ನಮ್ಮ ದೇವನೇ ಶ್ರೇಷ್ಠ ಎಂಬುವರ ಹಣೆಬರವೇ ಇಷ್ಟು ಇಳಯರಾಜರೇ!

 

ಎರಡು ಪ್ರಕರಣಗಳು
1) ಸಂಗೀತ ದಿಗ್ಗಜ ಇಳಯರಾಜಾ ಅವರು ಗೂಗಲ್‌ ಮುಖ್ಯಕಚೇರಿಯಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಜೀಸಸ್‌ ಹುಟ್ಟಿ ಬಂದಿದ್ದಾರೋ ಇಲ್ಲವೋ, ಆದರೆ ರಮಣ ಮಹರ್ಷಿಗಳು ಮಾತ್ರ ತಮ್ಮ 16ನೇ ವಯಸ್ಸಿನಲ್ಲಿ ಸಾವನ್ನು ಅನುಭವಿಸಿ ಬಂದಿರುವುದು ಸತ್ಯ.

ಇಷ್ಟೇ ಹೇಳಿದ್ದು. ಈ ಹೇಳಿಕೆ ಕಂಡಿತವಾಗಿಯೂ ಕಾನೂನು ಬದ್ಧ. ಏಕೆಂದರೆ, ಇಳಯರಾಜಾ ಎಲ್ಲೂ ಜೀಸಸ್‌ ಹುಟ್ಟೇ ಇಲ್ಲ ಎಂದಿಲ್ಲ, ಅಥವಾ ಕ್ರಿಶ್ಚಿಯಾನಿಟಿ ಸರಿ ಇಲ್ಲ ಎಂದಿಲ್ಲ ಅಥವಾ ಇನ್ಯಾವುದೇ ಥರವಾದ ಧರ್ಮದ ವಿರುದ್ಧ ಮಾತಾಡಿಲ್ಲ.
ಆದರೆ ಇಷ್ಟಕ್ಕೇ ಮೆಣಸಿನಕಾಯಿ ಘಾಟು ಹಾಕಿಸಿಕೊಂಡ ಕ್ರಿಶ್ಚಿಯನ್‌ ಮಿಷನರಿಗಳು ಬೆಂಗಳೂರಿನ 8 ಎಸಿಎಂಎಂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿಕೊಳ್ಳುವಂತೆ ಮೊರೆ ಹೋಗಿದ್ದಾರೆ.

2) ಹಿಂದೂ ವಿರೋಧಿ ಮಾತಾಡಿಯೇ ಕುಖ್ಯಾತಿ ಪಡೆದಿರುವ ಓವೈಸಿಯ ಎಐಎಂಐಎಂ ಪಕ್ಷದ ವಾರಿಸ್‌ ಪಠಾಣ್‌ ಅವರು ಒಂದು ಗಣಪತಿ ಕಾರ್ಯಕ್ರಮಕ್ಕೆ ಹೋಗುತ್ತಾರೆ. ಅಲ್ಲಿ ಗಣೇಶ ನಿಮಗೆಲ್ಲ ಒಳ್ಳೇದು ಮಾಡಲಿ, ನಮಗಿರುವ ಎಲ್ಲ ವಿಘ್ನಗಳನ್ನು ನಿವಾರಿಸಲಿ ಎಂದು ಗಣಪತಿ ಬಪ್ಪ ಮೋರೆಯಾ ಎಂದು ಹೇಳಿ ಮನೆಗೆ ಬಂದಿದ್ದರು.

ಅದೇನಾಯ್ತೋ ಆಮೇಲೆ ಗೊತ್ತಿಲ್ಲ. ಮಾರನೇ ದಿನ ಒಂದು ವಿಡಿಯೋ ಮಾಡಿ ಅದರಲ್ಲಿ, ನಾನು ಅವತ್ತು ಗಣಪತಿ ಬಪ್ಪ ಮೋರಯಾ ಎಂದಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ. ನಾನು ಹಾಗೆ ಹೇಳಬಾರದಿತ್ತು. ನನಗೆ ಅಲ್ಲಾ ಮಾತ್ರ ದೇವರು, ಮಹಮ್ಮದ್‌ ಮಾತ್ರ ಪ್ರವಾದಿ. ಅದನ್ನು ಹೊರತುಪಡಿಸಿ ಯಾವ ದೇವರೂ ಇಲ್ಲ. ನಾನು ಹಾಗೆ ಮಾತಾಡಿದ್ದ ಪಾಪಕ್ಕೆ ಅಲ್ಲಾಹು ಕ್ಷಮೆ ನೀಡುತ್ತಾನೆ. ಏಕೆಂದರೆ, ಅಲ್ಲಾಹ್‌ ದಯಾಳುವಾಗಿದ್ದಾನೆ ಎಂದಿದ್ದರು. ಇದು ಸಾಮಾಜಿಕ ಜಾಲತಾಣ ಸೇರಿದಂತೆ ಸುದ್ದಿ ಮಾಧ್ಯಮಗಳಲ್ಲೂ ಹರಿದಾಡಿತ್ತು. ಅವರ ವಿಡಿಯೊ ಹೇಗಿತ್ತು ಎಂದರೆ, ಇನ್ನೇನು ಅವರನ್ನು ಮುಸ್ಲಿಮರೆಲ್ಲ ಬಹಿಷ್ಕಾರ ಹಾಕುತ್ತಾರೆ. ಅದಕ್ಕೆ ಹೆದರಿ ಏನಾದರೊಂದು ಹೇಳಿಬಿಡಬೇಕು ಎಂಬಂತಿತ್ತು.
ಇಳಯರಾಜಾ ಅವರ ಬಗ್ಗೆ ಹೇಳುವುದಾದರೆ ಅವರು ಮೂಲ ಕ್ರಿಶ್ಚಿಯನ್‌. ಡೇನಿಯಲ್‌ ರಾಸಪ್ಪಾ ಎಂಬುದು ಇವರ ಹುಟ್ಟು ಹೆಸರು. ಹಿಂದೂ ಧರ್ಮದ ಆಚಾರ ವಿಚಾರಗಳಿಗೆ ಮನಸೋತು ಹಿಂದೂ ಧರ್ಮಕ್ಕೆ ಬಂದವರು. ಹೀಗಿರುವ ಒಬ್ಬ ಮಾಜಿ ಕ್ರಿಶ್ಚಿಯನ್‌ ಆಡಿದ ಮಾತಿಗೇ ಉರಿದು ಬೀಳುವ ಕ್ರಿಶ್ಚಿಯನ್‌ ಮಿಶನರಿಗಳು, ಸಹನಾಮೂರ್ತಿ ಏಸುವಿನ ಭಕ್ತರು ನಿಜವಾಗಿಯೂ ಹೌದಾ ಎಂಬ ಅನುಮಾನ ಕಾಡತೊಡಗಿದೆ.

ಇಳಯರಾಜಾ ಅವರ ಹೇಳಿಕೆ ಹೇಗಿದೆ ಎಂದರೆ, ನನಗೆ ಡೈನಾಸರ್‌ಗಳು ಇದ್ದವೋ ಇಲ್ಲವೋ ಗೊತ್ತಿಲ್ಲ ಆದರೆ, ಆನೆಗಳನ್ನು ನೋಡಿದ್ದೇನೆ ಎಂದರೆ, ಹೇಗೆ ತಪ್ಪಾಗುವುದಿಲ್ಲವೋ ಹಾಗೇ ಇದೂ. ಇದರಲ್ಲಿ ದೂರು ನೀಡುವಂಥದ್ದೇನಿದೆ? ಮಿಶನರಿಗಳ ಬಗ್ಗೆ ಹೇಳುವಾಗ ಯಾವಾಗಲೂ ಬಹಳ ಪ್ರಖ್ಯಾತ ಬರಹಗಾರ ಚಾರ್ಲ್ಸ್ ಡಿಕೆನ್ಸ್‌ ಮಾತು ನೆನಪಾಗುತ್ತದೆ: ‘ತಾವು ಯಾವ ಪ್ರದೇಶಕ್ಕೆ ಕಾಲಿಡುತ್ತಾರೋ ಅದನ್ನು ಇದ್ದಿದ್ದಕ್ಕಿಂತ ತೀರ ಹದಗೆಡಿಸಿ ಹೋಗುವಂಥ ಪಕ್ಕಾ ಪೀಡೆಗಳೆಂದರೆ ಮಿಷನರಿಗಳು’ ಎಂದಿದ್ದರು. ಅಂದರೆ ಅವರು ಅಷ್ಟರ ಮಟ್ಟಿಗೆ ಹಾಳುಗೆಡುಕರು ಎಂಬುದು ಅವನ ವ್ಯಾಖ್ಯಾನದ ಅರ್ಥ.

ಗೋವಾ ಇನ್‌ಕ್ವಿಸಿಷನ್‌ ಸಮಯದಲ್ಲಿ ಕ್ರಿಶ್ಚಿಯನ್‌ ಮಿಷನರಿಗಳು ಕೊಟ್ಟ ಕಾಟಕ್ಕೆ ಹಿಂದೂಗಳು ತತ್ತರಿಸಿ ಹೋಗಿದ್ದರು. ಮಹಮ್ಮದೀಯರಿಗಿಂತಲೂ ಹೆಚ್ಚು ಕಾಟ ಕೊಟ್ಟಿದ್ದರು. ಆ ವಿಕೃತಿ ಹೇಗಿತ್ತೆಂದರೆ, ಮಿಷನರಿಗಳ ಆದೇಶದಂತೆ ಮತಾಂತರಕ್ಕೆ ಒಪ್ಪದಿದ್ದರೆ ರಾಜರು ಅಂಥ ಹಿಂದೂಗಳನ್ನು ಜೈಲಿಗೆ ಕಳುಹಿಸುತ್ತಿದ್ದರು. ಒಮ್ಮೆ ಹಿಂದೂಗಳು ಜೈಲಿನಲ್ಲೇ ಸತ್ತರೆ, ಅವರನ್ನು ಅಲ್ಲೇ ಹೂಳುತ್ತಿದ್ದರು ಎಂದು ಡಾ. ಅಲ್‌ಫ್ರೆಡೋ ಡೆಮೆಲ್ಲೋ ಅವರು ತಮ್ಮ ‘ಮೆಮೊರೀಸ್‌ ಆಫ್‌ ಗೋವಾ’ ಎಂಬ ಪುಸ್ತಕದಲ್ಲಿ ಮಿಷನರಿಗಳು, ಕ್ರಿಶ್ಚಿಯನ್‌ ರಾಜರೆಲ್ಲ ಗೋವಾದ ಹಿಂದೂಗಳು ಹಾಗೂ ಮುಸ್ಲಿಮರಿಗೆ ಹೇಗೆಲ್ಲ ಕಾಟ ಕೊಟ್ಟರು ಎಂಬುದನ್ನು ವಿಸ್ತಾರವಾಗಿ ಬರೆದಿದ್ದಾರೆ. ಹಾಗೆಯೇ ಕ್ರಿಶ್ಚಿಯನ್‌ ಮಿಶನರಿಗಳು ಮಾಡುವ ಕಚಡಾ ಕೆಲಸಗಳಿಗೆ ನಾವು ಹಿಂದೂಗಳು ರೊಚ್ಚಿಗೇಳಬೇಕೇ ವಿನಾ ಅವರಲ್ಲ. ನಾವು ಕೋರ್ಟ್‌ ಮೆಟ್ಟಿಲು ಹತ್ತಬೇಕು. ಆದರೆ ಹಿಂದೂ ಸಮಾಜ, ನಮಗ್ಯಾಕೆ ಬೇಕು ಅದರ ಉಸಾಬರಿ ಎಂದು ಕುಳಿತಿದೆ. ಕ್ರಿಶ್ಚಿಯನ್‌ ಮಿಶನರಿಗಳು ನಮ್ಮ ದೇವರುಗಳ ಬಗ್ಗೆ ನೂರು ಬಗೆಯ ಮಾತಾಡಿದರೂ ನಮಗೆಲ್ಲ ಅದರ ತಲೆ ಬಿಸಿಯೇ ಇಲ್ಲ. ಮೂವತ್ತು ದಿನ ಕೆಲಸ ಮಾಡಿ, ಮೂವತ್ತೊಂದನೇ ದಿನ ಸಂಬಳ ಬರದಿದ್ದರಷ್ಟೇ ತಲೆ ಕೆಡಿಸಿಕೊಳ್ಳುವುದು ಹಿಂದೂಗಳಿಗೆ ರೂಢಿಯಾಗಿದೆ.

ಕ್ರಿಶ್ಚಿಯನ್‌ ಮಿಷನರಿಗಳು ನಮ್ಮ ಧರ್ಮಕ್ಕೆ, ದೇಶಕ್ಕೆ ಹೇಗೆಲ್ಲ ಘಾಸಿ ಮಾಡುತ್ತಿದ್ದಾರೆ ಎಂದು ಕೇಳಿದರೆ, ರಕ್ತ ಕುದಿಯದೇ ಇರುವುದಿಲ್ಲ.

ಕೆಲ ವರ್ಷಗಳ ಹಿಂದೆ ಸಿಎನ್‌ಎನ್‌-ಐಬಿಎನ್‌ನಲ್ಲಿ ಒಂದು ಸುದ್ದಿ ಪ್ರಸಾರವಾಗಿತ್ತು. ಬಿಹಾರದ ಸಣ್ಣ ಹಳ್ಳಿಯಲ್ಲಿ ಹಿಂದೂ ಧರ್ಮೀಯನೊಬ್ಬ ಮತಾಂತರವಾಗವುದಕ್ಕೆ ಒಪ್ಪದ ಕಾರಣಕ್ಕೆ ಅವನನ್ನು ಹೊಡೆದು ಕೊಂದಿದ್ದರು. ಇದು ಯಾವುದೋ ಅಂತೆ ಕಂತೆಯಲ್ಲ. ಕೊಲೆಯಾದವನ ಪತ್ನಿ ಅಂಜೋರಿಯಾ ದೇವಿಯವರೇ ಸಿಎನ್‌ಎನ್‌-ಐಬಿಎನ್‌ಗೆ ಹೇಳಿದ್ದಾರೆ. ಅಷ್ಟೇ ಅಲ್ಲ, ಈಕೆ ಏನಾದರೂ ಹಿಂದೂವಾಗೇ ಇದ್ದರೆ, ಯಾವ ಕೆಲಸವೂ ಸಿಗದೇ ಭಿಕ್ಷೆ ಬೇಡಬೇಕಾಗುತ್ತದೆ. ಆದರೆ, ಕ್ರಿಶ್ಚಿಯಾನಿಟಿಗೆ ಮತಾಂತರವಾದರೆ ಕೆಲಸ, ಮನೆ ಮತ್ತು ಹಣವನ್ನೂ ಕೊಡುತ್ತಾರೆ ಎಂದು ಹೇಳಿದ್ದರು. ಗ್ರಾಮಸ್ಥರೆಲ್ಲ ಹೋಗಿ ಪೊಲೀಸರಿಗೆ ದೂರು ನೀಡಿದ ಮೇಲೆ, ಇಬ್ಬರು ಮಿಷನರಿಗಳನ್ನು ಬಂಧಿಸಲಾತ್ತು. ಆ ಇಬ್ಬರು ವ್ಯಕ್ತಿಗಳು ಜನರನ್ನು ಮತಾಂತರಿಸುವುದಕ್ಕೆ ಹಿಂಸಿಸುತ್ತಿದ್ದರು ಎಂಬುದನ್ನು ಪ್ರಾಥಮಿಕ ತನಿಖೆಯಲ್ಲೇ ಒಪ್ಪಿಕೊಂಡಿದ್ದರು.

ಕ್ರಿಶ್ಚಿಯನ್ನರ ಬಗ್ಗೆ ಹಿಂದೂಗಳು ಹೇಳಿದರೆ ಕೋಮುವಾದವಾಗುತ್ತದೆ ಎಂದಾದರೆ, ಕ್ರಿಶ್ಚಿಯನ್ನರ ಬಾಯಲ್ಲೇ ಕೇಳೋಣ ಬನ್ನಿ. 71 ವರ್ಷದ ಕ್ರಿಶ್ಚಿಯನ್‌ ಇತಿಹಾಸಕಾರ ಡಾ. ಟಿ. ಆರ್‌. ಡಿಸೋಜಾ ಹೇಳುವ ಹಾಗೆ ‘1540 ಇಸವಿಯ ನಂತರ ಭಾರತದಲ್ಲಿ ಹಿಂದೂ ವಿಗ್ರಹಗಳು ಮಾಯವಾದವು. ಏಕೆಂದರೆ, ಅಷ್ಟು ದೇವಸ್ಥಾನಗಳನ್ನು ಧ್ವಂಸ ಮಾಡಿದ್ದರು ಕ್ರಿಶ್ಚಿಯನ್ನರು. ದೇವಸ್ಥಾನ ಧ್ವಂಸ ಮಾಡಿದ ಅದೇ ಜಾಗದಲ್ಲಿ, ಅದೇ ಸಾಮಗ್ರಿಗಳನ್ನು ಬಳಸಿಕೊಂಡು ಚರ್ಚ್‌ಗಳನ್ನು ನಿರ್ಮಾಣ ಮಾಡಲಾಯಿತು. ಚರ್ಚ್‌ ಕೌನ್ಸಿಲ್‌ಗಳು ಮತ್ತು ಅಧಿಕಾರಿಗಳು ಪೊರ್ಚುಗೀಸರ ಪ್ರಾಂತ್ಯದಿಂದ ಪುರೋಹಿತರನ್ನು ಹೊರದಬ್ಬಿದ್ದರು. ಹಿಂದೂ ಧರ್ಮದ ಪ್ರಕಾರ ಮದುವೆ ಆಗುವುದು, ಹೋಮ ಹವನಗಳೆಲ್ಲ ಬಂದ್‌ ಮಾಡಿಸಿದ್ದರು. ಅನಾಥ ಹಿಂದೂ ಮಕ್ಕಳಿಗೆ ವಿದ್ಯಾಭ್ಯಾಸದ(ಕ್ರೈಸ್ತ ಧರ್ಮದ ಬಗ್ಗೆ ಅಧ್ಯಯನ) ಜವಾಬ್ದಾರಿಯನ್ನು ಕ್ರಿಶ್ಚಿಯನ್ನರೇ ಹೊತ್ತರು. ಇನ್ನು ಹಿಂದೂಗಳಿಗೆ ವಿಧವಿಧವಾಗಿ ಹಿಂಸೆ ಕೊಡುವುದಲ್ಲದೇ ಅವರಿಗೆ ಕೆಲಸ ಕೊಡುತ್ತಲೇ ಇರಲಿಲ್ಲ. ಒಮ್ಮೆ ಮತಾಂತರವಾದರೆ, ಅವರಿಗೆ ಹಿಂಸೆ ಕೊಡುವುದಿಲ್ಲ ಎಂದೇ ಹೇಳಿದ್ದರು’. ಇದೇ ಮಾತನ್ನು ಯೋಗಿ ಆದಿತ್ಯನಾಥರು ಹೇಳಿದ್ದಿದ್ದರೆ ಪ್ರಕರಣ ದಾಖಲಾಗುತ್ತಿತ್ತು. ಆದರೆ, ಕ್ರಿಶ್ಚಿಯನ್ನನೊಬ್ಬನೇ ಕ್ರಿಶ್ಚಿಯನ್ನರ ಕರಾಳ ಮುಖವನ್ನು ಬಿಚ್ಚಿಟ್ಟಿರುವುದರಿಂದ, ಮಾತೇ ಹೊರಡುತ್ತಿಲ್ಲ.

ಅಷ್ಟೇ ಯಾಕೆ, ಅಮೆರಿಕೆಯ ಮೂರನೇ ಅಧ್ಯಕ್ಷ ಥಾಮಸ್‌ ಜೆಫರ್ಸನ್‌ ಹೇಳುತ್ತಾರೆ, ‘ಕ್ರೈಸ್ತ ಧರ್ಮದ ಆರಂಭದ ದಿನಗಳಿಂದಲೂ ಮಿಲಿಯನ್‌ಗಟ್ಟಲೆ ಪುರುಷರು, ಮಹಿಳೆಯರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಅವರಿಗೆ ವಿಧ ವಿಧವಾದ ಹಿಂಸೆ, ಕಿರುಕುಳ ನೀಡಿ ಜೈಲಿಗಟ್ಟಿದ್ದಾರೆ. ಆದರೂ ನಾವು ಮಾನವೀಯತೆಯ ಬಳಿಗೆ ಒಂದು ಇಂಚು ಸಹ ಹತ್ತಿರ ಹೋಗಿಲ್ಲ. ಬಲವಂತ(ಮತಾಂತರ)ದಿಂದ ಏನು ಸಾಧನೆ ಮಾಡಿದ್ದೇವೆ? ಪ್ರಪಂಚದ ಅರ್ಧ ಜನಸಂಖ್ಯೆಯನ್ನು ಮೂರ್ಖರನ್ನಾಗಿಸುವುದು ಮತ್ತು ಇನ್ನರ್ಧ ಜನಸಂಖ್ಯೆಯನ್ನು ಆಶಾಡಭೂತಿಯನ್ನಾಗಿಸುವುದಕ್ಕಾಗಿ ಒತ್ತಾಯ ಮಾಡಬೇಕಿತ್ತಾ? ಅಥವಾ ಭೂಮಿಯ ತುಂಬ ಪುಂಡಾಟಿಕೆ ಹಾಗೂ ಕೆಟ್ಟದ್ದನ್ನು ಬೆಂಬಲಿಸುವುದಕ್ಕಾಗಿಯಾ?’
ಬಹುಶಃ ಇಳಯರಾಜಾ ಅವರ ವಿರುದ್ಧ ಹರಿಹಾಯುತ್ತಿರುವ ಕ್ರಿಶ್ಚಿಯನ್‌ ಮಿಷನರಿಗಳಂಥವರಿಗೆ ಅಮೆರಿಕದ ಅಧ್ಯಕ್ಷ ಎಂದೋ ಹೇಳಿರುವ ಶಬ್ಧಗಳನ್ನು ಅರಗಿಸಿಕೊಳ್ಳಲಿ ಮೊದಲು. ಆಮೇಲೆ ಕೇಸು ಕೋರ್ಟು ಎಂದು ಓಡಾಡಲಿ.

ಇನ್ನು ಕೇರಳದಲ್ಲಿ ನೆರೆ ಹಾವಳಿ ಮುಗಿದ ಮೇಲೆ ಒಂದಷ್ಟು ಮುಸ್ಲಿಮರು ಹಾಗೂ ಇತರರು ಸೇರಿ ದೇವಸ್ಥಾನದ ಹೊರಗೆ ಸ್ವಚ್ಛ ಮಾಡಿದ್ದಕ್ಕೆ, ವಹಾಬಿ ಭಾಷಣಕಾರನೊಬ್ಬ ಇದು ಇಸ್ಲಾಂನ ಪ್ರಕಾರ ಘೋರ ಅಪರಾಧ ಎಂದು ಹೇಳಿದ್ದಾನೆ. ಒಟ್ಟಾರೆ ಈ ಎರಡು ಧರ್ಮಗಳಿಗೆ ಹಿಂದೂಗಳನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂಬುದು ಮಾತ್ರ ಸಾವಿರ ವರ್ಷ ಕಳೆದರೂ ಉಳಿಯುವಂಥ ಸತ್ಯ.

ಒಂದು ದೇವಸ್ಥಾನದ ಆವರಣ ಸ್ವಚ್ಛ ಮಾಡುವುದನ್ನೂ ತಡೆದುಕೊಳ್ಳದ ಧರ್ಮೀಯರ ಮುಂದೆ, ತ್ರಿವಳಿ ತಲಾಖ್‌ ವಿರೋಧಿಸುವ ಬರದಲ್ಲಿ ನಾವು ನಮಗೆ ಸಂವಿಧಾನಕ್ಕಿಂತಲೂ ಕುರಾನೇ ಮುಖ್ಯ. ಅದರ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ಬಾಯಿ ಹರಿದುಕೊಳ್ಳುವ ಮೌಲ್ವಿಯ ಮುಂದೆ, ಹಿಂದೂಗಳು ಮಾತ್ರ ಜಾತ್ಯತೀತರು ಅಂತ ಏನಾದರೂ ನಾವು ಬರೆದುಕೊಟ್ಟಿದ್ದೇವಾ? ಪ್ರತಿ ಬಾರಿ ಹಿಂದೂಗಳನ್ನು ಕೋಮುವಾದಿಗಳು ಎನ್ನುವವರು ಇದನ್ನೆಲ್ಲ ವಿರೋಧಿಸುವ ಒಬ್ಬನನ್ನು ತೋರಿಸಿಬಿಡಿ ನೋಡೋಣ? ಸಿಗಲ್ಲ. ಯಾಕೆಂದರೆ, ಹಿಂದೂ ಧರ್ಮದ ಬಗ್ಗೆ ಅಸಹಿಷ್ಣುತೆ ಹೊಂದುವುದೂ ಅವರ ಪ್ರಕಾರ ಜಾತ್ಯತೀತವೇ ಆಗಿದೆ. ಹಾಗಾಗಿ ಸೈತಾನನೂ ಇದರ ಬಗ್ಗೆ ಮಾತಾಡುವುದೇ ಇಲ್ಲ.

ನಾವು ನೀವೆಲ್ಲ ವಾರಿಸ್‌ ಪಠಾಣ್‌ ಹೇಗೆ ಹಿಂದೂ ವಿರೋಧಿಯಾಗಿ ಮಾತಾಡುತ್ತಾರೆ ಎಂಬುದನ್ನು ಚರ್ಚೆಗಳಲ್ಲಿ ಕಣ್ಣಾರೆ ನೋಡಿದ್ದೇವೆ. ಅದರ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ. ಆದರೆ ಹಾಗೆ ಮತಾಡುವವನ ಮನಸ್ಸಲ್ಲೂ ಎಲ್ಲೋ ಒಂದು ಕಡೆ ಜಾತ್ಯತೀತ ಭಾವನೆ ಇತ್ತು ಹಾಗೂ ಹಿಂದೂ ದೇವರ ಬಗ್ಗೆ ಒಂದೊಳ್ಳೆ ಅಭಿಪ್ರಾಯ ಇತ್ತು ಎನ್ನುವುದಕ್ಕೆ ಆತ ಎಲ್ಲೋ ಗಣಪತಿ ಕೂರಿಸಿರುವ ಕಡೆ ಬಂದು ಮೈಕ್‌ನಲ್ಲಿ ಮಾತನಾಡಿರುವುದೇ ಸಾಕ್ಷಿ. ಇನ್ನು ಗಣಪತಿ ಬಪ್ಪ ಮೋರಯಾ ಎಂದು ಹೇಳಿರುವುದು ಅವರು ಜಾತ್ಯತೀತರಾಗಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತಿತ್ತು. ಆದರೆ ಒಂದೇ ದಿನಕ್ಕೆ ಅವರು ನನಗೆ ಹಾಗೆ ಹೇಳಿರುವುದಕ್ಕೆ ನಾಚಿಕೆಯಾಗುತ್ತಿದೆ ಎಂದು ಹೇಳುತ್ತಾರೆಂದರೆ, ಅವರಿಗೆ ಇನ್ಯಾವ ಮಟ್ಟದಲ್ಲಿ ಬಯ್ಗುಳಗಳು ಬಂದಿರಬಹುದು ನೀವೇ ಆಲೋಚಿಸಿ. ವಾರಿಸ್‌ ಪಠಾಣ್‌ ಇರುವುದು ಎಐಎಂಐಎಂನಲ್ಲಿ. ಈ ಪಕ್ಷದ ನಾಯಕನ ತಮ್ಮ ಅಕ್ಬರುದ್ದೀನ್‌ ಓವೈಸಿ, ‘15 ನಿಮಿಷ ಪೊಲೀಸ್‌ ವ್ಯವಸ್ಥೆಯನ್ನು ನಿಲ್ಲಿಸಿ ನೋಡಿ, ಮುಸ್ಲಿಮರ ತಾಕತ್ತನ್ನು ತೋರಿಸುತ್ತೇವೆ’ ಎಂದಿದ್ದ ಪಕ್ಷದ ರಾಜಕಾರಣಿ ವಾರಿಸ್‌ ಪಠಾಣ್‌ಗೆ ಯಾವ ರೀತಿ ಮರ್ಯಾದೆ ಸಿಕ್ಕು ಅಂಥ ವಿಡಿಯೊ ಮಾಡಿರಬಹುದು ಎಂಬುದನ್ನು ನೀವೇ ಊಹಿಸಿಕೊಳ್ಳಿ.

ಸಂವಿಧಾನದ ಆರ್ಟಿಕಲ್‌ 19 ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತದೆ. ಅಂದರೆ, ನಮಗೆ ಅನಿಸಿದ್ದನ್ನು ಮಾತಾಡಬಹುದು, ವ್ಯಕ್ತಪಡಿಸಬಹುದು. ಅಷ್ಟೇ ಅಲ್ಲ, ಸಂವಿಧಾನ ಹೇಗಿದೆಯೆಂದರೆ, ಮಾತಾಡಬಹುದು ಎಂದು ಹೇಳಿ ಕೆಳಗೆ ಏನೇನು ಮಾಡಬಾರದು ಎಂಬುದನ್ನೂ ತಿಳಿಸುತ್ತದೆ. ಆದರೆ ಈ ಪಟ್ಟಿಯಲ್ಲಿ ಸಹ ಜೀಸಸ್‌ ಗೊತ್ತಿಲ್ಲ ಎಂದೋ ಅಥವಾ ಮುಸ್ಲಿಮನೊಬ್ಬ ಗಣಪತಿ ಬಪ್ಪ ಮೋರಯಾ ಎಂದೋ ಹೇಳಬಾರದೆಂದು ಬರೆದಿಲ್ಲ.ಆದರೂ ಇವರೆಲ್ಲ ಹೆದರಿದ್ದಾರೆ ಎಂದರೆ ಅರ್ಥ ಸಹಿಷ್ಣುತೆ ಯಾರಲ್ಲಿ ಇದೆ ಎಂದು ನೀವೇ ಅರ್ಥ ಮಾಡಿಕೊಳ್ಳಿ.

ವಸುದೈವ ಕುಟುಂಬಕಮ್‌, ಅಹಂ ಬ್ರಹ್ಮಾಸ್ಮಿ, ಅದ್ವೈತ ಸಿದ್ಧಾಂತ ನೀಡಿದ ಹಿಂದೂ ಧರ್ಮಕ್ಕೂ, ನಮ್ಮ ದೇವನೊಬ್ಬನೇ ಸತ್ಯ, ಮಿಕ್ಕಿದ್ದೆಲ್ಲ ಸುಳ್ಳು ಎಂದು ಹೇಳುವ ಧರ್ಮಕ್ಕೂ ಇರುವ ವ್ಯತ್ಯಾಸವೇ ಇದು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya