ರಾಜ ಬದಲಾದರೂ ರಾಗಿ ಬೀಸೋದು ತಪ್ಪಲ್ಲ ಎಂಬ ಮಾತನ್ನು ಈಗ ಹೊಸದಾಗಿ ಹೇಳಬಹುದಾದರೆ, ಕುಮಾರಣ್ಣನ ಸರ್ಕಾರ ಆದರೇನು, ನಿಷ್ಠಾವಂತ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ ತಪ್ಪಲ್ಲ ಎನ್ನಬಹುದು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸಬ್ ಇನ್ಸ್ಪೆಕ್ಟರ್ ನಿತ್ಯಾನಂದ ಗೌಡರನ್ನು ರಾಜ್ಯ ಸರ್ಕಾರ ಕುದುರೆಮುಖ ಠಾಣೆಗೆ ವರ್ಗಾವಣೆ ಮಾಡಿದೆ. ಸಿದ್ದಾಪುರದ ಸಿಂಗಂ ಎಂದೇ ಹೆಸರಾಗಿದ್ದ ನಿತ್ಯಾನಂದ ಗೌಡ, ಇನ್ನೂ ಸಿದ್ದಾಪುರ ಠಾಣೆಗೆ ಬಂದು ಬಹಳ ವರ್ಷಗಳೇನೂ ಆಗಿರಲಿಲ್ಲ. ಗಣೇಶ ಚತುರ್ಥಿಯ ಸಮಯದಲ್ಲಿ ಕಾಪು ಠಾಣೆಯಿಂದ, ಸಿದ್ದಾಪುರ ಪೊಲೀಸ್ ಠಾಣೆಗೆ ಬಂದಿದ್ದರು. ಆದರೆ ಬಂದು ಇನ್ನು 3 ತಿಂಗಳು ಸಹ ಸರಿಯಾಗಿ ಆಗಿಲ್ಲ, ಆಗಲೇ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಗೆ ಬರುವ ಕುದುರೆ ಮುಖ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದಾರೆ.
ಇಲ್ಲಿ ಬೇಸರ ಇರುವುದು ಅದಲ್ಲ. ಟಿ.ಪಿ. ಸೆನ್ಕುಮಾರ್ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್, ಡಿಜಿಪಿ ಹುದ್ದೆಯನ್ನು ಸಮರ್ಥವಗಿ ನಿರ್ವಹಿಸುವುದಕ್ಕೆ ಕನಿಷ್ಠ ಎಂದರೂ 2 ವರ್ಷವಾದರೂ ಬೇಕು ಎಂದು ತೀರ್ಪು ನೀಡಿದೆ. ಇನ್ನು ಎಸ್ಐಗಳನ್ನು ವರ್ಗಾವಣೆ ಮಾಡುವುದರಲ್ಲೂ ಸಾಕಷ್ಟು ನಿಯಮಗಳನ್ನು ಹಾಕಿದೆ. ಆದರೆ, ಇಲ್ಲಿ ಒಬ್ಬ ಎಸ್ಐಗೆ ತನ್ನ ವ್ಯಾಪ್ತಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೂ ಸಮಯ ಕೊಡದೇ ಎತ್ತಂಗಡಿ ಮಾಡಲಾಗಿದೆ.
ನಿತ್ಯಾನಂದ ಗೌಡರು ಸ್ವಲ್ಪ ಬೇಗವೇ ಸಿದ್ದಾಪುರದ ಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದರು. ಹಾಗಾಗಿಯೇ ಅವರನ್ನು ಎತ್ತಂಗಡಿ ಮಾಡಲಾಯಿತು ಎಂಬುದಕ್ಕೆ ಅವರು ಅಲ್ಲಿ ಪಡೆದಿರುವ ಹೆಸರೇ ಸಾಕ್ಷಿ. ಒಬ್ಬ ಎಸ್ಐ ಒಂದು ಕ್ಷೇತ್ರಕ್ಕೆ ಬಂದರೆ, ಆ ಕ್ಷೇತ್ರದಲ್ಲಿ ಯಾವ್ಯಾವ ರಾಜಕಾರಣಿಯದ್ದು ಮೇಲುಗೈ ಇದೆ, ಎಂತೆಂಥ ರೌಡಿಗಳಿದ್ದಾರೆ, ಎಂತೆಂಥ ಪ್ರಕರಣಗಳು ಅಲ್ಲಿ ಹೆಚ್ಚಾಗಿ ಸಂಭವಿಸುತ್ತವೆ, ಆ ಕ್ಷೇತ್ರದ ಸಮಸ್ಯೆ ಏನು ಮತ್ತು ಹಳೆ ಪ್ರಕರಣಗಳು ಏನೇನಿವೆ ಎಂದು ತಿಳಿದುಕೊಳ್ಳುವುದಕ್ಕೇ ಕಡಿಮೆ ಅವಧಿ ಎಂದರೂ, 10 ತಿಂಗಳಿನಿಂದ ಒಂದು ವರ್ಷ ಬೇಕು.
ಆದರೆ, ನಿತ್ಯಾನಂದ ಗೌಡರು ಎಲ್ಲ ಪೊಲೀಸರ ಹಾಗಲ್ಲ ನೋಡಿ. ಕಚೇರಿಗೆ ಬಂದರಷ್ಟೇ ಕರ್ತವ್ಯ ಅಲ್ಲ, 24 ಗಂಟೆಯೂ ತನ್ನ ಕ್ಷೇತ್ರದ ಬಗ್ಗೆ ಗಮನಹರಿಸುತ್ತಲೇ ಇದ್ದರು. ಪರಿಣಾಮ ಸಿದ್ದಾಪುರದ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಹಬ್ಬಿದ್ದ ಅಕ್ರಮ ಸಾರಾಯಿ ಮಾರಾಟ, ಮಟ್ಕಾ ದಂಧೆ ಮತ್ತು ಇಸ್ಪೀಟ್ ವ್ಯವಹಾರಗಳನ್ನು ಬಹುತೇಕ ಬಂದ್ ಮಾಡಿದ್ದರು.
ಇಲ್ಲಿನ ಬಹುತೇಕ ಸಾರಾಯಿ ದಂಧೆಗಳು ಭೀಮನಂತಿರುವ ಕಾಂಗ್ರೆಸ್ ನಾಯಕನ ವಶದಲ್ಲಿದ್ದವು. ಮಟ್ಕಾ ಮತ್ತು ಇಸ್ಪೀಟು ದಂಧೆಗಳು ಬಿಜೆಪಿ ನಾಯಕನ ವಶದಲ್ಲಿ. ಇವರು ಬಂದ ಮೇಲೆ ಸಿದ್ದಾಪುರ ಠಾಣೆಯ ಮುಂದೆ ದಾಖಲೆಗಳಿಲ್ಲದ ಹತ್ತಾರು ಬೈಕ್ಗಳು, ಕಾರ್ಗಳು ಬಿದ್ದಿರುತ್ತಿದ್ದವು. ಸಿದ್ದಾಪುರ ಪೊಲೀಸ್ ಠಾಣೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕೇವಲ ಎರಡೇ ತಿಂಗಳಿನಲ್ಲಿ, 20 ಅಕ್ರಮ ಸಾರಾಯಿ ಪ್ರಕರಣ, 10 ಇಸ್ಪೀಟ್ ಪ್ರಕರಣ, 10 ಮಟ್ಕಾ ದಂಧೆ ಮತ್ತು 2 ಗೋವು ಕಳ್ಳತನ ಪ್ರಕರಣಗಳನ್ನೊಳಗೊಂಡ 42 ಸುಮೋಟೊ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು ಇದೇ ಎಸ್ಐ ನಿತ್ಯಾನಂದ ಗೌಡ.
ಭೀಮನಂತಿರುವ ಕಾಂಗ್ರೆಸ್ ನಾಯಕನ ಒತ್ತಡವಿದ್ದರೂ, ಅವರದ್ದೇ ಸಾರಾಯಿ ಅಡ್ಡಾಗಳ ಮೇಲೆ ದಾಳಿ ಮಾಡಿದ್ದು ಭೀಮನಿಗೆ ಉರಿದುಹೋಗಿತ್ತು. ಪರಿಣಾಮ, ಕುಮಾರಸ್ವಾಮಿ ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ.
ಇದೇ ಮೊದಲು ಇಂಥ ಪ್ರಕರಣ ಆಗಿದ್ದಿದ್ದರೆ, ಭೀಮನ ವಿರೋಧಿ ಎನ್ನಬಹುದಿತ್ತು. ಆದರೆ, ಇವರು ಕಾಪುವಿನಲ್ಲಿ ಉಗ್ರವಾಗಿ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಿದ್ದರು. ಅವರ ಅವಧಿಯಲ್ಲಿ ನೂರಾರು ಕಸಾಯಿಖಾನೆಗಳನ್ನು ಪತ್ತೆ ಹಚ್ಚಿ ರುಚಿ ತೋರಿಸಿದ ಮೇಲೆ ಅಲ್ಲಿನ ರಾಜಕಾರಣಿಗಳು ಗೌಡರ ವಿರುದ್ಧ ನಿಂತಿದ್ದರು.
ಸಾಲು ಸಾಲು ಗೋವುಗಳನ್ನು ಕೊಲ್ಲುವ ಸುದ್ದಿ ಬಂದರೆ ಮಾತ್ರ ನಿತ್ಯಾನಂದ ಗೌಡರು ಹೋಗುವುದು ಎಂದೇನೂ ಇಲ್ಲ. 2017ರ ಅಕ್ಟೋಬರ್ 22ರಂದು ಒಂದು ಅನಾಮಧೇಯ ಕರೆ ಕಾಪು ಪೊಲೀಸ್ ಠಾಣೆಗೆ ಬಂದಿತ್ತು. ಅದರಿಂದ ಸಿಕ್ಕ ಮಾಹಿತಿ ಮೇಲೆ ಒಂದು ಅಕ್ರಮ ಕಸಾಯಿಖಾನೆಗೆ ಹೋಗಿ, ಇನ್ನೇನು ಹಲಾಲ್ ಕಟ್ ಆಗುವುದರಲ್ಲಿದ್ದ ಮೂರು ಕರುಗಳನ್ನು ಬಚಾವ್ ಮಾಡಿ ಅವುಗಳನ್ನು ನೀಲಾವರ ಗೋ ಶಾಲೆಗೆ ಬಿಟ್ಟು ಬಂದಿದ್ದಾರೆ.
ಇಲ್ಲಿನ ರಾಜಕಾರಣಿಗಳಿಗೆ ಅವರು ಸಿಂಹಸ್ವಪ್ನವಾಗಿದ್ದು, ಬಹಳ ವರ್ಷಗಳಿಂದೇನೂ ಅಲ್ಲ. ಕೇವಲ ಹತ್ತು ತಿಂಗಳಲ್ಲಿ ತಾನೆಂಥ ಅಧಿಕಾರಿ ಎಂದು ರಾಜಕಾರಣಿಗಳಿಗೆ ತೋರಿಸಿದ್ದರು.
ಸಿದ್ದಾಪುರಕ್ಕೆ ಬರುವುದಕ್ಕಿಂತ ಮುಂಚೆ ಅವರನ್ನು ಉಡುಪಿ ನಗರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ತೇನ ವಿನಾ ತೃಣಮಪಿ ನ ಚಲತಿ(ಅವನಿಲ್ಲದೇ(ದೇವರು) ಹುಲ್ಲುಕಡ್ಡಿಯೂ ಚಲಿಸುವುದಿಲ್ಲ) ಎಂಬ ಕುವೆಂಪುರವರ ಭಾವಗೀತೆಯಂತೆ, ಉಡುಪಿ ನಗರ ಠಾಣೆಗೆ ದೇವ ‘ಪ್ರಮೋದ ’ ವಿನಾ ತೃಣಮಪಿ ನ ಚಲತಿ ಎಂಬಂತಿದೆ ಎಂದು ಜನರೇ ಮಾತಾಡಿಕೊಳ್ಳುತ್ತಿದ್ದಾರೆ.
ಕೃಷ್ಣನ ಕೃಪಾಕಟಾಕ್ಷ ಹೇಗಿತ್ತೆಂದರೆ, ಉಡುಪಿ ಠಾಣೆಯಲ್ಲಿ ರಿಪೋರ್ಟ್ ಮಾಡಿಕೊಳ್ಳುವುದಕ್ಕೇ ಬಿಡಲಿಲ್ಲ. ಅಲ್ಲಿಂದ 15 ದಿನ ರಜೆ ತೆಗೆದುಕೊಳ್ಳುವುದಕ್ಕೆ ಆದೇಶ ಬಂತು ನಿತ್ಯಾನಂದ ಗೌಡರಿಗೆ. ಹೀಗೆ ರಜೆ ಮುಗಿಸಿ, ಎಸ್ಪಿ ಕಚೇರಿಯಲ್ಲೂ ಕೆಲಸವಿಲ್ಲದೇ ಕಾಲ ಕಳೆದ ಎಸ್ಐ ನಿತ್ಯಾನಂದ ಗೌಡರನ್ನು ಸಿದ್ದಾಪುರಕ್ಕೆ ವರ್ಗಾವಣೆ ಮಾಡಿದ್ದರು. ಗಣೇಶ ಹಬ್ಬದ ಹೊತ್ತಿಗೆ ಬಂದ ಗೌಡರು ದೀಪಾವಳಿ ಮುಗಿಸಿ ಈಗ ಕುದುರೆಮುಖ ಠಾಣೆಗೆ ವರ್ಗಾವಣೆಯಾಗಿದ್ದಾರೆ.
ಸಹಜವಾಗಿ ವರ್ಗಾವಣೆ ಆದೇಶ ಬಂದಾಗ ಒಂದಷ್ಟು ದಿನ ಸಮಯ ಇರುತ್ತದೆ. ಯಾವತ್ತಿನಿಂದ ಮತ್ತೊಂದು ಠಾಣೆಯಲ್ಲಿ ಹಾಜರಿರಬೇಕು ಎಂಬ ಆದೇಶ ಬರುವುದಕ್ಕೆ ತಡವಾಗುತ್ತದೆ. ಆದರೆ, ನಿತ್ಯಾನಂದ ಗೌಡರ ವಿಷಯದಲ್ಲಿ ಮಾತ್ರ ಅದೆಲ್ಲ ತಡವೇ ಆಗಲಿಲ್ಲ.
ಏಕೆಂದರೆ, ಸಾರಾಯಿ ದಂಧೆ ಮತ್ತೊಮ್ಮೆ ಶುರು ಮಾಡುವುದಕ್ಕೆ ಸಾರಾಯಿ ಭೀಮ, ಮತ್ತೆ ನಾಯಕ ಆಗುವ ‘ವಸಂತ’ ಕಾಲಕ್ಕೆ ಕಾಯುತ್ತಿದ್ದ. ವರ್ಗಾವಣೆ ಮಾಡಿದ್ದೀರಿ, ಆದಷ್ಟು ಬೇಗ ಹೊರ ಕಳಿಸಿ ಎಂದು ಕಿವಿ ಚುಚ್ಚಿದ್ದ ಪರಿಣಾಮ, ವರ್ಗಾವಣೆ ಆದೇಶ ಬಂದ ಎರಡೇ ದಿನಕ್ಕೆ ನಿತ್ಯಾನಂದ ಗೌಡರಿಗೆ ಠಾಣೆ ಖಾಲಿ ಮಾಡುವುದಕ್ಕೂ ಫೋನ್ ಮೂಲಕ ಆದೇಶ ಬಂತು.
ವರ್ಗಾವಣೆ ಆದದ್ದು ಎಲ್ಲಿಗೆ? ಕುದುರೆಮುಖ ಠಾಣೆಗೆ. ಪೊಲೀಸ್ ಇಲಾಖೆಗೆ ಕೆಲವೊಮ್ಮೆ ಬುದ್ಧಿವಂತಿಕೆ ಹೆಚ್ಚಾದರೆ ಏನಾಗುತ್ತದೆ ಎಂಬುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ ಕೇಳಿ. ಕುರುರೆಮುಖ ಪೊಲೀಸ್ ಠಾಣೆಯಿಂದ ನಿತ್ಯಾನಂದ ಗೌಡರ ಮನೆ ಬಹಳ ಹತ್ತಿರದಲ್ಲೇ ಇದೆ. ಅಂದರೆ ಕುದುರೆಮುಖ, ನಿತ್ಯಾನಂದ ಗೌಡರ ಸ್ವಂತ ಊರು. ಬಹುಶಃ ಇದೇ ಅವರ ಸ್ವಂತ ಊರು ಎಂದು ಗೊತ್ತಿದ್ದಿದ್ದರೆ ಖಂಡಿತವಾಗಿಯೂ ಅವರಿಗೆ ಅಲ್ಲಿಗೆ ವರ್ಗಾವಣೆ ನೀಡುತ್ತಿರಲಿಲ್ಲವೇನೋ. ನಕ್ಸಲ್ ಪೀಡಿತ ಪ್ರದೇಶದಲ್ಲಿ ಅದೇನು ಪೌರುಷ ತೋರುತ್ತಾರೋ ನೋಡೋಣ ಎಂದು ಕೊಟ್ಟಿದ್ದಾರೆ. ಆದರೆ ಇಲ್ಲೇ ಪೊಲೀಸ್ ಇಲಾಖೆ ಅತಿ ಬುದ್ಧಿವಂತಿಕೆ ಮೆರೆದಿರುವುದು.
ಅದೇನೆಂದರೆ, ನಿತ್ಯಾನಂದ ಗೌಡರನ್ನು ಮತ್ತೊಮ್ಮೆ ವರ್ಗಾವಣೆ ಮಾಡುವಂತಾಗುತ್ತದೆ. ಚುನಾವಣಾ ಸಮಯದಲ್ಲಿ ಯಾವುದೇ ಪೊಲೀಸ್ ಅಧಿಕಾರಿಯೂ ತನ್ನ ಸ್ವಂತ ಊರಿನಲ್ಲಿ ಸೇವೆ ಸಲ್ಲಿಸುವಂತಿಲ್ಲ ಎಂಬ ನಿಯಮವಿದೆ. ಇನ್ನೇನು ಲೋಕಸಭಾ ಚುನಾವಣೆ ಬಂದೇ ಬಿಟ್ಟಿತು. ಹಾಗಾಗಿ ನಿತ್ಯಾನಂದ ಗೌಡರನ್ನು ಮತ್ತೊಮ್ಮೆ ವರ್ಗಾವಣೆ ಮಾಡಲೇಬೇಕು.
ನಕ್ಸಲ್ ಪೀಡಿತ ಪ್ರದೇಶದಲ್ಲಿ ಕೊಳೆಯಲಿ ಎಂಬ ಪ್ಲಾನ್ ಇದ್ದರೆ, ಅದು ವರ್ಕೌಟ್ ಆಗುವುದಿಲ್ಲ. ಏಕೆಂದರೆ ಬರುವ ಜನವರಿಯಲ್ಲೇ ನಿತ್ಯಾನಂದ ಗೌಡರು ಮತ್ತೊಮ್ಮೆ ವರ್ಗಾವಣೆ ಆಗಲಿದ್ದಾರೆ.
ಬೇಸರದ ಸಂಗತಿ ಏನೆಂದರೆ, ನಿತ್ಯಾನಂದ ಗೌಡರು ಈ ವರೆಗೂ ಅನೇಕ ದಲಿತ ಮಕ್ಕಳು ಸೇರಿದಂತೆ ಬಡವರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಈಗಲೂ ಮಾಡುತ್ತಾರೆ. ಸಿದ್ದಾಪುರದಲ್ಲಿ ಎಂಥ ಸಣ್ಣ ಪ್ರಕರಣವಾಗಿದ್ದರೂ ಸಹ ಜನರು ಬಂದು ಅದರ ಬಗ್ಗೆ ಈ ಸಿದ್ದಾಪುರದ ಸಿಂಗಂ ಬಳಿ ಬಂದೇ ದೂರು ನೀಡಿ ಹೋಗುತ್ತಾರೆ. ಇಂಥ ಅಧಿಕಾರಿಯನ್ನು ಕೆಲಸ ಮಾಡುವುದು ಬಿಟ್ಟು ಫುಟ್ಬಾಲ್ ಮಾಡಿಕೊಂಡಿದೆ ಕರ್ನಾಟಕ ಸರ್ಕಾರ. ಸಜ್ಜನರಿಗೆ ಪ್ರಿಯನಾದ ಅಧಿಕಾರಿ ಇಲ್ಲದಿದ್ದರೆ, ದುರ್ಜನರ ಸಾರಾಯಿ ಸೀಸೆಯೊಳಗೇ ಸರ್ಕಾರ ಮಾಡಬೇಕಾಗುತ್ತದೆ. ಎಚ್ಚರ!