ಚುನಾವಣಾಧಿಕಾರಿಗಳೇ, ನೀವು ಕರೆಂಟ್‌ ಬಿಲ್‌ ಕಟ್ಟಿಸಿಕೊಳ್ತಿಲ್ಲ, ನೆನಪಿರಲಿ!

 

ಲೋಕಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ಬರುತ್ತಿದೆ. ಭಾರತದಲ್ಲಿ ಜನಸಂಖ್ಯೆಯೂ ಹೆಚ್ಚಾಗಿದೆ. ಹಾಗಾಗಿ ಸಾಧನೆ ಮಾಡಿದವರಿಂದ ಹಿಡಿದು, ಅಪ್ಪ, ಅಜ್ಜ ಹಾಕಿದ ಆಲದ ಮರದಲ್ಲಿ ನೇತಾಡುವವರೂ, ಚಂಗನೆ ಕೆಳಗಿಳಿದು, ಚುನಾವಣೆಗೆ ನಿಂತಿದ್ದಾರೆ. ಜಾತಿಗೆ ಮತ ಹಾಕಬೇಕೋ, ಜಾತ್ಯತೀತವಾಗಿ ಮತ ಹಾಕಬೇಕೋ, ಅಭಿವೃದ್ಧಿಗೆ ಮತ ಹಾಕಬೇಕೋ ಎಂದು ಈಗಾಗಲೇ ಜನರು ಗೊಂದಲದಲ್ಲಿರುವಾಗಲೇ, ಒಬ್ಬರು ಮಗನಿಗಾಗಿ, ಮಂಡ್ಯದಲ್ಲಿ ಸುಮಲತಾ ಅಂಬರೀಶ್‌ ಅವರ ಹೆಸರಿನಲ್ಲೇ ಮತ್ತೆರಡು ಮಹಿಳೆಯರನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ನಿಜವಾಗಿ, ಸುಮಲತಾ ಅಂಬರೀಶ್‌ ಯಾರು ಎಂಬುದೇ ಜನರಿಗೆ ತಿಳಿಯಬಾರದು ಎಂಬುದು ಇದರ ಮೂಲ ಉದ್ದೇಶ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ವಿದ್ಯುತ್‌ ಸರಬರಾಜು ಕಚೇರಿಗೆ ಹೋಗಿ ಕರೆಂಟ್‌ ಬಿಲ್‌ ಅನ್ನು ಯಾರು ತಂದು ದುಡ್ಡು ಕೊಟ್ಟರೂ ಇಳಿಸಿಕೊಂಡು ರಸೀತಿ ಕೊಡುವ ಹಾಗೆ, ನಾಮಿನೇಷನ್‌ ಪತ್ರವನ್ನು ತೆಗೆದುಕೊಂಡ ಆರೋಪ ಈಗ ಚುನಾವಣಾಧಿಕಾರಿಗಳ ಮೇಲಿದೆ.

ಹಾಗಾದರೆ ಯಾರಾರ‍ಯರ ನಾಮಿನೇಷನ್‌ನಲ್ಲಿ ಏನೇನು ತಪ್ಪುಗಳಿವೆ? ಇಲ್ಲಿದೆ ನೋಡಿ.
ಯುವರಾಜ ನಿಖಿಲ್‌ರಿಂದಲೇ ಶುರು ಮಾಡೋಣ. ಸಿನಿಮಾದಲ್ಲಿ ಯಶಸ್ಸು ಸಿಗದ ನಿಖಿಲ್‌ ರಾಜಕೀಯದಲ್ಲಿ ಲಕ್‌ ನೋಡೋಣ ಎಂದು ಮನಸ್ಸು ಮಾಡಿದ್ದಾರೆ. ಯಾವುದೇ ಅಪ್ಪನಿಗೆ ಮಗನ ಜೀವನ ಸೆಟಲ್‌ ಮಾಡುವವರೆಗೂ ಹೇಗೆ ತಾನೆ ನಿದ್ದೆ ಬಂದೀತು? ಬಾ ಮಗನೆ ಎಂದು ಕರೆದಿದ್ದಾರೆ. ಏನೇ ಸರಿ ಇದ್ದರೂ ದಾಖಲೆ ಮಾತ್ರ ಸರಿ ಮಾಡುವುದಕ್ಕೆ ಆಗಲಿಲ್ಲ ಎಂಬುದು ಮಾತ್ರ ದುರಂತ. ಚುನಾವಣಾಧಿಕಾರಿಗಳೂ ದಾಖಲೆಯನ್ನು ಪರಿಶೀಲಿಸದೇ ಹಾಗೆಯೇ, ಯುಗಾದಿ ಹಬ್ಬದ ಹೋಳಿಗೆ ತೆಗೆದುಕೊಂಡ ಹಾಗೆ ಸ್ವೀಕರಿಸಿದರು ಎಂಬುದು ಮಾತ್ರ ಇನ್ನೂ ದುರಂತ.

ಮತದಾರರ ಪಟ್ಟಿಯಲ್ಲಿ ನಿಖಿಲ್‌ನ ಹೆಸರು ನಿಕಿಲ್‌ ಕುಮಾರಸ್ವಾಮಿ ಎಂದಿದೆ. ಆದರೆ, ನಾಮಿನೇಷನ್‌ ಪತ್ರದಲ್ಲಿ ಮಾತ್ರ, ನಿಖಿಲ್‌ ಕೆ. ಎಂದಿದೆ. ನಿಕಿಲ್‌ ಕುಮಾರಸ್ವಾಮಿ, ನಿಖಿಲ್‌ ಕೆ. ಆದದ್ದು ಯಾವಾಗಿನಿಂದ ಎಂಬ ಯಾವುದೇ ದಾಖಲೆಗಳೂ ಇಲ್ಲ. ನಾವೆಲ್ಲ ನಾಮಿನೇಷನ್‌ ಕೊಡುವುದಕ್ಕೆ ಹೋದರೆ ನೂರು ಪ್ರಶ್ನೆಗಳನ್ನು ಕೇಳುವ ಅಧಿಕಾರಿಗಳು, ಒಂದೇ ಒಂದು ನೋಟಿಸ್‌ ಸಹ ನಿಖಿಲ್‌ಗೆ ಜಾರಿ ಮಾಡಿಲ್ಲ. ರಾಜ್ಯ ಆಳುತ್ತಿರುವವರು ಇವರಪ್ಪನೇ ಇರಬಹುದು, ಆದರೆ ಚುನಾವಣಾಧಿಕಾರಿಗಳು ಯಾರಪ್ಪನಿಗೂ ಕೇರ್‌ ಮಾಡಬಾರದಲ್ಲವೇ?

ನಮ್ಮ ಆಸ್ತಿಯನ್ನು ಘೋಷಿಸುವ ಪತ್ರದ ಎ ವಿಭಾಗದ 8ನೇ ಪ್ಯಾರಾದಲ್ಲಿ ಮೈರಿಡ್‌ ಮಾರ್ಕೆಟಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಸಂಸ್ಥೆಯಿಂದ 50 ಲಕ್ಷ ರು. ಸಾಲವನ್ನು ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಮಿನಿಸ್ಟ್ರಿ ಆಫ್‌ ಕಾರ್ಪೊರೇಟ್‌ ಅಫೇರ್ಸ್‌ನಲ್ಲಿ ಹುಡುಕಿದಾಗ ಇಂಥದ್ದೊಂದು ಕಂಪನಿಯೇ ಇಲ್ಲ ಎಂಬುದು ಬಯಲಾಗುತ್ತದೆ. ಕಂಪನಿಯೇ ಇಲ್ಲದಿರುವಾಗ ಸಾಲ ಎಲ್ಲಿಂದ ಬಂತು? ಚುನಾವಣಾಧಿಕಾರಿಗಳು, ಯುಗಾದಿ ಸ್ವೀಟ್‌ ಪಡೆದಿದ್ದಾರಾ ಎಂಬ ಅನುಮಾನ ಬರುವುದು ಇಲ್ಲಿಂದಲೇ.

ಇನ್ನು ತನ್ನ ಹೊಣೆಗಾರಿಕೆ ಅಥವಾ ಲಯಬಿಲಿಟಿಸ್‌ ಅನ್ನು 35,36,29,176.45 ಎಂದು ಘೋಷಿಸಿಕೊಂಡಿದ್ದಾರೆ. 45 ಪೈಸೆ ಸಹ ಬಿಡದೇ ಲೆಕ್ಕ ತೋರಿಸಿದ ಇವರ ಮೇಲೆ ಇವರಿಗೇ ಮತ ಹಾಕೋದು ಎಂದು ನಿಶ್ಚಯಿಸಿಕೊಂಡು ಭಾಗ ಬಿ ಅನ್ನು ನೋಡಿದರೆ, 2,40,04,283 ಆಗಿರುತ್ತದೆ. 35 ಕೋಟಿ ಎಲ್ಲಿ? ಎರಡು ಕೋಟಿ ಎಲ್ಲಿ? ಉಳಿದ ಮೂವತ್ಮೂರು ಕೋಟಿಯ ಲೆಕ್ಕ, ಕುಮಾರಣ್ಣ ಮುಖ್ಯಮಂತ್ರಿಯಾದ ಮೇಲೆ ಎರಡು ತಿಂಗಳೊಳಗೆ ಉತ್ತರಕನ್ನಡಕ್ಕೆ ಬಂದು ವಾರ ವಾಸ್ತವ್ಯ ಹೂಡ್ತೇನೆ ಎಂದು ಹೇಳಿದ ಹಾಗೇ. ಅವರು ಹೇಳಿದ್ದೂ ಗೊತ್ತಾಗಿಲ್ಲ, ಇವರ ಲೆಕ್ಕ ಏನಾಯ್ತು ಎಂದೂ ಗೊತ್ತಾಗಿಲ್ಲ. ಭಾಗ ಎ ಮತ್ತು ಬಿ ಅಲ್ಲಿ ರಾಮನ ಲೆಕ್ಕ ಯಾವುದು, ಕೃಷ್ಣನ ಲೆಕ್ಕ ಯಾವುದು? ಇದನ್ನು ನಾವು ಕೇಳುವ ಮುಂಚೆ, ಚುನಾವಣಾಧಿಕಾರಿಗಳೇ ಕೇಳಬೇಕಿತ್ತು. ಯುಗಾದಿಯ ಸ್ವೀಟು ತಿನ್ನುತ್ತಾ ಕುಳಿತರು.

ಪುತ್ರ ವ್ಯಾಮೋಹಿಯ ಆಟ ಇಲ್ಲಿಗೇ ನಿಲ್ಲುವುದಿಲ್ಲ. ಸುಮಲತಾ ಅಂಬರೀಶ್‌ ಅವರು ಮಂಡ್ಯದಲ್ಲಿ ಚುನಾವಣೆಗೆ ನಿಲ್ಲುವುದಕ್ಕೆ ತಯಾರಿ ಮಾಡುತ್ತಾರೆ. ಗಂಡ ಸತ್ತವರು ಮನೆಯಲ್ಲಿ ಇರುವುದಕ್ಕಾಗಲ್ವಾ ಎಂದು ರೇವಣ್ಣ ಹೇಳಿದರೂ ಸಹ, ಎದೆಗುಂದುವುದಿಲ್ಲ. ಇಷ್ಟಕ್ಕೆಲ್ಲ ಸುಮ್ಮನಾಗುವವರಲ್ಲ ಸುಮಲತಾ ಎಂದು ಗೊತ್ತಾದಾಗ ಒಂದು ಸಿನಿಮೀಯ ಘಟನೆ ನಡೆಯುತ್ತದೆ. ಎಲ್ಲಿಂದಲೋ ಮೂವರು ಸುಮಲತೆಯರು ಬರುತ್ತಾರೆ. ಯಾವಾಗ ಬರುತ್ತಾರೆ ಎಂಬುದೂ ಬಹಳ ಮುಖ್ಯವಾಗುತ್ತದೆ.

ನಾಮಿನೇಷನ್‌ ಫೈಲ್‌ ಮಾಡುವ ಕೊನೆಯ ದಿನ, ಕೊನೆಯ ನಿಮಿಷಕ್ಕೆ. ಅಂದರೆ 3 ಗಂಟೆಗೆ ಸರಿಯಾಗಿ ಇಬ್ಬರು ಸುಮಲತೆಯರು ಚುನಾವಣೆಗೆ ಸ್ಪರ್ಧಿಸುವುದಾಗಿ ಬರುತ್ತಾರೆ. ಇಬ್ಬರ ನಾಮಿನೇಷನ್‌ ಒಂದೇ ಕ್ಷಣ ಅಂಗೀಕಾರವಾಗುವುದು ಮಾತ್ರ ಜಗತ್ತು ಕಂಡರಿಯದ ಕಾಕತಾಳೀಯವೇ ಸರಿ. ಇವರು ಬಂದರೆ ಚುನಾವಣಾಧಿಕಾರಿಗಳದ್ದು ಏನು ತಪ್ಪು ಎನ್ನುತ್ತೀರಾ? ಇದೆ.

ಎಂ. ಸುಮಲತಾ ಅವರು ನಾಮಿನೇಷನ್‌ ಫೈಲ್‌ ಮಾಡುವ ಗಾಬರಿಯಲ್ಲಿ, ತಮ್ಮ ಭಾವಚಿತ್ರವನ್ನೇ ಮರೆತು ಬಂದಿದ್ದಾರೆ. ಆದರೂ ಚುನಾವಣಾಧಿಕಾರಿಗಳು, ಯುಗಾದಿ ಸ್ವೀಟ್‌ಗಳನ್ನು ತೆಗೆದುಕೊಂಡಿದ್ದಾರೆ. ನಾಮಿನೇಷನ್‌ನಲ್ಲಿ ಕಾಣದ ಎಂ. ಸುಮಲತಾ ಅವರ ಚಿತ್ರ, ಇವಿಎಂ ಪಟ್ಟಿಯಲ್ಲಿ ಕಾಣುತ್ತದೆ. ನಮಗಂತೂ ಇದು ಹೇಗೆ ಬಂತು ಎಂದು ಗೊತ್ತಿಲ್ಲ, ಆದರೆ ಸ್ವತಃ ಚುನಾವಣಾಧಿಕಾರಿಗಳೂ ದೇವ್ರಾಣೆ ನಮಗೂ ಗೊತ್ತಿಲ್ಲ ಎಂದರೆ ಬಹಳ ಕಷ್ಟ. ಈ ಎಂ. ಸುಮಲತಾ ಅವರಿಗೆ ಎಷ್ಟು ಗಾಬರಿ ಮತ್ತು ಧಣಿಗಳಿಗೆ ಎಷ್ಟು ಅತಿ ಪ್ರಾಮಾಣಿಕತೆ ಎಂದರೆ, ತಮ್ಮ ಮೊಬೈಲ್‌ ನಂಬರನ್ನು ಸಹ ಹತ್ತು ಅಂಕಿಗಳನ್ನು ಬರೆಯುವ ಬದಲು,ಒಂದಂಕಿ ಹೆಚ್ಚೇ ಬರೆದು ಹನ್ನೊಂದಂಕಿಯನ್ನು ಬರೆದಿದ್ದಾರೆ. ಅಂದರೆ, ಹೀಗೆ ತಪ್ಪು ನಂಬರ್‌ ನೀಡಿದರೆ ಹೊರಗಿನಿಂದ ಯಾರೂ ಇವರನ್ನು ಸಂಪರ್ಕಿಸಲು ಆಗುವುದಿಲ್ಲ ಎಂಬುದೂ ಇದರ ಒಳಾರ್ಥ.

ಇನ್ನು ಈಕೆ ತನ್ನ ಸ್ಥಿರಾಸ್ತಿಗಳ ವಿವರ ನೀಡುವ ಪುಟ ಸಂಖ್ಯೆ8ರಲ್ಲಿ ತನಗೂ ತನ್ನ ಪತಿಗೂ ಕೃಷಿ ಭೂಮಿಯೇ ಇಲ್ಲವೆಂದು ಬರೆಯುತ್ತಾರೆ. ಆದರೆ, ಅದರ ಅಂದಾಜು ಮಾರುಕಟ್ಟೆ ಬೆಲೆ ಮಾತ್ರ10 ಲಕ್ಷ ರು ಎಂದು ಘೋಷಿಸುತ್ತಾರೆ. ಇಲ್ಲದ ಕೃಷಿ ಭೂಮಿಗೆ 10 ಲಕ್ಷ ಕೊಡುವವ ಮಣ್ಣಿನ ಮಗ ಯಾರು? ತೀರ ಒಗಟೇನೂ ಅಲ್ಲ ಬಿಡಿ.

ಇವರು ಪುಟ 14ರಲ್ಲಿ, ಚರಾಸ್ತಿ/ಸ್ಥಿರಾಸ್ತಿಯ ಒಟ್ಟು ಮೌಲ್ಯವೇ ಇಲ್ಲವೆಂದು ಬರೆಯುತ್ತಾರೆ. ಆದರೆ, ಪುಟ 6,7,8,9 ಮತ್ತು 10ರಲ್ಲಿ ಚರಾಸ್ತಿ/ಸ್ಥಿರಾಸ್ತಿಯ ಮೌಲ್ಯ 12 ಲಕ್ಷ ಎಂದು ಬರೆದಿದ್ದು ಮರೆತೇ ಬಿಟ್ಟಿದ್ದಾರೆ. 10ನೇ ಪುಟದಲ್ಲಿ ಬರೆಯುವಾಗ ಇದ್ದ ತಲೆ, 14ರಲ್ಲಿ ತಿರುಗುತ್ತದೆ ಎಂದರೆ, ಇಂಥವರು ನಾಯಕರಾದ ಮೇಲೆ, ‘ಜನ ನನಗೆ ಬಹುಮತ ನೀಡಿಲ್ಲ, ರಾಹುಲ್‌ ದೊಡ್ಡ ಮನಸ್ಸು ಮಾಡಿ ಅಧಿಕಾರ ಕೊಟ್ಟಿದ್ದಾರೆ’ ಎಂದೂ ಹೇಳಬಹುದು. ಇದಕ್ಕೆ ರಾಜ್ಯದ ದೊರೆಗಳೇ ಕಣ್ಣ ಮುಂದಿದ್ದಾರೆ.

ಬೇಸರದ ಸಂಗತಿ ಏನೆಂದರೆ, ಚುನಾವಣಾಧಿಕಾರಿಗಳಿಗೂ ಜನರೇ ಕೆಲಸ ಹೇಳಿಕೊಡಬೇಕಾಗಿ ಬಂದಿರುವುದು. ಇವರಿಗೆಲ್ಲ ಸಹಿ ಹಾಕಿದ ನೋಟರಿ, ಅದನ್ನು ನೋಡದೇ ಕರೆಂಟ್‌ ಬಿಲ್‌ ಕಟ್ಟಿಸಿಕೊಂಡ ಹಾಗೆ ತೆಗೆದುಕೊಳ್ಳುವ ಚುನಾವಣಾಧಿಕಾರಿಗಳನ್ನು ನಿಯಂತ್ರಿಸಲು ‘ದಿ ಪೀಪಲ್‌ ರೆಪ್ರೆಸೆಂಟೇಷನ್‌ ಆ್ಯಕ್ಟ್ನಲ್ಲಿ’ ಯಾವ ಕಾನೂನು ಇಲ್ಲವೇ?

ಈಗ ಮತ್ತೊಂದು ಸುಮಲತಾರನ್ನು ನೋಡೋಣ. ಇವರು ನಾಮಿನೇಷನ್‌ನಲ್ಲಿ ನೀಡಿದ ಭಾವಚಿತ್ರದಲ್ಲಿ ಕನ್ನಡಕವೇ ಹಾಕಿಕೊಳ್ಳದೇ, ಕಲರ್‌ ಸೀರೆಯನ್ನು ಉಟ್ಟಿದ್ದಾರೆ. ಆದರೆ, ಇವಿಎಂನಲ್ಲಿ ಇವರ ಭಾವಚಿತ್ರ ಬದಲಾಗಿದೆ. ಅದರಲ್ಲಿ ಆಕೆ ಸುಮಲತಾ ಅಂಬರೀಶ್‌ ಧರಿಸುವಂಥ ಕನ್ನಡಕ ಮತ್ತು ಅವರು ಸೀರೆ ಉಡುವ ಶೈಲಿಯಲ್ಲೇ ಸೀರೆ ಉಟ್ಟ ಭಾವಚಿತ್ರವಿದೆ. ಈ ಪ್ರಶ್ನೆ ಏನೆಂದರೆ, ಚುನಾವಣಾಧಿಕಾರಿಗಳು ಎಷ್ಟು ಫ್ರೀಯಾಗಿದ್ದಾರೆಂದರೆ, ಆಕೆ ಕೊಟ್ಟ ಫೋಟೊ ತೆಗೆದುಕೊಳ್ಳದೇ, ಇನ್ನೊಂದು ಫೋಟೊವನ್ನು ಇವಿಎಂನಲ್ಲಿ ಹಾಕಿದ್ದಾರೆ. ಅಷ್ಟೇ ಅಲ್ಲ, ಶ್ರೀರಂಗಪಟ್ಟಣದ ಶಾಖೆ ಎಸ್‌ಬಿಎಂನಲ್ಲಿ 2000 ಸಾವಿರ ರು. ಇದೆ ಎಂದು ಬರೆದಿದ್ದಾರೆ. ಎಬಿಎಂ ತನ್ನ ಅಸ್ತಿತ್ವವನ್ನು ಕಳೆದುಕೊಂಡ ಮೇಲೂ, ಅದನ್ನು ಉಲ್ಲೇಖಿಸುವ ಅಗತ್ಯ ಇತ್ತೇ? ಬೆಳ್ಳಿ ಬಂಗಾರದ ತೂಕ ಮತ್ತು ಮೌಲ್ಯದ ವಿವರ ನೀಡುವಾಗ, 500 ಗ್ರಾಂ ಮತ್ತು 15 ಲಕ್ಷ ರೂ. ಎಂದು ಬರೆದಿದ್ದಾರೆ. 500 ಗ್ರಾಂ ಎಂದರೆ ಏನು? ಬೆಳ್ಳಿಯೋ? ಬಂಗಾರವೋ? ಹಿತ್ತಾಳೆಯೋ? ಯಾವುದು? ಊಹೂಂ…ಅದು ಕೇವಲ ಚುನಾವಣಾಧಿಕಾರಿ ಮತ್ತು ಸುಮಲತಾಗೆ ಗೊತ್ತು. ಇನ್ನು ಆಸ್ತಿ ವಿವರ ಘೋಷಿಸುವಾಗ, ಪುಟ ಸಂಖ್ಯೆ 11 ಇದೆ, 13 ಇದೆ. ಆದರೆ, 12 ಮಾತ್ರ ನಮ್ಮಂಥ ಸಾಮಾನ್ಯರಿಗೆ ಕಾಣುವುದಿಲ್ಲ. ಅಗೇನ್‌, ಅದು ಚುನಾವಣಾಧಿಕಾರಿ ಮತ್ತು ಸುಮಲತಾ ವಿಚಾರ. ನಾವು ವೋಟು ಒತ್ತುವವರಷ್ಟೇ.

ಇನ್ನು ಪುಟ ಸಂಖ್ಯೆ 13ರಲ್ಲಿ ತಮಗೆ ವಾಣಿಜ್ಯ ಕಟ್ಟಡ ಇಲ್ಲವೆಂದು ತಿಳಿಸುವ ಇವರು, ಅದರ ಅಂದಾಜು ಮಾರುಕಟ್ಟೆ ಮೊತ್ತ 35 ಲಕ್ಷ ರೂ. ಎಂದು ನಮೂದಿಸಿದ್ದಾರೆ. ಅರೇ ಇದು ಹೇಗೆ ಸಾಧ್ಯ ಎಂದು ನಮಗೆ ಅನ್ನಿಸಿದರೂ, ಕರೆಂಟ್‌ ಬಿಲ್‌ ಕಟ್ಟಿಸಿಕೊಳ್ಳುವುದರಲ್ಲಷ್ಟೇ ಅಧಿಕಾರಿಗಳು ಬಿಜಿ.

ಇನ್ನೊಂದು ಮಜಾ ಇದೆ ನೋಡಿ. ಪುಟ ಸಂಖ್ಯೆ 16ರಲ್ಲಿ ಪತಿಯ ಸಾಲವನ್ನು ನಮೂದಿಸುವಾಗ, ವ್ಯ.ಸೇ.ಸ.ಸ ಟಿಎಂ ಹೊಸೂರಲ್ಲಿ 60,000 ರೂ., ಶ್ರೀರಂಗಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ 5,00,000 ರೂ. ಸೇರಿ ಒಟ್ಟು 5,60,000 ರೂ. ಸಾಲ ಇದೆ ಎಂದು ಬರೆದಿದ್ದಾರೆ. ಆದರೆ ಯಾವುದೇ ಹೊಣೆಗಾರಿಕೆಯೇ ಇಲ್ಲ ಎಂದು ಬರೆದಿದ್ದಾರೆ. ಸಾಲ ತೆಗೆದುಕೊಂಡವರು ವಾಪಸ್‌ ಕೊಡುವ ಪದ್ಧತಿಯೇ ಇಲ್ಲವಾ? ಅಥವಾ ಅದನ್ನೂ ಮಣ್ಣಿನ ಮಗನೇ ತೀರಿಸುವುದರಿಂದ, ಅದರ ಹೊಣೆಗಾರಿಕೆ ಅವರಿಗೆ ಎಂದು ಅರ್ಥವೋ? ಇನ್ನೂ ಬಹಳಷ್ಟು ತಪ್ಪುಗಳು ಈ ಆಸ್ತಿ ಘೋಷಣೆ ಪತ್ರದಲ್ಲಿ ಇವೆ.

ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಎಂಬಂತೆ, ಮಂಡ್ಯದ ಜಿಲ್ಲಾಧಿಕಾರಿಯನ್ನು ಇಷ್ಟೆಲ್ಲ ಆದ ಮೇಲೆ ವರ್ಗಾವಣೆ ಮಾಡಲಾಗಿದೆ. ಆಮೇಲೆ ಕುಮಾರಸ್ವಾಮಿ ಹೇಳುತ್ತಾರೆ, ಚುನಾವಣಾಧಿಕಾರಿಗಳು ಮೋದಿ ಕೈಗೊಂಬೆ, ಅವರೇ ವರ್ಗಾವಣೆ ಮಾಡಿಸಿದ್ದು ಎಂದು. ನಮ್ಮ ದೇಶದಲ್ಲಿ ಚುನಾವಣೆ ಎಂಬುದು ಬಹಳ ನಿಯತ್ತಾಗಿ ನಡೆಯುತ್ತದೆ ಎಂದು ತಿಳಿಯುವ ನಮ್ಮಂಥವರು ಇನ್ನೂ ಇವರನ್ನು ನಂಬಿ ಮತ ಹಾಕುತ್ತಿದ್ದೇವೆ ಎಂಬುದೇ ಪ್ರಜಾಪ್ರಭುತ್ವದ ವಿಸ್ಮಯ. ನಮಗೆ ಮತ ಹಾಕಿ ಎಂದು ಕೇಳುವ ಮಂದಿಗೆ, ನಾಮಿನೇಷನ್‌ನಲ್ಲೇ ಇಷ್ಟು ಸುಳ್ಳು ಹೇಳುವ ನೀವು, ಅಧಿಕಾರ ಸಿಕ್ಕ ಮೇಲೆ ಏನು ಎಂದು ಕೇಳುವ ಧೈರ್ಯವೂ ಇರುವುದಿಲ್ಲ.

ಮತಗಟ್ಟೆಗೆ ಹೋಗುವ ಮೊದಲು ಒಂದು ಮಾತು ನೆನಪಿಟ್ಟುಕೊಳ್ಳಿ, ಸೋನಿಯಾ ಗಾಂಧಿ ಮಗನಿಗೆ, ಕುಮಾರಣ್ಣನ ಮಗನಿಗೆ, ಮುಲಾಯಂ ಮಗನಿಗೆ, ಕರುಣಾನಿಧಿ ಮಗನಿಗೆ, ಫಾರೂಕ್‌ ಅಬ್ದುಲ್ಲಾ ಮಗನಿಗೆ, ಕೆಸಿಆರ್‌ ಮಗನಿಗೆ, ಲಾಲೂ ಪ್ರಸಾದ್‌ ಯಾದವ್‌ ಮಗನಿಗೆ, ಚಂದ್ರಬಾಬು ನಾಯ್ಡು ಮಗನಿಗೆ, ಶರದ್‌ ಪವಾರ್‌ ಮಗಳಿಗೆ, ಮೊಮ್ಮಗನಿಗೆ ಉತ್ತಮ ಭವಿಷ್ಯ ನೀಡುವುದು ನಿಮ್ಮ ಜವಾಬ್ದಾರಿಯಲ್ಲ. ನಿಮ್ಮ ಮಗನಿಗೆ, ಮಗಳಿಗೆ ಉತ್ತಮ ಭವಿಷ್ಯ ನೀಡುವ ಹೊಣೆ ನಿಮ್ಮದು.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya