ಒಂದು ಕಥೆ ಹೇಳಲಾ?
ಒಂದು ರಾಜ್ಯವಿದೆ. ಅಲ್ಲಿನ ಜನರು ನೀರನ್ನು ದೇವರು ಎಂದು ಪೂಜೆ ಮಾಡುತ್ತಾರೆ. ಭಾರತದ ದಕ್ಷಿಣ ಭಾಗದಲ್ಲಿರುವ ರಾಜ್ಯ ಅದು. ನಾಟಕ ಎಂಬ ಹೆಸರಿಗೆ ತಕ್ಕಂತೆ ಆ ರಾಜ್ಯದಲ್ಲಿ ನಾಟಕ ಪ್ರದರ್ಶನಗಳಿಗೂ ಕೊರತೆಯಿರಲಿಲ್ಲ, ರಾಜಕೀಯ ನಾಟಕಗಳಿಗೂ ಕೊರತೆ ಇರಲಿಲ್ಲ. ಹಾಗಿತ್ತು ಆ ರಾಜ್ಯ.
ಕಳೆದ ವರ್ಷ ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ, ಅಪ್ಪ ಆದಮೇಲೆ ಮಗ, ಮಗ ಆದಮೇಲೆ ಅಪ್ಪ ನಾನ್ ಫಸ್ಟ್ ಸಾಯ್ತೀನಿ, ನಾನ್ ಫಸ್ಟ್ ಸಾಯ್ತೀನಿ ಎಂಬ ನಾಟಕ ಪ್ರದರ್ಶನ ಮಾಡಿ ಚುನಾವಣೆ ಗೆದ್ದೇ ಬಿಟ್ಟರು. ಕಳ್ಳರು ಕಡಿಮೆಯಿದ್ದಾರೆ ಎನಿಸಿದ್ದರಿಂದ ಇನ್ನೊಂದು ಕಳ್ಳ ಪಕ್ಷದ ಜತೆ ಕೈಜೋಡಿಸಿದ್ದಕ್ಕೆ ಒಂದು ದುಡ್ಡು ಹೊಡೆಯೋ ಸರ್ಕಾರ ಬಂತು.
ದುಡ್ಡು ಹೊಡೆಯೋ ಸರ್ಕಾರ ಅಂದ್ರೆ ಕೇಳ್ಬೇಕಾ? ದುಡ್ಡು ಹೊಡೆಯೋ ನಾಯಕರೇ ಇರುತ್ತಾರೆ. ಹಾಗೆ ಸಿಕ್ಕಿದಷ್ಟು ದೋಚಿ, ಬಾಚಿ, ಬಳಿದುಕೊಳ್ಳುತ್ತಿದ್ದ ನಾಯಕರು ಬಡಿದಾಡಿಕೊಂಡಿದ್ದೇ ಇಂದಿನ ಈ ಕಥಾ ವಿಷಯ.
ಬರ ಅಧ್ಯಯನ, ರೈತರ ಸಂಕಷ್ಟ ಪರಿಹರಿಸುವುದಕ್ಕೆ ಮತ್ತು ಅದರ ಬಗ್ಗೆ ಏಕಾಗ್ರತೆಯಿಂದ ಚರ್ಚೆ ನಡೆಸುವುದಕ್ಕೆ ಮಿಂಗಲ್ಟನ್ ರೆಸಾರ್ಟ್ನಲ್ಲಿ ಒಂದು ಸಭೆ ಕರೆಯಲಾಗಿತ್ತು. ನಿಜವಾಗಿ ಕೆಸರು ಗದ್ದೆಯಲ್ಲಿ ಇಳಿದು ಬೆಳಗಿಂದ ಕೆಲಸ ಮಾಡುವ ರೈತನಿಗೆ ಸಾಯಂಕಾಲದ ಹೊತ್ತಿಗೆ ಸುಸ್ತಾಗುತ್ತದೆಯೋ ಇಲ್ಲವೋ, ಆದರೆ ಅವರ ಅಭಿವೃದ್ಧಿಯ ಬಗ್ಗೆ ಐಷಾರಾಮಿ ರೆಸಾರ್ಟ್ನಲ್ಲಿ ಬೆಳಗ್ಗೆಯಿಂದ ಚರ್ಚೆ ಮಾಡಿದ್ದ, ನಾಯಕರಿಗೆ ಸುಸ್ತಾಗಿತ್ತು. ಮನಸ್ಸು ತಿಳಿಗೊಳಿಸಿಕೊಳ್ಳುವುದಕ್ಕೆ ಒಂದು ಪಾನೀಯ ಬೇಕಿತ್ತು. ಕುಡಿದರೆ, ಬೆಳಗ್ಗೆಯಿಂದ ಚರ್ಚೆ ಮಾಡಿದ್ದೆಲ್ಲ ಮರೆತು ಹೋಗಬೇಕಪ್ಪಾ. ಅಂಥಾ ಪಾನೀಯ. ಸರಿ, ಹೆಂಡತಿಯನ್ನು ಬಿಟ್ಟು ಮಿಕ್ಕವರನ್ನೆಲ್ಲ ಮರೆಸುವ ಪಾನೀಯ ಅಂದ್ರೆ, ಅದು ಮದ್ಯಪಾನ. ಅದನ್ನೇ ತರಿಸಿದರು. ಎಲ್ಲ ಕಳ್ಳರಂತೆ ನಮ್ಮ ಪರಮಾನಂದ್ ಸಿಂಗ್, ಜಾಣೇಶ ಮತ್ತು ಹನುಮನಾಯ್ಕ ಎಂಬುವವರೂ ಕುಡಿದರು. ರೈತರ ಕಷ್ಟ ಅಂದ್ರೆ ಕಡಿಮೆ ಇರುತ್ತಾ? ಅದನ್ನು ಮರೆಯುವುದಕ್ಕೆ ಅಷ್ಟೇ ಕುಡಿದರೆ ಮಾತ್ರ ಮಾರನೇ ದಿನ ಲವಲವಿಕೆಯಿಂದ ಇರುವುದಕ್ಕೆ ಸಾಧ್ಯ. ಹಾಗಾಗಿ ಹೆಂಡತಿ ಫೋನ್ ಕಟ್ ಮಾಡಿ, ಅಳತೆ ಪಟ್ಟಿಯನ್ನು ಇಕ್ಕಳ ಮಾಡಿಕೊಂಡು ಐಸ್ಕ್ಯೂಬ್ ಹಾಕಿ, ವಿಸ್ಕಿ ಕುಡಿಯಲು ಶುರು ಮಾಡಿದರು.
ಮೊದಲ ಪೆಗ್ಗಿಗೆ ಬ್ರದರ್ ಎಂದು ಶುರುವಾಗಿದ್ದು, ಬರುಬರುತ್ತಾ ಬೋ*ಮಗನೇ ಎಂದಾಗಿ ಹೋಗಿತ್ತು. ಅಲ್ಲಿದ್ದ ಮುನೀರ್ ಸೇಠ್, … ಇದೆಲ್ಲ ಕಾಮನ್ ಎಂದುಕೊಂಡರು. ಯಾಕಂದ್ರೆ ಕಳ್ಳರ ಭಾಷೆಯೇ ಅದಲ್ಲವೇ? ಆದರೆ, ಟೇಬಲ್ ಮೇಲಿದ್ದ ಬಾಟಲಿ, ಪರಮಾನಂದ್ ಸಿಂಗ್ ತಲೆ ಮೇಲೆ ಪಳ್ ಎಂದು ಕೂತಾಗ ಓಹೋ ಏನೋ ಆಗಿದೆ ಎಂದು ಹೌಹಾರಿದರು. ತಿರುಗಿ ನೋಡಿದರೆ, ಕಂಪಿಲಿಯ ಹೊಸ ದೊರೆ ಜಾಣೇಶ ರಾಂಗ್ ಆಗಿದ್ದ. ನಿನ್ನನ್ನ ಇವತ್ತು ಮುಗಿಸಿಬಿಡುತ್ತೇನೆ ಎಂದು ಕೂಗಾಡುತ್ತಿದ್ದ. ತನ್ನ ಗನ್ಮ್ಯಾನ್ ಬಳಿ ಇರುವ ಗನ್ ಕಿತ್ತುಕೊಂಡು ಗುಂಡು ಹಾರಿಸುವ ಪ್ರಯತ್ನ ಮಾಡಿದ್ದ. ಇದೆಲ್ಲ ನಾಟಕ ರಾಜ್ಯದ ಜನತೆಗೆ ಗೊತ್ತೇ ಇದೆ. ಆದರೆ ಗೊತ್ತಿಲ್ಲದ ವಿಷಯ ಇಲ್ಲಿಂದ ಶುರುವಾಗುತ್ತದೆ.
ಗನ್ ಕೊಡುವುದಕ್ಕೆ ನಿರಾಕರಿಸಿದ್ದ ಗನ್ಮ್ಯಾನ್ನ ಕೈಕಚ್ಚಿದ್ದ ಜಾಣೇಶ ಎಷ್ಟು ಟೈಟಾಗಿದ್ದ ಎಂದರೆ, ಎರಡು ಒಳಉಡುಪು ಬಿಟ್ಟರೆ ಏನೂ ಮೈಮೇಲೆ ಏನೂ ಇರಲಿಲ್ಲ. ಈ ವೇಳೆ ಮಧ್ಯಪ್ರವೇಶಿಸಿದ ಇತರೆ ಕಳ್ಳ ನಾಯಕರು ಎಲ್ಲರನ್ನೂ ಶಾಂತರನ್ನಾಗಿ ಮಾಡಿದ್ದಾರೆ.
ಹಾಗಾದರೆ, ಎಣ್ಣೆ ಹೊಡೆಯುವಾಗ ಯಾವ ವಿಷಯಕ್ಕೆ ಜಗಳವಾಯ್ತು? ಇದು ನಮ್ಮ ನಾಟಕ ರಾಜ್ಯದ ಜನತೆಯನ್ನು ಕಾಡುತ್ತಿರುವ ಪ್ರಶ್ನೆ. ಉತ್ತರ ಇದೆ.
ನಾಟಕ ರಾಜ್ಯದ ರಾಯನಚೂರು, ಯಾದವಗಿರಿ, ತುಮ್ರಿಕೂರು, ಬಿಳ್ಳಾರಿ, ಶ್ರೀರಾಮನನಗರ ಎಂಬ 5 ಜಿಲ್ಲೆಗಳು ಗ್ರಾನೈಟ್ ಬಿಜಿನೆಸ್ಗೆ ಹೆಸರುವಾಸಿ. ನಾಟಕ ರಾಜ್ಯದಲ್ಲಿ ಮೈನ್ಸ್ ಆ್ಯಂಡ್ ಮಿನರಲ್ಸ್ ಎಂಬ ಇಲಾಖೆ ಇದೆ. ಅತ್ಯಂತ ಹೆಚ್ಚು ಹಣ ಬರುವ ಸ್ಥಾನವೂ ಅದೇ. ಬೆನಕಪುರ, ಶ್ರೀರಾಮನನಗರವೆಲ್ಲ ಅಲ್ಲಿನ ನಾಯಕ ಬಿಕೆ ಶಶಿಕುಮಾರ್ರ ಜುಬ್ಬಾ ಜೇಬಿನಲ್ಲೇ ಇರುವುದು. ಈ ವ್ಯವಹಾರದಲ್ಲಿ ಉಳಿದೆಲ್ಲರಿಗಿಂತ ಹೆಚ್ಚಾಗಿ ಪಳಗಿದವರು ಹಾಗೂ ಸುಮಾರು ಕ್ವಾರಿಗಳ ಒಡೆಯ ಈ ಬಿಕೆ ಶಶಿಕುಮಾರ್.
ಕಳ್ಳರ ಸರ್ಕಾರವನ್ನು ಬೀಳಿಸುವುದಕ್ಕೆ ಜಾಜಿ ಹೂವಿನ ಪಕ್ಷ ಬಹಳ ಪ್ರಯತ್ನ ನಡೆಸಿದ ಫಲವಾಗಿ, ಒಂದಷ್ಟು ಶಾಸಕರು ಜಾಜಿ ಹೂವಿನ ಸುವಾಸನೆಗೆ ಮರುಳಾಗಿ ಕಳ್ಳರ ಪಕ್ಷವನ್ನು ಬಿಟ್ಟು ಬರಲು ಒಪ್ಪಿಕೊಂಡಿದ್ದರು. ಒಂದಷ್ಟು ಮೊತ್ತಕ್ಕೆ ತಮ್ಮನ್ನು ತಾವು ಮಾರಿಕೊಂಡಾಗಿತ್ತು. ಕುರಿ ಕಡಿಯುವ ಹಬ್ಬಕ್ಕಾಗೇ ಎಲ್ಲರೂ ಬಹಳ ಕಾತರದಿಂದ ಕಾಯುತ್ತಿದ್ದರು. ಇದು ನಾಟಕ ರಾಜ್ಯದ ಕಳ್ಳ ಸರ್ಕಾರಕ್ಕೆ ತಲೆ ಬಿಸಿ ಉಂಟುಮಾಡಿತ್ತು. ಏನು ಮಾಡಿದರೂ ಮಾರಾಟವಾದ ಸಾಮಾನುಗಳು ಯಾವುದೆಂದು ತಿಳಿಯುತ್ತಲೇ ಇರಲಿಲ್ಲ. ಇದಕ್ಕೆ ಅವರ ಹೀರೋ ಬಿಕೆ ಶಶಿಕುಮಾರ್ಗೆ ಎಂಟ್ರಿ ಕೊಡುವುದಕ್ಕೆ ಕೇಳುತ್ತಾರೆ. ಆಪರೇಷನ್ ನಡೆಯುತ್ತಿರುವ ಸಂದರ್ಭದಲ್ಲಿ ಡಾಕ್ಟರರಂತೆ ಬಂದ ಶಶಿಕುಮಾರ್, ಮೊದಲು ಹಿಡಿಯುವುದು ಪರಮಾನಂದ್ ಸಿಂಗ್ರನ್ನು.
ಅವರನ್ನು ಹಿಡಿದವರೇ, ನೋಡು ಬ್ರದರ್ ನೀನು ಕಷ್ಟದ ಸಮಯದಲ್ಲಿ ಜಾಜಿ ಹೂವಿನ ವಾಸನೆಗೆ ಮರುಳಾಗದೇ ನಮ್ಮ ಜತೆ ಬಂದೆ. ಈಗ ನಿನ್ನನ್ನೇ ನಂಬಿದ್ದೇವೆ. ಯಾರಾರಯರು ನಮ್ಮ ಗ್ಯಾಂಗ್ ಬಿಟ್ಟು ಹೋಗುವುದಕ್ಕೆ ತಯಾರಾಗಿದ್ದಾರೆ ಎಂದು ನಿನಗೆ ತಿಳಿಯುತ್ತದೆ. ಸಾಧ್ಯವಾದರೆ, ಅವರನ್ನು ಹಿಡಿದು ನಿಲ್ಲಿಸು. ಇಲ್ಲವಾದರೆ, ಹೋಗುವವರ ಪಟ್ಟಿ ನನಗೆ ಕೊಡು. ಸುಮ್ಮನೆ ಕೊಡಬೇಡ ಬ್ರದರ್, ಐದು ಜಿಲ್ಲೆಗಳ ಕಾಂಟ್ರಾಕ್ಟ್ನಲ್ಲಿ 50% ಹಣ ನಿನಗೇ. ಕಂಟ್ರೋಲ್ ನಿನಗೇ ಕೊಡ್ತೀವಿ. ಹೆಸರು ಹೇಳು ಸಾಕು ಎಂದು ಕೇಳಿದ್ದಾರೆ.
ಗ್ರಾನೈಟ್ ಎಂದರೇ ಚಿನ್ನದ ಗಣಿ. ಅಲ್ಲಿಂದ ಬರುವುದೆಲ್ಲವೂ ಚಿನ್ನವೇ. ಅದರಲ್ಲಿ 50% ಕೊಡ್ತೀನಿ ಅಂದರೆ, ಒಮ್ಮೆ ಶವವಾದರೂ ಇನ್ನೊಂದು ಹತ್ತು ವರ್ಷ ಬದುಕುವುದಕ್ಕೆ ಎದ್ದು ನಿಲ್ಲುತ್ತದೆ. ಉಪ್ಪು ಹುಳಿ ಖಾರವನ್ನು ಎಣ್ಣೆಯ ಜತೆ ಸೈಡ್ಸ್ ಆಗಿ ತೆಗೆದುಕೊಳ್ಳುವ ದೇಹ ಪರಮಾನಂದ್ ಸಿಂಗ್ರದ್ದು. ಸುಮ್ಮನಿರುತ್ತಾರೆಯೇ? ಸುಮ್ಮನಿರುವುದಾದರೂ ಯಾವ ನ್ಯಾಯ?
ಒಕೆ, ಹೆಸ್ರು ಕೊಡುವ ಜವಾಬ್ದಾರಿ ನಂದು, 50% ಶೇರ್ ಕೊಡುವ ಜವಾಬ್ದಾರಿ ನಿಮ್ಮದು ಎಂಬ ಒಪ್ಪಂದದ ಮೇರೆಗೆ, ಎಲ್ಲ ಹೆಸರುಗಳನ್ನು ಬಿಚ್ಚಿಟ್ಟಿದ್ದಾರೆ.
ತಕ್ಷಣವೇ ಜಾಗ್ರತವಾದ ಕಳ್ಳರ ತಂಡ, ಜಾಜಿ ವಾಸನೆಗೆ ಮರುಳಾಗಿರುವ ಶಾಸಕರಿಗೆ ತಲಾ 30 ಕೋಟಿ ಹಣದ ವಾಸನೆ ಬರುವಂತೆ ಮಾಡಿದರು. ರಾತ್ರೋ ರಾತ್ರಿ ಬಹುತೇಕರಿಗೆ 30 ಕೋಟಿ ರುಪಾಯಿ ಮುಟ್ಟಿತು. ಜಾಜಿ ಪಕ್ಷವು ಭರವಸೆ ನೀಡಿದ್ದಕ್ಕಿಂತ ಹೆಚ್ಚು ಹಣ ಆಪರೇಷನ್ನಲ್ಲಿರುವ ರೋಗಿಗಳಿಗೆ ಸರಿಯಾದ ಸಮಯಕ್ಕೆ ಹರಿದು ಬಂದಿದ್ದರಿಂದ, ಮತ್ತು ಹಣ ಮುಟ್ಟಿಸುವ ಮಾರ್ಗಕ್ಕೆ ಸ್ವತಃ ಜಾಜಿ ಪಕ್ಷದ ನಾಯಕನೇ ಕಲ್ಲು ಹಾಕಿದ್ದರಿಂದ ಅನಿವಾರ್ಯವಾಗಿ ಆಪರೇಷನ್ ಮಧ್ಯೆ, ಕರೆಂಟ್ ಹೋಯ್ತು. ಕರೆಂಟ್ ಹೋದಮೇಲೆ ವೈದ್ಯರು ಏನು ಮಾಡುತ್ತಾರೆ ಹೇಳಿ? ಸಹಜವಾಗಿ ಮನೆಗೆ ತೆರಳಿದರು. ರೋಗಿಗಳು ಕಿಡ್ನಾಪ್ ಆದರು.
ಆದರೆ, ಕಳ್ಳರ ಪಕ್ಷದಲ್ಲಿ ಇನ್ನೂ ಎಷ್ಟು ರೋಗಿಗಳಿದ್ದರೋ ಯಾರಿಗೆ ಗೊತ್ತು ಅಲ್ಲವಾ? ಅದಕ್ಕೆ ಕಳ್ಳರೆಲ್ಲ ಸೇರಿ ಒಂದು ಕೆಎಲ್ಪಿ(ಕಳ್ಳರ ಲೇಜಿಸ್ಲೇಚರ್ ಪಾರ್ಟಿ)ಗೆ ಮೀಟಿಂಗ್ ಕರೆದರು. ಒಂದಷ್ಟು ಜನರು ಬಾರದ ಕಾರಣ, ತವರುಮನೆ ಮಿಂಗಲ್ಟನ್ ರೆಸಾರ್ಟ್ನಲ್ಲಿ ಗ್ಯಾಂಗಪ್ ಆದರು. ಇಲ್ಲಿ ಇನ್ನೊಂದು ಸಮಸ್ಯೆ ಏನಾಗಿತ್ತೆಂದರೆ, ಹಿರಿಯರೊಬ್ಬರು, ಜಾಜಿ ಪಕ್ಷದವರು ರೆಸಾರ್ಟ್ಗೆ ಹೋಗಿದ್ದಕ್ಕೆ, ಮೊದಲು ನಾಟಕ ರಾಜ್ಯಕ್ಕೆ ಬಂದು, ಇಲ್ಲಿನ ಬರ ಅಧ್ಯಯನ ಮಾಡಿ, ರೈತರ ಅಭಿವೃದ್ಧಿಗಾಗಿ ಕೆಲಸ ಮಾಡ್ರಿ ಎಂದು ಬುದ್ಧಿ ಹೇಳಿದ್ರು. ಆದರೆ, ಆ ಹಿರಿಯರ ಪಕ್ಷದ ಕಳ್ಳರೇ ಮಿಂಗಲ್ಟನ್ ರೆಸಾರ್ಟ್ನಲ್ಲಿ ಝಾಂಡಾ ಊರಿದ್ದಕ್ಕೆ, ಬರ ಅಧ್ಯಯನ, ರೈತರ ಸಮಸ್ಯೆಗಳ ಬಗ್ಗೆ ಚಿಂತನೆಗೆ ಸೇರಿದ್ವಿ ಎಂದು ಹೆಸರು ಕೊಟ್ಟುಕೊಂಡು ಸೇರಿದ್ದರು.
ಕಳ್ಳರು, ರೌಡಿಗಳು, ಗೂಂಡಾಗಳು, ಕ್ರಿಮಿನಲ್ಗಳು ಹಳೇ ಬಾಕಿಯನ್ನು ಇಟ್ಟುಕೊಳ್ಳುವುದಿಲ್ಲ. ಹಾಗಾಗಿ, ನಮ್ಮ ಜೊತೆಗೇ ಇದ್ದು, ಒಂದೇ ತಟ್ಟೆಯಲ್ಲಿ ಕಡ್ಲೇಕಾಯಿ ಬೀಜ, ಉಪ್ಪಿನಕಾಯಿ ನೆಕ್ಕಿದ ಪರಮಾನಂದ ಸಿಂಗ್, ಶಶಿಕುಮಾರ್ ಬಳಿ ಫಿಟ್ಟಿಂಗ್ ಇಟ್ಟನಲ್ಲ ಎಂಬ ಕಿಚ್ಚು ಒಳಗೆ ಹೊತ್ತಿಕೊಂಡೇ ಇತ್ತು. ಬೆಂಕಿಗೆ ವಿಸ್ಕಿ ಹಾಕಿ ನೋಡಿ.. ಭಗ್ ಎಂದು ಉರಿಯುತ್ತದೆ. ಹಾಗೇ, ಕೆಂಪಿಲಿ ಜಾಣೇಶನ ಆ ಕಿಚ್ಚಿಗೆ ವಿಸ್ಕಿ ಬಿದ್ದೊಡನೆಯೇ, ಭಗ್ ಎಂದು ಹೊತ್ತಿಕೊಂಡಿತ್ತು. ಹಳೇ ಬಾಕಿ ಕೊಡುವುದ್ಯಾಕೆ, ಒಂದೇ ಸಲ ಶಿವಾ ಎನಿಸಿ, ಪೂರ್ತಿ ಚುಕ್ತಾ ಮಾಡಿಬಿಡೋಣ ಎಂದು ಗನ್ಮ್ಯಾನ್ ಬಳಿ ಗನ್ ಕೇಳಿದ್ದು, ಅದು ಸಿಗದ ಕಾರಣ ವಿಸ್ಕಿ ಬಾಟಲ್ನ್ನು ಪರಮಾನಂದ್ ಸಿಂಗ್ರ ತಲೆಗೆ ಹೊಡೆದಿದ್ದು, ನಮ್ಮ ಕಿವಿಗೆ ಹೂವಿಟ್ಟ ನಿಮಗೆ, ನಿಮ್ಮ ತಲೆಯ ಮೇಲೆ ಹೂಕುಂಡವನ್ನೇ ಇಡುತ್ತೇನೆ ಎಂದು ಸಿಡಿದು ನಿಂತಿದ್ದು, ಅಂಗಿ ಹರಿದುಕೊಂಡು ರೆಸಾರ್ಟ್ ತುಂಬೆಲ್ಲ ಓಡಾಡಿದ್ದು ಈಗ ಇತಿಹಾಸ. ಇದರ ಮೂಲಕ ಬರ ಅಧ್ಯಯನ, ರೈತರ ಅಭಿವೃದ್ಧಿಗಾಗಿ ಚಿಂತಿಸುವ ಸಭೆಯ ಸಮಾರೋಪ ಆಗಿದೆ.
ಇದನ್ನು ನೋಡಿದ ಮೇಲೆ ನಾಟಕ ರಾಜ್ಯದ ಜನರಿಗೆ ಅನಿಸುವುದು ಒಂದೇ: ಕೆಂಪಿಲಿ ಎಂದಾಗ ನಮಗೆ ಗಂಡುಗಲಿ ರಾಜಕುಮಾರ ನೆನಪಾಗಬೇಕಿತ್ತು. ಜಯನಗರ ಎಂದಾಗ ನಮಗೆ ರಾಮ ಕೃಷ್ಣದೇವರಾಯ ನೆನಪಾಗಬೇಕಿತ್ತು. ಆದರೆ, ಈ ಎರಡು ಕ್ಷೇತ್ರದ ಕುಡುಕ ನಾಯಕರ ಹೊಡೆದಾಟ ನೆನಪಾಗುವಂತಾಗಿರುವುದು ಮಾತ್ರ ದುರಂತ.
ಇಷ್ಟೆಲ್ಲ ತಿಳಿದ ಮೇಲೆ ಮಹಾಜನತೆಗೆ ಅನಿಸಿದ್ದು, ನಾಟಕ ರಾಜ್ಯದ ರಾಜಕೀಯ ಹೊಲಸು ಕಣ್ರೀ!
(ಈ ಕಥೆಯಲ್ಲಿ ಬಳಕೆಯಾಗಿರುವ ವ್ಯಕ್ತಿಗಳ ಹೆಸರುಗಳು ಕೇವಲ ಕಾಲ್ಪನಿಕ. ಒಮ್ಮೆ ಎಲ್ಲಾದರೂ ನಿಜಜೀವನಕ್ಕೆ ಹೋಲಿಕೆಯಾದರೆ ಅದು ಆಕಸ್ಮಿಕ.)