ಔರಂಗಜೇಬ್ ಹೇಗೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ, ಪಕ್ಕಾ ಮತಾಂಧ ರಾಜನಾಗಿದ್ದ ಆತನಿಗೆ ಹಿಂದೂಗಳ ಇರುವಿಕೆಯನ್ನು ನೆನೆಸಿಕೊಂಡರೇ ಮೈಯೆಲ್ಲ ಉರಿದು ಹೋಗುತ್ತಿತ್ತು. ಅಂಥ ಹಿಂದೂ ದ್ವೇಷಿ ಔರಂಗ್ಜೇಬನ ಆಸ್ಥಾನದಲ್ಲಿ ಒಬ್ಬ ಬ್ರಾಹ್ಮಣ ಪಂಡಿತನಿದ್ದ. ಜಗನ್ನಾಥ ಪಂಡಿತ ಎಂದು ಅವನ ಹೆಸರು. ಹಣ ಕೊಟ್ಟೋ ಅಥವಾ ಮತ್ತೇನಾದರೂ ಮಾಡಿಯೋ ಔರಂಗಜೇಬ ಆ ಬ್ರಾಹ್ಮಣನನ್ನು ಇಟ್ಟುಕೊಂಡಿದ್ದ. ಔರಂಗಜೇಬ ಯುದ್ಧಕ್ಕೆ ಹೋಗುವಾಗಲೆಲ್ಲ ಮೃತ್ಯುಂಜಯ ಹೋಮ ಮಾಡುತ್ತಿದ್ದದ್ದು ಅಥವಾ ಇನ್ಯಾವುದೇ ಹೋಮಗಳನ್ನು ಮಾಡುತ್ತಿದ್ದದ್ದು ಈ ಜಗನ್ನಾಥ ಪಂಡಿತರೇ. ಅಂದರೆ, ಮಂತ್ರ ಹೇಳಿಕೊಂಡು, ಸಸ್ಯಾಹಾರ ಮಾಡಿ ಬದುಕುತ್ತಿರುವ ಬ್ರಾಹ್ಮಣನ ಅನಿವಾರ್ಯ ಮುಸ್ಲಿಂ ರಾಜನಿಗೂ ಇತ್ತು ಅಂತಾಯಿತು.
ಹಾಗೆಯೇ ಈಗ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೂ ಈಗ ಬ್ರಾಹ್ಮಣರೇ ಬೇಕಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಬ್ರಾಹ್ಮಣರನ್ನು ಬೇಕಾಬಿಟ್ಟಿ ನಡೆಸಿಕೊಂಡಿತ್ತು ಕಾಂಗ್ರೆಸ್. ಆದರೆ ಜೆಡಿಎಸ್ ಈಗ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮಾಡಿರುವುದಲ್ಲದೇ ಒಂದಲ್ಲ ಎರಡಲ್ಲ, 25 ಕೋಟಿ ಅನುದಾನ ನೀಡಿದೆ. ಇದು ಬ್ರಾಹ್ಮಣರು ಔರಂಗಜೇಬನ ಕಾಲದಲ್ಲೂ ಬೇಕು, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಕಾಲದಲ್ಲೂ ಬೇಕು ಎಂಬುದನ್ನು ಸಾಬೀತು ಮಾಡುತ್ತದೆ. ಇದು ಬ್ರಾಹ್ಮಣರ ಪವರ್ ಎಂದರೆ…
ಹಾಗಂತ ಬ್ರಾಹ್ಮಣರು ತಿಳಿದಿದ್ದರೆ, ಅವರಿಗಿಂತ ದಡ್ಡರು ಮತ್ತೊಬ್ಬರಿಲ್ಲ. ಕೇವಲ ಒಂದು ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಅದಕ್ಕೆ 25 ಕೋಟಿ ಕೊಟ್ಟ ಮಾತ್ರಕ್ಕೆ ಬ್ರಾಹ್ಮಣರಿಗೆ ಏನೋ ಮಹಾನ್ ಸಹಾಯ ಮಾಡಿದ್ದಾರೆ ಎಂಬುದು ಬ್ರಾಹ್ಮಣರ ಮತ್ತೊಂದು ಭ್ರಮೆಯಷ್ಟೇ. ಮೂಢನಂಬಿಕೆ ಕಾಯ್ದೆಯಲ್ಲಿ ಸೇರಿಸಿಕೊಳ್ಳಬಹುದಾದ ಮತ್ತೊಂದು ಮೂಢನಂಬಿಕೆಯಷ್ಟೇ. ಕುಮಾರಸ್ವಾಮಿ ಬ್ರಾಹ್ಮಣರ ಉಲ್ಲೇಖ ಮಾಡಿದ್ದೇ ತಡ, ಬ್ರಾಹ್ಮಣರೆಲ್ಲ ಕುಪ್ಪಳಿಸುತ್ತಿದ್ದಾರೆ. ಬ್ರಾಹ್ಮಣರ ಹವಾ ಈಗ ಅರ್ಥ ಆಯ್ತಾ ಅಂತೆಲ್ಲ ದಡ್ಡರಂತೆ ಬರೆದುಕೊಳ್ಳುತ್ತಿದ್ದಾರೆ. ಆದರೆ ನಿಜಾಂಶ ಏನೆಂಬುದನ್ನೇ ಮರೆತುಬಿಟ್ಟಿದ್ದಾರೆ.
ಹಾಗಾದರೆ ವಾಸ್ತವ ಏನು? ವೀರಶೈವ ಲಿಂಗಾಯತರನ್ನು ಒಡೆದರಲ್ಲ, ಅದಕ್ಕಿಂತಲೂ ಘೋರವಾಗಿದೆ. ಆಲೋಚನೆ ಮಾಡಿ, ಈ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಬ್ರಾಹ್ಮಣರಿಗೆ ಸಿಗುವ ಲಾಭವಾದರೂ ಏನು? ಬ್ರಾಹ್ಮಣರಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಾರಾ? ಸ್ಕಾಲರ್ಶಿಪ್ ಕೊಡುತ್ತಾರಾ? ಬಡವರಿಗೆ ಆಸ್ಪತ್ರೆ ಖರ್ಚು ಕೊಡುತ್ತಾರಾ? ಇನ್ನೂ ಗುಡಿಸಲಲ್ಲೇ ಸಂಧ್ಯಾವಂದನೆ ಮಾಡಿಕೊಂಡಿರುವವರಿಗೆ ಒಂದು ಮನೆ ಕೊಡಿಸುತ್ತಾರಾ? ಉದ್ಯೋಗ ಕೊಡಿಸುತ್ತಾರಾ? ಏನು ಇದರ ರೂಪುರೇಷೆ? ಯಾವ ಬ್ರಾಹ್ಮಣನೂ ಕೇಳಿಲ್ಲ. ಕೇಳುವುದೂ ಇಲ್ಲ. ಮಂಡಳಿಗೆ ಹಣ ಕೊಟ್ಟಿರುವುದಕ್ಕೇ ಸಂಭ್ರಮ.
ನೆನಪು ಮಾಡಿಕೊಳ್ಳಿ, ವಿಶ್ವಕರ್ಮ ಅಭಿವೃದ್ಧಿ ಮಂಡಳಿಯನ್ನೂ ಮಾಡಬೇಕು ಎಂದಾಗಿತ್ತು! ಎಷ್ಟು ವಿಶ್ವಕರ್ಮರನ್ನು ಅಭಿವೃದ್ಧಿ ಮಾಡಿದ್ದಾರೆ ಲೆಕ್ಕ ಇದೆಯಾ? ವಿಶ್ವಕರ್ಮರನ್ನು ಬಿಡಿ, ಆ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಕರ್ಮಕಾಂಡಗಳ ಬಗ್ಗೆ ಯಾರಿಗಾದರೂ ಅರಿವಿದೆಯೇ? ಇವತ್ತಿನವರೆಗೂ ಅಭಿವೃದ್ಧಿ ಮಂಡಳಿಯೇ ನಿರ್ಮಾಣವಾಗಿಲ್ಲ. ಇನ್ನೂ ಅದು ಆಗಿ ವಿಶ್ವಕರ್ಮರನ್ನು ಮೇಲೆತ್ತುವ ತನಕ ಕಾಯೋ ಕರ್ಮ ಯಾವನಿಗೆ ಬೇಕ್ರೀ? ನೆಮ್ಮದಿಯಾಗಿ ಒಬ್ಬರಿಗೆ ಒಬ್ಬರು ಸಹಾಯ ಮಾಡಿಕೊಂಡು ಇದ್ದ ವಿಶ್ವಕರ್ಮರೇ ಅಧ್ಯಕ್ಷ ಸ್ಥಾನಕ್ಕೆ ಕಿತ್ತಾಡುವಂತೆ ಮಾಡಿದರು. ಈಗ ಬ್ರಾಹ್ಮಣರ ಸರದಿ.
ಈಗ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ಮಾಡುತ್ತೀರಲ್ಲಪ್ಪಾ, ಯಾರನ್ನು ಅಧ್ಯಕ್ಷರನ್ನಾಗಿ ಮಾಡುತ್ತೀರಾ? ಸ್ಮಾರ್ತರನ್ನೋ? ಮಾಧ್ವರನ್ನೋ? ವೈಷ್ಣವರನ್ನೋ? ಸಾರಸ್ವತ ಬ್ರಾಹ್ಮಣರನ್ನೋ? ಸ್ಮಾರ್ತರನ್ನು ಅಧ್ಯಕ್ಷರನ್ನಾಗಿ ಮಾಡಿದರೆ, ಮಾಧ್ವರು ಸುಮ್ಮನೆ ಕೂರುತ್ತಾರಾ? ಮಾಧ್ವರನ್ನು ಮಾಡಿದರೆ ಶ್ರೀವೈಷ್ಣವರು ಸುಮ್ಮನಿರುತ್ತಾರಾ? ಸಾರಸ್ವತರನ್ನು ಮಾಡಿದರೆ ಮಂಗಳೂರು ಸುಮ್ಮನೆ ಇರುತ್ತದಾ? ಅಂದರೆ ಈಗ ಮತ್ತೊಮ್ಮೆ ಬ್ರಾಹ್ಮಣರ ನಡುವೆಯೇ ಬತ್ತಿ ಹಚ್ಚುವ ಖಯಾಲಿ ಇದು. ಯಾರು ಹೊಡೆದಾಡಿ ಗೆದ್ದು ಬರುತ್ತಾರೋ ಅವರ ಪರ ಕುಮಾರಸ್ವಾಮಿ ನಿಲ್ಲುತ್ತಾರೆ.
ಸರಿ, ಇದೇ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯನ್ನೇನಾದರೂ ಬಿಜೆಪಿ ಸರ್ಕಾರ ಮಾಡಿದ್ದರೆ ಕೋಮುವಾದ, ಪುರೋಹಿತಶಾಹಿ ಸರ್ಕಾರ ಎಂದು ಕಾಂಗ್ರೆಸ್ಸೇ ಹೇಳುತ್ತಿತ್ತು. ಜೀವನ ಪರ್ಯಂತ ಹೇಳುತ್ತಿದ್ದರು. ಆದರೆ ಈಗ ಕಾಂಗ್ರೆಸ್-ಜೆಡಿಎಸ್ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ಮಾಡಿದರೆ ಅದು ಜಾತ್ಯತೀತವಾ? ಕಾಂಗ್ರೆಸ್ ಮಾತೇ ಆಡುತ್ತಿಲ್ಲ.
ಮೊದಲೂ ಈ ಮಂಡಳಿಯನ್ನು ಮಾಡುವುದಕ್ಕೆ ಬೇಡಿಕೆ ಬಂದಿತ್ತು. ಆದರೆ ಇದಕ್ಕೆ ದಿನೇಶ್ ಗುಂಡೂರಾವ್ ಎಂಬ ಬ್ರಾಹ್ಮಣನೇ ಇದಕ್ಕೆ ಕ್ಯಾಬಿನೆಟ್ನಲ್ಲಿ ಕೊಕ್ಕೆ ಹಾಕಿದ್ದರು. ಈಗ ಅವರೇಕೆ ಮಾತನಾಡುತ್ತಿಲ್ಲ?
ಲಿಂಗಾಯತರಿಂದ ವೀರಶೈವರನ್ನು ಒಡೆದ ಹಾಗೇ ಇದನ್ನೂ ಮಾಡುತ್ತಿದ್ದಾರೆ. ಆದರೆ ಬ್ರಾಹ್ಮಣರು ಕಿತ್ತಾಡುವಂತೆ ಮಾಡುವುದಕ್ಕೆ ಬಹಳ ನಾಜೂಕಾಗಿ ಚಿಂತಿಸಿ, ಅಭಿವೃದ್ಧಿ ಮಂಡಳಿಯನ್ನು ಮಾಡುವುದಕ್ಕೆ ಹೊರಟಿದ್ದಾರೆ. ಸಮಾಜದ ಕಣ್ಣಿಗೆ ಕುಮಾರಸ್ವಾಮಿ ಬ್ರಾಹ್ಮಣರ ಪರವಾಗಿದ್ದಾರೆ, ಆದರೆ ವಾಸ್ತವದಲ್ಲಿ ಬ್ರಾಹ್ಮಣರೇ ಕಿತ್ತಾಡುತ್ತಿರುತ್ತಾರೆ.
ಈಗ ಶಂಕರ ಜಯಂತಿಯ ಆಚರಣೆಯನ್ನು ಸರ್ಕಾರದ ವತಿಯಿಂದ ಮಾಡುವುದಕ್ಕೂ ತಯಾರಾಗಿದ್ದಾರೆ. ಇನ್ನು ಸರ್ಕಾರ ಮಾಡಲಿ ಬಿಡಲಿ, ಶಂಕರರನ್ನು ನಿತ್ಯವೂ ಆರಾಧಿಸುವವನಿಗೆ ನಿತ್ಯವೂ ಶಂಕರ ಜಯಂತಿಯೇ. ಆದರೆ ಶಂಕರಾಚಾರ್ಯರೊಬ್ಬರ ಜಯಂತಿಯನ್ನೇ ಮಾಡಿದರೆ, ಮಾಧ್ವರು, ಶ್ರೀವೈಷ್ಣವರು ನಾವೇನು ಪಾಪ ಮಾಡಿದ್ದೇವೆ ಎಂದು ಕೇಳುವುದಿಲ್ಲವೇ?
ಇದು ಸಣ್ಣ ವಿಷಯವಲ್ಲ ಎಂಬುದಕ್ಕೆ ಒಂದು ಸಣ್ಣ ಉದಾಹರಣೆ ಕೊಡುವುದಾದರೆ, ನಾಡಗೀತೆಯಲ್ಲಿ ಬರುವ ಈ ಸಾಲನ್ನೇ ಗಮನಿಸಿ, ‘ಶಂಕರ ರಾಮಾನುಜ ವಿದ್ಯಾರಣ್ಯ… ಬಸವೇಶ್ವರ ಮಧ್ವರ ದಿವ್ಯಾರಣ್ಯ’ ಎಂಬುದನ್ನು ‘ಬಸವೇಶ್ವರರಿಹ ದಿವ್ಯಾರಣ್ಯ’ ಎಂದು ಮಾಡಿ, ಮಧ್ವರನ್ನು ಬಿಟ್ಟಿದ್ದಕ್ಕೇ ಮಾಧ್ವರು ರೊಚ್ಚಿಗೆದ್ದಿದ್ದರು, ವಿರೋಧಿಸಿದ್ದರು. ದೊಡ್ಡ ಚರ್ಚೆಯೇ ಆಗಿತ್ತು. ಶಂಕರರು ರಾಮಾನುಜರ ಹೆಸರನ್ನು ಹಾಕುವಾಗ ಮಧ್ವರ ಹೆಸರು ಹೆಚ್ಚಾಯ್ತೆ ಎಂದು ಕೇಳಿದ್ದರು. ಈಗ ಶಂಕರರ ಜಯಂತಿ ಮಾತ್ರ ಮಾಡಿಬಿಟ್ಟರೆ ಸುಮ್ಮನೆ ಕುಳಿತುಕೊಳ್ಳುತ್ತಾರಾ? ಇಲ್ಲ. ಈ ತಂತ್ರಗಾರಿಕೆ ಕುಮಾರಸ್ವಾಮಿಗೆ ತಿಳಿದೇ ಇಲ್ಲ ಎಂದು ಯಾರಾದರೂ ವಾದಿಸಿದರೆ, ಅದು ದೇವೇಗೌಡರಿಗೆ ಮಾಡುವ ಅವಮಾನ.
ಶಂಕರಾಚಾರ್ಯರನ್ನು ಅನುಸರಿಸುವ ನಾನೇ ಈ ಪ್ರಶ್ನೆ ಕೇಳುತ್ತೇನೆ. ಕನ್ನಡಿಗರಾದ ಮಧ್ವರ ಜಯಂತಿಯನ್ನೇಕೆ ಮಾಡುತ್ತಿಲ್ಲ? ಅವರ ತತ್ತ್ವ ಸಿದ್ಧಾಂತವನ್ನು ಒಪ್ಪುತ್ತೇನೋ ಬಿಡುತ್ತೇನೋ ಬೇರೆ. ಆದರೆ ಅವರ ಅಪಾರ ಜ್ಞಾನಕ್ಕಂತೂ ತಲೆಬಾಗಲೇ ಬೇಕಲ್ಲ. ಹೇಳಿ, ಮಧ್ವರ ಹೆಸರಿನಲ್ಲಿ ಸರ್ಕಾರ ಒಂದು ಜಯಂತಿ ಮಾಡದಷ್ಟೂ ಮಧ್ವರು ಯೋಗ್ಯರಲ್ಲವೇ?
ಬಿಡಿ ಮಧ್ವರ ಬಗ್ಗೆ ಕುಮಾರಸ್ವಾಮಿಗೆ ಹೇಗೆ ತಿಳಿಯಬೇಕು? ಜಾತ್ಯತೀತ ಜಾತ್ಯತೀತ ಎಂದು ಬಡಿದುಕೊಳ್ಳುವ ನಿಮಗೆ ರಾಮಾನುಜಾಚಾರ್ಯರ ಬಗ್ಗೆ ಸ್ವಲ್ಪವಾದರೂ ತಿಳಿದಿದೆಯಾ? ತಮಿಳುನಾಡಿನಿಂದ ಹೊರಹಾಕಿಸಿಕೊಂಡ ಮೇಲೆ ಕರ್ನಾಟಕಕ್ಕೆ ಬಂದ ಅವರು ಇಲ್ಲಿಗೆ ಮಾಡಿದ ಸೇವೆ ಅಪಾರ. ಇವತ್ತು ಶ್ರೀರಂಗಪಟ್ಟಣ, ಮೇಲುಕೋಟೆ ದೇವಸ್ಥಾನ ಆದಿಯಾಗಿ ಹಾಸನ, ಹಳೆ ಮೈಸೂರು ಭಾಗಗಳಲ್ಲಿ ಇವರು ನಿರ್ಮಿಸಿದ ದೇವಸ್ಥಾನ, ಕೆರೆಕುಂಟೆಗಳು ಸಾಕಷ್ಟಿವೆ. ಗೋಸ್ಥಿಪೂರ್ಣರೆಂಬ ಗುರುಗಳ ಬಳಿ ‘ಓಂ ನಮೋ ನಾರಾಯಣಾಯ’ ಎಂಬ ಮಂತ್ರವನ್ನು ತಿಳಿದುಕೊಂಡು. ಅದನ್ನು ಯಾರಿಗೂ ಹೇಳಬಾರದು ಎಂದರೂ ತಿರುಕ್ಕೊಟಿಯೂರ್ನ ವಿಷ್ಣು ದೇವಸ್ಥಾನದ ಗೋಪುರದ ಮೇಲೆ ನಿಂತು ‘ಓಂ ನಮೋ ನಾರಾಯಣಾಯ’ ಎಂದು ಕೂಗಿ ಕೂಗಿ ಬ್ರಾಹ್ಮಣರಿಗಷ್ಟೇ ಅಲ್ಲದೇ, ಎಲ್ಲರಿಗೂ ಈ ಮಂತ್ರ ಲಭಿಸಬೇಕು, ದೇವರನ್ನು ಎಲ್ಲ ಜಾತಿ ಧರ್ಮದವರೂ ಕಾಣಬೇಕು ಎಂದು ಆಗಲೇ ಜಾತ್ಯತೀತವಾಗಿ ಚಿಂತಿಸಿದ ರಾಮಾನುಜಾಚಾರ್ಯರ ಜಯಂತಿ ಯಾಕಿಲ್ಲ?
ಬ್ರಾಹ್ಮಣರು ಈ ಆಚಾರ್ಯತ್ರಯರನ್ನು ಅದೆಷ್ಟು ನಂಬಿದ್ದಾರೆ, ಗೌರವಿಸುತ್ತಾರೆ, ಅನುಸರಿಸುತ್ತಿದ್ದಾರೆ ಎಂಬುದು ಇವರಿಗೇನು ಗೊತ್ತು? ಒಬ್ಬರ ಜಯಂತಿ ಮಾತ್ರ ಮಾಡಿ, ಮಿಕ್ಕಿದ್ದನ್ನು ಮಹಾಜನತೆಗೆ ಬಿಟ್ಟು ಜಗಳ ಆಡುವಂತೆ ಬ್ರಾಹ್ಮಣರನ್ನು ಛೂ ಬಿಟ್ಟಂತಿದೆ ಈ ಐಡಿಯಾ. ಇದು ತಿಳಿಯದ ಬ್ರಾಹ್ಮಣರು ನಮಗೇನೋ ನಿಧಿ ಸಿಕ್ಕಿದೆ ಎಂಬಂತೆ ಕೊಚ್ಚಿಕೊಳ್ಳುತ್ತಿದ್ದಾರೆ.
ನಿಜವಾಗಿ ಬ್ರಾಹ್ಮಣರ ಮೇಲೆ ಪ್ರೀತಿ ಇದ್ದಿದ್ದರೆ ಅಥವಾ ಅವರ ಅಭಿವೃದ್ಧಿಗೆ ಶ್ರಮಿಸಬೇಕೆಂದಿದ್ದರೆ, ನೇರವಾಗೇ ಅವರ ಅಭಿವೃದ್ಧಿ ಮಾಡಬಹುದಿತ್ತು. ದಲಿತರಿಗೆ, ಪರಿಶಿಷ್ಟ ಜಾತಿ-ಪಂಗಡಗಳ ಅಭಿವೃದ್ಧಿಯನ್ನು ಒಂದು ಮಂಡಳಿಗೆ ಮಾತ್ರ ಇವರು ಸೀಮಿತಗೊಳಿಸಿದ್ದಾರಾ? ಇಲ್ಲ. ಉಚಿತ ಬಸ್ಪಾಸ್, ಶಾಲೆ ಕಾಲೇಜುಗಳ ಫೀಸ್ಗಳಲ್ಲಿ ರಿಯಾಯಿತಿ. ಕೆಲಸಕ್ಕೆ ಅರ್ಜಿ ಸಲ್ಲಿಸುವಾಗ ವಯಸ್ಸಿನಲ್ಲಿ ರಿಯಾಯಿತಿ ಕೊಡುತ್ತೀರಲ್ಲವೇ? ಹಾಗೆಯೇ, ದಲಿತರು ಪರಿಶಿಷ್ಟ ಜಾತಿಗೆ ಕೊಡುವ ಹಾಗೆ ಆರ್ಥಿಕವಾಗಿ ಹಿಂದಿರುವ ಬ್ರಾಹ್ಮಣರಿಗೆ ಉಚಿತ ಬಸ್ಪಾಸ್, ಫೀಸ್ಗಳಲ್ಲಿ ರಿಯಾಯಿತಿ ಕೊಟ್ಟು ಸಹಾಯ ಮಾಡಬಹುದಲ್ಲ? ಅದು ನಿಜವಾಗಿ ಅಭಿವೃದ್ಧಿ ಮಾಡುವ ವಿಧಾನ.
ಅದನ್ನು ಬಿಟ್ಟು ಮಂಡಳಿ ನಿಗಮಗಳನ್ನೆಲ್ಲ ಮಾಡುವುದು, ಜಯಂತಿ ಆಚರಣೆಯನ್ನು ಮಾಡುವುದಿದೆಯಲ್ಲ, ಇದು ಕುಮಾರಸ್ವಾಮಿಯವರು ಮತ್ತೆ ಮತ್ತೆ ತಾವು ದೇವೇಗೌಡರ ಮಗ ಎಂದು ಸಾಬೀತು ಮಾಡಿಕೊಳ್ಳುತ್ತಿರುವ ಹಾಗಿದೆ ಅಷ್ಟೇ.
ಈಗಾಗಲೇ ಪೆಟ್ರೋಲ್ ಬೆಲೆ ಹೆಚ್ಚು ಮಾಡಿರುವುದಲ್ಲದೇ ಮಧ್ಯಮವರ್ಗದ ಜನರ ಮೇಲೆ ಹೇರಿಕೆ ಹಾಕಿ, ಷರತ್ತುಬದ್ಧ ಸಾಲ ಮನ್ನಾ ಮಾಡಲು ಸೂಚಿಸಿದ್ದಾರೆ. ಅಷ್ಟಕ್ಕೇ ಕುಮಾರಸ್ವಾಮಿಯ ಚೇಲಾಗಳು, ಅವರು ಅಷ್ಟೂ ಸಾಲ ಮನ್ನಾ ಮಾಡಿದಂತೆ ಪೋಸು ಕೊಡುತ್ತಿದ್ದಾರೆ. ಈಗ ಕುಮಾರಣ್ಣ ಬ್ರಾಹ್ಮಣರ ಪರ ಎಂದೂ ಹೇಳಲಿಕ್ಕೆ ಶುರು ಮಾಡುತ್ತಾರೆ.
ಔರಂಬಜೇಬ್ ಆಸ್ಥಾನದಲ್ಲಿದ್ದ ಜಗನ್ನಾಥ ಪಂಡಿತರು ಔರಂಗ್ಜೇಬನ ಬಗ್ಗೆ ‘ದಿಲ್ಲಿಶ್ವರೋವಾ, ಜಗದೀಶ್ವರೋವಾ’ ಎಂದು ಕಾವ್ಯದಲ್ಲಿ ಬರೆಯುತ್ತಾರೆ. ಅರ್ಥ: ದಿಲ್ಲಿಯ ಈಶ್ವರ(ಔರಂಗಜೇಬ್)ನೇ, ಜಗತ್ತಿಗೆ ಈಶ್ವರ ಎಂದು. ಹಾಗೆಯೇ ಜೆಡಿಎಸ್-ಕಾಂಗ್ರೆಸ್ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 25 ಕೋಟಿ ಕೊಡುತ್ತಾರೆ, ಶಂಕರ ಜಯಂತಿ ಮಾಡುತ್ತಾರೆ ಎಂದು ಘೋಷಿಸಿದ ಮಾತ್ರಕ್ಕೇ ಪುಳಕಿತರಾಗಿ ಬ್ರಾಹ್ಮಣರು ಹೊಗಳುತ್ತಿದ್ದಾರೆ. ಲಿಂಗಾಯತರು ಮತ್ತೆ ವೀರಶೈವರ ಮನಸ್ಸನ್ನು ನಾವು ಬೇರೆ, ನೀವು ಬೇರೆ ಎಂದು ಹೇಗೆ ಹಾಳುಗೆಡವಿ, ಒಬ್ಬರಿಗೊಬ್ಬರು ಎದುರಾದರೆ ಕೇವಲ ನೀನು ಶೇಷ್ಠ ನಾನು ಶ್ರೇಷ್ಠ ಎಂದು ಬಡಿದಾಡಿಕೊಳ್ಳುವ ಹಾಗೆ ಮಾಡಿದರೋ, ಸ್ಮಾರ್ಥ, ಮಾಧ್ವ, ವೈಷ್ಣವ, ಶ್ರೀವೈಷ್ಣವ, ಸಾರಸ್ವತ ಇತ್ಯಾದಿ ಬ್ರಾಹ್ಮಣರನ್ನು ಹಾಗೆಯೇ ಮಾಡುತ್ತಾರೆಂಬುದನ್ನು ನಾನು ಹೇಳಿಯೇ ತಿಳಿದುಕೊಳ್ಳಬೇಕಿಲ್ಲ. ಎಲ್ಲವೂ ಕಣ್ಣೆದುರಿಗೆ ಇದೆ. ಆದರೆ ಲಿಂಗಾಯತ ವೀರಶೈವವನ್ನು ಒಡೆದುದಕ್ಕಿಂತಲೂ ಬ್ರಾಹ್ಮಣರ ಜಗಳ ಇನ್ನಷ್ಟು ಘೋರವಾಗಿರುತ್ತದೆ ಎಂಬುದನ್ನು ಮಾತ್ರ ಮರೆಯದಿರಿ.
Like this:
Like Loading...
Related