ಬಿಲ್ಡಪ್‌ ಕೊಡುವುದೇ ಕನ್ನಡ ಸಿನಿಮಾಗಳ ಜೀವಾಳವಾದಾಗ…

ಇತ್ತೀಚೆಗೆ ನಮ್ಮ ಸಿನಿ ರಸಿಕರಿಗೆ ಕಾಡುವ ಎರಡು ಪ್ರಶ್ನೆಗಳೆಂದರೆ, ಕನ್ನಡದಲ್ಲೇಕೆ ಇಂಥ ಸಿನಿಮಾಗಳು ಬರುವುದಿಲ್ಲ?(ಮತ್ತೊಂದು ಭಾಷೆಯ ಉತ್ತಮ ಸಿನಿಮಾ ನೋಡಿದ ಮೇಲೆ) ಮತ್ತು ಅಯ್ಯೋ ನಮ್ಮ ಕನ್ನಡದವರೇಕೆ ಇಂಥ ಸಿನಿಮಾ ಮಾಡುತ್ತಾರೆ?(ಕನ್ನಡ ಸಿನಿಮಾಗಳನ್ನು ನೋಡಿದ ಮೇಲೆ). ಆದರೆ ಇತ್ತೀಚೆಗೆ ಬಿಡುಗಡೆಯಾಗಿರುವ ವಿಲನ್‌ ಚಿತ್ರ ನೋಡಿದ ಮೇಲೆ ‘ಸಿನಿಮಾ ಅಭಿಮಾನಿಗಳು ಯಾಕಪ್ಪಾ ಹಿಂಗಾಡ್ತಾರೆ’ ಎಂಬ ಹೊಸ ಅನಿಸಿಕೆ ಹುಟ್ಟಿರಲಿಕ್ಕೂ ಸಾಕು. ಹಾಗಿದೆ ಎಲ್ಲರ ವರ್ತನೆ.

ಬೇಕಾದರೆ, ವಿಲನ್‌ ಸಿನಿಮಾಗೆ ಹೋಗಿ ಬಂದವರ ಅಭಿಪ್ರಾಯ ಕೇಳಿ. ಸುದೀಪ್‌ ಚೆನ್ನಾಗಿ ನಟಿಸಿದ್ದಾರೆ. ಶಿವರಾಜ್‌ ಕುಮಾರ್‌ ಚೆನ್ನಾಗಿ ನಟಿಸಿದ್ದಾರೆ, ಹಾಡುಗಳು ಚೆನ್ನಾಗಿವೆ ಎಂಬಿತ್ಯಾದಿಗಳನ್ನು ಹೇಳುತ್ತಾರೆ. ಸಿನಿಮಾ ಕಥೆ ಹೇಗಿದೆ? ಎಂದು ಕೇಳಿದರೆ ಯಾರೂ ಮಾತನಾಡುವುದಕ್ಕೇ ಬರುತ್ತಿಲ್ಲ. ಆದರೂ ನಮ್ಮವರಿಗೆ ಸ್ಟಾರ್‌ ನಟರ ಸಿನಿಮಾ ಆಗಿದ್ದಕ್ಕೆ ಚೆನ್ನಾಗಿದೆ ಎನ್ನುವ ಚಟ.

ಕನ್ನಡ ಸಿನಿಮಾ ಯಾಕೆ ಹೀಗಾಗುತ್ತಿದೆ ಎಂಬ ಪ್ರಶ್ನೆ ಮೂಡುವುದು ಇಲ್ಲಿಂದಲೇ. ಕನ್ನಡ ಸಿನಿಮಾ ಮತ್ತು ಅಭಿಮಾನಿಗಳ ವರ್ಗ ಹೇಗೆ ಅಧೋಗತಿಯತ್ತ ಸಾಗುತ್ತಿದೆ? ಇತ್ತೀಚಿನ ಸಿನಿಮಾ, ಅಂದರೆ ವಿಲನ್‌ ಸಿನಿಮಾ ಬಿಡುಗಡೆಯಾದ ಮೇಲೆ ನಡೆದ ಘಟನೆಗಳನ್ನೊಮ್ಮೆ ನೋಡಿ:

*ಸಿನಿಮಾದಲ್ಲಿ ಸುದೀಪ್‌ ಶಿವರಾಜ್‌ ಕುಮಾರ್‌ಗೆ ಹೊಡೆದರು ಎಂಬುದಕ್ಕೇ ಶಿವರಾಜ್‌ ಕುಮಾರ್‌ ಅಭಿಮಾನಿಗಳು ಹೋರಾಟ ಮಾಡುತ್ತಿದ್ದಾರೆ. ಸ್ವತಃ ಶಿವರಾಜ್‌ ಕುಮಾರ್‌ ಅವರೇ ಹೇಳಿದರೂ ಕೇಳುತ್ತಿಲ್ಲ. ಇದೊಂಥರಾ ಸಿನಿಮಾಗೆ ಪ್ರಚಾರ.
* ಸಿನಿಮಾ ಗೆಲ್ಲಲಿ ಎಂದು ಕೋಣವನ್ನು ಬಲಿ ಕೊಟ್ಟು, ಪೋಸ್ಟರ್‌ಗೆ ರಕ್ತಾಭಿಷೇಕ ಮಾಡಿದರು. ಸಿನಿಮಾಗೆ ಮತ್ತೊಂದು ರೀತಿಯ ಪ್ರಚಾರ.
* ಸಿನಿಮಾ ಚೆನ್ನಾಗಿಲ್ಲ ಎಂಬಿತ್ಯಾದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದರೆ, ಅಭಿಮಾನಿಗಳು ಅಮ್ಮ, ಅಕ್ಕರಿಂದ ಪುರುಷ-ಸ್ತ್ರೀಯರ ಅಂಗಾಂಗಳನ್ನು ವರ್ಣಿಸಿ ಬಯ್ಯುತ್ತಾರೆ. ಕೆಲವು ಕಡೆ ಹೊಡೆತ ಬಿದ್ದಿರುವುದೂ ಇದೆ. ಅಲ್ಲೊಂಥರಾ ಸಿನಿಮಾ ಪ್ರಚಾರ.
* ನಮ್ಮ ಸಿನಿಮಾ ಬಗ್ಗೆ ಪ್ರೇಕ್ಷಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಪ್ರೇಮ್‌ ಪೊಲೀಸ್‌ ಸ್ಟೇಷನ್‌ ಮೆಟ್ಟಿಲು ಹತ್ತಿ ದೂರು ನೀಡಿದ್ದಾರೆ. ಅದು ಮಾಧ್ಯಮದಲ್ಲಿ ಪ್ರಸಾರವಾಯಿತು. ಅದೂ ಒಂದು ರೀತಿಯ ಸಿನಿಮಾ ಪ್ರಚಾರ.

ಒಟ್ಟಾರೆಯಾಗಿ ಸಿನಿಮಾದ ಕಥೆ, ಸಂಭಾಷಣೆ ಇತ್ಯಾದಿಗಳಿಂದ ಪ್ರಚಾರವಾಗಬೇಕಾದ್ದ ಸಿನಿಮಾ ಇಂಥ ಹುಚ್ಚುತನಗಳಿಂದಲೇ ಅಪಪ್ರಚಾರ ಪಡೆಯುತ್ತಿದೆ. ಇದು ಹೀಗಾದರೆ, ಪ್ರಾಮಾಣಿಕವಾಗಿ ಮನರಂಜನೆಗಾಗಿ ಸಿನಿಮಾ ನೋಡುವವರ ಪಾಡೇನು? ಬಿಲ್ಡಪ್‌ಗಳಿಲ್ಲದ ಸಿನಿಮಾವನ್ನು ಅವನು ನೋಡುವ ಹಾಗೇ ಇಲ್ಲದಂತೆ ಮಾಡಿರುವುದೇಕೆ?
ಇದೇಕೆ ಹೀಗೆ ಎಂಬುದಕ್ಕೆ ತೆಲುಗು ಚಿತ್ರೋದ್ಯಮದಿಂದ ಉತ್ತರ ಸಿಗುತ್ತದೆ. ಬಾಲಕೃಷ್ಣ ಅವರ ಸಮರಸಿಂಹ ರೆಡ್ಡಿ ಎಂಬ ಸಿನಿಮಾ ಬಿಡುಗಡೆಯಾದಾಗ 40 ಕುರಿಗಳನ್ನು ಕಡಿದು ಅದರ ತಲೆಯಿಂದ ಹಾರ ಮಾಡಿ ಹಾಕಿದ್ದರಂತೆ. ಇದಕ್ಕೆ ಪ್ರತ್ಯುತ್ತರವೆಂಬಂತೆ ಮೆಗಾಸ್ಟಾರ್‌ ಚಿರಂಜೀವಿಯವರ ಇಂದ್ರಾ ಸಿನಿಮಾದಲ್ಲಿ ಅಭಿಮಾನಿಗಳು 80 ಕುರಿ ಕಡಿದು ಅದರ ತಲೆಗಳಿಂದ ಹಾರ ಮಾಡಿ ಹಾಕಿದ್ದರು. ಇದನ್ನು ಕಂಡ ಬಾಲಕೃಷ್ಣ ಅಭಿಮಾನಿಗಳು, ಬಾಲಕೃಷ್ಣರ ಮತ್ತೊಂದು ಸಿನಿಮಾ ಬಿಡುಗಡೆಯಾದಾಗ ಅಭಿಮಾನಿಗಳು 120 ಕುರಿಗಳನ್ನು ಕಡಿದು ತಲೆಗಳ ಹಾರ ಮಾಡಿ ಹಾಕಿದ್ದರು.

ಸಿನಿಮಾ ಬರುವುದಕ್ಕಿಂತ ಮುಂಚೆಯೇ ಇಷ್ಟು ಕುರಿ ಕಡಿಯಬೇಕು ಎಂದು ನಿರ್ಧರಿಸಿರುವಾಗ, ಸಿನಿಮಾ ಹೇಗಿದ್ದರೂ ಅಭಿಮಾನಿಗಳಿಗೆ ಗಣನೆಗೆ ಬರುವುದೇ ಇಲ್ಲ. ಕಾಸು ಕೊಡು, ಸಿನಿಮಾ ನೋಡು, ಹೊರ ಬರುತ್ತಿದ್ದಂತೆಯೇ ಕುರಿ ಕಡಿ. ಅವರ ಅಭಿಮಾನಿ, ಇವರ ಅಭಿಮಾನಿ ಎಂದುಕೊಳ್ಳದೇ ಸಿನಿಮಾ ಅಭಿಮಾನಿ ಎಂದು ನೋಡುವುದಕ್ಕೇ ಆಗುವುದಿಲ್ಲ.

ಇದರಿಂದೇನಾಗುತ್ತದೆ? ಒಂದು ಸ್ಟೇಜ್‌ನಲ್ಲಿ ನಿಂತು ಪ್ರೇಕ್ಷರನ್ನು ಎರಡು ಭಾಗ ಮಾಡಿ ಅವರ ವಿರುದ್ಧ ಇವರನ್ನು, ಇವರ ವಿರುದ್ಧ ಅವರನ್ನು ಬಿಡುವುದರಿಂದ, ಕಾರ್ಯಕ್ರಮದ ಆಯೋಜಕನಿಗೆ ಲಾಭ. ಹಾಗೇ, ವಿಲನ್‌ನಂಥ ಅನೇಕ ಸಿನಿಮಾಗಳು ಬಿಡುಗಡೆಯಾದಾಗ ಅಭಿಮಾನಿಗಳು ಹೊಡೆದಾಡಿ, ಸಿನಿಮಾ ಬಗ್ಗೆ ಮಾತಾಡುವುದರಿಂದ ಸಿನಿಮಾ ಬಿಡುಗಡೆಯಾಗಿ ನಾಲ್ಕೈದು ದಿನಕ್ಕೇ ಲಾಸ್‌ ಆಗದಷ್ಟು ಅಥವಾ ಲಾಭ ಮಾಡಿಕೊಳ್ಳುವಷ್ಟು ಹಣ ಸಂಗ್ರಹಿಸಿರುತ್ತದೆ. ಇದರ ಜತೆಗೆ ದರ ಹೆಚ್ಚಿಸಿ, ಕನ್ನಡ ಸಿನಿಮಾವನ್ನು ಬೆಳೆಸಿ ಎಂದರಂತೂ ಮುಗಿದೇ ಹೋಯಿತು. ನಿರ್ಮಾಪಕರಿಗೆ ಲಾಭ ಕಟ್ಟಿಟ್ಟ ಬುತ್ತಿ.

ಅಲ್ಲಿಗೆ ಆಗಿದ್ದೇನು? ಜನರ ಭಾವನೆಗಳಿಂದ ಸಿನಿಮಾದವರಿಗೆ ಲಾಭ. ಒಂದು ಉತ್ತಮ ಸಿನಿಮಾ ನಮ್ಮ ಚಿತ್ರರಂಗಕ್ಕೆ ಬಂತಾ? ಇಲ್ಲ. ಒಂದು ಹೊಸ ಪ್ರತಿಭೆಯ ಅನಾವರಣ ಆಯ್ತಾ? ಅದೂ ಇಲ್ಲ. ಜನರ ನೆನಪಲ್ಲೂ ಇರುವುದಿಲ್ಲ, ಒಳ್ಳೆಯ ಸಿನಿಮಾವೂ ಆಗಲಿಲ್ಲ ಎಂದರೆ, ಕನ್ನಡಿಗರು ಅಂಥ ಸಿನಿಮಾ ಮಾಡುವುದಾದರೂ ಯಾಕಾಗಿ?

ಧನುಶ್‌ ಅಭಿನಯದ ವಡಾ ಚೆನೈ ಎಂಬ ಸಿನಿಮಾದಲ್ಲಿ ಧನುಶ್‌ಗೆ ಒಂದು ಪಾತ್ರ ಸೂಳೆಮಗನೆ ಎಂದು ಬಯ್ದಾಗ ಚಿತ್ರಮಂದಿರದಲ್ಲಿ ಜನರೆಲ್ಲ ಏಯ್‌, ಏಯ್‌ ಯಾರಿಗ್‌ ಹೇಳ್ತಿದ್ಯಾ ಎಂದು ಬೊಬ್ಬಿರಿದಿದ್ದರು. ಆದರೆ ಹೊರಗೆ ಬಂದಾಗ ಎಲ್ಲರೂ ಅದನ್ನೆಲ್ಲ ಮರೆತು ಸಿನಿಮಾ ಸೂಪರ್‌ ಎಂದರು. ಹೋರಾಟ ಮಾಡುತ್ತಾ ಕೂರಲಿಲ್ಲ. ಕನ್ನಡದಲ್ಲಿ ಇಂಥದ್ದೇನಾದರೂ ಆಗಿದ್ದರೆ, ಅದೇ ಸಿನಿಮಾದ ಪಬ್ಲಿಸಿಟಿ ವಸ್ತುವಾಗಿಬಿಡುತ್ತಿತ್ತು.

ಬಾಹುಬಲಿ ಚಿತ್ರದಲ್ಲಿ ಪ್ರಭಾಸ್‌ ಸತ್ಯರಾಜ್‌ ತಲೆ ಮೇಲೆ ಕಾಲಿಡುವ ಸನ್ನಿವೇಶವೊಂದಿದೆ. ಆ ಸನ್ನಿವೇಶದ ಚಿತ್ರೀಕರಣ ಮಾಡುವಾಗ ಪ್ರಭಾಸ್‌ ಬಹಳ ಮುಜುಗರಕ್ಕೊಳಗಾಗಿದ್ದರಂತೆ. ಬೇಜಾರು ಮಾಡಿಕೊಳ್ಳುತ್ತಿದ್ದರಂತೆ. ಪ್ರತಿ ಸಲ ಆ್ಯಕ್ಷನ್‌ ಎಂದಾಗಲೂ ಸತ್ಯರಾಜ್‌ ತಲೆ ಮೇಲೆ ಕಾಲಿಡಲು ಮುಜುಗರ. ಶಾಟ್‌ ಸರಿಯಾಗಿ ಬರುತ್ತಿರಲಿಲ್ಲ. ಆಗ ಸ್ವತಃ ಸತ್ಯರಾಜ್‌ ಅವರು ಪ್ರಭಾಸ್‌ ಕಾಲನ್ನು ಎಳೆದುಕೊಂಡು ತಮ್ಮ ತಲೆಯ ಮೇಲೆ ಇಟ್ಟುಕೊಂಡರಂತೆ. ಇದರ ಬಗ್ಗೆ ಹಾಗೇ ಸುಮ್ಮನೆ ಒಂದು ಪ್ರೆಸ್‌ಮೀಟ್‌ನಲ್ಲಿ ಮಾತನಾಡುತ್ತಾ ಇಲ್ಲಿ ಪ್ರಭಾಸ್‌ ಬಾಹುಬಲಿ ಹಾಗೂ ನನ್ನದು ಬಾಹುಬಲಿ ಮನೆಯ ನಿಯತ್ತಿನ ಸೇವಕನ ಪಾತ್ರ. ಹಾಗಾಗಿ ಕಾಲನ್ನು ತಲೆಯ ಮೇಲೆ ಹೊತ್ತುಕೊಳ್ಳುವುದರಲ್ಲಿ ಅವಮಾನವಿಲ್ಲ ಎಂದಿದ್ದರು ಸತ್ಯರಾಜ್‌. ಯಾವ ಅಭಿಮಾನಿಗಳು ಚಿತ್ರ ಬಿಡುಗಡೆಯ ಮೊದಲು ಅಥವಾ ನಂತರ ಯಾವ ಗಲಾಟೆಯೂ ಮಾಡಲಿಲ್ಲ.

ತಮಿಳಿಗರು ಸಿನಿಮಾ ಪ್ರೇಮಿಗಳು ಎನ್ನುವುದಕ್ಕಿಂತ ಸಿನಿಮಾ ಹುಚ್ಚರು. ಶತಾಯಗತಾಯ ಎಲ್ಲ ತಮಿಳು ಸಿನಿಮಾ ನೋಡಿಯೇ ನೋಡುತ್ತಾರೆ. ಒಬ್ಬ ಕೂಲಿ ಮಾಡುವವನು ಸಹ, ದಿನಕ್ಕೆ 10 ರುಪಾಯಿ ಉಳಿಸಿ, ಮಲ್ಟಿಪ್ಲೆಕ್ಸ್‌ನಲ್ಲಿ ಮೊದಲ 3 ಸಾಲಿನಲ್ಲಿ ಕೂತು ಸಿನಿಮಾ ನೋಡಿ ಬರುವ ಉದಾಹರಣೆಯಿದೆ. ಅಂಥವರು ಸುಮ್ಮನಿದ್ದಾರೆ. ಆದರೆ ನಮ್ಮವರದ್ದೇ ಹಾರಾಟ.

ಮತ್ತೆ ಇದನ್ನೆಲ್ಲ ಕನ್ನಡಿಗರೇ ಪ್ರಶ್ನಿಸಿದರೆ, ಅವಾಚ್ಯ ಬಯ್ಗುಳ! ಬೇರೆ ಭಾಷೆಯವರು ಹೇಳಿದರಂತೂ ಅವರನ್ನು ಕನ್ನಡ ವಿರೋಧಿಯಾಗಿ ಮಾಡಿ ಪ್ರತಿಭಟನೆಯೂ ಮಾಡುತ್ತಾರೆ. ಕೊನೆಗೆ ಅಲ್ಲಿ ಆಗುವುದೂ ಒಂದು ರೀತಿಯ ಸಿನಿಮಾ ಪಬ್ಲಿಸಿಟಿ.
ಇಂಥವರ ಹಾವಳಿಯಿಂದ ಬೇರೆ ಭಾಷೆಯವರಿಗೆ ನಮ್ಮ ಸಿನಿಮಾ ನೋಡಿ ಎಂದರೆ ಅವರು ಹೇಳುವುದು ಒಂದೇ ಮಾತು. ಕನ್ನಡ ಸಿನಿಮಾಗಳು ಬೋರಿಂಗ್‌, ಅದರಲ್ಲಿ ಅವ್ನು ಇವ್ನಿಗೆ ಬಿಲ್ಡಪ್‌ ಕೊಡೋದು, ಇವ್ನು ಅವ್ನಿಗೆ ಬಿಲ್ಡಪ್‌ ಕೊಡೋದನ್ನು ನೋಡಕ್ಕೆ ನಾವ್ಯಾಕ್‌ ದುಡ್ಡು ಕೊಟ್ಟು ಸಿನಿಮಾ ನೋಡ್ಬೇಕು? ಒಳ್ಳೇ ಮೂವಿ ಬಂದ್ರೆ ನನ್‌ ಫ್ರೆಂಡ್ಸೇ ಹೇಳ್ತಾರೆ ಅದನ್ನೇ ನೋಡ್ತೀವಿ ಎನ್ನುತ್ತಾರೆ.

ಈ ಸ್ಥಿತಿಗೆ ನಾವೇ ಕಾರಣ ಅಲ್ಲವಾ? ಹೇಳಿ ಇತ್ತೀಚಿನ ಕನ್ನಡ ಸಿನಿಮಾಗಳು ಯಾವುದು ಚೆನ್ನಾಗಿ ಹೆಸರು ಮಾಡಿದೆ ಅಥವಾ ಯಾವುದು ಉತ್ತಮ ಚಿತ್ರ ಎಂದು ಹಾದಿಯಲ್ಲಿ ಹೋಗುವ ಒಬ್ಬನನ್ನು ಅಚಾನಕ್‌ ಆಗಿ ಕೇಳಿದರೆ ತಡಕಾಡುತ್ತಾನೆ. ಯಾಕಾಗಿ ಎಂದರೆ, ಅಂಥ ಒಳ್ಳೆಯ ಚಿತ್ರವೇ ಇಲ್ಲ. ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು, ಟಗರು ಇತ್ಯಾದಿ ಬಿಟ್ಟರೆ ಯಾವ ಸಿನಿಮಾ ಜನರ ಮನಸ್ಸು ಗೆದ್ದಿದೆ?

ಕನ್ನಡಿಗರು ಅಥವಾ ಹಿಂದಿವಾಲಾಗಳು ತಮಿಳು, ಮಲಯಾಳಂ ಮತ್ತು ಕೆಲವೊಮ್ಮೆ ತೆಲುಗು ಭಾಷೆಯಂಥ ಸಿನಿಮಾಗಳಿಗೆ ಭಾಷೆ ಅರ್ಥವಾಗದಿದ್ದರೂ ಹೋಗುತ್ತಾರೆ. ಸಬ್‌ ಟೈಟಲ್‌ ಇಟ್ಟರಂತೂ ಬಿಡುವುದೇ ಇಲ್ಲವೆನ್ನುವಷ್ಟು ಆಸಕ್ತಿ ತೋರುತ್ತಾರೆ. ಯಾಕೆಂದರೆ, ಅಲ್ಲಿನ ಕಥೆಗಳಲ್ಲೇ ಪ್ರೇಕ್ಷಕರನ್ನು ಹಿಡಿದಿಡುವ ತಾಕತ್ತು ಇದೆ. ಆದರೆ ಸ್ಯಾಂಡಲ್‌ವುಡ್‌ನಲ್ಲಿ, ಕನ್ನಡ ಸಿನಿಮಾಗಳು ಎನ್ನುವ ಕಾರಣಕ್ಕೆ ಬೆಳೆಸಿ, ಬಿಗ್‌ ಬಜೆಟ್‌ ಸಿನಿಮಾ ಎನ್ನುವುದಕ್ಕೆ ಬೆಳೆಸಿ, ನಿರ್ಮಾಪಕರು ತೋಪಾಗದಿರುವುದಕ್ಕೆ ಸಿನಿಮಾ ಬೆಳೆಸಿ, ದೊಡ್ಡ ನಟರಿದ್ದಾರೆ ಎಂಬುದಕ್ಕೆ ಬೆಳೆಸಿ ಎಂಬಂಥ ಹೀಗೆ ನೂರೈವತ್ತು ಕಾರಣ ಕೊಡುತ್ತಾರೆ. ಆದರೆ, ನಮ್ಮ ಕಥೆ ಚೆನ್ನಾಗಿದೆ ಎಂದು ಹೇಳುವವರೇ ಕಡಿಮೆ. ಕಥೆ, ಸಂಭಾಷಣೆ, ನಿರ್ದೇಶನ, ನಟನೆ ಚೆನ್ನಾಗಿದ್ದರೆ ಬೇರೆ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುವುದೇ ಬೇಡ. ಇದನ್ನು ತಮಿಳು, ಮಲಯಾಳಂ ಸಿನಿಮಾಗಳು ಅಳವಡಿಸಿಕೊಂಡಿದೆ.

ನಾಲ್ಕು ಗೋಡೆಗಳ ಮಧ್ಯೆ ಒಂದು ಅದ್ಭುತ ಸಿನಿಮಾವನ್ನು ಮಲಯಾಳಂ, ತಮಿಳಿನವರು ತೆಗೆಯಬಲ್ಲರು. ಆದರೆ ನಮ್ಮವರ ಕೈಲಿ ನಾಲ್ಕು ಗೋಡೆಗಳ ಮಧ್ಯವಯಸ್ಕರ ಚಿತ್ರ ತೆಗೆಯುವುದಕ್ಕೂ ಆಗುವುದಿಲ್ಲ. ಬಿಗ್‌ ಬಜೆಟ್‌ ಎಂದು ಸ್ವಿಜಲೆಂರ್‍ಡ್‌ಗೇ ಹೋಗಬೇಕು ಎನ್ನುತ್ತಾರೆ. ಇದೇ ನಮ್ಮ ಮತ್ತು ಬೇರೆ ಭಾಷೆಯ ಸಿನಿಮಾಗಳಿಗೆ ಇರುವ ವ್ಯತ್ಯಾಸ.
ಇಷ್ಟು ಹೇಳಿದ ಮೇಲೂ ನನಗೂ ಎಲ್ಲ ಪ್ರೇಕ್ಷಕರಂತೆಯೇ 96, ರಾತ್ಸಸನ್‌, ವಡಾ ಚೆನೈ, ರಾಝಿ, ಕರ್ವಾನ್‌, ಪರಮಾಣು, ಗೂಢಚಾರಿ, ವಿಕ್ರಂ ವೇದಾ, ಟಿಕ್‌ ಟಿಕ್‌ ಟಿಕ್‌ನಂಥ ಸಿನಿಮಾಗಳು ನಮ್ಮಲ್ಲಿ ಯಾಕೆ ಬರುವುದಿಲ್ಲ ಎಂಬ ಪ್ರಶ್ನೆ ಕೊನೆಗೂ ಪ್ರಶ್ನೆಯಾಗೇ ಉಳಿದಿದೆ. ಸಿನಿಮಾ ಬಿಡುಗಡೆಗೂ ಮುನ್ನ ಎಷ್ಟು ಕುರಿ ಕಡಿಯಬೇಕು? ಎಷ್ಟು ಕೋಣ ಬಲಿ ಕೊಡಬೇಕು ಎಂಬ ಲೆಕ್ಕಾಚಾರದಲ್ಲೇ ಮುಳುಗಿರುವ ಅಭಿಮಾನಿಗಳಿರುವವರೆಗೂ, ಕಥೆಗಿಂತ ಬಜೆಟ್‌ ಮುಖ್ಯ ಎಂಬ ಮನಸ್ಥಿತಿ ಇರುವ ನಿರ್ಮಾಪಕರಿರುವವರೆಗೂ, ಒಬ್ಬರಿಗೊಬ್ಬರು ಬಿಲ್ಡಪ್‌ ಕೊಡುವ ಪಾತ್ರ ಮಾಡಿಸುವ ನಿರ್ದೇಶಕರಿರುವವರೆಗೂ ಕನ್ನಡ ಸಿನಿಮಾ ಉದ್ಧಾರ ಆಗುವುದು ಅನುಮಾನ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya