ಸಂನ್ಯಾಸತ್ವ ದಂಧೆಯಾದರೆ, ಪ್ರಸಾದದಲ್ಲೂ ವಿಷ ಕಾಣುತ್ತದೆ!

ಅಂಗುಲಿಮಾಲನ ಕಥೆ ಎಲ್ಲ ಕೇಳಿದ್ದೀರಲ್ಲವೇ? ಕಾಡಿನಲ್ಲಿ ಬರುವ ಪ್ರಯಾಣಿಗರನ್ನು ಅಡ್ಡಗಟ್ಟಿ ಆತ ಎಲ್ಲರ ಹತ್ಯೆ ಮಾಡಿಯೋ ಅಥವಾ ಹೇಗೋ ಮಾಡಿ ಅವರ ಬೆರಳನ್ನೂ ಕತ್ತರಿಸಿ ಹಾರಕ್ಕೆ ಜೋಡಿಸಿಕೊಳ್ಳುತ್ತಿದ್ದ. ಇದೇ ಕಾರಣಕ್ಕೆ ಎಲ್ಲರೂ ಆ ಕಾಡಿಗೆ ಹೋಗಲಿಕ್ಕೇ ಹೆದರಿಕೊಳ್ಳುತ್ತಿದ್ದರು. ನಮ್ಮ ನಿಜಗುಣಾನಂದರ ಹಾಗೆ. ಆದರೆ ಅಲ್ಲಿಗೆ ಬಂದ ಗೌತಮ ಬುದ್ಧ ಎಂಬ ಸಂನ್ಯಾಸಿ, ಸಾವಿಗೆ ಹೆದರಲಿಲ್ಲ. ಬದಲಿಗೆ ಅಂಗುಲಿಮಾಲನಿಗೆ ಸತ್ಯದ ಅರಿವು ಮಾಡಿಕೊಟ್ಟ. ತಾನೆಂಥ ತಪ್ಪು ಮಾಡುತ್ತಿದ್ದೇನೆ ಎಂಬುದನ್ನು ಅವನಿಗೇ ಅವನಿಗೆ ಗೊತ್ತಿಲ್ಲದಂತೆಯೇ ಅರಿವು ಮಾಡಿಕೊಟ್ಟ. ಬುದ್ಧನ ಶಾಶ್ವತ ಶಿಷ್ಯನಾದ ಅಂಗುಲಿಮಾಲ. ಸಂನ್ಯಾಸಿ ಎಂದರೆ, ಬುದ್ಧ. ಹೆದರಿ ದೂರ ಇರುವ ನಿಜಗುಣಾನಂದರಲ್ಲ.

ಭಾಷಣದಲ್ಲಿ ನಿಜಗುಣಾನಂದರ ಬಾಯಲ್ಲಿ ಆಗಾಗ ಬರುವ ಮತ್ತೊಂದು ಹೆಸರು ಬಸವಣ್ಣ. ಜಾತಿ ಮುಕ್ತ ಸಮಾಜ ಮಾಡಬೇಕು ಎಂದು ಸಂಕಲ್ಪ ಮಾಡಿದ್ದರು ಬಸವಣ್ಣ. ಆಗಿನ ಕಾಲದಲ್ಲೇ ಬಸವಣ್ಣನವರನ್ನು ಹೆದರಿಸುವವರಿದ್ದರು. ಇದನ್ನು ಕಂಡು ಸುಮಾರು ಜನರು ಹೆದರಿಕೊಂಡಿದ್ದುಂಟು. ನಿಜಗುಣಾನಂದರ ಹಾಗೆ. ಆದರೆ ಅಂಥ ಸಂದರ್ಭದಲ್ಲೂ ಬಸವಣ್ಣ ಎಂಬ ಸಂತ ಮಾತ್ರ ಹೆದರಲೇ ಇಲ್ಲ. ‘ಕೊಲುವೆನೆಂಬ ಭಾಷೆ ದೇವನದಾದರೆ, ಗೆಲುವೆನೆಂಬ ಭಾಷೆ ಭಕ್ತನದು!. ಸತ್ಯವೆಂಬ ಕೊರಲಗನೆ ತಳೆದುಕೊಂಡು, ಸದ್ಭಕ್ತರು ಗೆದ್ದರು ಕಾಣಾ, ಕೂಡಲಸಂಗಮದೇವಾ’ ಎಂದರು ಬಸವಣ್ಣ. ಎಲ್ಲರನ್ನೂ ತನ್ನ ಮಡಿಲಿಗೆ ಬರಮಾಡಿಕೊಂಡು ಅವರ ಜೀವನಕ್ಕೊಂದು ಅರ್ಥ ಕೊಟ್ಟರು. ಇದು ನಿಜವಾದ ಸಂತನ ವಿಚಾರ. ಹೆದರಿ ಓಡಲಿಲ್ಲ.

ಇನ್ನು ವಿವೇಕಾನಂದರು ಸಾವಿನ ಬಗ್ಗೆ be brave! be strong! be fearless! once you have taken up the spiritual life, fight as long as there is any life in you. even though you know you are going to be killed, fight till you “are killed.” don’t die of fright. die fighting. don’t go down till you are knocked down. ಎಂದಿದ್ದಾರೆ. ಅಂದರೆ, ನಿನ್ನ ಕೊನೆಯ ಉಸಿರು ಇರುವವರೆಗೂ ಹೋರಾಡುತ್ತಿರು. ನೀನು ಸಾಯುತ್ತೀಯ ಎಂದು ಗೊತ್ತಿದ್ದರೂ ಹೋರಾಡುತ್ತಿರು ಎಂದು ಹೇಳಿದ್ದಾರೆ.

ಇಷ್ಟೆಲ್ಲ ಯಾಕೆ ಹೇಳಬೇಕಾಯಿತೆಂದರೆ, ಪ್ರಕಾಂಡ ಪಂಡಿತರಾದ, ಕಲಿಯುಗದ ಧರ್ಮ ಟೀಕಾಕಾರರು, ಬ್ರಾಹ್ಮಣ-ಪುರೋಹಿತರು-ಹಿಂದೂಗಳ ಬಗ್ಗೆ ಅತೀವ ಸದ್ವಿಚಾರಗಳನ್ನು ಪಸರಿಸುತ್ತಿರುವ ಶ್ರೀ ಶ್ರೀ ಶ್ರೀ ನಿಜಗುಣಾನಂದ ಎಂಬ ಸ್ವಾಮಿ ಮೊನ್ನೆ ಅಂಬೇಡ್ಕರ್‌ ಪರಿನಿರ್ವಾಣ ದಿನದಂದು ಮಾತನಾಡುತ್ತಾ, ಪ್ರಸಾದದಲ್ಲಿ ವಿಷ ಹಾಕಿ ಕೊಟ್ಟಿರುತ್ತಾರೆಂದು ನಾನು ಬಹಳ ಕಡೆ ಹೋಗುವುದೇ ಇಲ್ಲ ಎಂದಿದ್ದಾರೆ.
ಇವರ ಈ ಮಾತು ಹೇಳಿದ ತಕ್ಷಣ ನನಗೆ ಈ ದೇಶದ ಸಂತ ಪರಂಪರೆ ನೆನಪಾಯಿತು. ಗೋವಿನ ರಕ್ಷಣೆಗಾಗಿ ಗೋಪಾಷ್ಠಮಿಯ ದಿನದಂದು ಇಂದಿರಾ ಗಾಂಧಿಯ ಗೂಂಡಾಗಳ ಗುಂಡಿನೇಟಿಗೆ ಎದೆಯೊಡ್ಡಿ ಪ್ರಾಣ ಬಿಟ್ಟ ಕೃಪಾತ್ರಿ ಮಹಾರಾಜ್‌ ಎಂಬ ಸಂತ ಎಲ್ಲಿ, ನಿಜಗುಣಾನಂದ ಎಂಬ ಪುಕ್ಕಲು ಸಂನ್ಯಾಸಿ ಎಲ್ಲಿ?!

ನೀವು ಈ ನಿಜಗುಣಾನಂದರನ್ನು ಮದುವೆ ಮನೆಯಿಂದ ತಿಥಿ ಮನೆಯ ಕಾರ್ಯಕ್ರಮಕ್ಕೆ ಕರೆಸಿ. ಬಾಯಲ್ಲಿ ಬರುವುದೇ ಹಿಂದೂ ವಿರೋಧಿ, ಪುರೋಹಿತ ವಿರೋಧಿ, ದೇವರ ವಿರೋಧಿ ಮಾತುಗಳು. ಯಾಕಂದರೆ ಸ್ವಾಮಿ ಎಂಬುದೇ ಈ ಮನುಷ್ಯನಿಗೆ ವೃತ್ತಿ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ನಾಸ್ತಿಕ ನಿಜಗುಣಾನಂದರೇ, ಕೇಳಿ, ಮೇಲೆ ಹೇಳಿದ ಅಷ್ಟೂ ಸಂತರು ನಿಮ್ಮಂತೆ ತುತ್ತು ಪ್ರಸಾದಕ್ಕೆ ಹೆದರಿದ್ದರೆ, ಈ ಹೊತ್ತಿಗೆ ಬಸವಣ್ಣ ಎಂಬ ಸಂತನ ಹೆಸರು ಹೇಳಿಕೊಂಡು ಮಾಡಲು ಈಗಿರುವ ದಂಧೆಯೂ ನಿಮಗೆ ಇರುತ್ತಿರಲಿಲ್ಲ. ಸ್ವಂತ ಹಣದಲ್ಲಿ ರೈತರಂತೆ ನಡು ಬಗ್ಗಿಸಿ ಕೆಲಸ ಕೆಲಸ ಮಾಡಬೇಕಾಗುತ್ತಿರುತ್ತಿತ್ತು. ಬಸವಣ್ಣ ಇದ್ದಿದ್ದಕ್ಕೆ ನೀವು ಎಂಬುದನ್ನು ಮರೆಯಬೇಡಿ.

ಎದೆಗಾರಿಕೆ ಉಳ್ಳವನು ಸಂನ್ಯಾಸಿ. ವಿಷ ಹಾಕಿಬಿಟ್ಟಾರು ಅದಕ್ಕೆ ಪ್ರಸಾದ ತಿನ್ನಲ್ಲ ಎಂದರೆ ಜೀವ ಹೋಗುತ್ತದೆಂಬ ಭಯ ಇದೆ ಎಂದರ್ಥ. ಅಷ್ಟು ಭಯವಿದ್ದ ಮೇಲೆ ಅಂಥವನಿಗೆ ಇನ್ನೂ ಸಂನ್ಯಾಸಿ ಎಂದು ಯಾವ ಬಾಯಿಂದ ಯಾಕಾಗಿ ಕರೆಯಬೇಕು?

ನಿಜಗುಣಾನಂದರೇ, ಒಂದು ಮಾತು ಬಹಳ ಚೆನ್ನಾಗಿ ನೆನಪಿಟ್ಟುಕೊಳ್ಳಿ. ನೀವು ಪ್ರಸಾದ ತಿಂದು ಬ್ರಾಹ್ಮಣ ಕುಲ ಪಾವನವಾಗಬೇಕಿಲ್ಲ. ಅಥವಾ ನಾವು ಉದ್ಧಾರವಾಗಬೇಕಿಲ್ಲ. ನಮ್ಮ ಬುದ್ಧಿಶಕ್ತಿಯಿಂದ ನಾವು ಹೇಗೆ ಬದುಕಬೇಕೆಂದು, ಮೀಸಲು ಬಂದಾಗಿನಿಂದಲೂ ಬದುಕಿ ತೋರಿಸಿದ್ದೇವೆ. ಆದರೆ ಒಂದು ಕಾರ್ಯಕ್ರಮದಲ್ಲಾದರೂ ಹಿಂದೂ ದೇವರುಗಳನ್ನು ಬಯ್ಯದೇ, ಕುಹಕವಾಡದೇ, ಬ್ರಾಹ್ಮಣ್ಯ, ಪುರೋಹಿತರನ್ನು ಲೇವಡಿ ಮಾಡದೇ ಬದುಕು ಕಟ್ಟಿಕೊಳ್ಳುವ ತಾಕತ್ತು ನಿಮಗಿದೆಯಾ ಎಂದು ಪ್ರಶ್ನಿಸಿಕೊಳ್ಳಿ. ನಮ್ಮನ್ನು ಬಯ್ಯದೇ ಬೇಳೆಯೇ ಬೇಯದ ನಿಮಗೆ ಒಂದರ್ಥದಲ್ಲಿ ಹಿಂದೂಗಳು, ಬ್ರಾಹ್ಮಣರೇ ಅನ್ನದಾತರು.

ಸತ್ಯ ಹೇಳಬೇಕೆಂದರೆ, ನನಗೆ ಈ ಮನುಷ್ಯ ಕೇಸರಿ ವಸ್ತ್ರ ಹೊದ್ದಿರುವ ಒಬ್ಬ ಎಡಪಂಥೀಯ ಸ್ಟ್ಯಾಂಡಪ್‌ ಕಮೀಡಿಯನ್‌ ರೀತಿ ಕಾಣುತ್ತಾರೆ. ನನಗಷ್ಟೇ ಅಲ್ಲ, ಬದಲಿಗೆ ಅವರ ಹಾಸ್ಯ ಕಾರ್ಯಕ್ರಮ ಕೇಳುವ ಎಲ್ಲ ಮಂದಿಗೂ ಹಾಗೇ ಎನಿಸಿರಬಹುದು. ಅದಕ್ಕೇ ನಿಜಗುಣಾನಂದ ಮಾತಾಡಿದ್ದಕ್ಕೆಲ್ಲ ಬಿದ್ದು ಬಿದ್ದು ನಗುತ್ತಿರುತ್ತಾರೆ. ಯಾವ ಕೇಸರಿ ವಸ್ತ್ರಧಾರಿ ಮಾತಾಡಿದರೆ ಇಂಥ ನಗುವು ಉಕ್ಕಿ ಬರುತ್ತದೆ ಹೇಳಿ? ‘ನಗಬ್ಯಾಡ್ರಿ, ನಾನು ನಿಮಗ ಹಾಸ್ಯದ ಮೂಲಕ ಸಂದೇಶ ಕೊಡ್ತಾ ಇದೇನ್ರಿ’ ಎಂದು ಹೇಳುತ್ತಾರೆ ನಿಜಗುಣಾನಂದ. ಹಾಸ್ಯ ಚಕ್ರವರ್ತಿ ಪ್ರಾಣೇಶ್‌ ಸೇರಿದಂತೆ ಹಲವಾರು ಸ್ಟ್ಯಾಂಡಪ್‌ ಕಮೀಡಿಯನ್‌ಗಳು ತಮ್ಮ ಭಾಷಣದಲ್ಲಿ ಇದನ್ನೇ ಹೇಳುತ್ತಿರುತ್ತಾರೆ. ಪ್ರಾಣೇಶ್‌ರಿಗೂ ಇವರಿಗೂ ಏನು ವ್ಯತ್ಯಾಸ ಎಂದರೆ, ಪ್ರಾಣೇಶರು ಜನರ ಅಥವಾ ಒಂದು ಸಮುದಾಯದ ಮನಸ್ಸು ನೋಯಿಸಿ ಹಾಸ್ಯ ಮಾಡುವುದಿಲ್ಲ, ನಿಜಗುಣಾನಂದರ ಹಾಸ್ಯ ಇರುವುದೇ ಒಂದು ಸಮುದಾಯದ ಮೇಲೆ. ಬ್ರಾಹ್ಮಣ ಜಾತಿ ಮತ್ತು ಹಿಂದೂ ಧರ್ಮದ ಮೇಲೆ. ಬಹುಶಃ ನಿಜಗುಣಾನಂದ ತಾನು ವೃತ್ತಿಯಿಂದ ಸ್ವಾಮಿ ಎಂದಿದ್ದು ಇದೇ ಕಾರಣಕ್ಕಿರಬಹುದು.

ಇನ್ನು ಇವರು ಹೇಳುತ್ತಾರೆ, ‘ಧಾರ್ಮಿಕ ಮುಖಂಡರೊಳಗೆ ಬಹಳ ದೊಡ್ಡ ಟಾರ್ಗೆಟ್‌ ಎಂದರೆ ಅದು ನಿಜಗುಣಾನಂದ ಸ್ವಾಮಿ’ ಎಂದು ಅವರೇ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಗೌರಿಯನ್ನು ರಸ್ತೆಯಲ್ಲಿ ಕೊಂದರು, ಕಲಬುರ್ಗಿಯನ್ನು ಗುಂಡಿಕ್ಕಿ ಕೊಂದರು, ಮುಂದೆ ನಾನೇ ಟಾರ್ಗೆಟ್‌ ಎಂಬುದು ಅವರ ವಾದ.

ಜನರ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ನಿಮ್ಮನ್ನು ಟಾರ್ಗೆಟ್‌ ಮಾಡಲು ಯಾರಿಗಾದರೂ ಹೇಗೆ ಮನಸ್ಸು ಬರುತ್ತದೆ ಹೇಳಿ? ನೀವು ಯಪರಾ ತಪರಾ ಮಾತನಾಡುವುದಕ್ಕೆ ಧಾರ್ಮಿಕ ಮುಖಂಡ ಎಂದೇ ಪರಿಗಣಿಸುವುದು ಅನುಮಾನ. ಇನ್ನು ಯಾವ ಖುಷಿಗಾಗಿ ಟಾರ್ಗೆಟ್‌ ಮಾಡುವುದು? ನಿಜಗುಣಾನಂದರೇ, ನಮ್ಮ ದೇಶದಲ್ಲಿ ಯಾವತ್ತಾದ್ರೂ ಕಾಮಿಡಿ ಮಾಡಿದ್ದಕ್ಕೆ ಯಾರನ್ನಾದರೂ ಟಾರ್ಗೆಟ್‌ ಮಾಡಿದ್ದರ ಉದಾಹರಣೆ ಕೇಳಿದ್ದೀರಾ? ಇನ್ನು ತಮ್ಮ ಬಗ್ಗೆ ಬರೆದದ್ದಕ್ಕೆ ನನಗೆ ಬೆದರಿಕೆ ಕರೆ ಬಂದಿದೆಯೇ ವಿನಾ, ನಿಮಗೇನೂ ಆಗುವುದಿಲ್ಲ. ನಿಮ್ಮನ್ನು ರಕ್ಷಣೆ ಮಾಡುತ್ತಿರುವುದೇ ನಿಮ್ಮ ವೃತ್ತಿ. ಅದೇ ‘ಸ್ವಾಮಿ’ ವೃತ್ತಿ.

ಅಸಲಿಗೆ ಈ ಮನುಷ್ಯನನ್ನು ಕರೆದಿರುವುದು ಅಂಬೇಡ್ಕರ್‌ ಪರಿನಿರ್ವಾಣದ ದಿನ ಮಾತಾಡುವುದಕ್ಕೆ. ಸಂವಿಧಾನದ ಬಗ್ಗೆ ಮಾತಾಡಿಯೇ ಇಲ್ಲ. ಅಂಬೇಡ್ಕರ್‌ ಬಗ್ಗೆ ಗೊತ್ತಿಲ್ಲ. ಕಾರ್ಯಕ್ರಮದಲ್ಲಿ ಆ ದಿನದ ವಿಷಯ ಬಿಟ್ಟು ದಂಧೆ ಶುರುಮಾಡಿಕೊಳ್ಳುವ ಆಸಾಮಿಯನ್ನು ಯಾರೇಕೆ ಕೊಲ್ಲಬೇಕು? ರಾಹುಲ್‌ ಗಾಂಧಿ ಬದುಕಿದ್ದಾರೆ, ಕೆ.ಎಸ್‌. ಭಗವಾನ್‌ ಬದುಕಿದ್ದಾರೆ, ಸಿನಿಮಾ ನಟ ಹುಚ್ಚಾ ವೆಂಕಟ್‌ ಬದುಕಿದ್ದಾರೆ, ಡಿಂಗ್‌ಚಾಕ್‌ ಪೂಜಾ ಬದುಕಿದ್ದಾರೆ, ನಿತ್ಯಾನಂದ ಸ್ವಾಮಿ ಬದುಕಿದ್ದಾರೆ… ಇವರೆಲ್ಲರಿಗೂ ಬದುಕುವುದಕ್ಕೆ ಇರುವ ಸಾಂವಿಧಾನಿಕ ಹಕ್ಕು ನಿಜಗುಣಾನಂದರಿಗೂ ಇದೆ.
ನಿಜಗುಣಾನಂದರೆ, ತಮ್ಮನ್ನು ಬಹಳ ಸೀರಿಯಸ್‌ ಆಗಿ ಪರಿಗಣಿಸುವವರೂ ಯಾರೂ ಇಲ್ಲ. ನೀವು ಆಡುವ ಮಾತಿಗೆ ನಿಮ್ಮ ಜನರೇ ನಗುತ್ತಿದ್ದಾರೆಂದರೆ ತಮ್ಮ ಯೋಗ್ಯತೆ ತಿಳಿಯುತ್ತದೆ. ನಿಮ್ಮ ಭಾಷಣಗಳನ್ನು ಕೇಳಿ ನಗುವವರಲ್ಲಿ ನಾನೂ ಒಬ್ಬ.

ಇದೆಲ್ಲ ಬೂಟಾಟಿಕೆಗಳನ್ನು ಬಿಟ್ಟು ಒಳ್ಳೆಯ ಮನಸ್ಸಿನಿಂದ ಜಗತ್ತನ್ನು ನೋಡುವುದಕ್ಕೆ ಕಲಿಯಿರಿ. ಕಣ್ಣಿಗೆ ನೀಲಿ ಬಣ್ಣದ ಕನ್ನಡಕ ಹಾಕಿಕೊಂಡು ನೋಡಿದರೆ ಪ್ರಪಂಚವೆಲ್ಲ ನೀಲಿಯೇ ಕಾಣುತ್ತದೆ. ಹಾಗೆಯೇ, ಶುದ್ಧ ಮನಸ್ಸಿನಿಂದ ಪ್ರಸಾದವನ್ನು ಸ್ವೀಕರಿಸದಿದ್ದರೆ ಅಥವಾ ನೋಡದಿದ್ದರೆ ಅದು ಸಹ ವಿಷಯವಾಗಿಯೇ ಕಾಣುತ್ತದೆ. ನೀವೆಷ್ಟು ಬ್ರಾಹ್ಮಣರನ್ನು, ಹಿಂದೂಗಳನ್ನು ವಿರೋಧಿಸುತ್ತೀರೋ, ಅಷ್ಟೇ ದೊಡ್ಡ ಗಾತ್ರದಲ್ಲಿ ಅವರು ರಾಕ್ಷಸರಂತೆ ಕಾಣುತ್ತಾರೆ. ಜಿಹಾದಿಗಳಿಗೆ ಕಾಫಿರರು ಹೇಗೆ ಕಾಣಿಸುತ್ತಾರೋ, ಹಾಗೆಯೇ ನಾವೆಲ್ಲ ನಿಮಗೆ ಕಾಣುತ್ತಿದ್ದೇವೆ. ಆದರೂ ನಾವು ನಿಮ್ಮನ್ನು ಒಪ್ಪಿಕೊಳ್ಳುತ್ತೇವೆ. ಏಕೆಂದರೆ, ನಿಮ್ಮನ್ನು, ನಿಮ್ಮ ಸಮುದಾಯವನ್ನು ನಾವು ಬೈಯಲಾಗುವುದ್ಲಿಲ. ಏಕೆಂದರೆ ಅದು ಸಂವಿಧಾನ ವಿರೋಧಿಯಾಗುತ್ತದೆ/ ಅಪರಾಧವಾಗುತ್ತದೆ. ನೀವೆಷ್ಟು ಬೈಯುತ್ತೀರೋ ನಮಗಷ್ಟು ಮಜಾ ಸಿಗುತ್ತದೆ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya