ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯುವುದಕ್ಕೆ ಬಿಡದೇ ಬಿಜೆಪಿಯವರನ್ನು ಹೊಡೆದು ಹೊಡೆದು ಕೊಂದರು. ಆರ್ಚ್ಬಿಷಪ್ಗೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಆಗಿದೆ ಎಂದೆನಿಸಲಿಲ್ಲ. ಕೇರಳದಲ್ಲಿ ಸಾಲು ಸಾಲು ಹತ್ಯೆಯಾದರೂ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ ಅನಿಸಲಿಲ್ಲ ಅಥವಾ ಸೋನಿಯಾ ಗಾಂಧಿ ಸರ್ಕಾರ ಇದ್ದಾಗಲೂ ಹಾಗನಿಸಲಿಲ್ಲ. ಆದರೆ ಮೋದಿ ಸರ್ಕಾರ ಇವರೆಲ್ಲರ ನಿದ್ದೆಗೆಡಿಸಿದೆ.
ಹೌದು. ದೆಹಲಿಯ ಆರ್ಚ್ಬಿಷಪ್ ಅನಿಲ್ ಜೋಸೆಫ್ ಥಾಮಸ್ ಕೌಟೊ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಟಾಂಗ್ ಕೊಡುವಂತೆ ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವುದರಿಂದ ಉತ್ತಮ ಸರ್ಕಾರ ಬರಲೆಂದು ಪ್ರಾರ್ಥನೆಗೆ ಜನರನ್ನು ಕರೆದು ಪತ್ರ ಬರೆದಿದ್ದಾರೆ. ಇದನ್ನು ಹಲವಾರು ಪಾದ್ರಿಗಳು ಶ್ಲಾಘಿಸಿದ್ದಾರೆ.
ಈಗ ಪ್ರಶ್ನೆಯೇನೆಂದರೆ, ಏಸುವಿನ ಗುಣಗಾನ ಮಾಡುವ ಇವರಿಗೆಲ್ಲ ಏಕೆ ರಾಜಕೀಯ? ಇವರು ರಾಜಕೀಯಕ್ಕೆ ಬಂದರೆ ಅದೆಂಥ ಆಪತ್ತು ಬರುತ್ತದೆಂಬುದರ ಅರಿವಾದರೂ ನಮ್ಮವರಿಗೆ ಇದೆಯಾ? ಚರ್ಚ್ ರಾಜಕಾರಣಕ್ಕೆ ಇಳಿದ ಎಲ್ಲ ಕಡೆಯೂ ಇದೇ ಗೋಳು. ಇದನ್ನು ನಾನು ಹೇಳುತ್ತಿಲ್ಲ, ಇತಿಹಾಸ ಹೇಳುತ್ತದೆ. ರಾಜಕೀಯಕ್ಕೆ ಬಂದ ಕಡೆಯೆಲ್ಲ ಚರ್ಚ್ ದ್ವೇಷ ಹಬ್ಬಿಸುವುದು, ಗಲಭೆ ಮಾಡಿಸುವುದನ್ನೇ ಮಾಡಿಕೊಂಡು ಬಂದಿದೆ. ಇನ್ನು ಇವತ್ತಿಗೂ ತಾಜಾ ಉದಾಹರಣೆ ಎಂದರೆ ಸ್ಪಾನಿಶ್ ಇನ್ಕ್ವಿಸಿಷನ್. ಐಬೀರಿಯಾದಲ್ಲಿ ಯಹೂದಿಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಪಕ್ಕಪಕ್ಕದಲ್ಲೇ ಬದುಕುತ್ತಿದ್ದರೂ ಒಂದು ದಿನವೂ ಅವರಲ್ಲಿ ಜಗಳವಿರಲಿಲ್ಲ . ಇಡೀ ಯೂರೋಪ್ನಲ್ಲಿ ಅದೊಂದು ಜಾಗ ಮಾತ್ರ ವಿವಿಧ ಸಂಸ್ಕೃತಿಗಳಿಂದ ಶ್ರೀಮಂತವಾಗಿತ್ತು. ವಿಶ್ವದಲ್ಲಿ ಎಲ್ಲೂ ಸಿಗದ ಎಷ್ಟೂ ಅಪರೂಪದ ವಸ್ತುಗಳೆಲ್ಲ ಇಲ್ಲಿ ಸಿಗುತ್ತಿದ್ದವು. ಆದರೆ ಅವೆಲ್ಲ 1478ರ ತನಕ ಮಾತ್ರ. 1391ರಲ್ಲಿ ಅಲ್ಲಿನ ಚರ್ಚ್ನ ಪಾದ್ರಿ ಏಸುವಿನ ಸ್ಮರಣೆಯೊಂದನ್ನು ಬಿಟ್ಟು ಎಲ್ಲವನ್ನೂ ಮಾಡುವುದಕ್ಕೆ ನಿಂತ. ಐಬೀರಿಯಾದಲ್ಲಿರುವ ಎಲ್ಲ ಯಹೂದಿಗಳನ್ನು ಮತಾಂತರ ಮಾಡಲೇ ಬೇಕು ಎಂದು ಕರೆ ನೀಡಿದ. ಇದರಿಂದ ಗಲಭೆಯಾಯಿತು. ಯಹೂದಿಗಳು ಬಾಪ್ಟಿಸಮ್ಗೆ ಮತಾಂತರವಾಗಬೇಕಿತ್ತು. ಜೀವ ಉಳಿಸಿಕೊಳ್ಳಲು ಮತಾಂತರವಾದರು ಸಹ. 1450ರ ವೇಳೆ ಮತಾಂತರವಾದ ಎಲ್ಲರೂ ಉನ್ನತ ಮಟ್ಟಕ್ಕೆ ಹೋಗುತ್ತಿದ್ದರು. ನ್ಯೂ ಕನ್ವರ್ಟ್ಸ್(ಮತಾಂತರವಾದವರನ್ನು ಮೂಲ ಕ್ರಿಶ್ಚಿಯನ್ನರು ಗುರುತಿಸುವುದು ಹೀಗೆ)ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು ಹಾಗೂ ಆಗಲೂ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಇದು ಪಾದ್ರಿಗಳಿಗೆ ಇಷ್ಟವಿರಲಿಲ್ಲ. ಇನ್ನೊಂದೆಡೆ ಇಸಬೆಲ್ಲ ಮತ್ತು ಫರ್ಡಿನೆಂಡ್ಗೆ ಒಂದು ದೇಶದಲ್ಲಿ ಒಂದೇ ಧರ್ಮ ಪಾಲನೆಯಾಗಬೇಕು ಎಂಬ ಆಶಯವಿತ್ತು. ಅದಕ್ಕೆ ಸರಿಯಾಗಿ ಡೊಮಿನಿಕನ್ ಪಾದ್ರಿ ಟೊಮಾಸ್ ಡ ಟೋರ್ಕಮಾಡಾ ಎಂಬುವವನು ರಾಜರ ಬಳಿಗೆ ಬಂದು ಹೊಸತಾಗಿ ಮತಾಂತರವಾಗಿರುವ ಯಹೂದಿಗಳು, ಮುಸ್ಲಿಮರು ಇನ್ನೂ ಗೌಪ್ಯವಾಗಿ ತಮ್ಮ ಧರ್ಮವನ್ನೇ ಪಾಲಿಸುತ್ತಿದ್ದಾರೆ. ಹಾಗಾಗಿ ಈ ಕೂಡಲೆ ತನಿಖೆ ನಡೆಸಿ ಅವರನ್ನು ಕೊಲ್ಲಬೇಕು ಎಂದು ಕೇಳಿದ.
1948ರ ನವೆಂಬರ್ 1ರಂದು ಶುರುವಾದ ಸ್ಪಾನಿಶ್ ತನಿಖೆ ಅಥವಾ ಸ್ಪಾನಿಶ್ ಇನ್ಕ್ವಿಸಿಶನ್ ಸಾವಿರಾರು ಜನರ ಮಾರಣಹೋಮವಾಯಿತು. ಇಷ್ಟೆಲ್ಲ ಜನರನ್ನು ಧರ್ಮದ ಹೆಸರಲ್ಲಿ ಕೊಂದದ್ದು ಇದೇ ಚರ್ಚ್. ಸಾವಿರಾರು ಯಹೂದಿ ಮತ್ತು ಮುಸ್ಲಿಮ್ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾಯಿತು, ಕೊಂದರು. ಅದಕ್ಕೆ ನೇರ ಕಾರಣ ಚರ್ಚ್ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದ್ದು.
ಇಷ್ಟೇ ಅಲ್ಲ. 1233ರಲ್ಲಿ ನಡೆದ ಪಾಪಲ್ ಇನ್ಕ್ವಿಸಿಶನ್, 1478-1834ವರೆಗೂ ನಡೆದ ಸ್ಪಾನಿಶ್ ಇನ್ಕ್ವಿಸಿಷನ್, 1542-1700ವರೆಗೂ ನಡೆದ ರೋಮನ್ ಇನ್ಕ್ವಿಸಿಶನ್ ಸೇರಿದಂತೆ ಯೂರೋಪಿನ ಎಲ್ಲ ಅನಾಹುತಗಳಿಗೆ ನೇರ ಹೊಣೆ ಚರ್ಚ್ ಏಸುವಿನನ್ನು ಮರೆತಿದ್ದು, ಮರೆತು ರಾಜಕೀಯಕ್ಕೆ ಧುಮುಕಿದ್ದು. ಇವರ ದುರ್ಬುದ್ಧಿಗೆ ಲಕ್ಷಗಟ್ಟಲೆ ಜನರು ಮೃತಪಟ್ಟಿದ್ದಾರೆ.
ಭಾರತದಲ್ಲಿ ಇಂಥದ್ದೇ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಆದರೆ ಇದು ಆರಂಭಿಕ ಘಟ್ಟವಾಗಿದ್ದರಿಂದ ನಮಗೆ ಇವೆಲ್ಲ ತಿಳಿಯುತ್ತಿಲ್ಲ. ಆದರೆ ಭಾರತದಲ್ಲಿ ಹೀಗೆ ಆರ್ಡರ್ ಮಾಡುವ ಮಟ್ಟಕ್ಕೆ ಅವರು ಎಂದೂ ಹೋಗಿಲ್ಲ. ಕಾರಣ ಅವರಿಗಿಂತ ಹೆಚ್ಚಾಗಿ ಮುಸ್ಲಿಮರೇ ಫತ್ವಾ ಹೊರಡಿಸುತ್ತಿರುತ್ತಾರೆ. ಹೆಚ್ಚೆಂದರೆ ಕೋಮು ಗಲಭೆಗಳಾಗಬಹುದು.
ಒಂದು ಚರ್ಚ್ ನಿರ್ಮಾಣವಾಯಿತು ಎಂದರೆ ಅವರು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದು ಪೂರ್ವನಿಯೋಜಿತ. ಅಲ್ಲಿ ನಡೆಯುವ ಪ್ರೇಯರ್, ದೀಪ ಹಚ್ಚುವುದು ಎಲ್ಲ ಕೇವಲ ಶಾಸ್ತ್ರಕ್ಕೆ ಅಷ್ಟೇ. ಪ್ರೇಯರ್ ನಂತರ ಅಥವಾ ಮೊದಲು ಪಾದ್ರಿ ಮಾತಾಡುವುದು ಮತ್ತು ಏನೇನು ಆದೇಶ ಕೊಡುತ್ತಾರೆ ಅದನ್ನು ಪಾಲಿಸುವುದೇ ಚರ್ಚ್ಗೆ ಸೇರಿದ ಜನರ ಕರ್ತವ್ಯ. ಬೈಬಲ್ನ ಹೊಸ ಅಂತಾರಾಷ್ಟ್ರೀಯ ಆವೃತ್ತಿಯ ಜಾನ್ 15:19ರಲ್ಲಿ ಏಸುವೇ ಹೇಳಿದ್ದಾನೆ ಜೀಸಸ್ನ ಅನುಯಾಯಿಗಳು ಈ ಜಗತ್ತಿನ ಅಂಗವಲ್ಲ. ಅವರೇ ಭಿನ್ನ ಎಂದು. ಪ್ರಪಂಚದಲ್ಲಿರುವುದೆಲ್ಲ ಯಾವುದೂ ಸಂಬಂಧ ಪಡದಿದ್ದ ಮೇಲೆ ಇವರಿಗೆ ರಾಜಕೀಯ ಏಕೆ ಹೇಳಿ? ಕ್ಯಾಂಡಲ್ ಹಚ್ಚಿ ಶಿಲುಭೆಯ ಸರಕ್ಕೆ ಮುತ್ತಿಟ್ಟುಕೊಂಡು
ಇರುವುದಕ್ಕೇಧಿನು?
ಯಾಕೆ ಸುಮ್ಮನಿರುವುದಕ್ಕಾಗುವುದಿಲ್ಲ ಎಂದರೆ, ಇವರೆಲ್ಲ ಜೀಸಸ್ಗೆ ನಡೆದುಕೊಳ್ಳುತ್ತಲೇ ಇಲ್ಲ, ಬೈಬಲ್ನ್ನು ಅನುಸರಿಸುತ್ತಿಲ್ಲ. ರಾಜಕಾರಣಿಗಳು ತಮಗೆ ಬೇಕಾದಾಗ ಹೇಗೆ ಸಂವಿಧಾನ, ದಲಿತರು ಎಂದು ಕೂಗಾಡುತ್ತಾರೋ ಹಾಗೆಯೇ ಈ ಚರ್ಚ್ಗಳಲ್ಲಿ ಇರುವ ಪಾದ್ರಿಗಳು, ಆರ್ಚ್ ಬಿಷಪ್ಗಳು, ಬಿಷಪ್ಗಳು.
ಜಾತ್ಯತೀತ ಭಾರತದಲ್ಲಿ ಈ ಚರ್ಚ್ ನಿಧಾನವಾಗಿ ಪಸರಿಸಿಕೊಳ್ಳುತ್ತಿದೆ. ಜಾತ್ಯತೀತಕ್ಕೆ ಮತ್ತು ಸಂವಿಧಾನಕ್ಕೆ ಇವ್ಯಾವುದಕ್ಕೂ ಚರ್ಚ್ ಬೆಲೆ ಕೊಡುವುದಿಲ್ಲ. ಯಾಕೆಂದರೆ ಅದು ನಡೆಯುವುದು ಸಂವಿಧಾನದಿಂದಲ್ಲ. ಜಾತ್ಯತೀತ ರಾಷ್ಟ್ರದಲ್ಲಿ ನಾವು ಯಾಕೆ ಹೀಗೆ, ಇದೇನು? ಯಾಕಿಲ್ಲಿ ಬಂತು? ಹೇಗೆ ಬಂತು? ಇದರ ಅರ್ಥವೇನು ಎಂದೆಲ್ಲ ಪ್ರಶ್ನಿಸಬಹುದು. ಲಾಜಿಕಲ್ ಉತ್ತರವೂ ಪಡೆಯಬಹುದು. ಆದರೆ ಚರ್ಚ್ನಲ್ಲಿ ಇವೆಲ್ಲಕ್ಕೂ ಅವಕಾಶವೇ ಇಲ್ಲ, ವಾದಗಳಿಗೆ ಮರ್ಯಾದೆಯೇ ಇಲ್ಲ. ಏಕೆಂದರೆ, ದೇವರು ಇದನ್ನು ಹೇಳಿದ್ದಾನೆ. ಮಾಡು. ಇಷ್ಟೇ ಎಲ್ಲದಕ್ಕೂ ಸಿದ್ಧ ಉತ್ತರ. ಇಂಥವರಿಂದ ಅದ್ಯಾವ ದೇಶದ ಒಳಿತಿಗಾಗಿ ಪ್ರಾರ್ಥನೆ ಮಾಡುವುದಕ್ಕೆ ಸಾಧ್ಯವಿದೆ ಸ್ವಾಮಿ?
ಇವರು ಮಾಡುವ ಪ್ರಾರ್ಥನೆ ಬಿಟ್ಟಿಯೇನೂ ಅಲ್ಲ. ಇದಕ್ಕೆ ಲಕ್ಷ ಅಲ್ಲ.. ಕೋಟಿ ಕೋಟಿಗಳಲ್ಲಿ ಹಣ ಸಂದಾಯವಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಎಫ್ಸಿಆರ್ಎ ಪಟ್ಟಿಯ ಪ್ರಕಾರ 85 ಸಾವಿರ ಕೋಟಿ ರುಪಾಯಿಗಳ ಅನುದಾನ ಭಾರತದ ಎನ್ಜಿಒಗಳಿಗೆ ಬಂದಿದೆ. ಭಾರತಕ್ಕೆ ಅತ್ಯಂತ ಹೆಚ್ಚು ಹಣ ಕಳುಹಿಸುತ್ತಿರುವವರಲ್ಲಿ ವಿದೇಶದ 15 ಎನ್ಜಿಒಗಳಿವೆ. ಅದರಲ್ಲಿ 13 ಎನ್ಜಿಒಗಳು ಕ್ರಿಶ್ಚಿಯನ್ ಎನ್ಜಿಒಗಳಾಗಿವೆ. ಇವರು ಏಸುವಿನ ಆಣೆ, ಮೇರಿಯ ಆಣೆಯಾಗಲೂ ಏಸುವಿಗಾಗಿ ಒಂದು ರುಪಾಯಿ ಕಳುಹಿಸಿಕೊಡುವುದಿಲ್ಲ. ಮೋದಿ ವಿರುದ್ಧ, ಬಿಜೆಪಿ ವಿರುದ್ಧ ಇಂಥ ಹೋರಾಟ, ಪ್ರೇಯರ್ಗಳನ್ನು ಮಾಡುವುದಕ್ಕಾಗಿಯೇ ಇವರೆಲ್ಲ ಹಣ ಕಳುಹಿಸಿಕೊಡುತ್ತಾರೆ. ಇನ್ನು ಭಾರತದಲ್ಲಿ ನಡೆಯುವ ಕೆಲ ಅಭಿವೃದ್ಧಿ ಯೋಜನೆಗಳಿಗೆ ಪ್ರತಿಭಟನೆ ಮಾಡಿ ಅಡ್ಡಿಪಡಿಸುವುದಕ್ಕೂ ಹಣ ಸಂದಾಯವಾಗುತ್ತಿದೆ ಎಂದು ಗುಪ್ತಚರ ಮಾಹಿತಿ ಇದ್ದ ಕಾರಣವೇ ಪ್ರಧಾನಿ ಮೋದಿ, ವಿದೇಶಿ ದೇಣಿಗೆಗಳಿಗೆ ಕಡಿವಾಣ ಹಾಕಿದ್ದು ಮತ್ತು ಬಹಳಷ್ಟು ಎನ್ಜಿಒಗಳನ್ನು ಅನರ್ಹಗೊಳಿಸಿದ್ದು.
ರಸ್ತೆಯಲ್ಲಿ ಬೇಲ್ಪೂರಿ ಪಾರ್ಸೆಲ್ ಕಟ್ಟುವುದಕ್ಕೂ ಬಳಸಲು ಅರ್ಹವಲ್ಲದ ಪತ್ರಗಳನ್ನು ಆರ್ಚ್ಬಿಷಪ್ಗಳು ಬರೆದಿದ್ದು ಇದೇ ಮೊದಲ್ಲ. ಬದಲಿಗೆ 2017ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯ ವೇಳೆ ಗಾಂಧಿನಗರದ ಆರ್ಚ್ಬಿಷಪ್ ಥಾಮಸ್ ಮೆಕ್ವಾನ್, ಇಂಥ ರಾಷ್ಟ್ರೀಯತಾವಾದದ ಪಡೆಗಳನ್ನು ಸೋಲಿಸುವ ಜವಾಬ್ದಾರಿ ನಮ್ಮ ಮೇಲಿದೆ. ಗುಜರಾತ್ನಲ್ಲಿ ನಡೆಯುವ ಚುನಾವಣೆ ಭಾರಿ ಬದಲಾವಣೆ ತರಬಲ್ಲದು ಎಂದು ಬರೆದುಕೊಂಡಿದ್ದ.
ಅಷ್ಟೇ ಏಕೆ, ಮೊನ್ನೆ ಮೊನ್ನೆ ನಡೆದ ಮೇಘಾಲಯ ಮತ್ತು ತ್ರಿಪುರಾ ಚುನಾವಣೆಯ ಸಂದರ್ಭದಲ್ಲೂ ಕ್ರಿಶ್ಚಿಯನ್ನರನ್ನು ಚರ್ಚ್ ನಲ್ಲಿ ಸಭೆ ಕರೆಯುವುದೇನು, ಪತ್ರಗಳನ್ನು ಹಂಚುವುದೇನು ಎಲ್ಲವೂ ನಡೆದಿತ್ತು. ನಾಗಾಲ್ಯಾಂಡ್ನಲ್ಲಂತೂ ಬಾಪ್ಟಿಸ್ಟ್ ಚರ್ಚ್ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಬಿಜೆಪಿ-ಹಿಂದುತ್ವ ಪಡೆಗಳ ವಿರುದ್ಧವೇ ಪ್ರಚಾರಕ್ಕೆ ನಿಂತುಬಿಟ್ಟಿತ್ತು. ಕ್ರಿಶ್ಚಿಯನ್ ಕಾರ್ಯಕ್ರಮಗಳು, ಅವರ ಆಲೋಚನೆಗಳು, ಕಾರ್ಯಕ್ರಮದ ಹಿಂದಿನ ಉದ್ದೇಶಗಳನ್ನು ಹುಡುಕುತ್ತಾ ಹೋದಂತೆ ಮತ್ತೊಂದು ಆಘಾತಕಾರಿ ವಿಷಯ ಹೊರಗೆ ಬರುತ್ತದೆ. ಇದೊಂದು ದೊಡ್ಡ ಜಾಲ. ಎಷ್ಟೇ ಬಿಡಿಸುತ್ತಾ ಹೋದರೂ ಅಂತ್ಯವೇ ಇರುವುದಿಲ್ಲ. ಇವರು ಪತ್ರ ಈಗ ಪತ್ರ ಬರೆಯುತ್ತಿದ್ದಾರಲ್ಲ, 2016ರಲ್ಲಿ ಕೇರಳದ ಪಾದ್ರಿ ಟಾಮ್ನನ್ನು ಐಸಿಸ್ನವರು ಬಂಧನದಲ್ಲಿಟ್ಟಿದ್ದರು. ಆಗ ಅವರನ್ನು ಬಿಡಿಸುವುದಕ್ಕೆ ಸಹಾಯ ಮಾಡಿದ್ದೇ ಮೋದಿ ಸರ್ಕಾರ. ಯೆಮೆನ್ನಲ್ಲಿ ಐಸಿಸ್ ಪಾದ್ರಿ ಟಾಮ್ ಕತ್ತಿಗೆ ಕತ್ತಿ ಇಟ್ಟಾಗ ಬಿಡಿಸಲು ಅನಿಲ್ ಜೋಸೆಫ್ ಯಾವ ಪ್ರೇಯರನ್ನೂ ಮಾಡಿಲ್ಲ ಮತ್ತು ಸ್ವತಃ ಏಸುವೇ ಪಾದ್ರಿಯನ್ನು ರಕ್ಷಿಸಿಕೊಳ್ಳುವುದಕ್ಕೆ ಆಗಲಿಲ್ಲ. ಆಗ ಇವರಿಗೆಲ್ಲ ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ಇದೆ ಎಂದು ಅನಿಸಲಿಲ್ಲವೇ? ಇಸ್ಲಾಮಿಕ್ ಉಗ್ರರು ಹಿಂಸೆ ಕೊಟ್ಟದ್ದರ ಬಗ್ಗೆ ಪತ್ರ ಬರೆದಿದ್ದಾರಾ?
ಪದೇಪದೆ ಆರ್ಚ್ಬಿಷಪ್ಗಳು ಪತ್ರ ಬರೆಯುತ್ತಿದ್ದರೆ ಅದನ್ನು ಚಾಣಕ್ಯ ಅಮಿತ್ ಶಾ ಬಹಳ ಹಗುರವಾಗಿ ಪರಿಗಣಿಸಿದ್ದಾರೆ. ಅವರು ಪತ್ರ ಬರೆದರೆ ನಮಗೇ ಲಾಭ ಎಂದಿದ್ದಾರೆ . ಆದರೆ ಇವರು ಇಂಥ ಪತ್ರ ಬರೆದು ನೂರು ಜನರು ಚರ್ಚ್ನಲ್ಲಿ ಸೇರಿದರೆ ಅಷ್ಟೇ ಸಾಕು. ಒಂದು ನಿಮಿಷ ಪ್ರಾರ್ಥನೆ ಮಾಡಿದಂತೆ ಮಾಡಿ, ತಾಸುಗಟ್ಟಲೆ ಜನರ ಮನಸ್ಸಲ್ಲಿ ಮೋದಿ, ಹಿಂದು ಧರ್ಮ, ಭಾರತದ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ಮುಗ್ಧರನ್ನು ಎತ್ತಿಕಟ್ಟುತ್ತಾರೆ.
ಸೋನಿಯಾ ಘಂಡಿ ಸರ್ಕಾರ ಇದ್ದಾಗ ಒಂದೇ ಒಂದು ದಿನ ಇಂಥ ಪತ್ರವನ್ನು ಓದಿರಲಿಲ್ಲ. ನಿಜವಾಗಿ ಈ ಆರ್ಚ್ ಬಿಷಪ್ ಎಂಬ ಪದ ಇದೆ ಎಂಬುದೇ ಕ್ರಿಶ್ಚಿಯನ್ ಬಿಟ್ಟು ಹಿಂದೂಗಳಿಗೆ ಗೊತ್ತಿರಲಿಲ್ಲವೇನೋ. ಈ ಪಾದ್ರಿಗಳಿಗೆ ಮೋದಿಯೇನು ಕಡಿಮೆ ಉರಿಸಿಲ್ಲ. ಸೋನಿಯಾ ಗಾಂಧಿಕೇವಲ ಕ್ರಿಶ್ಚಿಯನ್, ಮುಸ್ಲಿಮ್, ಬೌದ್ಧ, ಪಾರ್ಸಿ, ದಲಿತ ವಿದ್ಯಾರ್ಥಿಗಳಿಗೆ ಮಾತ್ರ ಸ್ಕಾಲರ್ಶಿಪ್ ಘೋಷಣೆ ಮಾಡಿದ್ದರು. ಆದರೆ ಮೋದಿ ಇದನ್ನು ತಿರಸ್ಕರಿಸಿ ಸ್ಕಾಲರ್ಶಿಪ್ ಎಲ್ಲ ಜಾತಿ/ಧರ್ಮ ಆಧಾರಿತವಾದದ್ದಾಗಾರದು ಎಂದು ಗುಜರಾತ್ನಲ್ಲಿ ಆ ಸ್ಕಾಲರ್ಶಿಪ್ನ್ನು ತೆಗೆದು ಹಾಕಿದರು.
ಜಾತ್ಯತೀತ ಭಾರತದಲ್ಲಿ ಚರ್ಚ್ಗಳು ರಾಜಕಾರಣಕ್ಕೆ ಬಂದೇ ಬಿಟ್ಟಿತು ಎಂದುಕೊಳ್ಳಿ. ಆಗ ಇವರು ವ್ಯಾಟಿಕನ್ನಲ್ಲಿರುವ ಚರ್ಚ್ಗಳ ಮಾತನ್ನು ಕೇಳುವುದು ಬಿಡುತ್ತಾರಾ? ಪೋಪ್ ಮಾತು ಕೇಳುವುದನ್ನು ಬಿಡುತ್ತಾರಾ? ಇಲ್ಲ ತಾನೇ? ವ್ಯಾಟಿಕನ್ ಹೇಳಿದ ಹಾಗೆ ಇಲ್ಲಿನ ಚರ್ಚ್ಗಳು ನಡೆದುಕೊಳ್ಳುವುದು. ಪಾದ್ರಿಗಳು, ಬಿಷಪ್ಗಳು, ಆರ್ಚ್ಬಿಷಪ್ಗಳ ಬಹುತೇಕ ನೇಮಕಗಳು ವ್ಯಾಟಿಕನ್ ಇಂದಲೇ ಆಗುತ್ತದೆ. ನೀವು ನಂಬಲೇ ಬೇಕು, ಪೋಪ್ಗೆ ಔಪಚಾರಿಕ ನಾಮನಿರ್ದೇಶನ(ನಾಮಿನಿ) ಆರ್ಚ್ಬಿಷಪ್ ಆಗಿರುತ್ತಾನೆ. ಬಿಷಪ್ಗಳು ರಾಜೀನಾಮೆ ಸಲ್ಲಿಸುವಾಗ ಪೋಪ್ಗೇ ನೀಡಬೇಕು. ಆಲೋಚನೆ ಮಾಡಿ, ತಿನ್ನಕ್ಕೆ ಭಾರತದ ಅನ್ನ, ನಿಯತ್ತು ವ್ಯಾಟಿಕನ್ಗೆ. ಇಂಥ ಕರಾಳ ಇತಿಹಾಸ ಇರುವವರು ದೇಶಕ್ಕಾಗಿ ಪ್ರಾರ್ಥನೆ ಮಾಡುತ್ತಾರಾ? ನಮ್ಮನಮ್ಮಲ್ಲೇ ಕಿತ್ತಾಟ ತಂದು ಹಾಕುವ ತನಕ ಕಾಯಬೇಡಿ. ಎಚ್ಚೆತ್ತುಕೊಳ್ಳಿ.