ಬೆಂಗಳೂರಿನ ಜನತೆಯಿಂದ ಕೆನ್ನೆಗೆ ಸರಿಯಾಗಿ ಬಾರಿಸಿಕೊಂಡು, ಹೇಗೆ ಬಾರಿಸಿದ್ದಾರೆ ನೋಡೋಣವೆಂದರೂ ಮುಖವನ್ನು ತೋರದೇ ಮುಖ+ತಲೆಯನ್ನು ಮರೆಸಿಕೊಂಡಿದ್ದ ಆಸಾಮಿ ಮತ್ತೆ ಪ್ರತ್ಯಕ್ಷವಾಗಿದೆ. ಹೌದು, ಪ್ರಕಾಶ್ ರೈ ಇಸ್ ಬ್ಯಾಕ್! ಯಾವ ವಿಷಯಕ್ಕೆ? ನಿಮ್ಮ ಊಹೆ ಅದರಲ್ಲೂ ಸರಿ. ಮತ್ತದೇ ಹಿಂದೂ ಧರ್ಮ ಮತ್ತು ಹಿಂದೂ ದೇವರ ಬಗ್ಗೆ ಅವರಿಗೆ ಇರುವ ಉರಿಯಿಂದ. ಅಸಹಿಷ್ಣುತೆ ಎಂದು ಹೇಳಬಹುದಿತ್ತು. ಇದು ಪ್ರಕಾಶ್ ರೈರದ್ದು ಅಸಹಿಷ್ಣುತೆಯನ್ನೆಲ್ಲ ದಾಟಿದ ಒಂದು ಹಂತ. ಅದು ಉರಿ. ಮುಂದಿನದ್ದು ಯಾವ ಉರಿ ಎಂದು ಊಹಿಸಿಕೊಳ್ಳಬಹುದು.
ಈ ಬಾರಿಯ ಉರಿ ಇರುವುದು ರಾಮ ಮತ್ತು ಸೀತೆಯ ಮೇಲೆ. ಇತ್ತೀಚೆಗೆ ಒಂದು ಹಿಂದಿ ಸಂದರ್ಶನದಲ್ಲಿ ಮಾತನಾಡುತ್ತಾ, ಪ್ರಕಾಶ್ ರೈ, ‘ರಾಮ ಮತ್ತು ಸೀತಾ ಹೆಲಿಕಾಪ್ಟರ್ನಲ್ಲಿ ಪುಷ್ಪಕ ವಿಮಾನ ಎಂದುಕೊಂಡು ಬರುವುದು ನನಗೆ ಇಷ್ಟವಿಲ್ಲ. ಯಾರೋ ಬಾಂಬೆಯಿಂದ ರಾಮ ಸೀತೆಯ ಥರ ಮೇಕಪ್ ಹಾಕಿ ಬಂದಿರುವ ಮಾಡೆಲ್ಗಳಿಗೆ ನಮಸ್ಕಾರ ಮಾಡುವುದು ನಮ್ಮ ಸಂಸ್ಕೃತಿಯಲ್ಲ’, ಎಂದೆಲ್ಲ ಬಡಬಡಾಯಿಸಿದ್ದಾರೆ. ಅಮ್ಮ ಹೊಡೆದಾಗ ಮಗು ಸೂರು ಕಿತ್ತುಹೋಗುವ ಹಾಗೆ ಚೀರುವಂತೆ, ಬೆಂಗಳೂರಿನ ಜನತೆ ಕಳೆದ ಬಾರಿ ಚುನಾವಣೆಯಲ್ಲಿ ಕೊಟ್ಟ ಹೊಡೆತಕ್ಕೆ ಈಗ ಎಗರಾಡುತ್ತಿರುವುದು ಕಾಣುತ್ತದೆ.
ಇರಲಿ ವಿಷಯಕ್ಕೆ ಬರೋಣ, ರಾಮ ಹೆಲಿಕಾಪ್ಟರ್ನಲ್ಲಿ ಹಾಗೆ ಬರುವುದು ನನಗೆ ಇಷ್ಟವಿಲ್ಲ ಎನ್ನುವುದಕ್ಕೆ ನೀವು ಯಾರು ಸಾಹೇಬ್ರೆ? ಅವಕಾಶಕ್ಕಾಗಿ ರಾಜ್ಯ ಬಿಟ್ಟು ರಾಜ್ಯಕ್ಕೆ ಹೋಗಿ, ಬಿಲ್ಡಿಂಗ್ ಮೇಲೆ ಬಿಲ್ಡಿಂಗ್ ಕಟ್ಟಿ ಅದಕ್ಕಿಬ್ಬರು ವಾಚ್ಮನ್ಗಳು, ಅವರನ್ನು ನೋಡುವುದಕ್ಕೆ ಸಿಸಿಟಿವಿಗಳು ಹಾಕಿ ಆರಾಮಾಗಿ ಕುಳಿತಿರುವ ತಾವು ಸಮಾಜಕ್ಕೆ ಉಪದೇಶ ಕೊಡುತ್ತೀರಾ? ದೇಶ ನಿಮ್ಮಿಷ್ಟದಂತೆ ನಡೆಯಬೇಕು ಎಂದಿದ್ದರೆ, ಪ್ರಜಾಪ್ರಭುತ್ವ ಎಂದು ಯಾಕಾಗಿ ಹೇಳಬೇಕಿತ್ತು? ಪ್ರಕಾಶ, ದೇಶ ಶ್ರೀಮಂತರೆಂಬ ನಿಮ್ಮಂಥ ಅಲ್ಪಸಂಖ್ಯಾತರಿಂದ ನಡೆಯುತ್ತಿಲ್ಲಯ್ಯಾ, ನಮ್ಮಂಥ ಬಡಜನರಿಂದ ನಡೆಯುತ್ತಿದೆ. ಅವರಿಟ್ಟ ನಂಬಿಕೆಗಳಿಂದ ನಡೆಯುತ್ತಿದೆ. ಇದ್ದರೆ ತಿನ್ನುತ್ತೇನೆ, ಇಲ್ಲದಿದ್ದರೆ ನಾನು ಹುಟ್ಟಿದ ಮಣ್ಣಲ್ಲೇ ಮಣ್ಣಾಗುತ್ತೇನೆ ಎಂಬ ರೈತರ ನಂಬಿಕೆಗಳಿಂದ ನಡೆಯುತ್ತಿದೆ.
‘ಇದು ಸಮಾಜಕ್ಕೆ ಒಳ್ಳೇದಲ್ಲ, ಇದರಿಂದ ಅಲ್ಪಸಂಖ್ಯಾತರಿಗೆ ಭಯವಾಗುತ್ತದೆ.’ ಎಂದು ಬೇರೆ ಹೇಳಿದ್ದಾರೆ ನಟಶಿಖಾಮಣಿ. ನೋಡಿ ಪ್ರಕಾಶ, ವಾಲ್ಮೀಕಿ ರಾಮಾಯಣವನ್ನು ಎಷ್ಟೇ ತೆಗೆದು ನೋಡಿ, ರಾಮನಿಂದ ಭಯ ಇದ್ದಿದ್ದು ರಾವಣನಿಗೆ, ರಾಕ್ಷಸರಿಗೆ, ಸಮಾಜ ಘಾತುಕರಿಗೆ ಮಾತ್ರ. ರಾಮ ಸಂಹಾರ ಮಾಡಿದ್ದೂ ಅವರನ್ನೇ. ಇವರಲ್ಲಿ ನೀವು ಹೇಳುತ್ತಿರುವ ಅಲ್ಪಸಂಖ್ಯಾತರಾರು? ನೀವು ರಾಕ್ಷಸರೇ? ನನ್ನ ಲೆಕ್ಕದಲ್ಲಂತೂ ಇಲ್ಲ. ಹೆಚ್ಚೆಂದರೆ, ನೀವು ಸಿನಿಮಾದಲ್ಲಿ ಹೆಣ್ಣು ಮಕ್ಕಳ ಮೇಲೆ ಎರಗುವ, ಒಂದಷ್ಟು ಭ್ರಷ್ಟಾಚಾರ ಮಾಡುವ, ಹೀರೋಗಳ ಬಳಿ ಒದೆ ತಿನ್ನುವ ಪಾತ್ರ ಮಾಡಿರಬಹುದು. ರಾಮನ ಲೆಕ್ಕದಲ್ಲಿ ನೀವೇನು ಎಂದು ನೀವೇ ಏಕೆ ಮೈಕಲ್ಲಿ ಒದರುತ್ತಿದ್ದೀರ ಸ್ವಾಮಿ? ಅಲ್ಪಸಂಖ್ಯಾತರೆಂದರೆ ಯಾರು? ಈಗಿನ ಕಾಲದವರಾ? ಅಲ್ಲಪ್ಪಾ, ಅದಕ್ಕೂ ಉತ್ತರ ಕೊಡೋಣ ಕೇಳಿ. ನಮ್ಮ ಕಲಬುರಗಿಯಲ್ಲೇ ರಾಮನವಮಿ ಮೆರವಣಿಗೆಯ ಆ ಬಿಸಿಲಿನಲ್ಲಿ ಬರುವ ಹಿಂದೂಗಳಿಗೆ ಕೂಲ್ ಡ್ರಿಂಕ್ಸ್ ಕೊಡುವ ಮೂಲಕ ಮುಸ್ಲಿಮರು ತಮಗೆ ರಾಮ ಎಂದರೆ ಭಯವಿಲ್ಲ ಎಂದು ತೋರಿಸಿದ್ದಾರೆ. ಅಷ್ಟೇ ಅಲ್ಲ, ಈ ಮೆರವಣಿಗೆ ಮಸೀದಿಯ ಮುಂದೆಯೇ ಸಾಗಿದೆ. ಆ ರಾಮನ ವಿಗ್ರಹದ ಮುಂದೆ ನಿಂತರೆ ಪ್ರಕಾಶ ಎಲ್ಲಿ ಎಂದು ಹುಡುಕಬೇಕು ಎಂಬಷ್ಟು ದೊಡ್ಡ ವಿಗ್ರಹ. ಅಲ್ಲೇನೂ ಗಲಾಟೆಯಾಗಲಿಲ್ಲ. ಅಯ್ಯೋ ಆಗೆಲ್ಲ ಭಾರತ ಚೆನ್ನಾಗಿತ್ತು, ಮೋದಿ ಬಂದ ಮೇಲೆ ಹಾಳಾಯಿತು ಎನ್ನುವುದಕ್ಕೆ ಇದೆಲ್ಲ ಆದದ್ದು ಗಾಂಧಿ/ಅಂಬೇಡ್ಕರ್ ಇದ್ದ ಕಾಲದಲ್ಲಲ್ಲ. ಇದೇ 2019ರ ರಾಮನವಮಿಯಲ್ಲಿ. ಹಾಗಾದರೆ ರಾಮನಿಗೆ ಹೆದರುವ ಆ ಅಲ್ಪಸಂಖ್ಯಾತರಾರು? ಈ ಮುಸ್ಲಿಮರೋ ಅಥವಾ ಚಲಾವಣೆ ಕಳೆದುಕೊಂಡಿರುವ ಔಟ್ ಡೇಟೆಡ್ ನಟರು ಅವನ ಪ್ರಿಪೇಯ್ಡ್ ಚೇಲಾಗಳೋ?
ಅವರಿಷ್ಟ ಬಂದ ಹಾಗೆ ಅವರು ದೇವರನ್ನು ನಂಬುವುದಕ್ಕೆ, ನಂಬಿಕೆಗಳ ಆಚರಣೆ ಮಾಡುವುದಕ್ಕೆ ಅಂಬೇಡ್ಕರ್ ಅವರೇ ಸಂವಿಧಾನದ ಆರ್ಟಿಕಲ್ 25-28ರವರೆಗೆ ಅನುಮತಿ ನೀಡಿದ್ದಾರೆ. ಅಷ್ಟೇ ಅಲ್ಲ, ಮೂಲಭೂತ ಹಕ್ಕುಗಳು ಭಾಗ 3 ಎಂಬ ಕೈಬರಹದಲ್ಲಿರುವ ಮೂಲ ಸಂವಿಧಾನವದ ಪುಟವನ್ನು ಬೇಕಾದರೆ ತೆಗೆದು ನೋಡಿ. ಅದರಲ್ಲಿ, ರಾಮ-ಲಕ್ಷ್ಮಣ-ಸೀತೆಯ ಚಿತ್ರವನ್ನು ಬಿಡಿಸಿದ್ದಾರೆ. ಇದು ಸಂವಿಧಾನದಲ್ಲೇ ಇರುವುದು. ಹಿಂದೂಗಳು ಅವರ ನಂಬಿಕೆಗಳನ್ನು ಅವರು ಆಚರಿಸುತ್ತಾರೆ ಅದರಲ್ಲಿ ತಪ್ಪೇನು ಎಂದಾಗ ಪ್ರಕಾಶ, ‘ಮಕ್ಕಳು ಚೈಲ್ಡ್ ಪಾರ್ನ್(ನಗ್ನ ಚಲನಚಿತ್ರ) ನೋಡುತ್ತಾರೆಂದರೆ ಬಿಡುವುದಕ್ಕೆ ಆಗುತ್ತಾ?’ ಎಂದು ಕೇಳುತ್ತಾರೆ.
ಸಂವಿಧಾನವನ್ನು ಉಲ್ಲಂಘಿಸಿರುವ, ಯಾವುದೋ ಪಾರ್ನ್ ಚಿತ್ರವನ್ನು ನಮ್ಮ ರಾಮ ಸೀತೆಗೆ ಹೋಲಿಸಿರುವ,ಸಮಸ್ತ ಹಿಂದೂಗಳ ಭಾವನೆಗೆ ಧಕ್ಕೆಯನ್ನುಂಟು ಮಾಡಿರುವ ಇವನಿಗೆ ಯಾರು ಯಾಕಾಗಿ ಮರ್ಯಾದೆ ಕೊಡಬೇಕು? ಹಾಗೆ ಮರ್ಯಾದೆ ಕೊಟ್ಟರೆ, ಪ್ರಕಾಶ ಸಿನಿಮಾದಲ್ಲಿ ನಟಿಸಿದ ಹಾಗೇ ಅಲ್ಲವೇ ನಮ್ಮ ಬಾಳು? ನಮಗೂ ಪ್ರಕಾಶಂಗೂ ಏನು ವ್ಯತ್ಯಾಸ?
ಹಾಗೆ, ರಾಮನನ್ನು ಆಚರಿಸುವಾಗ ಉಂಟಾಗುವ ಶಬ್ದದಿಂದ ಅಲ್ಪಸಂಖ್ಯಾತಗೆ ತೊಂದರೆ ಆಗುತ್ತದೆ ಎಂಬ ಈತನ ವಾದವನ್ನು ಒಪ್ಪಿಕೊಂಡರೂ, ಮಸೀದಿಯಲ್ಲಿ ದಿನಕ್ಕೈದು ಬಾರಿ ಮೈಕ್ನಲ್ಲಿ ಯಾರಿಗೂ ಅರ್ಥವಾಗದ ಭಾಷೆಯಲ್ಲಿ ಕೂಗುವುದನ್ನು ಕೇಳಿದರೆ ಹಿಂದೂಗಳಿಗೂ ಭಯವಾಗುವುದಿಲ್ಲವೇ? ಮೈಕ್ನಲ್ಲಿ ಏನು ಹೇಳುತ್ತಿದ್ದಾರೋ ಕನ್ನಡಿಗನಾಗಿ ನನಗೆ ಗೊತ್ತಿಲ್ಲಪ್ಪ. ನಿನ್ನ ಹಾಗೆ ನಾನು ಬಹುಭಾಷಾ ನಟನೂ ಅಲ್ಲ. ಅವರೇನು ಹೇಳುತ್ತಿದ್ದಾರೆಂದು ನನಗೆ ಅರ್ಥವಾಗದ ಮೇಲೆ ನನಗೇಕೆ ಭಯವಾಗಬಾರದು? ಅದರ ಬಗ್ಗೆ ಪ್ರಕಾಶ ಬಾಯೇ ಬಿಡುವುದಿಲ್ಲವೇಕೆ? ಮೊಹರಂ ಬಂತೆಂದರೆ, ಚಾಕು ಕತ್ತಿಗಳು ರಸ್ತೆಯಲ್ಲಿ ಝಳಪಿಸುತ್ತವೆ. ಒಂದು ಲಾರಿ ತುಂಬ ಸ್ಪೀಕರ್ಗಳನ್ನೇ ಕಟ್ಟಿ ಮೂರು ಊರಿಗೆ ಕೇಳುವ ಹಾಗೆ ತಾಸುಗಟ್ಟಲೆ ಹೋಗುವ ಮೆರವಣಿಗೆಯಲ್ಲಿ, ಮುಸ್ಲಿಮರು ಮೈಗೆಲ್ಲ ಚಾಕುವಿನಲ್ಲಿ ಹೊಡೆದುಕೊಂಡು ಗಾಯ ಮಾಡಿಕೊಳ್ಳುತ್ತಾರಲ್ಲ, ಅದನ್ನು ನೋಡಿಯೂ ಹಿಂದೂಗಳಿಗೆ ಭಯವಾಗಬಹುದಲ್ಲ? ಅದರ ಬಗ್ಗೆ ಯಾಕಾಗಿ ಪ್ರಕಾಶ ಬಾಯಿ ಬಿಡುವುದಿಲ್ಲ. ಯಾಕೆಂದರೆ ಪ್ರಕಾಶನ ಅಜೆಂಡಾಗಳೇ ಬೇರೆ. ರಾಮ-ಸೀತೆಯೆಂದರೆ ಉರಿ.
ಆದರೆ, ಹಿಂದೂಗಳು ಮಾತ್ರ ಇದ್ಯಾವುದಕ್ಕೂ ಭಯ ಪಟ್ಟಿಲ್ಲ. ಮುಸ್ಲಿಮರಿಗೂ, ಇಸ್ಲಾಮಿಗೂ! ಹಾಗಾಗಿಯೇ ಸಮಾಜ ಚೆನ್ನಾಗಿ ನಡೆಯುತ್ತಿದೆ. ಇದನ್ನು ಕಂಡು ಸಹಿಸಲಾಗದೇ ಎಲ್ಲಿಂದಲೋ ಎದ್ದು ಬಂದು ಬಾಯಿ ಬಡಿದುಕೊಂಡರೆ ಮುಸ್ಲಿಂ-ಹಿಂದೂಗಳ ಬಾಂಧವ್ಯ ಹಾಳಾಗುತ್ತದಾ?
ಇನ್ನೊಂದು ಮಾತು, ಹಿಂದೂಗಳು ಪೂಜಿಸುವ ದೇವರು ನಿರಾಕಾರಿ. ಅದಕ್ಕೆ ನಿರಾಕಾರ ಬ್ರಹ್ಮ ಎಂದು ಹೆಸರು. ನಾವು ಪೂಜಿಸುವುದು ಬ್ರಹ್ಮಾತ್ಮಕ್ಕೆ ಹೊರತು ಯಾವುದೋ ವಿಗ್ರಹಕ್ಕಲ್ಲ. ಅಧ್ಯಾತ್ಮಿಕ ವಿಷಯದಲ್ಲಿ ದಡ್ಡರಿಗೆ ನಿರಾಕಾರ ಎಂದರೆ ಏನು ಎಂದು ಅರ್ಥವಾಗುವುದಿಲ್ಲ ಎಂಬುದಕ್ಕೇ, ಒಂದು ಆಕಾರ ಕೊಟ್ಟು ವಿಗ್ರಹ ಮಾಡಿರುವುದು. ಅದಕ್ಕೆ ಪೂಜೆ ಮಾಡಿ, ಮನಸ್ಸನ್ನು ಕೇಂದ್ರೀಕರಿಸಿ ನಂತರ ಉನ್ನತಿಯನ್ನು ಸಂಪಾದಿಸಿಕೊಳ್ಳಿ ಎಂಬುದಕ್ಕೆ ವಿಗ್ರಾಹಾರಾಧನೆ ಬಂದಿರುವುದು. ಒಬ್ಬರು ಕ್ರಿಶ್ಚಿಯನ್ ಆಗಿದ್ದು , ಇನ್ನೊಬ್ಬರು ಹಿಂದೂಗಳಾಗಿದ್ದ ತಂದೆ ತಾಯಿಯರಿಗೆ ಹುಟ್ಟಿದಾಗ ಮಕ್ಕಳಿಗೆ ಹಿಂದೂ ಜೀವನಶೈಲಿಯ ಬಗ್ಗೆ ಇಂಥ ಸಂದೇಹಗಳು ಬರುವುದು ಸಹಜ. ಇದೇ ಎಡ್ವರ್ಡ್ ರಾಜ್ರಿಗೂ ಬಂದಿರುವುದು. ಆದರೆ, ಆ ಸಂದೇಹಕ್ಕೆ ಉತ್ತರನ್ನು ಸಂಡೇ ಪ್ರೇಯರ್ನ ನಂತರ ಪಾದ್ರಿಯ ಬಳಿ ಪಡೆಯುತ್ತೇನೆ ಎನ್ನುವವರು ಜೀವನಪರ್ಯಂತ ಎಡಬಿಡಂಗಿಗಳೇ ಆಗಿರುತ್ತಾರೆ.
ಅದಿರಲಿ,ರಾಮನ ಬಗ್ಗೆ ಸೀತೆಯ ಬಗ್ಗೆ ಮನಸಾರೆ ಒದರಿ ಬಹಳ ಕಷ್ಟ ಪಟ್ಟರಲ್ಲ, ಏನ್ ಸಾಧಿಸಿದ್ರಿ ಸ್ವಾಮಿ? ನಿಮ್ಮ ಮಾತು ಅಷ್ಟು ಜನರಿಗೆ ಏನೋ ಪ್ರಭಾವ ಬೀರಿದೆ ಎನ್ನುವುದಾದರೆ ಲೋಕಸಭಾ ಚುನಾವಣೆಯಲ್ಲಿ ಮತಗಳು ಬರಬೇಕಿತ್ತಲ್ಲ? ಯಾಕೆ ಬಂದಿಲ್ಲ? ಬೆಂಗಳೂರಿನಲ್ಲಿ ತಾವು ನಿಂತಾಗ ತೆಗೆದುಕೊಂಡಿದ್ದು ಎಷ್ಟು ವೋಟು? 28 ಸಾವಿರ ಚಿಲ್ಲರೆ. 19 ಲಕ್ಷಕ್ಕಿಂತಲೂ ಅಧಿಕ ಮತದಾರರಿರುವ ಪ್ರದೇಶದಲ್ಲಿ ರಿಜ್ವಾನ್ ಅರ್ಷದ್ ಸೋತಿದ್ದೇ 70 ಸಾವಿರ ಮತದ ಅಂತರದಲ್ಲಿ. ಅಂದರೆ ತಾವು ತೆಗೆದುಕೊಂಡಿರುವುದು ಸೋಲುವ ಸಂಖ್ಯೆಗಿಂತಲೂ ಕಡಿಮೆ ಮತಗಳು. ಇದಕ್ಕಿಂತ ಅವಮಾನ ಬೇಕಾ? ಇದನ್ನು ತಾವೇ, ‘ನನ್ ಮುಖಕ್ಕೆ ಸರಿಯಾಗಿ ಹೊಡೆದಿದ್ದಾರೆ’ ಎಂದು ಟ್ವೀಟ್ ಮಾಡಿಕೊಂಡಿದ್ದೀರಿ. ಸ್ವಾಮಿ ಅದು ಮುಖಕ್ಕೆ ಹೊಡೆದದ್ದಲ್ಲ, ಬದಲಿಗೆ ನಿಮ್ಮ ಬುದ್ಧಿಗೆ, ನಿಮ್ಮ ಪೊಳ್ಳು ಜಾತ್ಯತೀತವಾದಕ್ಕೆ ಹೊಡೆದಿದ್ದು. ಅದನ್ನು ಹೇಳಿದರೆ ಎಲ್ಲಿ ಇರೋ ಮರ್ಯಾದೆಯೂ ಹೋದರೆ ಕಷ್ಟ ಎಂದು ಮುಖಕ್ಕೆ ಹೊಡೆದರು ಎಂದು ಹೇಳಿಕೊಂಡಿದ್ದೀರಿ. ಹೊಡೆಸಿಕೊಂಡ ಬೌಲರ್ರೇ ಕ್ರಿಕೆಟ್ನಲ್ಲಿ ಮುಂದಿನ ಓವರ್ ಮಾಡುವುದಿಲ್ಲ, ಇನ್ನು ಘನಘೋರವಾಗಿ ತಿಂದ ತಾವು ಯಾವ ಪುರುಷಾರ್ಥಕ್ಕೆ ವಾಪಸ್ ಬಂದಿದ್ದೀರೆಂದು ಹೇಳಿ, ನಿಮಗೆ ಹೊಡೆದ ಜನರಿಗೆ ಉತ್ತರಿಸಿ. ಹೊಡೆತ ತಿಂದವನು ಮತ್ತೇಕೆ ಬಂದ ಎಂದು ಜನರು ಕೇಳುತ್ತಿದ್ದಾರೆ.
ಅಲ್ಲ ಮರಾಯ, ರಾಮ ಮತ್ತು ಸೀತೆಯ ವೇಷ ಧರಿಸಿರುವ ಮಾಡೆಲ್ಗಳಿಗೇ ಇಷ್ಟವಿಲ್ಲ ಎನ್ನುವ ನೀವು, ಅಯೋಧ್ಯೆಯಲ್ಲಿ ರಾಮ ಮಂದಿರ ಬಂದರೆ ಇನ್ಯಾವ ಮಟ್ಟಿಗೆ ಬೆಂಕಿ ಹಚ್ಚಿಕೊಳ್ಳಬಹುದು ಕಾದು ನೋಡಬೇಕು. ಆಗ ಮತ್ತೊಮ್ಮೆ ಬಂದು ರಾಮನ ಬಗ್ಗೆ ಮಾತಾಡಿ, ರಾಜ್ಯದ ಜನತೆ ರಾಮನನ್ನೂ ಸೇರಿ ತಮಗೂ ಪೂಜೆ ಮಾಡುವ ಮೂಡ್ನಲ್ಲಿರುತ್ತಾರೆ.