ದಿನಾ ಅಳುವವರಿಗೆ ಮರುಗುವವರಾರ‍ಯರು?

ವರ್ಷಾನುಗಟ್ಟಲೆ ಜೆಡಿಎಸ್‌ ಮನೆಯಲ್ಲಿ ಜೀತ ಮಾಡಿದರೂ ಟಿಕೆಟ್‌ ಸಿಗದ ವಂಚಿತ ಕಾರ್ಯಕರ್ತರ ಎಣಿಕೆಯಂತೇ ದೇವೇಗೌಡರು ಮಂಡ್ಯವನ್ನು ತಮ್ಮ ಮೊಮ್ಮಗನಿಗೇ ಬಿಟ್ಟು ಕೊಟ್ಟರು. 14.03.2019ರಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ದೇವೇಗೌಡರು ನಿಖಿಲ್‌ ಕುಮಾರಸ್ವಾಮಿಯೇ ಮಂಡ್ಯದ ಅಭ್ಯರ್ಥಿ ಎಂದು ಘೋಷಿಸಿಬಿಟ್ಟರು.

ದೇವೇಗೌಡರು ಮೊಮ್ಮಗನನ್ನು ಪಕ್ಕದಲ್ಲಿ ಇಟ್ಟುಕೊಂಡೇ ಭಾಷಣ ಮಾಡುತ್ತಾ, ಯಾರ್ರೀ ಕುಟುಂಬ ರಾಜಕಾರಣ ಅಂತ ಹೇಳಿದ್ದು? ಯಾರ್ರೀ ಜೆಡಿಎಸ್‌ ಯಾರನ್ನೂ ಬೆಳೆಸಲ್ಲ ಅಂತ ಹೇಳಿದ್ದು? ಎಂದು ಪ್ರಶ್ನಿಸಿದ್ದಾರೆ. ಹಾಗೇ, ನಮ್ಮಲ್ಲಿ ಸಿದ್ದರಾಮಯ್ಯ ಇದ್ರು, ಸಿ.ಎಂ. ಇಬ್ರಾಹಿಂ ಇದ್ರು ಎನ್ನುವ ಮೂಲಕ ತಮ್ಮ ಪಕ್ಷ ಜನರಿಗೆ ಸಹಾಯ ಮಾಡಿದೆ ಅವರನ್ನು ಬಹಳ ಎತ್ತರಕ್ಕೆ ಬೆಳೆಸಿದೆ ಎಂದು ಸಾಬೀತು ಮಾಡುವ ಪ್ರಯತ್ನ ಮಾಡಿದ್ದಾರೆ.

ಈಗ ಈ ಸಂದರ್ಭದವರೆಗೂ ಸಿದ್ದರಾಮಯ್ಯ ಜೆಡಿಎಸ್‌ನಲ್ಲೇ ಇದ್ದಿದ್ದರೆ, ಕುಮಾರಸ್ವಾಮಿಯ ಬದಲು ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಒಪ್ಪಿಕೊಳ್ಳುತ್ತಿದ್ದರಾ? ಸಾಧ್ಯವೇ ಇಲ್ಲ. ಏಕೆಂದರೆ, ನಿಜವಾಗಿ ಪಕ್ಷದಲ್ಲಿ ಸಿದ್ದರಾಮಯ್ಯರಿಗೆ ಸಿಗುವ ಮರ್ಯಾದೆ ಸಿಕ್ಕಿದ್ದಿದ್ದರೆ ಅವರು, ಪಕ್ಷ ಬಿಟ್ಟು ಹೋಗುತ್ತಲೇ ಇರಲಿಲ್ಲ. ಪಕ್ಷ ಬಿಟ್ಟು ಬಂದಿದ್ದರಿಂದಲೇ ಮುಖ್ಯಮಂತ್ರಿಯಾದರು.

ಇಬ್ಬರ ಹೆಸರು ಬಿಟ್ಟರೆ, ರಾಜಕೀಯದಲ್ಲಿ ಮುಂದೆ ಹೋದ ಒಬ್ಬ ಮತ್ತೊಬ್ಬ ವ್ಯಕ್ತಿಯ ಹೆಸರನ್ನು ದೇವೇಗೌಡರು ಹೇಳಿಲಿಕ್ಕಾಗದು. ಯಾಕೆಂದರೆ ಯಾರೂ ಇಲ್ಲವೇ ಇಲ್ಲ. ಆದರೆ, ಎಷ್ಟು ಜನರು ಮಣ್ಣು ಮುಕ್ಕಿದರು ಎಂದು ಕೇಳಿದರೆ ಮಾತ್ರ ಬಹಳ ಹೆಸರುಂಟು.
ರಾಮಕೃಷ್ಣ ಹೆಗಡೆಗೆ ಯಾವ ರೀತಿಯ ಮೋಸ ಆಗಿತ್ತು ಎಂದು ನನ್ನ ಮುಂದಿನ ತಲೆಮಾರೂ ಮರೆಯಲಿಕ್ಕಿಲ್ಲ. ಬಚ್ಚೇಗೌಡ, ರಘುಪತಿ, ನಜೀರ್‌ ಸಾಬ್‌, ಸಿ. ಎಂ. ಇಬ್ರಾಹಿಂ, ಪಿ.ಜಿ.ಆರ್‌ ಸಿಂಧ್ಯಾ, ಎಂ.ಪಿ ಪ್ರಕಾಶ್‌, ಸಿದ್ದರಾಮಯ್ಯ, ಬಾಲಕೃಷ್ಣ, ಜಮೀರ್‌ ಅಹ್ಮದ್‌, ಚಲುವರಾಯ ಸ್ವಾಮಿ, ಇಕ್ಬಾಲ್‌ ಅನ್ಸಾರಿ, ರಮೇಶ್‌ ಬಂಡಿ, ಭೀಮಾನಾಯಕ, ವೈ.ಎಸ್‌.ವಿ.ದತ್ತ, ಶ್ರೀನಿವಾಸ್‌ ಮೂರ್ತಿ, ಮಾದೇಗೌಡ, ಎಸ್‌.ಆರ್‌. ಬೊಮ್ಮಾಯಿ, ಬಿ.ಎಲ್‌. ಶಂಕರ್‌, ಸೋಮಶೇಖರ್‌, ಭೈರೇಗೌಡ, ಶಿವರಾಂ, ಪುಟ್ಟಸ್ವಾಮಿ ಗೌಡ, ಧರಂಸಿಂಗ್‌, ಕೆ.ಎನ್‌. ನಾಗೇಗೌಡರು ಹೀಗೆ ಪಟ್ಟಿ ಬೆಳೆಯುತ್ತಾ ಹೋಗಿದೆ.

ಇಂಗ್ಲಿಷ್‌ ಸಿನಿಮಾ ಒಂದರ ಶುರುವಿನಲ್ಲೇ ಬರುವ ಡೈಲಾಗ್‌ ಇದು: so many killed to study the secret, so many killed to steal the secret. ಹಾಗೇ, ದೇವೇಗೌಡರ ರಾಜಕೀಯ ಮುಗಿಸುವುದಕ್ಕೆ ಮತ್ತು ಕಿತ್ತುಕೊಳ್ಳುವುದಕ್ಕೆ ಬಂದವರು ಒಂದೋ ಸತ್ತು ಹೋದರು, ಇಲ್ಲವೇ ಸೋತು ಹೋದರು. ಆದರೆ ಯಾರೂ ಗೆಲ್ಲಲಿಲ್ಲ. ಗೆಲ್ಲುವ ಹಂತದಲ್ಲಿದ್ದ ವ್ಯಕ್ತಿಗಳ ಹೆಗಲ ಮೇಲೆ ದೇವೇಗೌಡರೇ ಕೈ ಹಾಕಿ ಪಕ್ಕಕ್ಕೆ ಎಳೆದು ದೋಸ್ತಿ ಮಾಡಿಕೊಂಡರು. ದೇವೇಗೌಡರು ಮತ್ತು ಅವರ ಕುಟುಂಬವನ್ನು ಬಿಟ್ಟರೆ, ಜೆಡಿಎಸ್‌ನಲ್ಲಿ ಸರಿಯಾಗಿ ಉದ್ಧಾರ ಆದವರು ಯಾರೂ ಇಲ್ಲವೇನೋ.

ಯಾರೋ ಒಂದಿಬ್ಬರು ದೇವೇಗೌಡರಿಂದ ಪಾಠವನ್ನು ಒಂದೂ ಬಿಡದೇ ಸರಿಯಾಗಿ ಕಲಿತು ಅವರಿಗೇ ತಿರುಮಂತ್ರ ಹಾಕಿ ಹೋದದ್ದನ್ನು ಒಬ್ಬ ದುರಂತ ನಾಯಕ ಮಾತ್ರ, ತಾನು ಬೆಳೆಸಿದೆ ಎನ್ನಲಿಕ್ಕೆ ಸಾಧ್ಯ. ಲೋಕಸಭಾ ಚುನಾವಣೆಯಲ್ಲಿ, ತಮ್ಮದೇ ಜಾತಿಯ ಬಿಜೆಪಿ ಸಂಸದರೊಬ್ಬರಿಗೆ ಹಳ್ಳವನ್ನು ಈಗಾಗಲೇ ತೋಡಿಟ್ಟಿರುವ ಗೌಡರು, ಆತ ಬೀಳುವುದನ್ನೇ ಕಾಯುತ್ತಿದ್ದಾರೆ. ಹೇಳಿ ಇಷ್ಟೆಲ್ಲ ಮಾಡಿರುವ ಜೆಡಿಎಸ್‌ನ್ನು ಜನರು ಯಾಕಾಗಿ ನಂಬಬೇಕು?

ಪಾಪ ಎಲ್ಲೋ ಸರ್ಕಾರಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು ಡಾ. ಲಕ್ಷ್ಮೇ ಅಶ್ವಿನ್‌ ಗೌಡ. ಲಾಟು ಪೂಟು ಕೆಲಸ ಅಲ್ಲ. ಐಆರ್‌ಎಸ್‌ ಅಧಿಕಾರಿ ಹಾಗೂ ಎಂಬಿಬಿಎಸ್‌ ಓದಿರುವ ಪ್ರತಿಭಾವಂತ ಮಹಿಳೆ ಈಕೆ. 2012ರ ಬ್ಯಾಚಿನ ಐಆರ್‌ಎಸ್‌ ಪಾಸ್‌ ಮಾಡಿ ಲಕ್ಷ್ಮೇ ಅಶ್ವಿನ್‌ ಗೌಡ ಅವರು ರೈಲ್ವೆ ಇಲಾಖೆಯಲ್ಲಿ ಆಗಲೇ ಸಹಾಯಕ ಹಣಕಾಸು ಅಧಿಕಾರಿಯಾಗಿದ್ದವರು. 2017ರ ಸುಮಾರಿಗೆ ತನ್ನ ಹುದ್ದೆಗೆ ರಾಜೀನಾಮೆ ರಾಜಕೀಯಕ್ಕೆ ಬಂದ ಲಕ್ಷ್ಮೇ, ಇನ್ನೂ ಟಿಕೆಟ್‌ನ ಕನಸು ಕಾಣುತ್ತಲೇ ಇದ್ದಾರೆ. ಇಷ್ಟು ಹೊತ್ತಿಗೆ ಇನ್ನಷ್ಟು ಉನ್ನತ ಸ್ಥಾನದಲ್ಲಿ ಇರಬಹುದಾಗಿದ್ದ ಲಕ್ಷ್ಮೇ ಇವತ್ತು ಏನೂ ಇಲ್ಲ.

ಈಗ ಎಲ್ಲವೂ ಮುಗಿದು, ಮತ್ತಿಬ್ಬರು ಮೊಮ್ಮಕ್ಕಳನ್ನು ರಾಜಕೀಯಕ್ಕೆ ತರುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಈ ಬಾರಿ ಬೇರೆ ಯಾವುದೂ ನಾಟಕ ಮಾಡದೇ ಕಣ್ಣೀರಿಡುವುದನ್ನೇ ನಾಟಕ ಮಾಡುತ್ತಿದ್ದಾರೆ. ಇದು ನಾಟಕ ಎಂದು ಹೇಳುವುದಕ್ಕೂ ಕಾರಣವಿದೆ.
ಹೊಳೆನರಸಿಪುರದಲ್ಲಿ ಕಣ್ಣೀರಿನ ಹೊಳೆ ಹರಿಸಿದ ಮೇಲೆ ಇನ್ನೆಂದೂ ಕಣ್ಣೀರು ಹಾಕಲ್ಲ ಎಂದು ಹೇಳಿದ್ದರು. 14.03.2019ರಂದು ಮಂಡ್ಯದಲ್ಲಿ ಹಾಗೇ ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಿಂತ ಮೇಲೆ ಅನೇಕ ಸಭೆಗಳಲ್ಲಿ ಆಗಾಗ ಭಾವುಕರಾಗುತ್ತಿದ್ದ ಕುಮಾರಣ್ಣ ಮತ್ತು ದೇವೇಗೌಡರು. ತಾವು ಅಳುವುದಿಲ್ಲ ಎಂದು ಹೇಳಿದ ಮುಂದಿನ ಕಾರ್ಯಕ್ರಮದಲ್ಲಿ ಒಂದೇ ಒಂದು ಕಣ್ಣೀರು ಬರುವುದಿಲ್ಲವೆಂದರೆ ಹೇಗೆ? ಅರೇ ಇದು ಹೇಗೆ ಸಾಧ್ಯ?

ಕಣ್ಣೀರು ಒಂದು ಭಾವನೆ. ಆ ಕ್ಷಣಕ್ಕೆ ಬರುವಂಥದ್ದು. ಸಹಜವಾಗಿ ಕಣ್ಣೀರು ಯಾವಾಗ ಬರಬೇಕು, ಎಷ್ಟು ಬರಬೇಕು ಎಂಬುದನ್ನೆಲ್ಲ ಸಿನಿಮಾದಲ್ಲಿ ನಿರ್ದೇಶಕರು ನಿರ್ಧರಿಸುತ್ತಿದ್ದರು. ಆದರೆ, ಇಲ್ಲೂ ಹಾಗೇ ಮಾಡುತ್ತಿದ್ದಾರೆಂದರೆ, ಅದು ನಿಜಕ್ಕೂ ಕಣ್ಣೀರೇ ಹೌದಾ ಅಥವಾ ಜಮೀರ್‌ ಅಹ್ಮದ್‌ ಅವರು ಕಣ್ಣಾರೆ ಕಂಡು ಹೇಳಿದಂತೆ, ವಿಕ್ಸ್‌ ಕಣ್ಣೀರೋ? ತಮ್ಮ ಮೊಮ್ಮಗನನ್ನು ಗೆಲ್ಲಿಸುವುದಕ್ಕೆ ಮಾಡುವ ಪ್ರಯತ್ನವೆಂದು ಜನ ನೋಡದೇ ಇರುವಷ್ಟು ದಡ್ಡರಾ?

ಇನ್ನು ಕುಮಾರಸ್ವಾಮಿಯೂ ಮಂಡ್ಯ ಭಾಷಣದಲ್ಲಿ, ತನಗೆ ಎರಡು ಸಲ ಹೃದಯ ಚಿಕಿತ್ಸೆ ಆಗಿರುವುದನ್ನೇ ಒತ್ತಿ ಒತ್ತಿ ಹೇಳುತ್ತಿದ್ದರು. ಸಮಾವೇಶ ನಡೆಯುತ್ತಿರುವುದು, ನಿಖಿಲ್‌ಗೆ ಟಿಕೆಟ್‌ ಕೊಡುವುದಕ್ಕೆ. ಮುಂದಿನ ಉದ್ದೇಶ ಜೆಡಿಎಸ್‌ ಗೆಲ್ಲಿಸುವುದಕ್ಕೆ ಅಷ್ಟೇ. ಅದಕ್ಕೆ ಅಭಿವೃದ್ಧಿಯ ಬಗ್ಗೆ ಮಾತಾಡುವುದನ್ನು ಬಿಟ್ಟು ಹೃದಯ ಸಂಬಂಧಿ ಕಾಯಿಲೆಯ ಬಗ್ಗೆ ಮಾತಾಡುವ ಅವಶ್ಯಕತೆಯೇನಿದೆ? ಕಾಯಿಲೆ ಇದೆ, ಎದೆ ನೋಯುತ್ತೆ ಎಂದು ಜನರ ಮುಂದೆ ಹೇಳುವ ಬದಲು ಮನೆಯಲ್ಲಿ ಕೂತು ಆರಾಮ್‌ ಮಾಡುವುದಕ್ಕೇನು? ನಾನು ಸತ್ತುಹೋಗ್ತೀನಿ ಮತ ಹಾಕಿ ಎಂದು ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಅತ್ತ ಕುಮಾರಸ್ವಾಮಿ, ಈಗ ಅದೇ ಎದೆ ನೋವಿಟ್ಟುಕೊಂಡು ಮಗನನ್ನು ಗೆಲ್ಲಿಸಿ ಎನ್ನುತ್ತಿದ್ದಾರೆ. ಅರೇ ಇವ್ರು ಸಾಯುತ್ತಾರೆಂದು, ಇವರ ಮನೆಯವರನ್ನೆಲ್ಲ ಗೆಲ್ಲಿಸುವುದಕ್ಕಾ ಜನರಿರುವುದು? ಪ್ರಜಾಪ್ರಭುತ್ವದ ಅಣಕವಲ್ಲವೇ ಇದು?

ಕರ್ನಾಟಕ ಜನತೆಯನ್ನು ಟೇಕ್‌ ಇಟ್‌ ಫಾರ್‌ ಗ್ರಾಂಟೆಡ್‌ ಎಂಬಂತೆ ಕಂಡವರು ಜೆಡಿಎಸ್‌ ಎಂಬುದರಲ್ಲಿ ಎರಡು ಮಾತಿಲ್ಲ. ವಿಧಾನಸಭೆ ಚುನಾವಣೆಗೂ ಮುನ್ನ, ತಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ಇರದಿದ್ದರೆ, ಮತ್ತೊಮ್ಮೆ ಸ್ಪರ್ಧಿಸುತ್ತೇವೆಯೇ ವಿನಾ ಯಾರ ಜತೆಗೂ ರಾಜಿ ಇಲ್ಲ ಎಂದಿದ್ದರು. ಆದರೆ, ಫಲಿತಾಂಶ ಬಂದು ಕೆಲವೇ ಗಂಟೆಗಳಲ್ಲಿ, ಚುನಾವಣೆಯಲ್ಲಿ ಹೀನಾಯವಾಗಿ ತೆಗಳಿದ್ದ ಕಾಂಗ್ರೆಸ್‌ ಜತೆಗೇ ಕೈಜೋಡಿಸಿ ಸರ್ಕಾರ ಮಾಡಲು ಶುರು ಮಾಡಿದ್ದರು. ಇದೇಕೆ ಹೀಗೆ ಎಂದು ಕೇಳಿದರೆ, ಇಲ್ಲಣ್ಣ ನೀವು ಅಧಿಕಾರಕ್ಕೆ ಬರಬೇಕು ಎಂದು ಜನರೇ ಹೇಳಿದರು. ಜನರ ಮಾತನ್ನು ನಾನು ಕೇಳಿದೆ ಎಂದರು. ಇಡೀ ರಾಜ್ಯದಲ್ಲಿ ಜೆಡಿಎಸ್‌ನ ಯೋಗ್ಯತೆ 37 ಅಷ್ಟೇ ಎಂದು ಮತ ಹಾಕಿ ಮನೆಗೆ ಕಳಿಸಿದ ಮೇಲೆ ಮತ್ತೆ ವಾಪಸ್‌ ಬಂದಿದ್ದು ಜನರ ಕರೆಯಿಂದಲೋ, ಕೆರೆತದಿಂದಲೋ?

ಜೆಡಿಎಸ್‌ಗೆ ರಾಜಕಾರಣ ಎಂದರೆ, ತಮ್ಮ ಕುಟುಂಬ, ಹಾಸನ, ಮೈಸೂರು, ಮಂಡ್ಯ, ರಾಮನಗರ ಇಷ್ಟೇ ಎಂದು ತಿಳಿದಿದ್ದಾರೆಯೇ? ಇಲ್ಲಿನ ಜನರ ಸೌಖ್ಯ ಮಾತ್ರ ಮುಖ್ಯವೇ? ಹೀಗೇಕೆ ಎಂದರೆ, ಸ್ವಲ್ಪ ವರ್ಷದ ಹಿಂದೆ ಕಾಪುವಿನ ಬಳಿ ನಂದಿಕೂರಿನಲ್ಲಿ ಒಂದು ಥರ್ಮಲ್‌ ಪವರ್‌ ಪ್ಲಾಂಟ್‌ ಆಗಿತ್ತು ದೇವೇಗೌಡರಿಂದ. ಅದನ್ನು ಈಗಲೂ ದೇವೇಗೌಡರು ಹೇಳಿಕೊಳ್ಳುತ್ತಾರೆ. ಆದರೆ ಎಷ್ಟು ಜನರಿಗೆ ಉಪಯೋಗವಾಯಿತು? ಅದರಿಂದ ಹೆಚ್ಚು ವಿದ್ಯುತ್‌ ಹೋಗುವುದೇ ಹಾಸನಕ್ಕೆ. ಥರ್ಮಲ್‌ ಪವರ್‌ ಪ್ಲಾಂಟ್‌ ಹೊರಹಾಕುವ ಕೆಟ್ಟ ಅಂಶಗಳೆಲ್ಲ ಉಡುಪಿ ಅಥವಾ ಕಾಪು ಮಣ್ಣಿನ ಜನರಿಗೆ. ವಿದ್ಯುತ್‌ ಮಾತ್ರ ಹಾಸನಕ್ಕೆ. ಹಾಸನದಲ್ಲಿ ತಿನ್ನುವುದೂ ಅನ್ನ, ಉಡುಪಿಯ ಜನ ತಿನ್ನುವುದೂ ಅದೇ ಅನ್ನ ಅಲ್ಲವೇ?

ನರೇಂದ್ರ ಮೋದಿ, ಕೇವಲ ಗುಜರಾತ್‌ಗೆ ಪ್ರಧಾನಿ ಆಗಿದ್ದಿದ್ದರೆ ಹೇಗೆ ಜನತೆ ಸಹಿಸುವುದಿಲ್ಲವೋ, ಇದೂ ಹಾಗೆ ಅಲ್ಲವೇ? ಜನರು ಇದನ್ನು ಹೇಗೆ ಮರೆಯುತ್ತಾರೆ?
ಏನೇ ಆಗಲಿ, ಚುನಾವಣೆಯಲ್ಲಿ ಅಳುವುದಕ್ಕೆ ಸಾವಿರ ಕಾರಣಗಳಿರಬಹುದು. ಆದರೆ ಕಣ್ಣೀರು ಮಾತ್ರ ಅಶುಭ ಸೂಚಕ. ಒಂದು ಸಣ್ಣ ಉದಾಹರಣೆ:
ರಾಮನ ಪಟ್ಟಾಭಿಷೇಕ ನಿರ್ಣಯ ಆಗುತ್ತಿರುತ್ತದೆ. ಎಲ್ಲರೂ ಅರಮನೆಯಲ್ಲಿ ಪಟ್ಟಾಭಿಷೇಕಕ್ಕೆ ತಯಾರಿ ಮಾಡಿಕೊಳ್ಳುತ್ತಾ ಇರುತ್ತಾರೆ. ದಶರಥ ಇದನ್ನೆಲ್ಲ ನೋಡಿ ಬಹಳ ಪುಳಕಿತನಾಗಿ ಹತ್ತಿರದಲ್ಲಿದ್ದ ಕೈಕೇಯಿಯನ್ನು ಎತ್ತಿ ಹಿಡಿಯುವ ಮೂಲಕ ಮಗನ ಮೇಲಿನ ವ್ಯಾಮೋಹವನ್ನು ತೋರ್ಪಡಿಸುತ್ತಾನೆ. ಅದನ್ನು ನೋಡಿದ ರಾಜಗುರುಗಳು, ಇದು ಅಪಶಕುನದ ಸಂಕೇತ ಎಂದು ಹೇಳಿದರು. ಅಲ್ಲಿಂದ ಏನಾಯ್ತು ಎಂದು ಎಲ್ಲರಿಗೂ ತಿಳಿದಿದೆ. ಹಾಗೇ ಇಲ್ಲಿ, ನಿಖಿಲ್‌ ಮತ್ತು ಪ್ರಜ್ವಲ್‌ನನ್ನು ಬೆಳೆಸುವುದಕ್ಕಾಗಿ, ದೇವೇಗೌಡರು, ರೇವಣ್ಣ ಮತ್ತು ಸ್ವತಃ ಪ್ರಜ್ವಲ್‌ ಕಣ್ಣೀರಿಟ್ಟರು. ದೇವೇಗೌಡರ ಕುಟುಂಬ ಬಹಳ ದೇವರು, ಶಾಸ್ತ್ರಗಳ ಮೇಲೆ ನಂಬಿಕೆ ಇಟ್ಟವರು. ಶಾಸ್ತ್ರಾಧಾರದಲ್ಲಿ ಹೇಳುವುದಾದರೆ, ರಾಜನೊಬ್ಬ ಕಣ್ಣೀರಿಡುವುದು ಕೆಟ್ಟ ಘಟನೆ ನಡೆಯುವ ಸೂಚಕ.

ಈಗ ಎಲ್ಲ ಕಡೆ ಹಾಗೇ ಆಗುತ್ತಿದೆ ನೋಡಿ. ಹಾಸನದ ಜನತೆಯೂ ಇದಕ್ಕೆ ಸ್ಪಂದಿಸುವ ಬದಲು ಇದನ್ನು ಕಣ್ಣೀರ್‌ ಡ್ರಾಮಾ ಎಂದು ಕರೆಯಿತು. ಮಾಧ್ಯಮಗಳೂ ಹಾಗೇ ಬಿಂಬಿಸಿದವರು ಎಂದು ಗೌಡರು ಅದಕ್ಕೂ ಕಣ್ಣೀರಿಟ್ಟರು. ಹೋಗತ್ಲಗೆ ಎಂದು ಕುಟುಂಬಕ್ಕೆ, ಕುಟುಂಬವೇ ಒಂದೇ ವೇದಿಕೆಯಲ್ಲಿ ಅತ್ತುಬಿಟ್ಟರು. ಆದರೂ ಜನತೆ, ಕಾರ್ಯಕರ್ತರು ಮತ್ತು ದಮನಕ್ಕೊಳಗಾದ ರಾಜಕಾರಣಿಗಳು ಮಾತ್ರ ಗೌಡರ ಕೊಡುಗೆಯನ್ನು ಮರೆಯುತ್ತಿಲ್ಲ.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya