ಅಮೆರಿಕವನ್ನೇ ನಡುಗಿಸಿದ ಪರಮಾಣು ವಾಜಪೇಯಿ!

11 ಮೇ, 1998. ಅಟಲ್‌ ಬಿಹಾರಿ ವಾಜಪೇಯಿ ಅವರು ಅವರ ಅಧಿಕೃತ ನಿವಾಸದಲ್ಲಿ ಮಾಧ್ಯಮಗಳನ್ನು ಕರೆದಾಗ ಎಲ್ಲರಲ್ಲೂ ಒಂದು ಕುತೂಹಲವಿತ್ತು. ಏನು ಹೇಳುತ್ತಾರೆ? ಯಾಕಾಗಿ ಕರೆದಿದ್ದಾರೆ ಇತ್ಯಾದಿ. ಮೈಕ್‌ ಮುಂದೆ ವಾಜಪೇಯಿ ಅವರ ಮುಖದಲ್ಲಿ ಗೆಲುವು ಸಾಧಿಸಿದ ಭಾವನೆಯಿತ್ತು. ಮೈಕ್‌ ಮುಂದೆ ಬಂದು ನಿಂತವರೇ, ‘ಇವತ್ತು 15.45 ಗಂಟೆಗೆ ಭಾರತವು ಪೋಖ್ರಾನ್‌ನಲ್ಲಿ ಮೂರು ಪರಮಾಣು ಬಾಂಬ್‌ನ್ನು ಪರೀಕ್ಷೆ ನಡೆಸಿತು…’ ಎಂದು ಹೇಳುವಾಗ ಅಮೆರಿಕದ ಎದೆಯಲ್ಲೇ ಬಾಂಬ್‌ ಸೊಧೀಟವಾದಂತಾಗಿತ್ತು. ಭಾರತದಲ್ಲಿ ಬಾಂಬ್‌ ಸೊಧೀಟಗೊಂಡಾಗ ನಡುಗಿದ್ದು ಮಾತ್ರ ಅಮೆರಿಕ, ಪಾಕಿಸ್ತಾನ, ಚೀನಾ!

ಭಾರತವು ಪರಮಾಣು ಬಾಂಬ್‌ ಸಜ್ಜಿತ ದೇಶ ಎಂಬ ಪಟ್ಟಕ್ಕೇರಲಿಕ್ಕೆ ಯಾರಿಗೂ ಇಷ್ಟವಿರಲಿಲ್ಲ. ಆದರೆ ಅದನ್ನು ಸಾಧಿಸಿದ ಮಾಜಿ ಪ್ರಧಾನಿ, ಭಾರತರತ್ನ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ.

ಸದಾ ಅಮೆರಿಕದ ಉಪಗ್ರಹಗಳು ನಮ್ಮ ದೇಶದ ಮೇಲೆ ಅದೂ ಪೋಖ್ರಾನ್‌ ಮೇಲೆ ಕಣ್ಣು ಇಟ್ಟಿರುವಾಗ ಹೇಗೆ ಇದು ಸಾಧ್ಯವಾಯಿತು? ಈ ಬಗ್ಗೆ ತಿಳಿಯಬೇಕೆಂದರೆ, ಖಂಡಿತವಾಗಿಯೂ ಇತಿಹಾಸದಿಂದಲೇ ಬರಬೇಕು. ಮೈ ನವಿರೇಳಿಸುವ ಇತಿಹಾಸ ಓದುತ್ತಾ, ನಾನು ಭಾರತೀಯ ಎಂದು ಎದೆಯುಬ್ಬಿಸದಿದ್ದರೆ ಕೇಳಿ.

ಭಾರತ ಪರಮಾಣು ಶಕ್ತಿ ಹೊಂದಿದ ದೇಶವಾಗಬೇಕು ಎಂದು ಮೊದಲ ಹೆಜ್ಜೆಯನ್ನಿಟ್ಟವರು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ. ಆದರೆ ಅವರಿಗೆ ಪರಮಾಣು ಬಾಂಬ್‌ ತಯಾರಿಕಯೆ ಬಗ್ಗೆ ಸ್ವಲ್ಪವೂ ಆಸಕ್ತಿ ಇರಲಿಲ್ಲ. ಒಮ್ಮೆ 1954ರ ಏಪ್ರಿಲ್‌ 15ರಂದು ನೆಹರೂ ಹೇಳುತ್ತಾರೆ, ‘ನಾವು ಪರಮಾಣು ಶಕ್ತಿಯನ್ನು ಶಾಂತಿಗಾಗಿ ಉಪಯೋಗಿಸಬೇಕು ಎಂದುಕೊಂಡಿದ್ದೇವೆ. ಆದರೆ ನಾವು ಅದನ್ನು ಬೇರೆಯವರ ವಿರುದ್ಧ ಉಪಯೋಗಿಸುವಂತೆ ನಮ್ಮನ್ನು ಕೆಣಕಿದರೆ, ಖಂಡಿತವಾಗಿಯೂ ನಮ್ಮನ್ನು ತಡೆಯುವವರು ಯಾರೂ ಇರುವುದಿಲ್ಲ’ ಎಂದಿದ್ದರು. ನೆಹರೂ ಮಾಡಿದ್ದು ಅಷ್ಟೇ. ಮುಂದೆ ಏನೂ ಮಾಡಲಿಲ್ಲ . ಚೀನಾ ಜೊತೆಗಿನ ಯುದ್ಧವೂ ಆಯಿತು. ನೆಹರೂ ಪತ್ತೆ ಇಲ್ಲ.
1964ರ ನವೆಂಬರ್‌ 27ರಂದು ಪರಮಾಣು ಬಾಂಬ್‌ ನಿರ್ಮಾಣವಾಗಬೇಕು ಎಂದು ಲೋಕಸಭೆಯಲ್ಲಿ ಪ್ರಸ್ತಾವನೆ ಇಟ್ಟಿತ್ತು. ಆದರೆ ಬೇರೆ ಪಕ್ಷಗಳು ಇದನ್ನು ತಿರಸ್ಕರಿಸಿತ್ತು. ಇನ್ನು ಅಧಿಕಾರಕ್ಕೆ ಬಂದ ಇಂದಿರಾ ಗಾಂಧಿಗೂ ಇದು ಇಷ್ಟವಿರಲಿಲ್ಲ. ಆದರೆ, ಪಾಕಿಸ್ತಾನದ ಜತೆಗೆ ಯುದ್ಧವಾದ ನಂತರ ಸಂಸ್ಕೃತಿ, ಸಂಪ್ರದಾಯದ ಜತೆಗೆ ನಾವೆಷ್ಟು ಬಲಿಷ್ಟರು ಎಂಬುದನ್ನು ತೋರಿಸುವ ಅವಶ್ಯಕತೆ ಇತ್ತು. ಹಾಗಾಗಿ ಪರಮಾಣು ಬಾಂಬ್‌ ತಯಾರಿಕೆಗೆ ಗೌಪ್ಯವಾಗಿ ಒಪ್ಪಿಗೆ ನೀಡಿದರು. 1974 ಮೇ 18ಕ್ಕೆ ಭಾರತ ಸಣ್ಣ ಮಟ್ಟದಲ್ಲಿ ಪರಮಾಣು ಪರೀಕ್ಷೆ ನಡೆದಿತ್ತು. ಅದು ಬುದ್ಧ ಪೂರ್ಣಿಮೆ ದಿನವಾಗಿದ್ದರಿಂದ ಅದಕ್ಕೆ ಸ್ಮೈಲಿಂಗ್‌ ಬುದ್ಧ ಎಂದು ಈ ಪ್ರಯೋಗಕ್ಕೆ ನಾಮಕರಣವೂ ಆಗಿತ್ತು. ಇದನ್ನು ಭಾರತ ಬಾಂಬ್‌ ಪರೀಕ್ಷೆ ಅಲ್ಲ, ಬದಲಿಗೆ ಪರಮಾಣು ಶಕ್ತಿ ಪರೀಕ್ಷೆ ಅಷ್ಟೇ ಎಂದಿತ್ತು. ಇಲ್ಲಿಂದ ಅಮೆರಿಕದ ಕಣ್ಣು ಭಾರತದ ಮೇಲೆ ಇತ್ತು.

ಆದರೆ ಪರಮಾಣು ಬಾಂಬ್‌ನ ಬಗ್ಗೆ ಬೆಳವಣಿಗೆಗಳು ಆರಂಭವಾದದ್ದು ಪಿ.ವಿ. ನರಸಿಂಹರಾವ್‌ ಕಾಲದಲ್ಲಿ. ಅವರು ಅಧಿಕಾರಕ್ಕೆ ಬಂದಾಗಲೇ ವಿಜ್ಞಾನಿಗಳಿಗೆ ಪರಮಾಣು ಪರೀಕ್ಷೆಗೆ ತಯಾರಾಗುವಂತೆ ಸೂಚಿಸಿದ್ದರು. ಆದರೆ ಆ ಕಾಲದಲ್ಲಿ ಅಮೆರಿಕದ ಉಪಗ್ರಹಗಳು ಅದೆಷ್ಟು ಶಕ್ತಿಶಾಲಿಯಾಗಿತ್ತು ಎಂದರೆ, ಅಂತರಿಕ್ಷದಿಂದಲೇ ಭೂಮಿ ಮೇಲೆ ಬಿದ್ದಿರುವ 1 ರು. ನಾಣ್ಯವನ್ನೂ ಗುರುತಿಸುವಷ್ಟು ಸೂಕ್ಷ್ಮವಾಗಿತ್ತು.

ಪೋಖ್ರಾನ್‌ ಪರಮಾಣು ವಲಯದಲ್ಲಿ ಒಂದು ಹುಲ್ಲು ಕಡ್ಡಿ ಅಲುಗಾಡಿದರೂ ಅಮೆರಿಕದಿಂದ ನರಸಿಂಹರಾವ್‌ ಅವರಿಗೆ ಕರೆ ಬರುತ್ತಿತ್ತು. ಇನ್ನು ನಮ್ಮ ವಿಜ್ಞಾನಿಗಳಿಗೂ ಬಾಂಬ್‌ ಪರೀಕ್ಷೆ ಮಾಡುವ ತಯಾರಿಗೆ ಕನಿಷ್ಠ ಎಂದರೂ 2 ವರ್ಷ ಬೇಕಿತ್ತು ಅಥವಾ ಅವರು ಸರಿಯಾದ ಸಮಯಕ್ಕೆ ಮಾಡಲಿಲ್ಲ. ಹಾಗಾಗಿ ಈ ಬಾರಿಯೂ ಭಾರತ ಸೋಲಲೇಬೇಕಾಯಿತು.

ಆದರೆ ಅಷ್ಟಕ್ಕೇ ಸುಮ್ಮನಾಗದ ನರಸಿಂಹ ರಾವ್‌, ಇದನ್ನು ಭಾರತರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಹಸ್ತಾಂತರಿಸುತ್ತಾ ಸೂಚ್ಯವಾಗಿ ಮೇ ನಹೀ ಕರ್ಪಾಯಾ, ತುಮ್‌ ಕರ್ದೇನಾ(ನಾನು ಮಾಡುವುದಕ್ಕಾಗಿಲ್ಲ, ನೀವು ಮಾಡಿ) ಎಂದರು.

ಇಲ್ಲಿಂದಲೇ ಶುರುವಾಗಿದ್ದು ಅಟಲ್‌ರ ಪ್ರಯತ್ನ. ಬಾಂಬ್‌ ತಯಾರಿಸುವುದಕ್ಕೆ ವಿಜ್ಞಾನಿಗಳು ಸಿದ್ಧತೆ ಮಾಡಿಕೊಂಡವರು ವಾಜಪೇಯಿ ಸರ್ಕಾರ ಬಿದ್ದು ಹೋದ ಕಾರಣಕ್ಕೆ ಅವೆಲ್ಲ ಬಂದ್‌ ಆಗಿತ್ತು.
1998 ಮಾರ್ಚ್‌ 18ರಂದು ಮತ್ತೆ ವಾಜಪೇಯಿ ಸರ್ಕಾರವೇ ಅಧಿಕಾರಕ್ಕೆ ಬಂತು. ಪ್ರಮಾಣ ವಚನ ಸ್ವೀಕಾರ ಮಾಡಿದ ಎರಡನೇ ದಿನಕ್ಕೆ ಪುಣ್ಯಾತ್ಮ ಮಾಡಿದ್ದೇನು ಗೊತ್ತಾ? ಭಾರತ ರತ್ನ, ದೇಶ ಕಂಡ ಸಜ್ಜನ ಹಾಗೂ ಪರಮಾಣು ವಿಜ್ಞಾನಿ ಎಪಿಜೆ ಅಬ್ದುಲ್‌ ಕಲಾಂ ಮತ್ತು ಪರಮಾಣು ಶಕ್ತಿ ಆಯೋಗದ ಅಧ್ಯಕ್ಷ ಆರ್‌. ಚಿದಂಬರಂ ಅವರನ್ನು ಭೇಟಿ ಮಾಡಿ ಬಾಂಬ್‌ ಪರೀಕ್ಷೆಯ ಬಗ್ಗೆ ಮಾತನಾಡಿದರು.
ಆದರೆ, ಇನ್ನೂ ವಿಶ್ವಾಸ ಮತ ಆಗಿರಲಿಲ್ಲ. ಇದು ವಿಜ್ಞಾನಿಗಳಲ್ಲಿ ಅತಂತ್ರ ಭಾವ ಅಥವಾ ವಿಶ್ವಾಸವೇ ಇಲ್ಲದ ಭಾವ ಮೂಡಿಸಿರಲಿಕ್ಕೂ ಸಾಕು. ಕೊನೆಗೇ ಅದೇ ವರ್ಷದ 28ರಂದು ವಾಜಪೇಯಿ ಸರ್ಕಾರ ವಿಶ್ವಾಸಮತವನ್ನೂ ಗೆದ್ದರು. ಇದು ಗೆದ್ದದ್ದು ಯಾರಿಗೆ ಉಪಯೋಗ ಆಯ್ತೋ ಗೊತ್ತಿಲ್ಲ. ವಿಜ್ಞಾನಿಗಳಿಗೆ ಮಾತ್ರ ಗ್ರೀನ್‌ ಸಿಗ್ನಲ್‌ ಸಿಕ್ಕಂತಾಗಿತ್ತು. ಪುನಃ 1998ರ ಏಪ್ರಿಲ್‌ 9ರಂದು ಎಪಿಜೆ ಅಬ್ದುಲ್‌ ಕಲಾಂ ಮತ್ತು ಆರ್‌. ಚಿದಂಬರಂರನ್ನು ಭೇಟಿ ಮಾಡಿದರು. ಆಗಲೇ ವಿಜ್ಞಾನಿದ್ವಯರು ಪರಮಾಣು ಬಾಂಬ್‌ ಪರೀಕ್ಷೆಯ ನೀಲನಕ್ಷೆ ಕೊಟ್ಟದ್ದು.

ಅಟಲ್‌ಜೀ ವಿಜ್ಞಾನಿಗಳನ್ನು ಭೇಟಿ ಮಾಡಿದಾಗ ಕುಶಲೋಪರಿ ಮಾತುಕತೆಗಳೂ ಆಗಲಿಲ್ಲ ಎಂದು ಓದಿದ ನೆನಪು ನನಗೆ. ಬಂದವರೇ, ವಾಜಪೇಯಿಯವರು ‘ಪರೀಕ್ಷೆ ನಡೆಸಲಿಕ್ಕೆ ಎಷ್ಟು ದಿನ ಬೇಕಾಗುತ್ತೆ?’ ಎಂದು ಅಬ್ದುಲ್‌ ಕಲಾಂಗೆ ಕೇಳಿದರಂತೆ.

ಸ್ವಾಮಿ, ಇದು ಇಡೀ ದೇಶವೇ ವಿಶ್ವದ ಮುಂದೆ ತಾನೆಷ್ಟು ಬಲಿಷ್ಟ ಎಂದು ಸಾಬೀತು ಮಾಡುವ ಸಂಗತಿ. ರಾಜಕಾರಣಿಗಳು ಬಿಟ್ಟರೂ ವಿಜ್ಞಾನಿಗಳು ಬಿಡುತ್ತಾರಾ? ಪ್ರಧಾನಿ ವಾಜಪೇಯಿ ಮಾತು ನೆಲಕ್ಕೆ ಬೀಳುವ ಮೊದಲೇ ಉತ್ತರಿಸಿದ ಕಲಾಂ, ‘ಗೌರವಾನ್ವಿತ ಪ್ರಧಾನಿಗಳು ಇವತ್ತು ಆದೇಶ ನೀಡಿದರೆ, 30 ದಿನಗಳೊಳಗೆ ಪೋಖ್ರಾನ್‌ನಲ್ಲಿ ಪರೀಕ್ಷೆ ನಡೆಯುತ್ತದೆ’ ಎಂದುಬಿಟ್ಟರು.
ವಾಜಪೇಯಿಗೆ ಇವರಿಗಿಂತ ಹೆಚ್ಚು ಆಸಕ್ತಿ ಇತ್ತು. ತಕ್ಷಣವೇ ಮುಹೂರ್ತ ನಿಶ್ಚಯಿಸಿ ಕೊಟ್ಟರು. 10 ಮೇ, 1998. ಈ ಆಪರೇಷನ್‌ಗೆ ಶಕ್ತಿ ಎಂದು ನಾಮಕರಣ ಮಾಡಲಾಯಿತು.

ಈ ವಿಷಯವನ್ನು ವಾಜಪೇಯಿ ಬಿಟ್ಟರೆ ಗೊತ್ತಿದ್ದದ್ದು ಅದ್ವಾನಿ, ಕೇಂದ್ರ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌, ಪ್ರಮೋದ್‌ ಮಹಾಜನ್‌, ಜಸ್ವಂತ್‌ ಸಿಂಗ್‌ ಮತ್ತು ಯಶವಂತ ಸಿನ್ಹಾರಿಗೆ ಮಾತ್ರ.
ಆಪರೇಷನ್‌ ಬಹಳ ಗೌಪ್ಯವಾಗಿ ಶುರುವಾಗಿತ್ತು. ಇದಕ್ಕಾಗಿ, ಗುಪ್ತದಳ ರಾ, ಸೇನೆ, ವಿಜ್ಞಾನಿಗಳನ್ನು ಬಳಸಿಕೊಳ್ಳಲಾಗಿತ್ತು. ಅಮೆರಿಕದ ಉಪಗ್ರಹಗಳು ಬೆಳಗ್ಗೆ ಮತ್ತು ಸಂಜೆ ಭಾರತದ ಆ ಪೋಖ್ರಾನ್‌ನ ಸುತ್ತವೇ ಸುತ್ತುತ್ತಲಿತ್ತು. ಅದು ಯಾವಾಗ ಆ ಬೇರೆ ಕಡೆ ಹೋಗುತ್ತದೆ ಎಂದು ಕಾದು(ಬ್ಲೈಂಡ್‌ ಸ್ಪಾಟ್‌ಗಾಗಿ ಕಾದು), ತಕ್ಷಣ ಸಿಗುವ ಸಮಯದಲ್ಲಿ ಪಟಪಟನೆ ಬಾಂಬ್‌ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದರು. ಅಮೆರಿಕದ ಉಪಗ್ರಹ ಇತ್ತ ಬರುವಷ್ಟರಲ್ಲಿ, ವಾಹನಗಳನ್ನೆಲ್ಲ ತಂದು ನಿಲ್ಲಿಸಿ, ಗಿಡಗಳು ಎಲ್ಲೆಲ್ಲಿತ್ತೋ ಅಲ್ಲಲ್ಲೇ ನೆಟ್ಟು, ಗಾಳಿ ಹೇಗೆ ಬೀಸುತ್ತದೆಯೋ ಹಾಗೇ ಮರಳನ್ನು ತಿರುಗಿಸಿ ಏನೂ ಆಗಿಲ್ಲದಂತೆ ಇದ್ದುಬಿಡುತ್ತಿದ್ದರು.

ವಾಜಪೇಯಿ ಇದನ್ನೆಲ್ಲವನ್ನೂ ಗಮನಿಸುತ್ತಲೇ ಇರುತ್ತಿದ್ದರು. ಅವರು ಹೇಗೆ ಪ್ಲಾನ್‌ ಮಾಡಿದ್ದರು ಎಂದರೆ, ಕಲಾಂ ಅಥವಾ ಚಿದಂಬರಂರ ಹೆಸರು ಹೆಚ್ಚು ಓಡಾಡಿದರೆ, ವಿಷಯ ಹೊರಗೆ ಹೋಗಬಹುದು ಎಂದು ಆ ಇಬ್ಬರು ಸೇರಿದಂತೆ ಎಲ್ಲರಿಗೂ ಒಂದೊಂದು ನಕಲಿ ಹೆಸರಿಟ್ಟಿದ್ದರು. ಅಬ್ದುಲ್‌ ಕಲಾಂರಿಗೆ ಮೇಜರ್‌ ಜನರಲ್‌ ಪೃಥ್ವಿರಾಜ್‌ ಮತ್ತು ಆರ್‌. ಚಿದಂಬರಂಗೆ ನಟರಾಜ್‌ ಎಂಬ ಹೆಸರು ನೀಡಿದ್ದರು. ಮೊದಲು ಬಾಂಬ್‌ ಪರೀಕ್ಷೆಗೆ ದಿನ ನಿಗದಿಯಾಗಿದ್ದು ಮೇ 10ಕ್ಕೆ. ಆದರೆ, ಅಂದು ಆರ್‌. ಚಿದಂಬರಂ ಅವರ ಮಗಳ ಮದುವೆಯಿತ್ತು. ಮಗಳ ಮದುವೆಗೆ ಅಪ್ಪನೇ ಹೋಗದಿದ್ದರೆ, ಎಲ್ಲರಿಗೂ ಅನುಮಾನ ಬಂದು ಇತ್ತ ಯೋಜನೆಯೇ ಬುಡಮೇಲಾಗಬಹುದು ಎಂದು ತಿಳಿದ ವಾಜಪೇಯಿ ಒಂದು ದಿನಕ್ಕೆ, ಅಂದರೆ, 11ಕ್ಕೆ ಮುಂದೂಡಿದ್ದರು. ಯಾಕಂದರೆ, ಈ ಅವಕಾಶವನ್ನು ಕೈಚೆಲ್ಲುವುದಕ್ಕೆ ವಾಜಪೇಯಿಗೆ ಸುತಾರಾಂ ಇಷ್ಟವಿರಲಿಲ್ಲ.

1998ರ ಮೇ 11. ಸೋಜಿಗ ನೋಡಿ ಅವತ್ತಿನ ದಿನವೂ 1974ರಂತೆಯೇ ಬುದ್ಧ ಪೂರ್ಣಿಮೆಯೇ ಆಗಿತ್ತು. ವಿಜ್ಞಾನಿಗಳು, ಸೇನೆ, ಗುಪ್ತದಳ ಎಲ್ಲರ ಸಹಾಯದಿಂದ ಅಂದು ಮೂರು ಪರಮಾಣು ಬಾಂಬ್‌ಗಳು ಸೊಧೀಟಗೊಂಡವು. ಅಮೆರಿಕ ತತ್ತರಿಸಿಹೋಯಿತು. ಅಷ್ಟೇ ಅಲ್ಲ, ಮೇ 13ಕ್ಕೆ ಮತ್ತೆರಡು ಬಾಂಬ್‌ಗಳು ಸೊಧೀಟಗೊಂಡವು. ವಿಶ್ವವೇ ಭಾರತದ ಕಡೆ ತಿರುಗಿ ನೋಡಿತ್ತು. ಎಲ್ಲರಲ್ಲೂ ಒಂದು ಭಯ ಆವರಿಸಿತ್ತು. ಅವರ ಎದೆಯಲ್ಲಿ ನಡುಕ ಹುಟ್ಟಿಸಿದ ಕೀರ್ತಿ ಅಟಲ್‌ ಬಿಹಾರಿ ವಾಜಪೇಯಿ ಅವರದ್ದು.
ಕೊನೆಗೆ ಲೋಕಸಭೆಯಲ್ಲಿ ಮಾತನಾಡಿದ ವಾಜಪೇಯಿ, ಮೂರು ಸಂಗತಿಗಳನ್ನು ಬಹಳ ಸ್ಪಷ್ಟವಾಗಿ ಹೇಳಿದರು,
1. ನಾವು ಯಾವುದೇ ಕಾರಣಕ್ಕೂ ಮೊದಲು ಪರಮಾಣು ಬಾಂಬ್‌ ಅನ್ನು ಬೇರೆ ದೇಶಗಳ ಮೇಲೆ ಪ್ರಯೋಗಿಸುವುದಿಲ್ಲ.
2. ಪರಮಾಣು ಬಾಂಬ್‌ ಹೊಂದಿರದ ದೇಶದ ಮೇಲೆ ನಾವು ಈ ಬಾಂಬ್‌ ಪ್ರಯೋಗಿಸುವುದಿಲ್ಲ.
3. ಪರಮಾಣು ಬಾಂಬ್‌ ಸಂಬಂಧ ಯಾವುದೇ ಪ್ರಯೋಗಗಳು ನಡೆಯುವುದಿಲ್ಲ.
ಈ ಮಾತು ಕೇಳಿದ ಮೇಲೇ ಬೇರೆ ದೇಶಗಳು ನಿಟ್ಟುಸಿರು ಬಿಟ್ಟಿದ್ದು. ಅಂಥ ಛಾತಿಯುಳ್ಳ ನಾಯಕ ಅಟಲ್‌ಜೀ. ಮೇ 11ರ ದಿನವನ್ನು ನ್ಯಾಷನಲ್‌ ಟೆಕ್ನಾಲಜಿ ಡೇ ಎಂದು ಘೋಷಿಸಿದವರೂ ಅಟಲ್‌ಜೀ ಅವರೇ.

ಭಾರತ ರತ್ನರಾಗುವುದಕ್ಕೆ ಇನ್ನೇನು ಅರ್ಹತೆ ಬೇಕು? ದೇಶ ಯಾವಾಗಲೂ ನೆನೆಯುವಂಥ ಸಾಧನೆಗೈದ ಅಪ್ರತಿಮ ನಾಯಕ ನಿರ್ಗಮಿಸಿದ್ದಾರೆ. ಹಮ್ಮೆಯಿಂದ, ಖುಷಿಯಿಂದ ಕಳಿಸಿಕೊಡೋಣ. ಆ ಅನವರತ ಸೇವೆಗೊಂದು ಸಲ್ಯೂಟ್‌ ಹೊಡೆದು, ಕಣ್ತುಂಬಿಕೊಂಡು ಧನ್ಯವಾದ ಹೇಳೋಣ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya