ದೇವಸ್ಥಾನಕ್ಕೆ ಬಂದು ಹೋಗಿ, ಕೊಂಡು ಹೋಗಬೇಡಿ ಮುಖ್ಯಮಂತ್ರಿಗಳೇ!

ಕುಮಾರಸ್ವಾಮಿ ಸರ್ಕಾರ ಕೊಡಗು ಜನತೆಗೆ ಸ್ಪಂದಿಸುತ್ತಿದೆ. ಯಾವುದಾದರೂ ಸರ್ಕಾರ ಜನರಿಗೆ ಸ್ಪಂದಿಸುತ್ತಿದೆ ಎಂಬುದಕ್ಕಿಂತ ಖುಷಿ ಮತ್ತೇನಿದೆ ಹೇಳಿ? ಇವರು ಸ್ಪಂದಿಸುತ್ತಿದ್ದಾರೆ. ಆದರೆ ಇದಕ್ಕಾಗಿ ಪರಮ ಆಸ್ತಿಕ ಕುಮಾರಸ್ವಾಮಿಯವರು ದೇವರ ಹುಂಡಿಗೆ ಕೈ ಹಾಕಿದ್ದಾರೆ. ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಆಯ್ದ 81 ಅಧಿಸೂಚಿತ ದೇವಾಲಯಗಳ 12 ಕೋಟಿ 30 ಲಕ್ಷ ರುಪಾಯಿಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ವರ್ಗಾಯಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಕೊಡಗಿನ ಜನತೆಗೆ ನಾವು ಸಹಾಯ ಮಾಡಬೇಕು ಎನ್ನುವುದು ಅಕ್ಷರಶಃ ಒಪ್ಪುವಂಥದ್ದೇ. ಅಲ್ಲಿನ ಜನತೆಗೆ ಬದುಕುತ್ತಿರುವ ಸ್ಥಿತಿ ಶತ್ರುವಿಗೂ ಬೇಡ. ಪರಿಹಾರ ಕೇಂದ್ರಗಳಲ್ಲಿ 300 ಜನರಿಗೆ 3 ಶೌಚಾಲಯಗಳಿವೆ ಎಂದರೆ ಪರಿಸ್ಥಿತಿ ಹೇಗಿದೆ ಎಂದು ನಮಗರಿವಾಗಬಹುದು. ಅದಕ್ಕೆ ಸರಿಯಾಗಿ ಸೇವಾ ಭಾರತಿ ಸೇರಿದಂತೆ ನೂರಾರು ಸಂಘಟನೆಗಳು ಕೆಲಸ ಮಾಡುತ್ತಿವೆ. ಹಣ ಸಂಗ್ರಹವೂ ಆಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಹಾಕುತ್ತಿದ್ದಾರೆ.

ಆದರೆ, ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಮಾತ್ರ ಅದೇಕೋ ಮತ್ತೆ ಹಿಂದೂಗಳನ್ನು ಬೇಕಂತಲೇ ಬಾಣೆಲೆಗೆ ಹಾಕಿ ಮಜಾ ನೋಡುತ್ತಿದೆ. ದೇವಸ್ಥಾನಗಳಿಂದ 12 ಕೋಟಿ ರುಪಾಯಿ ಕೇಳುವ ಸರ್ಕಾರ, ಅದೇ ದೇವಸ್ಥಾನಗಳನ್ನು ಈ ಹಿಂದೆ ಹೇಗೆ ನಡೆಸಿಕೊಂಡಿದೆ, ಅದರ ಅಭಿವೃದ್ಧಿಗೆ ಮುಜರಾಯಿ ಇಲಾಖೆಗೆ ಎಷ್ಟು ಹಣ ನೀಡಿದೆ ಎಂಬುದೂ ಮುಖ್ಯವಾಗುತ್ತದಲ್ಲವೇ? ಅದರ ಬಗ್ಗೆ ಒಂದಷ್ಟು ತಿಳಿದುಕೊಂಡರೆ, ಯಾರು ಎಷ್ಟು ಹಣವನ್ನು ಪರಿಹಾರ ನಿಧಿಗೆ ಕೊಡಬೇಕು ಎಂಬುದು ಸ್ಪಷ್ಟವಾಗುತ್ತದೆ.

ಸ್ವಾಂತಂತ್ರ್ಯ ಬಂದ ನಂತರ, ದೇಶದಲ್ಲಿ ಸುಮಾರು ರೀತಿಯ ಧಾರ್ಮಿಕ ದತ್ತಿ ಕಾಯಿದೆಗಳಿದ್ದವು. ಮದ್ರಾಸ್‌ ಧಾರ್ಮಿಕ ದತ್ತಿ ಕಾಯಿದೆ, ಮುಂಬೈ ಕರ್ನಾಟಕ ಧಾರ್ಮಿಕ ದತ್ತಿ ಕಾಯಿದೆ, ಮೈಸೂರು ಧಾರ್ಮಿಕ ದತ್ತಿ ಕಾಯಿದೆ ಇತ್ಯಾದಿ.

ಇವರೆಲ್ಲ ಸಂವಿಧಾನದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಾರಲ್ಲ. ಹಾಗಾಗಿ, ಸಂವಿಧಾನದ ಆರ್ಟಿಕಲ್‌ 25ರ ಪ್ರಕಾರ, ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ಎಂಬ ಹಕ್ಕಿದೆ. ಈ ದೇಶದ ಸುಪ್ರೀಂಕೋರ್ಟ್‌ ಹೇಳುತ್ತದೆ, ಯಾವುದೇ ಕಾನೂನು ಉಲ್ಲಂಘನೆಯಾದರೂ ಸರಿ, ಆದರೆ, ಸಂವಿಧಾನದ ನಾಗರಿಕ ಹಕ್ಕುಗಳು ಮಾತ್ರ ಉಲ್ಲಂಘನೆಯಾಗಬಾರದು ಎಂದು. ಆದರೆ ದುರ್ದೈವ ಏನೆಂದರೆ, ಹಿಂದೂಗಳ ಮಟ್ಟಿಗೆ ಮಾತ್ರ ಸಂವಿಧಾನದ ಆರ್ಟಿಕಲ್‌ 25 ಉಲ್ಲಂಘನೆಯಾಗುತ್ತಿದೆ. ದೇವಸ್ಥಾನಗಳ ವಿಚಾರ ಬರುವುದು ಇದೇ ಆರ್ಟಿಕಲ್‌ 25ರ ಧಾರ್ಮಿಕ ಸ್ವಾತಂತ್ರ್ಯ ಹಕ್ಕು. ಅಂದರೆ, ನಮ್ಮ ಧರ್ಮದ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ, ಮೂಗು ತೂರಿಸುವುದು ಮಾಡಲೇಬಾರದು. cantwell v. connecticut 310 u.s. 295 ಪ್ರಕರಣ ಉಲ್ಲೇಖಿಸಿ ಸಂವಿಧಾನದಲ್ಲಿ ‘The right of worship was granted by God for man to worship as he pleased. There shall be no compulsion in law of any creed or practice of any form of worship’ ಎಂದು ಸ್ಪಷ್ಟವಾಗಿ ಅಂಬೇಡ್ಕರ್‌ ತಿಳಿಸಿದ್ದಾರೆ. ಆದರೂ ಹಿಂದೂ ದೇವರಿಗೆ ಹೇಗೆ ಪೂಜೆ ನಡೆಯಬೇಕು, ಯಾರು ಮಾಡಬೇಕು, ಪಾರುಪತ್ತೆದಾರಿಕೆ ಯಾರು ಮಾಡಬೇಕು, ದೇವಸ್ಥಾನ ಹೇಗಿರಬೇಕು, ಕಾಣಿಕೆ ಹಣ ಹೇಗೆ ವಿನಿಯೋಗವಾಗಬೇಕು ಎಂಬುದನ್ನೆಲ್ಲ ಸರ್ಕಾರ ನಿರ್ಧರಿಸುತ್ತಿದೆ ಎಂದರೆ, ದೇವಸ್ಥಾನದ ಸಂಪೂರ್ಣ ಆಡಳಿತ ಸರ್ಕಾರದ ಬಳಿ ಇದೆ ಎಂದಲ್ಲವೆ? ಅಲ್ಲೇ ಸಂವಿಧಾನ ಉಲ್ಲಂಘನೆಯೂ ಆಗಿದೆಯಲ್ಲವೆ?

ತಮಿಳುನಾಡಿನ ಚಿದಂಬರಂನಲ್ಲಿರುವ ನಟರಾಜ ದೇವಸ್ಥಾನದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳುತ್ತದೆ, ‘ಯಾವುದೇ ದೇವಸ್ಥಾನಗಳಲ್ಲಿ ಆಡಳಿತ ವಿಫಲವಾದರೆ, ಬಹಳ ಅಲ್ಪಾವಧಿಯವರೆಗೆ ಮಾತ್ರ ಸರ್ಕಾರ ಆ ದೇವಸ್ಥಾನದ ಆಡಳಿತ ನೋಡಿಕೊಳ್ಳಬೇಕು. ಎಲ್ಲವೂ ಸರಿಯಾದ ಮೇಲೆ ದೇವಸ್ಥಾನದ ಮಂಡಳಿಗೇ ಎಲ್ಲವೂ ಬಿಟ್ಟುಕೊಡಬೇಕು. ಏಕೆಂದರೆ, ದೇವಸ್ಥಾನ ಯಾವುದೋ ಕಚೇರಿಯಲ್ಲ. ಬದಲಿಗೆ ಅದು ಧಾರ್ಮಿಕ ಸ್ಥಳ’ ಎಂದು ತೀರ್ಪು ನೀಡಿದೆ. ಸರ್ಕಾರ ದೇವಸ್ಥಾನದ ಆಡಳಿತವನ್ನು ಹೆಚ್ಚೆಂದರೆ ಒಂದರಿಂದ ಎರಡು ವರ್ಷಗಳವರೆಗೆ ಮಾತ್ರತೆಗೆದುಕೊಳ್ಳಬೇಕು. ಆದರೆ ಇವರು ದೇವಸ್ಥಾನಗಳನ್ನು ಸುಪರ್ದಿಗೆ ತೆಗೆದುಕೊಳ್ಳುವುದಕ್ಕೆ ಒಂದು ಇಲಾಖೆಯನ್ನೇ ಸ್ಥಾಪಿಸಿ, ಎಲ್ಲವನ್ನೂ ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ದೇವಸ್ಥಾನಗಳು ಸರ್ಕಾರದ ಆಸ್ತಿಯೆಂಬ ಮಟ್ಟಕ್ಕೆ ತಂದಿಟ್ಟುಕೊಂಡಿದ್ದಾರೆ.

1998ರಲ್ಲಿ ಧಾರ್ಮಿಕ ದತ್ತಿ ಕಾಯಿದೆ ಜಾರಿ ಮಾಡಿದರು. ಆಗ ದೇವಸ್ಥಾನಗಳನ್ನು ತೆಗೆದುಕೊಳ್ಳುವುದಲ್ಲದೆ, ಆಗಿನ ಕಾಲದಲ್ಲಿ ರಾಜರು ಕೊಟ್ಟಿದ್ದ ದೇವಸ್ಥಾನಗಳ ಜಮೀನನ್ನೂ ಸರ್ಕಾರ ತನ್ನ ಆಸ್ತಿಯಾಗಿಸಿಕೊಂಡಿತು. ಅಂದರೆ, ಜಮೀನಿನಿಂದ ಬರುತ್ತಿದ್ದ ಹಣ, ಎಲ್ಲವೂ ಸರ್ಕಾರಕ್ಕೆ, ಹುಂಡಿಯ ದುಡ್ಡು ಮುಜರಾಯಿಗೆ, ದೇವಸ್ಥಾನದ ಎಲ್ಲ ಹಣವೂ ಹೋಯಿತು. ಮೈಸೂರಿನ ಚಾಮುಂಡಿ ದೇವಸ್ಥಾನಕ್ಕೆ ಹೆಚ್ಚೂಕಡಿಮೆ 6 ಸಾವಿರ ಎಕರೆ ಮಾನ್ಯ ಇತ್ತಂತೆ. ಆದರೆ, ಈಗ ಸರಿಯಾಗಿ ಒಂದು ಎಕರೆಯೂ ಚಾಮುಂಡಿ ದೇವಸ್ಥಾನಕ್ಕೆ ಸೇರಿಲ್ಲ. ಇದೇ ಮುಖ್ಯಮಂತ್ರಿ ದಿನ ಬೆಳಗಾದರೆ, ಮುಜರಾಯಿ ಇಲಾಖೆಯ ಯಾವುದೋ ದೇವಸ್ಥಾನಗಳನ್ನು ಸುತ್ತುತ್ತಿರುತ್ತಾರೆ.

ಸರಿ, ಜಾರಿಯಲ್ಲಿರುವ ಧಾರ್ಮಿಕ ದತ್ತಿ ಕಾಯಿದೆಯನ್ನಾದರೂ ಸರಿಯಾಗಿ ಪಾಲಿಸುತ್ತಿದ್ದಾರಾ? ಅದೂ ಇಲ್ಲ. ದೇವಸ್ಥಾನದಿಂದ ಬರುವ ಎಲ್ಲ ಆದಾಯಗಳನ್ನು ಹಿಂದೂಗಳ ಹೊರತಾಗಿ ಮತ್ತೊಂದು ಧರ್ಮಕ್ಕೆ ಬಳಸುವಂತಿಲ್ಲ ಎಂದಿದೆ. ಜತೆಗೆ, ಪ್ರಮುಖವಾಗಿ, ಯಾರಿಗೆ ಹಿಂದೂ ಧರ್ಮದ ಮೇಲೆ, ಹಿಂದೂ ದೇವತೆಗಳ ಮೇಲೆ ನಂಬಿಕೆ ಇಲ್ಲವೋ, ಹಿಂದೂ ಅಲ್ಲವೋ ಅಂಥವರು ಮುಜರಾಯಿ ಇಲಾಖೆಗೆ ನೇಮಕ ಮಾಡಿಕೊಳ್ಳಬಾರದು ಎಂದಿದೆ. ಆದರೆ, ಬೇರೆ ಧರ್ಮೀಯರನ್ನು ನೇಮಕ ಮಾಡಿಕೊಂಡಿರುವ ಪರಿಣಾಮ ಪೂಜಾರಿಯೊಬ್ಬ ತಿಂಗಳ ಸಂಬಳಕ್ಕೆ ಮುಸಲ್ಮಾನನೋ, ಕ್ರಿಶ್ಚಿಯನ್ನನ ಬಳಿಯೋ ಕೈ ಚಾಚಬೇಕು. ಇದು ಯಾವ ಕರ್ಮ ಸ್ವಾಮಿ? ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಎಂಬ ಕಾರಣಕ್ಕೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಇಂಥವರೇ ಒಬ್ಬರು ಕಾಟ ಕೊಟ್ಟಿದ್ದನ್ನು ಸ್ಮರಿಸಬಹುದು.
34,526 ದೇವಸ್ಥಾನಗಳು ಸರ್ಕಾರದ ಅಧೀನದಲ್ಲಿದೆ. ಎಷ್ಟು ದೇವಸ್ಥಾನಗಳ ಅಭಿವೃದ್ಧಿ ಮಾಡಿದ್ದಾರೆ ಕೇಳಿದರೆ, ಮಸೀದಿಗಳಿಗೆ ಸಹಾಯ ಮಾಡಿದ ಅರ್ಧದಷ್ಟೂ ಇರುವುದಿಲ್ಲ. ಆದರೆ, ಈಗ ದೇವಸ್ಥಾನದ ಹುಂಡಿ ಬುಡಕ್ಕೇ ಬಂದಿದ್ದಾರೆ.

ಸರ್ಕಾರದಿಂದ ಮುಜರಾಯಿ ಇಲಾಖೆಗೆ ಬರುವುದು 40ಕೋಟಿ ರುಪಾಯಿ ಅಷ್ಟೇ. ಅದರಲ್ಲೂ ಮುಜರಾಯಿ ಇಲಾಖೆ ದೇವಸ್ಥಾನಗಳಿಗೆ ನೀಡಿದ ಹಣ ಸುಮಾರು 13 ಕೋಟಿ ರುಪಾಯಿ ಮಾತ್ರ. ಮತ್ತೊಂದು ಲೆಕ್ಕ ನಿಮ್ಮ ಮುಂದಿಡುವುದಾದರೆ, ಮದರಸಾಗಳಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 50 ಕೋಟಿ ರುಪಾಯಿ ಅನುದಾನ ನೀಡಿದ್ದಾರೆ. ಅದೇ ಸಿದ್ದರಾಮಯ್ಯ ವೇದ ಪಾಠಶಾಲೆಗಳಿಗೆ 25 ಲಕ್ಷ ರು. ಅಷ್ಟೇ ನೀಡಿದ್ದರು.

ಇವರ ಯೋಗ್ಯತೆಗೆ ನಮ್ಮ ರಾಜ್ಯದ ಅಷ್ಟೂ ದೇವಸ್ಥಾನಗಳಿಗೆ ಕೊಡುವುದೇ 13 ಕೋಟಿ ರು. ಹೀಗಿರುವಾಗ 81 ದೇವಸ್ಥಾನಗಳಿಂದ 12 ಕೋಟಿ 30 ಲಕ್ಷ ಹಣವನ್ನು ಪರಿಹಾರ ನಿಧಿಗೆ ಕೇಳುವುದಕ್ಕೆ ನಾಚಿಕೆಯಾಗುವುದಿಲ್ಲವೆ? ಮೂರು ತಿಂಗಳಾಗಿಲ್ಲ ಕುಮಾರಸ್ವಾಮಿ ಅಧಿಕಾರಕ್ಕೆ ಬಂದು, 50ಕ್ಕೂ ಹೆಚ್ಚು ದೇವಸ್ಥಾನಗಳನ್ನು ಸುತ್ತಿದ್ದಾರೆ. ಇಷ್ಟೂ ಬುದ್ಧಿ ಬೇಡವೇ ಕುಮಾರಣ್ಣನಿಗೆ?

ಹೌದು ಮಹಾಜನರೇ, ಎಲ್ಲೋ ನಿಮ್ಮಲ್ಲಿ ಒಂದು ಅನುಮಾನ ಬಂದಿರಬಹುದು. ದೇವಸ್ಥಾನದಲ್ಲಿ ನಿಧಿ ಇರುವುದೇ ಆ ವಿಪತ್ತಿನ ಕಾಲದಲ್ಲಿ ಬಳಸಿಕೊಳ್ಳುವುದಕ್ಕೆ. ಪ್ರಕೃತಿ ವಿಕೋಪಗಳಿಂದ ಏನಾದರೂ ಹಾನಿ ಸಂಭವಿಸಿದರೆ, ದೇವಸ್ಥಾನದ ನಿಧಿಯನ್ನು ಹೊರತೆಗೆದು ಸುಧಾರಣೆಗಾಗಿ ಉಪಯೋಗಿಸಲಾಗುತ್ತಿತ್ತು. ಆದರೆ, ಹಾಗೆ ಮಾಡೋಣ ಎಂದರೆ, ಆಗಮ ಶಾಸ್ತ್ರದ ಪ್ರಕಾರ ನಡೆಸಿಕೊಳ್ಳದೆ ಸರ್ಕಾರವೇ ಕಾನೂನು, ಕಾಯಿದೆ ತಂದು ದೇವಸ್ಥಾನಗಳು, ದೇವರನ್ನು ಕಟ್ಟಿ ಹಾಕಿದೆಯಲ್ಲ. ಈಗ ನಾವು ಸಂವಿಧಾನದ ಪರವಾಗಿಯೇ ನಡೆಯಬೇಕೋ ಅಥವಾ ಆಗಮ ಶಾಸ್ತ್ರದ ಪರ ನಡೆಯಬೇಕೋ?
ಬೇಕಾದಾಗ ಸಂವಿಧಾನವನ್ನು ಉಪಯೋಗಿಸಿಕೊಂಡು, ಬೇಡದೇ ಇದ್ದಾಗ ಮತ್ತೊಂದು ಕಾನೂನು ಜಾರಿ ಮಾಡುತ್ತೀರೆಂದರೆ, ಸಂವಿಧಾನವು ಸರ್ಕಾರದ ಅಜೆಂಡಾಗಳನ್ನು ನೆಟ್ಟು, ಬೆಳೆಸುವುದಕ್ಕೆ ಒಂದು ಅಸ್ತ್ರ ಅಂತಾಯ್ತಲ್ಲ?

ಒಂದು ರಥೋತ್ಸವ ಮಾಡುವುದಕ್ಕೆ ಸರ್ಕಾರ ಕೊಡುವ ಹಣ 11 ಸಾವಿರ ರುಪಾಯಿ ಮಾತ್ರ. ಇದರಿಂದ ರಥೋತ್ಸವ ಮಾಡುವುದು ಬಿಡಿ, ಗಣಹೋಮ ಮಾಡುವುದಕ್ಕೂ ಸಾಕಾಗುವುದಿಲ್ಲ. ಕೇಳಿದರೆ, ಕಾನೂನು ಪ್ರಕಾರ, ಕಾಯಿದೆ ಪ್ರಕಾರ ನೀಡಿದ್ದೇವೆ ಎನ್ನುತ್ತಾರೆ. ಆದರೆ, ಈಗ ನಮ್ಮ ಬಳಿ ಇಂತಿಷ್ಟು ಕೊಡಿ ಎಂದು ಕೇಳುವಾಗ ಸರ್ಕಾರಕ್ಕೆ ಕಾನೂನು ನೆನಪಾಗಲಿಲ್ಲ. ಹಾಗಿರುವಾಗ ನಾವೇಕೆ ನಮ್ಮ ದೇವಸ್ಥಾನದ ಹಣವನ್ನು ಮಾತ್ರ ಕೊಡಬೇಕು? ಮಸೀದಿಗಳು, ಚರ್ಚ್‌ಗಳ ಬಳಿಯೂ ಕೇಳಲಿ ಅಲ್ಲವೇ?

ಮುಜರಾಯಿ ಇಲಾಖೆಯು ದೇಶದಲ್ಲಿ ಜಾತ್ಯತೀತತೆಯನ್ನು ಕಾಪಾಡಲು ಆರಾಧನಾ ಯೋಜನೆ ತಂದಿದೆ. ಅದರ ಅನ್ವಯ, ದೇವಸ್ಥಾನವು ಮಸೀದಿಗಳ ಅಭಿವೃದ್ಧಿಗೆ ಸ್ಥಳೀಯ ಶಾಸಕನಿಗೆ ಹಣ ಕೊಡಬೇಕು. ಜಾತ್ಯತೀತ ಎಂಬ ಲೇಬಲ್‌ ಇರುವ ಇದರಿಂದ ದೇವಸ್ಥಾನಗಳಿಗೆ ಮಸೀದಿಗಳಿಂದ ಎಷ್ಟು ಲಾಭವಾಗಿದೆ ಎಂಬ ಲೆಕ್ಕ ಹೇಳಿದರೆ, ಮತ್ತೊಮ್ಮೆ ಪೈಗಂಬರ್‌ ಹುಟ್ಟಿ ಬಂದರೂ ಸಿಗುವುದಿಲ್ಲ.
ಸರ್ಕಾರ 81 ದೇವಸ್ಥಾನಗಳಿಗೆ ಏನು ನೋಟಿಸ್‌ ಕಳುಹಿಸಿದೆ, ಅದರಲ್ಲಿ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ, ಬೆಂಗಳೂರಿನ ಬನಶಂಕರಿ ದೇವಸ್ಥಾನ, ಬೆಂಗಳೂರು ಹೊರ ವಲಯದಲ್ಲಿರುವ ಘಾಟಿ ಸುಬ್ರಹ್ಮಣ್ಯದೇವಸ್ಥಾನ, ಬೆಂಗಳೂರಿನ ಬಸವನಗುಡಿಯ ಪ್ರತಿಷ್ಠಿತ ದೊಡ್ಡ ಗಣಪತಿ ದೇವಸ್ಥಾನ ಸೇರಿದಂತೆ 30 ದೇವಸ್ಥಾನಗಳಿಗೆ ಕರೆ ಮಾಡಿದ್ದೆ. ಒಂದೊಂದು ದೇವಸ್ಥಾನಕ್ಕೆ ಇಂತಿಷ್ಟು ಎಂದು ಸರ್ಕಾರ ನಿಗಧಿ ಮಾಡಿ ಕಳುಹಿಸಿರುತ್ತದೆ. ಅಷ್ಟನ್ನು ಆಯಾ ದೇವಸ್ಥಾನ ಕಳುಹಿಸಲೇಬೇಕು. ನಾನು ಕರೆ ಮಾಡಿದ ದೇವಸ್ಥಾನಗಳಿಗೆ ನನ್ನ ಮೊದಲ ಪ್ರಶ್ನೆ ಪರಿಹಾರ ನಿಧಿಗೆ ಹಣ ಕೊಟ್ಟಿದ್ದೀರಾ ಎಂದು. ಅದಕ್ಕೆ ಎಲ್ಲರೂ ಹೌದು ಎಂದರು. ಎರಡನೇ ಪ್ರಶ್ನೆ: ನಿಮಗೆ ಮುಜರಾಯಿ ಇಲಾಖೆಯಿಂದ ಕಳೆದ ವರ್ಷ, ಈ ವರ್ಷ ಎಷ್ಟು ಹಣ ಬಂದಿದೆ?

ಅಚ್ಚರಿಯ ಸಂಗತಿಯೊಂದು ಹೊರಗೆ ಬಂತು. ಅದೇನೆಂದರೆ, ಯಾವ ದೇವಸ್ಥಾನಗಳಿಗೆ ಮುಜರಾಯಿ ಇಲಾಖೆಯಿಂದ ನಯಾ ಪೈಸೆ ಬಂದಿಲ್ಲ. ನಮ್ಮ ದೇವಸ್ಥಾನಗಳಿಗೆ ಕೊಡುವುದು ಮಾತ್ರ ಗೊತ್ತೇ ಹೊರತು, ಮುಜರಾಯಿ ಇಲಾಖೆಯಿಂದ ಸಂಬಳದ ಹೊರತಾಗಿ ದೇವಸ್ಥಾನದ ಅಭಿವೃದ್ಧಿಗೆಂದು ಪ್ರತ್ಯೇಕ ಹಣ ಬರುತ್ತದೆ ಎಂಬುದೇ ಅವರಿಗೆ ಗೊತ್ತಿಲ್ಲ. ಅಂಥ ಶತ ದಡ್ಡರು ನಾವು. ಇದೆಲ್ಲ ಅಲ್ಲದೇ, ದೇವಸ್ಥಾನದಲ್ಲಿ ಬೋರ್ಡ್‌ ಬೇರೆ, ‘ಹುಂಡಿಗೆ ಹಾಕಿದ ಹಣ ದೇವರಿಗೆ, ತಟ್ಟೆಗೆ ಹಾಕಿದ ಹಣ ಪೂಜಾರಿಗೆ’ ಎಂದು. ಹುಂಡಿಗೆ ಹಾಕಿದ ಹಣ ಮಸೀದಿ, ಚರ್ಚ್‌ಗಳ ಅಭಿವೃದ್ಧಿಗೆ, ರಾಜಕಾರಣಿಗಳ ಹಿತಾಸಕ್ತಿಗೆ, ಜೇಬಿಗೆ ಎಂದು ಅದನ್ನು ಬದಲಾಯಿಸಿದರೆ ಅದು ಆಪ್ಯಾಯಮಾನವಾಗುತ್ತಿತ್ತು.
ಹೇಳಿ, ಯಾಕಾಗಿ ದೇವಸ್ಥಾನಗಳು ಮುಖ್ಯಮಂತ್ರಿಗಳು ಸೂಚಿಸಿದ ಪರಿಹಾರ ನಿಧಿಗೆ 12 ಕೋಟಿ ಕೊಡಬೇಕು? ನಿಮ್ಮ ಸರ್ಕಾರದ ಪಾಪದ ಲೆಕ್ಕ ಒಂದಾ ಎರಡಾ? ಸರ್ಕಾರಿ ಕ್ಲರ್ಕ್‌ಗೆ 35 ಸಾವಿರ ರುಪಾಯಿ ಸಂಬಳ ಇರುತ್ತೆ, ಪುರೋಹಿತನಿಗೆ 5 ಸಾವಿರ ಸಂಬಳ. ಅಷ್ಟೇ ಅಲ್ಲದೇ, ದೇವಸ್ಥಾನಕ್ಕೊಬ್ಬ ಪಾರುಪತ್ತೆದಾರ ಎಂದು ಒಬ್ಬ ಇರುತ್ತಾನೆ. ಅವನು ದೇವಸ್ಥಾನದ ಖರ್ಚು ವೆಚ್ಚಗಳನ್ನೆಲ್ಲ ನೋಡಿಕೊಳ್ಳುವುದು. ದೇವರಿಗೆ ಏನು, ಎಷ್ಟು ಅಭಿಷೇಕ ಮಾಡಬೇಕು ಎಂಬುದನ್ನೂ ಅವನೇ ನಿರ್ಧರಿಸುವುದು. 5 ಅಡಿ ವಿಗ್ರಹಕ್ಕೆ ಎರಡು ಲೀಟರ್‌ ಸಾಕು ಎಂದು ಬರೆದಿಟ್ಟು ಹೋಗುತ್ತಾನೆ. ಅವನು ಕೊಟ್ಟಷ್ಟೇ ದೇವರಿಗೆ ಅಭಿಷೇಕ. ಮಿಕ್ಕಿದ್ದು ಬೇಕಾದರೆ ಪೂಜಾರಿಗೆ ಬರುವ 5 ಸಾವಿರ ರು. ಸಂಬಳದಲ್ಲಿ ನಿತ್ಯ 500 ರುಪಾಯಿ ಹಾಲು ತಂದು ಸುರಿಯಲಿ ಅಷ್ಟೇ. ಸಂವಿಧಾನ ಕ್ಷಣ ಕ್ಷಣವೂ ಉಲ್ಲಂಘನೆ ಹೇಗಾಗುತ್ತದೆ ಎಂಬುದಕ್ಕೆ ಇದಕ್ಕಿಂತ ಮತ್ತೊಂದು ಸಾಕ್ಷಿ ಬೇಕಿಲ್ಲ. ಇದೇ ನೀಚ ಲೆಕ್ಕಾಚಾರಗಳನ್ನು ಮಸೀದಿಗೋ, ಚರ್ಚ್‌ಗಳಿಗೋ ಹೋಗಿ ಮಾಡುವ ಗಂಡಸು ಯಾರಾದರೂ ಇದ್ದಾರಾ ತೋರಿಸಿ ನೋಡೊಣ? ಸದ್ಯ ಈ ಲೇಖನ ಬರೆಯುವ ತನಕವಂತೂ ಅಂಥ ಗಂಡಸು ಕಂಡಿಲ್ಲ.

ನಮ್ಮ ಮೂಲಭೂತ ಪ್ರಶ್ನೆ ಏನೆಂದರೆ, ಪರಿಹಾರ ನಿಧಿಗೆ ದೇವಸ್ಥಾನ ಹಣ ನೀಡಿದರೆ, ದೇವಸ್ಥಾನ ಸಂಕಷ್ಟದಲ್ಲಿದ್ದಾಗ ಹಣ ನೀಡುವವನ್ಯಾರು ಸ್ವಾಮಿ? ನಾವೇ ನಮ್ಮ ದೇವಸ್ಥಾನ ಚಾವಣಿ ಹಾಕಿಸಬೇಕೆಂದರೂ, ನಾವು ಅಧಿಕಾರಿಗಳ ಬಳಿ ಅನುಮತಿ ಪಡೆಯಬೇಕು. ಅವನು ಅನುಮತಿಯನ್ನು ಆಗಲೇ ಕೊಡಬಹುದು, ಮಾರನೇ ದಿನವೂ ಕೊಡಬಹುದು ಅಥವಾ ಮೂರು ವರ್ಷ ಬಿಟ್ಟಾದರೂ ಕೊಡಬಹುದು. ಅದು ಅನುಮತಿ ಕೊಡುವವನಿಷ್ಟ. ಅಂದರೆ ಇವರೂ ನಮಗೆ ದೇವಸ್ಥಾನಕ್ಕೆ ಕೊಡುವುದಕ್ಕೆ ಬಿಡುವುದಿಲ್ಲ, ಇವರೂ ಕೊಡುವುದಿಲ್ಲ. ಆಗ ಸಂವಿಧಾನ ಬೇಕು. ಆದರೆ, ದೇವಸ್ಥಾನದ ಬಳಿ ಇಂತಿಷ್ಟು ಕಳಿಸಿ ಎಂದು ರೋಲ್‌ ಕಾಲ್‌ ಕೇಳುವಾಗ ಇವರಿಗೆ ಸಂವಿಧಾನ ನೆನಪೇ ಆಗಲಿಲ್ಲ.
ಅದೆಲ್ಲ ಬಿಡಿ, ಇವರು ಮುಸ್ಲಿಮರ ಬಳಿ ಎಷ್ಟು ಹಣ ಕೇಳಿದ್ದಾರೆ? ಅವರೆಷ್ಟು ಹಣವನ್ನು ಪರಿಹಾರ ನಿಧಿಗೆ ನೀಡಿದ್ದಾರೆ. ವಕ್‌ಧಿ ಬೋರ್ಡ್‌ನಿಂದ ಎಷ್ಟು ಹಣವನ್ನು ಸರ್ಕಾರ ಕೊಡುವುದಕ್ಕೆ ಹೇಳಿದೆ ಎಂದು ಕೇಳಿದರೆ, ಸೊನ್ನೆ! ಚರ್ಚ್‌ಗಳಿಂದ ಬರುತ್ತಿದೆಯಾ? ಸೊನ್ನೆ. ಆದರೆ, ಹಿಂದೂ ಕೋಮುವಾದಿಗಳ ಹಣವನ್ನೇ ಜಾತ್ಯತೀತ ಜನತಾ ದಳದ ಸರ್ಕಾರ ಕೇಳುವುದು.

ಗಿರೀಶ್‌ ಭಾರಧ್ವಾಜ್‌ ಎಂಬುವವರು ಈ ಬಗ್ಗೆ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಆದರೇನು ಪ್ರಯೋಜನ? ನಮ್ಮವರಿಗೇ ಅದರ ಬಗ್ಗೆ ಅರಿವಿಲ್ಲದಿರುವಾಗ?

ಈಗ ಹೇಳಿ, ದೇವಸ್ಥಾನಗಳಿಂದ 12 ಕೋಟಿ 30 ಲಕ್ಷ ರುಪಾಯಿ ಪಡೆದುಕೊಂಡಿದ್ದು ಸರಿಯೋ ತಪ್ಪೋ? ನಿರ್ಧರಿಸಿ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya