ವಿಘ್ನವಿನಾಶಕನಿಗೆ ಬೆಂಗಳೂರು ಪೊಲೀಸರೇ ವಿಘ್ನ!

ಇಂದು ಗಣೇಶ ಚತುರ್ಥಿ. ನಾವೆಲ್ಲರೂ ಮನೆಯಲ್ಲಿ ಮೋದಕ, ಕಡುಬು ಮಾಡಿ ಕೈ ಮುಗಿದು ಬಿಡುತ್ತೇವೆ. ಆದರೆ, ನಮ್ಮೆಲ್ಲ ವಿಘ್ನವಿನಾಶಕನಿಗೆ ಮಾತ್ರ ಅದೇಕೋ ವಿಘ್ನಗಳು ತಪ್ಪುತ್ತಿಲ್ಲ. ದಿನಕ್ಕೊಂದು ವಿಘ್ನ, ದಿನಕ್ಕೊಂದು ತಲೆ ಬಿಸಿ. ಇವತ್ತೂ ಗಣೇಶನಿಗೆ ತಲೆ ಬಿಸಿ ಇದೆ. ಇಷ್ಟು ದಿನ ಗಣೇಶನ ವಿಗ್ರಹವನ್ನು ಕೂರಿಸಬೇಕು ಎಂದರೆ, ಪೊಲೀಸ್‌ ಠಾಣೆ, ಅಗ್ನಿಶಾಮಕ ದಳ, ಬಿಬಿಎಂಪಿ… ಹೀಗೆ ಎಲ್ಲ ಕಡೆಗಳಲ್ಲಿ ಅನುಮತಿ ಪತ್ರಗಳನ್ನು ತೆಗೆದುಕೊಳ್ಳಬೇಕಿತ್ತು. ಆದರೆ, ಈ ಬಗ್ಗೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಏಕ ಗವಾಕ್ಷಿ ಸೇವೆಯನ್ನು ಶುರು ಮಾಡಿತ್ತು. ಅದರ ಪ್ರಕಾರ ಎಲ್ಲ ರೀತಿಯ ಅನುಮತಿಗಳು ಒಂದೇ ಕಡೆ ಸಿಗುವಂತೆ ಮಾಡಿದರು. ಆದರೆ ಇಷ್ಟು ಮಾಡಿದರೂ ವ್ಯವಸ್ಥೆ ಸರಿ ಹೋಗಬೇಕಲ್ಲ. ಪೊಲೀಸ್‌ ಮಹಾನಿರ್ದೇಶಕರಿಂದ ಒಂದು ಹೊಸ ಸುತ್ತೋಲೆ ಬಂದಿದೆ. ಅದರ ಪ್ರಕಾರ, ದೊಡ್ಡ ಗಣೇಶವನ್ನು ಯಾರು ಕೂರಿಸುತ್ತಾರೋ ಅವರು ಅಗ್ನಿ ಶಾಮಕ ದಳದಿಂದ ನಿರಾಕ್ಷೇಪಣಾ ಪತ್ರ ತೆಗೆದುಕೊಳ್ಳುವುದಕ್ಕೆ 5,000 ರು. ಕೊಡಬೇಕಂತೆ.

ಇದು ಯಾವ ರೀತಿಯ ತುಘಲಕ್‌ ದರ್ಬಾರ್‌ ಸ್ವಾಮಿ? ನಮ್ಮ ಗಣೇಶನ ಹಬ್ಬವನ್ನು ನಾವು ಮಾಡಿಕೊಳ್ಳುವುದಕ್ಕೆ 5,000 ರುಪಾಯಿ ಏಕೆ ಕೊಡಬೇಕು? ಇಂಥ ಕಾನೂನು ಎಲ್ಲಿದೆ ಹೇಳಿ?

ಅಗ್ನಿ ಶಾಮಕ ದಳದ ಎಲ್ಲ ವಿಚಾರ ಬರುವುದು ಕರ್ನಾಟಕ ಫೈರ್‌ಫೋರ್ಸ್‌ ಆ್ಯಕ್ಟ್ 1964ನಲ್ಲಿ. ಇದೇ ಕಾಯಿದೆಯ ಸೆಕ್ಷನ್‌ 13 ಹೇಳುತ್ತದೆ, ಒಮ್ಮೆ ಯಾವುದಾದರೂ ಪ್ರದೇಶದಲ್ಲಿ ಬೆಂಕಿ ಅನಾಹುತ ಸಂಭವಿಸಬಹುದು ಎಂದಾದಲ್ಲಿ, ಅಂಥ ಪ್ರದೇಶದ ಮಾಲಿಕರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದರ ಬಗ್ಗೆ ಪತ್ರಿಕೆಯಲ್ಲಿ ಅಥವಾ ನಿಯತಕಾಲಿಕೆಯಲ್ಲಿ ಅಧಿಕೃತ ಪ್ರಕಟಣೆ ಮಾಡಿರಬೇಕು ಎಂದು. ಆದರೆ, ಪೊಲೀಸರು ಕಳುಹಿಸಿರುವ ಸುತ್ತೋಲೆ ಯಾವ ಅಧಿಕೃತ ದಿನಪತ್ರಿಕೆ ಅಥವಾ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ ಗೊತ್ತಿಲ್ಲ. ನಿಜವಾಗಿ ಇವರು ಪ್ರಕಟಿಸಿಯೂ ಇಲ್ಲ.

ಇನ್ನು ಅದೇ ಅಗ್ನಿ ಶಾಮಕ ದಳ ಕಾಯಿದೆಯ ಅಧ್ಯಾಯ 4ರ ಸೆಕ್ಷನ್‌ 14-17ರಲ್ಲಿ ಯಾವುದೇ ಮಾದರಿಯಲ್ಲೂ ನಿರಾಕ್ಷೇಪಣಾಪತ್ರಕ್ಕೆ 5,000 ರು. ಕೊಡಬೇಕು ಎಂದು ಎಲ್ಲಿಯೂ ಉಲ್ಲೇಖವಿಲ್ಲ. ‘ಯಾವುದೇ ಅಗ್ನಿ ಅವಘಡಗಳು ಸಂಭವಿಸಿದಾಗ, ಅಗ್ನಿ ಶಾಮಕ ದಳದವರು ಆ ಬೆಂಕಿಯನ್ನು ಆರಿಸಿದ ಮೇಲೆ, ಘಟನೆಯಾದ ಆಸ್ತಿಯ ಒಟ್ಟು ಮೌಲ್ಯದ ಶೇ.10ರಷ್ಟು ಮಾತ್ರ ತೆಗೆದುಕೊಳ್ಳಬೇಕು.’ ಎಂದಿದೆ. ಅಂದರೆ, ಮುಂಚಿತವಾಗಿಯೇ ತೆಗೆದುಕೊಳ್ಳಬೇಕಿಲ್ಲ ಎಂದರ್ಥ. ಆದರೆ ಪೊಲೀಸ್‌ ಇಲಾಖೆ ಮಾಡುತ್ತಿರುವುದೇನು? ಗಣೇಶ ಕೂರಿಸುವುದಕ್ಕಿಂತ ಮುಂಚೆಯೇ ಇವರಿಗೆ 5 ಸಾವಿರ ರುಪಾಯಿ ಇಟ್ಟುಬಿಡಬೇಕಂತೆ.

ಇವರ ಈ ಸರ್ವಾಧಿಕಾರ ನೋಡಿಯೇ ಕರ್ನಾಟಕ ಹೈ ಕೋರ್ಟ್‌ ಪೊಲೀಸರನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದೆ. ಉದ್ಯಮಿಯೊಬ್ಬರ ಸಿವಿಲ್‌ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಬಸವನಗುಡಿ ಪೊಲೀಸ್‌ ಠಾಣಾಧಿಕಾರಿಯು ದಕ್ಷಿಣ ಡಿಸಿಪಿ ಅವರ ಆದೇಶದ ಅನುಸಾರ ಎಫ್‌ಐಆರ್‌ ದಾಖಲು ಮಾಡಿದ್ದಕ್ಕೆ ಹೈಕೋರ್ಟ್‌, ‘ಕರ್ನಾಟಕ ರಾಜ್ಯ ಜಂಗಲ್‌ ರಾಜ್ಯವಾಗಿ ಪರಿವರ್ತನೆಯಾಗಿದೆ. ಪೊಲೀಸರು ತಮ್ಮಷ್ಟಕ್ಕೆ ತಾವೇ ಕಾನೂನು ಎಂದುಕೊಂಡಿದ್ದಾರೆ’ ಎಂದು ಬಯ್ದಿದೆ.

ಈ ಸುತ್ತೋಲೆಯಲ್ಲಿ ಎಷ್ಟು ಲೋಪದೋಷಗಳಿವೆ ನೋಡಿ, ‘ಸಾರ್ವಜನಿಕ ರಸ್ತೆಗಳಲ್ಲಿ ಸಾಮಾನ್ಯವಾಗಿ ಪ್ರತಿಷ್ಠಾಪಿಸುವ ಸಣ್ಣ ಪುಟ್ಟ ಗಣೇಶ ಮೂರ್ತಿಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ’ ಎಂದು. ಅಂದರೆ, 5 ಸಾವಿರ ರುಪಾಯಿ ಕೊಡಬೇಕಿಲ್ಲ ಎಂದರ್ಥ. ಈಗ ಒಂದು ಗಣೇಶ ಮೂರ್ತಿ ಸಣ್ಣದು ಚಿಕ್ಕದು ಎಂಬುದಕ್ಕೆ ಏನು ವಿವರಣೆ ನೀಡಿದ್ದಾರೆ? ನೀಡಿಲ್ಲ. ಏಕೆಂದರೆ, ಸುತ್ತೋಲೆ ಹೊರಡಿಸುವ ಪೊಲೀಸರಿಗೇ ಅದು ಗೊತ್ತಿಲ್ಲ. 20 ಅಡಿ ಮೂರ್ತಿಗಿಂತ 10 ಅಡಿ ಮೂರ್ತಿ ಚಿಕ್ಕದು. 100 ಅಡಿ ಮೂರ್ತಿಗಿಂತ 50 ಅಡಿ ಚಿಕ್ಕದು. ನಾನು ನನ್ನ ಗಣೇಶ ಮೂರ್ತಿಯನ್ನು ಚಿಕ್ಕದು ಎಂದೇ ವಾದಿಸಬಹುದು. ಅಥವಾ ಪೊಲೀಸರು, 5 ಅಡಿ ಮೂರ್ತಿಯೂ ದೊಡ್ಡದು ಎಂದು ವಾದಿಸಬಹುದು. ಆಗ ಹಣ ಕಟ್ಟಿಲ್ಲ ಎಂದು ಕಾನೂನು ಕ್ರಮ ಕೈಗೊಳ್ಳಬಹುದು.

ಇನ್ನು ಈ ನಿಯಮ ಕೇವಲ ಬೆಂಗಳೂರಿಗರಿಗೆ ಮಾತ್ರ ಏಕೆ? ಹುಬ್ಬಳ್ಳಿ-ಧಾರವಾಡ, ಮೈಸೂರಿನಂತಹ ಪ್ರದೇಶದಲ್ಲಿ ಗಣೇಶ ಮೂರ್ತಿಗಳನ್ನಿಟ್ಟಾಗ ಅಗ್ನಿ ಅವಘಢಗಳು ಸಂಭವಿಸುವುದಿಲ್ಲವೇ? ಅಲ್ಲಿಗೆ ಯಾಕೆ ಆ ನಿಯಮವಿಲ್ಲ? ಇದರ ಬಗ್ಗೆ ಸರ್ಕಾರ ಮಾತಾಡುವುದೇ ಇಲ್ಲ. ಗಣೇಶ ಹಬ್ಬಕ್ಕೆ ಅಡಚಣೆ ತರುವುದಕ್ಕಾಗಿಯೇ ತರಾತುರಿಯಲ್ಲಿ ಹೊರಡಿಸಿರುವ ಆದೇಶಗಳಿವು ಎಂದು ಅನಿಸುವುದಕ್ಕೆ ಇನ್ನೆಷ್ಟು ಕಾರಣಗಳು ಬೇಕು ಹೇಳಿ?

ಇನ್ನು ಗಣೇಶ ಹಬ್ಬಕ್ಕೆ ಮಾತ್ರ ಇಂಥ ಕಾನೂನುಗಳನ್ನು ಮಾಡುತ್ತಿದ್ದಾರೆಯೇ ವಿನಾ, ಮುಸ್ಲಿಂ, ಕ್ರಿಶ್ಚಿಯನ್‌ ಅಥವಾ ಬೇರೆ ಯಾವುದೇ ಧರ್ಮಗಳ ಹಬ್ಬಕ್ಕೂ ಇಂಥ ಹಣ ಪೀಕುವ ನೀತಿಗಳೇ ಇಲ್ಲ. ಬಕ್ರೀದ್‌ಗೆ ಒಂದೆರಡು ದಿನವಿರುವಂತೆ ಬೆಂಗಳೂರಿನ ಚಾಮರಾಜಪೇಟೆಯ ಇಡೀ ಮೈದಾನದ ತುಂಬ ಕುರಿಗಳೇ ತುಂಬಿರುತ್ತವೆ. ಅಷ್ಟೂ ಕುರಿಗಳನ್ನು ಅಲ್ಲಿಯೇ ಮಾರಾಟಕ್ಕಿಟ್ಟಿರುತ್ತಾರೆ. ಆಡುವುದಕ್ಕೂ ಜಾಗವಿರುವುದಿಲ್ಲ. ಇಂಥವರಿಗೆ ಏನಾದರೂ ವಿಶೇಷ ರೀತಿಯಲ್ಲಿ ಹಣ ಪೀಕುತ್ತಾರಾ? ಇಲ್ಲ. ಅಷ್ಟೇ ಅಲ್ಲ, ಶಿವಾಜಿನಗರದಲ್ಲಿ ಕ್ರಿಶ್ಚಿಯನ್ನರು ಮೇರಿ ಹಬ್ಬದ ಮೆರವಣಿಗೆ ಮಾಡುತ್ತಾರೆ. ಆಗ ಇಂಥ ನಿಯಮ ಹಾಕಿದ್ದಾರಾ? ಆಗ ಜನಜಂಗುಳಿಯಲ್ಲಿ ಎಷ್ಟೋ ರಸ್ತೆಗಳೇ ಬಂದ್‌ ಆಗಿರುತ್ತವೆ. ಮೆರವಣಿಗೆ ಸಮಯದಲ್ಲಿ ಮೇರಿಗೆ ಲೈಟ್‌ ಹಾಕಿರುತ್ತಾರೆ. ಆಗ ಬೆಂಕಿ ಅವಘಢ ಸಂಭವಿಸಬಹುದು ಎಂದು 5 ಸಾವಿರ ರಪಾಯಿ ಮುಂಚೆಯೇ ಪೀಕುವ ಧೈರ್ಯ ಯಾವುದಾದರೂ ಪೊಲೀಸ್‌ ಮಹಾನಿರ್ದೇಶಕರಿಗೆ ಇದೆಯೇ?

ಮೊಹರ್ರಮ್‌ ಹಬ್ಬದಲ್ಲಿ ಮುಸ್ಲಿಮರು ಊರು ಜನರ ಕಿವಿ ಕಿತ್ತು ಹೋಗುವ ಹಾಗೆ ಹಾಡು ಹಾಕಿಕೊಂಡು, ಟ್ಯೂಬ್‌ಲೈಟ್‌ಗಳನ್ನು ಹಚ್ಚಿಕೊಂಡು ಮೆರವಣಿಗೆ ಹೋಗುತ್ತಾರೆ. ಪೊಲೀಸ್‌ ಮಹಾನಿರ್ದೇಶಕರಿಗೆ ಆಗ ಬೆಂಕಿ ಅನಾಹುತ ಸಂಭವಿಸುತ್ತದೆ ಎಂದೆನಿಸಿ, 5 ಸಾವಿರ ರು. ಕೇಳಬೇಕು ಅನಿಸಲ್ಲ. ಆದರೆ ಹಿಂದೂಗಳ ಹಬ್ಬ ಬಂದರೆ ಮಾತ್ರ, ಇಂಥ ಆದೇಶಗಳು ಎಲ್ಲೆಲ್ಲಿಂದಲೋ ಬಂದುಬಿಡುತ್ತವೆ.

ಇದು ಎಷ್ಟು ಚೆನ್ನಾಗಿ ಸಂವಿಧಾನದ ಉಲ್ಲಘನೆಯೂ ಆಗುತ್ತದೆ ನೋಡಿ, ಸಂವಿಧಾನದ ಆರ್ಟಿಕಲ್‌ 14 ಹೇಳುತ್ತದೆ ‘Equality before law The State shall not deny to any person equality before the law or the equal protection of the laws within the territory of India Prohibition of discrimination on grounds of religion, race, caste, sex or place of birth. ’ ಅಂದರೆ, ಧರ್ಮ, ಜಾತಿ, ಲಿಂಗ ಅಥವಾ ಹುಟ್ಟಿದ ಜಾಗದ ಅನುಸಾರ ಯಾರಿಗೂ ಕಾನೂನಿನಲ್ಲಿ ತಾರತಮ್ಯ ಮಾಡಬಾರದು. ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂದು ಹೇಳಿದೆ. ಆದರೆ, ಪೊಲೀಸರು, ಗಣೇಶ ಹಬ್ಬಕ್ಕೆ ಮಾತ್ರ ಈ ಸುತ್ತೋಲೆಯನ್ನು ಹೊರಡಿಸುವ ಮೂಲಕ ಸಂವಿಧಾನವನ್ನು ಸಾರಾಸಗಟವಾಗಿ ಪಕ್ಕಕ್ಕೆ ತಳ್ಳಿದ್ದಾರೆ. ಅಂಬೇಡ್ಕರ್‌ ಬರೆದ ಗ್ರಂಥಕ್ಕೆ ಅಪಮಾನ ಮಾಡುವುದು ಎಂದರೆ, ಅಂಬೇಡ್ಕರ್‌ಗೇ ಮಾಡುವ ಅಪಮಾನ. ಅಂಬೇಡ್ಕರ್‌ಗೇ ಅವಮಾನ ಮಾಡುವ ಪೊಲೀಸ್‌ ಅಧಿಕಾರಿಗಳಿಗೆ ಈ ಸರ್ಕಾರಿ ನೌಕರಿಯೇಕೆ? ಕಾರು, ಮನೆ, ಸಂಬಳವೇಕೆ? ಮತ್ತು ಈ ದೇಶವೇಕೆ?

ರಾಜಕಾರಣಿಗಳ ಭಾಷಣವಿದ್ದಾಗಲೂ ಬೆಂಕಿ ಹೊತ್ತಿಕೊಳ್ಳಬಹುದಾಗಿದ್ದರಿಂದ 5 ಸಾವಿರ ರುಪಾಯಿ ಮೊದಲೇ ಕಟ್ಟಿ ಎಂದು ಪೊಲೀಸ್‌ ಸುತ್ತೋಲೆ ಹೊರಡಿಸಿಲ್ಲ. ಕೆಲವು ಧರ್ಮದ ಹಲವು ಕಾರ್ಯಕ್ರಮಗಳು ನಡೆದಾಗ ಬೆಂಕಿ ಹೊತ್ತಿಕೊಳ್ಳುತ್ತದೆನ್ನುವುದಕ್ಕೆ ನಿರಾಕ್ಷೇಪಣಾ ಪತ್ರ ತೆಗೆದುಕೊಳ್ಳುವುದಕ್ಕೆ 5 ಸಾವಿರ ರುಪಾಯಿ ಕೊಡಬೇಕೆಂಬ ಸುತ್ತೋಲೆ ಹೊರಡಿಸಿಲ್ಲ. ಆದರೆ, ಗಣೇಶ ಹಬ್ಬಕ್ಕೇ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದರೆ, ಬೆಂಕಿ ಹೊತ್ತಿಕೊಳ್ಳುವುದು ಗಣೇಶ ಪೆಂಡಾಲ್‌ನಲ್ಲೋ ಅಥವಾ ನಿಮ್ಮಗಳ ಹಿಂದೆಯೋ ಹೇಳಿಬಿಡಿ.

ಈ ಪೊಲೀಸರು ಹೊರಡಿಸಿರುವ ಸುತ್ತೋಲೆ ಎಂಥ ಅದ್ಭುತವಾಗಿದೆ ಎಂದರೆ, ಫೈರ್‌ ಫೋರ್ಸ್‌ ಆ್ಯಕ್ಟ್ 1964ನ ಬಗ್ಗೆ ಉಲ್ಲೇಖನವಿಲ್ಲ, ಪೊಲೀಸ್‌ ಕಾಯಿದೆಯ ಪ್ರಕಾರವಾದರೂ ಹಣ ಸಂಗ್ರಹಿಸುವುದಕ್ಕೆ ಕರ್ನಾಟಕ ಪೊಲೀಸ್‌ ಆ್ಯಕ್ಟ್ 1963ರ ಉಲ್ಲೇಖ ಕೊಟ್ಟಿಲ್ಲ? ಸಂವಿಧಾನ, ಐಪಿಸಿ ಬಗ್ಗೆ ಹೇಳಿದ್ದಾರಾ? ಇಲ್ಲವೇ ಇಲ್ಲ. ಹಾಗಾದರೆ ಈಗ ಇವರ ಸುತ್ತೋಲೆಯ ಹಾಳೆ ಮತ್ತು ಟಾಯ್ಲೆಟ್‌ನಲ್ಲಿ ಇಡುವ ಟಿಶ್ಯು ಪೇಪರನ್ನು ಒಟ್ಟಿಗೇ ಹಿಡಿದು ನೋಡಿ. ಪೇಪರ್‌ನಲ್ಲಿ ಏನಾದರೂ ವ್ಯತ್ಯಾಸ ಕಾಣುತ್ತದೆಯೇ ಎಂದು ನೀವೇ ಕಂಡುಕೊಳ್ಳಿ.

ಈ ಸುತ್ತೋಲೆ ಬರುವುದಕ್ಕೂ ಮುನ್ನ ಇನ್ನೊಂದು ಸುತ್ತೋಲೆ ಮತ್ತೂ ಅದ್ಭುತವಾಗಿತ್ತು. ಅದರ ಪ್ರಕಾರ ಎಲ್ಲ ಗಣೇಶ ಪೆಂಡಾಲ್‌ಗಳೂ 5 ಸಾವಿರ ಕಟ್ಟಿ ನಿರಾಕ್ಷೇಪಣಾಪತ್ರ ತೆಗೆದುಕೊಳ್ಳಬೇಕಿತ್ತು. ಆದರೆ ಇದರ ಬಗ್ಗೆ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸುತ್ತೇವೆಂದು ಹೇಳಿದ ಮೇಲೆ ಹೆದರಿದ ಇಲಾಖೆ, ರಾತ್ರೋರಾತ್ರಿ ಕೂತು, ‘ಸಣ್ಣ ಪುಟ್ಟ ಗಣೇಶ ಮೂರ್ತಿಗಳನ್ನು ಕೂರಿಸುವುದಕ್ಕೆ ಇದು ಅನ್ವಯವಾಗುವುದಿಲ್ಲ’ ಎಂದಿದೆ. ಆದರೆ, ಸಣ್ಣ ಮೂರ್ತಿಗಳ, ದೊಡ್ಡ ಮೂರ್ತಿಗಳ ವಿವರಣೆ ಕೊಡದೇ, ಮತ್ತೆ ಚೆಂಡನ್ನು ತನ್ನ ಕೋರ್ಟ್‌ನಲ್ಲೇ ಇಟ್ಟುಕೊಂಡಿದೆ. ಪೊಲೀಸರು ಗಣೇಶ ಪೆಂಡಾಲ್‌ಗೆ ಬಂದು 5 ಸಾವಿರ ರು. ಕಟ್ಟಿರುವುದಕ್ಕೆ ಸ್ವೀಕೃತಿ ಪತ್ರ ತೋರಿಸಿ ಎಂದಾಗ ಪೊಲೀಸರ ಈ ಬುದ್ಧಿವಂತ ನಡೆ ಗೊತ್ತಾಗುತ್ತದೆ.

ಪೊಲೀಸರು ಪ್ರಸ್ತುತ ಇರುವ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರಕ್ಕೆ ಕೆಲಸ ಮಾಡುವುದರಿಂದ ಸರ್ಕಾರದ ಆದೇಶ ಏನೇ ಬಂದರೂ ಇಷ್ಟವಿರಲಿ, ಇಲ್ಲದಿರಲಿ ಪಾಲಿಸಲೇಬೇಕಾಗುತ್ತದೆ. ಆದರೆ, ಕೊನೆಗೆ ಇಂಥ ಸುತ್ತೋಲೆ ಹೊರಡಿಸಿ ಜನರ ಕೆಂಗಣ್ಣಿಗೆ ಗುರಿಯಾಗುವವರು ಅವರೇ.

ಅಲ್ಲಿಗೆ, ವಿಘ್ನೇಶ್ವರನಿಗೆ ಬೆಂಗಳೂರು ಪೊಲೀಸರೇ ವಿಘ್ನ ಎಂದಾಯಿತು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya