ರಾಜಕೀಯ ನಾಯಕರಿಗೊಂದು ಹಂಬಲ ಸದಾ ಇರುತ್ತದೆ. ತಾನು ಸದಾ ಚಾಲ್ತಿಯಲ್ಲಿರಬೇಕು. ಮಾಧ್ಯಮಗಳಲ್ಲಿ ತನ್ನ ಹೆಸರು ಓಡಾಡುತ್ತಲೇ ಇರಬೇಕು. ಜನರ ಬಳಿಗೆ ಹೋಗಲಾಗದಿದ್ದರೂ, ಟಿವಿ ಮೂಲಕವಾದರೂ ಪ್ರಚಾರ ತೆಗೆದುಕೊಂಡು, ಜನರ ಮನೆಯಲ್ಲಿ ತನ್ನ ಮುಖ ಕಾಣಿಸುತ್ತಿರಬೇಕು… ಹೀಗೆ ನೂರಾರು ಆಸೆಗಳು. ದುರಂತ ಏನೆಂದರೆ, ಯಾವುದೇ ಮಾಧ್ಯಮಗಳಿರಲಿ ಅಥವಾ ಜನರೇ ಆಗಿರಲಿ, ಅವರೆಲ್ಲ ನಾಯಕನನ್ನು ಮಾತಾಡಿಸುವುದಕ್ಕೆ ಬರುವುದು ಕೇವಲ ಅಧಿಕಾರದಲ್ಲಿದ್ದಾಗ ಮಾತ್ರ. ಇಲ್ಲದಿದ್ದರೆ, ರಾಜಕಾರಣಿಯೇ ಅವರನ್ನೆಲ್ಲ ಮಾತಾಡಿಸುತ್ತಿರಬೇಕು. ಏನಾದರೊಂದು ಸುದ್ದಿಯನ್ನು ಪತ್ರಕರ್ತರಿಗೆ ಕೊಟ್ಟರೆ ಮಾತ್ರ ಅವರೂ ಸುದ್ದಿಯಲ್ಲಿರುವುದು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇದನ್ನೆಲ್ಲ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಯಾವ ನಿಂಬೆಹಣ್ಣಿನ ಪ್ರಭಾವವೋ ಏನೋ ಇಂದಿಗೂ ಕೆಲವು ಅಧಿಕಾರಿಗಳು ಕೇಳುವುದು ಕುಮಾರಸ್ವಾಮಿ ಹಾಗೂ ಗೌಡರ ಕುಟುಂಬದ ಮಾತನ್ನೇ!
ಇಂತಿಪ್ಪ ಕುಮಾರಸ್ವಾಮಿ, ಮಂಗಳೂರು ಗಲಭೆಯ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ಕಲ್ಲು ತೂರಾಟ ಮಾಡಿದವರದ್ದಾ ಎಂದು ನಾವು ಕೇಳುವ ಹಾಗೇ ಇಲ್ಲ. ಅವರು ಬಿಡುಗಡೆ ಮಾಡಿದ್ದು ಪೊಲೀಸರು ಸೋ ಕಾಲ್ಡ್ ಪ್ರತಿಭಟನಾಕಾರರಿಗೆ ಕೊಟ್ಟ ಲಾಠಿ ಏಟಿನ ವಿಡಿಯೋ ಮತ್ತು ಹೇಗೆ ನೋಡಿದರೂ, ಪೊಲೀಸರದ್ದೇ ತಪ್ಪು ಎಂಬಂತೆ ಕಾಣುವ ವಿಡಿಯೋ.
ಉಪಚುನಾವಣೆಯಾದ ಬಳಿಕವಂತೂ ಕಳೆದೇ ಹೋಗಿದ್ದ ಕುಮಾರಸ್ವಾಮಿಯವರು, ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.ಹಾಗಾದರೆ ಕುಮಾರಸ್ವಾಮಿಯವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳುವುದಿದೆ.
ಬಿಡುಗಡೆ ಮಾಡಿದ್ದ ಆ ವಿಡಿಯೊಗಳು ಮಂಗಳೂರಿನದ್ದೋ? ಬೇರೆ ಕಡೆಯದ್ದೋ?
ಇವೆಲ್ಲ ಹಳೆಯ ವಿಡಿಯೋ?
ಪೊಲೀಸರೇ ಹೊಡೆದರು ಎನ್ನುವುದಕ್ಕೆ ನೀವೇನು ಪ್ರತ್ಯಕ್ಷದರ್ಶಿಗಳೇ?
ಅದೆಲ್ಲ ಬಿಡಿ ಸಾರ್, ಟಿವಿ ಮಾಧ್ಯಮಗಳಿಗೇ ಯಾಕೆ ವಿಡಿಯೋ ಬಿಡುಗಡೆ ಮಾಡಿದ್ದು?
ಅಷ್ಟಿದ್ದರೆ ಪೊಲೀಸರಿಗೆ ಕೊಡಬೇಕಿತ್ತು ಅಥವಾ ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು? ಮಾಧ್ಯಮಗಳಿಗೆ ವಿಡಿಯೋ ಬಿಡುಗಡೆ ಮಾಡಿದ್ದರ ಉದ್ದೇಶವೇನು?
ಇಂಥ ಪ್ರಶ್ನೆಗಳನ್ನು ನಾನು ಕೇಳುತ್ತಿರುವುದಲ್ಲ. ಬದಲಿಗೆ, 2019ರ ಡಿಸೆಂಬರ್ 24ಕ್ಕೆ ಮಂಗಳೂರು ಪೊಲೀಸರ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಗಲಭೆ ಮಾಡುವವರ, ಸಿಸಿಟಿವಿಗಳನ್ನು ಮುಸುಕುಧಾರಿಗಳು ಕುಟ್ಟಿ ಪುಡಿ ಮಾಡುತ್ತಿರುವ ಇತ್ಯಾದಿ ವಿಡಿಯೋ ಬಿಡುಗಡೆ ಮಾಡಿದ್ದರು. ಆಗ ಸ್ವತಃ ಕುಮಾರಸ್ವಾಮಿ ಆದಿಯಾಗಿ, ಅವರು ಕ್ಲರ್ಕ್ ಆಗಿದ್ದಾಗ ಜತೆಗಿದ್ದ ಪಕ್ಷದ ನಾಯಕ ಸಿದ್ದರಾಮಯ್ಯರಂಥ ಅನೇಕ ನಾಯಕರು ಕೇಳಿದ್ದ ಪ್ರಶ್ನೆಗಳಿವು.
ಈಗ ಇದನ್ನೇ ನಾವೂ ಕೇಳಬಹುದಲ್ಲವೇ? ಸರ್ಜಿಕಲ್ ಸ್ಟೈಕ್ ಆದಾಗ ದಾಖಲೆ ಕೇಳಿದ್ದ ಕೇಜ್ರಿವಾಲನಂತೆ ಕುಮಾರಸ್ವಾಮಿಯೂ ಯಾವುದೋ ವಿಡಿಯೊ ಇರಬಹುದು. ತನಿಖೆಯಾಗಲಿ ಎಂದು ಹಾರಿಕೊಂಡಿದ್ದರು. ಈಗ ಅವರು ಕೊಟ್ಟ ವಿಡಿಯೋವನ್ನು ಜನರೆಲ್ಲ ಒಪ್ಪಿಕೊಳ್ಳಬೇಕಂತೆ! ಸದನ ಸಮಿತಿಯನ್ನೂ ಮಾಡಬೇಕಂತೆ. ಇದ್ಯಾವ ಲೆಕ್ಕ ಸ್ವಾಮಿ?
ಆಗೆಲ್ಲ ಪ್ರಶ್ನಾರ್ಥಕವಾಗಿದ್ದ ವಿಡಿಯೋಗಳು ಈಗ ಸ್ಪಷ್ಟವಾಗಿಬಿಟ್ಟಿವೆ. ಪೊಲೀಸರು ಬಿಡುಗಡೆ ಮಾಡಿದ ವಿಡಿಯೋಗಳಿಗೆ ಇದೇ ರಾಜಕಾರಣಿಗಳ ಮುತ್ತಿನಂಥ ಪ್ರತಿಕ್ರಿಯ ನೋಡಿ:
ಟಿಯರ್ ಗ್ಯಾಸ್ ಸಿಡಿಸದೇ ಗೋಲಿಬಾರ್ ಮಾಡಿದ್ರು – ಸಿದ್ದರಾಮಯ್ಯ
ಟಿಯರ್ಗ್ಯಾಸ್ನಿಂದ ಮುಖ ಮುಚ್ಚಿಕೊಳ್ಳೋಕೆ ಬಟ್ಟೆ ಕಟ್ಟಿಕೊಂಡಿದ್ದರು – ದಿನೇಶ್ ಗುಂಡೂರಾವ್
ಇವೆಲ್ಲ ಹಳೆಯ ವಿಡಿಯೋ- ಡಿಕೆಶಿ
ಕುಮಾರಸ್ವಾಮಿ: ಕಲ್ಲು ತೂರಾಟಕ್ಕೆ ತಂದ ವಾಹನಗಳ ವಿಡಿಯೋ ಮಂಗಳೂರಿನ ಗಲಭೆಯದೋ? ಅಥವಾ ಬೇರೆಡೆಯದೋ?
ಹೀಗೆಲ್ಲ ಪ್ರಶ್ನೆ ಕೇಳಿದ್ದ ರಾಜಕಾರಣಿಗಳೆಲ್ಲರೂ, ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೊ ಸತ್ಯವೆಂದು ಮರುಮಾತನಾಡದೇ ಒಪ್ಪಿಕೊಳ್ಳುತ್ತಿದ್ದಾರೆ.
ಈಗ ಅವರ ಹೇಳಿಕೆಗಳನ್ನೇ ಅವಲೋಕಿಸಿ, ಎಷ್ಟು ಜನರಿಗೆ ನಿಜವಾಗಿ ಸತ್ತವರ ಮೇಲೆ ಕಾಳಜಿ ಇದೆ, ಎಷ್ಟು ಜನರಿಗೆ ಸಾವಿನಲ್ಲೂ ರಾಜಕೀಯ ಮಾಡುವ ಖಯಾಲಿ ಇದೆ ಎಂಬುದನ್ನು ನೋಡೋಣ.
ಕುಮಾರಸ್ವಾಮಿಯವರೇ ಟ್ವೀಟ್ ಮಾಡಿದಂತೆ, ‘ಕಾನೂನು ಸುವ್ಯವಸ್ಥೆಗೆ ಭಂಗ ತರುವ ನಿಟ್ಟಿನಲ್ಲಿ ಸರ್ಕಾರ ಪೊಲೀಸರೇ ಪಿತೂರಿ ನಡೆಸಿದರೆ ಸುಮ್ಮನೆ ಕೂರಲಾಗುವುದಿಲ್ಲ’ ಎಂದಿದ್ದಾರೆ. ಅಂದರೆ, ತನಿಖೆ ಯಾರು ಹೇಗೇ ಮಾಡಿದ್ದರೂ ತಪ್ಪು ಪೊಲೀಸರದ್ದೇ ಎಂದು ಅವತ್ತು ಕುಮಾರಸ್ವಾಮಿಯವರೇ ನಿರ್ಧರಿಸಿಬಿಟ್ಟಿದ್ದರು ಎಂದಾಯಿತಲ್ಲವೇ?
ಇಲ್ಲಿಂದ ಶುರುವಾಗುತ್ತದೆ ಕುಮಾರಸ್ವಾಮಿಯ ತನಿಖೆ. ಅರ್ಥಾತ್, ಇವರು ತನಿಖೆ ಶುರು ಮಾಡಿದ್ದೇ ಒಂದು ಅಜೆಂಡಾ ಇಟ್ಟುಕೊಂಡು. ಅದಕ್ಕೆ ಬೇಕಾದ ಎಲ್ಲ ದಾಖಲೆಗಳನ್ನೂ ಹುಡುಕುತ್ತಾ ಬಂದರು.
ಕುಮಾರಸ್ವಾಮಿಯವರು ತಮಗೆ ಹೇಗೆ ಬೇಕೋ, ಯಾವ ರೀತಿಯ ವಿಡಿಯೋ ಬಿಟ್ಟರೆ ಜನರಿಗೆ, ಆಡಳಿತ ಪಕ್ಷಕ್ಕೆ ಮಸಿ ಬಳಿಯಬಹುದೋ? ಅಲ್ಪಸಂಖ್ಯಾತರ ಮತಗಳನ್ನು ಕಬಳಿಸಬಹುದೋ ಅಂಥ ವಿಡಿಯೋಗಳನ್ನೇ ಬಿಡುಗಡೆ ಮಾಡುತ್ತಿದ್ದಾರೆ ಎಂಬುದನ್ನು ಸ್ವಲ್ಪ ಸಮಾಧಾನದಿಂದ ಆಲೋಚಿಸಿದರೆ ಸ್ಪಷ್ಟವಾಗುತ್ತದೆ.
ಹೇಗೆ?: ಕುಮಾರಸ್ವಾಮಿ ಬಿಡುಗಡೆ ಮಾಡಿದ ವಿಡಿಯೋಗಳಲ್ಲಿ ಎಲ್ಲರೂ ಮುಖ ಮುಚ್ಚಿಕೊಂಡಿರದವರೇ ಇದ್ದಾರೆ. ಆದರೆ, ಪ್ರತಿಭಟನೆ ನಡೆದ ದಿನ ಮುಖ ಮುಚ್ಚಿಕೊಂಡವರೂ ಇದ್ದರು ಎಂಬುದನ್ನು ಕುಮಾರಸ್ವಾಮಿಯ ಟಿವಿಗಳಿಂದ ಹಿಡಿದು ಎಲ್ಲ ಟಿವಿಗಳೂ ತೋರಿಸುತ್ತಿದ್ದರು. ಆದರೆ, ಮುಖ ಮುಚ್ಚಿಕೊಂಡು ಕಲ್ಲು ಎಸೆಯುತ್ತಿದ್ದವರ ವಿಡಿಯೋಗಳನ್ನೇ ಅವರು ಬಿಡುಗಡೆ ಮಾಡಲಿಲ್ಲ. ಅಂದರೆ, ಕುಮಾರಸ್ವಾಮಿ ತೋರಿಸಿದ್ದು ಕೇವಲ ಪೊಲೀಸರು ಹೊಡೆಯುವ ವಿಡಿಯೋಗಳನ್ನಷ್ಟೇ ಎಂದಾಯಿತಲ್ಲ!? ಪೊಲೀಸರು ಹೊಡೆಯುವ ವಿಡಿಯೋ ಹರಿಬಿಟ್ಟರೆ, ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಅದಾದರೆ ಯಾರಿಗೆ ಲಾಭ? ಉಪಚುನಾವಣೆಯಲ್ಲಿ ಒಂದು ಸೀಟನ್ನೂ ಗೆಲ್ಲದ ಕೌಟುಂಬಿಕ ಪಕ್ಷಕ್ಕೇ ಅಲ್ಲವೇ?
ಇನ್ನೊಂದು ಉದಾಹರಣೆಯಲ್ಲಿ ನಿಮಗೇ ಸ್ಪಷ್ಟವಾಗಿಬಿಡುತ್ತದೆ ನೋಡಿ – ಯಾವುದೋ ಒಂದು ಕಲ್ಲು ಹೊತ್ತಿದ್ದ ಆಟೋ ಬಂದು ನಿಲ್ಲುವ ಮತ್ತು ಅಲ್ಲಿಂದ ಗಲಭೆ ಮಾಡುವವರು ಕಲ್ಲು ಎಸೆಯುವ ವಿಡಿಯೋ ನೋಡಿದ್ದೇವೆಯಲ್ಲವೇ? ಅದರ ಬೆನ್ನತ್ತಿದ್ದ ಕುಮಾರಸ್ವಾಮಿ, ಅದು ಯಾವ ದಿಕ್ಕಿನಲ್ಲಿ ಹೋಯಿತು ಎಂಬುದನ್ನೆಲ್ಲ ಟ್ರ್ಯಾಕ್ ಮಾಡಿ, ರಸ್ತೆ-ಗಲ್ಲಿಗಳ ಫುಟೇಜ್ ತೆಗೆದು, ಕೊನೆಗೆ ಅದು ಯಾರ ಮನೆಯಿಂದ ಹೊರಟಿತ್ತು ಎಂಬುದನ್ನೂ ಕೆದಕಿ, ಹುಡುಕಿ, ಶೋಧಿಸಿ ಹೊರ ಹಾಕಿದರು. ಅಷ್ಟೆಲ್ಲ ಪುರುಸೊತ್ತಿತ್ತು. ಆದರೆ, ರಸ್ತೆಯಲ್ಲಿ ಕಂಬ ಅಡ್ಡಲಾಗಿಟ್ಟು, ಕಲ್ಲು ತೂರಾಟ ಮಾಡಿದ ವ್ಯಕ್ತಿ ಯಾರು ಎಂದೇ ತೋರಿಸಲಿಲ್ಲ. ಅಷ್ಟೇ ಅಲ್ಲ, ಕುಮಾರಸ್ವಾಮಿಯವರು ಈ ವಿಡಿಯೋ ಬಗ್ಗೆಯೇ ಟ್ವೀಟ್ ಮಾಡಿ, ಕಲ್ಲು ತೂರಾಟಕ್ಕೆ ತಂದ ವಾಹನಗಳ ವಿಡಿಯೋ ಮಂಗಳೂರಿನ ಗಲಭೆಯದೋ? ಅಥವಾ ಬೇರೆಡೆಯದೋ? ಎಂದು ಡಿಸೆಂಬರ್ 24ಕ್ಕೆ ಕೇಳಿದ್ದಾರೆ. ಆದರೆ, ಜನವರಿ 10ಕ್ಕೆ ಈ ವಿಡಿಯೋ ಮಂಗಳೂರಿನದ್ದೇ ಎಂದು ಸುದ್ದಿಗೋಷ್ಠಿಯಲ್ಲಿ ಅವರೇ ಮುದ್ರೆ ಒತ್ತುತ್ತಾರೆ.
ಈಗ ಹೇಳಿ ಕುಮಾರಸ್ವಾಮಿಯವರೇ, ನೀವು ಬಿಡುಗಡೆ ಮಾಡಿರುವ ವಿಡಿಯೋ ಮಂಗಳೂರಿನದ್ದೋ ಅಥವಾ ಬೇರೆ ಕಡೆಯದ್ದೋ? ಕುಮಾರಸ್ವಾಮಿಯವರ ಸಮಸ್ಯೆಯೇನೆಂದರೆ, ಇವರು ಮಾತ್ರ ಯಾರನ್ನು ಬೇಕಾದರೂ ಪ್ರಶ್ನಿಸಬಹುದು, ವಿರೋಧಿಸಬಹುದು. ಆದರೆ, ಇವರು ಹೇಳಿದ್ದನ್ನು ಮಾತ್ರ ಊರೆಲ್ಲ ನಂಬಬೇಕು. ನೀವು ಹೇಳಿದ್ದನ್ನು ಒಪ್ಪಿಕೊಳ್ಳುವುದಕ್ಕೆ ನೀವು ಪೈಗಂಬರ್ರೂ ಅಲ್ಲ, ನಾವೆಲ್ಲ ನಿಮ್ಮ ಅನುಯಾಯಿಗಳೂ ಅಲ್ಲ ಕುಮಾರಸ್ವಾಮಿಯವರೇ. ಹಾಗಾಗಿ ಪ್ರಶ್ನಿಸುತ್ತಿದ್ದೇವೆ.
ಇನ್ನು ಸಿದ್ದರಾಮಯ್ಯನವರ ಬಗ್ಗೆ ಬರೋಣ. ಇವರು ಮಾಡಿದ ಟ್ವೀಟ್ ಇವರ ಇವತ್ತಿನ ಮಾತಿಗೆ ತದ್ವಿರುದ್ಧವಾಗಿದೆ. ಅರ್ಥಾತ್, ಆಚಾರ ಹೇಳೋದಕ್ಕೆ ಬದನೆಕಾಯಿ ತಿನ್ನೋದಕ್ಕೆ ಎಂಬಂತಿದೆ. ಸಿದ್ದರಾಮಯ್ಯ 2019ರ ಡಿಸೆಂಬರ್ 23ರಂದು – ಮುಖ್ಯಮಂತ್ರಿ ಬಿಎಸ್ವೈ ಅವರೇ, ಪೊಲೀಸರ ತಪ್ಪಿಲ್ಲ ಎಂದು ತನಿಖೆಗೆ ಮೊದಲೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ, ಮುಖ್ಯಮಂತ್ರಿಗಳೇನು ಘಟನೆಯ ಪ್ರತ್ಯಕ್ಷದರ್ಶಿಯೇ? ಎಂದಿದ್ದರು.
ಈಗ ಇದೇ ಸಿದ್ದರಾಮಯ್ಯ, ಕುಮಾರಸ್ವಾಮಿ ಬಿಡುಗಡೆ ಮಾಡಿದ ವಿಡಿಯೋ ನೋಡಿ ಮಂಗಳೂರು ಗಲಭೆ ಪೊಲೀಸರ ಸೃಷ್ಟಿ ಎಂದು ಮೊದಲೇ ಹೇಳಿದ್ದೆ! ಎನ್ನುತ್ತಾರೆ.
ಮೊದಲೇ ಹೇಳುವುದಕ್ಕೆ ಸಿದ್ದರಾಮಯ್ಯ ತ್ರಿಕಾಲಜ್ಞಾನಿಗಳೋ? ಅಥವಾ ಬೂದಿ ಬಳಿದು ತಪಸ್ಸನ್ನಾಚರಿಸಿ ಶಕ್ತಿ ಸಂಪಾದಿಸಿರುವ ಬಾಬಾನೋ? ಪೊಲೀಸರು ಸರಿ ಎಂದು ಹೇಳುವುದಕ್ಕೆ ಪ್ರತ್ಯಕ್ಷದರ್ಶಿಯಾ ಎಂದು ಕೇಳುವ ಸಿದ್ದರಾಮಯ್ಯ, ತಾವಾಡುವ ಮಾತಿಗೂ ತಾನು ಪ್ರತ್ಯಕ್ಷದರ್ಶಿಯಾ ಎಂದು ಕೇಳಿಕೊಳ್ಳಲೇ ಇಲ್ಲ. ವಯೋಸಹಜ ಮರೆವಿರಬೇಕು! ಸಿದ್ದರಾಮಯ್ಯನವರೇ, ನೀವೂ ಅಷ್ಟೇ ನಿಮ್ಮ ಕಾಂಗ್ರೆಸಿಗರಿಗೆ ನೀವು ಸಂತರಾಗಿಬಹುದು. ಅದಕ್ಕೇ ನಿಮ್ಮನ್ನು ಯಾರೂ ಪ್ರಶ್ನಿಸುವುದಿಲ್ಲ. ಪತ್ರಕರ್ತರಿಗಂತೂ ನೀವು ರಾಜಕಾರಣಿಯೇ! ಪಿಎಫ್ಐ ಗೂಂಡಾಗಳ ವಿರುದ್ಧ 175 ಕ್ರಿಮಿನಲ್ ಪ್ರಕರಣ ಕೈಬಿಟ್ಟಿದ್ದನ್ನು ಇನ್ನೂ ಮರೆತಿಲ್ಲ ಹಾಗೂ ಅದಕ್ಕೆ ನಿಮ್ಮಿಂದ ಇನ್ನೂ ಉತ್ತರವೂ ಬಂದಿಲ್ಲ.
ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೋ ಎಷ್ಟು ಸೂಕ್ಷ್ಮವಾಗಿ ಎಡಿಟ್ ಆಗಿದೆ ಎಂದರೆ, ಪೊಲೀಸರು ಪ್ರತಿಭಟನಾಕಾರರ ಜತೆ ಮಾತಾಡುವ, ಅವರನ್ನು ಸಂತೈಸುವ ದೃಶ್ಯಾವಳಿಗಳಿಗೇ ಕತ್ತರಿ ಬಿದ್ದಿದೆ. ಸಹಜವಾಗಿ ಮಂಗಳೂರಿಗರಲ್ಲದವರಿಗೆ ಇಂಥದ್ದೆಲ್ಲ ತಿಳಿಯುವುದೇ ಇಲ್ಲ. ಎಷ್ಟೋ ಕಡೆ ಡಿಸಿ ಕಚೇರಿಯ ಎದುರಿಗೆ ಅನುಮತಿ ಇಲ್ಲದೇ ದಂಡು ದಂಡಾಗಿ ಮುಸುಕು ಹಾಕಿ ಬರುವುದು ಕಾಣುತ್ತದೆ. ಆದರೆ, ಅಲ್ಲಿ ಕೇವಲ ಪೊಲೀಸರು ಹೊಡೆಯು ವಿಡಿಯೋ ಮಾತ್ರ ಬಿಡುಗಡೆ ಮಾಡಿದ್ದಾರೆ. ಕುಮಾರಸ್ವಾಮಿಯವರು ತಮ್ಮ ಸ್ಯಾಂಡಲ್ವುಡ್ ಕಲೆಗಳನ್ನು ರಾಜಕೀಯದಲ್ಲೂ ಪ್ರದರ್ಶಿಸಲು ಹೊರಟಂತಿದೆ.
ಕೆಲ ಕಡೆ ಪೊಲೀಸರೂ ಸರಿಯಾಗೇ ಬಾರಿಸಿದ್ದಾರೆ. ಆದರೆ ಯಾಕಾಗಿ? ಗನ್ ಹೌಸ್ಗೆ ನುಗ್ಗಲು ಯತ್ನಿಸಿದವರನ್ನು, ಅಂಗಡಿ ಮುರಿದು ಗನ್ ಎತ್ತಿಕೊಳ್ಳುವುದಕ್ಕೆ ಹೊರಟ ಮ್ಲೇಚ್ಛರನ್ನು ಮುತ್ತಿಟ್ಟು ದೂರ ಸರಿಸಬೇಕಿತ್ತೇ? ಕುಮಾರಸ್ವಾಮಿಯವರೇ, ನೀವು ಮುಖ್ಯಮಂತ್ರಿಯಾಗಿದ್ದಾಗ ನಿಮ್ಮ ಅಭಿಮಾನಿಗಳೇ ನಿಮ್ಮನ್ನು ಮುತ್ತಿಕೊಂಡರೆ, ತಾಳ್ಮೆ ಕಳೆದುಕೊಳ್ಳುತ್ತಿದ್ದ ನೀವು, ಕಲ್ಲು ಹಿಡಿದ ತಲೆಹಿಡುಕರಿಗೆ ತಲೆ ಸವರಿ ಬುದ್ಧಿ ಹೇಳಬೇಕು ಎನ್ನುತ್ತಿರುವುದು ಉಪಚುನಾವಣೆಯ ಸೋಲಿಗಿಂತಲೂ ಹಾಸ್ಯಾಸ್ಪದ.
ಒಮ್ಮೆ ಗನ್ ಕಳವಾಗಿ, ಜನರು ಗುಂಡು ಹಾರಿಸಿದ್ದಿದ್ದರೆ, ಆಗಲೂ ತಾವೇ ಪೊಲೀಸರು ಏನ್ ಮಾಡ್ತಿದ್ರು ಎನ್ನುತ್ತಿದ್ದಿರಿ ಅಲ್ಲವೇ? ಹೇಗಿದ್ದರೂ ನೀವು ವಿರೋಧ ಮಾಡಿಯೇ ಮಾಡುತ್ತೀರಿ ಎಂದಾಯಿತು. ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಭೈರಪ್ಪನವರು ಎಂದೋ ಬೇರೆ ಸಂದರ್ಭದಲ್ಲಿ ಹೇಳಿದ್ದ ಮಾತು ಇಲ್ಲಿ ಸರಿಯಾಗಿ ಹೊಂದುತ್ತದೆ- ವಿರೋಧ ಪಕ್ಷಗಳು ಬರೀ ಸುಳ್ಳು ಹೇಳ್ತಾ ಇವೆ. ನಮ್ಮಲ್ಲಿ ವಿರೋಧ ಪಕ್ಷ ಎಂದರೆ ವಿರೋಧ ಮಾಡುವ ಪಕ್ಷ ಅಂತಲೇ ಆಗಿದೆಯೇ ವಿನಾ, ಕನ್ಸ್ಟ್ರಕ್ಟಿವ್ ಆಗಿ ಚರ್ಚೆ ಮಾಡುವ ಪಕ್ಷ ಎನ್ನುವ ಕಾನ್ಸೆಪ್ಟೇ ಇಲ್ಲ ಇಲ್ಲಿ. ಜವಾಬ್ದಾರಿಯುತವಾಗಿರುವ ವಿರೋಧ ಪಕ್ಷ ಇದ್ದಿದ್ದರೆ, ನಮಗೆ ಇಷ್ಟೆಲ್ಲ ತೊಂದರೆಯಾಗುತ್ತಲೇ ಇರಲಿಲ್ಲ.
ಕುಮಾರಸ್ವಾಮಿಯವರೇ, ಪೊಲೀಸರು ಹೇಗೆ ಕೆಲಸ ಮಾಡುತ್ತಾರೆ, ಯಾರಿಗೆ ಕೆಲಸ ಮಾಡುತ್ತಾರೆ ಎಲ್ಲವೂ ಗೊತ್ತಿದೆ ಎನ್ನುತ್ತೀರೆಂದರೆ, ನಿಮ್ಮ ಸರ್ಕಾರವಿದ್ದಾಗ ಪೊಲೀಸರು ನಿಮಗೂ ಹೀಗೇ ಕೆಲಸ ಮಾಡುತ್ತಿದ್ದರು ಎಂದರ್ಥವಲ್ಲವೇ? ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿದೆ ಎಂಬ ಒಂದೇ ಒಂದು ಕಾರಣಕ್ಕೆ ಪೊಲೀಸ್ ವ್ಯವಸ್ಥೆ ಹಳಸಿಹೋಯಿತು ಎನ್ನುವ ಪ್ರತಿ ಕ್ಷಣವೂ, ನೀವು ಹೇಗೆ ಪೊಲೀಸರನ್ನು ದುರುಪಯೋಗ ಪಡಿಸಿಕೊಂಡಿರಿ ಎಂಬುದನ್ನೇ ಸಾರಿ ಹೇಳುತ್ತದೆ. ವಿರೋಧಿಸಿ ಸ್ವಾಮಿ, ಆದರೆ, ಕನ್ಸ್ಟ್ರಕ್ಟಿವ್ ಆಗಿ ವಿರೋಧಿಸಿ. ನಿಮಗೆ ಬೇಕಾದ್ದಷ್ಟೇ ಕೆದಕಿ, ಇದೇ ಸತ್ಯ ಎನ್ನಬೇಡಿ.