. ಇದನ್ನು ನೋಡಿ ನನ್ನ ಅನೇಕ ಸ್ನೇಹಿತರು ನನ್ನ ಜತೆ ಮಾತಾಡುವುದನ್ನು ನಿಲ್ಲಿಸಿದರು. ಅಷ್ಟೇ ಅಲ್ಲ, ನನ್ನನ್ನು ಬ್ರಾಹ್ಮಣವಾದಿ, ಅಸ್ಪೃಶ್ಯತೆಯನ್ನು ಇನ್ನೂ ಪಾಲಿಸುತ್ತಿದ್ದಾನೆ ಎಂದು ಎಲ್ಲರೂ ನನ್ನಿಂದ ದೂರ ಆದರು. ನಾನು ಎಲ್ಲರಂತೆಯೇ ಮನುಷ್ಯ, ಸಂಘಜೀವಿ. ಹಾಗಾಗಿ, ಹಿರಿಯರ ಮುಂದೆ ಮಾತ್ರ ಎಂಜಲು, ಮುಸುರೆ ಇತ್ಯಾದಿಗಳನ್ನು ಪಾಲಿಸಿಕೊಂಡು, ಸ್ನೇಹಿತರ ಜತೆ ಬಂದಾಗ ಎಲ್ಲರೊಳಗೊಂದಾಗೊ ಮಂಕುತಿಮ್ಮ ಎಂಬಂತೆ ಅವರಂತೆಯೇ ಇದ್ದು ಬಿಡುತ್ತಿದ್ದೆ. ಎಲ್ಲರನ್ನೂ ಮುಟ್ಟಿ, ತಬ್ಬಿಕೊಂಡೇ ಸ್ವಾಗತ ಹೇಳುವುದು, ಅವರ ತಟ್ಟೆಯಲ್ಲಿ ನನ್ನ ಕೈ, ನನ್ನ ತಟ್ಟೆಯಲ್ಲಿ ಅವರ ಕೈ ಇವೆಲ್ಲ ಕಾಮನ್‌ ಆಗಿಬಿಟ್ಟವು.

ಪ್ರಸ್ತುತಕ್ಕೆ ಬರೋಣ. ವಿಶ್ವದೆಲ್ಲೆಡೆ ಕೊರೊನಾ ವೈರಸ್‌ ಎಂಬ ಸೋಂಕು ಹಬ್ಬಿದೆ. ಇದೆಂಥ ಸೋಂಕು ಎಂದರೆ, ಒಮ್ಮೆ ವಕ್ಕರಿಸಿದರೆ ಅದಕ್ಕೆ ಮದ್ದು ಎಂಬುದು ಸಧ್ಯಕ್ಕಂತೂ ಇಲ್ಲ. ಇಸ್ರೇಲ್‌ ಆದೇನೋ ಕಂಡು ಹಿಡಿದಿದ್ದೇವೆ ಎಂದು ಹೇಳಿದ್ದಾರೆ ಆದರೆ, ಅದು ಮಾರುಕಟ್ಟೆಗೆ ಬರುವಷ್ಟರಲ್ಲಿ ಇನ್ನೆಷ್ಟು ಮರಣಗಳು ಸಂಭವಿಸಬೇಕೋ ಗೊತ್ತಿಲ್ಲ. ಆದರೆ, ಸಡನ್‌ ಆಗಿ ಎಲ್ಲರೂ ಬ್ರಾಹ್ಮಣರೋ, ಪುರೋಹಿತಶಾಹಿಗಳೋ, ಹಿಂದೂವಾದಿಗಳೋ ಆಗಿಬಿಟ್ಟಿದ್ದಾರೆ. ಮೊನ್ನೆಯಷ್ಟೇ ಇಸ್ರೇಲಿನ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸಹ ಸುದ್ದಿಗೋಷ್ಠಿ ನಡೆಸಿ, ನಾವೆಲ್ಲರೂ ಒಬ್ಬರನ್ನೊಬ್ಬರು ಮುಟ್ಟಿ ಶೇಕ್‌ಹ್ಯಾಂಡ್‌ ಮಾಡುವುದನ್ನು ನಿಲ್ಲಿಸಿ, ಭಾರತೀಯ ಸಂಸ್ಕೃತಿಯಾದ, ನಮಸ್ತೆ ಎಂದು ಹೇಳಿ ಆತ್ಮೀಯರನ್ನು ಸ್ವಾಗತಿಸೋಣ. ಇಲ್ಲವಾದಲ್ಲಿ ಕೈ ನಮಸ್ಕಾರ ರೂಪದಲ್ಲಿ ಎರಡೂ ಕೈ ಜೋಡಿಸಿ, ಶಲೋಮ್‌ ಎಂದು ಹೇಳೋಣ ಎಂದು ಕರೆ ನೀಡಿದ್ದಾರೆ. ಇದಾದ ಮೇಲೆ ಸಂಸತ್ತಿನ ಹೊರಗೂ ರಾಜಕಾರಣಿಗಳು ಹ್ಯಾಂಡ್‌ ಸ್ಯಾನಿಟೈಸರ್‌ನಲ್ಲಿ ಕೈ ತೊಳೆದುಕೊಂಡು ಶೇಕ್‌ ಹ್ಯಾಂಡ್‌ ಮಾಡಿದ್ದು, ನಮಸ್ಕಾರ ಮಾಡಿದ್ದು ಕಂಡೆವು.
ಈಗ ಯಾರೂ ಅಸ್ಪೃಶ್ಯತೆಯನ್ನು ಅನುಸರಿಸಿದಂತಲ್ಲವೇ? ಇದೇ 15 ವರ್ಷಗಳ ಹಿಂದೆ ನನ್ನನ್ನು ಸೇರಿದಂತೆ ನಮ್ಮ ಭಾರತೀಯ ಸಂಪ್ರದಾಯ, ನಮ್ಮ ಬ್ರಾಹ್ಮಣರ ಮನೆಯಲ್ಲಿ ಪಾಲಿಸುತ್ತಿದ್ದ ಆಚಾರಗಳನ್ನು ಪಾಲಿಸಿದ್ದಕ್ಕೆ ದೂರ ತಳ್ಳಿದ ಅದೇ ಜನರು ಈಗ ಅದೇ ಅಸ್ಪೃಶ್ಯತೆಯನ್ನು ಅನುಸರಿಸುತ್ತಿದ್ದಾರಲ್ಲವೇ ಎಂದಾಗ, ನಾವೇಕೆ ಇಂಥ ಆಚಾರವನ್ನು ಪಾಲಿಸುತ್ತಿದ್ದೇವೆ ಎಂಬ ನನ್ನ ಅವತ್ತಿನ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ಅದು ಅಸ್ಪೃಶ್ಯತೆಯಲ್ಲ, ಬದಲಿಗೆ ನಮ್ಮ ಸುರಕ್ಷತೆಗೆ ನಾವೇ ಕಂಡುಕೊಂಡ ಮಾರ್ಗಗಳು ಎಂದು. ಯಾವನೋ ಬ್ರಾಹ್ಮಣನನ್ನು ಕಂಡರೆ ಆಗದಂತೆ ಬಿಳಿಮಂಡೆಯರು ಇದನ್ನು ಅಸ್ಪೃಶ್ಯತೆಯೆಂದು ಹೆಸರು ಕೊಟ್ಟು ಭಾರತದ ಇನ್ನಿತರ ಆಚಾರ ವಿಚಾರಗಳನ್ನು ಕಸಕ್ಕೆ ಸಮ ಎಂದು ಸಾರುವ ದರಿದ್ರ ಅಜೆಂಡಾಗಳಿಂದಲೇ ಭಾರತ ಇವತ್ತು ಯಾವ್ಯಾವುದೋ ರೋಗಗಳನ್ನು ಕಾಣಬೇಕಾಗಿದೆ.

ನಮ್ಮ ಭಾರತೀಯ ಸಂಸ್ಕೃತಿಯೇನು ಕಡಿಮೆಯದ್ದಾ? ಕಡಿಮೆ ಕಟ್ಟುಪಾಡುಗಳಿವೆಯಾ? ಊಟ ಮಾಡುವಾಗ ಎಲೆಯ ಸುತ್ತ ನೀರು ಪ್ರೋಕ್ಷಿಸುವುದು, ಹೆಣ ನೋಡಿಕೊಂಡು ಬಂದ ಮೇಲೆ ಸ್ನಾನ ಮಾಡಬೇಕು, ಬ್ರಾಹ್ಮಣರಾದರೆ ಜನಿವಾರ ಬದಲಾಯಿಸಬೇಕು, ಶ್ರಾವಣ ಮಾಸದಲ್ಲಿ ಮಾಂಸ ತಿನ್ನಬಾರದು, ಗ್ರಹಣದ ವೇಳೆ ತಿನ್ನಬಾರದು, ತಿರುಗಬಾರದು, ಮಡಿಯಲ್ಲಿ ಅಡುಗೆ ಮಾಡುವ ಪದ್ಧತಿ, ಮನೆಯ ಮುಂದೆ ಅಥವಾ ಗಾಡಿಗೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ದಾರಕ್ಕೆ ಪೋಣಿಸಿ ಕಟ್ಟುವುದು, ಏಕಾದಶಿ ಉಪವಾಸ, ಹಣೆಗೆ-ಮೈಗೆ ಭಸ್ಮ ಹಚ್ಚಿಕೊಳ್ಳುವುದು, ಬೇರೆಯವರ ಎಂಜಲು ಬಟ್ಟಲಿಗೆ ಕೈ ಹಾಕದಿರುವುದು ಹೀಗೇ ಹೇಳುತ್ತಾ ಹೋದರೆ ಸಾವಿರಾರಿವೆ.

ಇವೆಲ್ಲ ಆಚಾರಗಳನ್ನು ಆಗಿನ ಕಾಲದಲ್ಲಿ ಕರೆಂಟಿಲ್ಲದಿರುವಾಗ, ಸೀರಿಯಲ್ಲು, ಸಿನಿಮಾಗಳು ಇಲ್ಲದಿರುವಾಗ ಸುಮ್ನನೆ ಟೈಮ್‌ ಪಾಸ್‌ಗೆಂದು ಹಿರಿಯರು ಮಾಡಿಟ್ಟಿದ್ದಲ್ಲ. ಬದಲಿಗೆ ಎಲ್ಲದಕ್ಕೂ ವೈಜ್ಞಾನಿಕ ಕಾರಣಗಳಿದ್ದವು. ಆಗೆಲ್ಲ ಬ್ಯಾಕ್ಟೀರಿಯಾ, ಫಂಗಸ್ಸು ಎಂದರೆ ಪಕಪಕ ನಗುತ್ತಿದ್ದರು ಎಂಬ ಕಾರಣಕ್ಕೆ ಯಾವುದನ್ನೂ ಹೇಳದೇ ಆಚಾರ, ದೇವರು, ಧರ್ಮ ಎಂಬ ಟ್ರಂಕಿನೊಳಗೆ ಹಾಕಿಟ್ಟು ಹೋದರು. ಈಗ ಅದನ್ನೆಲ್ಲ ಅಗೆದು ಅಗೆದು ತೆಗೆದಾದಾಗ ಒಂದೊಂದು ಅರ್ಥವಾದರೆ ಇನ್ನು ಅನೇಕವನ್ನು ಪ್ರಕೃತಿಯೇ ನಮಗೆ ಕಲಿಸುತ್ತಿದೆ.

ನೀವೇ ಹೇಳಿ ನಾವ್ಯಾಕೆ ಶೇಕ್‌ಹ್ಯಾಂಡ್‌ ಮಾಡಲಿಲ್ಲ? ನಮಸ್ಕಾರ ಏಕೆ ಮಾಡಿದೆವು? ಇದನ್ನು ನಮ್ಮ ದೇಶದಲ್ಲಿ ಯಾವಾಗಿನಿಂದಲೋ ಹೇಳಿಕೊಂಡು ಬಂದಿದ್ದಾರೆ. ನಮ್ಮ ದೇಶದಲ್ಲಿ ಇದನ್ನೆಲ್ಲ ಎಷ್ಟು ಪಾಲಿಸಿಕೊಂಡು ಬಂದಿದ್ದಾರೆಂದರೆ, ನಮಸ್ಕಾರ ಎಂಬುದು ಭಾರತೀಯ ಸಂಸ್ಕೃತಿಯೇ ಆಗಿಹೋಗಿದೆ. ಈಗ ಇದೇ ನಮಸ್ಕಾರಕ್ಕೆ ಈಗ ವಿಶ್ವದೆಲ್ಲೆಡೆ ಬೇಡಿಕೆ ಬಂದುಬಿಟ್ಟಿದೆ. ನಾವು ಶೇಕ್‌ಹ್ಯಾಂಡ್‌ ಮಾಡುವ ಬದಲು ನಮಸ್ಕಾರ ಮಾಡಿದರೆ ನಮ್ಮನ್ನು ಅತ್ಯಂತ ಹಿಂದುಳಿದವರು ಎಂದೇ ಪರಿಗಣಿಸುತ್ತಿದ್ದ ಜನ, ಇವತ್ತು ನಮಸ್ಕಾರ ಮಾಡಿದರೆ, ಕೊರೊನಾ ವೈರಸ್‌ನಿಂದ ಪಾರಾಗುವ ಹೊಸ ಐಡಿಯಾ ಪಾಲಿಸುತ್ತಾ ಹೇಗೆ ಅಪ್‌ಡೇಟ್‌ ಆಗಿದ್ದಾನೆ ನೋಡು ಎಂದು ಹೇಳುತ್ತಾರೆ. ನಮಸ್ಕಾರದ ಪಾಠವನ್ನು ಈ ಕೊರೊನಾ ವಿಶ್ವಕ್ಕೇ ಕಲಿಸುತ್ತಿದೆ.

ಹಾಗಾದರೆ ನಮಸ್ಕಾರ ಮಾಡಿದರೆ ಏನಾಗುತ್ತದೆ? ಯಾವುದೇ ರೋಗ ರುಜಿನಗಳು ಬರುವುದಿಲ್ಲ ಎಂಬುದು ಒಂದು ಅಂಶವಾದರೆ, ಇನ್ನೊಂದು – ನಮ್ಮ ಹತ್ತೂ ಬೆರಳುಗಳುಗಳ ತುದಿಗಳು ಒಂದಕ್ಕೊಂದು ತಾಕಿದಾಗ ಅದರ ಮೇಲೆ ಒತ್ತಡ ಬೀಳುತ್ತದೆ. ಅಲ್ಲಿಂದ ಎಲ್ಲ ನರಗಳು ಕಣ್ಣು, ಕಿವಿ, ಮೂಗು, ಮೆದುಳುಗಳಿಗೆ ಕನೆಕ್ಟ್ ಆಗಿರುವುದರಿಂದ, ನಾವು ಯಾರನ್ನು ಮಾತನಾಡಿಸುತ್ತೇವೆಯೋ ಅವರನ್ನು ಸದಾ ನೆನಪು ಮರೆಯದಂತಾಗುತ್ತದೆ. ಇದನ್ನೆಲ್ಲ ಹೇಳಿದ್ದರೆ ಆಗಿನ ಜನರಿಗೆ ಅರ್ಥವಾಗಲಿಕ್ಕಿಲ್ಲ ಎಂಬ ಕಾರಣಕ್ಕೆ ನಮಸ್ಕಾರ ಎಂಬುದು ಸಂಸ್ಕೃತಿ ಎಂದುಬಿಟ್ಟರು.

ಸ್ವಲ್ಪ ಮಾಂಸಾಹಾರಿಗಳ ಬಗ್ಗೆಯೂ ನೋಡೋಣ, ನನ್ನ ಮಾಂಸಾಹಾರಿ ಸ್ನೇಹಿತರು ಬಾಯಲ್ಲಿ ನೀರು ಸುರಿಸಿಕೊಂಡಾದರೂ, ಯೂಟ್ಯೂಬ್‌ನಲ್ಲಿ ಮಟನ್‌ ಮಾಡುವ ವಿಡಿಯೊ ನೋಡಿಕೊಂಡಾದರೂ ಶ್ರಾವಣ ಮಾಸದಲ್ಲಿ ಮಾಂಸ ಬಿಟ್ಟಿರುತ್ತಾರೆ. ಯಾಕೆ ಎಂದು ಕೇಳಿದಾಗ ಶ್ರಾವಣ ಮಾಸ ದೇವ್ರಿಗೆ ಅಂದಿದ್ರು ಅಮ್ಮ ಎಂದು ಮೂತಿ ಮುರಿದಿದ್ದರು. ಆದರೆ, ಅಸಲಿ ಕಾರಣ ಅವರಿಗೂ ಗೊತ್ತಿರಲಿಲ್ಲ. ನಿಜವಾಗಿ ನಾವು ಶ್ರಾವಣ ಮಾಸದಲ್ಲಿ ತಿಂದ ಆಹಾರಗಳು ಸುಲಭವಾಗಿ ಜೀರ್ಣವಾಗುವುದಿಲ್ಲ. ಶ್ರಾವಣ ಮಾಸದಲ್ಲಿ ಮಳೆ ಜೋರಾಗೇ ಇರುತ್ತದೆ. ಚಳಿ ಮತ್ತು ಬೇಸಿಗೆಗಿಂತ ಮಳೆಗಾಲದಲ್ಲಿ ಪಚನಕ್ರಿಯೆ ಕಡಿಮೆ. ಇದೇ ಕಾರಣಕ್ಕೆ ನಮಗೆ ಆಗ ಹೆಚ್ಚೆಚ್ಚು ಕಾಯಿಲೆಗಳೂ ಕಾಣಿಸಿಕೊಳ್ಳುವುದು. ಆಗೆಲ್ಲ ಕೃಷಿ ಮಾಡುವವರೇ ಹೆಚ್ಚಾಗಿದ್ದಿದ್ದರಿಂದ ಮನೆಯಿಂದ ಹೊರಗೆ ಹೋಗಿ ಮೈ ಬಗ್ಗಿಸಿ ಕೆಲಸ ಮಾಡುವುದೂ ಕಡಿಮೆಯೇ, ಹೀಗೆಲ್ಲ ಇರುವಾಗ, ಒಳ್ಳೆ ಕೊಬ್ಬಿರುವ ಕುರಿಯನ್ನೋ, ಮೀನನ್ನೋ ತಿಂದರೆ ಎಲ್ಲಿಂದ ಜೀರ್ಣವಾಗಬೇಕು? ಜೀರ್ಣವಾಗದಿರುವಾಗ ಎಲ್ಲಿಂದ ಹೊರ ಬರಬೇಕು? ಹೊರ ಬರದೇ ಒಳಗೇ ಇದ್ದರೆ ಫ್ರೆಶ್‌ ಆಗಿರುವುದಕ್ಕೆ ನಮ್ಮದು ಫ್ರಿಜ್ಜೇ? ಇದೇ ಕಾರಣಕ್ಕೆ ಶ್ರಾವಣ ಮಾಸ ಪವಿತ್ರ ಎನ್ನುವ ಕಾರಣದೊಂದಿಗೆ ಮಾಂಸಾಹಾರವನ್ನೂ ನಿಷೇಧಿಸಿದರು.

ಯಾವಾಗೆಂದರೆ ಆವಾಗ, ಗೋಡೆ ಮೇಲೆ ಅಂಟಿಕೊಂಡಿರುವ ಹಲ್ಲಿಯಿಂದ, ಕಕ್ಕಸು ಗುಂಡಿಯಲ್ಲಿ ಪಟಪಟನೇ ಓಡಾಡುವ ಜಿರಳೆಯವರೆಗೂ ಎಲ್ಲವನ್ನೂ ಹುರಿದು ಚಿಫ್ಸ್‌ನಂತೆ ತಿನ್ನುವ ಚೀನಿಯರಿಗೆ ಕೊರೊನಾ ಬಂದಿರುವುದು ಬಹಳ ಕಡಿಮೆಯೇ! ಇನ್ಯಾವುದಾದರೂ ಏಡ್ಸ್‌ಗಿಂತ ಮಾರಕವಾಗಿರುವ ಖಾಯಿಲೆ ಬಂದಿಲ್ಲವೆನ್ನುವುದೇ ಅಚ್ಚರಿ. ಈಗ ಹೇಳಿ, ಭಾರತ ಸಂಸ್ಕೃತಿ ಇಂಥ ಎಷ್ಟೋ ಸಂಗತಿಗಳನ್ನು ತಡೆಗಟ್ಟುವಲ್ಲಿ ಪಾಲಿಸುತ್ತಿದ್ದ ಆಚಾರಗಳು ಗ್ರೇಟ್‌ ಅಲ್ವಾ? ಇದನ್ನು ನಂಬದ ಬಿಳಿಮಂಡೆಯವರು ಮಾಂಸ ತಿಂದು ಮನೆಯೆಲ್ಲ ಹೂಸು ಬಿಟ್ಟುಕೊಂಡು ಓಡಾಡುವುದಾದರೆ, ಯಾರಿಗೇನು ನಷ್ಟ?

ಇನ್ನು ಬಹಳಷ್ಟು ಕಡೆ ಅತ್ಯಂತ ಟೀಕೆಗೆ ಒಳಗಾಗುತ್ತಿರುವುದು ಮಡಿಯಲ್ಲಿ ಅಡುಗೆ ಮಾಡುವ ಪದ್ಧತಿ. ಯಾರನ್ನೂ ಮುಟ್ಟಿಸಿಕೊಳ್ಳದೇ ಅಡುಗೆ ಮಾಡುವುದೇಕೆ ಗೊತ್ತಾ? ಎಷ್ಟೋ ಜನರಿಗೆ ಏನೇನೋ ಖಾಯಿಲೆ ಇರುತ್ತದೆ, ಇನ್ನು ಹಲವರು ಏನೇನೋ ಕೆಲಸ ಮಾಡಿಕೊಂಡು ಬಂದಿರುತ್ತಾರೆ. ಅವರನ್ನೆಲ್ಲ ಮುಟ್ಟಿಸಿಕೊಂಡು, ಅದೇ ಕೈಯಲ್ಲಿ ಕಾಯಿ ತುರಿದು ಸಾಂಬಾರಿಗೆ ಹಾಕಿದರೆ, ಯಾವನಿಗೆ ಯಾವ ಖಾಯಿಲೆ ಇರುತ್ತೋ ಆ ಎಲ್ಲ ಬ್ಯಾಕ್ಟೀರಿಯಾಗಳು ಬಂದು ಸಾಂಬಾರೊಳಗೆ ಹೊಕ್ಕು, ಅದನ್ನು ತಿನ್ನುವವರಿಗೆಲ್ಲರಿಗೂ ಖಾಯಿಲೆ ಹಬ್ಬುವುದಿಲ್ಲವಾ? ಮಡಿಯಲ್ಲಿ ಮಾಡುವ ಊಟಕ್ಕೆ ಮಹತ್ವ ಇರುವುದೇ ಇದಕ್ಕೆ. ನಮ್ಮ ತಲೆಯಲ್ಲಿ ಅದು ಹೇಗೆ ತುಂಬಿದ್ದಾರೆಂದರೆ, ಹಲಾಲ್‌ ಊಟ ಪವಿತ್ರವಂತೆ, ಮಡಿಯಲ್ಲಿ ತಯಾರಿಸಲಿಕ್ಕೆ ಹೊರಟರೆ ಅದು ಅಸ್ಪೃಶ್ಯತೆಯಂತೆ. ಹಿಂಗೆಲ್ಲ ಕಾಮಿಡಿ ಮಾಡಿಕೊಂಡಿದ್ದರೆ, ಕೊರೊನಾ ಬರದೇ ಇನ್ನೇನು ಬರುತ್ತೆ ಹೇಳಿ?

ಬ್ರಾಹ್ಮಣರು ಅಥವಾ ಹಿಂದೂ ಧರ್ಮದ ಅನೇಕ ಜಾತಿಯ ಜನರು ಹಣೆಗೆ, ಮೈಗೆ ಭಸ್ಮ ಬಳಿದುಕೊಳ್ಳುತ್ತಾರೆ. ಇದನ್ನು ಮಾಡುವುದು ದೇವರಿಗಷ್ಟೇ ಎಂದರೆ ತಪ್ಪು. ಏಕೆಂದರೆ ಇದರಲ್ಲೂ ವೈಜ್ಞಾನಿಕ ಕಾರಣಗಳಿವೆ. ಕೇವಲ ಹಸುವಿನಿಂದ ಮಾಡಿದ ಭಸ್ಮಕ್ಕೆ ಮಾತ್ರ ವೈದ್ಯಕೀಯ ಗುಣಗಳಿವೆ. ಭಸ್ಮದಲ್ಲಿ ಕ್ಯಾಲ್ಶಿಯಮ್‌ ಕಾರ್ಬೊನೇಟ್‌, ಪೊಟಾಷಿಯಂ ಕಾರ್ಬೊನೇಟ್‌, ಸಲೆಧೀಟ್‌, ಝಿಂಕ್‌, ಸೋಡಿಯಂ ಆದಿಯಾಗಿ, ದೇಹಕ್ಕೆ ಅಗತ್ಯವಿರುವುದೆಲ್ಲ ಇವೆ. ಅಲ್ಲದೇ, ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುವ ಶಕ್ತಿ ಭಸ್ಮಕ್ಕಿದೆ. ಈ ಕಾರಣಕ್ಕೂ ವಿಭೂತಿ/ಭಸ್ಮವನ್ನು ಹಚ್ಚಿಕೊಳ್ಳುತ್ತಾರೆ. ಡಾಕ್ಟರ್‌ನ ಹಾಗೆ ವೈದ್ಯಕೀಯ ಭಾಷೆಯಲ್ಲಿ ಹೇಳಿದರೆ ಯಾರಿಗೂ ಅರ್ಥವಾಗುವುದಿಲ್ಲವೆಂದೇ ಶಿವನಿಗೆ ಭಸ್ಮ ಎಂದರೆ ಪ್ರೀತಿ, ದೇವರಿಗೆ ಪ್ರೀತಿ ಎಂದ್ದಿದ್ದು.

ಹಾಗಾದರೆ ಹೆಣ ನೋಡಿಕೊಂಡು ಬಂದ ಮೇಲೆ ಸ್ನಾನ ಮಾಡಬೇಕು ಏಕೆ? ಏಕೆಂದರೆ, ಸತ್ತವನ ದೇಹದೊಳಗೆ, ಮೇಲೆ ಇರುವ ಕೀಟಾಣುಗಳಿಗೆ ಬದುಕುವುದಕ್ಕೆ ಮತ್ತೊಂದು ದೇಹದ ನಿರೀಕ್ಷೆಯಲ್ಲಿರುತ್ತದೆ. ಆಗ ಮೃತದೇಹದ ಬಳಿ ನಾವು ಹೋದಾಗ, ಅದನ್ನು ಮುಟ್ಟಿದಾಗ ರೋಗಾಣುಗಳು ನಮ್ಮನ್ನು ಆಶ್ರಯಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿಯೇ ಸ್ನಾನ ಮಾಡಬೇಕು ಎಂದಿದ್ದು.

ಕೆಲವೊಮ್ಮೆ ನಮ್ಮಲ್ಲಿ ಇಂಥ ಆಚಾರಗಳನ್ನು ಅತಿಯೆಂಬಂತೆ ಅನುಸರಿಸುವ ಬ್ರಾಹ್ಮಣರೂ ಇದ್ದಾರೆ. ಕಾರಣ ಅವರಿಗೆ ದೇವರೊಂದೇ ಗ್ರೇಟ್‌. ಆಚಾರಗಳ ಹಿಂದಿನ ವೈಜ್ಞಾನಿಕ ಕಾರಣ ಗೊತ್ತಿರುವುದಿಲ್ಲ. ಹೀಗಾದಾಗಲೂ ಸಮಸ್ಯೆ ಆಗುತ್ತದೆ. ನಾನಿದ್ದ ಮನೆಯ ಎದುರಿಗಿದ್ದ ಒಬ್ಬ ಬ್ರಾಹ್ಮಣ ಬ್ರಾಹ್ಮಿ ಮುಹೂರ್ತದಲ್ಲೇ ಎದ್ದು ಬಾವಿ ನೀರನ್ನು ಮೈಗೆ ಹೊಯ್ದುಕೊಂಡು, ಬಟ್ಟೆಗೆ-ಮೈಗೆ ಸೋಪನ್ನೂ ಹಚ್ಚದೇ ಸ್ನಾನ ಮುಗಿಸುತ್ತಿದ್ದ. ಇನ್ನು ಅವರ ಮನೆಯಲ್ಲಿ ಆಗ ಊಟ ಮಾಡಿದ ಪಾತ್ರೆ ಆಗಲೇ ತೊಳೆಯುವುದಿಲ್ಲವಂತೆ, ಮಾರನೇ ದಿನ ಸ್ನಾನ ಮಾಡುವ ಮುನ್ನ ತೊಳೆಯುವುದಂತೆ. ಈ ಕಾರಣಕ್ಕೆ ಅವರ ಮನೆಯಲ್ಲೇ ಹೆಚ್ಚು ಜಿರಳೆಗಳಿದ್ದವು. ಇದು ಕಾರಣ ತಿಳಿಯದೇ ಅಂಧರಾಗಿ ಆಚಾರ ಪಾಲಿಸುವಾಗ ಬರುವ ಸಮಸ್ಯೆಗಳು. ಕನ್ನಡಪ್ರಭದ ಮಹಾಬಲ ಸೀತಾಳಭಾವಿ ಅವರು 108 ಹಳೆ ಆಚಾರ ಹೊಸ ವಿಚಾರ ಎಂಬ ಪುಸ್ತಕದಲ್ಲಿ 108 ಆಚಾರಗಳಿಗೆ ತಾರ್ಕಿಕತೆಯನ್ನು ಬರೆದಿದ್ದಾರೆ. ನಮ್ಮ ಹಿರಿಯರು ಹೇಳಿಕೊಡದ ಎಷ್ಟೋ ಸಂಗತಿಗಳಿಗೆ ಉತ್ತರ ಅಲ್ಲಿದೆ.

ಭಾರತೀಯ ಸಂಸ್ಕೃತಿಯ ಎಲ್ಲ ಆಚಾರಗಳಿಗೂ ಕಾರಣಗಳಿವೆ. ತಿಳಿದುಕೊಳ್ಳದವರಷ್ಟೇ ಅದನ್ನು ನಿಂದಿಸುತ್ತಿರುವುದು. ಇಂಥ ಪ್ರಗತಿಗಾಮಿ ಕ್ರಿಮಿಗಳ ಮಾತಿಗೆ ಹೆಚ್ಚು ಗಮನ ಕೊಡದೇ ನಮ್ಮ ಸಂಸ್ಕೃತಿಯನ್ನು ರಕ್ಷಿಸೋಣ, ಪಾಲಿಸೋಣ. ಇಸ್ರೇಲಿನ ಪ್ರಧಾನಿಯೇ ಎಲ್ಲ ಆಚಾರಗಳ ಬಗ್ಗೆ ಹೇಳಿದ ಮೇಲೇ ಪಾಲಿಸಬೇಕೆಂದಿಲ್ಲ.

 

Leave a Reply

Copyright©2021 Chiranjeevi Bhat All Rights Reserved.
Powered by Dhyeya