‘ಕಳ್ಳ ನಾನಲ್ಲ, ನಿಮ್ಮಪ್ಪ!’

ಇನ್ನೂ ಆಟ ಆಡುವ ವಯಸ್ಸು. ನಮ್ಮ ಮನೆಯ ಪಕ್ಕದಲ್ಲಿರುವ ಅಣ್ಣ ಯಾಕೋ ಅವತ್ತು ಮೂಡ್‌ ಆಫ್‌ ಆಗಿದ್ದ. ನನ್ನ ಯಾವ ಮಾತಿಗೂ ರಿಯಾಕ್ಟ್ ಮಾಡ್ತಾ ಇರಲಿಲ್ಲ. ಆಗ ನಾನು ಅವನಿಗೆ ಎಷ್ಟು ಬೇಕೋ ರೇಗಿಸಿದೆ. ಕೇಳುವಷ್ಟು ಕೇಳಿ ನನಗೊಂದು ಪೆಟ್ಟು ಕೊಟ್ಟ. ತಕ್ಷಣವೇ ಅಳುತ್ತಾ ನಾನು ಅಮ್ಮನ ಬಳಿ ಹೋಗಿ ದೂರು ನೀಡಿದೆ. ಅಮ್ಮ ಸಿಟ್ಟಿನಿಂದ ಬಂದು ಅಣ್ಣನಿಗೆ ಬಯ್ದಳು. ಆಗ ಅವನ ಅಪ್ಪ ಅಮ್ಮನೂ ಬಂದು ‘ಚಿಕ್ಕವನಿಗೆ ಹೊಡೆಯುತ್ತೀಯಲ್ಲ ನಾಚಿಕೆಯಾಗಲ್ವಾ?’ ಎಂದು ಬಯ್ದರು. ನನಗೆ ಗೊತ್ತು ನಾನೇ ತಪ್ಪು ಮಾಡಿದ್ದು ಅಂತ. ಆದರೂ ಒಂದು ಖುಷಿ. ಇದನ್ನು ಚಿಕ್ಕವರಿರಬೇಕಾದರೆ ಬಹುತೇಕ ಎಲ್ಲರೂ ಮಾಡಿರುತ್ತಾರೆ. ಆದರೆ ನಾನು ಆ ರೀತಿಯ ವಿಕೃತ ಆನಂದ ಪಡೆಯುವುದನ್ನೂ ಅಂದೇ ಬಿಟ್ಟುಬಿಟ್ಟೆ. ರಾಹುಲ್‌ ಗಾಂಧಿ ಮಾತ್ರ ಇದನ್ನೂ ಇನ್ನೂ ಬಿಡಲಿಲ್ಲ. ದಾಖಲೇಯೇ ಇಲ್ಲದೇ, ಮೊದಲು ಚೌಕಿದಾರ್‌ ಚೋರ್‌ ಹೆ ಎಂದು ಶುರು ಮಾಡಿದ್ದ ಅಭಿಯಾನ, ಪ್ರಧಾನಮಂತ್ರಿ ಚೋರ್‌ ಹೆ ಎಂಬಲ್ಲಿಗೆ ಬಂದು, ಅಲ್ಲಿಂದ, ನರೇಂದ್ರಮೋದಿ ಚೋರ್‌ ಹೆ ಎಂದಾಯಿತು. ಸಹಜವಾಗಿ ಅದಕ್ಕೇನು ಉತ್ತರ ಬರುತ್ತೆ?

‘ಚೋರ್‌ ನಾನಲ್ಲ, ನಿನ್ನ ಅಪ್ಪ!’

ಇಷ್ಟನ್ನೇ ಮೋದಿ ಸ್ವಲ್ಪ ಬೇರೆ ಧಾಟಿಯಲ್ಲಿ ಹೇಳಿದ್ದು. ಇಷ್ಟಕ್ಕೇ ‘ಅಯ್ಯಯ್ಯೋ ದೇಶ ಕಂಡ ಅತ್ಯುತ್ತಮ ಪ್ರಧಾನಿಗೆ ಕೊಡುವ ಗೌರವವಾ ಇದು? ನಮ್ಮ ಅಪ್ಪನ್‌ ಬಗ್ಗೆ ಮಾತಾಡಿದ’ ಎಂದು ರಾಹುಲ್‌ ಅಳುವುದೇನು? ಕಾಂಗ್ರೆಸಿಗರು ಅಂಗಿ ಹರಿದುಕೊಳ್ಳುವುದೇನು? ಅಬ್ಬಬ್ಬಾ! ದಾಖಲೆ ಇಲ್ಲದೇ 120 ಕೋಟಿ ಜನತೆಯ ಪ್ರಧಾನಿಯನ್ನು ಕಳ್ಳ ಎಂದು ಕರೆಯಬಹುದು. ಆದರೆ, ಮೋದಿ ವಾಪಸ್‌ ತಿರುಗಿ ‘ರಾಜೀವ್‌ ಗಾಂಧಿ ಭ್ರಷ್ಟಾಚಾರಿ ನಂಬರ್‌ 1’ ಎಂದರೆ, ಘೋರ ಅಪರಾಧವೇ?
ನಿಮ್ಮ ರಾಜೀವ್‌ ಎಷ್ಟು ಸಾಚಾ ಎಂದು, ಅವರ ಇತಿಹಾಸವೇ ಹೇಳುತ್ತದೆ. ಹಿಂದೆ ಅವರ ಸರ್ಕಾರದಲ್ಲಿ ಏನೇನಾಗಿತ್ತು? ಅವರು ಎನೇನು ಮಾಡಿದ್ದರು? ನೋಡೋಣ.

ಇಂಡಿಯನ್‌ ಪೀಸ್‌ ಕೀಪಿಂಗ್‌ ಫೋರ್ಸ್‌(ಐಪಿಕೆಎಫ್‌):
ಭಾರತೀಯ ಸೇನೆಗೆ ಒಂದು ಉತ್ತಮ ಇತಿಹಾಸವಿದೆ. ಅದು ಯಾವುದೇ ಆಪರೇಷನ್‌ಗೆ ಅಂತ ಹೋದರೂ, ಕೈಸುಟ್ಟುಕೊಂಡು ವಾಪಸ್‌ ಬಂದಿದ್ದು ಕಡಿಮೆಯೇ. ಹೀಗಿರುವಾಗ ರಾಜೀವ್‌ ಗಾಂಧಿಯವರು ಸುಮಾರು ಒಂದು ಲಕ್ಷ ಯೋಧರನ್ನು ಶ್ರೀಲಂಕಾಗೆ ಕಳುಹಿಸಿಕೊಟ್ಟರು. ಇದು ಅಲ್ಲಿನ ಸೇನೆಗೆ ಇಷ್ಟವಾಗಲಿಲ್ಲ. ವಿರೋಧಿಸಿದರು. ಅದರ ನಡುವೆಯೂ ಅವರು ಯೋಧರನ್ನು ಶ್ರೀಲಂಕಾದಲ್ಲಿ ಬಿಟ್ಟರು. ಒಟ್ಟಾರೆ 1200 ಯೋಧರು ಹುತಾತ್ಮರಾಗಿದ್ದು ತಮಿಳರು ಮತ್ತು ಸಿಂಹಳರು ಪ್ರಾಣ ಬಿಟ್ಟಿದ್ದರು. ಕೊನೆಗೆ ವಿ.ಪಿ. ಸಿಂಗ್‌ ಅವರು ಚುನಾವಣೆ ಗೆದ್ದ ಬಳಿಕ ಯೋಧರನ್ನು ಅಲ್ಲಿಂದ ವಾಪಸ್‌ ಕರೆಯಿಸಿಕೊಂಡಿದ್ದು. ಅದು ಎಲ್ಲ ಮರ್ಯಾದೆಯನ್ನು ಕಳೆದುಕೊಂಡ ಮೇಲೆ. ರಾಜೀವ್‌ ಮೇಲಿರುವ ಕೋಪಕ್ಕೆ ಶ್ರೀಲಂಕಾ ನೌಕಾಪಡೆಯ ಯೋಧ ರಾಜೀವ್‌ ಗಾಂಧಿ ಮೇಲೆ ಹಲ್ಲೆ ಸಹ ಮಾಡಿದ್ದ. ಕೊನೆಗೆ ಎಲ್‌ಟಿಟಿಇ ಉಗ್ರರಿಂದಲೇ ರಾಜೀವ್‌ ಹತ್ಯೆಯಾದರು.

ಕಾಶ್ಮೀರ ಚುನಾವಣೆಯಲ್ಲಿ ಮೋಸ:
ರಾಜೀವ್‌ ಗಾಂಧಿಯಂಥ ಮತ್ತೊಬ್ಬ ಭ್ರಷ್ಟಾಚಾರಿ ಮತ್ತೊಬ್ಬ ಇಲ್ಲ ಎನ್ನುವುದಕ್ಕೆ ತಾಜಾ ಉದಾಹರಣೆಯಂತಿದೆ ಈ ಪ್ರಕರಣ. ಹಾಗೆ ನೋಡಿದರೆ ಕಾಶ್ಮೀರ 1987ರಲ್ಲಿ ಬಹಳ ಶಾಂತವಾಗೇ ಇತ್ತು. ಇವತ್ತಿನ ಹಾಗೆ ಅಲ್ಲಿ, ಚುನಾವಣೆಯನ್ನೇ ಬಹಿಷ್ಕಾರ ಹಾಕುವಷ್ಟು ಮಟ್ಟಿಗೆ ಏನೂ ಇರಲಿಲ್ಲ. ಪ್ರತ್ಯೇಕತಾವಾದಿಗಳು ಸಹ ಚುನಾವಣೆಯನ್ನು ಎದುರಿಸಲು ಉತ್ಸುಕರಾಗಿದ್ದರು ಎಂದರೇ, ಅಲ್ಲಿ ಪರಿಸ್ಥಿತಿ ಹೇಗಿತ್ತು ಎಂದು ಊಹಿಸಿಕೊಳ್ಳಿ. ಆಗ ಫಾರೂಖ್‌ ಅಬ್ದುಲ್ಲಾನ ಪಕ್ಷ ಕಾಂಗ್ರೆಸ್‌ನ ಮಿತ್ರಪಕ್ಷವಾಗಿತ್ತು. ಅದನ್ನು ಗೆಲ್ಲಿಸುವುದಕ್ಕಾಗಿ ಕಾಂಗ್ರೆಸ್‌ ಆಗ ಏನು ಬೇಕೋ ಎಲ್ಲ ಅಕ್ರಮಗಳನ್ನೂ ಮಾಡಿತ್ತು ಎಂದು ವರದಿಯಾಗಿದೆ.
ಇದರ ಬಗ್ಗೆ ಅವತ್ತು ಕಾಂಗ್ರೆಸ್‌ ಮುಖಂಡರಾಗಿದ್ದ ಖೇಮ್‌ ಲತಾ ವುಖ್ಲೂ ಹೇಳುತ್ತಾರೆ, ‘ನನಗೆ ಇನ್ನೂ ನೆನಪಿದೆ, 1987 ಚುನಾವಣೆಯಲ್ಲಿ ಬಹಳ ಅಕ್ರಮಗಳು ನಡೆದಿದ್ದವು. ಸೋಲುವ ಅಭ್ಯರ್ಥಿಗಳು ಜಯಶಾಲಿಯೆಂದು ಘೋಷಿಸಲಾಗಿತ್ತು. ಪ್ರಜಾಪ್ರಭುತ್ವ ಮತ್ತು ಚುನಾವಣೆಯ ಬಗ್ಗೆ ಇದ್ದ ನಂಬಿಕೆಗಳೆಲ್ಲವೂ ಅಲ್ಲಿನ ಜನರಿಗೆ ಅವತ್ತೇ ಮಣ್ಣಾಗಿತ್ತು.’
ಇದಾದ ಮೇಲೇ ಅಲ್ಲಿ, ಜಮಾತ್‌-ಎ-ಇಸ್ಲಾಮಿ ಮತ್ತು ಇನ್ನಿತರ ಪ್ರತ್ಯೇಕತಾವಾದಿ ಸಂಘಟನೆಗಳು ಮತ್ತು ಉಗ್ರರನ್ನು ಬೆಂಬಲಿಸುವ ಮತ್ತಷ್ಟು ಸಂಘಟನೆಗಳು ತಲೆ ಎತ್ತಿದ್ದು.
ಇವತ್ತು ನಾವು ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆದರೆ ಅದಕ್ಕೆ ಜನರು ಬರುತ್ತಿಲ್ಲ ಎಂದು ಏನು ಹೇಳುತ್ತೀವಲ್ಲ, ಅದಕ್ಕೆಲ್ಲ ನೇರ ಹಾಗೂ ಒಂದೇ ಕಾರಣ ರಾಜೀವ್‌ ಗಾಂಧಿ. ಪ್ರಧಾನಿ ಮೋದಿ ಭಾಷೆಯಲ್ಲಿ ಹೇಳುವುದಾದರೆ ಭ್ರಷ್ಟಾಚಾರಿ ನಂಬರ್‌ 1. ನೆಹರೂ ಕಾಶ್ಮೀರವನ್ನು ಕುಲಗೆಡಿಸಿ ಹೋಗಿದ್ದರು. ಇನ್ನೇನು ಅದು ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಈ ಮಹಾಪುರುಷ ಬಂದ.

ಬೊಫೋರ್ಸ್‌ ಹಗರಣ:
ಆಗಿನ ಕಾಲದ ಅತ್ಯಂತ ದೊಡ್ಡ ಹಗರಣ. ಈ ದಾಖಲೆಯನ್ನು ಮತ್ತೆ ಮುರಿದಿದ್ದು ಕಾಂಗ್ರೆಸ್‌ನ 2ಜಿ ಹಗರಣ ಎಂಬುದು ಮತ್ತೊಂದು ವಿಷಯ ಬಿಡಿ. ಭಾರತಕ್ಕೆ ಉತ್ತಮ ಮಟ್ಟದ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತೇವೆ ಎಂದು ಸ್ವೀಡನ್‌ನ ಬೊಫೊರ್ಸ್‌ ಕಂಪನಿಯ ಜತೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಇದರಲ್ಲಿ ಸ್ವೀಡನ್‌ ಮತ್ತು ಭಾರತೀಯ ಸರ್ಕಾರದ ಕೆಲವರು ಬೊಫೊರ್ಸ್‌ನಿಂದ ಕೋಟಿ ಕೋಟಿ ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂಬ ಆರೋಪವಿದೆ. ರಾಜೀವ್‌ ಗಾಂಧಿ ಇದರಲ್ಲಿ ಇದ್ದಾರೋ ಇಲ್ಲವೋ ಬೇರೆ ಮಾತು. ಆದರೆ, ಒಬ್ಬ ಪ್ರಧಾನಿಯಾಗಿ ಇಂಥ ವ್ಯವಹಾರಗಳನ್ನು ಎಷ್ಟು ಅಪಾರದರ್ಶಕವಾಗಿ ಮಾಡಿದ್ದಾರೆ ಎಂಬುದು ಇಲ್ಲಿ ಸಾಬೀತಾಗುತ್ತದೆ.

ಭೋಪಾಲ್‌ ಅನಿಲ ದುರಂತ:
ನೀವು ಯಾವುದೇ ಕೋನದಿಂದ ಬೇಕಾದರೂ ನೋಡಿ. ರಾಜೀವ್‌ ಗಾಂಧಿಯ ಆಡಳಿತಾವಧಿ ಎಂಬುದು ನಮ್ಮ ದೇಶದ ದೌರ್ಭಾಗ್ಯವೇ ಸರಿ. ಆದರೆ ಅನಿಲ ದುರಂತವನ್ನು ನಮ್ಮ ಭಾರತ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ವಿಶ್ವದ ಕೈಗಾರಿಕಾ ವಲಯದ ದುರಂತದ ಪಟ್ಟಿಯಲ್ಲಿ ಸ್ಥಾನ ಪಡೆದ ಅನ್ಯಾಯವದು. 16 ಸಾವಿರ ಜನರ ಮಾರಣಹೋಮ, 5 ಲಕ್ಷಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ ಅಥವಾ ಅದರ ಅಡ್ಡಪರಿಣಾಮಗಳಾಗಿವೆ. ಸಾವು ಒಂದಾದರೂ ಸಾವೇ. ಇದು ಮಾತ್ರ ಜನರನ್ನು ಸಾಮೂಹಿಕವಾಗಿ ಬೆಂಕಿಗೆ ತಳ್ಳಿದಂತೆ. ಆಗ ಪ್ರಧಾನಿ ಆಗಿದ್ದವರು ಇದೇ ರಾಜೀವ್‌ ಗಾಂಧಿ. ಡಿಸೆಂಬರ್‌ 2, 1984ರ ರಾತ್ರಿ ಈ ದುರಂತ ನಡೆಯುತ್ತದೆ, ಡಿಸೆಂಬರ್‌ 7ಕ್ಕೆ ಅನಿಲ ದುರಂತವಾದ ಕಂಪನಿ ಯುನಿಯನ್‌ ಕಾರ್ಬೈಡ್‌ನ ಅಧ್ಯಕ್ಷ ವಾರನ್‌ ಆ್ಯಂಡರ್ಸನ್‌ ಎಂಬುವವನು ಭೋಪಾಲ್‌ಗೆ ಬರುತ್ತಾನೆ. ಆರು ಗಂಟೆಗಳ ಬಳಿಕ ಜಾಮೀನು ಪಡೆದು ಪರಾರಿಯಾಗುತ್ತಾನೆ. ಅದಕ್ಕೆ ಕ್ಯಾರೇ ಎನ್ನದ ರಾಜೀವ್‌ ಗಾಂಧಿ ಭ್ರಷ್ಟಾವಾರಿಯಲ್ಲವೇನು? ಇಂಥ ನಾಲಾಯಕ್‌ಗಳನ್ನು ನಮ್ಮ ಪ್ರಧಾನಿ ಎಂದು ಕರೆದಿದ್ದಾದರೂ ಹೇಗೆ? ಕಾಂಗ್ರೆಸ್‌ನವರ ಸರ್ಕಾರ ಇದ್ದಾಗಲೇ ಸಾಲ ಪಡೆದ ಚೋಕ್ಸಿ, ನಿರವ್‌ ಮೋದಿ ಮತ್ತು ವಿಜಯ್‌ ಮಲ್ಯ ಅವರು ಮೋದಿ ಸರ್ಕಾರ ತಂದ ಆರ್ಥಿಕ ನೀತಿಗೆ ಹೆದರಿ ದೇಶ ಬಿಟ್ಟು ಹೋದಾಗ ಮೋದಿ ಕಳ್ಳ ಆಗುವುದಾದರೆ, ಲಕ್ಷಾಂತರ ಜನರ ಜೀವನವನ್ನೇ ಬೀದಿಗೆ ತಂದ ವಾರನ್‌ ಆ್ಯಂಡರ್‌ಸನ್ನನ್ನು ಪರಾರಿಯಾಗುವುದಕ್ಕೆ ಬಿಟ್ಟ ರಾಜೀವ್‌ ಗಾಂಧಿ ಭ್ರಷ್ಟಾಚಾರಿಯಲ್ಲವೇನು? ಈ ಮನುಷ್ಯ ತನ್ನನ್ನು ತಾನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಸ್ವಾಮಿ ಅವರು? ರಾತ್ರಿ ಕುಟುಂಬದೊಂದಿಗೆ ಮಲಗುವಾಗ, ಪರೋಕ್ಷವಾಗಿ ‘ಎಷ್ಟು ಜನರ ಜೀವನ ಬೀದಿಗೆ ತಂದುಬಿಟ್ಟೆ ’ ಎಂಬ ಸಣ್ಣ ಪಾಪಪ್ರಜ್ಞೆಯಾದರೂ ಕಾಡಲಿಲ್ಲವಾ?

1984 ಸಿಖ್‌ ದಂಗೆ:
ಯಾವನೋ ಒಬ್ಬ ಮತಾಂಧ ರಾಜೀವ್‌ರ ಅಮ್ಮ ಇಂದಿರಾ ಗಾಂಧಿಯನ್ನು ಕೊಂದಿದ್ದ. ಅದಕ್ಕೆ ಪ್ರತೀಕಾರವಾಗಿ 8000-17000 ಸಿಖ್ಖರನ್ನು ಕಂಡ ಕಂಡಲ್ಲಿ ಕೊಲ್ಲಲಾಯಿತು. ಇವರೆಲ್ಲ ಮಾತೆತ್ತಿದರೆ, 2002ರ ಕೋಮುಗಲಭೆಯೊಂದನ್ನೇ ಹೇಳುತ್ತಾರಲ್ಲ, ಅದಕ್ಕಿಂತ ಕನಿಷ್ಟ 10ಪಟ್ಟು ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಯಾರಿಗಾಗಿ? ಒಬ್ಬ ಮಹಿಳೆಯ ಸಾವಿನ ಪ್ರತೀಕಾರಕ್ಕಾಗಿ! ಅವರು ಕೊಂದರು, ನಾನು ಕೊಲ್ಲುತ್ತೇನೆ ಎಂದು ಮಾಡಿದ ನೀಚ ಪ್ರಯೋಗದ ಪರಿಣಾಮ ಸಿಖ್‌ ಉಗ್ರಗಾಮಿಗಳು ಟೊರೊಂಟೊ ಇಂದ ಭಾರತಕ್ಕೆ ಬರುವ ಏರ್‌ ಇಂಡಿಯಾ ವಿಮಾನ 182 ಬ್ಲಾಸ್ಟ್‌ ಮಾಡಿ 329 ಜನರ ಪ್ರಾಣ ತೆಗೆದಿದ್ದರು. ಇದು ಸಾವಿರ ಸಾವಿರ ಸಿಖ್ಖರನ್ನು ಕೊಂದದ್ದಕ್ಕೆ ಅವರಿಂದ ಪ್ರತೀಕಾರ.
ಶಾ ಬಾನೋ ಪ್ರಕರಣದಲ್ಲಿ ರಾಜೀವ್‌ ಗಾಂಧಿ ಎಷ್ಟರ ಮಟ್ಟಿಗೆ ಹೆಣ್ಣು ಮಕ್ಕಳ ಪರವಾಗಿ ನಿಂತರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇವೆಲ್ಲವನ್ನು ಬಾಲಾಜಿ ವಿಶ್ವನಾಥನ್‌ ಎಂಬ ಲೇಖಕರು ಇನ್ನೂ ವಿಸ್ತಾರವಾಗೇ ಬರೆದಿದ್ದಾರೆ.

ಇಷ್ಟಾದ ಮೇಲೂ ಪ್ರಧಾನಿ ಮೋದಿ ಹೇಳಿದ್ದು ಸುಳ್ಳು ಎಂದು ಹೇಗೆ ತಾನೇ ಹೇಳುವುದಕ್ಕೆ ಸಾಧ್ಯ? ಅಷ್ಟೇ ಅಲ್ಲದೇ, ಇಂದಿರಾ ಗಾಂಧಿಯ ನಂತರ ಭಾರತ ಕಂಡ ಅತ್ಯಂತ ಕೆಟ್ಟ ಪ್ರಧಾನಿ ಎಂದರೆ ಅದು ರಾಜೀವ್‌ ಗಾಂಧಿ ಎಂಬುದಕ್ಕೆ ಈ ಮೇಲಿನ ಉದಾಹರಣೆಗಳೇ ಸಾಕ್ಷಿ. ಏನೋ, ತೆಳ್ಳಗೆ-ಬೆಳ್ಳಗೆ ನೋಡುವುದಕ್ಕೆ ಚೆನ್ನಾಗಿದ್ದಾರೆ ಎಂಬ ಕಾರಣಕ್ಕೆ ಅದೇ ಗುಲಾಮಿ ಮನಸ್ಥಿಯಿಂದ ನಮ್ಮ ದೇಶ ರಾಜೀವ್‌ ಗಾಂಧಿಗೆ ಅಧಿಕಾರ ಕೊಟ್ಟ ಕಾರಣ ಭಾರತ ಇಷ್ಟೆಲ್ಲ ಅನುಭವಿಸಬೇಕಾಗಿ ಬಂತು.

ಅದನ್ನು ಹೇಳಿದರೆ ತಪ್ಪೇ? ನೋಡಿ, ಭಾರತೀಯ ಮನಸ್ಥಿತಿ ಹೇಗೆ ಎಂದರೆ, ನೀನು ಎಂದರೆ ನಿಮ್ಮಪ್ಪ ಎಂದೇ ಹೇಳುವುದು. ರಾಹುಲ್‌ ಗಾಂಧಿ ಇಷ್ಟು ದಿನ ಮೋದಿಗೆ ಚೋರ್‌ ಚೋರ್‌ ಎಂದು ಕರೆದಿದ್ದಾರೆ. ಏನೋ ಚಿಕ್ಕ ಹುಡುಗ, ಹೇಳ್ತಾನೆ ಬಿಡು ಅಂತ ಮೋದಿ ಸುಮ್ಮನಿದ್ರು. ನೋಡುವಷ್ಟು ನೋಡಿ, ಚೋರ್‌ ನಾನಲ್ಲ ನಿಮ್ಮಪ್ಪ ಎಂದಿದ್ದಾರೆ.

 

Leave a Reply

Copyright©2021 Chiranjeevi Bhat All Rights Reserved.
Powered by Dhyeya