ಹೆಂಗಸೊಬ್ಬಳು ತನ್ನ ಮಗುವಿಗೆ ಎದೆ ಹಾಲು ಕುಡಿಸುತ್ತಿರುತ್ತಾಳೆ. ಕ್ಯಾಮೆರಾಗೆ ಫೋಸ್ ಕೊಡುತ್ತಾ. ಮೊಲೆಯ ತೊಟ್ಟೊಂದು ಬಿಟ್ಟು ಸಂಪೂರ್ಣ ಎದೆ ಕಾಣುತ್ತಿರುತ್ತದೆ. ಇಂಥದ್ದೊಂದು ಚಿತ್ರವನ್ನು ಮುಖಪುಟ ಮಾಡಿಕೊಂಡ ಒಂದು ಮಲಯಾಳಂ ನಿಯತಕಾಲಿಕೆ ಕೊಟ್ಟ ಶೀರ್ಷಿಕೆ, ‘ಗುರಾಯಿಸಬೇಡಿ, ಹಾಲು ಕುಡಿಸುತ್ತಿದ್ದೇವೆ‘.
ಹೇಳಿ, ನಾವೇನ್ ಪ್ರೂವ್ ಮಾಡಿಕೊಳ್ಳೋಕ್ ಹೋಗ್ತಾ ಇದೀವಿ ಹೀಗ್ ಮಾಡಿ? ಈ ಪ್ರಶ್ನೆಯನ್ನು ಕೇಳಿದ್ದಕ್ಕೆ ನಾನು ಸ್ತ್ರೀ ವಿರೋಧಿಯಲ್ಲ ಅಥವಾ ಬೆಂಬಲಿಸಿದ ಒಂದೇ ಒಂದು ಕಾರಣಕ್ಕೆ ನಾನು ಸ್ತ್ರೀ ಪರನೂ ಇಲ್ಲ.
ಈ ಪ್ರಶ್ನೆಯನ್ನು ನಾವು ಕೇಳಿದರೆ ನಮಗೆ ನೀಡುವ ಉತ್ತರವೇನು ಗೊತ್ತಾ? ನೀವು ಎದೆ ಹಾಲು ಕುಡಿದಿಲ್ಲವೇ? ನೀವು ನಂದಿನಿ ಹಾಲು ಕುಡಿದು ಹುಟ್ಟಿದ್ರಾ? ನಿಮ್ಮಮ್ಮ ಯಾರು? ದೇವಲೋಕದಿಂದ ಇಳಿದುಬಂದ್ರಾ?
ಹೌದು, ನಾನು ಎದೆಹಾಲು ಕುಡಿದವನೇ, ಇನ್ಫ್ಯಾಕ್ಟ್ ಏಳು ತಿಂಗಳಿಗೆ ಹುಟ್ಟಿ ಎಲ್ಲರಗಿಂತ ಮುಂಚೆ ಕುಡಿಯಲು ಶುರು ಮಾಡಿದವನು. ಆದರೆ ನನ್ನ ಅಮ್ಮ ನನಗೆ ಎದೆ ಹಾಲು ಕುಡಿಸುವಾಗ ಯಾವನಿಗೂ ಗುರಾಯಿಸಬೇಕು ಎಂದೆನಿಸಲಿಲ್ಲ ಅಥವಾ ಆಕೆ ಒಂದು ಮ್ಯಾಗಜೀನ್ಗೆ ಪೋಸು ನೀಡಿ ಆಂದೋಲನ ಮಾಡಬೇಕು ಎಂದೆನಿಸಲೇ ಇಲ್ಲ. ನಿಜವಾಗಿ ಇವರಿಗೆ ಎದೆ ಹಾಲು ಕುಡಿಯುವಾಗ ಯಾರೂ ನೋಡಬಾರದೆಂದಿದ್ದರೆ ಯಾರಾದರೂ ತಾಯಿ ಹಾಲು ಕುಡಿಸುವಾಗ ಅವರನ್ನು ಗುರಾಯಿಸದಂತೆ ರಕ್ಷಣೆ ನೀಡಲಿ. ಅದರ ಬದಲು, ಒಬ್ಬ ಅವಿವಾಹಿತ ಮಾಡೆಲ್ಳ ಬಟ್ಟೆ ಗುಂಡಿ ಬಿಚ್ಚಿ, ಹತ್ತಾರು ಶೂಟಿಂಗ್ ಸೆಟ್ನವರ ಮುಂದೆ ಅವಳ ಎದೆ ತೋರಿಸಿ, ಫೋಟೊ ಕ್ಲಿಕ್ಕಿಸಿ, ಇಡೀ ಕೇರಳ ನೋಡುವ ಹಾಗೆ ನಿಯತಕಾಲಿಕೆಯ ಮುಖಪುಟದಲ್ಲಿ ಮುದ್ರಿಸಿ ಅದಕ್ಕೆ ಕೊಡುವ ಒಕ್ಕಣೆ ‘ಗುರಾಯಿಸಬೇಡಿ, ಹಾಲು ಕುಡಿಸುತ್ತಿದ್ದೇವೆ‘! ನಾಚೆಕಿಯಾಗುವುದಿಲ್ಲವೇ ಒಂದು ಹೆಣ್ಣಿನ ಮಾನವನ್ನು ಹೀಗೆಲ್ಲ ಕಳೆಯುವುದಕ್ಕೆ?
ಹಾಲು ಕುಡಿಸುವುದು ಪ್ರಕೃತಿ ನಿಯಮ ಹೌದು. ಹಾಗೆಂದ ಮಾತ್ರಕ್ಕೆ ಅದನ್ನು ಪ್ರಕೃತಿಯಲ್ಲೇ ಎಲ್ಲರ ಮುಂದೆ ಎದೆ ಬಿಚ್ಚಿಕೊಂಡು ಕುಡಿಸಬೇಕು ಎಂಬ ಕಾನೂನನ್ನೂ ಪ್ರಕೃತಿ ಹೇಳಿಕೊಟ್ಟಿದೆಯಾ? ದಯವಿಟ್ಟು ಅರ್ಥ ಮಾಡಿಕೊಳ್ಳಿ, ನಮ್ಮ ಭಾರತದಲ್ಲಿ ಎದೆ ಹಾಲು ಕುಡಿಸುವುದು ಸಮಸ್ಯೆಯೇ ಅಲ್ಲ. ಒಂದು ಸೀರೆ ಸೆರಗು ಅಥವಾ ಟರ್ಕೀಸ್ ಟವೆಲ್ಲು ತೆಗೆದುಕೊಂಡು ಹೋಗಿ ದೇವಸ್ಥಾನದಿಂದ ಹಿಡಿದು ಶೌಚಾಲಯದವರೆಗೂ ಹಾಲು ಕುಡಿಸಿದರೆ ಯಾಕಮ್ಮಾ, ನಾಚಿಕೆಯಾಗಲ್ವಾ? ಎಂದು ಕೇಳುವವರು ಅಥವಾ ಗುರಾಯಿಸಿಕೊಂಡು ಕಾಮಪಿಪಾಸುವಂತೆ ನೋಡುವವರಿಲ್ಲ. ಬಸ್ ಸ್ಟ್ಯಾಂಡು, ಬಸ್ ಒಳಗೆ ಹಾಲು ಕುಡಿಸುವವರನ್ನು ನಾನೇ ನೋಡಿದ್ದೇನೆ. ಅಂಥವರ ಬಳಿ ಕಂಡಕ್ಟರ್ ಸಹ ಟಿಕೆಟ್ ತೆಗೆದುಕೊಳ್ಳುವುದಕ್ಕೆ ಬಂದವನು, ‘ಆಮೇಲೆ ಬರ್ತೀನಿ ತಾಯಿ‘ ಎಂದು ಮುಂದೆ ಹೋಗಿ ಹಾಲು ಕೊಡಲು ಅನುವು ಮಾಡಿಕೊಡುವಂಥ ಶ್ರೀಮಂತ ಸಂಸ್ಕೃತಿಯಿರುವ ದೇಶ ನಮ್ಮದು. ಎಲ್ಲೋ ಒಂದಿಬ್ಬರು ಕೆಟ್ಟವರಿದ್ದರೆ ಹೆಚ್ಚು. ಅಂಥವರಿಗೆ ಹಾಲು ಕೊಡುವವಳು ವಾಪಸ್ ಗುರಾಯಿಸಿ, ‘ಏನಯ್ಯಾ ನಾಚಿಕೆಯಾಗಲ್ವಾ?‘ ಎಂದರೆ ಸಾಕು ಸುತ್ತಮುತ್ತಲಿನವರಿಂದ ಗುರಾಯಿಸುವವನಿಗೆ ಚಪ್ಪಲಿ ಏಟು ಬೀಳುತ್ತದೆ. ಅಂಥ ಖಡಕ್ ಸಂಸ್ಕೃತಿ ಪಾಲಕರಿರುವಂಥ ದೇಶ ನನ್ನದು.
ಹಾಲು ಕುಡಿಸುವುದಕ್ಕೆ ತುಂಬ ಸಮಸ್ಯೆ ಇರುವುದು ಪಾಶ್ಚಿಮಾತ್ಯ ದೇಶಗಳಲ್ಲಿ. ಅಲ್ಲಿ ಮಹಿಳೆಯರೇ ಇನ್ನೊಬ್ಬ ಮಹಿಳೆಗೆ ಥೂ ಎಂದು ಉಗಿದು, ಮನೆಗೆ ಹೋಗಿ ಹಾಲು ಕೊಡಿ ಎನ್ನುತ್ತಾರೆ. ಅಮ್ಮನ ಮೊಲೆ ಹಾಲೇ ಕುಡಿಯದೇ ಯಾರ್ಯಾರಿಗೋ ಹುಟ್ಟಿರುವ ಹುಡುಗರು, ಮೊಲೆಯನ್ನು ದುರುಗುಟ್ಟಿಕೊಂಡು ನೋಡುತ್ತಾರೆ. ಅಲ್ಲಿ ಶುರುವಾಗಿದ್ದೇ ಈ ಬೀದಿಯಲ್ಲಿ ಮೊಲೆ ಕುಡಿಸುತ್ತಾ ಫೋಟೊ ತೆಗೆಸಿಕೊಂಡು ತಾನು ಧೈರ್ಯವಂತೆ ಎಂದು ಬಿಂಬಿಸುವ ಆಂದೋಲನ. ಆಸ್ಟ್ರೇಲಿಯಾದ ಸಂಸದೆ ಲಾರಿಸ್ಸಾ ವಾಟರ್ಸ್, ಅರ್ಜೆಂಟೀನಾ ಸಂಸದೆ ವಿಕ್ಟೋರಿಯಾ ಡೋಂಡಾರಂಥ ದಿಟ್ಟ ಮಹಿಳೆಯರು ಸಂಸತ್ತಿನಲ್ಲೇ ಮಗುವಿಗೆ ಎದೆ ಹಾಲು ಕುಡಿಸುತ್ತಾ ಭಾಷಣ ಮಾಡಿದ್ದು ಇದೇ ಆಂದೋಲನಕ್ಕೆ ಬೆಂಬಲ ಸೂಚಿಸುವುದಕ್ಕೆ, ಹಾಲು ಕುಡಿಸುವ ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸುವುದಕ್ಕಾಗಿ.
ಎಲ್ಲದರಲ್ಲೂ ಪಾಶ್ಚಿಮಾತ್ಯ ದೇಶಗಳನ್ನು ಗುಲಾಮರಂತೆ ಭಾರತೀಯರು ಇಂಥ ವಿಷಯದಲ್ಲೂ ಅನುಸರಿಸುವ ಅಗತ್ಯವೇನಿದೆ ಹೇಳಿ? ಹಾಲು ಕುಡಿಸಿ ಆದರೆ, ಫೋಟೊಗೆ ಪೋಸ್ ಕೊಡುವ ಅಗತ್ಯವೇನಿದೆ? ಪ್ರಕೃತಿ ನಿಯಮ, ಪ್ರಕೃತಿ ನಿಯಮವಾಗಿರಬೇಕೇ ವಿನಾ ಪೋಸ್ ಕೊಡುವ ಮಟ್ಟಕ್ಕೆ ಯಾವಾಗ ಹೋಗುತ್ತೋ ಅದು ವಿಕೃತಿಯಾಗುತ್ತದೆ. ಹೀಗೆ ಸ್ವಲ್ಪ ದಿನಗಳ ಹಿಂದೆ ಶುರುವಾಗಿದ್ದು ಸ್ಯಾನಿಟರಿ ನ್ಯಾಪ್ಕಿನ್ ಫೋಟೊ ಹಾಕುವ ಆಂದೋಲನ. ಇವರು ಧೈರ್ಯವಂತೆಯವರು ಎಂದು ತೋರಿಸಿಕೊಳ್ಳುವುದಕ್ಕೆ ನಾವು ಇವರ ಸ್ಯಾನಿಟರಿ ಪ್ಯಾಡ್ಗಳನ್ನು ಫೋಟೊವನ್ನು ಫೇಸ್ಬುಕ್ನಲ್ಲಿ ನೋಡಬೇಕಾದ ಕರ್ಮ ನಮಗ್ಯಾಕೆ ಹೇಳಿ? ಈಗಿನ ಕಾಲದಲ್ಲಿ ಗಂಡಂದಿರೇ ಹೆಂಡತಿಗೆ ಪ್ಯಾಡ್ ತಂದುಕೊಡುತ್ತಾರೆ. ಹೀಗಿರುವಾಗ ಯಾವನೋ ಒಬ್ಬನ ಸಿನಿಮಾ ಪ್ರಚಾರಕ್ಕಾಗಿ ಹುಡುಗಿಯರು ತಮ್ಮ ಪ್ಯಾಡ್ ಫೋಟೊ ಹಾಕುವ ಅಗತ್ಯವಿದೆಯಾ? ಅಷ್ಟು ಮಾಡಿಬಿಟ್ಟರೆ ಅವರು ಧೈರ್ಯವಂತರಾ?
ಇನ್ನು ಸ್ವಲ್ಪ ಹೆಂಗಸರು ತಾವು ಬಸರಿಯಾದಾಗ ಹೊಟ್ಟೆಯ ಫೋಟೊ ತೆಗೆಸಿಕೊಳ್ಳುತ್ತಾರೆ. ಅದು ಹೇಗೆ? ಹೊಟ್ಟೆಯ ಮೇಲೆ ಮಗು ಚಿತ್ರವನ್ನು ಯಾವನೋ ಆರ್ಟಿಸ್ಟ್ ಹತ್ರ ಬರೆಯಿಸಕೊಂಡು. ಇವೆಲ್ಲ ಬೇಕಾ ಎಂದರೆ ನೀವು ಹೊಟ್ಟೆಯಿಂದಲ್ಲವೇ ಹೊರಗೆ ಬಂದಿದ್ದು ಎಂಬ ಅದೇ 1950ರ ಲಾಜಿಕ್. ಎಲ್ಲವನ್ನೂ ವಿಜೃಂಭಿಸಬೇಕಾದರೆ, ಮಗುವಿನ ಜನ್ಮಕ್ಕೆ ಕಾರಣವಾದ ಕ್ರಿಯೆಯನ್ನೂ ವಿಜೃಂಭಿಸಬೇಕಲ್ಲವೇ? ಅದನ್ನು ಫೋಟೊ ತೆಗೆಸಿಕೊಳ್ಳುವುದಿಲ್ಲವೇ ಎಂದು ಕೇಳಿದರೆ ನಾವು ಸೆಕ್ಸಿಸ್ಟ್, ಕಾಮುಕ, ಸ್ತ್ರೀ ವಿರೋಧಿ ಇತ್ಯಾದಿ ಎಂಬ ಪಟ್ಟ.
ನಿಜಕ್ಕೂ ಇಂಥ ಇಲ್ಲದ ಸಮಸ್ಯೆಯನ್ನು ಇದೆ ಎಂದು ಹೋರಾಟ, ರಾಡಿಧಿರಂಪ ಮಾಡಿ ವಿದೇಶಮಟ್ಟದಲ್ಲಿ ಮಾನ ಮರ್ಯಾದೆ ತೆಗೆಯುವ ಇತಿಹಾಸದ ಮೊದಲ ಪುಟದಲ್ಲಿ ನಿಲ್ಲುವವರು ಕಮ್ಯುನಿಷ್ಟರು, ಬುದ್ಧಿಜೀವಿಗಳು, ದೇಶದೊಳಗೇ ಇರುವ ದೇಶದ್ರೋಹಿಗಳು. ಇವರ ಪ್ಲಾನ್ಗಳಿಗೆ ಈಗ ಬಲಿಯಾಗುತ್ತಿರುವುದು ನಮ್ಮ ಹೆಣ್ಣಮಕ್ಕಳಷ್ಟೇ. ದೇಶದಲ್ಲಿ ಬಡವರ ಮೇಲೆ ಅತ್ಯಾಚಾರವೇ ಆಗ್ತಿದೆ, ಹಾಗಿದೆ, ಹೀಗಿದೆ ಎಂದು ಹೆದರಿಸುವುದಲ್ಲದೇ, ಇಂಟರ್ನ್ಯಾಷನಲ್ ಮಾಧ್ಯಮಗಳಲ್ಲಿ ಸುದ್ದಿಯಾಗುವ ಹಾಗೆ ಮಾಡಿದ್ದನ್ನು ನಾವಿನ್ನೂ ಮರೆತಿಲ್ಲ.
ಇದರಲ್ಲಿ ಇನ್ನೂ ಒಂದು ಅಜೆಂಡಾ ಇದ್ದಂತೆ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಕೇರಳ ಈಗ ಜಿಹಾದಿಗಳತ್ತ ಸಾಗುತ್ತಿದೆ. ಸಾಗುತ್ತಿದೆ ಎನ್ನುವುದಕ್ಕಿಂತಲೂ ಅಲ್ಲಿ ಬಲವಂತವಾಗಿ ಷರಿಯಾ ಹೇರುತ್ತಿದ್ದಾರೆ. ಅಧಿಕೃತವಾಗಿ ಷರಿಯಾ ಬರದಿದ್ದರೂ ಅನಧಿಕೃತವಾಗಿ ಇದು ಜಾರಿಯಲ್ಲಿದೆ. ಅದಕ್ಕೆ ಕಳೆದ ವಾರ ಮೃತಪಟ್ಟ ವನವಾಸಿ ಮಧು ಅವರೇ ಸಾಕ್ಷಿಯಾಗಿದ್ದಾರೆ. ನೇರವಾಗಿ ಜಿಹಾದಿ ತತ್ತ್ವ ಅಥವಾ ಷರಿಯಾವನ್ನು ಮುಂದಿಟ್ಟರೆ ಜನರು ಅದನ್ನು ಸಾರಾಸಗಟಾಗಿ ತಿರಸ್ಕರಿಸಿಬಿಡುತ್ತಾರೆ. ಬಹುಸಂಖ್ಯಾತ ಹಿಂದೂ ಧರ್ಮ ಮತ್ತು ಅದರ ಆಚರಣೆಗಳೇ ಸರಿ ಇಲ್ಲ ಎಂದು ಸಾಬೀತು ಮಾಡಿದರೆ ಸಹಜವಾಗಿ ಹಿಂದೂಗಳು ಬೇರೆ ಕಡೆ ಹೋಗುತ್ತಾರೆ. ಆಗ ಇವರನ್ನು ಇಸ್ಲಾಮ್ಗೆ ಮತಾಂತರ ಮಾಡುವುದು ಇಸ್ಲಾಮಿಕ್ ಮೂಲಭೂತವಾದಿಗಳ ಐಡಿಯಾ. ಇದು ಸುಮಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇನ್ನೊಂದು ಕಡೆ ಕ್ರಿಶ್ಚಿಯನ್ ಮಿಷನರಿಗಳ ಕಾಟ. ಏನೂ ಅರಿಯದವರಂತೆ ನಮ್ಮ ನಡುವೆಯೇ ಇರುವ ಇವರು ನಮಗೇ ಗೊತ್ತಿಲ್ಲದಂತೆ ನಮ್ಮನ್ನು ಆವರಿಸಿಬಿಡುತ್ತಾರೆ. ಇದು ಗೃಹಲಕ್ಷ್ಮೀ ನಿಯತಕಾಲಿಕೆಯ ವಿಚಾರದಲ್ಲಿ ಸಾಬೀತಾಗಿದೆ. ಈ ಮಾಡೆಲ್ ಹೆಸರು ಗಿಲು ಜೋಸೆಫ್. ಕ್ರಿಶ್ಚಿಯನ್. ದುಬೈ ಏರ್ವೇಸ್ನಲ್ಲಿ ಗಗನಸಖಿಯಾಗಿದ್ದವಳು. ಅಲ್ಲಿಂದ ಮಲಯಾಳಂ ಚಿತ್ರರಂಗಕ್ಕೆ ಹಾಡು ಬರೆದುಕೊಡುತ್ತಾ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟು ಮಾಡೆಲ್ ಆದವಳು. ಇವಳಿಗೆ ಎದೆಹಾಲೂ ಬರುವುದಿಲ್ಲ, ಅದನ್ನು ಕುಡಿಸುವ ಬಗ್ಗೆಯೂ ನಯಾ ಪೈಸೆ ಗೊತ್ತಿಲ್ಲ. ಆದರೂ ಯಾರದ್ದೋ ಮಗುವನ್ನು ತನ್ನ ಎದೆಗೆ ಒತ್ತಿಕೊಂಡು ಪೋಸ್ ಕೊಡುತ್ತಿದ್ದಾಳೆ. ಅದೂ ದಪ್ಪನೆಯ ಅರಿಶಿಣ, ಕುಂಕುಮ ಹಾಕಿ, ತಾಳಿಯನ್ನು ಹಾಕಿಕೊಂಡು ತೆಗೆಸಿಕೊಂಡಿರುವ ಫೋಟೊ. ಇರಲಿ, ಆಕೆ ಮಾಡೆಲ್. ಯಾರು ಯಾವ ಬಟ್ಟೆಯನ್ನು ಎಷ್ಟು ಹಾಕಿಕೊಳ್ಳಬೇಕು ಎಂದರೂ ಹಾಕಿಕೊಳ್ಳುತ್ತಾಳೆ. ಈಗ ಅದೇ ಧೈರ್ಯದಿಂದ ತನಗೆ ಅಂಥ ಫೋಟೊ ತೆಗೆಸಿಕೊಂಡಿದ್ದಕ್ಕೆ ಯಾವುದೇ ಮುಲಾಜು, ಮುಜುಗರವಿಲ್ಲ ಎಂದು ಎದೆಯುಬ್ಬಿಸಿ ಹೇಳಿದ್ದಾಳೆ.
ಈಗ ನನ್ನ ಪ್ರಶ್ನೆ ಏನೆಂದರೆ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿ ಹುಟ್ಟಿದ ಮಗುವೂ ಆಯಾ ಧರ್ಮವನ್ನು ಪಾಲಿಸುತ್ತಿರುವ ತಾಯಿಯ ಎದೆ ಹಾಲೇ ಕುಡಿದು ಬೆಳೆಯುತ್ತದೆ ತಾನೇ? ಸಾರ್ವಜನಿಕ ಸ್ಥಳಗಳಲ್ಲಿ ಹಾಲು ಕುಡಿಸುವುದು ಹೆಣ್ಣು ಮಕ್ಕಳ ಸಮಸ್ಯೆಯಾದರೆ ಆ ಹೆಣ್ಣಿಗೆ ಉದ್ದುದ್ದ ಸಿಂಧೂರ, ತಾಳಿ ಏಕೆ? ಅದೇ ಮಾಡೆಲ್ ಗಿಲು ಜೋಸೆಫ್ಳಿಗೆ ಬುರ್ಖಾ ಹಾಕಿ, ಮೊಲೆಯಷ್ಟೇ ಕಾಣುವ ಹಾಗೆ ಮಾಡಿ, ಮಗು ಹಾಲು ಕುಡಿಯುತ್ತಿರುವಂತೆ ಫೋಟೊ ತೆಗೆಸಬಹುದಿತ್ತಲ್ಲ? ಅಥವಾ ಹಣೆ ಬೊಟ್ಟು ತೆಗೆದು ಬಿಳಿಯ ಉಡುಪು ಹಾಕಿ, ಶಿಲುಭೆ ಲಾಕೆಟ್ನ ಸರ ಹಾಕಿಯೂ ಮೊಲೆ ಕಾಣುವಂತೆ ಮಗುವಿಗೆ ಹಾಲು ಕುಡಿಸುವ ಫೋಟೊ ತೆಗೆಸಬಹುದಿತ್ತಲ್ಲ? ಯಾಕೆ ಹಾಗೆ ಮಾಡಲಿಲ್ಲ? ಯಾಕೆಂದರೆ, ಹಾಗೆ ಮಾಡಿದರೆ, ನಾಳೆ ಗೃಹಲಕ್ಷ್ಮೀ ಕಛೇರಿಗೆ ಕಲ್ಲು ಬೀಳುತ್ತದೆ. ಪ್ರವಾದಿ ಮಹಮ್ಮದನ ವ್ಯಂಗ್ಯ ಚಿತ್ರ ಬರೆದ ಚಾರ್ಲಿ ಹೆಬ್ಡೋ ಪತ್ರಿಕೆ ಮೇಲೆ ಗುಂಡಿನ ದಾಳಿಯಾಗಿ ೧೨ ಜನರು ಮೃತಪಟ್ಟಹಾಗೆ, ಈ ಆಫೀಸ್ ಮೇಲೂ ಆಗಬಹುದು. ಈಗ ತನಗೆ ಯಾವ ಮುಲಾಜೂ ಇಲ್ಲ ಎನ್ನುವ ಬೆಡಗಿ ಜೀವ ಉಳಿಸಿಕೊಳ್ಳಲು ಅಡಗಿ ಕುಳಿತಿರುತ್ತಿದ್ದಳು. ಹಿಂದೂಗಳು ಹಾಗಲ್ಲ ನೋಡಿ, ಹೆಚ್ಚೆಂದರೆ ಗೃಹಲಕ್ಷ್ಮೀ ನಿಯತಕಾಲಿಕೆಯ ನೋಂದಣಿ ರದ್ದು ಮಾಡಿ ಸುಮ್ಮನಿದ್ದುಬಿಡುತ್ತಾರೆ. ಇದೇ ದೈರ್ಯ ಗೃಹಲಕ್ಷ್ಮೀ ಮತ್ತು ಗಿಲು ಜೋಸೆಫ್ರನ್ನು ಅಂಥ ಫೋಟೊ ಹಾಕುವ ಹಾಗೆ ಮಾಡಿದ್ದು.
ಏನು ಹೇಳುವುದಕ್ಕೆ ಹೊರಟಿದ್ದೀನೆಂದರೆ, ಪ್ರಕೃತಿ ನಿಯಮಗಳೆಲ್ಲವೂ ಪೋಟೊ ಪೋಸು ಕೊಡುವಂಥದ್ದಲ್ಲ. ಅದರಲ್ಲೂ ಖಾಸಗಿತನ ಇರುತ್ತದೆ. ಅದಕ್ಕೆ ಧಕ್ಕೆಯಾದರೆ ಸ್ಥಳದಲ್ಲೇ ವಿರೋಧಿಸಿ. ಸೋ, ದಯವಿಟ್ಟು ಇಲ್ಲದ ಸಮಸ್ಯೆಯನ್ನು ಇದೆ ಎಂದು ಬಿಂಬಿಸುವ ಪ್ರಯತ್ನ ಬೇಡ. ಸಮಸ್ಯೆಯಿದ್ದರೂ ಈ ವಿಷಯದಲ್ಲಂತೂ ಭಾರತ ಸ್ವಚ್ಛವಾಗಿದೆ. ಪ್ರಕೃತಿ ನಿಯಮಗಳನ್ನು ಪಾಲಿಸಿ, ಆದರೆ ನಿಯಮ ಪಾಲಿಸುವಾಗ ಫೋಟೊಗೆ ಪೋಸ್ ಕೊಡುವುದು ಬೇಡ. ತಿಂದ ಮೇಲೆ ಮೂತ್ರ, ಮಲ ವಿಸರ್ಜನೆ ಮಾಡುವುದು, ಲೈಂಗಿಕ ಕ್ರಿಯೆಯಂಥವೂ ಪ್ರಕೃತಿ ನಿಯಮದಡಿಯಲ್ಲಿ ಬರುತ್ತದೆ ಎಂಬುದು ಈ ಕಮ್ಮಿ ನಿಷ್ಟರ ಗಮನದಲ್ಲಿರಲಿ. ನಾಳೆ ಇಂಥವಕ್ಕೂ ಪೋಸು ಕೊಡುವ ಪ್ರಸಂಗ ಬಂದರೂ ಅಚ್ಚರಿಯಿಲ್ಲ.
ಒಂದು ಮಾತು ನೆನಪಿರಲಿ: ಹೀಗೆ ಪೋಸ್ ನೀಡುವುದು ಧೈರ್ಯವೂ ಅಲ್ಲ, ಶೌರ್ಯವೂ ಅಲ್ಲ.