ಒಬ್ಬ ನಿಜವಾದ ಮುಸ್ಲಿಂ ಹೇಗಿರಬೇಕು ಎಂದು ನಿರ್ಧರಿಸುವವರು ಯಾರು? ಖಂಡಿತವಾಗಿಯೂ ಪೈಗಂಬರ್ ಮಹಮ್ಮದ್ ಅಥವಾ ಕುರಾನ್. ಆದರೆ ಜಮೀರ್ ಅಹ್ಮದ್ ಖಾನ್ ಎಂಬ ಜೆಡಿಎಸ್ ರಾಜಕಾರಣಿ ಕೆಲ ಎರಡ್ಮೂರು ದಿನಗಳ ಹಿಂದೆ ಒಂದು ಘೋಷಣೆ ಹಾಕಿದ್ದಾರೆ. ಬಿಜೆಪಿಗೆ ಮತ ಹಾಕುವವರು ಮುಸ್ಲಿಮರೇ ಅಲ್ಲ ಎಂದು ಫಾರ್ಮಾನು ಹೊರಡಿಸಿದ್ದಾರೆ. ಯಾರನ್ನೋ ಮುಸ್ಲಿಂ ಅಲ್ಲ ಎಂದು ಘೋಷಿಸುವುದಕ್ಕೆ ಜಮೀರ್ ಯಾವ ಊರಿನ ದೊಣೆ ನಾಯಕ?
ಯಾರು ಮುಸ್ಲಿಂ ಎಂದು ಹೇಳುವ ಜಮೀರ್ ನಿಜವಾಗಿಯೂ ಒಬ್ಬ ಮುಸ್ಲಿಮನಾ ಎಂಬ ಪ್ರಶ್ನೆಯೂ ಏಳುತ್ತದೆ. ಕುರಾನಿನ ಪ್ರಕಾರ ಒಳ್ಳೆಯ ಮುಸ್ಲಿಂ ಯಾರು, ಆತ ಹೇಗಿರಬೇಕು ಎಂದು ಹೇಳಿದ್ದಾರೆ ಮತ್ತು ಜಮೀರ್ ಅದನ್ನು ಅನುಸರಿಸುತ್ತಿದ್ದಾರಾ? ನೋಡೊಣ ಬನ್ನಿ.
ಮೊದಲಿಗೆ ಕುರಾನಿನ 33:70ರಲ್ಲಿ ಹೇಳಿರುವಂತೆ, ಅಲ್ಲಾನನ್ನು ನಂಬುವವನು ಸತ್ಯವನ್ನು ಹೇಳಬೇಕು. 9:119ರ ಪ್ರಕಾರ ಅಲ್ಲಾಹುವಿನ ಕರ್ತವ್ಯವನ್ನು ಮಾಡಬೇಕು ಮತ್ತು ಸತ್ಯವಂತರ ಸಹವಾಸವೇ ಮಾಡಬೇಕು.
ಅಷ್ಟೇ ಅಲ್ಲ, 4:135ರ ಪ್ರಕಾರ, ಅಲ್ಲಾ ಹೇಳಿದ್ದನ್ನು ಅನುಸರಿಸುತ್ತಾ, ನ್ಯಾಯವನ್ನು ಪಾಲಿಸಬೇಕು. ಬಡವ, ಶ್ರೀಮಂತ, ಸಂಬಂಧಿಗಳು, ಪೋಷಕರು ಯಾರೇ ಇರಲಿ, ಪಕ್ಷಪಾತ ಮಾಡದೇ ಸರಿಯಾದ ನ್ಯಾಯ ನೀಡಬೇಕು.
ಇದರಲ್ಲಿ ಜಮೀರ್ ಅಹ್ಮದ್ ಎಷ್ಟು ಅನುಸರಿಸುತ್ತಿದ್ದಾರೆ ಎಂದು ನೋಡಿದರೆ, ಎಲ್ಲವೂ ಶೂನ್ಯ. ಬಿಜೆಪಿಗೆ ಮತ ಹಾಕುವವರು ಮುಸ್ಲಿಮರಲ್ಲ ಎಂದು ಅಲ್ಲಾಹು ಹೇಳಿದ್ದಾನಾ? ಅಥವಾ ಪೈಗಂಬರ್ ಮಹಮ್ಮದ್ ಹೇಳಿದ್ದಾರಾ? ಇಲ್ಲ. ಕುರಾನ್, ಹದೀಸ್ ಯಾವುದರಲ್ಲೂ ಏನನ್ನೂ ಉಲ್ಲೇಖಿಸಿಲ್ಲ. ಹೋಗಲಿ, ಕಾಂಗ್ರೆಸ್ಗೆ ಮತ ನೀಡಬೇಕು ಎಂದಾದರೂ ಬರೆದಿದ್ದಾರಾ? ಅದೂ ಇಲ್ಲ. ಇದರರ್ಥ ಜಮೀರ್ ಸುಳ್ಳು ಹೇಳಿದರು.
ಈ ಮೊದಲು, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ, ಜಮೀರ್ ಜೆಡಿಎಸ್ನಲ್ಲೇ ಇದ್ದರು. ಆಗ ಬಿಜೆಪಿಗೆ ಮತ ಬೇಕಿತ್ತು. ಆಗ ಮತ ಹಾಕಿದವರು ಮುಸ್ಲಿಮರಲ್ಲವೇ? ಆದರೆ, ಬಿಜೆಪಿ ಬಿಟ್ಟು ಈಗ ಓಲೈಕೆ ಪಕ್ಷ ಸೇರಿದ ಮೇಲೆ ಬಿಜೆಪಿಗೆ ಮತ ಹಾಕುವವರು ಕಾಫಿರರು ಎನ್ನುವ ಇವರ ವಾದವನ್ನು ಯಾವ ಮೂರ್ಖ ಒಪ್ಪುತ್ತಾನೆ?
9:119ರ ಪ್ರಕಾರ ಸತ್ಯವಂತರ ಸಹವಾಸ ಮಾಡಬೇಕು ಎಂದಿದೆ. ಜಮೀರ್ ಅಹ್ಮದ್ ಅವರೇ ಮೊದಲು ಹೇಳಿದಂತೆ, ಮುಖ್ಯಮಂತ್ರಿ ಕುಮಾರಸ್ವಾಮಿ, ವಿಕ್ಸ್ ಹಚ್ಚಿಕೊಂಡು ಕಣ್ಣೀರು ಹಾಕುತ್ತಾರೆ. ವಿಕ್ಸ್ ಹಚ್ಚಿಕೊಂಡು ಅಳುವವನು ಯಾವ ರೀತಿಯಲ್ಲಿ ಸತ್ಯಸಂಧನಾಗಿ ಕಂಡಿದ್ದರಿಂದ ಅವರ ಸಹವಾಸ ಮಾಡಿದ್ದಾರೆ ಜಮೀರ್? ಈಗ ಕುಮಾರಣ್ಣ ಮತ್ತು ನಾನು ಸ್ನೇಹಿತರು ಎಂದಿದ್ದಾರೆ. ಸುಳ್ಳು ನಾಟಕಗಳನ್ನು ಮಾಡುವವರನ್ನು ಸ್ನೇಹಿತರು ಎನ್ನುವ ಜಮೀರ್ ಯಾವ ಸೀಮೆಯ ಮುಸ್ಲಿಂ?
ಮೂರನೇಯದು, 4:135 ಪ್ರಕಾರ ಯಾರೇ ಇರಲಿ, ಒಂದೇ ನ್ಯಾಯ ಪಾಲನೆಯಲ್ಲಿ ವ್ಯತ್ಯಾಸವಾಗಬಾರದು ಎಂದಿದೆ ಕುರಾನ್. ಆದರೆ, ಜಮೀರ್ ಮಾಡಿದ್ದೇನು? ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶನ ಜಗಳ ಆದಾಗ, ಆನಂದ್ ಸಿಂಗ್ಗೆ ಮಾರಣಾಂತಿಕ ಹಲ್ಲೆ ಮಾಡಿದ್ದರೂ, ಸರಿಯಾದ ನ್ಯಾಯ ಒದಗಿಸುವ ಬದಲು ಫ್ರೆಂಡ್ಲಿ ಫೈಟ್ ಅದು. ಸ್ನೇಹಿತರು ಎಂದರೆ ಅದೆಲ್ಲ ಕಾಮನ್ ಎಂದುಬಿಟ್ಟರು. ಸರಿಯಾದ ನ್ಯಾಯ ಒದಗಿಸದ ಜಮೀರ್ಗೆ ತನ್ನನ್ನು ತಾನು ಮುಸ್ಲಿಂ ಎಂದು ಕರೆದುಕೊಳ್ಳಲಿಕ್ಕಾದರೂ ಏನೂ ಅನಿಸುವುದಿಲ್ಲವೇ?
ಸಹಿಹ್-ಅಲ್-ಬುಖಾರಿ ಹದಿತ್ 5892 ಹೇಳುವುದು ಇದು, ‘ಅಲ್ಲಾಹುವನ್ನು ನಂಬದವರು ಏನು ಮಾಡುತ್ತಾರೋ, ನೀನು ಅದಕ್ಕೆ ತದ್ವಿರುದ್ಧವಾಗಿ ಮಾಡು. ನೀನು ಮೀಸೆಯನ್ನು ಕತ್ತರಿಸಿ, ಗಡ್ಡವನ್ನು ಬಿಡು’ ಎಂದಿದ್ದಾರೆ. ಗಡ್ಡ ಬಿಟ್ಟ ಜಮೀರರನ್ನು ಅವರ ಮನೆಯವರೇ ನೋಡಿಲ್ಲ ಎಂದರೂ ಅಚ್ಚರಿಯಿಲ್ಲ. ಹಿಂದೂಗಳಂತೆ ಅಷ್ಟು ಚೊಕ್ಕವಾಗಿ, ಒಂದೇ ಒಂದು ಬಿಳಿ ಗಡ್ಡವೂ ಕಾಣದಂತೆ ಬೋಳಿಸಿ, ಮೀಸೆಗೂ ಒಂದು ಆಕಾರ ಕೊಟ್ಟುಬಿಟ್ಟಿರುತ್ತಾರೆ ಜಮೀರ್. ತನ್ನನ್ನು ತಾನು ಶುದ್ಧ ಹೇಗೆ ಮಾಡಿಕೊಳ್ಳುವುದು ಎಂಬುದನ್ನು ತಿಳಿಸುವ ಅಧ್ಯಾಯ ಸಹಿಹ್ ಮುಸ್ಲಿಂ 260ರಲ್ಲಿ ಅಗ್ನಿ ಆರಾಧಕರ(ಹಿಂದೂಗಳ) ವಿರುದ್ಧವಾಗಿರುವುದಕ್ಕಾಗಿ, ಮೀಸೆಯನ್ನು ಬೋಳಿಸಿ ಗಡ್ಡ ಬಿಡಬೇಕು ಎಂದು ಇನ್ನೂ ಸ್ಪಷ್ಟವಾಗಿ ಮಹಮ್ಮದ್ ಹೇಳಿದ್ದಾರೆ. ಆದರೂ ತಾನೊಬ್ಬ ಮುಸ್ಲಿಂ ಅಥವಾ ಮುಸ್ಲಿಂ ನಾಯಕ ಎಂದು ಅವರೇ ಹೇಗೆ ಊಹಿಸಿಕೊಳ್ಳುತ್ತಾರೋ ಗೊತ್ತಿಲ್ಲ.
ಇಸ್ಲಾಂ ಪ್ರಕಾರ ಮದ್ಯ ಕುಡಿಯುವುದು ನಿಷಿದ್ಧ. ಒಮ್ಮೆ ಮದ್ಯಪಾನ ಮಾಡಿದರೆ, 40 ದಿನಗಳವರೆಗೆ ಆ ವ್ಯಕ್ತಿ ಮಾಡಿದ ಪ್ರಾರ್ಥನೆಯನ್ನು ಅಲ್ಲಾಹು ಒಪ್ಪಿಕೊಳ್ಳುವುದಿಲ್ಲ. ಆದರೆ ಕೆಲ ಪ್ರಚಂಡ ರಾಜಕಾರಣಿಗಳಿಗೆ ನಿತ್ಯ ಕುಡಿಯುವುದರ ಜತೆಗೆ ಬೇರೆ ವ್ಯವಸ್ಥೆಗಳೂ ಆಗಬೇಕು. ನಿತ್ಯ ಕುಡಿಯುವವರಿಗೆ 80ಛಡಿಯೇಟಿನ ಶಿಕ್ಷೆ ಎಂದು ಹದೀಸ್ನಲ್ಲಿದೆ. ಅಲ್ಲದೇ ಕುಡಿದು ಪ್ರಾರ್ಥನೆ ಸಲ್ಲಿಸುವುದನ್ನೂ ಸಹ ಕುರಾನ್ ತೀರ ಕಟುವಾಗಿ ವಿರೋಧಿಸುತ್ತದೆ. ಆದರೆ, ಪಾರ್ಟಿಪ್ರಿಯ ಜಮೀರ್ ಬಗ್ಗೆ ಅವರ ಹಿಂಬಾಲಕರು, ಅನುಯಾಯಿಗಳು, ಸ್ನೇಹಿತರು, ಹಿತೈಶಿಗಳು ಹೇಳುವ ಸತ್ಯವೇ ಬೇರೆ ಇದೆ.
ಇವೆಲ್ಲ ಬಿಡಿ, ಒಬ್ಬ ರಾಜಕಾರಣಿಗೆ ಹೊಸತು ಎಂಬುದು ಏನೂ ಇರುವುದಿಲ್ಲ. ಆದರೆ ಇಸ್ಲಾಂ ಪ್ರಕಾರ ಮುಸ್ಲಿಮರು, ಮುಸ್ಲಿಮರಿಗೇ ಮೋಸ ಮಾಡುವಂತಿಲ್ಲ ಅಥವಾ ಸುಳ್ಳು ಹೇಳುವಂತಿಲ್ಲ. ಸಮಯಕ್ಕೆ ಸರಿಯಾಗಿ ಸುಳ್ಳು ಹೇಳುವುದಕ್ಕೆ ತಾಕಿಯಾ ಎಂದು ಕರೆದು ಅದಕ್ಕೆ ಅನುಮತಿ ನೀಡಿದ್ದರೂ, ಅದನ್ನು ಮುಸ್ಲಿಮರ ಮೇಲೆ ಪ್ರಯೋಗಿಸುವಂತಿಲ್ಲ.
ಒಮ್ಮೆ ಜೆಡಿಎಸ್ನಲ್ಲಿದ್ದಾಗ, ತಮ್ಮ ಪಕ್ಷಕ್ಕೆ ಮತ ಹಾಕಿ ಎಂದು ಕಾಂಗ್ರೆಸ್ನ್ನು ಟೀಕಿಸಿದ್ದರು ಅಹ್ಮದ್. ಈಗ ಇನ್ನೊಮ್ಮೆ ಕಾಂಗ್ರೆಸ್ಗೆ ಸೇರಿದ ಮೇಲೆ ಜೆಡಿಎಸ್, ಕುಮಾರಸ್ವಾಮಿ ಮೇಲೆ ವಾಗ್ದಾಳಿ. ಈಗ ಕುಮಾರಸ್ವಾಮಿಯ ಜತೆಗೇ ಒಂದಾಗಿ , ಸ್ವಲ್ಪ ಡಿಫರೆನ್ಸ್ ಇತ್ತು, ಈಗ ನಾವಿಬ್ಬರೂ ದೋಸ್ತ್, ಬ್ರದರ್ ಇದ್ದಂಗೆ ಎಂದಿದ್ದಾರೆ. ಅವರು ಹೀಗೆ ಹೇಳಿರುವುದು ಸಹ ಕುರಾನ್ ಲೆಕ್ಕದಲ್ಲಿ ಹರಾಮ್. ಹೇಗೆಂದು ಹೇಳುತ್ತೇನೆ ಕೇಳಿ, ಕುರಾನಿನ ಅನ್ನಿಸಾದ 101ನೇ ಆಯತ್ನಲ್ಲಿ ‘ಇನ್ಅಲ್ ಕಾಫಿರೀನ ಕ್ಯಾನೂಲಕುಂ ಅದೂವನ್ ಮುಬೀನಾ’ ಎಂದಿದೆ. ಅಂದರೆ, ಅಲ್ಲಾಹುವನ್ನು ನಂಬದವರು ಸ್ಪಷ್ಟವಾಗಿ ನಿನಗೆ ಶತ್ರುಗಳು ಅಂತ ಇದರ ಅರ್ಥ. ಪಕ್ಕಾ ವಿಗ್ರಹಾರಾದಕ, ಅಗ್ನಿ ಆರಾಧಕ, ಮುಖ್ಯಮಂತ್ರಿಯಾದ ಮೇಲೆ ಅತಿ ಹೆಚ್ಚು ದೇವಸ್ಥಾನಗಳಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಎಂಬ ರೆಕಾರ್ಡ್ ಹೊಂದಿರುವ ಕುಮಾರಸ್ವಾಮಿ, ಜಮೀರ್ಗೆ ಶತ್ರುವೇ ಆಗಬೇಕು. ಆದರೆ, ಅವರಿಗೆ ಬ್ರದರ್, ದೋಸ್ತ್ ಎಂದು ಕರೆದು, ಕುರಾನ್ಗೆ ದ್ರೋಹ ಎಸಗಿದ್ದಾರೆ ಎಂಬುದಿಲ್ಲಿ ಮತ್ತಷ್ಟು ಸ್ಪಷ್ಟ. ಈಗ ಎಲ್ಲ ಮುಗಿಯಿತೆಂದು ಬಿಜೆಪಿಗೆ ಮತ ಹಾಕದಂತೆ ತಡೆಯುತ್ತಿರುವುದು ಆಶಾಡಭೂತಿತನದ ಪರಮಾವಧಿ.
ಶಾದಿ ಭಾಗ್ಯ, ನಿರುದ್ಯೋಗ ಭತ್ಯೆ, ಉದ್ಯೋಗದಲ್ಲಿ-ಶಿಕ್ಷಣದಲ್ಲಿ ಮೀಸಲು ನೀಡಿದ ಮೇಲೂ, ಓಲೈಕೆ ಮಾಡಿದಮೇಲೂ, ಈ ದೇಶದಲ್ಲಿರುವ ಎಲ್ಲ ಸಂಪನ್ಮೂಲಗಳಲ್ಲಿ ಮೊದಲ ಹಕ್ಕು ಅಲ್ಪಸಂಖ್ಯಾತರಿಗಿರಬೇಕು, ಅದರಲ್ಲೂ ಮುಸ್ಲಿಮರಿಗೇ ಇರಬೇಕು ಎಂದು ಬಹುಸಂಖ್ಯಾತ ಹಿಂದೂಗಳಿರುವ ರಾಷ್ಟ್ರದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ ಮೇಲೂ, ವಿವಿಧ ವಿನೂತನ ಯೋಜನೆಗಳನ್ನು ಮುಸ್ಲಿಮರಿಗೆ ನೀಡಿದ ಮೇಲೂ ಕಾಂಗ್ರೆಸ್ನ ಮುಸ್ಲಿಮ್ ನಾಯಕನೊಬ್ಬನಿಗೆ, ತನ್ನದೇ ಧರ್ಮದ ಮತದಾರರನ್ನು ಬಿಜೆಪಿಗೆ ಮತ ಹಾಕುವುದರಿಂದ ಉಳಿಸಿಕೊಳ್ಳಲಾಗಲಿಲ್ಲ ಎನ್ನುವುದಕ್ಕಿಂತ ಮತ್ತೊಂದು ಅವಮಾನ ಇದೆಯಾ? ಅದನ್ನು ತಡೆಯುವುದಕ್ಕೆ, ಬಿಜೆಪಿಗೆ ಮತ ನೀಡುವವರು ಮುಸ್ಲಿಮರೇ ಅಲ್ಲ ಎಂದು ಧರ್ಮವನ್ನು ಮುಂದೆ ತರುವ ನೀಚತನಕ್ಕೆ ಇಸ್ಲಾಂನಲ್ಲಿ ಹರಾಮ್ ಎಂದು ಹೆಸರಲ್ಲವೇ?
ಇಸ್ಲಾಮ್ಗೆ ಹರಾಮ್ ಎನಿಸುವ ಕೆಲಸಗಳನ್ನು ಜಮೀರ್ ಮಾಡಿರುವ ಪಟ್ಟಿ ಇಷ್ಟಕ್ಕೇ ಮುಗಿದರೆ, ಹರಾಮ್ ಎಂಬುದಕ್ಕೇ ಅವಮಾನವಾದೀತು. ಏಕೆಂದರೆ, ಜಮೀರ್ ಒಮ್ಮೆ ಸಾರ್ವಜನಿಕ ಸಭೆಯಲ್ಲಿ ಮಾತನಾಡುವಾಗ, ‘ನಮ್ಮ ತಾಯಿ ಆಣೆಗೂ ಜೆಡಿಎಸ್ 15 ಸೀಟು ಗೆಲ್ಲಲ್ಲ’, ಎಂದು ಹೇಳಿದ್ದರ ವಿಡಿಯೊ ಇನ್ನೂ ಯೂಟ್ಯೂಬ್ನಲ್ಲಿ ಲಭ್ಯವಿದೆ.
‘ಅಲ್ಲಾಹುವಿನ ಮೇಲೆ ಆಣೆ ಮಾಡುವುದನ್ನು ಬಿಟ್ಟು ಬೇರೆ ಯಾವುದರ ಮೇಲೂ ಆಣೆ ಮಾಡುವುದನ್ನು ಅಲ್ಲಾಹು ನಿಷೇಧಿಸುತ್ತಾರೆ.’ ಪ್ರವಾದಿ ಮಹಮ್ಮದರೇ ಸಹೀಹ್ ಅಲ್ ಬುಖಾರಿ ಹದೀಸ್ನಲ್ಲಿ ಕಡ್ಡಿ ತುಂಡು ಮಾಡಿದಂತೆ ನುಡಿದಿದ್ದಾರೆ.
ಅಬುಬಕರ್ ನಂತರ ಎರಡನೇ ಖಲೀಫರಾಗಿದ್ದ ಹಾಗೂ ಪ್ರವಾದಿ ಮಹಮ್ಮದರ ಜತೆಗಿದ್ದವರಲ್ಲಿ ಹಿರಿಯರಾಗಿದ್ದ ಓಮರ್ ಅಬ್ನಲ್ ಖತ್ತಾಬ್ ಪ್ರಕಾರ, ಅಲ್ಲಾಹುವನ್ನು ಹೊರತುಪಡಿಸಿ ಇನ್ಯಾರ ಮೇಲೆ ಆಣೆ ಮಾಡಿದರೂ ಅವರು ಕಾಫಿರರಾಗುತ್ತಾರೆ ಎಂದು ಹೇಳಿದ್ದಾರೆ.
ಯಾವ ಲೆಕ್ಕದಲ್ಲಿ ನೋಡಿದರೂ, ಜಮೀರ್ ಅಹ್ಮದ್ ಮುಸ್ಲಿಮನೇ ಆಗುವುದಿಲ್ಲ. ಹೀಗಿರುವಾಗ, ನಿತ್ಯ ಐದು ಬಾರಿ ನಮಾಜ್ ಮಾಡುತ್ತಾ, ನಾಲ್ಕು ಜನರಿಗೆ ಉಪಕಾರ ಮಾಡುತ್ತಾ, ಕಾಲ ಕಾಲಕ್ಕೆ ದಾನಗಳನ್ನು ಮಾಡುತ್ತಾ ಇರುವ ಕೋಟ್ಯಂತರ ಮುಸ್ಲಿಮರು ಬಿಜೆಪಿಗೆ ಮತ ಹಾಕಿದರೆ, ಅವರೆಲ್ಲ ಕಾಫಿರರಾಗಲು ಹೇಗೆ ಸಾಧ್ಯ? ಜಮೀರ್ ಅಹ್ಮದ್ಗೆ ಇಸ್ಲಾಮ್ ಪ್ರಕಾರ ಮುಸ್ಲಿಂ ಪದದ ಅರ್ಥ ಗೊತ್ತಿದ್ದರೆ, ಆದರ್ಶ ಮುಸ್ಲಿಂ ಹೇಗಿರಬೇಕು ಎಂದು ಗೊತ್ತಿದ್ದರೆ, ತಮ್ಮನ್ನು ತಾವು ಸರಿ ಪಡಿಸಿಕೊಳ್ಳಲಿ. ಸುಳ್ಳು ಹೇಳುವುದನ್ನು ನಿಲ್ಲಿಸಲಿ. ಆಶಾಡಭೂತಿತನ ನಿಲ್ಲಿಸಲಿ. ಆಗ ಅಲ್ಲಾಹು, ಮೆಚ್ಚುತ್ತಾನೆ.
ಜಾತಿ, ಧರ್ಮಗಳ ಹಂಗು ತೊರೆದು ದೇಶಕ್ಕೆ ಸಾಯುವ ತನಕವೂ ಕೊಡುಗೆಯನ್ನು, ಪ್ರೀತಿಯನ್ನು ನೀಡಿದ್ದ, ಅಬ್ದುಲ್ ಕಲಾಂ ನಿಜವಾದ ಮುಸ್ಲಿಂ. ದೇಶಕ್ಕಾಗಿ ಏನಾದರೂ ಸೇವೆ ಮಾಡಬೇಕು ಎಂದು ಹಗಲಿರುಳು ಓದಿ, ಉತ್ತಮ ಸ್ಥಾನಕ್ಕೇರುವವನು ನಿಜವಾದ ಮುಸ್ಲಿಂ. ಸ್ವಾತಂತ್ರ್ಯಕ್ಕಾಗಿ ಬಲಿದಾನಿಯಾದ ಅಶಾಧಿಕುಲ್ಲಾ ಖಾನ್ ನಿಜವಾದ ಮುಸ್ಲಿಂ.
ಇವೆಲ್ಲ ಯಾವುದೂ ಗೊತ್ತಿಲ್ಲದಿರುವ ಕಾಫಿರನೊಬ್ಬ ನೀಡುವ ಸರ್ಟಿಫಿಕೇಟ್ನ ದರ್ದು, ಖಂಡಿತವಾಗಿಯೂ ಭಾರತದ ನಿಜವಾದ ಮುಸ್ಲಿಮರಿಗಿಲ್ಲ.