ಕೇಂಬ್ರಿಡ್ಜ್‌ ಅನಾಲಿಟಿಕಾ ಸತ್ತರೇನು? ದೇಶ ಒಡೆಯಲು ಎಮರ್‌ಡೇಟಾ ಸಾಕು!

ಬೃಹತ್‌ ಡೇಟಾ ಕಳವು ಮಾಡಿ, ಚುನಾವಣೆಯಲ್ಲಿ ತಮ್ಮ ಕಕ್ಷಿದಾರ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕೆ ಸುಳ್ಳು ಮಾಹಿತಿಗಳನ್ನು ಸಾಮಾಜಿಕ ಜಾಲತಣಾದಲ್ಲಿ ಹರಿಬಿಡುತ್ತಿದ್ದ ಕೇಂಬ್ರಿಡ್ಜ್‌ ಅನಾಲಿಟಿಕಾ ಮತ್ತು ಎಸ್‌ಸಿಎಲ್‌ ಕಂಪನಿಗಳು ತಮ್ಮ ಕಂಪನಿಗಳನ್ನು ಅನಿವಾರ್ಯವಾಗಿ ಮುಚ್ಚಿದ್ದೇವೆ ಎಂದು ಹೇಳಿಕೊಂಡಿದೆ. ಮಾಧ್ಯಮಗಳು ಮಾಡಿದ ಅವಾಂತರದಿಂದ ಹಣವಿಲ್ಲದೇ ತಾವು ಸಾಲಗಾರರಾಗಿ ಕಂಪನಿಯನ್ನು ಮುಚ್ಚಿದ್ದೇವೆ ಎಂದು ಕಂಪನಿಯ ಸಂಸ್ಥಾಪಕ, ನಿರ್ದೇಶಕರು ತಮಗಾದ ನಷ್ಟದ ಪರಿಹಾರ ಅಥವಾ ಸರ್ಕಾರ ಸಾಲ ತೀರಿಸಬೇಕು, ಮನ್ನಾ ಮಾಡಬೇಕು ಎಂಬ ಮನವಿಯನ್ನೂ ಇಟ್ಟಿದ್ದಾರೆ. ಅಂದರೆ ಕೇಂಬ್ರಿಡ್ಜ್‌ ಅನಾಲಿಟಿಕಾ ಅಕ್ಷರಶಃ ಬೀದಿಗೆ ಬಿದ್ದಿದೆ ಎಂದೇ ಅರ್ಥ. ಹೌದು, ಪಾಪ ಮಾಡಿದ್ದಕ್ಕೆ ಅನುಭವಿಸುತ್ತಿದ್ದಾರೆ, ಬೀದಿಗೆ ಬಂದಿದ್ದಾರೆ ಎಂದು ನಾವೆಲ್ಲ ಅಂದುಕೊಂಡಿದ್ದೇವೆ. ಆದರೆ, ಅದು ನಮ್ಮ ಭ್ರಮೆ.
ಆದರೆ ಪ್ರಶ್ನೆ ಏನೆಂದರೆ, ಇವರು ನಿಜವಾಗಿಯೂ ಮುಚ್ಚಿ ಮನೆಗೆ ಹೋಗಿದ್ದಾರಾ? ಹಾಗೆ ಹೋಗಿಬಿಟ್ಟರೆ ಇವರಿಗೆ ಹಣ ನೀಡಿದ ಬೇರೆ ದೇಶದ ಕಕ್ಷಿದಾರರು ಬಾಯಿ ಬಡಿದುಕೊಳ್ಳಬೇಕಾ? ಇಲ್ಲ, ಕೇಂಬ್ರಿಡ್ಜ್‌ ಅನಾಲಿಟಿಕಾ ಮತ್ತು ಎಸ್‌ಸಿಎಲ್‌ ಗ್ರೂಪ್‌ಗಳನ್ನು ಸ್ಥಾಪಿಸಿದವರೇ ಮತ್ತೊಂದು ಕಂಪನಿಯ ನಿರ್ದೇಶಕರ ಕುರ್ಚಿಯಲ್ಲಿ ಕುಳಿತಿದ್ದಾರೆ.
ಆ ಕಂಪನಿಗಳ ಹೆಸರು:
1. ಎಮರ್‌ಡೇಟಾ ಪ್ರೈವೇಟ್‌ ಲಿಮಿಟೆಡ್‌
2. ಫೈರ್‌ಕ್ರೆಸ್ಟ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌
3. ಫ್ರಾಂಟಿಯರ್‌ ಸವೀರ್‍ಸಸ್‌ ಗ್ರೂಪ್‌
4. ಸಿಟಿಕ್‌ ಗ್ರೂಪ್‌ (ಚೀನಾದ ಒಡೆತನÜ)
5. ಫನಾಲಿಟಿಕಾ ಪ್ರೈವೇಟ್‌ ಲಿಮಿಟೆಡ್‌
ನೀವೇ ಆಲೋಚನೆ ಮಾಡಿ, ಕಾಂಗ್ರೆಸ್‌ ಪಕ್ಷ 800 ಕೋಟಿಗೂ ಅಧಿಕ ಹಣವನ್ನು ಕೇಂಬ್ರಿಡ್ಜ್‌ ಅನಾಲಿಟಿಕಾಗೆ ನೀಡಿದೆ ಎಂಬ ಆರೋಪವನ್ನು ಈಗಾಗಲೇ ಕೇಳಿದ್ದೇವೆ. ಭಾರತದ ಕಾಂಗ್ರೆಸ್‌ ಒಂದರಿಂದಲೇ 800 ಕೋಟಿ ಪಡೆದ ಕೇಂಬ್ರಿಡ್ಜ್‌ ಅನಾಲಿಟಿಕಾ ಪ್ರಪಂಚದ ಇತರೆ ದೇಶಗಳಿಂದ ಅದೆಷ್ಟು ಹಣವನ್ನು ಪಡೆದಿರಬಹುದು? ಕೇಂಬ್ರಿಡ್ಜ್‌ ಅನಾಲಿಟಿಕಾ ದಡ್ಡ ಸಂಸ್ಥೆಯಲ್ಲ. ಮತ್ತೊಂದು ಕಂಪನಿಯ ಹೆಸರಿನಲ್ಲಿ ಕಾಂಗ್ರೆಸ್‌ ತನಗೆ ನೀಡಿರುವ ಹಣಕ್ಕೆ ಸರಿಯಾಗಿ ಕೆಲಸ ಮಾಡುತ್ತಿದೆ.
ಕೇಂಬ್ರಿಡ್ಜ್‌ ಅನಾಲಿಟಿಕಾಕ್ಕೆ ತಾನು ಬೀದಿಗೆ ಬರುವ ಇಂಥದ್ದೊಂದು ದಿನ ಬಂದೇ ಬರುತ್ತದೆ ಎಂದು ಗೊತ್ತಿತ್ತು. ಆದರೆ ಇಷ್ಟು ಬೇಗ ಬರುತ್ತದೆ ಕನಸ್ಸಿನಲ್ಲಿಯೂ ತಿಳಿದಿರಲಿಲ್ಲ. ಅದಕ್ಕೆ ಮುಂಚಿತವಾಗಿ ಎಮರ್‌ಡೇಟಾ ಕಂಪನಿಯನ್ನು 2017ರ ಆಗಸ್ಟ್‌ 1ರಂದು ಹುಟ್ಟುಹಾಕಿತ್ತು. ಇಂಗ್ಲೆಂಡಿನ ಲಂಡನ್ನಿನಲ್ಲಿರುವ ಕ್ಯಾನರಿ ವಾರ್ಫ್‌ನಲ್ಲಿ ನೋಂದಣಿ ಸಂಖ್ಯೆ: 1091188ಯಲ್ಲಿ ಕಂಪನಿಯನ್ನು ಸ್ಥಾಪಿಸಿದ್ದಾರೆ. ಆದರೆ ಕುತೂಹಲಕಾರಿ ವಿಷಯವೇನೆಂದರೆ, 2017ರ ಆಗಸ್ಟ್‌ ನಿಂದ 2018ರ ಫೆಬ್ರವರಿ 28ರವರೆಗೆ ಕಂಪನಿ ಯಾವ ಕೆಲಸವನ್ನೂ ಶುರು ಮಾಡಿರುವುದಿಲ್ಲ. ಇಂಗ್ಲೆಂಡಿನಲ್ಲಿರುವ ಎಲ್ಲ ಕಂಪನಿಗಳ ಮಾಹಿತಿ ಸರ್ಕಾರಿ ಜಾಲತಾಣವಾದ www.companieshouse.gov.uk ನಲ್ಲಿ ದಾಖಲಾಗಿರುತ್ತದೆ. ಅದರಲ್ಲಿ ತಮ್ಮದು ಡೇಟಾ ಪ್ರೊಸೆಸಿಂಗ್‌, ಹೋಸ್ಟಿಂಗ್‌ ಮತ್ತು ಇತರೆ ಚಟುವಟಿಕೆಗಳು ಎಂಬ ವಿಷಯದಡಿಯಲ್ಲಿ ತಮ್ಮ ಕಂಪನಿಯ ಧ್ಯೇಯೋದ್ದೇಶಗಳನ್ನು ಹೇಳಿಕೊಂಡಿದೆ. ಆದರೆ ನಿಜವಾಗಿ ಕಂಪನಿ ಆಪರೇಷನ್‌ ಶುರು ಮಾಡಿದ್ದ 2018ರ ಮಾರ್ಚ್‌ 1ರಿಂದ ಮಾತ್ರ.
ಕೇಂಬ್ರಿಡ್ಜ್‌ ಅನಾಲಿಟಿಕಾದೇ ಈ ನಾಲ್ಕೂ ಸಂಸ್ಥೆಗಳು ಎಂಬುದನ್ನು ನಿಮಗೆ ಇನ್ನೂ ಚೆನ್ನಾಗಿ ಅರ್ಥವಾಗುವ ಹಾಗೆ ವಿವರಿಸುತ್ತೇನೆ ಕೇಳಿ:
ಕೇಂಬ್ರಿಡ್ಜ್‌ ಅನಾಲಿಟಿಕಾ ಮತ್ತು ಎಸ್‌ಸಿಎಲ್‌ ಗ್ರೂಪ್‌ಗೆ ಹಣ ಹೂಡಿದವರು ರೆಬೇಕಾ ಮೆರ್ಸರ್‌, ಜೆನಿಫರ್‌ ಮೆರ್ಸರ್‌. ಒಂದು ವರ್ಷ ಹಿಂದೆಯೇ ಹುಟ್ಟಿರುವ ಕಂಪನಿ ಎಮರ್‌ಡೇಟಾಗೆ ಇವರಿಬ್ಬರೂ ಈಗ 2018ರ ಮಾರ್ಚ್‌ 16ರಂದು ಅಧಿಕೃತವಾಗಿ ನಿರ್ದೇಶಕರಾಗುತ್ತಾರೆ. ಕೇಂಬ್ರಿಡ್ಜ್‌ನ ಅಧ್ಯಕ್ಷನಾಗಿದ್ದ ಜೂಲಿಯನ್‌ ಡೇವಿಡ್‌ ವೀಟ್‌ಲ್ಯಾಂಡ್‌ ಆಗಸ್ಟ್‌ 11 2017ರಿಂದ 25-50% ಶೇರ್‌ ಹೊಂದಿರುವ ನಿರ್ದೇಶಕ ಆಗಿರುತ್ತಾನೆ. ಸಧ್ಯ ಕೇಂಬ್ರಿಡ್ಜ್‌ನ ಸಿಇಒ ಆಗಿರುವ ಡಾ.ಅಲೆಕ್ಸಾಂಡರ್‌ ಬ್ರೂಸ್‌ ಟೇಲರ್‌ ಮಾರ್ಚ್‌ 28, 2018ರಿಂದ ನಿರ್ದೇಶಕನಾಗಿ 25-50% ಶೇರ್‌ ಹೊಂದಿರುತ್ತಾನೆ. ಇನ್ನು ಬಹಳ ಫೇಮಸ್‌ ವ್ಯಕ್ತಿ ಕೇಂಬ್ರಿಡ್ಜ್‌ನ ಸಿಇಒ ಅಲೆಕ್ಸಾಂಡರ್‌ ನಿಕ್ಸ್‌ ಸಹ ಜನವರಿ 23, 2018ರಂದೇ ಎಮರ್‌ಡೇಟಾದ ನಿರ್ದೇಶಕನಾಗಿ ನೇಮಕವಾಗಿರುತ್ತಾನೆ. ಆದರೆ ಕೇಂಬ್ರಿಡ್ಜ್‌ ಅನಾಲಿಟಿಕಾದಿಂದ ನಿಕ್ಸ್‌ನನ್ನು ಎತ್ತಂಗಡಿ ಮಾಡಿದ್ದರಿಂದ ಎಮರ್‌ಡೇಟಾದಿಂದಲೂ ಹೊರಗೆ ಕಳಿಸಿದರು.
ಆದರೆ ಮಜಾ ಶುರುವಾಗುವುದೇ ಇಲ್ಲಿಂದ, ನಿಕ್ಸ್‌ನನ್ನು ಎಲ್ಲ ಕಣ್ಣಿಗೆ ಕಾಣುವ ಹಾಗೆ ತೆಗೆದು ಹಾಕಿದ್ದಾರೆ. ಆದರೆ ಎಮರ್‌ಡೇಟಾದ ಅಂಗಸಂಸ್ಥೆ ಫೈರ್‌ಕ್ರೆಸ್ಟ್‌ ಟೆಕ್ನಾಲಜೀಸ್‌ ಲಿಮಿಟೆಡ್‌ ಎಂಬುದೊಂದಿದೆ. ಅದಕ್ಕೆ ಸಧ್ಯಕ್ಕೆ ಮಾರ್ಚ್‌ 7 2018ರಿಂದ ಏಕೈಕ ನಿರ್ದೇಶಕನೇ ಅಲೆಕ್ಸಾಂಡರ್‌ ನಿಕ್ಸ್‌.
ಇದೇ ಮಾರ್ಚ್‌ 7 2018ರಂದೇ ಫೈರ್‌ಕ್ರೆಸ್ಟ್‌ ಟೆಕ್ನಾಲಜಿ ಸಂಸ್ಥೆ ಸ್ಥಾಪನೆಯಾದದ್ದು. ಎಮರ್‌ಡೇಟಾ ಕಂಪನಿಯ ಕಟ್ಟದ ಯಾವುದೇ ಕಿಟಕಿಯಿಂದ ಇಣುಕಿದರೂ ಆರಾಮಾಗಿ ಕಾಣುವಷ್ಟು ಹತ್ತಿರದಲ್ಲಿದೆ ಫೈರ್‌ಕ್ರೆಸ್ಟ್‌ ಟೆಕ್ನಾಲಜೀಸ್‌. ಇದು ಪ್ರತ್ಯೇಕ ನೋಂದಣಿ ಸಂಖ್ಯೆ 11238956 ಯಲ್ಲಿ ದಾಖಲು ಮಾಡಿಕೊಂಡಿದೆ. ಅಲ್ಲಿಗೆ ಕೇಂಬ್ರಿಡ್ಜ್‌ ಅನಾಲಿಟಿಕಾದ ಮೂಲ ತಂಡ ರೆಬೇಕಾ ಮೆರ್ಸರ್‌, ಜೆನಿಫರ್‌ ಮೆರ್ಸರ್‌, ಜೂಲಿಯನ್‌ ಡೇವಿಡ್‌ ವೀಟ್‌ಲ್ಯಾಂಡ್‌, ಡಾ. ಅಲೆಕ್ಸಾಂಡರ್‌ ಬ್ರೂಸ್‌ ಟೇಲರ್‌ ಒಂದೇ ಕಂಪನಿಯಲ್ಲಿದದ್ದು ಡೇಕಾ ಕಳವು ಆರೋಪದಲ್ಲಿ ತಾವೇ ಕಂಪನಿಯಿಂದ ತೆಗೆದು ಹಾಕಿದ್ದ ಅಲೆಂಕ್ಸಾಂಡರ್‌ ನಿಕ್ಸ್‌ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದಾಯಿತು. ಎಲ್ಲರೂ ಒಂದೇ ದೋಣಿಯ ಕಳ್ಳರು.
ಇಷ್ಟೇ ಅಲ್ಲ, ಎಮರ್‌ಡೇಟಾದ ಉಳಿದ ನಿರ್ದೇಶಕರು ಅಹ್ಮದ್‌ ಅಲ್‌ ಖಾತಿಬ್‌, ಚೆಂಗ್‌ ಪೆಂಗ್‌, ಜಾನ್ಸನ್‌ ಚುನ್‌ ಶುನ್‌ ಕೋ. ಇವರೆಲ್ಲ 2018ರ ಜನವರಿ 23ರಂದು ಕಂಪನಿಗೆ ಸೇರಿರುತ್ತಾರೆ. ಈ ಮೂವರು ಅಧ್ಯಕ್ಷರ ಪೈಕಿ ಜಾನ್ಸನ್‌ ಚುನ್‌ ಶುನ್‌ ಕೋ ಎಂಬುವವನು ಫ್ರಾಂಟಿಯರ್‌ ಸವೀರ್‍ಸಸ್‌ ಗ್ರೂಪ್‌ ಎಂಬ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಉಪಾಧ್ಯಕ್ಷ. ಈ ಸಂಸ್ಥೆಯೂ ಡೇಟಾ ಸಂಬಂಧಿತ ಕೆಲಸಗಳನ್ನೇ ಮಾಡುತ್ತಿದೆ. ಇದರ ಮಾಲೀಕ ಸಂಸ್ಥೆ ಸಿಟಿಕ್‌ ಗ್ರೂಪ್‌. ಇದು ಮೂಲತಃ ಚೀನಾ ಮೂಲದ ಸಂಸ್ಥೆಯಾಗಿದ್ದು, ಕೇಂಬ್ರಿಡ್ಜ್‌ ಅನಾಲಿಟಿಕಾ ಜೊತೆ ಗೌಪ್ಯವಾಗಿ ಕೆಲಸ ಮಾಡುತ್ತಿತ್ತು. ಕೇಂಬ್ರಿಡ್ಜ್‌ ಬಂದ್‌ ಆದಮೇಲೆ ಈಗ ಎಮರ್‌ಡೇಟಾ ಸಂಸ್ಥೆ ಮತ್ತು ಫೈರ್‌ಕ್ರೆಸ್ಟ್‌ಗೆ ಕೆಲಸ ಮಾಡುತ್ತಿದೆ.
ಇವಿಷ್ಟು ಕಂಪನಿಗಳ ಬಗ್ಗೆಯಾಯಿತು. ಆದರೆ ಇವು ಈಗ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದೇ ಸ್ವಾರಸ್ಯಕರ. ಬುಧವಾರದಿಂದಲೇ ಕೇಂಬ್ರಿಡ್ಜ್‌ ಅನಾಲಿಟಿಕಾ ಸಂಸ್ಥೆ ತಾನು ಕಂಪನಿ ಮುಚ್ಚುವುದಾಗಿ ಹೇಳಿಕೊಂಡಿದ್ದು ಹಣ ಇಲ್ಲದೇ ಅಲ್ಲ. ಬದಲಿಗೆ ತಾವು ಕದ್ದ ಡೇಟಾಗಳನ್ನೆಲ್ಲ ಎಮರ್‌ಡೇಟಾಗೆ ಸಾಗಿಸಿ ಆದ ಮೇಲೆ ಕೇಂಬ್ರಿಡ್ಜ್‌ ಅನಾಲಿಟಿಕಾ ಮುಚ್ಚುತ್ತಿದ್ದೇವೆ ಎಂದರು.
ಈಗ ಎಮರ್‌ಡೇಟಾ ಕಂಪನಿಯಿಂದ ಬಿರುಸಾಗಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚು ಹೆಚ್ಚು ಕೆಲಸಗಾರರನ್ನು ನೇಮಿಸಿಕೊಂಡು ಬಹಳ ವೇಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾರಿಗಾಗಿ? ಈ ವೇಗ? ಕಾಂಗ್ರೆಸ್‌ಗಾಗಿಯೇ? 2019ರ ಲೋಕಸಭಾ ಚುನಾವಣೆ ಮತ್ತು 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಗೆಲ್ಲಿಸಿಕೊಡಲು ಕಾಂಗ್ರೆಸ್‌ನಿಂದ 800 ಕೋಟಿಗೂ ಅಧಿಕ ಹಣವನ್ನು ತೆಗೆದುಕೊಂಡಿದೆ ಎಂಬ ಆರೋಪ ಮತ್ತಷ್ಟು ಸತ್ಯಕ್ಕೆ ಹತ್ತಿರವಾಗುವುದು ವೇಗದಲ್ಲಿ ಸಾಗುತ್ತಿರುವ ಎಮರ್‌ಡೇಟಾದ ಕೆಲಸಗಳಿಂದ.
ರಾಹುಲ್‌ ಘಂಡಿ ತಾನು ರಾಷ್ಟ್ರಾಧ್ಯಕ್ಷ ಆಗುವುದಕ್ಕೂ ಮುನ್ನ ಅಲೆಕ್ಸಾಂಡರ್‌ ನಿಕ್ಸ್‌ನನ್ನು ಭೇಟಿಯಾಗಿ ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಲೋಕಸಭಾ ಚುನಾವಣೆಯ ಬಗ್ಗೆ ಮಾತಾಡಿ, ಡೀಲ್‌ ಕುದುರಿಸಿಕೊಂಡಿದ್ದಾರೆ ಎಂಬ ಸುದ್ದಿ ಶೆಝಾದ್‌ ಪೂನಾವಾಲ ದಾಖಲೆ ಸಮೇತ ಬಹಿರಂಗ ಮಾಡಿದ್ದಾರೆ. ಕಾಂಗ್ರೆಸ್‌ ಎಲ್ಲದಕ್ಕೂ ಎಗರಿಕೊಂಡು ಬರುವುದು, ಈ ವಿಷಯದಲ್ಲಿ ಮಾತ್ರ ಸುಮ್ಮನಿದೆ.
ಈ ಮಧ್ಯೆ ಕೆಲ ಬರಹಗಾರು, ಪತ್ರಕರ್ತರು, ಸಿನಿಮಾ ನಟರಿಗೆ ಕೇಂಬ್ರಿಡ್ಜ್‌ ಅನಾಲಿಟಿಕಾ ಹಣ ನೀಡಿತ್ತು ಎಂಬ ಮಾಹಿತಿ ಬಂದಿತ್ತು. ಅದಕ್ಕೆ ತಕ್ಕನಾಗಿ ನಮ್ಮ ರಾಜ್ಯದಲ್ಲೂ ಒಬ್ಬ ಖಳನಟ, ಮುದುಕಿಯೊಬ್ಬಳ ಆತ್ಮ ಹೊಕ್ಕಂತೆ ದಿನಕ್ಕೊಂದು ವಿಡಿಯೊ ಬಿಟ್ಟು ರಾಜ್ಯಕ್ಕೆ ಅನಾಸಿನ್‌ ಆಗುತ್ತಿದ್ದಾನೆ. ಇವನ ಬೆಳವಣಿಗೆಯನ್ನೂ ಗಮನಿಸಿ. ಮೊದಲು ಟ್ವಿಟರ್‌ನಲ್ಲಿ ಫೇಸ್ಬುಕ್‌ನಲ್ಲಿ ಜಸ್ಟ್‌ ಪ್ರಶ್ನೆ ಕೇಳ್ತೀನಿ ಎಂದು ಶುರು ಮಾಡಿದ್ದ ಅಭಿಯಾನಕ್ಕೆ ನಯಾ ಪೈಸ ಖರ್ಚು ಮಾಡುತ್ತಿರಲಿಲ್ಲ. ಆದರೆ ಈಗ ಕೇವಲ ಬಿಜೆಪಿ ಮತ್ತು ಮೋದಿಯವರನ್ನು ಮಾತ್ರ ಪ್ರಶ್ನೆ ಮಾಡುವ ಈತನಿಗೆ ಕೆಲಸ ಮಾಡುವುದಕ್ಕೆ ಒಂದು ಟೀಂ ಇದೆ. ಅದು ಅವನು ಹೋದಲ್ಲೆಲ್ಲ ಒದರುವ ವಿಡಿಯೊ ಮಾಡಿಕೊಂಡು, ಅದಕ್ಕೆ ಗ್ರಾಫಿಕ್ಸು, ವಿಎಫ್‌ಎಕ್ಸು ಹಾಕಿ, ಸಾಮಾಜಿಕ ಜಾಲತಾಣಕ್ಕೆ ಮಾಡುತ್ತಿದೆ. ಮೊದಲು ಎಲ್ಲ ರಾಜಕಾರಣಿಗೂ ಪ್ರಶ್ನೆ ಕೇಳುತ್ತೇನೆ ಎಂದು ಸೌತೇಕಾಯಿ ಕೊಚ್ಚಿದ್ದ ಈ ಖಳನಟ ಈಗ ಬಿಜೆಪಿ ವಿರುದ್ಧವಷ್ಟೇ ಮಾತನಾಡುವುದಕ್ಕೆ ತನ್ನ ಜೇಬಿನಿಂದ ಹಣ ಖರ್ಚು ಮಾಡಿ, ವಿಡಿಯೊಗೆ ಡಿಸೈನ್‌ ಮಾಡಿಸುತ್ತಿದ್ದಾನೆಂದರೆ, ಅವನಿಗೆ ಅಷ್ಟು ಹಣ ಎಮರ್‌ಡೇಟಾ ಕೊಟ್ಟಿದೆಯೋ? ಕೇಂಬ್ರಿಡ್ಜ್‌ ಅನಾಲಿಟಿಕಾ ಕೊಟ್ಟಿದೆಯೋ?
ಈಗಲೂ ಸಹ ರಾಜ್ಯದಲ್ಲಿ ಕೇಂಬ್ರಿಡ್ಜ್‌ ಅನಾಲಿಟಿಕಾ ಸಂಸ್ಥೆಯ ಹೆಸರಿನಲ್ಲಿ ಯಾವ್ಯಾವ ವ್ಯವಹಾರಗಳು ಆಗುತ್ತಿತ್ತೋ ಅವೆಲ್ಲವೂ ಎಮರ್‌ಡೇಟಾ, ಫೈರ್‌ಕ್ರೆಸ್ಟ್‌ ಟೆಕ್ನಾಲಜೀಸ್‌, ಫ್ರಾಂಟಿಯರ್‌ ಸವೀರ್‍ಸಸ್‌ ಗ್ರೂಪ್‌, ಸಿಟಿಕ್‌ ಗ್ರೂಪ್‌, ಫನಾಲಿಟಿಕಾ ಪ್ರೈವೇಟ್‌ ಲಿಮಿಟೆಡ್‌ ಹೆಸರಿನಲ್ಲಿ ನಡೆಯುತ್ತಿದೆ. ಆದರೆ ಎಲ್ಲರಿಗೂ ಕೇಂಬ್ರಿಡ್ಜ್‌ ಅನಾಲಿಟಿಕಾ ಹೆಸರಷ್ಟೇ ತಿಳಿದಿರುವುದರಿಂದ ಅಕ್ರಮಗಳು ಬಯಲಾಗುತ್ತಿಲ್ಲ.
ಕೇಂಬ್ರಿಡ್ಜ್‌ ಅನಾಲಿಟಿಕಾ ಎಂಬ ರಕ್ತ ಬೀಜಾಸುರ ಒಬ್ಬ ಸತ್ತಿದ್ದಾನೆ ಅಷ್ಟೇ. ಆದರೆ ಅವನಿಂದ ಐದು ರಾಕ್ಷಸರು ಹುಟ್ಟಿಕೊಂಡಿದ್ದಾರೆ. ಇವರ ಹತ್ತಿರದಲ್ಲೇ ಕೆಲಸ ಮಾಡುವ ಸಣ್ಣ ಸಂಸ್ಥೆಗಳೇ ನೂರಾರಿವೆ. ದೇಶವನ್ನು ವಿಭಜಿಸಲು ರಾಕ್ಷಸರಿಗೆ ಗುತ್ತಿಗೆ ನೀಡಿಯಾಗಿದೆ. ಗುತ್ತಿಗೆ ನೀಡಿದವರ ಸಂಹಾರವಾಗಬೇಕೋ? ರಾಕ್ಷಸರ ಸಂಹಾರವಾಗಬೇಕೋ? ನಿರ್ಧರಿಸಿ.

Leave a Reply

Copyright©2020 Chiranjeevi Bhat All Rights Reserved.
Powered by Dhyeya