ಹಿಂದುಗಳು ಸತ್ತಾಗ ಮೇಣದಬತ್ತಿ ಖಾಲಿ ಆಗಿತ್ತಾ ಗುಂಡೂರಾಯರೇ?

ಈ ದಿನಾಂಕ ತಮಗೆಲ್ಲ ನೆನಪಿರಬಹುದು, 1966ರ ನವೆಂಬರ್‌ 7. ಇಂದಿರಾ ಗಾಂಧಿ ತಾನು ಅಧಿಕಾರಕ್ಕೆ ಬಂದ ಮೇಲೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡುತ್ತೇವೆ ಎಂದು ಸ್ವಾಮಿ ಕೃಪಾತ್ರಿಜಿ ಮಹಾರಾಜರ ಕಾಲಿಗೆ ಬಿದ್ದು ಬೆಂಬಲ ತೆಗೆದುಕೊಂಡಿದ್ದರು. ಮೋಸ ಮಾಡುವುದರ ಪೇಟೆಂಟ್‌ ಪಡೆದುಕೊಂಡಿರುವ ಕಾಂಗ್ರೆಸಿಗರು ಅಧಿಕಾರಕ್ಕೆ ಬಂದ ಮೇಲೆ ಗೋ ಹತ್ಯೆ ನಿಷೇಧ ಕಾಯಿದೆಯ ವಿಚಾರವನ್ನು ಮರೆತೇ ಬಿಟ್ಟಿದ್ದರು. ಆಗ ಆರ್ಯ ಸಮಾಜ, ಹಿಂದೂ, ಬೌದ್ಧರು, ಸಿಖ್‌, ನಾಥ ಪಂಥದ ಸನ್ಯಾಸಿಗಳು, ಜನರು ಸ್ವಾಮಿ ಕೃಪಾತ್ರಿಜಿ ಮಹಾರಾಜ್‌ ನೇತೃತ್ವದಲ್ಲಿ ಸಂಸತ್ತಿನೆಡೆಗೆ ನಡೆಯುತ್ತಾ ಬಂದರು. ಪ್ರತಿಭಟನೆ ಶುರು ಮಾಡಿದ್ದರು. 1966ರ ನವೆಂಬರ್‌ 7ರಂದು ದೆಹಲಿಯಲ್ಲಿ ನಡೆದ ಆ ರಾರ‍ಯಲಿಯಲ್ಲಿ 20 ಸಾವಿರ ಮಹಿಳೆಯರನ್ನೂ ಸೇರಿ ಹೆಚ್ಚೂ ಕಡಿಮೆ 10 ಲಕ್ಷ ಜನ ಪಾಲ್ಗೊಂಡಿದ್ದರು. ಇಂದಿರಾ ಗಾಂಧಿ ಮಾತುಕತೆಗೆ ಬರಲಿಲ್ಲ. ಬರಲು ಮುಖ ಮತ್ತು ಧಮ್‌ ಎರಡೂ ಇರಲಿಲ್ಲ. ನೆರೆದಿದ್ದ ಲಕ್ಷಾಂತರ ಪ್ರತಿಭಟನಾಕಾರರು ಮತ್ತು ಸಾವಿರಾರು ಸನ್ಯಾಸಿಗಳ ಮೇಲೆ ಗೋಲಿಬಾರ್‌ಗೆ ಆ ಹೇಡಿ ಆದೇಶ ನೀಡಿಬಿಟ್ಟರು. ಸುಮಾರು ಸನ್ಯಾಸಿಗಳು ಗುಂಡಿನೇಟು ತಿಂದರು, ಇನ್ನು ಕೆಲವರು ಇಂದಿರಾ ಗಾಂಧಿಯ ಕೈಯಲ್ಲಿ ತಾವು ಸಾಯುವುದಿಲ್ಲ ಎಂದು ತ್ರಿಶೂಲದ ಮೇಲೆ ತಮ್ಮ ಮುಖವನ್ನು ಇಟ್ಟು ಚುಚ್ಚಿಕೊಂಡರು, ಹಸುಗಳು ಗಾಯಗೊಂಡವು. ಸ್ವಾಮಿ ಕೃಪಾತ್ರಿ ಮಹಾರಾಜರಿಗೂ ಗುಂಡಿನೇಟು ಬಿತ್ತು. ಆ ಗೋಲಿಬಾರ್‌ನಲ್ಲಿ 375 ಜನರು ಮೃತ ಪಟ್ಟಿದ್ದರು ಮತ್ತು 5000 ಜನರಿಗೆ ಗಾಯಗಳಾಗಿದ್ದವು.
ಇದನ್ನು ಈಗ ಯಾಕೆ ಹೇಳಬೇಕಾಯಿತೆಂದರೆ, ಜಮ್ಮು-ಕಾಶ್ಮೀರದ ಕತುವಾದಲ್ಲಿ ಮುಸ್ಲಿಂ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮತ್ತು ಉನ್ನಾವ್‌ದಲ್ಲಿನ ಹತ್ಯೆ ಪ್ರಕರಣವನ್ನು ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು. ಅಲ್ಲಿ ಮಾತನಾಡಿದ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿರುವಂಥ ಸನ್ಮಾನ್ಯ ದಿನೇಶ್‌ ಗುಂಡೂರಾವ್‌ ಎಂಬ ವ್ಯಕ್ತಿ ಉತ್ತರಪ್ರದೇಶದ ಉನ್ನಾವ್‌ನಲ್ಲಿ ನಡೆದ ಹತ್ಯೆಯನ್ನು ಖಂಡಿಸುತ್ತಾ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕರ್ನಾಟಕಕ್ಕೆ ಬಂದರೆ ಚಪ್ಪಲಿ ತೆಗೆದುಕೊಂಡು ಹೊಡೆಯಿರಿ ಎಂದು ಕರೆ ಕೊಟ್ಟಿದ್ದರು.
ದಿನೇಶ್‌ ಗುಂಡೂರಾವ್‌ ಅವರೇ, ಕೇವಲ ಒಂದು ಪ್ರಕರಣಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಚಪ್ಪಲಿಯಲ್ಲಿ ಹೊಡೆಯಬೇಕಾದರೆ, 375 ಜನರ ಸಾವಿಗೆ ನೇರವಾಗಿ ಕಾರಣರಾದ ಇಂದಿರಾ ಗಾಂಧಿಗೆ ಯಾವ ಚಪ್ಪಲಿಯಲ್ಲಿ ಹೊಡೆಯಬೇಕು? ಚಪ್ಪಲಿಯಲ್ಲಿ ಹೊಡೆಯುವುದು ನಿಮಗೆ ಫ್ಯಾಷನ್‌ ಆದಂತಿದೆ ಅಲ್ಲವೇ? ಸ್ವಾಮಿ ಕೃಪಾತ್ರಿ ಮಹಾರಾಜ್‌ ಪ್ರಕರಣದಿಂದ ಈ ದಿನೇಶ್‌ವರೆಗೂ ಸಾಬೀತಾಗಿದ್ದೇನೆಂದರೆ ಕಾಂಗ್ರೆಸಿಗರು ತಮಗಾಗದವರಿಗೆ ಚಪ್ಪಲಿಯಲ್ಲಿ ಹೊಡೆಯುತ್ತಾರೆ, ಹೊಡೆಸುತ್ತಾರೆ.
ಹೇಳಿ, ಇಂದಿರಾ ಗಾಂಧಿಗೆ ಅಂದು ಯಾರು ಚಪ್ಪಲಿಯಲ್ಲಿ ಹೊಡೆಯಬೇಕಿತ್ತು? ಅಸಲಿಗೆ ಈ ದಿನೇಶ್‌ ಗುಂಡೂರಾವ್‌ ರಕ್ತದಲ್ಲೇ ಹೊಡಿ ಬಡಿ ಕಡಿ ಎಂಬುದಿದೆ. ನಿಯತ್ತಾಗಿ ಮಾತನಾಡುವುದಕ್ಕೆ ಬರದ ಈ ಅಯೋಗ್ಯರ ಅಪ್ಪ ಗುಂಡೂರಾಯರೂ ಕಡಿಮೆ ಇರಲಿಲ್ಲ. ನೀವು ರವಿ ಬೆಳಗೆರೆ ಬರೆದಿರುವ ‘ಪಾಪಿಗಳ ಲೋಕದಲ್ಲಿ’ ಎಂಬ ಪುಸ್ತಕ ಓದಿದ್ದರೆ, ಅದರಲ್ಲಿ ಮುನಿರತ್ನಂ ಎಂಬ ರೌಡಿ ಹೇಳುತ್ತಾನೆ ‘ಸಾರ್‌, ನಾನು ಕೊತ್ವಾಲ್‌ ಜೊತೆ ಐದು ವರ್ಷ ಇದ್ದೆ. ಗುಂಡೂರಾಯರ ಕಾಲದಲ್ಲಿ ಇದ್ದಷ್ಟು ಸುಖವಾಗಿ ಯಾವತ್ತೂ ಇರಲಿಲ್ಲ’ ಎಂದು. ರೌಡಿಗಳಿಗೆ ಈ ಪಾಟಿ ಬೆಂಬಲ ನೀಡುತ್ತಿದ್ದ ಗುಂಡೂರಾಯರ ಮಗನಿಂದ ಇನ್ನೇನನ್ನು ತಾನೆ ನಿರೀಕ್ಷಿಸಲು ಸಾಧ್ಯ? ಅಪ್ಪನಂತೆ ಮಗ.
ಸರಿ, ಕೃಪಾತ್ರಿ ಮಹಾರಾಜ್‌ ಪ್ರಕರಣ ಬಹಳ ಹಳೆಯದಾಯಿತು, ಹೊಸತನ್ನೇ ತೆಗೆದುಕೊಳ್ಳೋಣ. ಕರ್ನಾಟಕದಲ್ಲಿ ಏನಾಗುತ್ತಿದೆ ನೋಡಿದ್ದೀರಾ?
ಕರ್ನಾಟಕದಲ್ಲಿ ನಂದಿತಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ನಡೆಯಿತು. ಅದಕ್ಕೆ ಸಿದ್ದರಾಮಯ್ಯ ಸರ್ಕಾರ ಏನು ಮಾಡಿತ್ತು? ಎಲ್ಲ ಸಾಕ್ಷಿ ನಾಶವಾದ ಮೇಲೆ ಉನ್ನತ ತನಿಖೆಗೆ ವಹಿಸಿತ್ತು. ಆಗ ಎಲ್ಲಿ ಹೋಗಿದ್ರಿ ದಿನೇಶ್‌ ಗುಂಡೂರಾಯರೇ? ಆಗ ಇದೇ ಮಾತನ್ನು ಆಡಬೇಕಿತ್ತು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದ ಆಡಳಿತವೊಂದರಲ್ಲೇ 3500ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಎಲ್ಲಿ ಹೋಗಿದ್ದರು ದಿನೇಶ್‌ ಗುಂಡೂರಾವ್‌ ಆಗ? ಮಾತಾಡುವುದಕ್ಕೆ ಧೈರ್ಯ ಇರಲಿಲ್ಲವಾ? ಅಥವಾ ಮೇಣದ ಬತ್ತಿ ಪ್ರತಿಭಟನೆ ಮಾಡುವುದಕ್ಕೆ ಮೇಣದಬತ್ತಿ ಖಾಲಿ ಆಗಿತ್ತಾ?
ಉತ್ತರ ಪ್ರದೇಶದ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಕರ್ನಾಟಕದಲ್ಲಿ ರಸ್ತೆಬದಿಯಲ್ಲಿ ಸತ್ತು ಬಿದ್ದದ್ದರಲ್ಲ, ಅದನ್ಯಾಕೆ ಪ್ರಶ್ನಿಸಲಿಲ್ಲ? ಅನುರಾಗ್‌ ತಿವಾರಿಯ ತಾಯಿಯೇ ತನ್ನ ಮಗ ಸಾಯಲು ಸಿದ್ದರಾಮಯ್ಯನವರೇ ಕಾರಣ ಎಂದು ಹೇಳಿದ್ದರೂ, ದಿನೇಶ್‌ ಗುಂಡೂರಾಯರ ಪುಂಗಿ ಸದ್ದೇ ಮಾಡಲಿಲ್ಲ. ನಮ್ಮ ಕರ್ನಾಟಕದಲ್ಲೇ ಇಷ್ಟು ನಡೆಯುತ್ತಿದ್ದರೂ ಮಾತನಾಡದ ಈ ಮನುಷ್ಯ, ಉನ್ನಾವ್‌ ಮತ್ತು ಕತುವಾ ಪ್ರಕರಣಕ್ಕೆ ಹೋರಾಟ ಮಾಡುತ್ತಾರೆ, ಯೋಗಿಗೆ ಚಪ್ಪಲಿಯಲ್ಲಿ ಹೊಡೆಯಲು ಹೇಳುತ್ತಾರೆ.
ಒಂದೇ ಒಂದು ಪ್ರಕರಣ ಇಟ್ಟುಕೊಂಡು ಒಬ್ಬ ಮುಖ್ಯಮಂತ್ರಿಗೆ ಚಪ್ಪಲಿಯಲ್ಲಿ ಹೊಡೆಯುವುದಕ್ಕೆ ಆದೇಶಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದಾದರೆ, ಹಿಂದೂ ಕಾರ್ಯಕರ್ತರು, ನಂದಿತಾ ಪ್ರಕರಣ, ಅಧಿಕಾರಿಗಳ ಹತ್ಯೆ, ರೈತರ ಹತ್ಯೆ ನಡೆದಾಗ ಇದ್ದ ಕರ್ನಾಟಕದ ಮುಖ್ಯಮಂತ್ರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಕೊಡುವ ಕರೆಯೂ ಅಭಿವ್ಯಕ್ತಿ ಸ್ವಾತಂತ್ರ್ಯ ಆಗುತ್ತದಲ್ಲವೇ. ಗುಂಡೂರಾಯರೇ, ನೀವಾದರೆ ಯೋಗಿ ಕರ್ನಾಟಕಕ್ಕೆ ಬಂದಾಗ ಚಪ್ಪಲಿಯಲ್ಲಿ ಹೊಡೆಯಲು ಹೇಳಿದಿರಿ, ಆದರೆ ಸಿದ್ದರಾಮಯ್ಯ ಕರ್ನಾಟಕದಲ್ಲೇ ಇದ್ದಾರಲ್ಲ ಏನು ಮಾಡೋಣ?
ಇದಾದ ಮೇಲೆ ದಿನೇಶ್‌ ಗುಂಡೂರಾವ್‌ ಹೇಳುತ್ತಾರೆ, ‘ಪ್ರಕರಣದಲ್ಲಿ ಪೊಲೀಸರು ಏನೂ ಮಾಡುತ್ತಿಲ್ಲ ಎಂಬ ಆಕ್ರೋಶದಲ್ಲಿ ಏನೇನೋ ಹೇಳಿಬಿಟ್ಟೆ’ ಎಂದರು. ದಿನೇಶ ಅವರೇ, ನೀವೋಬ್ಬರೇ ಗಂಡಸಲ್ಲ ರಾಜ್ಯದಲ್ಲಿರುವುದು. ನಮಗೂ ನಿಮ್ಮ ಹಾಗೇ ಇದೇ. ಒಂದೊಂದು ಹತ್ಯೆಯಾದಾಗಲೂ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಹೇಳಿಕೆ ನೀಡಿದರೆ ಏನಾಗುತ್ತಿತ್ತು ಗೊತ್ತೇ? ಆದರೆ ನಿಮ್ಮ ಹಾಗೆ ಯಾರೂ ಸಿದ್ದರಾಮಯ್ಯನವರ ವಿರುದ್ಧ ಅಂಥ ಹೇಳಿಕೆಯನ್ನೂ ನೀಡಲಿಲ್ಲ, ಹೊಡೆಯಲೂ ಇಲ್ಲ. ರೌಡಿಗಳನ್ನು ಬೆಳೆಸಿದ ಅಪ್ಪನ ಮಗನಿಗೂ, ನಮಗೂ ಇರುವ ಸಂಸ್ಕಾರದ ವ್ಯತ್ಯಾಸ ಇದೇ. ದಿನೇಶ್‌ ಗುಂಡೂರಾವ್‌ ಅವರೇ, ಒಂದು ವಿಷಯ ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಿ, ಚಪ್ಪಲಿ ಕಾಲಲ್ಲೇ ಇರಬೇಕು. ನಾಲಗೆಗೆ ಬರಬಾರದು.
ಅಸಲಿಗೆ ದಿನೇಶ್‌ರದ್ದು ಈ ಬಾಯಿ ಚಪಲ ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಹೀಗೆ ಮಾತನಾಡಿ ಮುಖಕ್ಕೆ ಉಗಿಸಿಕೊಂಡಿದ್ದರು. 2016ರ ಆಗಸ್ಟ್‌ ತಿಂಗಳಿನಲ್ಲಿ ಸಾವರ್ಕರ್‌ ಬಗ್ಗೆ ಮಾತನಾಡುತ್ತಾ ಅವರು ಸಾವರ್ಕರ್‌ ಒಬ್ಬ ಹೇಡಿ, ಅವನು ಓಡಿ ಹೋಗಿದ್ದ ಎಂದು ಹೇಳಿದ್ದರು. ಆಗ ದೇಶಪ್ರೇಮಿಗಳೆಲ್ಲ ದಿನೇಶ್‌ಗೆ ಮುಖ ಮೂತಿ ನೋಡದೇ ಬಯ್ದಿದ್ದರು. ಅದಾದ ಮೇಲೆ ಒಂದು ವರ್ಷ ಯಾವುದೇ ಎಡವಟ್ಟು ಮಾಡಿಕೊಳ್ಳದ ಮನುಷ್ಯ ಈಗ ರೊಚ್ಚಿಗೆದ್ದಿದ್ದಾರೆ.
ಕೋಪ ಬರುತ್ತದೆ ಎಂದು ಬೇಕಾ ಬಿಟ್ಟಿ ವರ್ತನೆ, ಬೊಗಳುವುದು, ಕಚ್ಚುವುದು ಪ್ರಾಣಿಗಳೇ ವಿನಾ ಮನುಷ್ಯನ ಗುಣಗಳಲ್ಲ. ಅಸಲಿಗೆ ಆ ಮೊನ್ನೆ ಹೋರಾಟ ಮಾಡಿದ್ದ ಮತ್ತೊಂದು ವಿಚಾರ ಕತುವಾದ ಮುಸ್ಲಿಂ ಹುಡುಗಿಯ ಬಗ್ಗೆ. ನಿಜವಾಗಿ ಆ ಘಟನೆ ನಡೆದಿದ್ದು ಜನವರಿಯಲ್ಲಿ. ಕುದುರೆ ಮೇಯಿಸುತ್ತಿದ್ದ ಆ ಬಾಲಕಿಯನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆಯೇ ವಿನಾ ಅತ್ಯಾಚಾರದ ಕುರುಹು ಇಲ್ಲ. ಅದೂ ಎಲ್ಲಿ? ಯಾವುದೋ ಕೊಟ್ಟಿಗೆಯಲ್ಲಿ. ಆಮೇಲೆ ಅವಳನ್ನು ದೇವಸ್ಥಾನಕ್ಕೆ ಬೇಕೆಂದೇ ಬಿಸಾಡಿದ್ದಾರೆ. ಆದರೆ ಸೋಗಲಾಡಿಗಳನ್ನು ನೋಡಿ, ಮೂರು ತಿಂಗಳ ನಂತರ ಮುಸ್ಲಿಂ ಬಾಲಕಿಯ ಮೇಲೆ ಅತ್ಯಾಚಾರ ಆಗಿದೆ ಎಂದು ಅರಚಾಡುತ್ತಿದ್ದಾರೆ. ಅಸಲಿಗೆ ಆ ಬಾಲಕಿಗೆ ತಂದೆ-ತಾಯಿ ಇಲ್ಲ. ಅವಳ ಸಾಕು ತಂದೆಯೇ ಹೇಳುತ್ತಿದ್ದಾರೆ, ನಮಗೆ ಇರಲು ಮನೆ ಕಟ್ಟಿಕೊಟ್ಟಿದ್ದು ಹಿಂದೂಗಳು, ನಮ್ಮ ಮಗಳು ಸತ್ತಾಗ ಅವಳನ್ನು ಹುಡುಕಲು ಬಂದಿದ್ದು ಹಿಂದೂಗಳು, ಅತ್ತವರು ಹಿಂದೂಗಳು. ಹೆಣ ದೇವಸ್ಥಾನದಲ್ಲಿ ಸಿಗಲಿಲ್ಲ, ಬದಲಿಗೆ ಯಾವುದೋ ಕೊಟ್ಟಿಗೆಯಲ್ಲಿ ಸಿಕ್ಕಿತು ಎಂದು ಹೇಳಿದ್ದರೂ ರಾಜಕಾರಣಿಗಳು ಇದನ್ನು ತಮಗೆ ಬೇಕಾದಂತೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಮತ್ತು ಇದುವರೆಗೂ ಯಾರೊಬ್ಬ ರಾಜಕಾರಣಿಯೂ ನಮ್ಮನ್ನು ವಿಚಾರಿಸಿಲ್ಲ ಎಂದು ಹೇಳಿದ್ದಾರೆ.
ಮತ್ತೊಂದು ಮಜಾ ನೋಡಿ. ಈ ಪ್ರಕರಣದ ತನಿಖೆ ಮಾಡುತ್ತಿರುವುದು ಇರ್ಫಾನ್‌ ವಾನಿ ಎಂಬ ಅಧಿಕಾರಿ. ಈ ಅಧಿಕಾರಿ, ಒಬ್ಬ ಹಿಂದೂ ಹುಡುಗಿಯನ್ನು ಅತ್ಯಾಚಾರ ಮಾಡಿ, ಆಕೆಯ ತಮ್ಮನನ್ನು ಕೊಂದ ಆರೋಪದಲ್ಲಿ ಜೈಲಿಗೂ ಹೋಗಿ ಬಂದಿದ್ದ. ಪ್ರಕರಣವನ್ನು ಇನ್ನೂ ಸಿಬಿಐಗೆ ನೀಡದೇ ಇಂಥವನ ಬಳಿ ತನಿಖೆ ಮಾಡಿಸುತ್ತಿರುವುದು ಮೊಹಬೂಬ ಮುಫ್ತಿ ಮತ್ತು ಆ ಹುರಿಯತ್‌ ಮುದುಕ ಗಿಲಾನಿ. ಬೇಕಂತಲೇ ಹಿಂದೂಗಳ ಹೆಸರನ್ನು ಹಾಳು ಮಾಡಲು ಯತ್ನಿಸುತ್ತಿರುವ ಈ ಪ್ರಕರಣಕ್ಕೆ ಪಾಕಿಸ್ತಾನ ಮತ್ತು ಉಗ್ರ ಹಫೀಜ್‌ ಸಯೀದ್‌ರ ಕೈವಾಡವೂ ಇರುವುದರಿಂದ ಬಾಲಿವುಡ್‌ ಸಹ ಇದಕ್ಕೆ ಬೆಂಬಲ ನೀಡುತ್ತಿದೆ.
ನ್ಯಾಯ ಸಿಗಬೇಕು ನಿಜ. ಆದರೆ ಕೇವಲ ಇವೆರಡೇ ಪ್ರಕರಣದ ಬಗ್ಗೆ ಹೋರಾಟವೇಕೆ ದಿನೇಶ್‌ ಗುಂಡೂರಾವ್‌?
ಕಳೆದ ಮೂರ್ನಾಲ್ಕು ದಿನದಲ್ಲಿ ನಡೆದ ಪ್ರಕರಣಗಳು ಇಲ್ಲಿವೆ ನೋಡಿ, ಇದರ ಬಗ್ಗೆಯೂ ಹೋರಾಡುವ ಗುಂಡಿಗೆ ದಿನೇಶ್‌ಗೆ ಗುಂಡೂರಾಯರ ಆಣೆಯಾಗ್ಲೂ ಇಲ್ಲ ಎಂದು ಚಾಲೆಂಜ್‌ ಮಾಡುತ್ತಿದ್ದೇನೆ.
6 ವರ್ಷದ ಹುಡುಗಿಯನ್ನು ಬಿಹಾರದ ರೋಹ್ತಾಸ್‌ನಲ್ಲಿ ಅತ್ಯಾಚಾರ ಮಾಡಲಾಗಿದೆ. ಅತ್ಯಾಚಾರ ಮಾಡಿದವನು ಮೆರಾಜ್‌
ಉತ್ತರ ಪ್ರದೇಶದ ಎಟಾದಲ್ಲಿ ದಲಿತ ಹುಡುಗಿಯ ಮೇಲೆ ಗುಲಾಬ್‌ ಅಲಿ ಎಂಬುವವನು ಅತ್ಯಾಚಾರ ಮಾಡಿದ್ದಾನೆ.
ಉತ್ತರ ಪ್ರದೇಶದ ನೋಯ್ಡಾದಲ್ಲಿ ಒಬ್ಬ ಮಹಿಳೆಗೆ ಅನ್ವರ್‌ ಎಂಬುವವನು ಚೂರಿ ಹಾಕಿದ್ದಾನೆ.
ಸಲ್ಮಾನ್‌ ಮತ್ತು ಖುರ್ಷಿದ್‌ ಎಂಬುವವರು 7 ವರ್ಷದ ಹುಡುಗಿಯನ್ನು ಉತ್ತರ ಪ್ರದೇಶದ ಬಿಜನೋರ್‌ನಲ್ಲಿ ಅತ್ಯಾಚಾರ ಮಾಡಿದ್ದಾರೆ.
ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ವಾಗಿದೆ. ಆರಿಫ್‌ ಮತ್ತು ಫಿರೋಜ್‌ ನಾಪತ್ತೆಯಾಗಿದ್ದಾರೆ.
ಐದು ಪ್ರಕರಣಗಳು ಕಣ್ಣ ಮುಂದೇ ಇದೆ. ಮೂವರು ಬಾಲಕಿಯರು. ಆದರೆ ದಿನೇಶ್‌ ಗುಂಡೂರಾವ್‌ ಮೇಣದಬತ್ತಿ ಹಚ್ಚಿ ರೊಚ್ಚಿಗೆದ್ದಿದ್ದು ಯಾವುದೋ ಒಂದು ಪ್ರಕರಣದಲ್ಲಿ ಮಾತ್ರ. ಅಬ್ಬಬ್ಬಾ! ಎನ್‌ ಗಂಡಸ್ತನ ಸ್ವಾಮಿ? ಅವತ್ತು ಸಾವರ್ಕರ್‌ಗೆ ಹೇಡಿ ಅಂದ ಹಾಗಲ್ಲ ದಿನೇಶ್‌ ಗುಂಡೂರಾವ್‌, ಈಗ ಮಾತಾಡಿ. ಮಾತಾಡದಿದ್ದರೆ ನಿಮ್ಮನ್ನು ಹೇಡಿ ಎಂದು ಕರೆಯುವುದೋ ಅಥವಾ ಹೆದರು ಪುಕ್ಕಲ ಎಂದು ಕರೆಯುವುದೋ ಎಂದು ನೀವೇ ಹೇಳಿ ಬಿಡಿ.
ಭಾರತ್‌ ತೇರೆ ತುಕಡೇ ಹೋಂಗೆ ಎಂದಾಗ ಬತ್ತಿ ಹಚ್ಚಿ ಪ್ರತಿಭಟಿಸಲಿಲ್ಲ, ಮೋದಿ ಬಂದಾಗ ಗಲಭೆ ಮಾಡಿ, ಕುರ್ಚಿ ಎಸೆಯಿರಿ ಎಂದು ದಲಿತರನ್ನು ಹಾದಿ ತಪ್ಪಿಸುವ ಮಾತಾಡಿದ ಅಯೋಗ್ಯನ ವಿರುದ್ಧ ಬತ್ತಿ ಹಚ್ಚಲಿಲ್ಲ, ಮದರಸಾಗಳಲ್ಲಿ ಅತ್ಯಾಚಾರ, ಭಯೋತ್ಪಾದನೆ ಪ್ಲಾನಿಂಗ್‌ ನಡೆದಾಗ ಬತ್ತಿ ಹಚ್ಚಲಿಲ್ಲ, ಕರ್ನಾಟಕದಲ್ಲಿ ಒಬ್ಬ ರೈತನ ಸಾವಿಗೂ ಬತ್ತಿ ಹಚ್ಚಲಿಲ್ಲ. ಈಗ ಬತ್ತಿ ಹಿಡಿದು ಬರುತ್ತೀರಾ ದಿನೇಶ್‌ ಗುಂಡೂರಾವ್‌? ಇಂಥ ಅವಕಾಶವಾದಿಗಳನ್ನು ಅದೆಷ್ಟು ನೋಡಿಲ್ಲ? ಕೆಲಸ ನೋಡಿ.

 

Leave a Reply

Copyright©2020 Chiranjeevi Bhat All Rights Reserved.
Powered by Dhyeya