ಬಾವುಟ ಬಿಚ್ಚಿಟ್ಟು ಬೇಕಾದ್ದು ಮಾಡಿಕೊಳ್ಳಿ! ಕನ್ನಡಿಗರ ಮಾನ ತೆಗೆಯಬೇಡಿ!

 

‘ಏನ್‌ ಆ್ಯಟಿಟ್ಯೂಡ್‌ ತೋರುಸ್ತಾ ಇದ್ಯಾ?’, ‘ಮಾಸ್ಕ್‌ ಓಪನ್‌ ಮಾಡೇ’, ‘ಬೆರಳು ಎತ್ಕೊಂಡ್‌ ಮಾತಾಡ್ಬೇಡ.. ಇಳ್ಸೇ..’, ‘ಏಯ್‌ ಅಪಾಲಜಿ ಕೇಳೇ.. ಏಯ್‌..’, ‘ನೀನ್‌ ಅದು ಹೆಂಗ್‌ ಈ ಆಸ್ಪತ್ರೆಯಲ್ಲಿ ಇರ್ತೀಯೋ ನಾನೂ ನೋಡ್ತೀನಿ’!

ಹಿಂದೆ ಮುಂದೆ ಗೊತ್ತಿಲ್ಲದೇ, ಕೇವಲ ಇದನ್ನಷ್ಟೇ ಓದಿದರೆ ನಿಮಗೇನೆನಿಸುತ್ತದೆ ಹೇಳಿ? ಯಾವುದೋ ಒಂದಷ್ಟು ರೌಡಿಗಳು, ಪುಂಡರು, ಪೋಕರಿಗಳು ಯಾರ ಬಳಿಯೋ ಏನನ್ನೋ ಕಿತ್ತುಕೊಳ್ಳುವುದಕ್ಕೆ ಮಾಡಿದ ಕಸರತ್ತಿನಂತಿಲ್ಲವೇ? ಆದರೆ ನಮ್ಮ ದುರಂತ ಏನೆಂದರೆ, ಕರ್ನಾಟಕವನ್ನು ಯಾವುದರಿಂದಲೋ (ಇನ್ನೂ ಯಾರಿಂದ ಎಂದು ಗೊತ್ತಿಲ್ಲ) ರಕ್ಷಣೆ ಮಾಡಹೊರಟ ಕರ್ನಾಟಕ ರಕ್ಷಣಾ ವೇದಿಕೆಯವರ ಬಾಯಿಯಿಂದ ಉದುರಿದ ಮುತ್ತುಗಳಿವು. ಸರಿ ಇದನ್ನು ಹೇಳಿದ್ದು ಯಾರಿಗೆ? ಯಾರೋ ದೇಶದ್ರೋಹಿಗಲ್ಲ, ಕಳ್ಳನಿಗಲ್ಲ, ದರೋಡೆಕೋರನಿಗಲ್ಲ. ಬದಲಿಗೆ ವೈದ್ಯರಿಗೆ!

ವಿಚಾರ ಇಷ್ಟೇ – ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆಗೆಂದು ಹೋಗಿದ್ದ ವ್ಯಕ್ತಿಯೊಬ್ಬರು ಕಣ್ಣು ಕಳೆದುಕೊಂಡಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ರಕ್ಷಣಾ ವೇದಿಕೆಯು 20 ಜನರ ಗ್ಯಾಂಗ್‌ ಮಾಡಿಕೊಂಡು ಒಬ್ಬರೇ ಇದ್ದ ಮಹಿಳಾ ವೈದ್ಯರಿದ್ದ ಕೊಠಡಿಗೆ ನುಗ್ಗಿದವು. ಮುಂದೆ ಕಾನೂನು ತೊಂದರೆಯಾದರೆ ಕಷ್ಟ ಎಂದು ಒಂದಷ್ಟು ಮಹಿಳೆಯರ ಗ್ಯಾಂಗ್‌ನ್ನೂ ಹಾಕಿಕೊಂಡು ರೋಗಿಯ ತಪಾಸಣೆ ಮಾಡುತ್ತಿದ್ದ ಕೊಠಡಿಗೇ ತೆರಳಿ, ರೋಗಿಯನ್ನು ಓಡಿಸಿ, ಕೊಠಡಿಯೊಳಗೆ ಮೈಗೆ ಮೈ ತಿಕ್ಕಾಡುವಷ್ಟು ಜನರು ನಿಂತುಕೊಂಡು ಸೂರು ಕಿತ್ತು ಹೋಗುವ ಹಾಗೆ ಕೂಗಿ ಧಿಕ್ಕಾರ ಹಾಕಿದರು. ವೈದ್ಯೆ ಮತ್ತು ಆಕೆಯನ್ನು ಬಚಾವ್‌ ಮಾಡುವುದಕ್ಕೆ ಬಂದ ಪುರುಷ ವೈದ್ಯರನ್ನೂ ಹಿಡಿದು ಹಲ್ಲೆ ಮಾಡಿ, ಅದನ್ನು ವೈದ್ಯರು ವಿಡಿಯೊ ಮಾಡಿದ್ದ ಕಾರಣಕ್ಕೆ, ವೀಡಿಯೋ ಡಿಲೀಟ್‌ ಮಾಡುವಂತೆ ಅವರ ಮೇಲೂ ಹಲ್ಲೆ ಮಾಡುವುದು ಹೋರಾಟವೋ? ಗೂಂಡಾಗಿರಿಯೋ?! ಇನ್ನೂ ಇವರೆಲ್ಲ ಕನ್ನಡ ರಕ್ಷಕರಾ? ಕರ್ನಾಟಕದ ರಕ್ಷಕರಾ?

ಒಂದು ಹುಡುಗಿಯ ಮೇಲೆ 20 ಜನರ ಗುಂಪು ಎರಗುವುದು ರಕ್ಷಕರು ಮಾಡುವ ಕೆಲಸವೋ? ರಾಕ್ಷಸರು ಮಾಡುವ ಕೆಲಸವೋ? ಇನ್ನೂ ಏನೇನು ನೋಡಬೇಕು ರಕ್ಷಣೆಯ ಹೆಸರಿನ ಗೂಂಡಾಗಿರಿಯನ್ನ? ಯಾರಿಗ್ರೀ ಬೇಕು ಇಂಥವರ ರಕ್ಷಣೆ? ಈ ಪ್ರಹಸನ ನೋಡಿದ ಮೇಲೆ ನಮಗೆ ಇವರಿಂದ ರಕ್ಷಣೆ ಇಲ್ಲದಿದ್ದರೂ ಪರವಾಗಿಲ್ಲ, ಇವರಿಂದ ನಮ್ಮನ್ನು ರಕ್ಷಿಸಿದರೆ ಸಾಕು ಎಂದು ಅನಿಸಲು ಶುರುವಾಗಿದೆ.

ವೈದ್ಯರು ತಪ್ಪು ಮಾಡಿದ್ದಾರಾ? ಸಂತ್ರಸ್ತರ ಬಳಿ ಹಣ ಇಲ್ಲವಾ? ಹಾಗಾದರೆ ಸಾಕ್ಷಿ ಸಮೇತ ಕೋರ್ಟ್‌ಗೆ ಹೋಗಿ. ಅಲ್ಲಿ ವೇದಿಕೆ ಹಣದಲ್ಲಿ ವಕೀಲರನ್ನಿಟ್ಟು ಕಾನೂನು ಹೋರಾಟ ಮಾಡಿ. ಸರ್ಕಾರಕ್ಕೆ ಮನವಿ ಸಲ್ಲಿಸಿ. ಪರಿಹಾರ ಕೇಳಿ. ಇದೆಲ್ಲ ನಿಜವಾಗಿಯೂ ಸಂತ್ರಸ್ತರ ಪರ ನಿಲ್ಲುವ ಹೋರಾಟ. ಅದನ್ನು ಬಿಟ್ಟು ಆಸ್ಪತ್ರೆಗೇ ನುಗ್ಗುವುದನ್ನು ಇನ್ನೂ ಯಾವ ಬಾಯಲ್ಲಿ ಸ್ವಾಮಿ ಹೋರಾಟ ಅಂತ ಕರೆಯುತ್ತೀರಿ? ಆಸ್ಪತ್ರೆಯಲ್ಲಿ ಮತ್ತೊಬ್ಬ ವೈದ್ಯರು ಇವರ ಗೂಂಡಾಗಿರಿಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಇದನ್ನು ಗಮನಿಸಿದ ಮಹಾನ್‌ ಇಪ್ಪತ್ತು ಹೋರಾಟಗಾರರು, ಡಾಕ್ಟರ್‌ನನ್ನು ಮಧ್ಯ ನಿಲ್ಲಿಸಿಕೊಂಡು ‘ವೀಡಿಯೋ ಡಿಲೀಟ್‌ ಮಾಡೋಲೇಯ್‌!’ ‘ಗ್ಯಾಲರಿ ತೋರ್ಸೋ,’ ‘ಲಾಕ್‌ ಓಪನ್‌ ಮಾಡೋ,’ ‘ಮೊಬೈಲ್‌ ಕೊಡೋ’ ಎನ್ನುವ ಮೂಲಕ ವೈದ್ಯರ ಮೈಮುಟ್ಟಿ ಸ್ವಲ್ಪ ತಟ್ಟಿ ಕರ್ನಾಟಕ ರಕ್ಷಣೆ ಮಾಡಿದರು.

ಎಂಥ ಸಂಸ್ಕೃತಿ ಹುಟ್ಟು ಹಾಕುತ್ತಿದೀವಿ ಸ್ವಾಮಿ ನಾವು? ಕನ್ನಡಿಗರು ಕರುಣೆಯುಳ್ಳವರು ಎಂಬುದನ್ನೋ ಅಥವಾ ಕನ್ನಡಿಗರೆಂದರೆ ಕೊಡಲಿ ಹಿಡಿಯುವವರು ಎಂಬುದನ್ನೋ? ನಮ್ಮ ಕನ್ನಡದ ಸಂಸ್ಕೃತಿ ಇವರೆಲ್ಲ ಬರುವ ಮುಂಚೆ ಹೀಗಿತ್ತಾ? ಬೇರೆ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬರಲೇಬಾರದು ಎನ್ನುವುದಕ್ಕಾದರೂ ಈ ಸಂಘಟನೆಗಳ ಕೊಡುಗೆಯೇನು? ನಮ್ಮ ಸಂಸ್ಕೃತಿ ಹೇಗಿತ್ತು ಎಂಬುದಕ್ಕೆ ಡಿವಿಜಿಯವರ ಕಗ್ಗ ನಮಗೆ ಮಾರ್ಗದರ್ಶನವಾಗಿತ್ತು.

ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು
ಅಸಮಂಜಸದಿ ಸಮನ್ವಯ ಸೂತ್ರ ನಯವ
ವೆಸನಮಯ ಸಂಸಾರದಲಿ ವಿನೋದವ ಕಾಣ್ಬ
ರಸಿಕತೆಯ ಲೋಗವಲೋ – ಮಂಕುತಿಮ್ಮ

ಎಂದು ಹೇಳಿದ್ದರು. ಅಂದರೆ ಅಸಮದಲ್ಲೂ ಸಮತೆಯನ್ನು ಕಾಣುವುದು, ವಿಷಮದಲ್ಲಿ ಸ್ನೇಹವನ್ನು ಕಾಣುವುದು ಸಮಂಜಸವಲ್ಲದರಲ್ಲೂ ಸಮನ್ವಯವನ್ನು ಕಾಣುವುದು, ಸಂಕಷ್ಟಗಳೇ ತುಂಬಿದ ಸಂಸಾರದಲ್ಲಿ ವಿನೋದದ ನಗೆಯನ್ನು ಕಾಣುವಂಥ ರಸಿಕತೆಯೇ ಯೋಗ ಎಂದು ತಿಳಿ ಎನ್ನುತ್ತಾರೆ. ಇಂಥ ನಾಡು ನಮ್ಮದು. ಇಂಥ ಸಂಸ್ಕೃತಿಯೆಲ್ಲಿ, ಆಸ್ಪತ್ರೆಗೆ ನುಗ್ಗಿ ‘ಕನ್ನಡ ಮಾತಾಡೆಲೇಯ್‌’ ಎಂದು ವೈದ್ಯೆಯ ಮುಖಕ್ಕೆ ಬೆರಳು ತೋರಿಸುವ ಸಂಸ್ಕಾರವೆಲ್ಲಿ?

ಸನ್ನಿ ಲಿಯೋನ್‌ ಕಾರ್ಯಕ್ರಮ ನಡೆಯಲು 30 ಲಕ್ಷ ರೂಪಾಯಿ ಕೇಳಿದಂತಲ್ಲ ವೈದ್ಯರ ಕೆಲಸ. ಮೇಕಪ್‌ ರೂಮಿನಿಂದ ನೇರ ಆಸ್ಪತ್ರೆಗೆ ನುಗ್ಗುವ ವೀರವನಿತೆಯರು ಬೆವರಿಳಿದು ಮೇಕಪ್‌ ಮಾಸುವುದರೊಳಗೆ ಹೊರಗೆ ಬಂದು ಎಸಿ ಕಾರಲ್ಲಿ ಕುಳಿತಂತೆಯೂ ಅಲ್ಲ ವೈದ್ಯರ ಕೆಲಸ. ನನ್ನ ಸ್ನೇಹಿತರೇ ಕೆಲ ವೈದ್ಯರಿದ್ದಾರೆ, ಅವರು 18-19 ಗಂಟೆ ಯಾವುದೇ ಬಿಡುವಿಲ್ಲದೇ ಇಡೀ ರಾತ್ರಿ ಮತ್ತು ಬೆಳಗ್ಗೆ ಕೆಲಸ ಮಾಡುತ್ತಿರುತ್ತಾರೆ. ಇದು ಇವರ ನಿತ್ಯ ಕಾಯಕ. ಅಂದರೆ, ಇವರಿಗೆ ಸ್ವಂತ ಜೀವನ ಎನ್ನುವುದೇ ಇಲ್ಲ. ಅಷ್ಟೆಲ್ಲ ಕೆಲಸ ಮಾಡಿ ನನ್ನ ಸ್ನೇಹಿತೆಯ ಪರಿಸ್ಥಿತಿ ಹೀನಾಯವಾಗಿ, ತಾನು ಕೆಲಸ ಮಾಡುವ ಆಸ್ಪತ್ರೆಯಲ್ಲೇ ಆ ಡ್ರಿಪ್‌ ಹಾಕಿಸಿಕೊಂಡು ಅಡ್ಮಿಟ್‌ ಆಗಿದ್ದರು. ಸ್ವಲ್ಪ ದಿನದ ನಂತರ ಹಾಸಿಗೆಯಿಂದ ಎದ್ದು ಮತ್ತೆ ಅಲ್ಲೇ ಕೆಲಸಕ್ಕೆ ಹಾಜರ್‌. ಇವರಿಗೆ ಆಕರ್ಷಕ ಸಂಬಳವೂ ಇರುವುದಿಲ್ಲ. ಜತೆಗೆ ಸಂಘಟನೆ ಹೆಸರು ಹೇಳಿಕೊಂಡು ಜೋರು ಜೋರು ಆವಾಜ್‌ ಹಾಕಿ, ಹೊಡೆದು ಉಚಿತವಾಗಿ ಚಿಕಿತ್ಸೆ ಮಾಡಿಸಿಕೊಳ್ಳುವವರು ಒಂದು ಕಡೆಯಾದರೆ, ತಮಗೆ ಬೇಕಾದ ಹಾಗೆ ವರದಿ ಕೊಡು ಎಂಬ ದಬ್ಬಾಳಿಕೆ ಪೊಲೀಸರದ್ದು. ವೈದ್ಯರೆಂದರೆ ಡೋಲೊ, ಪ್ಯಾರಾಸಿಟಾಮಲ್‌, ಕ್ರೋಸಿನ್‌ ಕೊಡುವವರು ಎಂದುಕೊಂಡಿರುವವರಿಗೆ ಅದರಾಚೆಗೂ ಒಂದು ಜಗತ್ತು ಇದೆ ಎಂದು ತಿಳಿಯಬೇಕು. ವೈದ್ಯರ ಮೇಲೆ ಹಲ್ಲೆ ಮಾಡುವವರಿಗೆ ಮೊದಲು ತಿಳಿಯಬೇಕು.

ದುರಂತ ಏನೆಂದರೆ ಕೆಲ ವೈದ್ಯರು ಜೀವನ ಪರ್ಯಂತ ದುಡಿಯುವ ಹಣವನ್ನು ಕನ್ನಡದ ಸಂಘಟನೆಗಳು ಸನ್ನಿ ಲಿಯೋನ್‌ ಕಾರ್ಯಕ್ರಮವೊಂದರಲ್ಲೇ ದುಡಿಯುತ್ತಿದ್ದಾರೆ. ವೈದ್ಯ ಯಾವನೇ ಇರಲಿ. ಆತ ಓದಬೇಕಾದ್ದು ಇಂಗ್ಲಿಷಿನಲ್ಲೇ. ವಿಷಯಗಳು ಇರುವುದೂ ಇಂಗ್ಲಿಷಿನಲ್ಲಿ. ಪರೀಕ್ಷೆ ಬರೆಯುವುದೂ ಇಂಗ್ಲಿಷಿನಲ್ಲಿ. ನಮ್ಮವರಿಗೇ ಕನ್ನಡ ಮರೆತುಹೋಗುವ ಈ ದಿನಗಳಲ್ಲಿ ಆ ವೈದ್ಯರು ಬೇರೆ ರಾಜ್ಯದಿಂದ ಬಂದು ಇಲ್ಲಿ ಕನ್ನಡ ಕಲಿತು, ಚೂರುಪಾರು ಮಾತಾಡುತ್ತಿದ್ದಾರೆ. ಅದಕ್ಕಾದರೂ ಗೌರವ ಕೊಡಬೇಕಿತ್ತು.
ಇದೆಲ್ಲ ಬಿಡಿ, ಕನ್ನಡ ಬಾವುಟ ಹಿಡಿದು ಶಾಲು ಧರಿಸಿ ಹೆಲ್ಮೆಟ್‌ ಇಲ್ಲದೇ ಹೊರಡುವ ಎಷ್ಟು ಮಂದಿಗೆ ಕನ್ನಡ ಸರಿಯಾಗಿ ಬರುತ್ತದೆ ಎಂದು ಕೇಳಿದರೆ ಪೆಬ್ಬೆಬ್ಬೆ ಎಂದು ಕ್ಯಾಮರಾ ಆಫ್‌ ಮಾಡೋ ಎನ್ನುವ ಬುದ್ಧಿವಂತರೇ ಅಧಿಕ. ಕಳೆದ ವರ್ಷ ಟಿವಿ9 ಮಾಧ್ಯಮವು ಹೋರಾಟಗಾರರ ಮುಂದೆ ಹೋಗಿ ಮೈಕ್‌ ಇಟ್ಟು, ನಾಡಗೀತೆ ಬರೆದವರಾರು ಎಂದು ಕೇಳಿದರೆ ರಬಿಂದ್ರನಾಥ್‌ ಟಾಗೋರ್‌ ಅಲ್ವಾ? ಎಂದು ಹೇಳುತ್ತಾರೆ. ಇನ್ನು ಕೆಲವರಿಗೆ ಕನ್ನಡವೇ ಬರುವುದಿಲ್ಲ. ಅ ಆ ಇ ಈ ಹೇಳುವುದಕ್ಕೆ ಹ, ಹಾ, ಹಿ, ಹೀ.. ಹೇಳುತ್ತಾರೆ. ಸ್ವರಗಳು ಯಾವುದು, ವ್ಯಂಜನಗಳು ಎಂದರೆ ತಮಿಳು, ತೆಲುಗು ಕೇಳಿದಂತೆಯೇ ಆಗುತ್ತದೆ. ರಾಜ್ಯೋತ್ಸವ ಎಂಬುದು ರಾಜ್ಯೋಸ್ತವ ಆಗುತ್ತದೆ, ಚಿಕಿತ್ಸೆ ಎಂಬುದು ಚಿಕಿಸ್ತೆ ಆಗುತ್ತದೆ. ಇವರಿಗಿಂತ ಹಿಂದಿಯವರೇ ಕನ್ನಡವನ್ನು ಚೆನ್ನಾಗಿ ಮಾತಾಡುತ್ತಾರೆ. ಇಂಥವರು ಕನ್ನಡ ಹೇಗೆ, ಎಲ್ಲಿಂದ ಉದ್ಧಾರವಾಗುತ್ತಿದೆ?

ಅಲ್ಲ, ಕನ್ನಡ ಕನ್ನಡ ಎಂದು ಚೀರಾಡುವ ಹೋರಾಟಗಾರರು ಕನ್ನಡ ಸ್ಥಾಪನೆಗಾಗಿ ಕೈಗೊಂಡ ಘನಂದಾರಿ ಕೆಲಸಗಳಾದರೂ ಏನು ಹೇಳಲಿ? ಕೆಲ ಅಂಗಡಿಯವರು ಕನ್ನಡದಲ್ಲಿ ಬೋರ್ಡ್‌ ಹಾಕಿಲ್ಲದನ್ನು ವಿರೋಧಿಸಿ, ಗಾಜು ಪುಡಿ ಮಾಡುವ, ಹೋಗ್ರೋ ನಿಮ್‌ ರಾಜ್ಯಕ್ಕೆ ಎಂಬ ಆವಾಜ್‌ ಹಾಕುವುದು, ಹೆಚ್ಚೆಂದರೆ, ದೊಡ್ಡಗೌಡರ ಮೆನೆಗೆ ಹೋಗಿ ಆಗಾಗ ಹೂಗುಚ್ಛ ಕೊಟ್ಟು ಬರುವುದರ ಹೊರತಾಗಿ ಕನ್ನಡಕ್ಕಾಗಿ ಏನ್‌ ಕಿಸಿದಿದ್ದೀರಾ ಎಂಬುದನ್ನಾದರೂ ಹೇಳಬೇಕಲ್ಲವೇ?

ಸರಿ, ರಾಜ್ಯದಲ್ಲಿ ವಲಸೆ ಬಂದಿರುವ ಎಷ್ಟೋ ಜನರಿಗೆ ಕನ್ನಡ ಬರಲ್ಲ. ಅಂಥವರು ಕನ್ನಡವನ್ನು ಪ್ರೀತಿಯಿಂದ ಕಲಿಸಿದರೆ ಕಲಿಯುತ್ತಾರೋ ಅಥವಾ ಹೊಡೆದು ಏಯ್‌ ಕನ್ನಡ ಕಲಿಯೋ, ಇಲ್ಲ ನಿನ್‌ ರಾಜ್ಯಕ್ಕೆ ಹೋಗೋ, ಕೈ ಕೆಳಗ್‌ ಇಳಿಸಿ ಮಾತಾಡೋ ಎಂದರೆ ಕಲಿಯುತ್ತಾರೋ? ಇಂಥವರಿಗೆ ಸಹಾಯವಾಗುವ ಹಾಗೆ ಕನ್ನಡ ಪಾಠ ಮಾಡುವ ಎಷ್ಟು ಕೇಂದ್ರಗಳನ್ನು ತೆರೆದಿದ್ದೀರ ಸ್ವಾಮಿ? ಒಂದಾದರೂ ಇದೆಯಾ? ದುರಂತ ಏನೆಂದರೆ, ಈಗ ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ ಮಹಿಳೆಯರು ಫೇಸ್ಬುಕ್‌ನಲ್ಲಿ ಬರೆಯುವುದೇ ಇಂಗ್ಲಿಷ್‌ನಲ್ಲಿ! ಕನ್ನಡ ಬರೆಯುವುದಕ್ಕೆ ಬರುವುದಿಲ್ಲ, ಕನ್ನಡ ಮಾತಾಡುವುದಕ್ಕೆ ಬರುವುದಿಲ್ಲ, ಕನ್ನಡೇತರರಿಗೆ ಕನ್ನಡ ಕಲಿಸುವ ಯೋಜನೆಗಳಿಲ್ಲ, ಒಟ್ಟಾರೆ ಕನ್ನಡಕ್ಕಾಗಿ ‘ಏನ್ರಯ್ಯಾ ಮಾಡಿದ್ದೀರ’ ಎಂದು ಕೇಳಿದರೆ, ಹೊಡೆದಾಟ, ಹೋರಾಟ! ಯಾರ ವಿರುದ್ಧ? ಕನ್ನಡಿಗರ ವಿರುದ್ಧವೇ!

ಮಾಧ್ಯಮಗಳು ಈ ಕನ್ನಡ ಮಾತಾಡಿ ಕೊಲೆ ಮಾಡೋ ಹೋರಾಟಗಾರರ ಯೋಗ್ಯತೆಯನ್ನು ಟಿವಿಯಲ್ಲಿ ತೋರಿಸಿದಾಗ, ನಿಮ್ಮ ಆಫೀಸಿಗೇ ಮುತ್ತಿಗೆ ಹಾಕ್ತೀವಿ ಎಂದು ಸಿಡಿದೆದ್ದಿದ್ದರು. ಒಬ್ಬರಾದ ಮೇಲೆ ಒಬ್ಬರು ಫೇಸ್ಬುಕ್‌ನಲ್ಲಿ ಲೈವ್‌ ಬಂದು, ಏನ್ರೋ ಕನ್ನಡದ ಪರವಾಗಿ ಹೋರಾಟ ಮಾಡ್ತಾ ಇರುವವರನ್ನು ಲೇವಡಿ ಮಾಡ್ತೀರಾ? ಕ್ಷಮೆ ಕೇಳಿ ಎಂದು ಬೆರಳು ಮುಂದೆ ಮಾಡಿದ್ದರು.

ಅಸಲಿಗೆ ಅದು ಲೇವಡಿ ಅಲ್ಲ, ನಕಲಿ ಹೋರಾಟಗಾರರ ಹಣೆಬರಹವನ್ನು ಜನರಿಗೆ ತೋರಿಸಿದ್ದು ಎಂದರೆ ಅರ್ಥವೇ ಆಗುತ್ತಿಲ್ಲ. ಅಲ್ಲಿಗೆ ಈ ಹೋರಾಟಗಾರರು ಕನ್ನಡಿಗರ ವಿರುದ್ಧವೇ ಹೋರಾಟ ಮಾಡುತ್ತಾರೆ ಎಂದಾಯಿತಲ್ಲ. ಅರ್ಥಾತ್‌ ಇದು ಹೋರಾಟ ಅಲ್ಲ, ಕನ್ನಡದ ಹೆಸರಲ್ಲಿ ನಾವೇನಾದರೂ ಮಾಡುತ್ತೀವಿ, ನೈಸ್‌ ರಸ್ತೆ ಸೇರಿದಂತೆ ರಾಜ್ಯದ ಹೆದ್ದಾರಿಗಳಲ್ಲಿ ಉಚಿತವಾಗಿ ಹೋಗುವುದರಿಂದ ಹಿಡಿದು ಎಲ್ಲ ದಂಧೆಗಳನ್ನೂ ಮಾಡುತ್ತೀವಿ. ಅದನ್ನು ತಡೆದರೆ ಕನ್ನಡದ ಬಾವುಟ ಹಿಡಿದು ಬರುತ್ತೀವಿ ಎಂಬ ಸಂಸ್ಕೃತಿಯನ್ನು ಹುಟ್ಟು ಹಾಕಲಾಗುತ್ತಿದೆಯಾ?

ಇದೇ ಅಲ್ಲವೇ ಮಿಂಟೋದಲ್ಲೂ ಆಗಿದ್ದು? ಅದ್ಯಾರೋ ಮೈಸೂರಿನ ಮುದುಕನನ್ನು ಮುಂದೆ ತಳ್ಳಿ ಹೋರಾಟ ಮಾಡಿದ್ದ ಆಸಾಮಿಗಳು ಈಗೆಲ್ಲಿದ್ದಾರೆ? ನಿನ್ನೆ (ಗುರುವಾರ) ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಪದ ಮುದುಕರೊಬ್ಬರೇ ಕೂಗುತ್ತಿದ್ದರು. ಹೋರಾಟ ಅಂತ ಬಂದವರೆಲ್ಲರೂ, ಯುದ್ಧ ಗೆದ್ದು ಜೈಲಿಗೆ ಹೋಗುತ್ತಿರುವವರಿಗೆ ಜೈಕಾರ ಹಾಕುವುದಲ್ಲಿದ್ದರು.

ಸ್ವಾಮಿ ನೀವುಗಳು ಗೂಂಡಾಗಿರಿ ಮಾಡಿ, ಬೇಸರವೇ ಇಲ್ಲ. ಅದರ ಬದಲು ಕನ್ನಡದ ಬಾವುಟ, ಶಾಲು ಧರಿಸಿ ನಮ್ಮ ಮರ್ಯಾದೆ ಯಾಕೆ ತೆಗೆಯುತ್ತೀರಿ? ಕನ್ನಡಿಗರು ಸಾತ್ವಿಕ ಸ್ವಭಾವದವರು, ಉತ್ತಮ ಮನಸ್ಸುಳ್ಳವರು, ಮತ್ತೊಬ್ಬರಿಗೆ ಸಹಾಯ ಮಾಡುವವರು ಎಂಬುದಕ್ಕೆ ಹೆಸರುವಾಸಿ. ಅದೇ ನಮ್ಮ ಗುರುತಾಗಿರಲಿ ಅಥವಾ ಕನ್ನಡಿಗರು ಎಂದಾಗ ನೆನಪಾಗಬೇಕಾದವರು ಬೇಂದ್ರೆ, ಡಿವಿಜಿ, ಆಲೂರು ವೆಂಕಟರಾಯರು, ವಿಶ್ವೇಶ್ವರಯ್ಯ, ಪಂಪ, ಪೊನ್ನ, ರನ್ನ, ಕುಮಾರವ್ಯಾಸ, ಕುವೆಂಪು, ಕಾರಂತ, ಮಾಸ್ತಿ… ಹೀಗೆ ಹೆಸರು ಸಾಗುತ್ತಿರಬೇಕೇ ವಿನಾ ಯಾವನೋ ಮುಖಕ್ಕೆ ಹೊಡೆದು ಕೈ ತಿರುಪುವವನಲ್ಲ. ಹೆಚ್ಚು ಬರೆದರೆ ನನ್ನ ಮೇಲೆ ದಾಳಿ ಮಾಡಿದರೂ ಅಚ್ಚರಿಯಿಲ್ಲ. ಇಷ್ಟಕ್ಕೇ ನಿಲ್ಲಿಸಿ ಜೀವ ಉಳಿಸಿಕೊಳ್ಳುತ್ತೇನೆ.

 

 

Leave a Reply

Copyright©2021 Chiranjeevi Bhat All Rights Reserved.
Powered by Dhyeya