ಜೂನ್ 29 ಒಂದು ಹೊಸ ಚಿತ್ರ ಬಿಡುಗಡೆಯಾಗಿದೆ. ಹೆಸರು ‘ಸಂಜು’. ರಣವೀರ್ ಕಪೂರ್ ಮತ್ತು ಅನೂಷ್ಕಾ ಶರ್ಮಾ ಅಭಿನಯದ ಚಿತ್ರ. ಇದರಲ್ಲಿ ಕಥೆಯೇ ಸಂಜಯ್ ದತ್ ಬಗ್ಗೆ. ಚಿತ್ರ ನೋಡುವವರು ಮಧ್ಯಮಧ್ಯದಲ್ಲಿ ಕಣ್ಣೀರು ಹಾಕುವುದೇನು, ಚಿತ್ರ ನೋಡಿ ಹೊರ ಬಂದ ಮೇಲೆ ಜನ ಪಾಡಿ ಪೊಗಳುವುದು ನೋಡಿದರೆ ಸಂಜಯ್ ದತ್ರದ್ದು ಒಂದು ಮಂದಿರ ನಿರ್ಮಾಣ ಒಂದು ಬಾಕಿ. ಉಗ್ರರ ಜೊತೆ ನಂಟು ಹೊಂದಿದ್ದ ಹಾಗೂ 6 ವರ್ಷ ಜೈಲಿನಲ್ಲಿ ಕೊಳೆಯುತ್ತಿದ್ದ ಒಬ್ಬ ವ್ಯಕ್ತಿಗೆ ಸುಣ್ಣ ಬಣ್ಣ ಬಳಿದು ಜನರೆದುರಿಗೆ ಸಾಚಾ ಮಾಡುವ ಅಮೋಘ ಪ್ರಯತ್ನ ಬಿಟ್ಟರೆ ಸಂಜು ಚಿತ್ರದಲ್ಲಿ ಏನೇನೂ ಇಲ್ಲ. ಇಡೀ ಚಿತ್ರದ ತುಂಬ ಸಂಜಯ್ ದತ್ ಒಬ್ಬ ಸಾಚಾ ಮನುಷ್ಯ. ಸಂಜಯ್ ಸದ್ಗುಣ ಸಂಪನ್ನ. ಸಂಜಯ್ದು ತಪ್ಪೇನೂ ಇಲ್ಲ. ಒಳಗೆ ಕುಳಿತಿದ್ದ ಸಂಜಯ್ನಲ್ಲಿ ಎಳೆದು ಕರೆದುಕೊಂಡು ಬಂದು ಅಪರಾಧಿ ಮಾಡಿದರು ಎಂಬಂಥ ಚಿತ್ರವೇ ಈ ಸಂಜು.
ಸಂಜು ಚಿತ್ರದ ಮೊದಲ ಭಾಗ ಓಡುವುದು ಆತ ಎಷ್ಟು ಮಾದಕ ವ್ಯಸನಿಯಾಗಿದ್ದ ಮತ್ತು ಅದಕ್ಕೆ ಕಾರಣ ಯಾರು ಎನ್ನುವುದರ ಮೇಲೆ. ಹೆಚ್ಚೂ ಕಡಿಮೆ ಅರ್ಧ ಸಿನಿಮಾ ತುಂಬ ಸಂಜಯ್ ದತ್ ಡ್ರಗ್ ತೆಗೆದುಕೊಂಡಾಗ ಹೇಗೆ ಚೇಷ್ಟೆ ಮಾಡುತ್ತಿದ್ದ ಎನ್ನುವುದರ ವರ್ಣನೆಯೇ ಇದೆ. ಅದಕ್ಕೆ ಕಾರಣ ಸಂಜಯ್ ಸ್ನೇಹಿತನೇ ಹೊರತು ಸಂಜಯ್ ಅಲ್ಲ ಎಂಬಂತಿದೆ. ಸ್ವಾಭಾವಿಕ ಅಲ್ಲವಾ ಇದು? ನೇರ ಹೋಗಿ ತೆಗೆದುಕೊಂಡು ಬರುವುದಕ್ಕೆ ಅದೇನು ಶೆಟ್ಟರ ಅಂಗಡಿಯ ಮಿಠಾಯಿಯಲ್ಲವಲ್ಲ. ಕೆಟ್ಟವರ ಸಂಘ ಮಾಡಲೇಬೇಕು. ಸ್ನೇಹಿತರಿಂದಲೇ ಸಿಗಬೇಕು. ಎಲ್ಲ ಮಾದಕ ವ್ಯಸನಿಗಳು ಹೇಗೆ ಚಟ ಶುರು ಮಾಡುತ್ತಾರೋ ಅದರಂತೆಯೇ ಸಂಜಯ್ ದತ್ ಸಹ ಶುರು ಮಾಡಿದ್ದಾರೆ. ಇದಲ್ಲಿ ಕಣ್ಣೀರು ಹಾಕುವಂಥದ್ದೇನಿದೆ? ಅಥವಾ ಹೀರೋ ಅಂಶವಾದರೂ ಏನಿದೆ? ಒಬ್ಬ ವ್ಯಸನಿಯನ್ನು ಆದರ್ಶವಾಗಿ ತೆಗೆದುಕೊಳ್ಳುವ ನಾವೆಂಥ ದಡ್ಡ ಶಿಖಾಮಣಿಗಳು ಸ್ವಾಮಿ?
ಈ ಸಿನಿಮಾದಲ್ಲಿ ಒಂದು ದೃಶ್ಯ ಇದೆ. ಅದರಲ್ಲಿ ಸಂಜಯ್ ಜೀವನಚರಿತ್ರೆ ಬರೆಯಲು ಬಂದ ಸಾಹಿತಿ ಪಾತ್ರಧಾರಿ ಅನುಷ್ಕಾ, ‘ನೀನು ನಿನ್ನ ಹೆಂಡತಿಯ ಹೊರತಾಗಿ ಎಷ್ಟು ಹೆಣ್ಣುಮಕ್ಕಳ ಜೊತೆಗೆ ಮಲಗಿದ್ದೀಯ ಹೇಳು’ ಎಂದು ಸಂಜಯ್ ಹೆಂಡತಿ ಪಕ್ಕದಲ್ಲಿ ಇರುವಾಗಲೇ ಕೇಳುತ್ತಾಳೆ. ಸಂಜಯ್ ಹೇಳುತ್ತಾರೆ, ‘ವೇಷ್ಯೆಯರನ್ನು ಹೊರತುಪಡಿಸಿ, 310 ಹುಡುಗಿಯರ ಜೊತೆ ಮಲಗಿದ್ದೇನೆ. ಆದರೂ ಸುಳ್ಳು ಹೇಳಬಾರದಲ್ಲ. ಲೆಕ್ಕ ತಪ್ಪಿರಬಹುದು, 350 ಅಂತಲೇ ಇಟ್ಟುಕೊಳ್ಳಿ’ ಎನ್ನುತ್ತಾರೆ. ಇದಕ್ಕೆ ಸಿನಿಮಾ ಹಾಲ್ನಲ್ಲಿರುವವರೆಲ್ಲ ಮುಸಿ ಮುಸಿ ನಗುತ್ತಾರೆ. ಹೇಳಿ, ಇದು ನಗುವ ವಿಚಾರವಾ?ನಾಳೆ ನಮ್ಮ ಗಂಡನೋ, ಅಣ್ಣ ತಮ್ಮನೋ, ಮಗನೂ ಇಂಥದ್ದನ್ನು ಹೇಳಿದರೆ ನಾವು ಹೀಗೇ ನಗುತ್ತೀವಾ? ಹೆಣ್ಣು ಕಂಡರೆ ಪ್ಯಾಂಟು ಸೊಂಟದ ಮೇಲೆ ನಿಲ್ಲದ ಕಾಮುಕ ಎಂದು ಕರೆಯುವ ಬದಲು, 350 ಹುಡುಗಿಯರ ಜೊತೆ ಮಲಗಿದ ಒಬ್ಬ ಹೆಣ್ಣುಬಾಕನನ್ನು ಶೂರ, ಧೀರ ಎಂದು ಕರೆಯುತ್ತೀರೆಂದರೆ, ಉಮೇಶ್ ರೆಡ್ಡಿಯನ್ನು ಕರೆದು ಸನ್ಮಾನ ಮಾಡಬೇಕಲ್ಲವೇ? ಅವನದ್ದೂ ಶೌರ್ಯ ಅಲ್ಲವಾ? ಹೆಂಗಸರ ಒಳ ವಸ್ತ್ರವನ್ನು ಮೂಸುವುದು, ಅವರನ್ನು ಅತ್ಯಾಚಾರ ಮಾಡುವುದೇನು ನಾವು ನೀವು ಮಾಡುವುದಕ್ಕಾಗುವಂಥ ಸಾಮಾನ್ಯ ಸಾಧನೆಯಾ? ಉಮೇಶ್ ರೆಡ್ಡಿ ಬಂದರೆ ಪೊಲೀಸರಿಗೆ ಫೋನ್ ಮಾಡುತ್ತೇವೆ, ಸಂಜಯ್ನನ್ನು ನೋಡಿಕೊಂಡು ನಗುತ್ತೇವೆ. ಹೇಳಿ, ಸಂಜಯ್ ದತ್, ಉಮೇಶ್ ರೆಡ್ಡಿಗಿಂತ ಹೇಗೆ ಭಿನ್ನ?
ಎಲ್ಲಕ್ಕಿಂತ ಮುಖ್ಯ ಅಂಶವೇನೆಂದರೆ, ಸಂಜಯ್ ದತ್ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಸಾಬೀತಾಗಿ ಜೈಲಿಗೆ ಹೋಗಿ ಬಂದಿದ್ದು. ಇದಕ್ಕೆ ಚಿತ್ರದಲ್ಲಿ ಕೊಟ್ಟಿರುವ ಕಾರಣ, ಅವರ ತಂದೆ 1993ರ ಬ್ಲಾಸ್ಟ್ನ ಸಂತ್ರಸ್ತ ಮುಸ್ಲಿಮರಿಗೆ ನೆರವು ನೀಡುತ್ತಿದ್ದರಂತೆ. ಅದನ್ನು ನಿಲ್ಲಿಸದಿದ್ದರೆ ಸುನೀಲ್ ದತ್ನನ್ನು ಕೊಂದು ಬಿಡುತ್ತೇವೆ ಎಂದು ಹಿಂದೂ ಸಂಘಟನೆಗಳು ಹಾಕಿದ ಬೆದರಿಕೆಗೆ ಹೆದರಿ, ಸಂಜಯ್ ದತ್ ಮನೆಯಲ್ಲಿ ಅಸಾಲ್ಟ್ ರೈಫಲ್ ಎಕೆ-56 ತಂದಿಟ್ಟುಕೊಂಡಿದ್ದಂತೆ. ಇದನ್ನು ಸಿನಿಮಾದಲ್ಲಿ ಬಹಳ ಒತ್ತಿ ಒತ್ತಿ ತೋರಿಸಿದ್ದಾರೆ. ಅರ್ಥಾತ್ ಸಂಜಯ್ ದತ್ ಜೈಲಿಗೆ ಹೋಗುವುದಕ್ಕೆ ಪರೋಕ್ಷವಾಗಿ ಹಿಂದೂಗಳೇ ಕಾರಣ ಎಂದು ಬರೆಯಲಾಗಿದೆ.
ಹಿಂದೂಗಳೇ ಯಾಕೆ ಟಾರ್ಗೆಟ್ ಎಂಬುದಕ್ಕೆ ಸಂಜು ಚಿತ್ರದ ನಿರ್ದೇಶಕ ರಾಜ್ಕುಮಾರ್ ಹಿರಾನಿಯ ಇತಿಹಾಸವೇ ಎಲ್ಲವನ್ನೂ ಹೇಳಿಬಿಡುತ್ತದೆ. ಪಿಕೆ ಚಿತ್ರದಲ್ಲಿ ಅಮೀರ್ ಖಾನ್ ಶಿವ ಪಾತ್ರಧಾರಿಯನ್ನು ನಿಜವಾದ ಶಿವ ಎಂದೇ ತಿಳಿದು ಅಟ್ಟಿಸಿಕೊಂಡು ಹೋಗಿ ಕೊನೆಗೆ ಶಿವ ಟಾಯ್ಲೆಟ್ನಲ್ಲಿ ಕಕ್ಕಸು ಗುಂಡಿಯ ಪಕ್ಕದಲ್ಲಿ ಬಚ್ಚಿಟ್ಟುಕೊಳ್ಳುವಂತೆ ತೋರಿಸಿದ್ದರು ಇದೇ ರಾಜ್ಕುಮಾರ್ ಹಿರಾನಿ. ಆಗ ಒಬ್ಬ ಆಮೀರ್ ಖಾನ್ ಎಂಬ ಮುಸ್ಲಿಮನನ್ನು ಇಟ್ಟುಕೊಂಡು ಚಿತ್ರ ಮಾಡಿದ್ದರಿಂದ ಬಹಳ ಟೀಕೆಗೊಳಪಟ್ಟಿತ್ತು. ಈಗ ಹಿಂದೂ ಒಬ್ಬನ ಕಥೆಗೆ ಹಿಂದೂವನ್ನೇ ನಾಯಕನಟನನ್ನಾಗಿ ಮಾಡಿ, ಹಿಂದೂಗಳನ್ನೇ ವಿಲನ್ ಮಾಡಿದ್ದಾರೆ. ಇದು ಪಕ್ಕಾ ಬಾಲಿವುಡ್ನ ಲೆಕ್ಕಾಚಾರ. ನಾವೆಲ್ಲ ಹಲ್ಲು ಕಿರಿದು ಇದನ್ನು ನೋಡುತ್ತಿದ್ದೇವಷ್ಟೇ.
ರಾಜ್ಕುಮಾರ್ ಹಿರಾನಿ ಬಹಳ ಜಾಗರೂಕತೆಯಿಂದ ಸಂಜಯ್ ದತ್ನ ನೀಚತನವನ್ನು ಮುಚ್ಚಿಟ್ಟಿದ್ದಾರೆ. ಸಂಜಯ್ ದತ್ನ ಬಂಡವಾಳ ತಿಳಿಯಬೇಕಾದ್ದು ಕಥೆ ಬರೆದು ಕಾಸು ಮಾಡಿಕೊಳ್ಳುವ ಹಿರಾನಿಯಿಂದಲ್ಲ, ಅಂದು ಮುಂಬೈ ಪೊಲೀಸ್ ಕಮೀಷನರ್ ಆಗಿದ್ದ ಎಮ್.ಎನ್. ಸಿಂಗ್ ಅವರಿಂದ. ಹಿರಾನಿ ಮುಚ್ಚಿಟ್ಟ ಕಥೆಗಳು ಇವರಿಗೆ ಗೊತ್ತಿದೆ. ಮುಗ್ಧ ಸಂಜಯ್ ದತ್, ಅಪ್ಪನ ರಕ್ಷಣೆಗಾಗಿ(ಹಿರಾನಿಯ ಗುಬ್ಬಿಕಥೆಯ ಪ್ರಕಾರ) ತರಿಸಿದ್ದ ಅಸಾಲ್ಟ್ ರೈಫಲ್ ಎಕೆ-56 ಪಾಕಿಸ್ಥಾನದ್ದು ಎಂದರೆ ನೀವು ನಂಬಲೇ ಬೇಕು. ಇದನ್ನು ಹಿರಾನಿ ಹೇಳುವುದಿಲ್ಲ, ಕಮೀಷನರ್ ಹೇಳುತ್ತಾರೆ.
ವಿಚಾರಣೆಯ ವೇಳೆ, ‘ಹೌದು, ನಾನು ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಜೊತೆ ಫೋನ್ನಲ್ಲಿ ಮಾತನಾಡಿದ್ದೆ’ ಎಂದು ಸಂಜಯ್ ದತ್ ಹೇಳಿದ್ದಾರೆ. ಇದನು ಹಿರಾನಿ ಹಾರಿಸಿಬಿಟ್ಟಿದ್ದಾರೆ. ಏಕೆಂದರೆ, ಮುಂದೆ ಹಿಂದೂಗಳಿಂದ ಸಂಜಯ್ ಜೈಲಿಗೆ ಹೋದರು ಎಂದು ಬಿಂಬಿಸುವುದಕ್ಕೆ ಕಷ್ಟವಾಗುತ್ತದಲ್ಲವೇ. ದುಬೈನಲ್ಲಿದ್ದ ಉಗ್ರಗಾಮಿ ಅನೀಸ್ ಇಬ್ರಾಹಿಂ ಜೊತೆ ಸಂಜಯ್ 7 ಬಾರಿ ಫೋನ್ನಲ್ಲಿ ಮಾತಾಡಿದ್ದಾರೆ. ಮತ್ತೊಬ್ಬ ಉಗ್ರ ಅಬು ಸಲೀಂ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಈ ಸಂಪರ್ಕದಿಂದಲೇ ಪಾಕಿಸ್ಥಾನದಿಂದ 3 ಎಕೆ-56 ಅಸಾಲ್ಟ್ ರೈಫಲ್ ತರಿಸಿದ್ದು ಸಂಜು ಅಲಿಯಾಸ್ ಮುಗ್ಧ ಸಂಜಯ್. ನಿಮಗೆ ಒಂದು ವಿಷಯ ತಿಳಿದಿರಲಿ, 1993 ಮುಂಬೈ ಬಾಂಬ್ ಬ್ಲಾಸ್ಟ್ ಮಾಡಿದ ಮಾಸ್ಟರ್ಮೈಂಡ್ಗಳಿಗೆ ಇದ್ದ ಉದ್ದೇಶ ಎರಡು: 1. ಯಾವುದಾದರೂ ಒಂದು ಕಡೆ ಬಾಂಬ್ ಬ್ಲಾಸ್ಟ್ ಮಾಡಬೇಕು. ಇಲ್ಲವಾದರೆ, ರೈಫಲ್ಗಳಿಂದ ಜನಸಂದಣಿ ಪ್ರದೇಶಕ್ಕೆ ನುಗ್ಗಿ ಮನಸೋಯಿಚ್ಛೆ ಗುಂಡು ಹಾರಿಸಬೇಕು ಎಂಬುದು. ಅದಕ್ಕೆ ಬಳಕೆಯಾಗಿದ್ದೂ ಎಕೆ-56 ಹಾಗೂ ಅದನ್ನು ತರಿಸಿದ್ದು ಪಾಕಿಸ್ಥಾನದಿಂದಲೇ.
ಯಾವುದೋ ಒಂದು ಸಂದರ್ಭದಲ್ಲಿ ಹೆದರು ಪುಕ್ಕಲನಾದ ಸಂಜಯ್, 3 ರೈಫಲ್ಗಳಲ್ಲಿ 2 ರೈಫಲ್ ವಾಪಸ್ ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಹಾಗೆಯೇ ಕೆಲ ಉಗ್ರರು ಬಂದು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಬ್ಲಾಸ್ಟ್ ಆದ ಮೇಲೆ ಹೆದರಿದ ಸಂಜಯ್, ಮತ್ತೊಬ್ಬ ಕುಖ್ಯಾತ ಯೂಸಫ್ ಎಂಬುವವನನ್ನು ಮೆನೆಗೆ ಕಳುಹಿಸಿ, ರೈಫಲ್ ಅನ್ನು ಗ್ಯಾಸ್ಕಟ್ಟರ್ನಿಂದ ನಾಶ ಮಾಡಿಸಿದ್ದಾರೆ. ಯೂಸಫ್ ಏನು ಮೆಕ್ಯಾನಿಕ್ ಅಲ್ಲ. ಅವನೂ 1993ರ ಬ್ಲಾಸ್ಟ್ನಲ್ಲಿ ಭಾಗಿಯಾದವನೇ.
ಸಂಜಯ್ಗೆ ಕೊಟ್ಟ ಗನ್ಗಳ ಒಂದು ಲಾಟ್ ರಾಯ್ಘಡಕ್ಕೆ ಬಂದರೆ ಮತ್ತೊಂದು ಗುಜರಾತ್ಗೆ ಬಂದಿತ್ತು. ಇದನ್ನು ಗಾಡಿಯಲ್ಲಿ ಸ್ವತಃ ಅಬು ಸಲೇಂ ಮುಂಬೈಗೆ ತೆಗೆದುಕೊಂಡು ಬಂದಿದ್ದನು. ವೆಲ್ಡಿಂಗ್ ಆಗಿರುವ ಪೆಟ್ಟಿಗೆಯಲ್ಲಿ ಗನ್ಗಳು, ಆರ್ಡಿಎಕ್ಸ್ಗಳು ಬಂದಿತ್ತು. ಇದನ್ನು ತೆರೆಯಲಿಕ್ಕೆ, ಜನರಿಲ್ಲದ ನಿಶ್ಶಬ್ಧ ಜಾಗ ಬೇಕಿತ್ತು. ಮೊದಲು ಹನೀಫ್ ಮತ್ತು ಸಮೀರ್ನ ಮ್ಯಾಗ್ನಂ ಪ್ರೊಡಕ್ಷನ್ ಕಚೇರಿಯಲ್ಲೇ ಪೆಟ್ಟಿಗೆ ತೆರೆಯಲು ನಿಗದಿಯಾಗಿತ್ತು. ಅದಕ್ಕೆ ಅನೀಸ್ ಇಬ್ರಾಹಿಂ ಇವರಿಬ್ಬರಿಗೆ ಕರೆ ಮಾಡಿ ಅಬು ಸಲೀಂ ಜಾಗವನ್ನು ಬಳಸಿಕೊಳ್ಳುವುದರ ಬಗ್ಗೆ ಕೇಳಿದ್ದ. ಆದರೆ ಹನೀಫ್ ಮತ್ತು ಸಮೀರ್ ತಮ್ಮ ಕಚೇರಿಯ ಜಾಗದ ವಿಚಾರವಾಗಿ ಜಾಗದ ಮಾಲೀಕನ ಜೊತೆ ಯಾವುದೋ ಕಿರಿಕ್ ಇಟ್ಟುಕೊಂಡಿದ್ದರಿಂದ ಆ ಜಾಗ ಬೇಡ ಎಂದಾಯಿತು. ಕೊನೆಗೆ ಅನೀಸ್ ಇಬ್ರಾಹಿಂ ಸಂಜಯ್ ದತ್ಗೆ ಕರೆ ಮಾಡಿ ಅವರ ಮನೆಯ ಗ್ಯಾರೇಜ್ನಲ್ಲಿ ಶಸ್ತ್ರಾಸ್ತ್ರಗಳನ್ನು ಅನ್ಲೋಡ್ ಮಾಡಿಕೊಳ್ಳುವುದಕ್ಕೆ ಕೇಳಿದಾಗ ಸಂಜಯ್ ಓಕೆ ಎಂದಿದ್ದರು.
ಇಡೀ ಸಿನಿಮಾದಲ್ಲಿ ಸುನೀಲ್ ದತ್ಗೆ ಉತ್ತಮ ಭದ್ರತೆ ಕೊಡಲಿಲ್ಲ ಎಂಬುದನ್ನು ತೋರಿಸುತ್ತಾರೆ. ಆದರೆ 1992-93ರ ಗಲಭೆಯ ನಂತರ ಸುನೀಲ್ ದತ್ಗಲ್ಲದೇ, ಸಂಜಯ್ ದತ್ಗೂ ಉತ್ತಮ ಭದ್ರತೆಯನ್ನು ನೀಡಿತ್ತು ಆಗಿದ್ದ ಸರ್ಕಾರ. ಹಾಗೆ ಈ ಭದ್ರತಾ ಸಿಬ್ಬಂದಿಗೆ ಕಣ್ಣಳತೆಯ ದೂರದಲ್ಲೇ ಶಸ್ತ್ರಾಸ್ತ್ರ ಅನ್ಲೋಡ್ ಮಾಡುವುದಕ್ಕೆ ಪ್ಲಾನ್ ಮಾಡಿದ ಸಂಜಯ್ ದತ್ ಕಾರ್ ಗ್ಯಾರೇಜ್ ಇತ್ತು. ಹಾಗಾಗಿ, ಶಸ್ತ್ರಾಸ್ತ್ರ ಬರುವ ದಿನ, ಸಂಜಯ್, ಭದ್ರತಾ ಸಿಬ್ಬಂದಿಗೆ ಮತ್ತೊಂದು ಗೇಟ್ನಲ್ಲಿ ಕಾವಲು ಕಾಯುವಂತೆ ಹೇಳಿದ್ದಾರೆ. ಅವತ್ತಿನ ದಿನ ರಾತ್ರಿ, ಅಬು ಸಲೀಂ, ಹನೀಫ್ ಮತ್ತು ಇತರರು ಬಂದು ಶಸ್ತ್ರಾಸ್ತ್ರ ಪೆಟ್ಟಿಗೆಯನ್ನು ಒಡೆದಿದ್ದಾರೆ. ಸಂಜಯ್ಗೂ ರೈಫಲ್ ಕೊಟ್ಟು ಹೋಗಿದ್ದಾರೆ. ಇದನ್ನೆಲ್ಲ ನಿಮಗೆ ಹಿರಾನಿ ದೇವರಾಣೆಗೂ ತೋರಿಸುವುದಿಲ್ಲ. ಬದಲಿಗೆ ಕಮೀಷನರ್ ಎಲ್ಲವನ್ನೂ ಹೇಳುತ್ತಾರೆ. ಹಾಗೆಯೇ, ಸಿಬಿಐ ಪೊಲೀಸರು ಬಹಿರಂಗಪಡಿಸಿದ್ದಾರೆ. ಏಕೆಂದರೆ, ಹಿರಾನಿಗೆ ಬಾಲಿವುಡ್ ಮತ್ತು ಸಂಜಯ್ನ ಬೂಟು ನೆಕ್ಕುವ ಇರಾದೆಯಿರಬಹುದೇ ವಿನಾ ಕಮೀಷನರ್ ಅಥವಾ ಸಿಬಿಐಗೆ ಇಲ್ಲ.
ಇಡೀ ಸಿನಿಮಾದಲ್ಲಿ ಸುನಿಲ್ ದತ್ ಎಂಥ ತ್ಯಾಗ, ಶ್ರಮ ಪಟ್ಟಿದ್ದಾರೆ ಎಂದೂ ಸಂಜಯ್ ಮೇಲಿದ್ದ ಭಾವನೆಗಳನ್ನು ಹೆಚ್ಚಿಸುತ್ತಾರೆ. ಸ್ವಲ್ಪ ಆಲೋಚಿಸಿ, ನಮ್ಮ ಶಾಂತಿನಗರದಲ್ಲಿ ಒಂದು ಸಣ್ಣ ವಿಚಾರದಲ್ಲಿ ಮಹಮ್ಮದ್ ಹ್ಯಾರಿಸ್ ಪರವಾಗಿ ಎನ್.ಎ. ಹ್ಯಾರಿಸ್ ನಿಂತರು. ಇನ್ನು ಇಂಥ ವಿಚಾರದಲ್ಲಿ ಬಿಟ್ಟು ಕೊಡುತ್ತಾರಾ? ಮಗ ಮಾಡಿದ್ದನ್ನು ತೊಳೆಯಲು ತಂದೆ ಏನು ಮಾಡಬೇಕೋ ಅದನ್ನೆಲ್ಲ ಮಾಡಿದ್ದಾರೆ. ಒಟ್ಟಾರೆಯಾಗಿ ನೋಡುವುದಾದರೆ, ಹಿರಾನಿ, ಸಂಜಯ್ ದತ್ನ ಮೀಡಿಯಾ ಟೀಂ ರೀತಿ ಚಿತ್ರ ನಿರ್ಮಿಸಿದ್ದಾರೆ. ಜತೆಗೆ ತಮ್ಮ ಹಿಂದೂ ವಿರೋಧಿ ಅಜೆಂಡಾಗಳನ್ನು ಪ್ರಬಲವಾಗಿ ಚಿತ್ರಿಸಿದ್ದಾರೆ.
ಈ ಸಿನಿಮಾದ ಸಾರಾಂಶ ಎಷ್ಟು ಚೆನ್ನಾಗಿದೆ ನೋಡಿ: ಸಂಜಯ್ ಮಾದಕ ಪದಾರ್ಥಗಳ ವ್ಯಸನಿಯಾಗಿದ್ದಕ್ಕೆ ಆತನ ಸ್ನೇಹಿತ ಕಾರಣ, ಸಂಜಯ್ ಹೆಣ್ಣುಬಾಕ ಆಗುವುದಕ್ಕೆ ಚೆಂದದ ಹುಡುಗಿಯರು ಕಾರಣ, ಸಂಜಯ್ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವುದಕ್ಕೆ, ಜೈಲಿಗೆ ಹೋಗುವುದಕ್ಕೆ ಹಿಂದೂ ಸಂಘಟನೆಗಳು ಕಾರಣ, ಸಂಜಯ್ ಹೆಸರು ಕೆಡುವುದಕ್ಕೆ ಮಾಧ್ಯಮಗಳು ಕಾರಣ. ಸಂಜಯ್ ಮಾತ್ರ ಸಾಚಾ, 24 ಕ್ಯಾರಟ್ ಚಿನ್ನ!
ಐದು ಪದವಿ ಪಡೆದಿರುವ ಒಸಾಮಾ ಬಿನ್ ಲಾಡನ್ಗು ಸಹ ತಾನು ಯಾಕಾಗಿ ಉಗ್ರಗಾಮಿಯಾದೆ ಎಂಬುದರ ಬಗ್ಗೆ 4 ತಾಸಿನ ಕಥೆ ಇರುತ್ತದೆ, ಉಮೇಶ್ ರೆಡ್ಡಿಗೆ ಯಾಕಾಗಿ ಹೆಂಗಸರ ಮೇಲೆ ಆಸೆ ಎಂಬುದಕ್ಕೂ ಮನಕಲಕುವ ಕಥೆ ಇರುತ್ತದೆ. ಹಾಗೆಯೇ ಸಂಜಯ್ ದತ್ಗೂ ಒಂದು ಕಥೆಯಿದೆ. ಅದನ್ನು ನೋಡಿ, ಸಂಜಯ್ ದತ್ನನ್ನು ಹೀರೋ, ಎಂಥ ಕಷ್ಟ ಪಟ್ಟವನು ಎಂದೆಲ್ಲ ಸಿನಿಮಾ ಹಾಲ್ನಲ್ಲಿ ಸಿಂಬಳ ಸುರಿಸಿ ಕಣ್ಣೀರು ಹಾಕುವುದಾದರೆ, ಉಮೇಶ್ ರೆಡ್ಡಿ, ಒಸಾಮಾ ಬಿನ್ ಲಾಡೆನ್, ಕುಖ್ಯಾತ ಡ್ರಗ್ ಮಾಫಿಯಾದ ರಾಜ ಪಬ್ಲೊ ಎಸ್ಕೊಬಾರ್ ಸಹ ನಮಗೆಲ್ಲ ಹೀರೋ ಆಗಬೇಕು.
ನಮ್ಮ ದೇಶದ ಹೆಮ್ಮೆಯ ಪ್ರತೀಕವನ್ನು ಸಿನಿಮಾ ಮಾಡಿದ ‘ರಾಝಿ’, ‘ದಿ ಗಾಝಿ ಅಟ್ಯಾಕ್’, ‘ಪರಮಾಣು’ ನೋಡದವರು ಒಬ್ಬ ದುಷ್ಚಟಗಳ ದಾಸನ ಚಿತ್ರವನ್ನು ನೋಡಿ ಕಣ್ಣೀರು ಹಾಕಿದ್ದನ್ನು ಕಂಡು ನನಗೆ ಕಣ್ಣೀರು ಬಂತು.