ಸಂತ್ರಸ್ತೆಯ ಜಾತಿ ಹುಡುಕುವ ಅಯೋಗ್ಯ ಪತ್ರಿಕೋದ್ಯಮ!

ಹೌದು, ಆ ಘಟನೆ ನಡೆಯಬಾರದಿತ್ತು. ಪುತ್ತೂರಿನ ವಿವೇಕಾನಂದ ಕಾಲೇಜಿನ ಐವರು ವಿದ್ಯಾರ್ಥಿಗಳು ಅದೇ ಕಾಲೇಜಿನ ಹುಡುಗಿಯನ್ನು ಕಾರಿನಲ್ಲಿ ಅದೆಲ್ಲೋ ಕರೆದುಕೊಂಡು ಹೋಗಿ ಸಮೂಹಿಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಇದು ತಡವಾಗಿ ಬೆಳಕಿಗೆ ಬಂದು, ಪೊಲೀಸರು ಸುಮೊಟೊ ಅನ್ವಯ ಪ್ರಕರಣ ದಾಖಲಿಸಿಕೊಂಡು ವಿದ್ಯಾರ್ಥಿಗಳನ್ನು ಹಿಡಿದಿದ್ದಾರೆ. ನಂತರ ಹುಡುಗಿಯೂ ದೂರನ್ನು ನೀಡಿದ್ದಾಳೆ. ಅತ್ಯಾಚಾರ ಎನ್ನಲಾದ ಆ ವಿಡಿಯೊ ನೋಡಿದರೆ, ಅದು ಒಪ್ಪಿತ ಸೆಕ್ಸ್‌ ಆದರೂ, ಪ್ರಾಣಿಗಳೇ ಇಂಥ ನೀಚ ಕೃತ್ಯ ಮಾಡುವುದಕ್ಕೆ ಸಾಧ್ಯ, ಮನುಷ್ಯರಲ್ಲ ಎಂದೆನಿಸುತ್ತದೆ. ಇನ್ನು ರೇಪ್‌ ಆಗಿದ್ದರೆ ಯಾರಿಗಾದರೂ ರಕ್ತ ಕುದಿಯದೇ ಇರುತ್ತದೆಯೇ? ನೀಚತನ ಎಂದೆನಿಸದೇ ಇರುತ್ತದೆಯೇ?

ಅದಕ್ಕಿಂತ ನೀಚತನ ಯಾವುದು ಗೊತ್ತಾ? ವಾರ್ತಾಭಾರತಿ ಎಂಬ ಒಂದು ಪತ್ರಿಕೆಯ ವರದಿ. ಕಾಂಗ್ರೆಸ್‌ನ ಒಂದೆರಡು ಪ್ರೀಪೇಯ್ಡ್‌ ಚೇಲಾಗಳ ಬಿಜೆಪಿ ವಿರುದ್ಧದ ಧ್ವನಿ. ಒಂದು ಪತ್ರಿಕೆಯಲ್ಲಿ ಇನ್ನೊಂದು ಪತ್ರಿಕೆಯ ಹೆಸರು ಉಲ್ಲೇಖಿಸುವುದು ವಿರಳ. ಆದರೆ ಇಲ್ಲಿ ಅದೇಕೋ ಹೇಳಲೇಬೇಕೆನಿಸುವಂಥ ಹೇಸಿಗೆಯ ವರದಿಯನ್ನು ಮಾಡಿರುವುದರಿಂದ ಉಲ್ಲೇಖಿಸ ಬೇಕಾಗಿದೆ.

ಹುಡುಗರು, ಹುಡುಗಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ ನಿಜ. ಅಷ್ಟನ್ನೇ ವರದಿ ಮಾಡುವ ಬದಲು ವಾರ್ತಾಭಾರತಿ ಪತ್ರಿಕೆ ಮಾಡಿದ್ದೇನು? ‘ದಲಿತ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ, ಐವರು ವಿದ್ಯಾರ್ಥಿಗಳ ಬಂಧನ, ಆರೋಪಿಗಳು ಎಬಿವಿಪಿ ಕಾರ್ಯ ಕರ್ತರು’ ಎಂಬ ತಲೆಬರಹದಲ್ಲಿ ಪೂರ್ವಗ್ರಹಪೀಡಿತ ಸುದ್ದಿ ಪ್ರಕಟಿಸಿದ್ದು.

ಏನ್‌ ಸಾಧನೆ ಮಾಡಿದಿರಿ ಇಂಥ ಹೆಡ್‌ಲೈನ್‌ ಹಾಕಿ.

ಅತ್ಯಾಚಾರಕ್ಕೊಳಗಾಗಿದ್ದಾಳೆನ್ನಲಾದ ಹುಡುಗಿ ದಲಿತ ಆಗಿರಲಿ, ಮುಸ್ಲಿಂ ಆಗಿರಲಿ, ಹಿಂದೂ ಆಗಿರಲಿ ಇನ್ಯಾವುದೇ ಜಾತಿ ಆಗಿರಲಿ. ಅದಕ್ಕೂ ವರದಿಗೂ ಏನು ಸಂಬಂಧ? ಅತ್ಯಾಚಾರ ಮಾಡುವವರು ನಿನ್ನನ್ನು ದಲಿತೆ ಎಂಬ ಕಾರಣಕ್ಕಾಗಿ ಅತ್ಯಾಚಾರ ಮಾಡುತ್ತಿದ್ದೇನೆ ಎಂದು ಹೇಳಿ ಅತ್ಯಾಚಾರ ಮಾಡಿದ್ದರೇ? ಏನು ಸಾಬೀತು ಮಾಡುವುದಕ್ಕೆ ಹೊರಟಿದ್ದೀರಿ? ಹುಡುಗಿ ಯಾವುದೇ ಜಾತಿಯಾಗಿದ್ದರೂ ಮನಸ್ಸಿಗೆ ಆಗುವ ನೋವು ಎಲ್ಲ ಜಾತಿಗಳಿಗೂ ಒಂದೇ ಅಲ್ಲವೇ? ಜಾತಿ ಕಾರಣಕ್ಕೆ ನೋವಿನಲ್ಲಿ ವ್ಯತ್ಯಾಸವಾಗುತ್ತವೇನು? ಏನ್‌ ಪತ್ರಿಕೋದ್ಯಮ ಮಾಡುತ್ತೀರ್ರೀ? ಅವರು ಎಬಿವಿಪಿ ಕಾರ್ಯಕರ್ತರಲ್ಲ ಎಂದು ಸ್ವತಃ ಎಬಿವಿಪಿಯೇ ಸ್ಪಷ್ಟೀಕರಣ ಕೊಟ್ಟಿದೆ. ಫೇಸ್ಬುಕ್‌ನಲ್ಲಿ ಹುಡುಗರ ಕೇಸರಿ ಶಾಲು ಹೊದ್ದಿರುವ ಫೋಟೊ ಇದೆ ಎಂಬ ಕಾರಣಕ್ಕೆ ಅವರು ಎಬಿವಿಪಿ ಅಥವಾ ಆರೆಸ್ಸೆಸ್‌ನವರಾಗುವುದಾದರೆ, ಹಸಿರು ಬಣ್ಣ ಶಾಲು ಧರಿಸಿರುವ ಮಂದಿಯೆಲ್ಲ ಪಿಎಫ್‌ಐ ಅಥವಾ ಮುಸ್ಲಿಮ್‌ ಸಂಘಟನೆಯವರೇ ಆಗಬೇಕಲ್ಲವೇ?

ಯಾವ ಬಣ್ಣದ ಶಾಲು ಹೊದ್ದಿದ್ದಾನೆ ಎಂಬುದರ ಮೇಲೆ ಹೆಡ್‌ಲೈನ್‌ ನಿರ್ಧರಿಸುವುದು ಜರ್ನಲಿಸಂ ಎಂದಾದರೆ, ಅಂಥ ಜರ್ನಲಿಸಂ ಮಾಡುವ ಬದಲು ಕುಲಕಸುಬಾದ ಪಂಚರ್‌ ಕಟ್ಟುವ ಕೆಲಸವನ್ನೇ ಮಾಡಬಹುದು. ಇಂಥ ಸೂಕ್ಷ್ಮ ವಿಚಾರದ ವರದಿಯನ್ನು ಬರೆಯುವ ಮುನ್ನ, ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕು ಎಂಬ ಸಾಮಾನ್ಯ ಜ್ಞಾನವೂ ಇಲ್ಲವೇ? ಮೊದಲೇ ದಕ್ಷಿಣ ಕನ್ನಡ ಸೂಕ್ಷ್ಮ ಪ್ರದೇಶ. ಅಲ್ಲಿ ಯಾವಾಗ, ಯಾವ ಕೋಮುಗಲಭೆ ನಡೆಯುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ, ಅದು ಗೊತ್ತಿದ್ದೂ ಇಂಥ ಥರ್ಡ್‌ ಕ್ಲಾಸ್‌ ವರದಿ ಮಾಡಿ, ಪತ್ರಿಕೋದ್ಯಮವನ್ನೇ ಮಾಡುತ್ತಿದ್ದೀರೋ ಅಥವಾ ಬೆಂಕಿ ಹಚ್ಚುತ್ತಿದ್ದೀರೋ? ಅಷ್ಟು ಬೆಂಕಿಹಚ್ಚಲೇ ಬೇಕು ಎಂದಿದ್ದರೆ, ನಿಮ್ಮದೇ ಮನೆ ಮುಂದೆ ನಿಮ್ಮ ಪೇಪರ್‌ ಹಚ್ಚಿಯೇ ಬೆಂಕಿ ಇಟ್ಟುಕೊಳ್ಳಿ. ಅದರ ಬದಲು ಬೇರೆ ಎರಡು ಕೋಮುಗಳ ಮಧ್ಯೆ ಬೆಂಕಿ ಹಚ್ಚುವುದೇಕೆ?

ಇನ್ನು ಈ ಕಾಂಗ್ರೆಸ್‌ನವರು ಫೇಸ್ಬುಕ್‌ನಲ್ಲಿ ಅವರ ವಿರುದ್ಧ ಬರೆಯುವವರ ಮೇಲೆ ಕಣ್ಣಿಡುವುದಕ್ಕೆಂದೇ ಆಫೀಸಿನ ಹಾಜರಾತಿ ಪುಸ್ತಕಕ್ಕೂ ಭಾರ, ಮನೆಗೂ ದಂಡವಾಗಿರುವ ಒಂದಷ್ಟು ನಿರುದ್ಯೋಗಿಗಳನ್ನು ನೇಮಿಸಿಕೊಂಡಿದ್ದಾರೆ. ಅಂಥವರಲ್ಲೊಬ್ಬರಾದ ಗಿಂದು ಬೌಡ (ಹೆಸರು ಬದಲಾಯಿಸಲಾಗಿದೆ) ಈ ಅತ್ಯಾಚಾರದ ಬಗ್ಗೆ ಶೋಭಾ ಕರಂದ್ಲಾಜೆ ಏನು ಹೋರಾಟ ಮಾಡಿದ್ದಾರೆ ಎಂದು ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ. ಗೋಕುಲಾಷ್ಟಮಿಗೂ ಇಮಾಮ್‌ ಸಾಬಿಗೂ ಏನ್‌ ಸಂಬಂಧ? ಪುತ್ತೂರಿನ ಕಾಲೇಜಿನಲ್ಲಿ ಹೀಗಾದರೆ, ಶೋಭಾ ಕರಂದ್ಲಾಜೆ ಏನು ಮಾಡುತ್ತಾರೆ? ಅಥವಾ ನಳಿನ್‌ ಕುಮಾರ್‌ ಕಟೀಲು ಆದರೂ ಏನು ಮಾಡಬೇಕು? ಕಾನೂನು ಸುವ್ಯವಸ್ಥೆ ಇವರಿಬ್ಬರದ್ದಾ ಅಥವಾ ರಾಜ್ಯ ಸರ್ಕಾರದ್ದಾ?

ದುಡ್ಡು ತೆಗೆದುಕೊಂಡಿರುವವರಿಗೆ ನಿಯತ್ತಿರಬೇಕು ನಿಜ. ಆದರೆ, ಒಂದು ಹೆಣ್ಣಾಗಿ ಹೆಣ್ಣಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಿಜವಾಗಿ ಪ್ರಶ್ನಿಸಲಾಗದಷ್ಟಾ? ಥೂ! ಗೃಹ ಸಚಿವ ಎಂದು ಎಂ.ಬಿ ಪಾಟೀಲ್‌ ಇದ್ದಾರೆ. ಜೀರೋ ಟ್ರಾಫಿಕ್‌ನಲ್ಲಿ ಏರ್‌ಕಂಡೀಷನ್ಡ್‌ ಕಾರಿನಲ್ಲಿ ಕುಳಿತು ಓಡಾಡುವುದು, ಇಳಿದಾಗ, ಫೇಸ್ಬುಕ್‌ನಲ್ಲಿ ಅವರನ್ನು ಟೀಕಿಸುವವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ, ರಾತ್ರೋ ರಾತ್ರಿ ಬಂಧಿಸುವುದನ್ನು ಬಿಟ್ಟರೆ, ಗೃಹ ಸಚಿವರು ಏನು ಘನಂದಾರಿ ಕೆಲಸ ಮಾಡಿದ್ದಾರೆ? ರಾಜ್ಯದಲ್ಲಿ ಈ ಪ್ರಕರಣ ಇವತ್ತು ನಿನ್ನೆ ನಡೆದಿದ್ದಲ್ಲ. ಅಥವಾ ತಡವಾಗಿ ಬೆಳಕಿಗೆ ಬಂದಿದೆ ಎಂದು ಎಲ್ಲಾದರೂ ಓದಿದ್ದೀರಿ ಎಂದರೆ, ಕಳೆದ ತಿಂಗಳೂ ಈ ಅತ್ಯಾಚಾರ ನಡೆದಿದ್ದಲ್ಲ. ಬದಲಿಗೆ ಬರೋಬ್ಬರಿ ಆರು ತಿಂಗಳ ಹಿಂದೆ ನಡೆದಿದ್ದು. ಆರು ತಿಂಗಳ ಹಿಂದೆ ನಡೆದರೂ ಏನೂ ಕ್ರಮ ಕೈಗೊಳ್ಳದೇ ಷಂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕೋ ಅಥವಾ ಶೋಭಾ ಕರಂದ್ಲಾಜೆಯನ್ನೋ?

ಆ ಹುಡುಗಿಗೆ ಅತ್ಯಾಚಾರ ಮಾಡುವಾಗ ಡ್ರಗ್ಸ್‌ ನೀಡಿದ್ದಾರೆ. ಹಾಗಾಗಿ ಆಕೆ ಅತ್ಯಾಚಾರವನ್ನು ವಿರೋಧಿಸದೇ ಕಣ್ಣು ಮುಚ್ಚಿಕೊಂಡಿದ್ದಳು ಎಂದೂ ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ. ಇದು ಸತ್ಯವೇ ಆಗಿದ್ದರೆ, ಇದು ನಮ್ಮ ರಾಜ್ಯದ ಮತ್ತೊಂದು ಪಿಡುಗು. 19 ವರ್ಷದ ಹುಡುಗರಿಗೆ ಅಷ್ಟು ಆರಾಮಾಗಿ ಡ್ರಗ್ಸ್‌ ಸಿಗುತ್ತದೆ ಎಂದಾದರೆ, ನಾಳೆ ಇದೇ ಸರ್ಕಾರದ ಮಿನಿಸ್ಟರ್‌ಗಳ ಮಕ್ಕಳ ಮೇಲೂ ಅತ್ಯಾಚಾರವಾಗಬಹುದಲ್ಲವೇ? ಅಥವಾ ವಿಡಿಯೊ ಮಾಡುವ ಕಾಂಗ್ರೆಸ್‌ ಚೇಲಾಗಳ ಮೇಲೂ ಇಂಥದ್ದೊಂದು ದಾಳಿ ನಡೆಯಬಹುದಲ್ಲವೇ?

ಸ್ವಾಮಿ ಇಂದು ಡ್ರಗ್ಸ್‌ ಸಿಗದ ಜಾಗವೇ ಇಲ್ಲ ಎಂಬಂತಾಗಿದೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕೃಷ್ಣಾ’ದಿಂದ ಕೇವಲ ಒಂದು ಕಿ.ಮೀ ದೂರದಲ್ಲಿರುವ ಚಿತ್ರಕಲಾ ಪರಿಷತ್‌ ಸುತ್ತಮುತ್ತ, ಪಾರ್ಕಿಂಗ್‌ ಲಾಟ್‌ಗಳಲ್ಲೇ ಡ್ರಗ್ಸ್‌ ಸಿಗುತ್ತದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ದಯಾನಂದ್‌ ಸಾಗರ್‌ ಕಾಲೇಜು ಸುತ್ತಮುತ್ತವೂ ಇದೇ ವಾತಾವರಣ ಇದೆ ಎಂದು ವಿದ್ಯಾರ್ಥಿಗಳಿಗೆ ಗೊತ್ತಿದೆ. ಅಷ್ಟೇ ಯಾಕೆ, ಕೋರಾ ಎಂಬ ಜಾಲತಾಣದಲ್ಲಿ ‘ಉತ್ತಮ ಗುಣಮಟ್ಟದ ವೀಡ್‌ ಎಲ್ಲಿ ಸಿಗುತ್ತದೆ’ ಎಂದು ಇಂಗ್ಲಿಷಿನಲ್ಲಿ ಪ್ರಶ್ನೆ ಹಾಕಿದರೆ, ಜಾಗ, ಡೀಲರ್‌, ಡೀಲರ್‌ನ ಇಮೇಲ್‌ ಐಡಿ ಸೇರಿದಂತೆ ಸರ್ವ ಮಾಹಿತಿಗಳೂ ಸಿಗುತ್ತದೆ.

ಇನ್ನು ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆಗಳಲ್ಲಿ ಎಲ್ಲೆಲ್ಲಿ ಸಿಗುತ್ತದೆ ಎಂದು ನಮಗಿಂತ ಚೆನ್ನಾಗಿ ಪೊಲೀಸರಿಗೇ ಗೊತ್ತಿರುತ್ತದೆ. ಕಿಮ್ಮನೆ ರತ್ನಾಕರ ಸಚಿವ ಆಗಿದ್ದಾಗಲೇ ಎಷ್ಟರ ಮಟ್ಟಿಗೆ ಗಾಂಜಾ ಮಾರಾಟ ನಡೆಯುತ್ತಿತ್ತು ಎಂಬುದನ್ನು ಇಡೀ ತೀರ್ಥಹಳ್ಳಿಯೇ ಹೇಳುತ್ತದೆ. ಹೀಗೆ ಎಗ್ಗಿಲ್ಲದೇ, ಗಾಂಜಾ, ಡ್ರಗ್ಸ್‌ ಮಾರಾಟ ನಡೆಯುತ್ತಿದ್ದರೆ, ನಮ್ಮ ರಾಜ್ಯ ಸರ್ಕಾರ ಮಾಡುತ್ತಿದ್ದದ್ದೇನು?

ನನ್ನ ಸರ್ಕಾರ ಯಾರು ಬೀಳಿಸುತ್ತಾರೆ? ಯಾಕೆ ಬೀಳಿಸುತ್ತಾರೆ? ಅದನ್ನು ಉಳಿಸಿಕೊಳ್ಳುವುದು ಹೇಗೆ? ಎಣ್ಣೆ ಹೊಡೆದು ಗಲಾಟೆ ಮಾಡಿಕೊಳ್ಳುವುದು ಹೇಗೆ? ಯಾವ ರೆಸಾರ್ಟ್‌ನಲ್ಲಿ ನಮ್ಮವರನ್ನು ಬಂಧಿಸಿಡಬೇಕು? ತನ್ನ ಮಗನನ್ನು ರಾಜಕೀಯಕ್ಕೆ ತರುವುದು ಹೇಗೆ? ಎಂಬ ನೀಚ ರಾಜಕಾರಣದಲ್ಲೇ ಕಾಲ ಕಳೆದರೇ ವಿನಾ, ಇಂಥ ಅಪರಾಧಗಳನ್ನು ತಡೆಯುವುದಕ್ಕೆ ಏನು ಕ್ರಮ ತೆಗೆದುಕೊಂಡಿದ್ದಾರೆ ತೋರಿಸಿಬಿಡಿ ನೋಡೋಣ? ನಯಾಪೈಸೆ ಕೆಲಸ ಮಾಡುವ ಯೋಗ್ಯತೆ ಇಲ್ಲದಿದ್ದ ಮೇಲೆ ರಾಜ್ಯವಾದರೂ ಹೇಗೆ ಉದ್ಧಾರವಾಗಬೇಕು?

ಹೊಸ ಸರ್ಕಾರ ಬಂದು ಒಂದು ವರ್ಷಕ್ಕಿಂತ ಹೆಚ್ಚಾದರೂ, ಈವರೆಗೆ ನಡೆದ ಎಲ್ಲ ಅಪರಾಧ, ಅಹಿತಕರ ಘಟನೆಗಳಲ್ಲಿ ಎಲ್ಲದಕ್ಕೂ ವಿರೋಧ ಪಕ್ಷಗಳನ್ನು, ಅಲ್ಲಿನ ನಾಯಕರನ್ನು ಅಥವಾ ಮೋದಿ ಸರ್ಕಾರವನ್ನು ದೂರುತ್ತಾ, ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಬಿಟ್ಟು ಇನ್ನೇನು ಮಾಡಿದೆ ಈ ಸರ್ಕಾರ. ನ್ಯಾಯ ಕೊಡಿ ಎಂದರೆ ‘ಇಷ್ಟು ದಿನ ಎಲ್ಲಿ ಮಲಗಿದ್ದೆಯಮ್ಮಾ’ ಎಂದರು, ಪ್ರತಿಭಟನಾ ನಿರತ ರೈತರನ್ನು ಗೂಂಡಾಗಳು ಎಂದರು. ಒಟ್ಟಾರೆಯಾಗಿ ಇಷ್ಟು ದಿನ ಸಮಸ್ಯೆಯನ್ನು ಪರಿಹಾರ ಮಾಡುವುದಕ್ಕಿಂತ ಅದನ್ನು ಬೇರೆಯವರ ಹೆಗಲ ಮೇಲೆ ಹಾಕಿ ಜಾರಿಕೊಂಡಿದ್ದೇ ಬಂತು.
ಈಗ ಈ ಹುಡುಗಿಯ ಪ್ರಕರಣದಲ್ಲೂ ಇಂಥದ್ದೇ ಆಗುತ್ತಿದೆ. ಇವರಿಗೆ ಬೆಂಬಲಿಸುವುದಕ್ಕೆ ವಾರ್ತಾಭಾರತಿಯಂಥ ಪತ್ರಿಕೆಗಳು. ದೇಶದಲ್ಲಿ ಸಮಾನತೆ ಇಲ್ಲ, ಜಾತಿ ವ್ಯವಸ್ಥೆಯೇ ಕೆಟ್ಟದ್ದು ಎಂದು ಹೇಳುವುದು, ಈ ಕಡೆ ಸತ್ತವರು ಯಾವ ಜಾತಿ ಎಂದು ನೋಡಿ ಹೆಡ್‌ಲೈನ್‌ ಛಾಪಿಸುವುದು! ಇದೇನಾ ಅತ್ಯಾಚಾರ ಸಂತ್ರಸ್ತರ ಪರ ನಿಲ್ಲುವ ಪರಿ?

ಇಲ್ಲೊಂದು ಸೋಜಿಗ ಗಮನಿಸಿದ್ದೀರಾ? ಅತ್ಯಾಚಾರದ ವಿಡಿಯೊ ವೈರಲ್‌ ಆಗಿ, ಪೊಲೀಸರು ಇದನ್ನು ಗಮನಿಸಿ, ಆರೋಪಿಗಳನ್ನು ಬಂಧಿಸಿ ತಂದರು. ಇದೆಲ್ಲ ಬಹಳ ಬೇಗ ಮುಗಿದು ಹೋಯಿತು. ಆದರೆ, ಕಾಂಗ್ರೆಸ್‌ನ ಚೇಲಾಗಳಿಗೆ ಇದು ಹೀಗೆ ಇಷ್ಟು ಬೇಗ ಮುಗಿಯುತ್ತದೆಂಬ ಕಲ್ಪನೆಯೇ ಇರಲಿಲ್ಲ. ಆದರೂ ಮಾಡಿದ ಕೆಲಸ ವ್ಯರ್ಥವಾಗಬಾರದು, ಕೊಟ್ಟ ಸಂಬಳಕ್ಕೆ ಮೋಸ ಮಾಡಬಾರದು ಎಂಬ ಒಂದೇ ಉದ್ದೇಶದಿಂದ, ಅತ್ಯಾಚಾರಿಗೆ ನ್ಯಾಯ ಕೊಡಿಸಬೇಕು. ಶೋಭಾ ಕರಂದ್ಲಾಜೆ-ನಳಿನ್‌ ಕಮಾರ್‌ ಕಟೀಲು ಹೊಣೆ ಹೊರಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅರಚುತ್ತಿದ್ದಾರೆ. ವಿಡಿಯೊದಲ್ಲಿರುವ ಹುಡುಗರೇ ಸಿಕ್ಕ ಮೇಲೆ ಹಾರಾಟ ಹೋರಾಟ ಯಾಕಾಗಿ? ಯಾರಿಗಾಗಿ?

ಇನ್ನಾದರೂ ನಿಜವಾದ ಸಮಸ್ಯೆಯ ಬಗ್ಗೆ ಗಮನಹರಿಸಿ. ದಲಿತರ ಮೇಲೆ ಅತ್ಯಾಚಾರ ಆದರಷ್ಟೇ ಅದು ಗಂಭೀರ ಪ್ರಕರಣವಲ್ಲ. ಬದಲಿಗೆ ಯಾರ ವಿರುದ್ಧ ಎಂಥದ್ದೇ ಅಪರಾಧ ನಡೆದರೂ ಅದು ಗಂಭೀರವೇ. ಸತ್ತವರ, ಸಂತ್ರಸ್ತರ ಜಾತಿ ನೋಡಿ ವರದಿ ಮಾಡುವುದು, ಪ್ರತಿಕ್ರಿಯಿಸುವುದನ್ನು ನಾವು ಇನ್ನಾದರೂ ಬಿಡೋಣ. ಇಲ್ಲವಾದರೆ, ಆ ಅತ್ಯಾಚಾರಿಗಳಿಗೂ ನಮಗೂ ಹೆಚ್ಚಿನ ವ್ಯತ್ಯಾಸವೇ ಇರುವುದಿಲ್ಲ.

Leave a Reply

Copyright©2021 Chiranjeevi Bhat All Rights Reserved.
Powered by Dhyeya