2005ರ ಆಗಸ್ಟ್ 14ರ ಬೆಳಗಿನ ಜಾವ ಸೈಪ್ರಸ್ ದ್ವೀಪದಿಂದ ಅಥೆನ್ಸ್ ಗ್ರೀಸ್ಗೆ ವಿಮಾನ ಹೊರಡಲು ಸಜ್ಜಾಗಿತ್ತು. ವಿಮಾನದ ಪೈಲಟ್ಗಳು ಎಂದಿನ ಹಾಗೆ ಕಾಕ್ಪಿಟ್ನಲ್ಲಿ ಡಜನ್ಗಟ್ಟಲೆ ಪರೀಕ್ಷೆ ಮಾಡಿ ಹೊರಡುವುದಕ್ಕೆ ಸಿದ್ದರಾದರು. ಹಾರುವುದಕ್ಕೆ ಉತ್ತಮ ವಾತಾವರಣ ಇದ್ದಿದ್ದರಿಂದ ಹೀಲಿಯೋಸ್ 522 ವಿಮಾನವು 150 ಜನರನ್ನು ಹೊತ್ತು ಆಗಸದತ್ತ ಮುಖ ಮಾಡಿತ್ತು. ಇನ್ನೂ ಹಾರಿ 10 ನಿಮಿಷ ಆಗಿಲ್ಲ ಒಂದು ಟೇಕಾಫ್ ಕಾನಿಧಿಗ್ ಅಲಾರ್ಮ್ ಬಡಿದುಕೊಳ್ಳಲು ಶುರುವಾಗುತ್ತದೆ. ವಿಮಾನ ಹಾರಲು ತಯಾರಿಲ್ಲದಿರುವಾಗ ಮಾತ್ರ ನೆಲದ ಮೇಲೆ ಬಡಿದುಕೊಳ್ಳುವ ಆಲಾರ್ಮ್ ಅದು. ಇದನ್ನು ಪೈಲಟ್ಗಳು ಕಂಟ್ರೋಲ್ ರೂಮ್ಗೆ ವರದಿ ಮಾಡುತ್ತಾರೆ.
ಇದ್ದಕ್ಕಿದ್ದ ಹಾಗೇ ಜನರಿರುವ ಕ್ಯಾಬಿನ್ ಮೇಲಿನಿಂದ ಆಮ್ಲಜನಕದ ಮಾಸ್ಕ್ ಹೊರ ಬರುತ್ತದೆ. ಆದರೆ, ಆಮ್ಲಜನಕದ ಮಾಸ್ಕ್ ಹೊರ ಬಂದಿರುವ ವಿಷಯ ಇನ್ನೂ ಪೈಲಟ್ಗಳಿಗೆ ಗೊತ್ತಿರುವುದಿಲ್ಲ. ಅಲ್ಲಿರುವ ಸಿಸ್ಟಮ್ಗಳು ಅದನ್ನು ಅವರಿಗೆ ತೋರಿಸುತ್ತಿರುವುದಿಲ್ಲ. ಪೈಲಟ್ಗಳಿನ್ನೂ ಯಾಕಾಗಿ ಅಲಾರ್ಮ್ ಸದ್ದು ಮಾಡುತ್ತಿದೆ ಎಂಬುದನ್ನೇ ನೋಡುತ್ತಿರುತ್ತಾರೆ. ಇದರ ಜತೆಗೆ ವಿಮಾನದ ಯಾವುದೋ ಒಂದು ಭಾಗ ಅತ್ಯಂತ ಬಿಸಿಯಾದಾಗ ಬರುವ ಅಲಾರ್ಮ್ ಸಹ ಬರುತ್ತಿದೆ.
ಟೇಕಾಫ್ ಆಗಿ 30 ನಿಮಿಷದ ಒಳಗೇ ಏರ್ ಟ್ರಾಫಿಕ್ ಕಂಟ್ರೋಲ್ ಜೊತೆಗಿನ ಸಂಪರ್ಕ ಕಡಿತಗೊಳ್ಳುತ್ತದೆ. ಇಲ್ಲಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸಲು ಶುರುವಾಗುತ್ತದೆ. ಮೆಡಿಟರೇನಿಯನ್ ಸಮುದ್ರದ ಮೇಲೆ ಹಾರುತ್ತಿರುವ ವಿಮಾನವು ಅಥೆನ್ಸ್ನತ್ತ ಹೋಗುತ್ತಿದೆ. ಇತ್ತ ಹೀಲಿಯಸ್ 522ನಲ್ಲಿರುವ ಜನರೆಲ್ಲರೂ ಪ್ರಜ್ಞೆ ತಪ್ಪುತ್ತಾರೆ.

ಇದು ಗಂಭೀರ ಸಮಸ್ಯೆ ಎಂದು ಪರಿಗಣಿಸಿದ ಏರ್ ಟ್ರಾಫಿಕ್ ಕಂಟ್ರೋಲ್ ವಿಭಾಗ, ಗ್ರೀಕ್ ಏರ್ಫೋರ್ಸ್ಗೆ ಮಾಹಿತಿ ನೀಡುತ್ತದೆ. ಏಕೆಂದರೆ, ಒಂದೊಮ್ಮೆ ನಿಜವಾಗಿ ಸಮಸ್ಯೆ ಇದ್ದರೆ, ಖಂಡಿತವಾಗಿಯೂ ವಿಮಾನ ಅಥೆನ್ಸ್ ನಗರದ ಮೇಲೆ ಬಿದ್ದು, ಸಾವಿರಾರು ಜನರ ಮಾರಣ ಹೋಮವಾಗುವ ಸಂಭವವೇ ಹೆಚ್ಚಾಗಿದೆ. ಈ ಅಂದಾಜು ಗ್ರೀಕ್ ಏರ್ಫೋರ್ಸ್ಗೆ ಮುಟ್ಟಿದ ತತ್ಕ್ಷಣ, ತಮ್ಮ ಎಫ್-16 ಜೆಟ್ನಿಂದ ಹೀಲಿಯೋಸ್ 522 ವಿಮಾನದ ಹಿಂದೆ ಓಡುತ್ತಾರೆ. ಬಂದವರೇ, ಹೀಲಿಯೋಸ್ ಪೈಲಟ್ಗೆ ಕಾಣಿಸುವಂತೆ ಹಾರಾಟ ನಡೆಸುತ್ತಾರೆ. ಹೀಲಿಯೋಸ್ನ ಕ್ಯಾಪ್ಟನ್ನ ಸುಳಿವೇ ಇರುವುದಿಲ್ಲ. ಜೆಟ್ನಲ್ಲಿರುವ ಗ್ರೀಕ್ ಯೋಧರಿಗೆ ವಿಮಾನದಲ್ಲಿರುವ ಎಲ್ಲರೂ ಮಲಗಿರುವಂತೆ ಕಾಣುತ್ತಾರೆ. ಎಫ್-16 ಜೆಟ್ ವಿಮಾನ ಪಕ್ಕದಲ್ಲೇ ಹಾದು ಬರುತ್ತಿದ್ದರೂ ಒಬ್ಬನೂ ಅಲುಗಾಡುತ್ತಿಲ್ಲ. ಇದನ್ನೆಲ್ಲ ಯೋಧರು ಲೈವ್ ಆಗಿ ನೆಲದ ಮೇಲಿರುವವರಿಗೆ ಮಾಹಿತಿ ನೀಡುತ್ತಿರುತ್ತಾರೆ. ಆದರೆ ಅಷ್ಟರಲ್ಲಿ ಯೋಧರಿಗೆ ಹಿಲಿಯೋಸ್ ವಿಮಾನದಲ್ಲಿ ಒಬ್ಬನೇ ಒಬ್ಬ ಓಡಾಡುತ್ತಿರುವಂತೆ ಕಾಣುತ್ತದೆ.
ಆಗ ಇದು ಉಗ್ರಗಾಮಿಗಳ ಕೃತ್ಯವಿರಬಹುದಾ ಎಂದೂ ಅನುಮಾನ ಬರುತ್ತದೆ. ಉಗ್ರನಾಗಿದ್ದರೆ, ನಮಗೆ ಉತ್ತರವಾದರೂ ಕೊಡಬೇಕಿತ್ತು. ಮನುಷ್ಯ ಉತ್ತರಿಸುತ್ತಿಲ್ಲ. ಕೇವಲ ಜೀವಂತ ಇರುವುದು ಕಾಣಿಸುತ್ತದೆ.
10 ಸಾವಿರ ಅಡಿ ಎತ್ತರದಲ್ಲಿರುವ ಹೀಲಿಯೋಸ್ ವಿಮಾನ ಏಕಾ ಏಕಿ ಎಡಕ್ಕೆ ತಿರುಗಿ ನೆಲದ ಕಡೆ ಮುಖ ಮುಖ ಮಾಡಿ ನುಗ್ಗುತ್ತಿರುವುದನ್ನು ಎಫ್-16ನಲ್ಲಿರುವ ಯೋಧರು ಗ್ರಹಿಸುತ್ತಾರೆ. ಆ ಸಮಯದಲ್ಲಿ ಹೀಲಿಯೋಸ್ನಲ್ಲಿ ಜೀವಂತ ಇರುವ ಒಬ್ಬನೇ ಒಬ್ಬ, ಮೈಕ್ರೋಫೋನ್ನಲ್ಲಿ ಅಸ್ಪಷ್ಟ ಸಂದೇಶ ಕೊಡುತ್ತಾನೆ.
ಆಕಾಶದಲ್ಲಿ 3 ತಾಸುಗಳ ಕಾಲ ಹಾರಾಟ ಮಾಡಿದ ಬಳಿಕ ಹೀಲಿಯೋಸ್ ವಿಮಾನ ಗ್ರೀಸ್ನಲ್ಲಿ ನೆಲಕ್ಕಪ್ಪಳಿಸುತ್ತದೆ. ಅಗ್ನಿ ಶಾಮಕ ದಳ ಸೇರಿದಂತೆ ಎಲ್ಲರೂ ಸ್ಥಳಕ್ಕೆ ಬಂದಾಗ ಎಲ್ಲ ಪ್ರಯಾಣಿಕರೂ ಸುಟ್ಟು ಕರಕಲಾಗಿದ್ದರು. ಇಂಥಾ ಅಪಘಾತ ಸಂಭವಿಸುವುದಕ್ಕೆ ಕಾರಣವೇನೆಂದು ಅಧಿಕಾರಿಗಳು ತನಿಖೆ ಶುರುವಿಟ್ಟುಕೊಳ್ಳುತ್ತಾರೆ.

ಅದರಿಂದ ಮೊದಲ ವಿಷಯ ತಿಳಿದಿದ್ದೇನೆಂದರೆ, ವಿಮಾನ ಅಪಘಾತವಾಗುವವರೆಗೆ ಎಲ್ಲ ಯಾತ್ರಿಗಳೂ ಬದುಕಿದ್ದರು ಎಂಬುದು. ವಿಮಾನದ ಎಲ್ಲ ಚಟುವಟಿಕೆಗಳು ರೆಕಾರ್ಡ್ ಆಗುವುದು ಬ್ಲಾಕ್ಬಾಕ್ಸ್ನಲ್ಲಿ. ವಿಮಾನ ಸುಟ್ಟರೂ ಬ್ಲಾಕ್ಬಾಕ್ಸ್ ಸುಡುವುದಿಲ್ಲ. ಅದರಲ್ಲಿ ವಿಮಾನ ನೆಲಕ್ಕಪ್ಪಳಿಸುವುದಕ್ಕೂ ಮುನ್ನ ವ್ಯಕ್ತಿಯೊಬ್ಬ ಮಾತನಾಡಿದ್ದು ರೆಕಾರ್ಡ್ ಆಗಿತ್ತು. ಆತ ಉಗ್ರನಾಗಿರದೇ, ಒಬ್ಬ ಫ್ಲೈಟ್ ಅಟೆಂಡೆಂಟ್ ಆಗಿದ್ದನಷ್ಟೇ. ಹೇಗೋ ಕಷ್ಟ ಪಟ್ಟು ಸಹಾಯ ಮಾಡಿ ಎಂದು ಮೈಕ್ರೋಫೋನ್ನಲ್ಲಿ ಕೇಳಿಕೊಂಡಿದ್ದಾನೆ.
ವಿಮಾನ ನೆಲಕ್ಕಪ್ಪಳಿಸುವುದಕ್ಕೆ ಕಾರಣ ವಿಮಾನದ ಎಡಭಾಗದಲ್ಲಿರುವ ಎಂಜಿನ್ನಲ್ಲಿ ಇಂಧನ ಖಾಲಿಯಾಗಿದ್ದಾಗಿದೆ. ಆದರೆ ಇದೆಲ್ಲ ಆಮೇಲಿನ ಕಾರಣ. ಮೊದಲಿಗೆ ಅಲಾರ್ಮ್ ಬಡಿದುಕೊಂಡು, ಜನರೆಲ್ಲರೂ ಪ್ರಜ್ಞಾಹೀನರಾಗುವುದಕ್ಕೆ ಮೂಲ ಕಾರಣ ಬೇರೆಯೇ ಆಗಿತ್ತು.
ಒಂದು ವಿಮಾನ ಆಕಾಶದ ಮೇಲೆ ಹೋಗುತ್ತಿದ್ದಂತೆ ಉಸಿರಾಟದ ವಾತಾವರಣ ಬದಲಾಗುತ್ತಾ ಇರುತ್ತದೆ. ವಿಮಾನ ಮೇಲೆ ಮೇಲೆ ಹೋಗುತ್ತಿದ್ದಂತೆ, ಕ್ಯಾಬಿನ್ಗೆ ಅಗತ್ಯವಿರುವಷ್ಟು ಆಮ್ಲಜನಕ ಪೂರೈಕೆ ಮಾಡುವುದು ಒತ್ತಡ ನಿರ್ವಹಣೆ(ಪ್ರೆಶರ್ ಕಂಟ್ರೋಲರ್ ಪಿ5) ಎಂಬ ತಂತ್ರಜ್ಞಾನ. ವಿಮಾನ ಮೇಲೆ ಹೋಗುತ್ತಿದ್ದಂತೆ, ಈ ತಂತ್ರಜ್ಞಾನವು ಅಗತ್ಯವಿರುವ ಆಮ್ಲಜನಕದ ಪೂರೈಕೆಯನ್ನು ತಾನಾಗೇ ಮಾಡುತ್ತದೆ. ಇದಕ್ಕೆ ಎರಡು ಮೋಡ್ ಇರುತ್ತದೆ. ಸ್ವಯಂ ಚಾಲಿತ ಮೋಡ್ ಹಾಗೂ ಮ್ಯಾನ್ಯುವಲ್ ಮೋಡ್. ಮ್ಯಾನ್ಯುವಲ್ನಲ್ಲಿಟ್ಟಾಗ, ಕ್ಯಾಪ್ಟನ್ ಮತ್ತು ಸಹ-ಪೈಲಟ್, ವಿಮಾನ ಮೇಲೆ ಹೋದಂತೆಲ್ಲ, ಕ್ಯಾಬಿನ್ ವಾತಾವರಣವನ್ನು ಸರಿಯಾಗಿಡಲಿಕ್ಕೆ ಒತ್ತಡ ನಿರ್ವಹಣೆ ಮಾಡುತ್ತಿರಬೇಕು.
ಆದರೆ, ಅಂದು ಹೀಲಿಯೋಸ್ನಲ್ಲಿ ಆಗಿದ್ದೇನೆಂದರೆ, ವಿಮಾನವನ್ನು ಪರೀಕ್ಷಿಸುವ ಗ್ರೌಂಡ್ ಎಂಜಿನಿಯರ್ಗಳು ಪರೀಕ್ಷೆ ಮಾಡುವಾಗ ಪಿ-5 ತಂತ್ರಜ್ಞಾನವನ್ನು ಮ್ಯಾನ್ಯುವಲ್ಗೆ ಇಟ್ಟು, ಪರೀಕ್ಷೆ ಮುಗಿದಾದ ಮೇಲೆ ಅದನ್ನು ಆಟೋಮ್ಯಾಟಿಕ್(ಸ್ವಯಂಚಾಲಿತ) ಮೋಡ್ನಲ್ಲಿಟ್ಟಿರದೇ ಹಾಗೇ ಬಂದಿದ್ದರು.

ಆದರೆ ದುರಂತ ಏನೆಂದರೆ, ಇದನ್ನು ಪೈಲಟ್ ಅಥವಾ ಸಹ-ಪೈಲಟ್ ಯಾರೊಬ್ಬರೂ ಗಮನಿಸಲೇ ಇಲ್ಲ. ಪರಿಣಾಮ, ವಿಮಾನ ಮೇಲೆ ಹೋದಂತೆಲ್ಲ ಒತ್ತಡ ನಿರ್ವಹಣೆಯಾಗಿಲ್ಲ. ಇದರಿಂದ ಜನರಿರುವ ಕ್ಯಾಬಿನ್ನಲ್ಲಿ ಆಮ್ಲಜನಕ ಮಾಸ್ಕ್ಗಳು ಹೊರ ಬಂದಿದೆ. ಆದರೆ ಆಮ್ಲಜನಕದ ಕೊರತೆಯಾದರೆ ಮಾಸ್ಕ್ಗಳು ಕಾಕ್ಪಿಟ್ನಲ್ಲಿ ಹಾಗೆಲ್ಲ ಹೊರ ಬೀಳುವುದಿಲ್ಲ. ಸ್ವತಃ ಪೈಲಟ್ಗಳೇ ಮಾಸ್ಕ್ಗಳನ್ನು ತೆಗೆದು ಧರಿಸಬೇಕು. ಹಾಗಾಗಿ ಪೈಲಟ್ ಇರುವ ಕಡೆ ಆಮ್ಲಜನಕದ ಮಾಸ್ಕ್ ತೆರೆದುಕೊಂಡಿಲ್ಲ.
ಒಂದು ಸಣ್ಣ ಬೇಜವಾಬ್ದಾರಿಯಿಂದ ವಿಮಾನದಲ್ಲಿರುವ ಅಷ್ಟೂ ಜನರ ಪ್ರಾಣ ಹೋಯಿತು. ಇದು ಗ್ರೀಸ್ ಇತಿಹಾಸದಲ್ಲೇ ನಡೆದ ಅತ್ಯಂತ ಕೆಟ್ಟ ವಿಮಾನ ಅಪಘಾತ ಎಂದು ದಾಖಲಾಗಿದೆ.
ಇದನ್ನೆಲ್ಲ ಈಗ ಏಕೆ ನೆನಪಿಸುತ್ತಿದ್ದೇವೆಂದರೆ, ನಿನ್ನೆ ಮುಂಬೈನಿಂದ ಜೈಪುರಕ್ಕೆ ಹೋಗುವ ಜೆಟ್ ಏರ್ವೇಸ್ನಲ್ಲಾದ ಪ್ರಕರಣವೂ ಹೆಚ್ಚೂ ಕಡಿಮೆ ಇಂಥದ್ದೇ ಆಗಿದೆ.
ಕ್ಯಾಬಿನ್ ಕ್ರೂನವರು ವಾಯು ಒತ್ತಡ ನಿರ್ವಹಣೆ ಮಾಡಲು ಮರೆತಿದ್ದಿದ್ದರ ಪರಿಣಾಮ, ವಿಮಾನ ಹಾರಾಟ ಮಾಡಿ ಕೆಲವೇ ನಿಮಿಷಗಳಲ್ಲಿ ಜನರಿಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿ ತಲೆ, ಕಿವಿ ಎಲ್ಲವೂ ಬ್ಲಾಕ್ ಆಗಿ ಮೂಗಿನಲ್ಲಿ ಹಾಗೂ ಕಿವಿಯಲ್ಲಿ ರಕ್ತ ಬರಲು ಆರಂಭಿಸಿದೆ. ಅಲ್ಲದೇ, ಆಮ್ಲಜನಕದ ಮಾಸ್ಕ್ಗಳು ಸಹ ಹೊರಬಿದ್ದಿದೆ. ವಿಮಾನ ಮತ್ತೆ ವಾಪಸ್ ಮುಂಬೈಗೆ ಬರುವವರೆಗೂ ಜನರೆಲ್ಲರೂ ಆಮ್ಲಜನಕದ ಮಾಸ್ಕ್ ಧರಿಸಿಯೇ ಬಂದಿದ್ದಾರೆ. ಪರಿಸ್ಥಿತಿ ಹೇಗಿತ್ತೆಂದರೆ, ಸುಮಾರು ಆಮ್ಲಜನಕ ಮಾಸ್ಕ್ನಲ್ಲಿ ಆಮ್ಲಜನಕವೇ ಬರುತ್ತಿರಲಿಲ್ಲ.
ಒಮ್ಮೆ ಸಮಸ್ಯೆ ಏನು ಎಂದು ತಿಳಿಯದೇ ಪೈಲಟ್ ಜೆಟ್ ಏರ್ವೇಸ್ನ ವಿಮಾನವನ್ನು ಆಗಸದೊಳಕ್ಕೆ ಹೊಕ್ಕಿಸಿದ್ದರೆ, ಹೀಲಿಯೋಸ್ 522 ವಿಮಾನ ದುರಂತದ ಇತಿಹಾಸ ಮತ್ತೊಮ್ಮೆ ಸಂಭವಿಸುತ್ತಿತ್ತು. ಆದರೆ ಪೈಲಟ್ ವಾಪಸ್ ಮುಂಬೈಗೇ ವಿಮಾನವನ್ನು ವಾಪಸ್ ತಂದಿಳಿಸಿದ್ದರ ಪರಿಣಾಮ ಜನರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇತಿಹಾಸದಲ್ಲಿ ಕಪ್ಪು ಚುಕ್ಕಿಯಾಗಿ ಉಳಿಯಬಹುದಾದ ಒಂದು ದೊಡ್ಡ ವಿಮಾನ ಅಪಘಾತ ತಪ್ಪಿದೆ. ಒಂದು ಬೇಜವಾಬ್ದಾರಿ ನಡೆ ಜೆಟ್ ಏರ್ವೇಸ್ನ ವಿಮಾನದಲ್ಲಿದ್ದ ಅಷ್ಟೂ ಜನರನ್ನು ಬಲಿ ಪಡೆಯುತ್ತಿತ್ತು.
ಜೆಟ್ ಏರ್ವೇಸ್ ಸಿಬ್ಬಂದಿ ನಿರ್ಲಕ್ಷ್ಯ: ತಪ್ಪಿದ ಭಾರಿ ದುರಂತ
ಪ್ರಯಾಣಿಕರ ಮೂಗು,ಕಿವಿಯಲ್ಲಿ ರಕ್ತಸ್ರಾವ!
ಮುಂಬೈ: ಜೆಟ್ ಏರ್ವೇಸ್ ಸಿಬ್ಬಂದಿ ಬೇಜವಾಬ್ದಾರಿತನದಿಂದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಕಿವಿ, ಮೂಗಿನಲ್ಲಿ ರಕ್ತ ಬಂದಿರುವ ಘಟನೆ ನಡೆದಿದೆ.
ಮುಂಬೈ-ಜೈಪುರ್ ಜೆಟ್ ಏರ್ವೇಸ್ ವಿಮಾನ ಹಾರಾಟ ನಡೆಸಿದ ಕೆಲವೇ ನಿಮಿಷಗಳಲ್ಲಿ ಮತ್ತೆ ಮುಂಬೈ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಿದೆ. ಗುರುವಾರ ಬೆಳಗ್ಗೆ ಜೈಪುರಕ್ಕೆ ಹೊರಟಿದ್ದ ಈ ವಿಮಾನದಲ್ಲಿ ಕ್ಯಾಬಿನ್ ಒತ್ತಡ ನಿರ್ವಹಣೆ ಮರೆತಿದ್ದರ ಪರಿಣಾಮ ಹಲವು ಪ್ರಯಾಣಿಕರ ಕಿವಿ ಹಾಗೂ ಮೂಗಿನಲ್ಲಿ ರಕ್ತ ಸೋರಿದೆ. ವಿಮಾನದಲ್ಲಿ 166 ಮಂದಿ ಪ್ರಯಾಣಿಸುತ್ತಿದ್ದು, ಅದರಲ್ಲಿ 30 ಪ್ರಯಾಣಿಕರ ಕಿವಿ ಹಾಗೂ ಮೂಗಿನಲ್ಲಿ ರಕ್ತ ಸ್ರಾವವಾಗಿದೆ.
ವಿಮಾನದ ಸಿಬ್ಬಂದಿ ಹಾರಾಟದ ಆರಂಭದಲ್ಲಿ ಕ್ಯಾಬಿನ್ ಒತ್ತಡ ಸಮಸ್ಯೆಯನ್ನು ನಿಯಂತ್ರಿಸದೆ ಇದ್ದ ಕಾರಣ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಒತ್ತಡವನ್ನು ತಡೆಯಲಾಗದೇ ತಲೆನೋವು ಕಾಣಿಸಿಕೊಂಡಿತು. ಮೂಗು ಮತ್ತು ಕಿವಿಯಲ್ಲಿ ರಕ್ತಸ್ರಾವವಾಗಲು ಆರಂಭವಾಯಿತು.
ವಿಮಾನ ಮೇಲೆ ಹಾರುತ್ತಿದ್ದಾಗ ಸಿಬ್ಬಂದಿ ಬ್ಲೀಡ್ ಸ್ವಿಚ್ ಆಯ್ಕೆ ಮಾಡಲು ಮರೆತಿದ್ದರಿಂದ ಕ್ಯಾಬಿನ್ನ ಒತ್ತಡವನ್ನು ನಿರ್ವಹಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಪ್ರಯಾಣಿಕರಿಗೆ ಆಕ್ಸಿಜನ್ ಮುಖವಾಡ ನೀಡಲಾಯಿತು ಎಂದು ವಿಮಾನಯಾನ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳು ಘಟನೆ ಬಗ್ಗೆ ವಿವರಿಸಿದ್ದಾರೆ. 9 ಎಬ್ಲ್ಯೂ 697 ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕರು ಅಸ್ವಸ್ಥರಾಗುತ್ತಿದ್ದಂತೆ 45 ನಿಮಿಷದ ಹಾರಾಟದ ಬಳಿಕ ಮುಂಬೈ ವಿಮಾನ ನಿಲ್ದಾಣದಲ್ಲಿ ವಾಪಸ್ ಇಳಿಸಲಾಗಿದ್ದು, ಅಸ್ವಸ್ಥಗೊಂಡ ಪ್ರಯಾಣಿಕರಿಗೆ ಚಿಕಿತ್ಸೆ ನೀಡಲಾಗಿದೆ.
ವಿಮಾನದೊಳಗೆ ಒತ್ತಡ ನಿಯಂತ್ರಿಸುವ ಸ್ವಿಚ್ ಹಾಕಲು ಸಿಬ್ಬಂದಿ ಮರೆತ ಕಾರಣ ಈ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಇದು ಸಿಬ್ಬಂದಿಯ ನಿರ್ಲಕ್ಷ್ಯತನವೇ ಕಾರಣ ಎಂದು ತಿಳಿದುಬಂದಿದೆ.
ಭಯಾನಕತೆ: ಪ್ರಯಾಣಿಕರಿಂದ ಟ್ವೀಟ್
ವಿಮಾನ ಹಾರಾಟದ ವೇಳೆಯಲ್ಲಿ ತೊಂದರೆಗೀಡಾಗಿದ್ದ ಬಗ್ಗೆ ಸ್ವತಃ ಪ್ರಯಾಣಿಕರೇ ಟ್ವೀಟ್ ಮಾಡಿದ್ದು, ಇದೊಂದು ಭಯಾನಕತೆ ಎಂದು ಹೇಳಿಕೊಂಡಿದ್ದಾರೆ.
ಇದ್ದಕ್ಕಿಂದ್ದಂತೆ ಒತ್ತಡ ಹೆಚ್ಚಾಗಿ ಪ್ರಯಾಣಿಕರ ಕಣ್ಣು-ಕಿವಿಯಲ್ಲಿ ರಕ್ತಸ್ರಾವವಾಗಿದ್ದು, ಭಯಾನಕ ದೃಶ್ಯವಾಗಿತ್ತು ಎಂದು ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಉಸಿರಾಟಕ್ಕೆ ತೊಂದರೆಯಾದ್ದರಿಂದ ಮಾಸ್ಕ್ ಅಳವಡಿಸಿಕೊಂಡರೆ ಅದರಲ್ಲಿ ಗಾಳಿಯೇ ಇಲ್ಲ, ಇದರಿಂದ ಇನ್ನಷ್ಟು ಗಾಬರಿಯಾಯಿತು ಎಂದು ಹೇಳಿದ್ದಾರೆ.
ತನಿಖೆಗೆ ಆದೇಶ
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಕುರಿತು ತನಿಖೆಗೆ ಆದೇಶಿಸಿದ್ದು, ವರದಿ ನೀಡುವಂತೆ ಸೂಚಿಸಿದೆ. ಇನ್ನು ಜೆಟ್ಏರ್ ವೆಸ್ ಪ್ರಯಾಣಿಕರ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳ ಕುರಿತೂ ಮಾಹಿತಿ ನೀಡಬೇಕೆಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.