ಹಂಪಿ ಇತಿಹಾಸ ತಿರುಚಲು ಗುತ್ತಿಗೆ ಪಡೆದವರಾರು?

ಇತಿಹಾಸವೇ ಹಾಗೆ. ಅದನ್ನು ಆಗಾಗ ಜನರು ಅಧ್ಯಯನ ಮಾಡಿ, ಪುಸ್ತಕದ ಮೂಲಕ ದಾಖಲಿಸುವ ಕೆಲಸ ಆಗಬೇಕು. ಇನ್ನೊಂದೆಡೆ ಅದನ್ನು ನಮ್ಮ ಮಕ್ಕಳಿಗೂ ಬೋಧಿಸುತ್ತಿರಬೇಕು, ಇತರರಿಗೂ ಮೌಖಿಕವಾಗಿ ಇತಿಹಾಸವನ್ನು ಹಂಚುತ್ತಲೇ ಇರಬೇಕು. ಹಾಗಾದಾಗ ಮಾತ್ರ ಇತಿಹಾಸದ ರಕ್ಷಣೆ ಸಾಧ್ಯ. ಇಲ್ಲವಾದರೆ, ಅದನ್ನು ತಿರುಚಿ, ಗೊಬೆಲ್ಸ್‌ ಥಿಯರಿಯ ಹಾಗೆ ಹೊಸ ಸುಳ್ಳನ್ನೇ ಹೇಳಿ ಹೇಳಿ, ಅದೇ ಹಳೆಯ ಇತಿಹಾಸ ಎಂದು ಛಾಪಿಸುತ್ತಾರೆ. ಅರ್ಥಾತ್‌, ತಮ್ಮಿಷ್ಟಕ್ಕೆ ತಕ್ಕಂತೆ, ತಮ್ಮ ಸಿದ್ಧಾಂತಕ್ಕೆ ಒಪ್ಪುವ ಯಾವುದಾದರೂ ವಿಷಯವನ್ನು ತಿರುಚಿ ಅದನ್ನೇ ಇತಿಹಾಸ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತದೆ.

ಈ ದೊಡ್ಡ ಪಟ್ಟಿಯಲ್ಲಿ ವಿಶ್ವವಿಖ್ಯಾತ ಹಂಪಿಯೂ ಇದೆ. ಭಾರತ ಇತರ ಪುರಾಣ ಪ್ರಸಿದ್ಧ ಸ್ಥಳಗಳ ಇತಿಹಾಸವನ್ನು ತಿರುಚಿದ ಹಾಗೆಯೇ ಇಲ್ಲೂ ಇತಿಹಾಸವನ್ನೂ ಬಹಳವೇ ತಿರುಚಲಾಗುತ್ತಿದೆ.

ನಾವೆಲ್ಲ ಹಂಪಿಯ ಬಗ್ಗೆ ತಿಳಿದುಕೊಂಡಿರುವುದೇನು? ಶ್ರೀಕೃಷ್ಣದೇವರಾಯ ಆಳುತ್ತಿದ್ದ ಸಾಮ್ರಾಜ್ಯ ಅದಾಗಿತ್ತು. ತಾಳಿಕೋಟೆ ಯುದ್ಧದ ನಂತರ, ಅಂದರೆ, 1565ರ ನಂತರ ಹಂಪೆ ಅವನತಿ ಕಂಡಿತು ಅಥವಾ ಪತನಗೊಂಡಿತ್ತು. ಅಷ್ಟೇ. ಹೆಚ್ಚಿಲ್ಲ, ಕಡಿಮೆಯಿಲ್ಲ. ಏಕೆಂದರೆ ನಮ್ಮ ಇತಿಹಾಸದ ಪುಸ್ತಕಗಳು ಪರೀಕ್ಷೆಗೆ ಹೇಳಿಕೊಟ್ಟಿದ್ದೇ ಅಷ್ಟು. ಆದರೆ ಪರೀಕ್ಷೆಗೂ ಮೀರಿದ ಇತಿಹಾಸ ಭಾರತದಲ್ಲಿ ಹೇರಳವಾಗಿದೆ. ಆಲೋಚನೆ ಮಾಡಿ, ಧರ್ಮ ಸಂರಕ್ಷಣೆಗಾಗಿ ವಿದ್ಯಾರಣ್ಯರ ತಪಸ್ಸಿಗೆ ಮೆಚ್ಚಿ ತಾಯಿ ಭುವನೇಶ್ವರಿ ದೇವಿ ಚಿನ್ನದ ಮಳೆಯನ್ನೇ ಸುರಿಸಿ, ಅದರಿಂದ ಸ್ಥಾಪನೆಯಾದ ಈ ಸಾಮ್ರಾಜ್ಯವು, ಹಾಗೆ ಸುಮ್ಮನೆ ನಾಲ್ಕು ಮುಸ್ಲಿಮ್‌ ರಾಜರ ದಾಳಿ ಮಾಡಿದ ಮಾತ್ರಕ್ಕೆ 1565ರಲ್ಲಿ ಹಂಪಿ ನಾಶವಾಯಿತು ಎಂಬುದನ್ನು ನಾವಾದರೂ ಹೇಗೆ ನಂಬಿದೆವು?

ನೀವು ನಂಬಿ ಇಲ್ಲವೇ ಬಿಡಿ. ತಾಳಿಕೋಟೆ ಯುದ್ಧದ ನಂತರವೂ ಹಂಪಿ ಉಸಿರಾಡುತ್ತಿತ್ತು. ಪೆನುಕೊಂಡೆಗೆ ಓಡಿಹೋಗಿದ್ದ ತಿರುಮಲ ಮತ್ತು ರಾಜವಂಶಸ್ಥರು ಆರು ತಿಂಗಳ ನಂತರ ಮತ್ತೆ ವಾಪಸ್‌ ಬಂದು ಶತ್ರುಗಳನ್ನು ಹೊಡೆದೋಡಿಸಿ, ಹಂಪಿಯನ್ನು ಹಿಡಿತಕ್ಕೆ ತೆಗೆದುಕೊಂಡಿದ್ದರ ಪರಿಣಾಮ 1660ರ ತನಕವೂ ಹಂಪಿ ನಡೆಯುತ್ತಿತ್ತು. ಸದಾಶಿವರಾಯ 1542 ರಿಂದ 1570ರವರೆಗೆ ಆಳಿದರೂ, ಆತ ಅಷ್ಟೊಂದು ಸಮರ್ಥ ರಾಜನಾಗಿರದ ಕಾರಣ ವ್ಯವಹಾರಗಳನ್ನೆಲ್ಲ ಕೃಷ್ಣದೇವರಾಯನ ಅಳಿಯ ರಾಮರಾಯನೇ ನೋಡಿಕೊಳ್ಳುತ್ತಿದ್ದ. ಶೂರ ಸೇನಾನಿಯ ಸಮರ್ಥ ಆಳ್ವಿಕೆಯಿಂದ ಹಂಪಿಯ ವರ್ಚಸ್ಸು ಮತ್ತೆ ಮೇಲೆದ್ದಿತ್ತು. ಸದಾಶಿವರಾಯನ ಕೊಲೆಯಾಗುತ್ತದೆ. ಆಗ ರಾಮರಾಯನ ಸಹೋದರ ಪಟ್ಟಕ್ಕೆ ಬರುತ್ತಾನೆ. ಸದಾಶಿವರಾಯನ ಅಂತ್ಯಕ್ಕೆ ತುಳುವ ವಂಶದ ಆಡಳಿತ ಅಂತ್ಯವಾಗುತ್ತದೆ. ಅಲ್ಲಿಂದಲೇ ಅರವೀಡು ವಂಶಾಡಳಿತ ಬರುತ್ತದೆ. ತಿರುಮಲನ ನಂತರ ಆತನ ಮೂರನೇ ಮಗ ವೆಂಕಟನ ಅವಧಿ, ಅಂದರೆ 1586 ರಿಂದ 1614ರವರೆಗೆ ಹಂಪಿ ಮತ್ತೆ ಹೆಸರು ಮಾಡಿತ್ತು. 1646ರಲ್ಲಿ ಶ್ರೀರಂಗನೆಂಬ ರಾಜ ಇದ್ದ ಹೀಗೆ ಸಾಲು ಸಾಲು ರಾಜರು ಹಂಪಿಯ ಹೆಸರನ್ನು ತಮಗಾದಷ್ಟು ಮಟ್ಟಿಗೆ 1660ರವರೆಗೂ ಹಂಪಿಯನ್ನು ಅನಾಥವಾಗಲು ಬಿಡಲಿಲ್ಲ. ಆದರೆ ಇದನ್ನು ಯಾರೂ ನಮಗೆ ಹೇಳಿಕೊಟ್ಟೇ ಇಲ್ಲ.

ಇರಲಿ, ವಿಷಯ ಅದಲ್ಲ. ನಾವು ಕೆಲವನ್ನು ಓದದೇ ಕಳೆದುಕೊಂಡಿದ್ದೇವೆ. ಅದನ್ನು ಈಗೇನೂ ಮಾಡಿ ಪ್ರಯೋಜನ ಇಲ್ಲ. ಆದರೆ, ಕೆಲ ತಪ್ಪುಗಳನ್ನು ತಿದ್ದಿಕೊಳ್ಳುವುದಕ್ಕೆ ಮಾತ್ರ ನಮಗೆ ಈಗ ಅವಕಾಶ ಇದೆ. ಅದೂ ಹೇಗೆ? ಇತಿಹಾಸವನ್ನು ಅಧಿಕೃತವಾಗಿ ದಾಖಲಿಸುವ ಮೂಲಕ. ಆದರೆ, ಕರ್ನಾಟಕ ಸರ್ಕಾರ, ಭಾರತ ಪುರಾತತ್ತ್ವ ಇಲಾಖೆ(ಎಎಸ್‌ಐ) ಮಾತ್ರ ಕೆಲ ಇತಿಹಾಸವನ್ನು ಸತ್ಯ ಎಂದು ಯುನೆಸ್ಕೊ ಅವರು ಹೇಳಿದ್ದರೂ ಒಪ್ಪಲು ತಯಾರಿಲ್ಲ, ದಾಖಲಿಸಲು ತಯಾರಿಲ್ಲ. ಹಾಗಂತ ವಿರೋಧಿಸುತ್ತಲೂ ಇಲ್ಲ. ಏಕೆಂದರೆ ಅವರ ಬಳಿಯೇ ಸಾಕ್ಷಿಯಿಲ್ಲ. ಹಾಗಾದರೆ, ದಾಖಲಾಗದ ಆ ಇತಿಹಾಸ ಯಾವುದು? ಇಲ್ಲಿದೆ ಉತ್ತರ.

ಹಂಪಿಗೆ ಹೋದರೆ, ಅಲ್ಲಿ ಎರಡು ಗೋಪುರವನ್ನು ಕಾಣಬಹುದು. ಒಂದು ಸಣ್ಣದು. ಒಂದು ದೊಡ್ಡದು. ದೊಡ್ಡ ಗೋಪುರವು ವಿರೂಪಾಕ್ಷನ ದೇವಸ್ಥಾನ. ಇಂದಿಗೂ ವಾಸ್ತುಶಿಲ್ಪಿಗಳು, ವಾಸ್ತುಶಾಸ್ತ್ರಜ್ಞರು ಅಚ್ಚರಿ ಪಡುವ ಹಾಗೆ ಕಟ್ಟಿದ ಈ ಗೋಪುರಕ್ಕೆ ರಾಯ ಗೋಪುರ ಎಂದು ಸರ್ಕಾರ ನೀಡುವ ಮತ್ತು ಪುರಾತತ್ತ್ವ ಇಲಾಖೆ ನೀಡುವ ಪ್ರವಾಸಿ ಕೈಪಿಡಿಯಲ್ಲಿ ಮುದ್ರಿಸಲಾಗಿದೆ.

ಆದರೆ ಇದು ಅಕ್ಷರಶಃ ಸುಳ್ಳು. ಸುಳ್ಳನ್ನು ಓದಿ ಇದರ ಇತಿಹಾಸವನ್ನೇ ಮರೆಮಾಚಲಾಗುತ್ತಿದೆ.

ಅಸಲಿಗೆ ಈ ದೊಡ್ಡ ಗೋಪುರಕ್ಕೆ ಬಿಷ್ಟಪ್ಪಯ್ಯನ ಗೋಪುರವೆಂದು ಹೆಸರು. ಬಳ್ಳಾರಿಯ ಸೋಗಿ ಊರಿನವರಾದ ಇವರು ಪ್ರಸಿದ್ಧ ದಾರ್ಶನಿಕರು ಹಾಗೂ ಹಲವಾರು ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸಿದ್ದಾರೆ. ದಾಳಿಗೊಳಗಾದ ವಿಗ್ರಹಗಳನ್ನು ರಕ್ಷಿಸಿಟ್ಟಿದ್ದಾರೆ, ಮತ್ತೆ ಕಟ್ಟಿಸಿದ್ದಾರೆ. ಹಂಪಿಯ ಬಗ್ಗೆ ತಿಳಿದ ವಿರೂಪಾಕ್ಷನ ಭಕ್ತರಾದ ಬಿಷ್ಟಪ್ಪಯ್ಯನವರು ತಮ್ಮ ಇಷ್ಟದೇವತೆಯ ಹೆಸರಿನಲ್ಲಿ 11 ಅಂತಸ್ತಿನ ಗೋಪುರವನ್ನು ಕಟ್ಟಿಸಿದ್ದಾರೆ. ಇದು ಹಂಪಿಯ ಸುತ್ತಮುತ್ತಲಿನ ಎಲ್ಲರಿಗೂ ಗೊತ್ತು. ಅಲ್ಲಿನವರು ರಾಯಗೋಪುರವನ್ನು ಬಿಷ್ಟಪ್ಪಯ್ಯ ಗೋಪುರ ಎಂದೇ ಕರೆಯುತ್ತಾರೆ. ಆದರೆ ಕರ್ನಾಟಕ ಸರ್ಕಾರಕ್ಕೆ ಮಾತ್ರ ಈ ಇತಿಹಾಸ ಎಷ್ಟೇ ಸತ್ಯವಾದರೂ ಬೇಕಾಗಿಲ್ಲ.

ಬಿಷ್ಟಪ್ಪಯ್ಯನವರು 1660ರಲ್ಲಿ ವಿರೂಪಾಕ್ಷ ದೇವಸ್ಥಾನವನ್ನು ಕಟ್ಟುವುದಕ್ಕೆ ಶುರು ಮಾಡಿದ್ದರು ಹಾಗೂ ಇದನ್ನು 1694ರಲ್ಲಿ ಕಟ್ಟಿ ಮುಗಿಸಿದ್ದರು. ನಂತರ ನಾಲ್ಕು ವರ್ಷ ಸಂನ್ಯಾಸ ಸ್ವೀಕರಿಸಿ 1698 ಜಲಸಮಾಧಿಯಾಗುತ್ತಾರೆ. ಜೀವನುದ್ದಕ್ಕೂ ಸಾಧನೆ ಮಾಡುತ್ತಾ ಬಂದ ಇವರನ್ನು ವಸುಂಧರಾ ದೇಸಾಯಿ ಮಹಾಪುರುಷ ಅವರು ಸತತ 12 ವರ್ಷಗಳಿಂದ ಈ ಬಗ್ಗೆ ಸಂಶೋಧನೆ ಮಾಡಿದ್ದಾರೆ, ಪ್ರಬಂಧ ಮಂಡಿಸಿದ್ದಾರೆ. ಆದರೆ ಯಾವುದಕ್ಕೂ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ಅಧಿಕೃತವಾಗಿಯೂ ಎಲ್ಲೂ ದಾಖಲಾಗಿಲ್ಲ.

ಬದಲಿಗೆ ಇದು ಪ್ರೋಲಗಂಟಿ ತಿಪ್ಪ ‘ಕಟ್ಟಿರಬಹುದು’ ಎಂದು ಭಾರತ ಪುರಾತತ್ತ್ವ ಇಲಾಖೆ ಪ್ರಕಾಶಿಸಿರುವ ವಿಜಯ ದರ್ಶನದಲ್ಲಿದೆ. ಪ್ರೋಲಗಂಟಿ ಟಿಪ್ಪನಿಗೂ ಇದಕ್ಕೂ ಏನು ಸಂಬಂಧ? ಇನ್ನು ಜಾಲತಾಣದಲ್ಲಿ http://www.asihampiminicircle.in/virupaksha-temple-and-bazaar-hampi/ ಇಮ್ಮಡಿ ದೇವರಾಯ ಕಟ್ಟಿರಬಹುದು ಎಂದಿದೆ. ಆದರೆ ಅದಕ್ಕೆ ಪುರಾವೆಗಳನ್ನು ಒದಗಿಸಿಲ್ಲ.

ಇವರ ಈ ಪ್ರಕಟಣೆ ಎಷ್ಟು ಪೂರ್ವಗ್ರಹ ಪೀಡಿತವಾದದ್ದು, ತಪ್ಪು ಮಾಹಿತಿಯಿಂದ ಕೂಡಿದ್ದು ಎಂದು ಯುನೆಸ್ಕೊದ ಸಂಶೋಧಕರಿಂದ ಹಿಡಿದು ಎಲ್ಲರೂ ನಮ್ಮ ಪ್ರಖ್ಯಾತ ಸಾಹಿತಿಗಳವರೆಗೂ ಎಲ್ಲರ ವರದಿ, ಬರಹಗಳಲ್ಲೂ ಸಾಬೀತಾಗುತ್ತದೆ.

ಯುನೆಸ್ಕೊದಿಂದ ಹಂಪಿಯ ಸಂಶೋಧನೆಗೆ ಬಂದ ಜಾನ್‌, ಎಂ. ಫ್ರಿಡ್ಝ್‌ , ಜಾರ್ಜ್‌ ಮಿಷಲ್‌ ಎಂಬುವವರು ಎ ನ್ಯೂ ಲೈಟ್‌ ಆನ್‌ ಹಂಪಿ – 2001 ಮತ್ತು ವಿಜಯನಗರ ಪ್ರೊಗ್ರೆಸ್‌ ಆಫ್‌ ರಿಸರ್ಚ್‌ 87-88 ಪುಸ್ತಕದಲ್ಲಿ ‘ಮಹಾಗೋಪುರವು ಸೇರಿದಂತೆ ಇನ್ನೂ ಹಲವಾರು ಕೆಲಸಗಳು ಸಾಮ್ರಾಜ್ಯ ಪತನಾನಂತರ ಆಗಿವೆ. ತನ್ನ ಹೆಸರನ್ನು ದಾಖಲಿಸದೇ ಇಂಥ ಮಹತ್ಕಾರ್ಯಗಳನ್ನು ಮಾಡಿದ ಮಹಾನುಭಾವ ಯಾರಿರಬಹುದು? ಇದೊಂದು ನಿಗೂಢ ಅಚ್ಚರಿಯೇ ಸರಿ’ ಎಂದು ಬರೆದಿದ್ದಾರೆ.

ಯಾವುದೇ ರಾಜರು ಇದನ್ನು ಕಟ್ಟಿಲ್ಲವಾದರೆ, ಅದನ್ನು ಅವರ ಹೆಸರಿಗೆ ಅಂಟಿಸುವ ಪುರಾತತ್ತ್ವ ಇಲಾಖೆಯದ್ದು ವ್ಯರ್ಥ ಪ್ರಯತ್ನವಲ್ಲವೇ? ರಾಜರು ಕಟ್ಟಿದ್ದರೆ ಅವರ ಹೆಸರನ್ನು ಹಾಕಿಯೇ ಇರುತ್ತಾರೆ. ಇದು ಇತಿಹಾಸದಲ್ಲೆಲ್ಲ ಕಡೆ ಸಾಬೀತಾಗಿದೆ.

ಇದನ್ನು ಬಿಷ್ಟಪ್ಪಯ್ಯನವರೇ ಕಟ್ಟಿದ್ದಾರೆ ಎನ್ನುವುದಕ್ಕೆ ಇರುವ ಮತ್ತೊಂದು ದಾಖಲೆ ಗೋಪುರದಲ್ಲಿ ಹಲವಾರು ಕಡೆಯಲ್ಲಿರುವ ನವಿಲು ಕೆತ್ತನೆ. ಆಗಮ ಶಾಸ್ತ್ರದ ಪ್ರಕಾರ ರಸಶಾಸ್ತ್ರದ ಸಂಕೇತ ನವಿಲು. ಬಿಷ್ಟಪ್ಪಯ್ಯನವರು ತಂತ್ರಶಾಸ್ತ್ರಜ್ಞರು. ತಂತ್ರಶಾಸ್ತ್ರದ ಒಂದು ಅಂಗ ರಸಶಾಸ್ತ್ರ. ಬಿಷ್ಟಪ್ಪಯ್ಯನವರು ಇದರಲ್ಲೆಲ್ಲ ಬಹಳ ಸಾಧನೆಯನ್ನೂ ಮಾಡಿದ್ದಾರೆ. ಅವರೇ ಖುದ್ದು ರಸಲಿಂಗವೊಂದನ್ನು ತಯಾರಿಸಿದ್ದಾರೆ ಸಹ. ಅಲ್ಲದೇ, ಬಿಷ್ಟಪ್ಪಯ್ಯನವರ ಊರು ಕೂಡ ಸೋಗಿ. ಸೋಗೆ ಎಂದರೆ ನವಿಲು. ಎಷ್ಟು ಸಾಕ್ಷಿ ಬೇಕು ವಿರೂಪಾಕ್ಷನ ಗೋಪುರವನ್ನು ಕಟ್ಟಿದ್ದು ಬಿಷ್ಟಪ್ಪಯ್ಯ ಎಂದು ಹೇಳಲಿಕ್ಕೆ?

ಇಲ್ಲಿ ಮೊದಲು ಗೋಪುರದಮ್ಮ ಎಂಬ ತಾಯಿಗೆ ಪೂಜೆ ನಡೆಯುತ್ತಿತ್ತು. ಗೋಪುರದ ಎರಡನೇ ಮಹಡಿಯಲ್ಲಿತ್ತು. ಇದು ಹಂಪಿಯಲ್ಲಿ ಎಲ್ಲರಿಗೂ ತಿಳಿದಿದೆ. ಗೋಪುರವು ಎರಡನೇ ಮಹಡಿ ಕಟ್ಟುವಾಗಲೇ ಬಿದ್ದು ಹೋಗುತ್ತಿತ್ತು. ಆದರೆ, ಏನೇ ಮಾಡಿದರೂ ಸರಿ ಹೋಗುತ್ತಿರಲಿಲ್ಲ. ಆಗ ಇದಕ್ಕೆ ಒಂದು ಬಲಿ ಬೇಕಾಗಿತ್ತು. ಆಗ, ಬಿಷ್ಟಪ್ಪಯ್ಯನವರ ತುಂಬು ಗರ್ಭಿಣಿ ಪತ್ನಿ, ಲಕ್ಷ್ಮಾಂಬೆ, ಚಿತೆಗೆ ಹಾರಿ ಬಲಿಯಾಗಿದ್ದರು. ಅವರ ನೆನಪಿಗಾಗಿ, ಅಲ್ಲಿ ಆಕೆ ಶಿವ ಪಾರ್ವತಿಯ ಎದುರಿಗೆ ಹೋಮಕ್ಕೆ ಎಣ್ಣೆಯನ್ನು ಹಿಡಿದು ನಿಂತಿರುವ ವಿಗ್ರಹ ಕೆತ್ತಲಾಗಿದೆ. ಮಕ್ಕಳಾಗದವರು ಇಲ್ಲಿ ಬಂದು ಗೋಪುರದಮ್ಮನಿಗೆ ಪೂಜೆ ಮಾಡುತ್ತಿದ್ದರು. ಆದರೆ ಪುರಾತತ್ತ್ವ ಇಲಾಖೆ, ಈಗ ಇಲ್ಲಿ ಪೂಜೆ ಮಾಡುವುದಕ್ಕೇ ಅನುಮತಿ ನೀಡುತ್ತಿಲ್ಲ. ಇಡೀ ಗೋಪುರದಲ್ಲಿ ಎಲ್ಲೆಲ್ಲೂ ಪೂಜೆ ನಡೆಯುತ್ತಿದ್ದ ಕಡೆ, ಈಗ ವಿರೂಪಾಕ್ಷನಿಗೆ ಮಾತ್ರ ಪೂಜೆ ನಡೆಯುತ್ತಿದೆ.

ಹಂಪಿಯ ಮುಖ್ಯ ಗೋಪುರವು ವಿಠ್ಠಪ್ಪಯ್ಯ ಎಂಬ ಘನಶಿಲ್ಪಿಯಿಂದ ನಿರ್ಮಿಸಲ್ಪಟ್ಟಿದೆ. ಇದರ ನಿರ್ಮಾಣ ಶೈಲಿ ಮತ್ತು ಕೌಶಲ್ಯವು ವಿದೇಶಿ ಪ್ರವಾಸಿಗರಿಂದಲೂ ಪ್ರಶಂಸಿಲ್ಪಟ್ಟಿದೆ ಎಂದು ಕೆ. ರಾಮಸ್ವಾಮಿ ಅಯ್ಯಂಗಾರರು ತಮ್ಮ ವಿಜಯನಗರ ದರ್ಶನಂ ಕೃತಿಯಲ್ಲಿ ಬರೆದುಕೊಂಡಿದ್ದಾರೆ. 1914ರಲ್ಲಿ ಪ್ರಕಟವಾದ ಈ ಕೃತಿಯು ಹಂಪಿಯ ಕುರಿತು ಕನ್ನಡದಲ್ಲಿ ಪ್ರಕಟವಾದ ಮೊದಲ ಮಾರ್ಗದರ್ಶಿ ಕೃತಿ ಎಂದು ಪರಿಗಣಿಸಲ್ಪಟ್ಟಿದೆ. ಅಷ್ಟೇ ಅಲ್ಲ, ಡಾ. ಸೂರ್ಯನಾಥ್‌ ಕಾಮತ್‌ರ ‘ವಿಜಯನಗರ ಸಾಮ್ರಾಜ್ಯ’ದಲ್ಲಿ, ಡಾ. ಪಾಂಡುರಂಗ ದೇಸಾಯಿಯವರ ‘ಹಂಪೆ’ಯಲ್ಲಿ, ಡಾ. ವಸುಂಧರಾ ಫಿಲಿಯೋಜಾ ಅವರ ‘ಅಳಿದುಳಿದ ಹಂಪೆ’ಯಲ್ಲಿ ಹೀಗೆ ಪ್ರತಿ ಕೃತಿಯ ಬಿಷ್ಟಪ್ಪಯ್ಯ ಕಟ್ಟಿದ್ದು ಅಂತಲೇ ಇದೆ. ಆದರೆ ಬಿಷ್ಟಪ್ಪಯ್ಯ ಕಟ್ಟಿದ್ದು ಅಂತ ಸರ್ಕಾರಕ್ಕೆ ಮತ್ತು ನಮ್ಮ ಕೆಲ ಬುದ್ಧಿಜೀವಿಗಳಿಗೆ ಮಾತ್ರ ಒಪ್ಪಲಾಗುತ್ತಿಲ್ಲ.
ವಸುಂಧರಾ ದೇಸಾಯಿ ಮಹಾಪುರುಷ ಅವರು, ಇದನ್ನು ಕಳೆದ ಹನ್ನೆರಡು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ‘ಉಳಿದ ಹಂಪಿ ಮತ್ತು ಗುರು ಬಿಷ್ಟಪ್ಪಯ್ಯನವರು’ ಎಂಬ ಪುಸ್ತಕದಲ್ಲಿ ಇನ್ನೂ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಒಮ್ಮೆ ಭಾರತ ಪುರಾತತ್ತ್ವ ಇಲಾಖೆ ಮತ್ತು ಸರ್ಕಾರಿ ಅಧಿಕಾರಿಗಳ ಸಭೆಯಲ್ಲು ಸಹ ಇದನ್ನು ವಿವರಿಸಿದ್ದಾರೆ. ಸಹಜವಾಗಿ ಯಾರಾದರೂ ಇಂಥ ಹೊಸ ವಿಷಯಗಳನ್ನು ಹೇಳುವಾಗ ವಿರೋಧಿಸುತ್ತಾರೆ, ಪ್ರಶ್ನಿಸುತ್ತಾರೆ ಅಥವಾ ಒಪ್ಪಿಕೊಳ್ಳುತ್ತಾರೆ. ಆದರೆ, ಇವರಿಗೆ ಯಾವ ಪ್ರಶ್ನೆಯನ್ನೂ ಕೇಳಲಿಲ್ಲ, ಮೌಖಿಕವಾಗಿ ನೀವು ನೀಡಿದ ದಾಖಲೆ ಸರಿ ಎಂದರೂ, ಅದನ್ನು ಅಧಿಕೃತವಾಗಿ ದಾಖಲಿಸುವ ಪ್ರಯತ್ನಕ್ಕೆ ಕೈ ಹಾಕಲೂ ಇಲ್ಲ, ಅದಕ್ಕೆ ಬೆಂಬಲವನ್ನೂ ಕೊಡಲಿಲ್ಲ.

ಇನ್ನೊಂದು ಮಹತ್ತರವಾದ ದಾಖಲೆಯೊಂದಿದೆ. ಬಿಷ್ಟಪ್ಪಯ್ಯನವರ ಮೊಮ್ಮಗ ಮಹದೇವಪ್ಪಯ್ಯನವರು 1717ರಲ್ಲಿ ನಡೆದ ವಿರೂಪಾಕ್ಷ ದೇವಾಲಯದ ಕಳಶ ಸಮಾರೋಹದ ನೆಪವಾಗಿ ಒಂದು ಚಂಪೂ ಬರೆಯುತ್ತಾರೆ. ‘ವಿರೂಪಾಕ್ಷ ವಸಂತೋತ್ಸವ ಚಂಪೂ’ ಎಂದು. ಅದನ್ನು ಪ್ರೊ. ಕೆ. ಎಸ್‌.ಕಣ್ಣನ್‌ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕನ್ನಡ ವಿವಿ ಅದನ್ನು ಪ್ರಕಾಶಿಸಿದೆ. ಇದು ಸಣ್ಣ ಪುಟ್ಟ ಪುಸ್ತಕವಲ್ಲ. ಕಾಲ ಮತ್ತು ಕವಿಯ ಬಗ್ಗೆ ಕಳೆದ ಅರವತ್ತು ವರ್ಷಗಳಿಂದ ವಿಶ್ವಾದ್ಯಂತ ಪ್ರಬಂಧಗಳು ಮಂಡನೆಗಳಾಗಿವೆ. ಅದರಲ್ಲೂ, ಇಂದು ಬಿಷ್ಟಪ್ಪಯ್ಯನ ಗೋಪುರವೆಂದು ಕರೆಸಿಕೊಳ್ಳುವ ಗೋಪುರವೇ ಅಂದಿನ ವಿಷ್ಟಪೇಶ ಗೋಪುರ ಎಂದು ಹೇಳಿದ್ದಾರೆ.

ಇವೆಲ್ಲ ಬುದ್ಧಿ ಇರುವವರಿಗೆ ಮಾತ್ರ ಅರ್ಥವಾಗುತ್ತದೆ. ಇಲ್ಲದವರು, ಗೋಪುರವನ್ನು ಇಮ್ಮಡಿ ದೇವರಾಯ ಕಟ್ಟಿಸಿದ ಅಂತಲೋ, ಪ್ರೋಲಗಂಟಿ ತಿಪ್ಪ ಬರೆದಿದ್ದು ಅಂತಲೋ ಬರೆಯುತ್ತಿದ್ದಾರೆ, ಓದುತ್ತಿದ್ದಾರೆ, ಭಾವಿಸಿದ್ದಾರೆ ಎಲ್ಲವೂ. ಗೋಪುರ ಕಟ್ಟಿಸಿದವನಿಗೆ ಮನಸಾರೆ ಗೌರವ ಸಮರ್ಪಣೆ ಮಾಡುವ ಬಗೆ ಹೇಗೆಂದರೆ, ಅದರ ನಿಜವಾದ ಇತಿಹಾಸ ತಿಳಿದು, ಕಾರಣಕರ್ತನನ್ನು ನೆನೆದು, ಇತರರಿಗೆ ತಿಳಿಸುವುದು. ಸರ್ಕಾರ ಇನ್ನಾದರೂ ಈ ಎಲ್ಲ ಅಂಶಗಳನ್ನು ಪರಿಗಣಿಸುತ್ತದಾ? ಅಥವಾ ಬುದ್ಧಿಜೀವಿಗಳ ಒಣಜಂಭಕ್ಕೆ ಬಲಿಯಾಗುತ್ತದಾ? ಕಾದು ನೋಡಬೇಕು.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya