ಜಿಹಾದಿಗಳೆದುರು ನಿಲ್ಲದ ಹಿಂದುಗಳೂ ಅಯ್ಯಪ್ಪನಿಗಾಗಿ ಒಗ್ಗಟ್ಟಾದರು!

ಶಬರಿಮಲೆಗೆ ಹೋಗುವ ಮತ್ತು ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳಿಗೆ 2018ರ ಸೆಪ್ಟಂಬರ್‌ 28ಅನ್ನು ಬಹುಶಃ ಮರೆಯಲಿಕ್ಕಿಲ್ಲ. ಏಕೆಂದರೆ, ಆ ದಿನದಂದೇ ಸುಪ್ರೀಂ ಕೋರ್ಟ್‌, ಮಹಿಳೆಯರಿಗೆ ಪ್ರವೇಶ ನೀಡಿದ್ದು ಕೋಟ್ಯಂತರ ಭಕ್ತರ ಮನಸ್ಸಿಗೆ ನೋವುಂಟು ಮಾಡಿತ್ತು.

ಭಕ್ತರಿಗೆ ದಿಕ್ಕೇ ತೋಚದಂತಾಗಿತ್ತು. ಇದರ ಬಗ್ಗೆ ಯಾರಾದರೂ ಬೆಂಬಲವನ್ನು ನೀಡುತ್ತಾರಾ ಎಂದು ಕಾದರು. ಯಾವುದೇ ಪ್ರಯೋಜನವಾಗಲಿಲ್ಲ. ಎಲ್ಲರೂ ಹೇಳುವುದು ಒಂದೇ ಮಾತು: ನಾವು ಸುಪ್ರೀಂ ಕೋರ್ಟ್‌ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ ಎಂದು. ಈ ತೀರ್ಪನ್ನು ಮರುಪರಿಶೀಲಿಸಲು ಮನವಿ ಮಾಡುತ್ತೇವೆ ಎಂಬ ಒಂದು ಮಾತೂ ಇಲ್ಲ.

ಸೆಪ್ಟಂಬರ್‌ 30, 2018ರಂದು ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಸೋಷಿಯಲ್‌ ಮೀಡಿಯಾ ಕಾಂಕ್ಲೇವ್‌ನಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಈಶಾನ್ಯ ರಾಜ್ಯಗಳ ಬಿಜೆಪಿ ಉಸ್ತುವಾರಿ ರಾಮ್‌ ಮಾಧವ್‌ ಜನರು ದೇವಸ್ಥಾನಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ‘ನಮ್ಮದು ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವದ ಸಾಮಾಜಿಕ ಜಾಲತಾಣ ನಮ್ಮಲ್ಲಿದೆ. ಅಲ್ಲಿ ಏನು ಬೇಕಾದರೂ ಅಭಿಪ್ರಾಯಗಳನ್ನು ಬರೆದುಕೊಳ್ಳಿ. ಆದರೆ ಸುಪ್ರೀಂ ಕೋರ್ಟ್‌ ಏನು ಹೇಳಿದೆಯೋ ಅದನ್ನು ಒಪ್ಪಿಕೊಳ್ಳಬೇಕು. ಮಹಿಳಾ ಪ್ರವೇಶದ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ನಾವು ಸ್ವಾಗತಿಸುತ್ತೇವೆ’ ಎಂದುಬಿಟ್ಟರು.

ಬೇರೆಲ್ಲ ಪಕ್ಷಗಳು ಕೇವಲ ಅಲ್ಪಸಂಖ್ಯಾತರು, ಎಡಚರರನ್ನು ಓಲೈಸುವುದರಲ್ಲಿ ನಿರತರಾಗಿದ್ದರೆ, ಬಹುಸಂಖ್ಯಾತರ ಪರ, ರಾಷ್ಟ್ರೀಯತೆಯ ಪರ ನಿಂತದ್ದು, ನಿಲ್ಲುತ್ತಿರುವುದು ಬಿಜೆಪಿ ಮಾತ್ರ. ಈ ಬೆಳವಣಿಗೆಗಳೆಲ್ಲ ಆದ ಮೇಲೆ ಜನ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಹಿಂದೂಗಳು ಒಗ್ಗಟ್ಟಾಗುವುದಿಲ್ಲ ನಿಜ. ಆದರೆ ತಾವು ಹಲವು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಪದ್ಧತಿಯನ್ನು ಕೈಬಿಡಬೇಕು ಎಂದು ಹೇಳಿದ್ದನ್ನು ಮಾತ್ರ ಅದೇಕೋ ಕೇರಳಿಗರು ಸಹಿಸಿಕೊಳ್ಳಲಿಲ್ಲ. ಇದರ ಪರಿಣಾಮ ನಿಧಾನವಾಗಿ ರಾಷ್ಟ್ರೀಯ ಆಂದೋಲನವಾಗುತ್ತಿದೆ.

ತೀರ್ಪು ಬಂದ ಬಳಿಕವೇ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾದವರು ಪಂದಳ ರಾಜರ ಕುಟುಂಬ. ತಕ್ಷಣವೇ ಸ್ಥಳೀಯರನ್ನು ಸಂಪರ್ಕಿಸಿತು. ಜತೆಗೆ, ದೇವಸ್ಥಾನಕ್ಕೆ ಮತ್ತು ಶಾಸ್ತ್ರಕ್ಕೆ ಅಪಚಾರ ಮಾಡಲಾಗಿದೆ ಎಂದು ಅಯ್ಯಪ್ಪ ಸ್ವಾಮಿಗೆ ತೊಡಿಸುವ ಆಭರಣಗಳನ್ನು ನಾವು ಕೊಡುವುದಿಲ್ಲ ಎಂದೂ ಪತ್ರಿಕಾ ಪ್ರಕಟಣೆ ಕೊಟ್ಟರು ಎಂಬ ಮಾತೂ ಓಡಾಡುತ್ತಿದೆ.

ಪಂದಳ ರಾಜರ ಕುಟುಂಬವು ಸಾಕಷ್ಟು ಸ್ಥಳೀಯರನ್ನು ಕರೆದು ಒಂದು ಭೇಟಿಯನ್ನು ಮಾಡಿತು. ಇದಕ್ಕೆ ಪೀಪಲ್‌ ಫಾರ್‌ ಧರ್ಮ ಎಂಬ ಸಂಘಟನೆಯನ್ನೂ ಸೇರಿಸಿಕೊಂಡಿತ್ತು. ಪೀಪಲ್‌ ಫಾರ್‌ ಧರ್ಮ ನಮಗೆ ತಿಳಿದಿಲ್ಲದಿರಬಹುದು. ಆದರೆ ರೆಡಿ ಟು ವೇಯ್ಟ್‌ ಎಂಬ ಆಂದೋಲನವಂತೂ ಕೇಳಿದ್ದೇವೆ. ಈ ಆಂದೋಲನದಲ್ಲಿ ಮಹಿಳೆಯರು ಮನೆಯಿಂದಲೇ ಒಂದು ವಿಡಿಯೊ ಮಾಡಿ, ನನಗೆ 50 ವರ್ಷ ಆಗುವವರೆಗೂ ಕಾಯುವುದಕ್ಕೆ ಸಿದ್ಧನಿದ್ದೇವೆ ಎಂದು ಹೇಳುತ್ತಾರೆ. ಇದನ್ನು ಶುರು ಮಾಡಿದ್ದ ದೊಡ್ಡ ಉದ್ಯಮಿ ಶಿಲ್ಪಾ ನಾಯರ್‌, ಅವರು ತಮ್ಮ ಪೀಪಲ್‌ ಫಾರ್‌ ಧರ್ಮ ಎಂಬ ಸಂಘಟನೆಯನ್ನು ಪ್ರತಿನಿಧಿಸುತ್ತಿದ್ದರು.

ಈ ಭೇಟಿಯಲ್ಲಿ ಎಲ್ಲರೂ ಸೇರಿ ಒಮ್ಮತದಿಂದ ಒಂದು ಸಮಿತಿಯನ್ನು ರಚಿಸುವ ನಿರ್ಧಾರಕ್ಕೆ ಬಂದರು. ಅದೇ ಅಯ್ಯಪ್ಪ ಧರ್ಮ ಸಂರಕ್ಷಣ ಸಮಿತಿ. ಆದರೆ ಇರುವ ಕಡಿಮೆ ಸಮಯದಲ್ಲಿ ಎಲ್ಲ ಕಡೆ ಪ್ರತಿಭಟನೆ ಮಾಡುವುದಿರಲಿ, ಜನರನ್ನು ಸೇರಿಸುವುದಕ್ಕೇ ಸಾಧ್ಯವಿರಲಿಲ್ಲ? ಆದರೆ ಅದನ್ನೆಲ್ಲ ಹೇಗೆ ಸಾಧಿಸಿದರು ಎಂಬುದೇ ಕುತೂಹಲಕಾರಿ.

ಸಮಿತಿಯ ಒಂದು ಭಾಗ ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಂಡಿತ್ತು. ಅಯ್ಯಪ್ಪ ಸ್ವಾಮಿ ದೇವಸ್ಥಾನದ ನಂಬಿಕೆಗಳು ಮತ್ತು ಆಚರಣೆಗಳಿಗೆ ಹೇಗೆ ಧಕ್ಕೆಯುಂಟಾಗಿದೆ ಎಂಬ ಸತ್ಯ ವಿಚಾರವನ್ನೇ ಯಾವುದೇ ಉತ್ಪ್ರೇಕ್ಷೆ ಇಲ್ಲದೇ ತಿಳಿಸಿದರು. ಇನ್ನು ಕೆಲವರು ಯಾವಾಗ ಎಲ್ಲಿ ಪ್ರತಿಭಟನೆ ಇರುತ್ತದೆ ಎಂದು ನಿಗದಿಪಡಿಸಿ ಅದರ ಪೋಸ್ಟರ್‌ ಮಾಡಿಸಿ, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟೆಲಿಗ್ರಾಂ, ಟ್ವಿಟರ್‌, ಇನ್ಸ್‌ಟಾಗ್ರಾಂ ಸೇರಿದಂತೆ ಎಲ್ಲ ರೀತಿಯ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಹಂಚಲು ಶುರುವಿಟ್ಟುಕೊಂಡರು. ಜನರು ಜಾಗ್ರತರಾಗುತ್ತಾ ಬಂದರು. ನಮ್ಮ ದೇವಸ್ಥಾನವು ಎತ್ತ ಸಾಗುತ್ತಿದೆ ಎಂಬುದು ಅರಿವಾಗತೊಡಗಿತು.
ಮತ್ತೊಂದು ಕಡೆಯಿಂದ ಇನ್ನಷ್ಟು ಜನರನ್ನು ಪ್ರೇರೇಪಿಸಿದ್ದು ಗುರು ಸ್ವಾಮಿಗಳು.

18 ವರ್ಷ ವ್ರತ ಮಾಡಿ, ಶಬರಿಮಲೆಗೆ ಹೋಗಿ ಬರುವವರಿಗೆ ಗುರು ಸ್ವಾಮಿಗಳು ಎನ್ನುತ್ತಾರೆ. ಅಯ್ಯಪ್ಪ ದೇವಸ್ಥಾನ ನಡೆದುಕೊಳ್ಳುವುದೇ ಗುರು-ಶಿಷ್ಯ ಪದ್ಧತಿಗೆ ಅನುಸಾರವಾಗಿ. ಹಾಗಾಗಿ ಯಾರಾದರೂ ವ್ರತ ಮಾಡಿ ದೇವಸ್ಥಾನಕ್ಕೆ ಹೋಗಬೇಕಾದರೆ, ಗುರು ಸ್ವಾಮಿಯ ಬಳಿ ಆಶೀರ್ವಾದ ಪಡೆಯುವುದು ವಾಡಿಕೆ. ಇಂಥ ನೂರಾರು ಗುರು ಸ್ವಾಮಿಗಳ ನೇತೃತ್ವದಲ್ಲಿ ಸಾವಿರಾರು ಭಕ್ತಾದಿಗಳು ಒಟ್ಟಾದರು. ಭಕ್ತರು ಅವರ ಕುಟುಂಬ ಸ್ನೇಹಿತರಿಗೂ ತಿಳಿಸಿದರು.

ಪರಿಣಾಮ ಏನಾಯಿತೆಂದರೆ, ಅಕ್ಟೋಬರ್‌ 2ರಂದು ಪಂದಳದಲ್ಲಿ ಮಹಿಳೆಯರೇ ಲಕ್ಷ ಸಂಖ್ಯೆಯಲ್ಲಿ ಸೇರಿ, ರಾಜ್ಯ ಹೆದ್ದಾರಿ-ರಾಷ್ಟ್ರೀಯ ಹೆದ್ದಾರಿ ಒಳಗೊಂಡು ಹತ್ತಾರು ರಸ್ತೆಗಳನ್ನು ತಡೆದು ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳಾ ಪ್ರವೇಶ ನಿಷೇಧಿಸಿ ಎಂದು ಪ್ರತಿಭಟಿಸಿದರು. ಮಳೆ ಬರುತ್ತಿದ್ದರೂ ಕೊಡೆ ಹಿಡಿದು ರಸ್ತೆಗೆ ಬಂದಿದ್ದಾರೆ ಎಂದರೆ, ಅವರ ಎದೆಯೊಳಗಿನ ಜ್ವಾಲೆಯ ಪ್ರಖರತೆ ಅರ್ಥವಾದೀತು. ಯಾವ ಮಹಿಳೆಯರಿಗೆ ಪ್ರವೇಶ ಸಿಗಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತೋ, ಅದೇ ಮಹಿಳೆಯರು ಕೇರಳ ಇತಿಹಾಸದಲ್ಲೇ ಮೊದಲ ಬಾರಿ ದಾಖಲೆಯ ಸಂಖ್ಯೆಯಲ್ಲಿ ಮೆರವಣಿಗೆ ಮಾಡಿ, ಮಹಿಳಾ ಪ್ರವೇಶ ನಿಷೇಧಿಸಿ ಎನ್ನುತ್ತಿದ್ದರು. ಈ ಪ್ರತಿಭಟನೆಯಲ್ಲಿ ಯಾರೊಬ್ಬರೂ ಯಾರ ವಿರುದ್ಧವೂ ಘೋಷಣೆ ಹಾಕಿಲ್ಲ, ಹಾರಾಟ ಚೀರಾಟಗಳಿರಲಿಲ್ಲ. ಕೇವಲ ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುವುದು ನಡೆಯುತಿತ್ತು. ಇದೇ ಪ್ರತಿಭಟನೆ.

ನಾವು ಇಲ್ಲಿ ಗಮನಿಸಬೇಕಾದ ಸಂಗತಿಯೇನೆಂದರೆ, ತೀರ್ಪು ಬಂದ ಮೂರೇ ದಿನದಲ್ಲಿ ಲಕ್ಷ ಜನರು ಒಟ್ಟು ಸೇರಿ ಶಾಂತಿಯುತ ಪ್ರತಿಭಟನೆಗೆ ಇಳಿದದ್ದು. ಎಲ್ಲಾದರೂ ಇಷ್ಟು ಒಗ್ಗಟ್ಟು ಸಾಧ್ಯವಿದೆಯಾ?
ಪ್ರತಿಭಟನೆಯ ಕಾವು ಕೇರಳದಿಂದ ಎಲ್ಲ ಕಡೆಯೂ ಹಬ್ಬಲು ಶುರುವಾಗಿತ್ತು. ಪರಿಣಾಮ ಚಂಗನ್‌ಶೇರಿಯಲ್ಲಿ ನಡೆದ ನಾಮಜಪ ಯಾತ್ರೆಯಲ್ಲಿ ಪಂದಳಕ್ಕಿಂತ ಹೆಚ್ಚು ಜನರು ಸೇರಿದರು. ಗುರುವಾಯೂರು, ತಿರುವನಂತಪುರಂ, ಎರ್ನಾಕುಲಂ, ಪಾಲಕ್ಕಾಡ್‌ನ ಜತೆಗೆ ಇಡೀ ಕೇರಳ ಜಪಿಸಿದ್ದು ಒಂದೇ ಮಂತ್ರ. ಸ್ವಾಮಿಯೇ ಶರಣಂ ಅಯ್ಯಪ್ಪ.ಇದಾದ ಮೇಲೆ ಹೈದರಾಬಾದ್‌, ಚೆನೈ, ದೆಹಲಿ, ಮುಂಬೈ ಸೇರಿದಂತೆ ಬೆಂಗಳೂರಿನಲ್ಲೂ ಒಂದೇ ದಿನ ಮೂರ್ನಾಲ್ಕು ಏರಿಯಾಗಳಲ್ಲಿ ನಾಮಜಪ ಯಾತ್ರೆ ನಡೆಯಿತು.

ಪ್ರತಿಭಟನೆ ಎಂದರೆ ಎಲ್ಲ ಕಡೆಯಿಂದಲೂ ಮಾಡಿದರೆ ಮಾತ್ರ ಅದಕ್ಕೆ ಬೆಲೆ. ಈ ಸತ್ಯವನ್ನು ಅರಿತ ಹಿಂದೂ ಐಕ್ಯ ವೇದಿಯ ರಾಜ್ಯಾಧ್ಯಕ್ಷೆ ಕೆ. ಪಿ. ಶಶಿಕಲಾ ಅವರು ಒಂದು ವಿನೂತನ ಪ್ರತಿಭಟನೆಗೆ ಕರೆ ಕೊಟ್ಟರು. ನಾವೆಲ್ಲ ದೇವಸ್ಥಾನಕ್ಕೆ ಹೋದಾಗ ಹುಂಡಿಗಳಲ್ಲಿ ಹಣ ಹಾಕುವುದು ವಾಡಿಕೆ. ಆದರೆ ನಾವು ಪ್ರತಿ ಬಾರಿ ದೇವಸ್ಥಾನಕ್ಕೆ ಹೋದಾಗಲೂ ಹಣದ ಬದಲಿಗೆ ಒಂದೊಂದು ಚೀಟಿಯಲ್ಲಿ ಸ್ವಾಮಿ ಶರಣಂ ಎಂದು ಬರೆದು ಹಾಕೋಣ. ದೇವಸ್ಥಾನಕ್ಕೆ ಆದಾಯ ಕೊಡುವವರೂ ಭಕ್ತರೇ, ನಮ್ಮ ನಂಬಿಕೆಯನ್ನು ಗೌರವಿಸಿ ಪಾಲಿಸಬೇಕಾದ್ದು ದೇವಸ್ಥಾನ ಮಂಡಳಿ ಮತ್ತು ಸರ್ಕಾರದ ಕೆಲಸ. ಅವರು ನಮ್ಮ ನಂಬಿಕೆಗೆ ಧಕ್ಕೆ ತರಬಹುದಾದರೆ, ನಾವೇಕೆ ಹುಂಡಿಗೆ ಹಣ ಹಾಕಬೇಕು ಎಂಬುದು ಅವರ ವಾದ. ಜನರಿಗೆ ಇದೂ ಹೌದೆನಿಸಿತು. ಕಂಡ ಕಂಡ ದೇವಸ್ಥಾನಕ್ಕೆಲ್ಲ ಹೋಗಿ ಸ್ವಾಮಿ ಶರಣಂ ಎಂದು ಚೀಟಿ ಬರೆದು ಹಾಕಿದರು. ಕೇರಳ ಸರ್ಕಾರದ ಸ್ಥಿತಿ ಇಲ್ಲಿಗೆ ಹೇಗಾಗಿತ್ತೆಂದರೆ, ಏನಾದರೂ ಮಾಡಿ ಇದನ್ನು ತಡೆಯಬೇಕು ಎಂಬಂತಾಗಿತ್ತು. ಆದರೇನು ಮಾಡುವುದು? ಭಕ್ತರು ಹಣ ಹಾಕುವುದು ಸ್ವಯಂ ಪ್ರೇರಿತವಾಗಿ. ಹಣ ಹಾಕಿ ಎಂದು ಹೇಳುವ ಹಕ್ಕು ಸರ್ಕಾರಕ್ಕಿಲ್ಲ. ಭಕ್ತರು ಏನು ಮಾಡುತ್ತಿದ್ದರೂ ಅದನ್ನು ನೋಡಿಕೊಂಡು ಸುಮ್ಮನಿರಬೇಕು ಇಲ್ಲವಾದರೆ, ಶಬರಿಮಲೆಗೆ ಮಹಿಳಾ ಪ್ರವೇಶವನ್ನು ತಡೆಯುವಂತೆ ಸುಗ್ರೀವಾಜ್ಞೆಗೆ ಮೊರೆ ಹೋಗಬೇಕು ಎಂಬ ಎರಡೇ ದಾರಿಗಳಿತ್ತು.

ಕೇರಳದ ಪಿಣರಾಯಿ ವಿಜಯನ್‌ ಸರ್ಕಾರವು ಈ ಬಗ್ಗೆ ಚರ್ಚೆ ಮಾಡಲು ರಾಜರ ಕುಟುಂಬವು ಸರ್ಕಾರದ ಬಳಿಯೇ ಬರುವಂತೆ ಕೇಳಿಕೊಂಡಿತ್ತು. ಯಾವುದೇ ಸುಪ್ರೀಂಕೋರ್ಟ್‌ ಆದೇಶದ ಅನುಷ್ಠಾನಕ್ಕೆ ಕಾಲಾವಕಾಶವಿರುತ್ತದೆ. ಆದರೆ, ಕೋರ್ಟ್‌ ತೀರ್ಪು ಬಂದ ಕ್ಷಣದಿಂದಲೇ ಶಬರಿಮಲೆಯಲ್ಲಿ ಮಹಿಳೆಯರು ಹೋಗುವುದಕ್ಕೆ ವ್ಯವಸ್ಥೆ ಮಾಡುವುದಕ್ಕೆ ಶುರು ಮಾಡಿಕೊಂಡಿರುವುದು ಕಮ್ಯುನಿಸ್ಟ್‌ ಸರ್ಕಾರ. ಎಲ್ಲಕ್ಕಿಂತ ಮೇಲಾಗಿ, ಇದೇ ಕಮ್ಯುನಿಸ್ಟ್‌ ಸರ್ಕಾರ, ದೇವಸ್ಥಾನದ ಮಂಡಳಿಗೆ ಮುಸ್ಲಿಂ, ಕ್ರಿಶ್ಚಿಯನ್‌, ಸಿಖ್‌ ಯಾರನ್ನಾದರೂ ನೇಮಕ ಮಾಡಿಕೊಳ್ಳಬಹುದು ಎಂಬ ಕಾನೂನನ್ನು ತಂದಿತ್ತು!

ಹಾಗಾಗಿ, ತೀರ್ಪು ಬರುವುದಕ್ಕಿಂತ ಮುಂಚೆ ಮಾತಿಗೆ ಕರೆದಿದ್ದರೆ ಬರುತ್ತಿದ್ದೆವು, ಆದರೆ ಈಗ ಬರುವುದಿಲ್ಲ ಎಂದು ರಾಜರ ಕುಟುಂಬವು, ಕಮ್ಯುನಿಸ್ಟರನ್ನು ನಾವು ಎಲ್ಲಿ ಇಟ್ಟಿದ್ದೇವೆ ಎಂದು ಅವರಿಗೆ ಮನದಟ್ಟು ಮಾಡಿಕೊಟ್ಟಿತು.

ಅಲ್ಲಿನ ಜನರ ಭಕ್ತಿಯನ್ನು ಕೆಣಕಿದರೆ, ಏನಾಗುತ್ತದೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆಯಷ್ಟೇ. ಕೇರಳ ಹಿಂದೂ ಪಬ್ಲಿಕ್‌ ಪ್ಲೇಸಸ್‌ ವರ್ಷಿಪ್‌ ಆ್ಯಕ್ಟ್ನಲ್ಲಿ ರೂಲ್‌ 3ಬಿಯನ್ನು ಕೋರ್ಟ್‌ ತೆಗೆದು ಹಾಕಿದೆ. ಅಂದರೆ, ಯಾರು ಹೇಗೆ ಬೇಕಾದರೂ ದೇವಸ್ಥಾನಕ್ಕೆ ಹೋಗಬಹುದು ಎಂಬಂತಾಗಿದೆ.

ಆದರೆ ಆತ್ಮಶುದ್ಧಿ, ಸ್ಥಾನ ಶುದ್ಧಿ, ಮಂತ್ರ ಶುದ್ಧಿ, ದ್ರವ್ಯ ಶುದ್ಧಿ, ದೇವ ಶುದ್ಧಿಯಂಥ ಪಂಚ ಶುದ್ಧಿಯನ್ನು ಆಗಮ ಶಾಸ್ತ್ರದ ಪ್ರಕಾರ ಎಲ್ಲ ದೇವಸ್ಥಾನಗಳೂ ಅನುಸರಿಸುತ್ತವೆ. ಇದನ್ನು ಕೇರಳದಲ್ಲಂತೂ ಕಟುವಾಗಿ ಪಾಲಿಸುತ್ತಾರೆ. ಕೇರಳದಲ್ಲಿ ದೇವಸ್ಥಾನಕ್ಕೆ ಹೋಗುವುದಕ್ಕಿಂತ ಮುಂಚೆ ಸ್ನಾನ ಮಾಡಿಯೇ ಹೋಗುತ್ತಾರೆ. ಬೆಳಗ್ಗೆ ಸ್ನಾನ ಮಾಡಿದ್ದೇನೆ, ಹಾಗಾಗಿ ಈಗ ಹೋಗುತ್ತೇನೆ ಎಂಬುದೆಲ್ಲ ಅಲ್ಲಿ ಇಲ್ಲ. ತಲೆ ಸ್ನಾನ ಮಾಡಿ, ಮಡಿ ವಸ್ತ್ರದಲ್ಲಿ ಮಹಿಳೆಯರು-ಪುರುಷರು ಹೋಗುತ್ತಾರೆ. ರೂಲ್‌ 3ಬಿ ತೆಗೆದು ಹಾಕಿರುವುದು ಇಂಥ ಆಚರಣೆಗಳ ಮೇಲೇ ನಿಷೇಧ ಹೇರಿದಂತಾಗಿ, ಯಾರು ಹೇಗೆ ಬೇಕಾದರೂ ಬರಬಹುದು ಎಂಬಂತಾಗಿದೆ. ಇದೇ ಕೇರಳಿಗರನ್ನು ಕೆರಳಿಸಿದ್ದು.

ಅಲ್ಲಿನ ಹಿಂದೂಗಳಿಗೆ ತಮ್ಮ ಧರ್ಮದ ಸಂಕೇತವೇ ಅಯ್ಯಪ್ಪ ಸ್ವಾಮಿ. ಶಬರಿಮಲೆ. ಆದರ ನಂಬಿಕೆಗಳಿಗೆ ಹೊಡೆತ ಬಿದ್ದಿರುವಾಗ ಅದನ್ನು ಸ್ವಾಗತಿಸುತ್ತೇವೆ ಎಂದು ಹೇಳುವ ಮೂಲಕ ಬಿಜೆಪಿ, ಕಮ್ಯುನಿಸ್ಟ್‌ ಪಕ್ಷಗಳು ಕೇರಳಿಗರ ಗಾಯಕ್ಕೆ ಉಪ್ಪು ಸುರಿದಿವೆ.

ಹಿಂದೂಗಳು ಯಾವಾಗಲೂ ಒಂದಾಗೋದೇ ಇಲ್ಲ ಎಂದು ಹೇಳುತ್ತಿರುವಾಗ, ಇಂಥ ಸಮಯದಲ್ಲಿ ಲಕ್ಷಾಂತರ ಹಿಂದೂಗಳು ಬಂದಿದ್ದಾರೆ. ಶಬರಿಮಲೆಗೆ ಬಹಳ ಸನಿಹದಲ್ಲಿರುವ ನೀಲಕ್ಕಲ್‌ನಲ್ಲಿ ಕ್ರಿಶ್ಚಿಯನ್ನರ ಕ್ರಾಸ್‌ ಚಿಹ್ನೆ ಸಿಕ್ಕಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಚರ್ಚ್‌ ಕಟ್ಟಲಿಕ್ಕೆ ಹೊರಟಾಗ ಸ್ವಾಮಿ ಸತ್ಯಾನಂದ ಸರಸ್ವತಿ ಅವರು ಕೊಟ್ಟ ಕರೆಗೆ ಸಾಗರೋಪಾದಿಯಲ್ಲಿ ಭಕ್ತಾದಿಗಳು ಬಂದು ಪ್ರತಿಭಟಿಸಿದ್ದರು. ಶಬರಿಮಲೆ ಇತಿಹಾಸವನ್ನೊಮ್ಮೆ ತೆರೆದು ನೋಡಿದರೆ, ಯಾವಾಗ ದೇವಸ್ಥಾನಕ್ಕೆ ಅಪಾಯ ಎದುರಾಗಿತ್ತೋ ಆಗೆಲ್ಲ ಲಕ್ಷಾಂತರ ಜನರು ಅಯ್ಯಪ್ಪನಪರ ನಿಂತಿದ್ದಾರೆ. ಈಗಲೂ ಸಹ.

ಕೇರಳದಲ್ಲಿ ಮುಸ್ಲಿಂ ರಾಜರು ಆಳ್ವಿಕೆ ಮಾಡಿದಾಗಲೂ, ಆಂಗ್ಲರು ಆಳ್ವಿಕೆ ಮಾಡಿದಾಗಲೂ, ಕಮ್ಯುನಿಸ್ಟರು ರಕ್ತ ಹರಿಸಿದಾಗಲೂ, ಜಿಹಾದಿಗಳು ಹೆಚ್ಚಾದಾಗಲೂ ಹಿಂದೂಗಳು ಮಾತಾಡಲಿಲ್ಲ. ಆದರೆ ಆ ತಾಳ್ಮೆಯನ್ನೇ ಷಂಡತನ ಎಂದು ಭಾವಿಸಿ, ಶಬರಿಮಲೆಯ ಸುದ್ದಿಗೆ ಬಂದಿದ್ದು ಮಾತ್ರ ದೊಡ್ಡ ತಪ್ಪಾಗಿದೆ.

Leave a Reply

Copyright©2020 Chiranjeevi Bhat All Rights Reserved.
Powered by Dhyeya