ಯಾವಾಗಲೂ ಏನಾದರೊಂದು ವಿಷಯ ಬೆಂಕಿಯಲ್ಲೇ ಇರುವ ನಮ್ಮ ದೇಶ ಹ್ಯಾಪನಿಂಗ್ ದೇಶಗಳಲ್ಲಿ ಒಂದು. ಎಲ್ಲಿ ಏನಾದರೊಂದಾಗಲಿ, ಅದರಿಂದ ತಾವು ಹೇಗೆ ಲಾಭ ಮಾಡಿಕೊಳ್ಳಬಹುದು ಎಂಬುದನ್ನಷ್ಟೇ ನೋಡುತ್ತಿರುತ್ತಾರೆ.ಅದು ಪ್ರಕೃತಿ ವಿಕೋಪಗಳಿಂದ ಯಾರದ್ದಾದರೂ ಸಾವಾಗುವ ತನಕ ಪ್ರತಿಯೊಂದು ಸನ್ನಿವೇಶದಲ್ಲೂ ಲಾಭ ಪಡೆದು ಮುಂದೆ ಹೋಗುವುದೇ ಉದ್ದೇಶ. ಯಾರೊ ನಾಲ್ಕು ಹಿಂದೂಗಳನ್ನು ಬಾಂಬ್ ಬ್ಲಾಸ್ಟ್ನಲ್ಲಿ ಸಿಲುಕಿಸಿ ಹಿಂದೂ ಭಯೋತ್ಪಾದನೆ ಎಂದಾಯಿತು, ಇನ್ಯಾಯಾರಿಗೋ ಯಾರೋ ಹೊಡೆದಿದ್ದಕ್ಕೆ ಅಸಹಿಷ್ಣುತೆ ಎಂದಾಯಿತು. ಕೆಲ ದಿನಗಳ ಹಿಂದೆ ಕರ್ನಾಟಕದ ಕಾಫಿ ಕಿಂಗ್ ವಿ.ಜಿ. ಸಿದ್ದಾರ್ಥರ ಅನುಮಾನಾಸ್ಪದ ಸಾವಿನ ನಂತರ, ಟ್ಯಾಕ್ಸ್ಟೆರರಿಸಂ(ತೆರಿಗೆ ಭಯೋತ್ಪಾದನೆ)ಎಂಬ ಹೊಸ ನಾಟಕ ಶುರುವಾಗಿದೆ.
ಈ ಸಮಯದಲ್ಲಿ ಟಿವಿ ಚಾನೆಲ್ಗಳಲ್ಲಿ, ಸಂದಿ-ಗೊಂದಿಗಳಲ್ಲಿ, ಬೀಡಾ ಅಂಗಡಿಗಳಲ್ಲಿ, ಬಾರ್ ಆ್ಯಂಡ್ ರೆಸ್ಟೊರೆಂಟ್ಗಳಲ್ಲಿ ಟ್ಯಾಕ್ಸ್ ಬಗ್ಗೆ ಮಾತಾಡುವವರೆಲ್ಲರೂ ಆರ್ಥಿಕ ತಜ್ಞರೇ ಆಗಿಬಿಟ್ಟಿದ್ದಾರೆ. ಅಲ್ಲಿ ಕೇಳಿಬಂದ ಒಂದಷ್ಟು ಪ್ರಶ್ನೆಗಳಿಗೆ ಮತ್ತು ಜನರಲ್ಲಿ ಈಗ ಉದ್ಭವಿಸಿರುವ ಅನುಮಾನಗಳನ್ನು ಪರಿಹಾರ ಮಾಡುವ ಪ್ರಯತ್ನವನ್ನು ಮಾಡುತ್ತೇನೆ.
ಟಿವಿ ಚಾನೆಲ್ ಒಂದರಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕರೊಬ್ಬರು ಮಾತನಾಡುತ್ತಾ, ಈ ಇನ್ಕಂಟ್ಯಾಕ್ಸ್ ರೇಡ್ನಿಂದ ಎಷ್ಟು ತೆರಿಗೆವಸೂಲಿ ಮಾಡಿದ್ದಾರೆ? ಅಸಲಿಗೆ ತೆರಿಗೆ ಹೆಚ್ಚಾಗಿ ಬರುತ್ತಿರುವುದು ಟೆಕ್ನಾಲಜಿಯನ್ನು ಅಳವಡಿಸಿದ್ದರಿಂದಲೇ ವಿನಾ, ತೆರಿಗೆ ಅಧಿಕಾರಿಗಳಿಂದಲ್ಲ ಎಂದರು.
ಸ್ವಾಮಿ, ತೆರಿಗೆ ಇಲಾಖೆಯವರು ಚೂರು ಅಕ್ರಮ ನಡೆದರೂ ನೊಟೀಸು ಕಳುಹಿಸುತ್ತಾರೆ ಎಂಬುದಕ್ಕೆ ಅಥವಾ ಮನೆ ಮುಂದೆ ಬರುತ್ತಾರೆ ಎಂಬ ಕಾರಣಕ್ಕೆ ಜನರು ಈಗಲೂ ಅಡ್ವಾನ್ಸ್ ಟ್ಯಾಕ್ಸ್, ಟಿಡಿಎಸ್ ಕಟ್ಟುತ್ತಿದ್ದಾರೆ. ವೈದ್ಯರು ಔಷಧಿ ಕೊಟ್ಟು ಯಾರನ್ನೂ ಉಳಿಸಲಿಲ್ಲ ಎಂಬುದು ಎಷ್ಟು ಸತ್ಯವಾದ ಮಾತೋ ಹಾಗೇ ತೆರಿಗೆ ಇಲಾಖೆಯವರು ರೇಡ್ ಮಾಡಿ ತೆರಿಗೆ ಪಾವತಿ ಹೆಚ್ಚಿಲ್ಲ ಎಂಬುದೂ ಸತ್ಯ. ಒಮ್ಮೆ ಉದ್ಯಮಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡರೆ ‘ನೋಡಿದ್ರಾ ಈಗ ಅವನಿಗೆ ಯಾರು ದಿಕ್ಕು? ಬ್ಯಾಂಕ್ನವರು ನಿಧಾನವಾಗಿ ವಸೂಲಿ ಮಾಡಬೇಕು, ಆತುರ ಮಾಡಬಾರದು’ ಎಂದು ಫೇಸ್ಬುಕ್ನಲ್ಲಿ ಬರೆಯುತ್ತೀರಿ. ಉದ್ಯಮಿಯ ಪರ ಕಣ್ಣೀರು ಸುರಿಸುತ್ತೀರಿ.ಅದೇ ಉದ್ಯಮಿ ವಿಜಯ್ ಮಲ್ಯ, ಮೆಹುಲ್ ಚೋಕ್ಸಿಯ ಹಾಗೆ ಓಡಿ ಹೋದರೆ? ‘ಬ್ಯಾಂಕ್ನವರೇನು ಮಾಡುತ್ತಿದ್ದರು ಎಷ್ಟುಬಡವರ ಹಣ ಹೊಡೆದಿದ್ದಾರೆ. ನೋಡಿಅವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಅಂತಲೂ ನೀವೇ ಫೇಸ್ಬುಕ್ನಲ್ಲಿ ತೌಡು ಕುಟ್ಟುತ್ತೀರಿ. ಯಾರು ಸತ್ತರೂ ಚರಮಗೀತೆ ಬರೆಯೋ ಕಲೆ ಕರಗತ ಮಾಡಿಕೊಂಡಿರುವವರರಿಗೆ ಕಾನೂನು ಹೇಗೆ ತಲೆಗೆ ಹೋಗಬೇಕು? ಈಗ ಹೇಳಿ ಅಧಿಕಾರಿಗಳು ನಿಯಮಪಾಲನೆ ಮಾಡಬೇಕೋ ಬೇಡವೋ?
ಅಲ್ಲ ನಿಯಮವನ್ನೇ ಟೈಟ್ ಮಾಡಿದ್ದಾರೆ ಎಂಬುದು ಮತ್ತೊಂದು ವಾದ! ನೀವೇ ಹುಡುಕಿ, ಈ ಆರೇಳು ವರ್ಷದಲ್ಲಿ ಇನ್ಕಂ ಟ್ಯಾಕ್ಸ್ ಆ್ಯಕ್ಟ್ಗೆ ಹೆಚ್ಚುವರಿ ತಿದ್ದುಪಡಿಗಳೇನಾದರೂ ಆಗಿದೆಯಾ? ಇಲ್ಲ. ಒಂದೇ ಒಂದೂ ಅಮೆಂಡ್ಮೆಂಟ್ಗಳಾಗಿಲ್ಲ. ಎಲ್ಲೋ ಅಲ್ಲಿ ಇಲ್ಲಿ ಸ್ಲಾಬ್ ಹಾಕೋದು, ರಿಯಾಯಿತಿ ಕೊಡುವುದು ಮತ್ತು ಟ್ಯಾಕ್ಸ್ ಹಾಕುವುದು ಬಿಟ್ಟರೆ, ಅಧಿಕಾರವನ್ನು ಹೆಚ್ಚು ಮಾಡುವಂಥ, ಪ್ರಜೆಗಳ ತಲೆ ಮೇಲೆ ಕೂರುವಂಥ ಯಾವುದೇ ತಿದ್ದುಪಡಿಗಳಾಗಿಯೇ ಇಲ್ಲ.ಇಷ್ಟು ದಿನ ತೆರಿಗೆ ಇಲಾಖೆಯವರು ಏನು ಮಾಡಿದರೂ ರಾಜಕಾರಣಿ ಒಬ್ಬ ಕಾಲ್ ಮಾಡುತ್ತಿದ್ದ, ಈಗ ಅದಿಲ್ಲ.
ಒಬ್ಬರು ಲೆಕ್ಕ ಪರಿಶೋಧಕರ ಬಳಿ ನಾನು ಮಾತನಾಡುತ್ತಿರುವಾಗ ಅವರು ಹೇಳಿದರು, ತೆರಿಗೆ ಅಧಿಕಾರಿಗಳ ವರ್ತನೆ ತೀರ ಅತಿರೇಖಗೊಂಡಿದೆ ಎಂದು. ಇನ್ನೊಬ್ಬ ಸೊ ಕಾಲ್ಡ್ ಆರ್ಥಿಕ ತಜ್ಞರೂ ಟಿವಿಯಲ್ಲಿ ಕುಳಿತು, ಹೀಗೆಲ್ಲ ತೆರಿಗೆ ಅಧಿಕಾರಿಗಳು ಹಿಂಸೆ ಕೊಟ್ಟರೇ ಸಾವುಗಳಾಗುವುದು ಎಂದಲ್ಲಿವರೆಗೂ ಮಾತಾಡುತ್ತಾರೆ.
ಇವರು ಹೇಳುವುದನ್ನು ಸತ್ಯ ಎಂದು ಒಪ್ಪಿಕೊಳ್ಳೋಣ. ಕಾನೂನಿನಲ್ಲಿ ಹೀಗೆ ಹಿಂಸೆ ಕೊಡುವುದಕ್ಕೆ ಅವಕಾಶವಿಲ್ಲದಿರುವಾಗ ಅಧಿಕಾರಿಗಳೇ ಅತಿರೇಕಕ್ಕೆ ಹೋಗುತ್ತಾರೆನ್ನುವುದಾದರೆ, ವಿಜಿಲೆನ್ಸ್ಗೆ ದೂರು ನೀಡಬಹುದಲ್ಲ? ಈಗ ಪ್ರಧಾನಿಗಳಿಗೇ ಇಮೇಲ್ ಮಾಡಬಹುದಲ್ಲ? 24 ಗಂಟೆಯಲ್ಲಿಅಟೆಂಡ್ ಮಾಡುತ್ತಾರೆ. ಐಟಿ ಅಧಿಕಾರಿಯೇನು ಸರ್ವಾಧಿಕಾರಿ ಅಲ್ಲವಲ್ಲ? ಯಾಕೆ ದೂರು ನೀಡುವುದಿಲ್ಲ? ಯಾಕೆಂದರೆ, ಲೆಕ್ಕ ಪರಿಶೋಧಕನಿಗೆ ಮಾತ್ರ ತಿಳಿಯುತ್ತದೆ ತನ್ನ ಬಳಿ ಬರುವ ವ್ಯಕ್ತಿ ಲೆಕ್ಕದಲ್ಲಿ 30% ತೋರಿಸಿ, 70% ಹೊರಗೆ ಆದಾಯ ಇಟ್ಟು ಕೊಂಡಿದ್ದಾನೆ ಎಂದು. ಇನ್ನು ಟ್ಯಾಕ್ಸ್ ಕಟ್ಟುತ್ತಿರುವವನಿಗೆ ಹೇಗಾದರೂ ಲೆಕ್ಕಮುಚ್ಚಿ ಹಾಕಿದರೆ ಸಾಕಾಗಿರುತ್ತದೆ. ಲೆಕ್ಕ ಪರಿಶೋಧಕನಿಗೆ ಮಾಮೂಲಿ ಲೆಕ್ಕಮಾಡಿದರೆ ಕೇವಲ ಫೀಸು. ಅದೇ ಲೆಕ್ಕ ಮುಚ್ಚಿ ಹಾಕಿದರೆ ಫೀಸಿನ ಜತೆಗೆ ಮತ್ತೊಬ್ಬ ವ್ಯಕ್ತಿಯ ಶೇ.70ರಲ್ಲೂ ಮಂಗನ ಪಾಲು ಇರುತ್ತದೆ. ಇಷ್ಟೆಲ್ಲ ಇರುವಾಗ ವಿಜಿಲೆನ್ಸ್ಗೆ ಹೋಗಿ ಅಧಿಕಾರಿಯ ಕಿರುಕುಳದ ಬಗ್ಗೆ ದೂರು ನೀಡುವ ಧೈರ್ಯ ಬಿಡಿ, ಆತ್ಮಸಾಕ್ಷಿಯೂ ಒಪ್ಪುವುದಿಲ್ಲ.ಅದಕ್ಕೆ ರಸ್ತೆಯಲ್ಲಿ ನಿಂತು ಅಳುತ್ತಿರುವುದು. ಅಷ್ಟಿಲ್ಲದೇ ಒಬ್ಬ ಸಿಎ ಮೂರೇ ವರ್ಷಕ್ಕೆ ಅವನ ಹೆಸರಿನಲ್ಲಿ ತೆಗೆದುಕೊಳ್ಳದೇ ಹೆಂಡತಿ ಹೆಸರಿನಲ್ಲಿ ಕಾರು ತೆಗೆದುಕೊಳ್ಳುತ್ತಾನಾ? ಇದಕ್ಕೇ ಅಲ್ಲವೇ ಪ್ರಧಾನಿ ಮೋದಿಯವರು ಲೆಕ್ಕ ಪರಿಶೋಧಕರನ್ನು ಕರೆದು ಸಭೆ ಮಾಡಿದ್ದು!
ಮುಂದೆ, ಅಲ್ಲ ಸ್ವಾಮಿ ಮಧ್ಯಮ ವರ್ಗದವರು ಅಥವಾ ಬಡವರು ಅಧಿಕಾರಿಗಳ ವಿರುದ್ಧ ವಿಜಿಲೆನ್ಸ್ಗೆ ಹೋದರೆ, ಯಾವ ತಪ್ಪಿಲ್ಲದಿದ್ದರೂ ಅವರ ಜೀವನ ಹಾಳಾಗುವುದಿಲ್ಲವಾ? ಅದಕ್ಕೆ ಸುಮ್ಮನಿದ್ದಾರೆ ಎನ್ನಬಹುದು. ಅದೂ ತಪ್ಪು. ಐಟಿ ಅಧಿಕಾರಿಗಳು ನಮ್ಮ ನಿಮ್ಮಂಥವರನ್ನೋ ಅಥವಾ ಮಧ್ಯಮವರ್ಗಕ್ಕಿಂತ ಮೇಲಿರುವ ತಂಟೆಗೆ ಎಲ್ಲಿ ಹೋಗುತ್ತಿದ್ದಾರೆ? ದುಡ್ಡು ಎಲ್ಲಿಡಬೇಕು ಎಂದು ಗೊತ್ತಾಗದೇ ಕಕ್ಕಸು ಗುಂಡಿಯಲ್ಲೂ ಗಾಂಧಿ ನೋಟು ಇಡುವವರಿಗೆ ಮಾತ್ರ ತೊಂದರೆಯಾಗಿರುವುದು. ತಪ್ಪಿಲ್ಲದೇ ಐಟಿ ಅಧಿಕಾರಿಗಳು ಹತ್ತಿರಕ್ಕೂ ಬರುವುದಕ್ಕಾಗುವುದಿಲ್ಲ.
ಈ ಟಿವಿಗಳು ಕೆಲವರನ್ನು ಆರ್ಥಿಕ ತಜ್ಞರು ಎಂದು ಕೂರಿಸುತ್ತಾರೆ. ಅವರಲ್ಲಿ ಬಹುತೇಕರು ಜನರ ದಾರಿ ತಪ್ಪಿಸುವ ತಜ್ಞರಾಗಿರುತ್ತಾರೆ. ಇದನ್ನೆಲ್ಲ ನೋಡಿ, ಜನರೆಲ್ಲ ಮೂರ್ಖರಾಗುತ್ತಾರೆ. ಈ ಟಿವಿ ತಜ್ಞ ಹೇಳುತ್ತಾರೆ, ‘ನೋಡಿ ನಮ್ಮ ದೇಶದಲ್ಲಿ ಪರಿಸ್ಥಿತಿ ಹೇಗಿದೆ ಅಂದ್ರೆ ಆದಾಯ ತೆರಿಗೆಯೇ 60% ಇದೆರೀ.. ನಾನಿವತ್ತು ಬೆಳಗ್ಗೆ ಸುಮ್ಮನೆ ಲೆಕ್ಕ ಹಾಕ್ತಾ ಕೂತಿದ್ದೆ, ಶ್ರೀಮಂತರು 42% ತೆರಿಗೆ ಕಟ್ಟಬೇಕು. 18% ಜಿಎಸ್ಟಿ. ಒಟ್ಟು ಎಷ್ಟಾಯ್ತು? 60%. ಇನ್ನು ಉಳಿದ 40%ರಲ್ಲಿ ಜೀವನ ಮಾಡಬೇಕು ಎಂದರೆ ಹೇಗೆ ಸಾಧ್ಯ ಸಾರ್? 100 ರೂ.ಗೆ 60ರೂ. ಆದಾಯವನ್ನೇ ಕಟ್ತಾ ಇದೀವಿ ಸಾರ್. ಇದು ಹೀಗಾದ್ರೆಅವನು ಕೆಲಸನೇ ಮಾಡಲ್ಲ ಸಾರ್. ಸೋಂಬೇರಿ ಆಗೋಗ್ತಾನೆ. ಅಥವಾ ಅದಕ್ಕೇ ಸಾರ್ ಟ್ಯಾಕ್ಸ್ ಕಡಿಮೆ ಅಂತ ಎಲ್ಲರೂ ಮಾರಿಷಸ್ ಹೋಗಿ ಬಿಜಿನೆಸ್ ಮಾಡ್ತಾ ಇರೋದು. ಚೀನಾದಲ್ಲೂ 60% ಟ್ಯಾಕ್ಸ್ ಇದೆ. ಆದರೆ ಅವರು ವಿದ್ಯಾಭ್ಯಾಸ, ವೈದ್ಯಕೀಯ ಎಲ್ಲವನ್ನೂ ಉಚಿತವನ್ನಾಗಿಸಿದ್ದಾರೆ. ಹಾಗಾದರೂ ಮಾಡಲಿ’ ಎನ್ನುತ್ತಾರೆ. ಏನೂ ಗೊತ್ತಿಲ್ಲದೇ ಬಾಯಿ ಬಿಟ್ಟುಕೊಂಡು ಕೇಳುವವರಿಗೆ ಅರ್ರೇ ಹೌದಲ್ಲ ಸಾರ್ ಎನಿಸುತ್ತದೆ.
ಆದರೆ ಇದರಲ್ಲೂ ಮೋಸವಿದೆ. ಯಾವ ಬೇಕೂಪ ಹೇಳಿದ್ದು 100 ರೂ.ಗೆ ತೆರಿಗೆ ಇದೆ ಅಂತ? 100ರೂ.ಗೆ ತೆರಿಗೆ ಕಟ್ಟಿದ ಒಬ್ಬ ಆಸಾಮಿಯನ್ನು ತೋರಿಸಿಬಿಡಿ ನೋಡೋಣ. 5 ಲಕ್ಷ ರೂಪಾಯಿವರೆಗೂ ತೆರಿಗೆಯೇ ಇಲ್ಲ. ಅದರ ಮೇಲೂ ಉಳಿತಾಯ ಇತ್ಯಾದಿಗಳನ್ನು ಮಾಡಿದರೆ ರಿಯಾಯಿತಿ, ದಾನ ಮಾಡಿದರೆ ರಿಯಾಯಿತಿ, ಕಂಪನಿ ಲಾಸ್ ಆದರೆ ರಿಯಾಯಿತಿ, ಸರಿಯಾಗಿ ಕಟ್ಟಿದರೆ ರಿಯಾಯಿತಿ, ಮಕ್ಕಳಿದ್ದರೆ ಒಂದು ರಿಯಾಯಿತಿ, ಹೀಗೆ ಎಲ್ಲವೂ ಕಟ್ ಆಗಿ ಆಮೇಲೆ ತೆರಿಗೆ ಕಟ್ಟುವುದು. ಅದರಲ್ಲು ರಿಟರ್ನ್ಸ್ ಎಂದು ಹಣ ವಾಪಸ್ ಬರುತ್ತದೆ. ಈ ತಜ್ಞರು 42% ತೆರಿಗೆ ಎಂದು ಹೇಳುತ್ತಿರುವುದು ಅನ್ವಯವಾಗುವುದೆಲ್ಲಿ ಎಂದರೆ, 5 ಕೋಟಿಗಿಂತಲೂ ಹೆಚ್ಚಿನ ಆದಾಯ ಇರುವವರಿಗೆ. ಈ ಬ್ರಾಕೆಟ್ನಲ್ಲಿ ಬರುವವರು ಇಡೀ ದೇಶದಲ್ಲಿ 6,361 ಜನರು ಮಾತ್ರ. ಅದರಲ್ಲಿ ಒಂದಿಬ್ಬರಿಗೆ ತೊಂದರೆ ಆದರೆ ಟ್ಯಾಕ್ಸ್ ಟೆರರಿಸಮ್ಮಾ?! ಯಾವನ್ರಿ ನಿಮಗೆಲ್ಲ ಲೆಕ್ಕ ಹೇಳಿ ಕೊಟ್ಟಿದ್ದು? ಇದನ್ನು ಡ್ರೆಕೂನಿಯನ್ ಲಾ ಎಂದು ಯಾವ ಆಧಾರದ ಮೇಲೆ ಕರೆಯುತ್ತೀರ?
ಇನ್ನು 18% ಜಿಎಸ್ಟಿ ಅಂತೆ. ಆದಾಯ ತೆರಿಗೆ ಎಷ್ಟು ಕಟ್ಟುತ್ತಾರೋ, ಅದರ ಮೇಲೆ ಸರ್ಚಾರ್ಜ್ ಎಂದು ಹಾಕುತ್ತಾರೆಯೇ ವಿನಾ ಜಿಎಸ್ಟಿ ಇರುವುದಿಲ್ಲ. ಜಿಎಸ್ಟಿ ಇರುವುದು ನಮ್ಮ ನಿಮ್ಮಂಥ ಕೊನೇಯ ಗ್ರಾಹಕರಿಗೆ. ಬ್ರೆಡ್ಡು, ಬೆಲ್ಲ ಇತ್ಯಾದಿಗಳನ್ನು ತೆಗೆದುಕೊಳ್ಳುವಾಗ ಎರಡೋ, ಮೂರೋ ರೂಪಾಯಿ ಜಿಎಸ್ಟಿ ಎಂದು ಕಟ್ಟುತ್ತೇವೆ ಅಥವಾ ಉದ್ಯಮಿಯೇ ಕಚ್ಚಾ ಪದಾರ್ಥಗಳನ್ನು ಖರೀದಿಸುವಾಗ ಜಿಎಸ್ಟಿ ಕಟ್ಟುತ್ತಾನೆ. ಅದೂ ಆಯಾ ವಸ್ತುಗಳ ಅನುಸಾರವಾಗಿ ತೆರಿಗೆಯೇ ವಿನಾ ಎಲ್ಲದಕ್ಕೂ 18% ನಾಮ ತಿಕ್ಕುವುದಿಲ್ಲ.
ಚೀನಾದಲ್ಲಿ 60% ತೆರಿಗೆ ಪದ್ಧತಿ ಇದೆ, ಉಚಿತ ಶಿಕ್ಷಣ, ವೈದ್ಯಕೀಯ ಇತ್ಯಾದಿಗಳಿವೆ. ಅದನ್ನೂ ಭಾರತದಲ್ಲಿ ಕೊಡಬಾರದಾ ಎಂದು ಯಾವ ಬಾಯಲ್ಲಿ ಹೇಳುತ್ತಾರೆ? ಹರಟೆ ಕಟ್ಟೆಯಲ್ಲಿ ಕುಂತು ಬಾಯಿ ತುರಿಕೆಗೆ ವಟಗುಟ್ಟುವವರಂತೆ ವರ್ತಿಸುವ ಇವರಿಗೆ ಚೀನಾದಲ್ಲಿ ಲೇಬರ್ ಲಾಗಳು ಹೇಗಿದೆ ಎಂಬ ಸಣ್ಣ ಅರಿವಾದರೂ ಇದೆಯೇ? ಅಲ್ಲಿ ನೌಕರರು, ಕೂಲಿಗಳು ಯಾರೂ ಬಾಯಿ ಬಿಡುವ ಹಾಗಿಲ್ಲ. ಸ್ಟ್ರೈಕ್ ಮಾಡುವ ಹಾಗಿಲ್ಲ, ಯೂನಿಯನ್ ಇಲ್ಲ. ಹೆಚ್ಚು ಕಡಿಮೆ ಮಾತಾಡಿದರೆ ಜೈಲಿಗಟ್ಟುತ್ತಾರೆ. ಆದರೆ ಇಲ್ಲಿ? ಮಾಲೀಕರು ಕಿರುಕುಳ ಕೊಟ್ಟರು ಎಂದು ನೌಕರರು ಕೆಲಸಕ್ಕೇ ಬರದೇ ಕೋರ್ಟ್ಗೆ ಹೋಗಿ ಸಂಬಳ ಪಡೆಯುತ್ತಾರೆ. ಮಾಲೀಕರು ಹೆಚ್ಚು ಮಾತಾಡಿದರೆ ಪ್ರತಿಭಟನೆ. ಬೋನಸ್ಗೂ ಪ್ರತಿಭಟನೆ. ಯಾವುದಕ್ಕೆ ಪ್ರತಿಭಟನೆ ಇಲ್ಲ ಎಂದು ಕೇಳಿ. ಎಲ್ಲಿಯ ಚೀನಾ ಎಲ್ಲಿಯ ಭಾರತ?! ಯಾವುದೋ ಟಿವಿಯಲ್ಲಿ ಕುಳಿತು ಫರ್ಮಾನು ಹೊರಡಿಸಿದಂತಲ್ಲ ಕಾನೂನು ಅಥವಾ ವ್ಯವಸ್ಥೆ.
ಇನ್ನು ಟ್ಯಾಕ್ಸ್ ಹೆಚ್ಚೆಂದು ಮಾರಿಷಸ್ ಹೋಗುವ ಆಸಾಮಿಗಳ ಬಗ್ಗೆ. ಹೋಗಲಿ, ತೊಂದರೆ ಇಲ್ಲ. ಮೋದಿಯೇನು ಇವರ ಕಾಲು ಹಿಡಿದುಕೊಂಡಿದ್ದಾರೆಯೇ? ಐಟಿಯವರೇನು ವಿಮಾನ ಅಡ್ಡಗಟ್ಟಿದ್ದಾರೆಯೇ? ಇಲ್ಲವಲ್ಲ? ಸಮಸ್ಯೆ ಇರುವುದು ಹೊರ ಹೋಗಿ ಉದ್ಯಮ ಶುರು ಮಾಡುವುದರಲ್ಲಲ್ಲ. ಅಲ್ಲೊಂದು ನೌಕರರೇ ಇಲ್ಲದ, ಕೇವಲ ಪೇಪರ್ಗಳಲ್ಲಷ್ಟೇ ಇರುವ ಕಂಪನಿ ಶುರು ಮಾಡಿ, ಭಾರತದಿಂದ ಹವಾಲಾ ಮೂಲಕ ಹಣವನ್ನು ನಕಲಿ ಕಂಪನಿಗೆ ಹಣ ಹಾಕುತ್ತಿರುವುದರಲ್ಲಿ ಸಮಸ್ಯೆ ಇರುವುದು. ಐಟಿ ಅಧಿಕಾರಿಗಳು ಬಾಗಿಲು ಬಡಿಯುವುದೂ ಆಗಲೇ. ಆಗ ಉದ್ಯಮಿಯೇ ಮೋದಿ ಕಾಲು ಹಿಡಿದರೂ ಏನೂ ಮಾಡುವುದಕ್ಕಾಗುವುದಿಲ್ಲ. ಕಾಫಿ ಡೇ ಆದಿಯಾಗಿ ಎಷ್ಟೋ ಕಂಪನಿಗಳು ಮುಗ್ಗರಿಸುತ್ತಾ ಇರುವುದೇ ಇಲ್ಲಿ. ಮಾಡುವುದೆಲ್ಲ ಮಾಡಿ, ಮಾರಿಷಸ್ಗೆ ಹೋಗ್ತೀನಿ ಅಂದ್ರೆ ಬಿಡುತ್ತಾರಾ? ಉದ್ಯೋಗವನ್ನು ನಿಯತ್ತಾಗಿ ಎಲ್ಲಿ ಮಾಡಿದರೂ ಯಾರೂ ನಿಮ್ಮನ್ನು ಮುಟ್ಟುವುದಿಲ್ಲ. ತಪ್ಪು ಮಾಡಿದರೆ ಬರುತ್ತಾರೆ. ಈ ತಜ್ಞರು ಹೇಳುವುದನ್ನೆಲ್ಲ ಕೇಳಿದರೆ, ಹೂ ಮಾರುವವರೂ ‘ಸಾರ್ಒಂದು ಮೊಳಕ್ಕೆ 10 ರೂ. ತಗಂಡೆ, ಈಗ 6 ರೂ. ಟ್ಯಾಕ್ಸ್ ಕಟ್ಟಬೇಕಾ ಸಾರ್’ಎಂದು ತಲೆ ಮೇಲೆ ಕೈಹೊತ್ತು ಕೂರಬೇಕೆನ್ನುವ ಹಾಗೆ ಹೇಳುತ್ತಾರೆ. ಸ್ವತಃ ನಾನು 15ಸಾವಿರ ತೆರಿಗೆ ಕಟ್ಟುತ್ತಿದ್ದೇನೆ. ಅಂದರೆ ತಜ್ಞರ ಪ್ರಕಾರ ನನ್ನ ಆದಾಯ ಹಾಗಾದರೆ ಒಂದು ಲಕ್ಷದ ಒಳಗಿದೆಯಾ?
ಅಯ್ಯಯ್ಯೋ ಟ್ಯಾಕ್ಸ್ ಟೆರರಿಸಂ ಎಂದು ಈಗ ಬೊಬ್ಬರಿಯುತ್ತಿದ್ದೀರಲ್ಲ? ಮೋದಿ ಸರ್ಕಾರ ಬಂದು ಕೇವಲ 5 ವರ್ಷ ಆಗಿದೆಯಷ್ಟೇ. ಆದರೆ ಐಟಿ ಅಧಿಕಾರಿಗಳು ಮೊನ್ನೆ ರಿಟೈರ್ ಆದವರು 32 ವರ್ಷದಿಂದಲೂ ಐಟಿಯಲ್ಲಿದ್ದವರು. 27 ವರ್ಷ ಐಟಿ ಇಲಾಖೆ ಟೆರರಿಸಂ ಅಂತ ಅನಿಸಲಿಲ್ಲ, ಅಧಿಕಾರಿಗಳು ಟೆರರಿಸ್ಟ್ ಅಂತ ಅನಿಸಲಿಲ್ಲ. ಆದರೆ ಈ 5 ವರ್ಷದಲ್ಲಿ ಐಟಿ ಕಾಯ್ದೆಯಲ್ಲಿ ಏನೂ ತಿದ್ದುಪಡಿ ತರದೇ ಇದ್ದರೂ ಟ್ಯಾಕ್ಸ್ ಟೆರರಿಸಂ ಶುರುವಾಗಿಬಿಟ್ಟಿತೇನು? ಅಧಿಕಾರಿಗಳೆಲ್ಲ ಉಗ್ರರ ಹಾಗೆ ಕಾಣಿಸುವುದಕ್ಕೆ ಶುರುವಾಗಿಬಿಟ್ಟರೇನು?
ಟಿವಿಯಲ್ಲಿ ಪತ್ರಕರ್ತರು ವಿಜ್ಞಾನಿಯನ್ನೇ ಕರೆಸಿ ದೇಶದ ಭವಿಷ್ಯ ಹೇಳಿಸಲಿ. ನಮಗೂ ಬುದ್ಧಿಯಿದೆಯಲ್ಲವೇ? ಅವನು ವಿಜ್ಞಾನಿ ಎಂದ ಮಾತ್ರಕ್ಕೆ ನಮ್ಮ ಬುದ್ಧಿಯನ್ನು ಅವನ ಗಡ್ಡದೊಳಗೆ ಇಡಬೇಕೆಂದಿಲ್ಲವಲ್ಲ? ಸ್ವಂತ ಅಧ್ಯಯನ ಮಾಡಿದರೆ, ಟಿವಿಯಲ್ಲಿ ಕುಳಿತಿರುವವನು ಹೇಳುವ ಒಂದೊಂದು ಸುಳ್ಳುಗಳೂ ಕಣ್ಣಮುಂದೆ ಬರುತ್ತಾ, ಹಾಸ್ಯ ಕಾರ್ಯಕ್ರಮಕ್ಕಿಂತಲೂ ನಗು ತರಿಸುವುದರಲ್ಲಿ ಅಚ್ಚರಿಯಿಲ್ಲ. ಅಲ್ಲಿಗೆ ಟ್ಯಾಕ್ಸ್ ಟೆರರಿಸಂ ಎಂಬುದು ಕೇವಲ ಪಡಪೋಷಿಗಳು ಹೊಟ್ಟೆ ತುಂಬಿಸಿಕೊಳ್ಳುವುದಕ್ಕಿರುವ ಪಿಜ್ಜಾ ಬರ್ಗರ್ ಅಷ್ಟೇ.