ಪ್ರಕಾಶ್‌ ರೈಗೆ ಒಂದು ಧನ್ಯವಾದ ಹೇಳುವುದಕ್ಕೂ ಮರೆತಿರಾ ಬಿಜೆಪಿಯವರೇ?

ಚುನಾವಣಾ ಫಲಿತಾಂಶ ಬಂದಾಗಿದೆ. ಕಾಂಗ್ರೆಸ್‌ ನೀತಿಯಿಂದ ಬೇಸತ್ತು ಅವರನ್ನು ಕಿತ್ತೊಗೆದಿದ್ದಾರೆ. ಪರಿಣಾಮ, ಕಾಂಗ್ರೆಸ್‌ಗಿಂತಲೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ತೆಗೆದುಕೊಂಡಿದೆ. ನಾಯಕರು ಈ ಗೆಲವು ಕಾರ್ಯಕರ್ತರಿಗೆ ಸಲ್ಲಬೇಕು ಎಂದರೆ ಇನ್ನೊಂದಷ್ಟು ನಾಯಕರು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ ಎನ್ನುತ್ತಾರೆ. ಮದುವೆಯಾದ ಮೇಲೆ ಮೊದಲ ರಾತ್ರಿ ಹೇಗೋ, ಹಾಗೇ ಚುನಾವಣೆ ಮುಗಿದ ಮೇಲೆ ಇಂಥ ಹೇಳಿಕೆಗಳು,ಅಭಿನಂದನೆ ಸಂದೇಶಗಳು ಬಹಳ ಕಾಮನ್‌. ಆದರೆ ನಾವು ಈ ಮಧ್ಯೆ ಒಬ್ಬರನ್ನು ಮರೆತಿದ್ದೇವೆ. ಬಿಜೆಪಿ ಗೆಲುವಿಗೆ ಯಾರ ಪಾತ್ರ ಎಷ್ಟಿತ್ತೋ ಗೊತ್ತಿಲ್ಲ, ಆದರೆ ಇವರ ಪಾತ್ರ ಬಹಳ ಮುಖ್ಯವಾಯಿತು. ಕಾರ್ಯರ್ತರ ಅನವರತ ಶ್ರಮ, ಮತದಾರರ ಸಂಕಲ್ಪ, ದುರಾಡಳಿತ ಇವೆಲ್ಲ ಒಂದು ತೂಕವಾದರೆ, ಪ್ರಕಾಶ್‌ ರೈ ಎಂಬ ವ್ಯಕ್ತಿ ಒಂದು ತೂಕವಾಗಿಬಿಟ್ಟರು.
ಹೌದು, ಬಿಜೆಪಿಯ ಗೆಲುವಿಗೆ ನೇರವಾಗಿ ಪ್ರಕಾಶ್‌ ರೈ ಅವರೇ ಕಾರಣರಾಗಿಬಿಟ್ಟರು. ಇವರ ದಡ್ಡತನ ಹಾಗೂ ದುರಹಂಕಾರ ಮೊದಲು ನಮಗೆ 2016ರಲ್ಲೇ ಪರಿಚಯವಾಗಿದೆ. ಕಾವೇರಿ ಬಗ್ಗೆ ಕೇಳಿದಾಗ ಕಾಂಟ್ರವರ್ಸಿ ಬೇಕೇನ್ರೀ ನಿಮಗೆ? ಏನೆಂದುಕೊಂಡಿದ್ದೀರ? ಎಂದು ರೇಗಾಡಿದಾಗಲೇ ಅವರ ಬಗ್ಗೆ ಎಲ್ಲರಿಗೂ ತಿಳಿದಿತ್ತು. ಆದರೂ ಅವರ ಊರಿನ ಕಡೆಯವರು ಒಂದು ಸಣ್ಣ ಒಲವನ್ನು ಅವರ ಮೇಲೆ ಇಟ್ಟುಕೊಂಡಿದ್ದರು. ಯಾವಾಗ ಪ್ರಕಾಶ್‌ ರೈ ಬಿಜೆಪಿಯನ್ನು ತೆಗಳುವುದಕ್ಕೆ ಶುರು ಮಾಡಿದರೋ ಆಗಲೇ ಅವರ ಬುದ್ಧಿ ಜನರಿಗೆ ತಿಳಿಯುತ್ತಾ ಬಂದಿತು. ಅವರೆಲ್ಲಿ ವಾಲುತ್ತಿದ್ದಾರೆಂದು ತಿಳಿಯುವಂತಾಯಿತು.
ಕಾವೇರಿ ವಿವಾದದ ನಂತರ ಅವರು ಕೆಲ ಕಾಲ ಕಾಣಿಸಿಕೊಂಡಿರಲಿಲ್ಲ. ಗೌರಿ ಲಂಕೇಶ್‌ ಹತ್ಯೆಯಾದಾಗ ನಾನೇ ಗಂಡು ಗೌರಿ ಎಂದು ಬಂದರು. ಬಂದು, ರಾಜ್ಯ ಸರ್ಕಾರವನ್ನು ಪ್ರಶ್ನಿಸದೇ ಬಿಜೆಪಿ ಮತ್ತು ಮೋದಿಯೇ ಇದಕ್ಕೆ ಉತ್ತರ ಕೊಡಬೇಕು ಎಂದು ಬೊಬ್ಬೆ ಹೊಡೆಯಲು ಶುರು ಮಾಡಿದರು. ಕೇವಲ ಪ್ರಶ್ನೆ ಮಾಡಿದ್ದಕ್ಕೆ ನಮ್ಮ ಗೌರಿಯನ್ನು ಕೊಂದಿರಿ ಅಲ್ವಾ? ನಾನೂ ಇನ್ಮೇಲಿಂದ ಪ್ರಶ್ನೆ ಕೇಳುತ್ತೇನೆ ಎಂದು ಬಡಬಡಿಸುತ್ತಾ ಬಂದರು. ಪ್ರಕಾಶ್‌ ರೈ ಬಿಜೆಪಿಗೆ ಸಹಾಯ ಮಾಡುವುದಕ್ಕೆ ಶುರು ಮಾಡಿದ್ದೇ ಅಲ್ಲಿಂದ.
ಬಹುಶಃ ಪ್ರಕಾಶ್‌ ರೈ ಸುಮ್ಮನೆ ಗೌರಿ ವಿಷಯಕ್ಕೆ ಎರಡು ದಿನ ಹೋರಾಟ ಮಾಡಿದ್ದರೆ ಏನೂ ಪ್ರಯೋಜನ ಆಗುತ್ತಿರಲಿಲ್ಲ. ಯಾಕೆಂದರೆ ಆಗ ತಾನು ಚಿತ್ರರಂಗವನ್ನು ಬಿಟ್ಟು ಬಿಜೆಪಿಯನ್ನು ಗೆಲ್ಲಿಸುತ್ತೇನೆ ಎಂದು ಅವರಿನ್ನೂ ನಿರ್ಧಾರ ಮಾಡಿರಲಿಲ್ಲ. ಬಿಜೆಪಿಯನ್ನು ಗೆಲ್ಲಿಸಿಯೇ ತೀರುತ್ತೇನೆ ಎಂದು ಅವರು ನಿರ್ಧಾರ ಮಾಡಿದ ಮರುಕ್ಷಣವೇ ಹುಟ್ಟಿಕೊಂಡಿದ್ದು, ಜಸ್ಟ್‌ ಆಸ್ಕಿಂಗ್‌ ಅಭಿಯಾನ.
ಮೋದಿಯ ಬಗ್ಗೆ ಇಲ್ಲ ಸಲ್ಲದ ಅಸಂಬದ್ಧ ಪ್ರಶ್ನೆಯನ್ನು ಕೇಳುವುದು. ಅವರ ಪ್ರಶ್ನೆ ಎಷ್ಟು ತಿಕ್ಕಲುತನದಿಂದ ಕೂಡಿದೆ ಎಂದು ಹಲವಾರು ತಂಡಗಳು ಅವರ ಮರ್ಯಾದೆಯನ್ನು ಸಾಮಾಜಿಕ ಜಾಲತಾಣದಲ್ಲಿ ತೆಗೆಯುತ್ತಲೇ ಇತ್ತು. ಪ್ರತಿ ಭಾರಿ ಪ್ರಕಾಶ್‌ ತಿಕ್ಕಲುತನ ತೋರಿದಾಗಲೂ ಜನರಿಗೆ ವಿಶ್ವಾಸ ಹೆಚ್ಚಾಗಿದ್ದು ಮೋದಿಯವರ ಮೇಲೆ. ಮೊದಲೇ ಮಾಧ್ಯಮಗಳು ಮೋದಿಯನ್ನು ಬಯ್ಯುತ್ತಲೇ ಇತ್ತು. ಜತೆಗೆ ಪ್ರಕಾಶ್‌ ರೈ ಬೇರೆ ಸೇರಿಕೊಂಡಾಗ, ಮೋದಿಯನ್ನು ಪ್ರಕಾಶ್‌ ಸಹ ವಿರೋಧಿಸುತ್ತಿದ್ದಾರೆ ಎಂದರೆ ಇವರೂ ಏನೋ ತಪ್ಪು ಮಾಡಿದ್ದಾರೆ ಎಂದು ಜನತೆಗೆ ತಿಳಿಯಿತು.
ಬಿಜೆಪಿ ಎಲ್ಲರನ್ನೂ ದುಡ್ಡು ಕೊಟ್ಟು ಕೊಂಡುಕೊಳ್ಳುತ್ತದೆ, ಕೋಮುವಾದಿಗಳು, ಚಡ್ಡಿಗಳು, ಪ್ರಧಾನಿ ಮೋದಿ ಏನ್ರೀ ಮಾತಾಡ್ತಾ ಇದೀರ…ಹೀಗೆ ಸಾವಿರ ಪ್ರಶ್ನೆಯನ್ನು ಪ್ರಕಾಶ್‌ ರೈ ಕೇಳಿದ ಮೇಲೆ ಅದು ಉಪಯೋಗವಾಗಬೇಕಾದ್ದು ಯಾರಿಗೆ? ಕಾಂಗ್ರೆಸ್‌ಗೆ. ಆದರೆ ಅದಷ್ಟೂ ಬಿಜೆಪಿ ಕಡೆ ತಿರುಗಿದೆ. ನಾನೇನು ಹೇಳುವುದಕ್ಕೆ ಹೊರಟಿದ್ದೀನೆಂದರೆ, ಆರಂಭಿಕ ದಿನಗಳಲ್ಲಿ ಪ್ರಕಾಶ್‌ ರೈ ಮೋದಿ ಬಗ್ಗೆ, ಬಿಜೆಪಿ ಬಗ್ಗೆ ವಿರೋಧ ಮಾತನಾಡಿದರೆ, ಅದು ಪರೋಕ್ಷವಾಗಿಯಾದರೂ ಪ್ರತಿಕ್ರಿಯೆ ನೀಡುತ್ತಿತ್ತು. ಆದರೆ ಆಮೇಲೆ ಅದನ್ನೂ ನಿಲ್ಲಿಸಿಬಿಟ್ಟಿತ್ತು. ದಿನ ಸಾಯೋನಿಗೆ ಅಳುವವರಾರ‍ಯರು ಎಂದು ಸುಮ್ಮನಾದರು ಎಂದುಕೊಂಡಿದ್ದೆವು. ಆದರೆ ಬಿಜೆಪಿಗೆ ಹೆಚ್ಚು ಕ್ಷೇತ್ರಗಳು ಬಂದ ಮೇಲೆ, ಪ್ರಕಾಶ್‌ ರೈ ಸಹ ಬಿಜೆಪಿಯ ದಾಳವಾ ಎಂದು ಈಗ ಅನುಮಾನ ಬರುತ್ತಿದೆ. ಕಾಂಗ್ರೆಸ್‌ಗೆ ಒಂದು ಕ್ಷೇತ್ರ ಗೆದ್ದುಕೊಳ್ಳಲು ಸಹ ಸಹಾಯವಾಗದ ಪ್ರಕಾಶ್‌ ರೈ ಕೆಲಸ ಮಾಡಿದ್ದು ಬಿಜೆಪಿಗೆಯೇ ಎಂಬುದು ಖಾತ್ರಿಯಾಗುತ್ತಿದೆ.
ಇದು ಥೇಟ್‌ ಪ್ರಕಾಶ್‌ ರೈ ಅವರ ಸಿನಿಮಾದ ಥರವೇ ಆಯ್ತು. ಇಲ್ಲೂ ವಿಲನ್‌ ಆಗಿದ್ದಾರೆ, ಆದರೆ ಯಾರಿಗೆ? ಜನರೆಂದುಕೊಂಡಿದ್ದರು, ಬಿಜೆಪಿಗೆ ವಿಲನ್‌ ಎಂದು, ಆದರೆ ಕೊನೆಯಲ್ಲಿ ಕಾಂಗ್ರೆಸ್‌ಗೇ ವಿಲನ್‌ ಆಗಿದ್ದಾರೆ.
ಪ್ರಧಾನಿ ಮೋದಿ ಯುಕೆಗೆ ಹೋದಾಗ ಅಲ್ಲೆಲ್ಲ ಸಿಕ್ಕಾಪಟ್ಟೆ ಪ್ರತಿಭಟನೆ ಆಗುತ್ತಿದೆ ಎಂದು
2015, 2014, 2013ರ ಚಿತ್ರಗಳನ್ನು ಇಂಟರ್ನೆಟ್‌ ಇಂದ ಇಳಿಸಿಕೊಂಡು ಟ್ವಿಟ್‌ ಮಾಡಿದ್ದರು. ಜನರು ಹೀನಾಯವಾಗಿ ಉಗಿಯುತ್ತಿದ್ದಾಗ, ಎಷ್ಟು ಅಂತ ಟವೆಲ್‌ನಲ್ಲಿ ಹಿಂಡಿ ಬಕೆಟ್‌ಗೆ ಚೆಲ್ಲುತ್ತಾರೆ ಹೇಳಿ? ಎಲ್ಲರನ್ನೂ ಬ್ಲಾಕ್‌ ಮಾಡಲು ಶುರು ಮಾಡಿದರು. ಬಿಜೆಪಿಯನ್ನು ಪ್ರಶ್ನಿಸಿ ರಮಾನಾಥ ರೈ ಜೊತೆ ಹುಲಿ ಕುಣಿತ ಮಾಡಲು ನಿಂತಾಗ, ಜನರು ಯಾಕಾಗಿ ಬಿಜೆಪಿಗೆ ಮತ ಹಾಕಬೇಕು ಎಂದು ಪ್ರಕಾಶ್‌ ರೈ ಖುದ್ದು ತಿಳಿಸಿಕೊಟ್ಟರು.
ಮುಖ ಮೂತಿ ನೋಡದೇ ಬಾರ್‌ನಲ್ಲಿ ಬಾರಿಸಿ ಜೈಲಿನಲ್ಲಿರುವ ನಲಪಾಡ್‌ ಬಳಿ ಹೋಗಿ ಲಕ್ಷಗಟ್ಟಲೆ ಭಿಕ್ಷಾಟನೆ ಮಾಡಿ, ನೋಡ್ರೀ ಹೀಗೆ ಬೆಳೆಸಬೇಕು ಮಕ್ಕಳನ್ನ, ಏನ್‌ ನಯ, ಏನ್‌ ವಿನಯ ಎಂದು ಹೊಗಳಿದಾಗ ಕಾಂಗ್ರೆಸ್‌ಗಿಂತ ಬಿಜೆಪಿಯೇ ಏಕೆ ಸೂಕ್ತ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರು.
ಪ್ರಕಾಶ್‌ ರೈ ಹೀಗೆಲ್ಲ ಮಾತಾಡಿದ್ದಕ್ಕೆ ಜಿ ಕ್ಯಾಟಗರಿ ಸೈಟ್‌ ಸಿಕ್ಕಿದೆ ಎಂದು ಸುದ್ದಿ ಹಬ್ಬಿತು. ಪ್ರಕಾಶ್‌ ರೈ ಮಾತಾಡಲಿಲ್ಲ. ಯಾಕೆ? ಬಿಜೆಪಿಗೆ ಮತ ನೀಡಿ ಅಂತ ನಾನೇ ಹೇಳುವುದಕ್ಕಾಗುತ್ತದೆಯೇ? ಜನರೂ ಸ್ವಂತ ಬುದ್ಧಿ ಉಪಯೋಗಿಸಲಿ ಎಂದು ಬಿಟ್ಟರು.
ಮೊದಲು ಜಾತ್ಯತೀತ ಪಕ್ಷಕ್ಕೆ ಮತ ನೀಡಿ ಎನ್ನುತ್ತಿದ್ದ ಪ್ರಕಾಶ್‌ ಬರಬರುತ್ತಾ ಕಾಂಗ್ರೆಸ್‌ ಹೆಸರನ್ನೇ ಎತ್ತಲು ಶುರು ಮಾಡಿದರು. ಅದೂ ಯಾವಾಗ? ಚುನಾವಣೆ ಹತ್ತಿರ ಬರುವಾಗ. ಆಗಂತೂ ಹೋದ ಬಂದ ಕಾರ್ಯಕ್ರಮದ ತುಂಬೆಲ್ಲ ಬಿಜೆಪಿ ಗೆಲ್ಲಲ್ಲ, ಬಿಜೆಪಿ ಗೆಲ್ಲಲ್ಲ ಎಂದು ಬಿಜೆಪಿಗೆ ಬಿಟ್ಟಿ ಪ್ರಚಾರ ಕೊಡುತ್ತಾ ಬಂದರು.
ಬೇಕಾದರೆ ಹೌದೋ ಇಲ್ಲವೋ ನೋಡಿ. ಎಲ್ಲೆಲ್ಲಿ ಬಿಜೆಪಿ ಪ್ರಚಾರಕರು ಹೆಚ್ಚಿರುವುದಿಲ್ಲವೋ ಅಲ್ಲೆಲ್ಲ ಮೋದಿ ಬಗ್ಗೆ ಬಯ್ದು ಬಯ್ದು ಪ್ರಚಾರ ಮಾಡಿದ್ದೇ ಪ್ರಕಾಶ್‌ ರೈ. ಇಷ್ಟೆಲ್ಲ ಮಾಡಿ, ಸುಬ್ರಮಣಿಯನ್‌ ಸ್ವಾಮಿ ಬಳಿಯ ಚರ್ಚೆಯಲ್ಲಿ ವೈಚಾರಿಕವಾಗಿ ಬೆತ್ತಲಾಗಿ ತಾನು ಇಷ್ಟು ದಿನ ಬಿಜೆಪಿ ವಿರುದ್ಧ ಪ್ರಶ್ನೆ ಮಾಡಿದ್ದೆಲ್ಲವೂ ಅರ್ಥಹೀನ ಎಂಬುದನ್ನು ಸಾಬೀತು ಮಾಡಿದರು. ಅಷ್ಟಕ್ಕೇ ಸುಮ್ಮನಾಗದ ರೈ, ಟ್ವಿಟರ್‌ನಲ್ಲಿ ಸುಬ್ರಮಣಿಯನ್‌ ಸ್ವಾಮಿ ವಿರುದ್ಧ ಮಾತಾಡಲಾಗಲಿಲ್ಲ, ಇನ್ನೂ ಬಹಳಷ್ಟು ಕಲಿಯೋದಿದೆ ಎಂದು ಸೋಲನ್ನೂ ಒಪ್ಪಿಕೊಂಡರು.
ಇಷ್ಟೆಲ್ಲ ಮಾಡಿದ ಪ್ರಕಾಶ್‌ ರೈ ಕೊನೆಗೆ ಮಾಡಿದ್ದೇನು ಗೊತ್ತಾ? ನಿಜಕ್ಕೂ ಮನಕಲುಕವಂತಿತ್ತು. ಮತದಾನದ ದಿನ ತಾನೇ ಮತ ಹಾಕದೇ ಕಾಣೆಯಾಗಿಬಿಟ್ಟರು. ಮೊದಲ ದಿನದಿಂದಲೂ ಬಿಜೆಪಿಯನ್ನು ಪರದೆ ಹಿಂದೆಯೇ ಬೆಂಬಲಿಸಿದ ಪ್ರಕಾಶ್‌ ರೈ, ಜನರನ್ನು ಜಾಗೃತಗೊಳಿಸಿದ ಹೀರೋ, ಮಾನವತಾವಾದದ ಪ್ರತಿಪಾದಕ, ಜನನಾಯಕ ಮುಧೋಳ್‌ ನಾಯಿಗಳು ವೋಟ್‌ ಮಾಡುವುದಿಲ್ಲ ಮೋದಿಯವರೇ, ಮನುಷ್ಯರು ನಿಮಗೆ ವೋಟ್‌ ಮಾಡುವುದು ಎಂದು ಹೇಳಿ ಮತ ಹಾಕದೇ ದೊಡ್ಡ ಸಂದೇಶ ಸಾರಿಬಿಟ್ಟರು ಈ ಸಂತ ಶಿಖಾಮಣಿ.
ಒಂದು ಪಕ್ಷದ ಗೆಲುವಿಗಾಗಿ ರಾಜ್ಯದ ಮುಂದೆ ತನ್ನ ವಿಚಾರಗಳನ್ನೆಲ್ಲ ಬಿಚ್ಚಿಟ್ಟು ಬೆತ್ತಲಾದ ಪ್ರಕಾಶ್‌ ರೈ ನಿಜವಾದ ಹೀರೋ. ಸಂತ. ಅವರು ಯಾವುದೇ ಕಾರಣಕ್ಕೆ ಬಿಜೆಪಿಗೆ ವಿಲನ್‌ ಆಗಲಿಲ್ಲ. ದೇವರು ಎಲ್ಲ ಕಡೆ ಇರುವುದಕ್ಕಾಗುವುದಿಲ್ಲ ಎಂದು ತಾಯಿಯನ್ನು ಸೃಷ್ಟಿ ಮಾಡಿರುತ್ತಾನಂತೆ ಎಂಬುದು ಮಾತು. ಹಾಗೇ ರಾಹುಲ್‌ ಗಾಂಧಿ ತಾನು ರಾಜ್ಯದ ತುಂಬೆಲ್ಲ ಓಡಾಡುವುದಕ್ಕೆ ಆಗವುದಿಲ್ಲ ಎಂದೇ ಪ್ರಕಾಶ್‌ ರೈ ಅವರನ್ನು ಕಳುಹಿಸಿದ್ದಾರಾ? ಗೊತ್ತಿಲ್ಲ. ಅದು ನಮಗೆ ಬೇಡವೂ ಬೇಡ. ಆದರೆ ಒಂದಂತೂ ಸತ್ಯ- ಪ್ರಕಾಶ್‌ ರೈ ಹಣ ಪಡೆದಿದ್ದಾರೆ ಎಂದು ವಿನಾಕಾರಣ ಆರೋಪ ಮಾಡುವ ಎಲ್ಲರೂ ತಿಳಿಯಬೇಕಾದ್ದೇನೆಂದರೆ, ಪ್ರಕಾಶ್‌ ಹಣ ಪಡೆದಿರಬಹುದು, ಪಡೆದಿಲ್ಲದಿರಲೂಬಹುದು. ಆದರೆ ಅವರ ಹೃದಯ ಮಾತ್ರ ಬಿಜೆಪಿಗಾಗಿ ಮಿಡಿಯುತ್ತಿತ್ತು. ಅದಕ್ಕಾಗೇ ಕೆಲಸ ಮಾಡಿದೆ ಸಹ. ಬಿಜೆಪಿಯು ತನ್ನ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಇಷ್ಟುದ್ದ ಧನ್ಯವಾದ ಪತ್ರ ಬರೆಯಿತು. ಆದರೆ ಪ್ರಕಾಶ್‌ ರೈಗೆ ಧನ್ಯವಾದ ಹೇಳುವುದಕ್ಕೆ ಯಾಕೆ ಮರೆಯಿತೋ ಗೊತ್ತಿಲ್ಲ. ಅವರ ಶ್ರಮಕ್ಕೆ ಕಿಂಚಿತ್ತಾದರೂ ಗೌರವ ಕೊಡಬಹುದಿತ್ತು. ಲೋಕಸಭೆಗೆ ಒಬ್ಬ ಪ್ರಚಾರಕನನ್ನು ಕಳೆದುಕೊಂಡು ಬಿಟ್ರಿ.

Leave a Reply

Copyright©2021 Chiranjeevi Bhat All Rights Reserved.
Powered by Dhyeya